ರಂಗಭೂಮಿ - ಸಾಹಿತ್ಯ ಕೃತಿಯಾಗಿ ನಾಟಕ, ರಂಗಮಂಚದ ಮೇಲಿನ ಪ್ರಯೋಗವಾಗಿ ನಾಟಕ. ರಂಗಮಂದಿರ-ಪ್ರೇಕ್ಷಕಾಂಗಣ ಮತ್ತು ರಂಗ - ಈ ಅಂಶಗಳನ್ನೆಲ್ಲ ಒಳಗೊಂಡಿರುವ ಒಂದು ವ್ಯವಸ್ಥೆ (ಥಿಯೇಟರ್). ಆಯಾಕಾಲದ ರಂಗಭೂಮಿಯ ಅವಸ್ಥೆಗಳೂ ಭಿನ್ನಭಿನ್ನ ಕಾಲಘಟ್ಟಗಳಲ್ಲಿನ ಸ್ಥಿತಿಗತಿಗಳೂ ಈ ವ್ಯವಸ್ಥೆಯಲ್ಲಿ ಸೇರಿಕೊಳ್ಳುತ್ತವೆ. ಒಂದು ಜನಸಮುದಾಯದ ಸಾಂಸ್ಕøತಿಯ, ರಾಜಕೀಯ ಇತಿಹಾಸದೊಂದಿಗೆ ಅದರ ಕಲೆಯ ಇತಿಹಾಸವೂ ರೂಪುಗೊಳ್ಳುವುದರಿಂದ ಈ ವಿಷಯದ ವಿವೇಚನೆ ಒಂದು ಸಾಂಸ್ಕøತಿಕ ಸಂದರ್ಭದಲ್ಲಿ ಆಗುವಂತೆ ಭಿನ್ನ ಭಿನ್ನ ಸಂಸ್ಕøತಿಗಳ ಸಂದರ್ಭದಲ್ಲೂ ಆಗಬೇಕಾಗುತ್ತದೆ. ಪ್ರಸ್ತುತ ಲೇಖನದಲ್ಲಿ ಪ್ರಪಂಚದ ರಂಗಭೂಮಿ ಕಾಲದೇಶಗಳಲ್ಲಿ ಬೆಳೆದು ಬಂದ ಬಗೆಯನ್ನೂ ಅದರ ಅವಸ್ಥಾಂತರಗಳನ್ನೂ ಸ್ಥೂಲವಾಗಿ ಸಮೀಕ್ಷಿಸಲಾಗಿದೆ: 1. ಗ್ರೀಕ್ ರಂಗಭೂಮಿ, 2. ರೋಮನ್ ರಂಗಭೂಮಿ, 3. ಕಾರ್ನಿಷ್ ಮುಕ್ಕೂಟ ನಾಟಕ, 4. ಲ್ಯಾಟಿನ್; ಇಟಾಲಿಯನ್ ರಂಗಭೂಮಿ, 5. ಸ್ಪ್ಯಾನಿಷ್ ರಂಗಭೂಮಿ, 6. ಜೆಸುಯಿಟ್ ರಂಗಭೂಮಿ, 7. ಫ್ರೆಂಚ್ ರಂಗಭೂಮಿ, 8. ಜರ್ಮನ್ ರಂಗಭೂಮಿ, 9. ಇಂಗ್ಲೆಂಡಿನ ರಂಗಭೂಮಿ, 10. ರಷ್ಯನ್ ರಂಗಭೂಮಿ, 11. ಸ್ವೀಡಿಷ್ ರಂಗಭೂಮಿ, 12. ಅಮೆರಿಕನ್ ರಂಗಭೂಮಿ, 13. ಚೀನಿ, ಜಪಾನಿ, ಭಾರತೀಯ ರಂಗಭೂಮಿ (ಪೌರಾತ್ಯ), 14. ಕನ್ನಡ ರಂಗಭೂಮಿ, 15. ಆಧುನಿಕ ರಂಗಭೂಮಿ - ಈ ಅನುಕ್ರಮದಲ್ಲಿ ಲೇಖನವನ್ನು ಸಿದ್ಧಪಡಿಸಲಾಗಿದೆ. ಡ್ರಾಮ ಎಂಬ ಗ್ರೀಕ್ ಪದಕ್ಕೆ ಕ್ರಿಯೆ (ಆ್ಯಕ್ಷನ್) ಎಂಬ ಅರ್ಥವಿದೆ. ಆದ್ದರಿಂದ ನಾಟಕ ಎನ್ನುವುದು ಒಂದು ಅನುಕರಣಾತ್ಮಕ ಕ್ರಿಯೆ. ಇದು ಮಾನವ ಸ್ವಭಾವದ ನಡವಳಿಕೆಯ ಅನುಕರಣೆಯಾಗಿರುತ್ತದೆ. ಇಲ್ಲಿ ಮುಖ್ಯವಾಗಿರುವ ಅಂಶವೆಂದರೆ ಕ್ರಿಯೆ. ಆದ್ದರಿಂದ ನಾಟಕ ಎನ್ನುವುದು ಕೇವಲ ಒಂದು ಸಾಹಿತ್ಯ ಪ್ರಕಾರವಲ್ಲ. ಇದರಲ್ಲಿ ಭಾಷೆ, ಸಂಭಾಷಣೆ ಇತ್ಯಾದಿಗಳಿದ್ದರೂ ಇವುಗಳನ್ನು ಮೀರಿದ ಅಂಶ ಕ್ರಿಯೆಯಲ್ಲಿದೆ. ಈ ಕ್ರಿಯೆಯೇ ನಾಟಕಕೃತಿಯನ್ನೂ ರಂಗ ಪ್ರಯೋಗವನ್ನೂ ಒಂದು ಮಾಡುವಂತಹದ್ದಾಗಿದೆ. ಸಾಹಿತ್ಯ ಕೃತಿಯಾಗಿ ನಾಟಕ ಮತ್ತು ರಂಗ ಪ್ರಯೋಗವಾಗಿ ನಟಕ - ಇವುಗಳು ಅವಿನಾ ಸಂಬಂಧವುಳ್ಳವು. ಥಿಯೇಟ್ರಾನ್, ಥಿಯೇಟರ್ ಎಂದರೆ ಪ್ರೇಕ್ಷಕರು ರಂಗಮಂಚದ ಮೇಲೆ ನಡೆಯುವ ಕ್ರಿಯೆಯನ್ನು ನೋಡಲು ಹೋಗುವ ಸ್ಥಳ ಎಂದರ್ಥವಿದೆ.
ಆದಿಮಕಾಲದಲ್ಲಿ ಮಾನವನ ಸಾಮೂಹಿಕ ಕ್ರಿಯೆಗಳಾದ ಬೇಟೆ, ಧಾರ್ಮಿಕ ಪ್ರಕ್ರಿಯೆಗಳ ರೂಪದಲ್ಲಿ ನಾಟಕ ಆರಂಭವಾಯಿತೆಂದು ಹೇಳಬಹುದು. ಅಲ್ಟಮೀರ ಗುಹೆಗಳ ಮೇಲೆ ಚಿತ್ರಿತವಾಗಿರುವ ಹಿಮಯುಗಕ್ಕೆ ಸೇರಿದ ಬೇಟೆಯ ಚಿತ್ರಣಗಳು, ಮಾನವಾಕೃತಿಗಳು ಅಚ್ಚಿರಿಯನ್ನುಂಟುಮಾಡುತ್ತವೆ. ಪ್ರಕೃತಿಯ ಮೇಲೆ, ತನ್ನ ಸುತ್ತಣ ಪರಿಸರದ ಮೇಲೆ, ಪ್ರಾಣಿವರ್ಗದ ಮೇಲೆ ತನ್ನ ಹಿಡಿತ ಮತ್ತು ಅಧಿಕಾರವನ್ನು ಸಾಧಿಸುವ ಪ್ರಕ್ರಿಯೆಯ ಮಾಂತ್ರಿಕತೆ ಆದಿಮಕಾಲದ ಮನುಷ್ಯನಿಗೆ ಸಹಾಯಕವಾಯಿತು. ಈ ಪ್ರಕ್ರಿಯೆಗಳಲ್ಲಿ ನಾಟಕೀಯತೆಯ, ಅಭಿನಯದ ಅಂಶಗಳೆಲ್ಲ ಪ್ರಾಕೃತಿಕವಾಗಿ, ಸಹಜವಾಗಿ ಇರುವುದನ್ನು ಕಾಣುತ್ತೇವೆ.
ಪ್ರಾಚೀನ ಗ್ರೀಕರ ಮತ್ತು ಪ್ರಾಚೀನ ಭಾರತೀಯರ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಅನೇಕ ಸಾಮ್ಯಗಳನ್ನು ಗುರುತಿಸಬಹುದಾಗಿದೆ. ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವೆಂದು ಪರಿಗಣಿತವಾಗಿರುವ ನಾಲ್ಕು ವೇದಗಳಲ್ಲಿಯೇ ನಾಟಕದ ಅಂಶಗಳು ಹೇರಳವಾಗಿ ಕಂಡುಬರುತ್ತದೆ. ವೇದ ಎನ್ನುವುದು ನಮ್ಮ ಧಾರ್ಮಿಕ ಸಂಗೀತ ನಾಟಕ ಎಂಬ ಮಾತು ಸೂಕ್ತವಾದದ್ದಾಗಿದೆ. ವೇದಗಳಲ್ಲಿ ಪ್ರಾಚೀನವೆಂದು ಪರಿಗಣಿತವಾಗಿರುವ ಋಗ್ವೇದದಲ್ಲಿ ಬರುವ ಯಮ-ಯಮಿಯರ ಸಂವಾದ ಸಂದರ್ಭ, ಪುರೂರ -ಊರ್ವಶಿಯರ ಸಂದರ್ಭ ಮುಂತಾದವುಗಳಲ್ಲಿ ಭಾರತೀಯ ನಾಟಕದ ಉಗಮವನ್ನು ಗುರುತಿಸಬಹುದು. ಒಂದರ್ಥದಲ್ಲಿ ಯಜ್ಞವೇ ಒಂದು ನಾಟ್ಯ ಎನ್ನಬಹುದು.
ಗ್ರೀಕ್ ರಂಗಭೂಮಿ : ಪ್ರಾಚೀನ ಗ್ರೀಕರಲ್ಲಿ ಮಹಾರುದ್ರನಾಟಕಕಾರರೆಂದು ಪ್ರಸಿದ್ಧರಾದ ಈಸ್ಕಿಲಸ್, ಸೋಪೋಕ್ಲಿಸ್, ಯೂರಿಪಿಡೀಸ್ - ಇವರು ನಾಟಕಗಳನ್ನು ರಚಿಸುವುದಕ್ಕೂ ಸಾವಿರಾರು ವರ್ಷಗಳ ಮುಂಚೆಯೇ ನಾಟಕೀಯ ಅಂಶಗಳನ್ನು ಒಳಗೊಂಡ ಧಾರ್ಮಿಕ ಆಚರಣೆಗಳು ಪ್ರಾಚುರ್ಯದಲ್ಲಿದ್ದವು. ಪ್ರಾಚೀನ ಈಜಿಪ್ಟ್‍ನ ಪೂಜಾರಿಗಳು ನಡೆಸುತ್ತಿದ್ದ ಪೂಜಾವಿಧಿಗಳಲ್ಲಿ ಇಂಥ ನಾಟಕೀಯ ಅಂಶಗಳಿದ್ದವು. ಅನಂತರ ಕಥನಗಳನ್ನು ಕಥನಕಾರರು, ದೊಂಬರು, ಹಾಡುಗಾರರು - ಇವರು ನಾಟಕೀಯವಾಗಿ ನೆಳೆಸಿದರು ಎಂದು ಹೇಳಬಹುದು. ಕ್ರಿ.ಪೂ. 200-300 ವರ್ಷಗಳ ಹಿಂದೆ ಅಬೀಡಸ್ ಪ್ಯಾಷನ್ ಪ್ಲೆ ಆಚರಣೆಯಲ್ಲಿತ್ತು. ಸೆಟ್ ಎಂಬ ತನ್ನ ಸಹೋದರನಿಂದ ಕೊಲೆಗೊಳಗಾದ ಓಸಿರಿಸ್‍ನ ದೇಹದ ಕತ್ತರಿಸಿದ ಅಂಗಾಂಗಗಳನ್ನು, ಓಸಿರಿಸ್‍ನ ತಂಗಿ ಮತ್ತು ಹೆಂಡತಿಯಾದ ಐಸಿಸ್ ಪುನಃ ಸೇರಿಸಿ ಜೀವಂತಗೊಳಿಸುವ ಪ್ರಕ್ರಿಯೆಯೇ ಈ ನಾಟಕದ ತಿರುಳು. ಇದು ಪ್ರಕೃತಿಯಲ್ಲಿ ನಡೆಯುವ ಹುಟ್ಟು, ಸಾವು ಮತ್ತು ಮರು ಹುಟ್ಟುಗಳ ಪ್ರಕ್ರಿಯೆಯ ನಾಟಕೀಯ ಅನುಕರಣೆಯಾಗಿರುವಂತಿದೆ. ಇವೆಲ್ಲ ಈಗ ದೊರೆತಿರುವ ಆಧಾರಗಳ ಮೇಲೆ ಮಾಡಲಾದ ಪುನರ್‍ರಚನೆಯಾಗಿದೆ. ಅಲ್ಲದೇ ಮೆಂಫಿಸ್ ಎಂಬ ನಾಟಕದ ಅಸ್ತಿತ್ವದ ಬಗೆಗೂ ಊಹಿಸಲಾಗಿದೆ.
ಆದರೆ ಪಾಶ್ಚಾತ್ಯ ನಾಟಕ ನಿಜವಾದ ಅರ್ಥದಲ್ಲಿ ಆರಂಭವಾದದ್ದು ಈಸ್ಕಿಲಸ್‍ನ ನಾಟಕಗಳಿಂದಲೇ ಎನ್ನಬಹುದು. ಡಯಾನಿಸಸ್ ದೇವತೆಯ ಗೌರವಾರ್ಥವಾಗಿ ಹಾಡಲಾಗುತ್ತಿದ್ದ ಡಿಥರಂಬ್ ಗೀತೆಗಳು ಗ್ರೀಕ್ ನಾಟಕಗಳು ಮೂಲ ಎಂದು ಗಣಿಸಲಾಗುತ್ತದೆ. ಆ ಡಯಾನಿಸಸ್ ದೇವತೆಯ ಹಬ್ಬದ ಸಂದರ್ಭದಲ್ಲಿ ಆನಂದದಿಂದ ಉದ್ರೇಕದಲ್ಲಿ ಹುಟ್ಟಿಬಂದ ಪದಗಳು ಮತ್ತು ಸಂಗೀತ ಇದಕ್ಕೆ ಮೂಲ. ಆರಂಭದಲ್ಲಿ ಈ ಗೀತೆಗಳು ಕಥನಾತ್ಮಕವಾಗಿ ಡಯಾನಿಸ್‍ನ ಮಹತ್ತ್ವವನ್ನು ವರ್ಣಿಸುವಂತಹವುಗಳಾಗಿರುತ್ತಿದ್ದವು. ಕ್ರಮೇಣ ಕ್ರಿ.ಪೂ. 7 ಮತ್ತು 8ನೆಯ ಶತಮಾನದ ಮಧ್ಯದಲ್ಲಿ ಸಾಮೂಹಿಕವಾಗಿ ಹಾಡಲಾಗುತ್ತಿದ್ದ. ಈ ಗೀತೆಗಳಿಗೆ ಪೃಥಕ್ಕಾಗಿ ಒಬ್ಬ ಮೇಳಗೀತನಾಯಕನನ್ನು ಕಂಡುಕೊಂಡದ್ದು ಬಹುಶಃ ಕಥನಾತ್ಮಕತೆಯಿಂದ ನಾಟಕೀಯತೆಯ ಕಡೆಗೆ ಮುನ್ನಡೆಯಲು ಕಾರಣವಾಯಿತೆಂದು ಹೇಳಬಹುದು.
ಥೆಸ್ಟಿಸ್‍ನ ಆಗಮನದೊಂದಿಗೆ ಒಂದರ್ಥದಲ್ಲಿ ರುದ್ರನಾಟಕ ಒಂದು ರೂಪ ಪಡೆಯಲು ಕಾರಣವಾಯಿತು. ಥೆಸ್ಟಿಸ್‍ನ ರುದ್ರನಾಟಕದ ವಿನ್ಯಾಸ ಸರಳವಾದದ್ದು. ಮೊದಲು ನಟ ಅಟ್ಟಣೆ ಹತ್ತಿ ಕಥಾವಸ್ತುವನ್ನು ವಿವರಿಸಿ ಒಂದು ಪುಟ್ಟ ಪ್ರಾಸ್ತಾವಿಕ ಭಾಷಣ ಮಾಡುತ್ತಿದ್ದ. ಇದನ್ನು ಪ್ರೊಲೊಗೋಸ್ ಎಂದು ಕರೆಯಲಾಗುತ್ತದೆ. ಅನಂತರ ಮೇಳಗೀತೆಗಳ ಬಿಡುವಿನ ಮಧ್ಯೆ ಒಬ್ಬ ನಟ ಸಂದರ್ಭಕ್ಕನುಗುಣವಾಗಿ ಪಾತ್ರಧರಿಸಿ ಅಟ್ಟಣೆಯ ಮೇಲೆ ಕಾಣಿಸಿಕೊಂಡು ಭಾಷಣ ಮಾಡುತ್ತಿದ್ದ ಅಥವಾ ಮೇಳನಾಯಕನೊಂದಿಗೆ ಸಂಭಾಷಿಸುತ್ತಿದ್ದ. ಥೆಸ್ಟಿಸ್‍ನ ನಾಟಕಗಳಲ್ಲಿ ಇನ್ನೂ ಮೇಳಗೀತೆಗಳ ಪ್ರಾಮುಖ್ಯ ಹಾಗೇ ಇತ್ತು. ನಾಟಕಕ್ರಿಯೆಗಿಂತ ಮೇಳದ ಹಾಡುಗಳೇ ಪ್ರಧಾನವಾಗಿದ್ದವು.
ಕ್ರಿ.ಪೂ. 534ರಲ್ಲಿ ಪಿಸಿಸ್‍ಸ್ಟ್ರಾಟಸ್ ಏರ್ಪಡಿಸಿದ್ದ ರುದ್ರನಾಟಕ ಸ್ಪರ್ಧೆಗಳಲ್ಲಿ ಥೆಸ್ಟಿಸ್ ಪ್ರಥಮ ಬಹುಮಾನ ಪಡೆದ. ಇದು ಗ್ರೀಕ್ ರುದ್ರನಾಟಕದ ಇತಿಹಾಸದಲ್ಲಿ ಮೊದಲನೆಯ ಸ್ಪರ್ಧೆ. ಮುಂದೆ ಇದು ಪ್ರತಿವರ್ಷವೂ ನಡೆದುಕೊಂಡು ಬಂತು. ಥೆಸ್ಟಿಸ್‍ನ ಅನಂತರ ಫೆಕಂಡ್ ಕೋಯ್‍ರಿಲೋಸ್, ಪ್ರಾಥಿನೋಸ್ ಮತ್ತು ಫ್ರಿನಿಕೋಸ್ ಎಂಬ ನಾಟಕಕಾರರ ಹೆಸರುಗಳನ್ನು ಕೇಳುತ್ತೇವೆ. ಕೋಯ್‍ರಿಲೋಸ್ 160 ನಾಟಕಗಳನ್ನು ಬರೆದಿದ್ದಾನೆಂದು ಪ್ರತೀತಿ. ಆದರೆ ಯಾವುವೂ ಈಗ ದೊರೆಯುವುದಿಲ್ಲ. ಇವನು ರುದ್ರನಾಟಕದ ಬೆಳವಣಿಗೆಗೆ ಸಲ್ಲಿಸಿದ ಕೊಡುಗೆಯೆಂದರೆ, ನಾಟಕಗಳಲ್ಲಿ ಬಳಸಲು ಹೆಂಗಸರ ಮುಖವಾಡಗಳನ್ನು ಕಂಡುಹಿಡಿದದ್ದು. ಸ್ಯಾಟರ್ ನಾಟಕಗಳ ರಚನೆಯಲ್ಲಿ ಪ್ರಾಥಿನೋಸ್ ಪರಿಣತನೆಂದು ಪ್ರತೀತಿ. ಆದರೆ ಇವನ ನಾಟಕಗಳೂ ದೊರೆತಿಲ್ಲ. ರುದ್ರನಾಟಕದ ವಿಕಾಸದಲ್ಲಿ ಥೆಸ್ಟಿಸ್ ಮೊದಲನೆಯ ಘಟ್ಟವಾದರೆ ಈಸ್ಕಿಲಸ್ (ಕ್ರಿ.ಪೂ. 525-456) ಎರಡನೆಯ ಘಟ್ಟ. ಮೂವರು ಮಹಾರುದ್ರನಾಟಕಕಾರರಲ್ಲಿ ಈಸ್ಕಿಲಸ್ ಮೊದಲಿಗ. ಥೆಸ್ಟಿಸ್‍ನ ಕಾಲದಲ್ಲಿ ಕೇವಲ ಆರಂಭಾವಸ್ಥೆಯಲ್ಲಿದ್ದ ರುದ್ರನಾಟಕಕ್ಕೆ ಈತ ಪರಿಣತ ಸ್ವರೂಪವನ್ನು ಕೊಟ್ಟ. ರುದ್ರನಾಟಕದ ವಿಕಾಸದಲ್ಲಿ ಇವನು ನೀಡಿದ ಮಹತ್ತ್ವಪೂರ್ಣ ಕೊಡುಗೆಯೆಂದರೆ ಅಟ್ಟಣೆಯ ಮೇಲೆ ಎರಡನೆಯ ನಟನನ್ನು ತಂದದ್ದು. ಇದರಿಂದ ನಾಟಕದ ಕಥನಸ್ವರೂಪ ಬದಲಾಗಿ ನಾಟಕೀಯ ಸಂವಾದಕ್ಕೆ ಅವಕಾಶ ಉಂಟಾಯಿತು. ವಿರುದ್ಧ ಭಾವಗಳ ಮತ್ತು ವಿಚಾರಗಳು ಘರ್ಷಣೆ ಜೀವಂತ ವ್ಯಕ್ತಿಗಳ ಮೂಲಕ ಅಟ್ಟಣೆಯ ಮೇಲೆ ನಡೆಯುವಂತಾಯಿತು. ಸಂವಾದಕ್ಕೆ ಪ್ರಾಮುಖ್ಯ ಸಿಕ್ಕಿತು. ಇದನ್ನು ಈಸ್ಕಿಲಸ್ ಕ್ರಮವಾಗಿ ತನ್ನ ನಾಟಕಗಳಲ್ಲಿ ಸಾದಿಸಿದ. ಇವನ ನಾಟಕದ ಲಕ್ಷಣಗಳೆಂದರೆ ಘನತೆ, ಗಾಂಭಿರ್ಯ, ಔನತ್ಯ, ಉದಾತ್ತತೆ ಗುರುತ್ವ, ವಿಶ್ವವ್ಯಾಪ್ತಿ. ಇವನದೆಲ್ಲ ಬೃಹತ್ ಸೃಷ್ಟಿ. ಇವನ ನಾಟಕದಲ್ಲಿ ಬರುವ ವ್ಯಕ್ತಿಗಳೆಲ್ಲ ಮಹಾವ್ಯಕ್ತಿಗಳು. ಗ್ರೀಕ್ ಪುರಾಣದ ಸುಪ್ರಸಿದ್ದ ಕತೆಗಳನ್ನೆಲ್ಲ ನಾಟಕದ ವಸ್ತುಗಳನ್ನಾಗಿ ಸ್ವೀಕರಿಸಿ ಮೂಲದಲ್ಲಿದ್ದ ಔನ್ನತ್ಯ ಗಾಂಭೀರ್ಯಗಳನ್ನು ತನ್ನ ನಾಟಕಗಳಲ್ಲಿ ಸಾದಿಸಿದ. ನಾಟಕ ಪ್ರಯೋಗದ ದೃಷ್ಟಿಯಿಂದಲೂ ಈತನ ಕೊಡುಗೆ ಮುಖ್ಯವಾದದು. ರುದ್ರನಾಟಕದ ಘನತೆ ಗಾಂಭೀರ್ಯಗಳಿಗೆ ಸರಿಹೊಂದುವ ಉಡುಪುಗಳನ್ನು ಈಸ್ಕಿಲಸ್ ವ್ಯವಸ್ಥೆ ಮಾಡಿದ. ಮರದ ಅಟ್ಟೆಗಳು, ಒಳಮೆತ್ತೆಗಳು_ ಇವುಗಳನ್ನು ಬಳಸಿ ನಟರ ಗಾತ್ರ ಮತ್ತು ಎತ್ತರಗಳನ್ನು ಸಾಮಾನ್ಯ ಮನುಷ್ಯರಿಗಿಂತ ಹೆಚ್ಚು ಮಾಡುವುದರ ಮೂಲಕ ಗಂಭೀರ ಸ್ವರೂಪ ಬರುವಂತೆ ಮಾಡಿದ. ಈತ ನಟರಿಗೆ ಅಳವಡಿಸಿದ ಮುಡಿಯಿಂದ ಅಡಿಯವರೆಗೆ ತೂಗುವ ನಿಲುವುಡುಪು, ಗಂಭೀರ ಮುದ್ರೆಯ ಮೊಗವಾಡ, ಬಣ್ಣ ಬಣ್ಣದ ಅಲಂಕಾರಗಳು_ಈಸ್ಕಿಲಸ್‍ನ ಅನಂತರವೂ ರುದ್ರನಾಟಕದ ಪ್ರಯೋಗದಲ್ಲಿ ಬಳಕೆಯಾಗುತ್ತಾ ಬಂದವು. ಈತ ಮೇಳದವರ ಸಂಖ್ಯೆಯನ್ನೂ ಕಡಿಮೆ ಮಾಡಿದ. ಸ್ಪರ್ಧೆಯಲ್ಲಿ ಮೂರು ರುದ್ರನಾಟಕಗಳು ಮತ್ತು ಒಂದು ಸ್ಯಾಟರ್‍ನಾಟಕದ ಪ್ರಯೋಗ ಮಾಡಬೇಕೆಂಬ ಸಂಪ್ರದಾಯವನ್ನೂ ಈತ ತಂದ. ಈ ನಾಟಕಗಳು ಡಯಾನಿಸಸ್ ದೇವತೆಯ ಉತ್ಸವದ ಸಂದರ್ಭದಲ್ಲಿ ನಡೆಯುತ್ತಿದ್ದವು. ಈ ಸ್ಪರ್ಧೆಯನ್ನು ಆಥೆನ್ಸ್ ಸರ್ಕಾರವೇ ನಡೆಸುತ್ತಿತ್ತು. ತನ್ನ ಕೃತಿಗಳು ಪ್ರದರ್ಶನಕ್ಕೆ ಅರ್ಹವೇ ಅಲ್ಲವೇ ಎಂಬುದನ್ನು ಪರೀಕ್ಷಿಸಿ ನಿರ್ಧರಿಸಲು ನಾಟಕಕಾರ ಮೊದಲೇ ಸರ್ಕಾರಕ್ಕೆ ಒಪ್ಪಿಸಬೇಕಾಗಿತ್ತು. ಒಬ್ಬ ನ್ಯಾಯಮೂರ್ತಿ (ಅರ್‍ಖಾನ್ ಇಪೊನಮಸ್) ಈ ನಾಟಕಗಳನ್ನು ಪರಾಮರ್ಶಿಸಿ ಒಪ್ಪಿಗೆ ಕೊಟ್ಟರೆ ಅನಂತರ ಅವುಗಳನ್ನು ಪ್ರದರ್ಶಿಸಬಹುದಾಗಿತ್ತು. ಹೀಗೆ ಒಪ್ಪಿಗೆ ಸಿಕ್ಕಮೇಲೆ ನಟನಿಗೆ ಕೊಡಬೇಕಾದ ಸಂಭಾವನೆಯನ್ನು ಸರ್ಕಾರವೇ ಕೊಡುತ್ತಿತ್ತು. ಒಮ್ಮಗೆ ಮೂವರು ನಾಟಕಕಾರರು ತಮ್ಮ ನಾಟಕಗಳನ್ನು ಪರಾಮರ್ಶೆಗೆ ಕೊಡಬೇಕಾಗುತ್ತಿತ್ತು. ಪ್ರತಿಯೊಬ್ಬ ರುದ್ರನಾಟಕಕಾರನೂ ಮೂರು ರುದ್ರನಾಟಕಗಳು ಮತ್ತು ಒಂದು ಸ್ಯಾಟರ್ ನಾಟಲವನ್ನು ಪ್ರದರ್ಶಿಸಬೇಕಿತ್ತು. ಪ್ರದರ್ಶನದ ಅನಂತರ ನ್ಯಾಯಮೂರ್ತಿಗಳ ತೀರ್ಪಿನಂತೆ ಬಹುಮಾನ ದೊರಕುತ್ತಿತ್ತು. ನಟರಿಗೆ ಕೊಡಬೇಕಾದ ಸಂಭಾವನೆಯನ್ನು ಬಿಟ್ಟು ಉಳಿದಂತೆ ಪ್ರದರ್ಶನಕ್ಕೆ ಸಂಬಂದಿಸಿದ ಖರ್ಚನ್ನೆಲ್ಲ ಪಟ್ಟಣದ ಶ್ರೀಮಂತನೊಬ್ಬ (ಇವನನ್ನು ಕರಾಗಸ್ ಎನ್ನುತ್ತಾರೆ.) ವಹಿಸಿಕೊಳ್ಳುತ್ತಿದ್ದ. ಬಹುಮಾನದ ಫಲ ಇವನಿಗೇ ದೊರಕುತ್ತಿತ್ತು. ನಾಟಕಕಾರನೂ ಬಹುಮಾನಕ್ಕೆ ಭಾಗಸ್ತನಾಗುತ್ತಿದ್ದ. ದಿ ಸಪ್ಲಿಯಂಟ್ಸ್, ದಿ ಪರ್ಷಿಯನ್ಸ್, ಆರೆಸ್ಟಿಯ (ಅಗಮೆಮ್ನನ್, ದಿ ಕೊಯಘೋರಿ, ಯೂಮೆನಿಡೆಸ್ ಈ ಮೂರೂನಾಟಕಗಳ ಕೂಟ ಅಥವಾ ಮುಕ್ಕೂಟ ನಾಟಕ) _ ಇವು ಈಸ್ಕಿಲಸ್‍ನ ಮುಖ್ಯ ರುದ್ರನಾಟಕಗಳು. ಪ್ರಾಚೀನ ರುದ್ರನಾಟಕದ ಬೆಳೆವಣಿಗೆಯಲ್ಲಿ ಮೂರನೆಯ ಮುಖ್ಯಘಟ್ಟವೆಂದರೆ ಸೊಫೋಕ್ಲಿಸ್ (ಕ್ರಿ. ಪೂ. ಸು. 497-406). ಆಥೆನ್ಸ್‍ನ ಎಪ್ಪತ್ತು ಎಂಬತ್ತು ವರ್ಷಗಳ ಇತಿಹಾಸದಲ್ಲಿ ಈತ ಒಂದಲ್ಲ ಒಂದು ರೀತಿಯಲ್ಲಿ ಅದರ ಅದೃಷ್ಟವನ್ನು ರೂಪಿಸುವ ಕಾರ್ಯದಲ್ಲಿ ಭಾಗಿಯಾಗಿದ್ದ. ಈತ ಆಥೆನ್ಸ್‍ನ ಉನ್ನತಿ ಹಾಗೂ ಅವನತಿಯ ಸ್ಥಿತಿಯನ್ನು ಕಂಡವನು. ಸಾರ್ವಜನಿಕ ವ್ಯಕ್ತಿಯಾಗಿ, ರುದ್ರನಾಟಕಕಾರನಾಗಿ ಅಪರಿಮಿತ ಯಶಸ್ಸನ್ನು ಪಡೆದವನು. ಇವನಿಗೆ ರುದ್ರನಾಟಕ ಸ್ಪರ್ಧೆಗಳಲ್ಲಿ 24 ಭಾರಿ ಪ್ರಥಮ ಬಹುಮಾನ ಲಭಿಸಿತ್ತು. ಕ್ರಿ. ಪೂ. 468ರಲ್ಲಿ ಈಸ್ಕಿಲಸ್‍ನನ್ನು ಸೋಲಿಸಿ ಪ್ರಥಮಸ್ಥಾನ ಪಡೆದ. ಈತ 100ಕ್ಕೂ ಹೆಚ್ಚು ರುದ್ರನಾಟಕಗಳನ್ನು ಬರೆದಿದ್ದಾನೆಂದು ಪ್ರತೀತಿ. ಏಜಾಕ್ಸ್, ಅಂತಿಗೊನೆ, ದೊರೆ ಈಡಿಪಸ್, ಟ್ರಾಕಿಯಾದ ಹೆಂಗಸರು, ಎಲೆಕ್ಟ್ರಾ, ಫಿಲೋಕ್ವೆಟಸ್, ಕಾಲೋನಸ್‍ನಲ್ಲಿ ಈಡಿಪಸ್ _ಎಂಬ ಏಳು ನಾಟಕಗಳು ಮಾತ್ರ ದೊರೆತಿವೆ. ಇವುಗಳಲ್ಲದೆ ಒಂದು ಸ್ಯಾಟರ್ ನಾಟಕದ ತುಣುಕುಗಳೂ ಕೆಲವು ರುದ್ರನಾಟಕಗಳ ತುಣುಕುಗಳೂ ದೊರೆತಿವೆ.
ಈಸ್ಕಿಲಸ್‍ನಿಂದ ರೂಪಿತವಾದ, ಒಂದೇ ಕಥೆ ಮುಂದುವರಿಯುವ ಮುಕ್ಕೂಟ ನಾಟಕಗಳನ್ನು ಒಟ್ಟಿಗೆ ಪ್ರದರ್ಶಿಸುವ ಸಂಪ್ರದಾಯವನ್ನು ಈತ ಬಿಟ್ಟು ಬೇರೆ ಬೇರೆ ವಸ್ತುಗಳನ್ನುಳ್ಳ ಮೂರು ನಾಟಕಗಳನ್ನು ಪ್ರದರ್ಶಿಸುವ ರೂಢಿಯನ್ನು ಬಳಕೆಗೆ ತಂದ. ಹೀಗೆ ಮಾಡಿದ್ದರಿಂದ ನಾಟಕ ರಚನೆ ಮತ್ತು ಪ್ರಯೋಗದ ದೃಷ್ಟಿಯಿಂದ ತೀವ್ರತೆ ಮತ್ತು ಸಂಯಮಗಳನ್ನು ಸಾಧಿಸಲು ಸಾಧ್ಯವಾಯಿತು. ಇದರಿಂದ ನಾಟಕೀಯ ಆಸಕ್ತಿಯನ್ನು ಒಬ್ಬ ವ್ಯಕ್ತಿಯ ಮೇಲೆ, ಜೀವನದ ಸಂದಿಗ್ದಕ್ಷಣದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಯಿತು. ಸೋಫೊಕ್ಲಿಸ್‍ನ ನಾಟಕಗಳಲ್ಲಿ ನಾಯಕ ಏಕಾಂಗಿ, ಕಾಲದಿಂದ ಪ್ರತ್ಯೇಕವಾಗಿ ನಿಲ್ಲುವವನು. ಸ್ನೇಹಿತರ ಬುದ್ದಿವಾದ ಎಚ್ಚರಿಕೆಗಳನ್ನಾಗಲೀ, ವೈರಿಗಳ ಬೆದರಿಕೆಗಳನ್ನಾಗಲೀ ಒಂದು ದಿವ್ಯನಿರ್ಲಕ್ಷ್ಯದಿಂದ ಕಾಣುವನು. ಸೋಫೋಕ್ಲಿಸ್ ನಾಟಕವಿನ್ಯಾಸದಲ್ಲಿ ಮಾಡಿದ ಬದಲಾವಣೆ, ಜೀವನದರ್ಶನದ ವಿಶೇಷತೆಯಿಂದಾಗಿ ಅಲ್ಲಿಯವರೆಗೆ ಗ್ರೀಕ್ ರುದ್ರನಾಟಕದಲ್ಲಿಲ್ಲದ ಸಂಕೀರ್ಣತೆಯನ್ನು ಸಾಧಿಸಲು ಸಾಧ್ಯವಾಯಿತು. ಈಸ್ಕಿಲಸ್ ಮೇಳದವರ ಸಂಖ್ಯೆಯನ್ನು 50ರಿಂದ 12ಕ್ಕೆ ಇಳಿಸಿದ್ದ. ಇದನ್ನು ಸೋಫೋಕ್ಲಿಸ್ 12ರಿಂದ 15 ಕ್ಕೆ ಏರಿಸಿದ. ಕಾರಣಗಳೇನೋ ತಿಳಿಯದು. ಈ ವಿಚಾರ ಕುರಿತ ಒಂದು ಗ್ರಂಥವನ್ನೂ ಸೋಫೋಕ್ಲಿಸ್ ಬರೆದಿದ್ದನೆಂದು ತಿಳಿದುಬರುತ್ತದೆ. ಉಳಿದ ರುದ್ರನಾಟಕಕಾರರಲ್ಲಿ ಮೇಳ ನಾಟಕಕ್ರಿಯೆಯಿಂದ ಪೃಥಕ್ಕಾಗಿ ಉಳಿಯುತ್ತದೆ. ಆದರೆ ಸೋಫೋಕ್ಲಿಸ್‍ನ ನಾಟಕಗಳಲ್ಲಿ ನಾಟಕದ ಉಳಿದ ಅಂಗಗಳೊಂದಿಗೆ ಮೇಳ ಸಜೀವಸಂಬಂಧ ಪಡೆದಿರುತ್ತದೆ. ಸೋಫೋಕ್ಲಿಸ್ ನಾಟಕಗಳಲ್ಲಿ ಮೇಳ ಕೆಲಸ ಮಾಡುವ ರೀತಿ ವಿಶಿಷ್ಟವಾದದ್ದಾಗಿದೆ. ಕೆಲವು ಸಂದರ್ಭಗಳಲ್ಲಿ ಅದು 7 ಜನರ ಎರಡು ಭಾಗವಾಗಿ ಒಂದು ಭಾಗದ ಅನಂತರ ಇನ್ನೊಂದು ಕೆಲಸ ಮಾಡಬಹುದು ಅಥವಾ ಮಾತನಾಡುವಾಗ ಕೆಲವು ಸಂದರ್ಭಗಳಲ್ಲಿ ಮೇಳನಾಯಕನೊಬ್ಬನೇ ಮಾತನಾಡಬಹುದು. ಹಾಡುವಾಗಲೆಲ್ಲ ಮೇಳ ಒಟ್ಟಿಗೆ ಹಾಡುತ್ತದೆ. ಪ್ರಸ್ತಾವನೆಯ ಅನಂತರ ಮೇಳ ಪ್ರವೇಶಿಸುತ್ತದೆ. ಮೇಳ ಅಭಿಪ್ರಾಯ ವ್ಯಕ್ತಪಡಿಸುತ್ತದೆ, ಬುದ್ದಿವಾದ ಹೇಳುತ್ತದೆ, ನಾಟಕದ ಘಟನೆಯ ಮಧ್ಯೆ ಕೈಹಾಕುವ ಬೆದರಿಕೆಯನ್ನೂ ಮಾಡುತ್ತದೆ. ಕೆಲವೊಮ್ಮೆ ನಾಯಕ ಪರವಾಗಿರುತ್ತದೆ. ನಾಟಕಕಾರನ ಧೋರಣೆಯನ್ನು ವ್ಯಕ್ತಮಾಡುವ ಕೆಲಸ ಮಾಡುತ್ತದೆ; ಜೊತೆಗೆ ಪ್ರೇಕ್ಷಕನ ಪರವಾಗಿ ಪ್ರೇಕ್ಷಕನಿಗಾಗಿಯೂ ಕೆಲಸ ಮಾಡುತ್ತದೆ. ನಾಟಕಕಾರ ನಾಟಕದ ಘಟನೆಗಳಿಗೆ ಹೇಗೆ ಪ್ರತಿಕ್ರಿಯೆ ತೋರಿಸಬೇಕೆಂದು ಬಯಸುತ್ತಾನೊ ಹಾಗೆ ಪ್ರತಿಕ್ರಯಿಸುತ್ತದೆ. ಹೀಗೆ ನಾಟಕೀಯ ಪರಿಣಾಮವನ್ನು ತೀವ್ರಗೊಳಿಸುತ್ತದೆ. ವೇಗವಾಗಿ ನಡೆಯುವ ಕ್ರಿಯೆಗೆ ಅಲ್ಲಲ್ಲಿ ತಡೆ ತಂದು ಹಿಂದಿನ ಮುಂದಿನ ಘಟನೆಗಳಿಗೆ ಸ್ವಲ್ಪ ಉಸಿರಾಡಲು ಅನುವು ಮಾಡಿಕೊಡುತ್ತದೆ. ಹೀಗೆ ನಾಟಕದ ಒಟ್ಟು ಬಂಧಕ್ಕೆ ಮೇಳ ಅನಿವಾರ್ಯ ಅಂಗವೇ ಆಗಿ ಕೆಲಸಮಾಡುವಂತೆ. ಆದರೆ ನಟರಿಗೆ ಹಾಗೂ ಅಭಿನಯಕ್ಕೆ ಪ್ರಧಾನ್ಯಸಿಕ್ಕುವಂತೆ ಸೋಫೋಕ್ಲಿಸ್‍ನ ನಾಟಕಗಳಲ್ಲಿ ಇದು ಉಪಯೋಗವಾಗುತ್ತದೆ. ಸೋಫೋಕ್ಲಿಸ್ 3ನೆಯ ನಟನನ್ನು ಅಟ್ಟಣೆಯ ಮೇಲೆ ತಂದ. ಇದರಿಂದಾಗಿ ನಾಟಕದಲ್ಲಿ ಮಾತನಾಡುವ ಪಾತ್ರಗಳ ಸಂಖ್ಯೆಯನ್ನು ಹೆಚ್ಚುಮಾಡಿಕೊಳ್ಳಲು ಸಾಧ್ಯವಾಯಿತು. ಹೀಗೆ ಮಾಡಿದ್ದರಿಂದ ತ್ರಿಕೋನದೃಶ್ಯಗಳನ್ನು ತರಲು ಸಾಧ್ಯವಾಗಿ ಪಾತ್ರಪಾತ್ರಗಳ ಸಂಬಂಧಗಳ ಸೂಕ್ಷ್ಮತೆಯನ್ನು ಗ್ರಹಿಸಲು ಸಾಧ್ಯವಾಯಿತು. ಅರಿಸ್ಟಾಟಲನ ಪ್ರಕಾರ ದೃಶ್ಯಚಿತ್ರಣವನ್ನು ರಂಗಕ್ಕೆ ತಂದವನು ಸೋಫೋಕ್ಲಿಸ್. ಇವನಿಂದ ರುದ್ರನಾಟಕದ ಪರಿಣತಿ ಪ್ರಬುದ್ದತೆಗಳು ಪ್ರಾಪ್ತವಾದವು.
ಯೂರಿಪಿಡಿಸ್ (ಕ್ರಿ. ಊ. 480-106) ವಿಶ್ಲೇಷಣಾತ್ಮಕ ಮನಸ್ಸು ಹಾಗೂ ತೀಕ್ಷ್ಣ ಪ್ರತಿಭೆಯುಳ್ಳವನಾಗಿದ್ದು ಈಸ್ಕಿಲಸ್ ಮತ್ತು ಸೋಫೋಕ್ಲಿಸ್ ಅವರಿಗಿಂತ ಭಿನ್ನವಾದ ಧೋರಣೆಗಳನ್ನು ಹೊಂದಿದ್ದ. ಈತ ಸಾಕ್ರಟೀಸನ ಸ್ನೇಹಿತನಾಗಿದ್ದ ಈಸ್ಕಿಲಸ್‍ಗಿಂತ 45 ವರ್ಷ, ಸೋಫೋಕ್ಲಿಸ್‍ಗಿಂತ 154 ವರ್ಷ ಚಿಕ್ಕವನು. ಈತ ಪೌರಾಣಿಕ ವಸ್ತುಗಳನ್ನೇ ತನ್ನ ನಾಟಕಗಳಿಗೆ ಬಳಸಿಕೊಂಡರೂ ಅವುಗಳನ್ನು ವಿಮರ್ಷಾತ್ಮಕವಾಗಿ ನೋಡಿ ಚಿತ್ರಿಸಿದ. ಹಿಂದಿನ ಇಬ್ಬರುನಾಟಕಕಾರರಿಗಿಂತ ಈತ ಪಾತ್ರಗಳನ್ನು ಹೆಚ್ಚು ಮಾನವೀಯಗೊಳಿಸಿದ. ಈ ನಾಟಕಗಳು ಸಮಕಾಲೀನ ಆಥೆನ್ಸಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಸ್ಥಿತಿಗಳನ್ನು ತೋರಿಸುತ್ತವೆ. ಈ ನಾಟಕಗಳಲ್ಲಿ ಸ್ತ್ರೀ ಪುರುಷರ ಪ್ರಣಯ ನಿಸ್ಸಂಕೋಚವಾಗಿ ವರ್ಣಿಸಲಾಗಿದೆ. ಹರ್ಷರೌದ್ರಗಳ ಉದ್ದೇಶಪೂರ್ವಕ ಮಿಶ್ರಣವನ್ನು ಈ ನಾಟಕಗಳಲ್ಲಿ ಕಾಣುತ್ತೇವೆ. ಆಧುನಿಕ ಹರ್ಷರೌದ್ರ ನಾಟಕದ ಮೂಲವನ್ನು ನಾವು ಯೂರಿಪಿಡೀಸ್‍ನಲ್ಲಿ ಕಾಣುತ್ತೇವೆ. ಗ್ರೀಕ್ ದೇವತೆಗಳು ಇವನ ನಾಟಕಗಳಲ್ಲಿ ವಿಡಂಬನೆಗೆ ಒಳಗಾಗಿದ್ದಾರೆ. ವಾಸ್ತವಿಕವಾಗಿ ಚಿತ್ರಣಗೊಂಡಿದ್ದಾರೆ. ಈತ ತತ್ತ್ವಗಳನ್ನು ಪ್ರತಿವಾದಿಸಲು ಪಾತ್ರಗಳನ್ನು ಬಳಸಿಕೊಂಡ. ಈ ಕಾರಣಗಳಿಂದಾಗಿ ನಾಟಕದ ವಿನ್ಯಾಸದಲ್ಲೂ ಬದಲಾವಣೆಗಳಾದವು; ಮೇಳ ಸಂಪೂರ್ಣವಾಗಿ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು; ಕೇವಲ ಎರಡು ದೃಶ್ಯಗಳ ಮಧ್ಯದ ವಿರಾಮ ತುಂಬುವ ಸಾಧನವಾಯಿತು. ಇವನ ನಾಟಕಗಳ ಆರಂಭದಲ್ಲಿ ಒಬ್ಬ ವ್ಯಕ್ತಿ ಬಂದು, ಕವಿಯ ಆಶಯಗಳನ್ನು ವಿವರಿಸುವ `ಪ್ರಸ್ತಾವನೆ ಭಾಗ ಸೇರಿತು. ಇದು ಹಿಂದಿನ ಕಥೆಯನ್ನೂ ಸೂಚಿಸುತ್ತದೆ. ಮುಂದಿನ ಕಥೆ ಸೂಚಿಸುವ `ಉಪಸಂಹಾರ ಭಾಷಣವೂ ಸೇರಿತು. ಉಪಸಂಹಾರ ಭಾಷಣ ನಾಟಕದ ಕೊನೆಗೆ ಬಂದು ಅದನ್ನು ಒಬ್ಬ ದೇವತೆ ಪ್ರತ್ಯಕ್ಷವಾಗಿ ನಡೆಸಿಕೊಡುತ್ತಾರೆ. ಕ್ಲಿಷ್ಟ ಸಮಸ್ಯೆಯನ್ನು ಸುಲಭವಾಗಿ ದೇವತೆ ಪರಿಹರಿಸಿಕೊಡುವುದು ಹಲವು ವೇಳೆ ಕೃತಕವಾಗಿ ಕಾಣುತ್ತದೆ.
ಇವನ ನಾಟಕಗಳ ಭಾಷೆ ಅಲಂಕಾರ ಭೂಯಿಷ್ಠವಾದುದು. ಯೂರಿಪಿಡೀಸ್ ತೊಂಬತ್ತೆರಡು ರುದ್ರನಾಟಕಗಳನ್ನು ಬರೆದಿದ್ದಾನೆಂದು ಪ್ರತೀತಿ. ಆದರೆ ಈಗ ಹದಿನೇಳು ನಾಟಕಗಳು ಮಾತ್ರ ಉಳಿದುಬಂದಿವೆ. ಸೈಕ್ಲೊಪ್ಸ್ ಎಂಬ ಒಂದು ಸ್ಯಾಟರ್ ನಾಟಕ ದೊರೆತಿದೆ. ಯುರೋಪಿನ ಆಧುನಿಕ ವಾಸ್ತವವಾದದ ಮನಶ್ಯಾಸ್ತ್ರೀಯ ನಾಟಕ ಪರಂಪರೆಯ ಮೂಲವನ್ನು ನಾವು ಯೂರಿಪಡೀಸ್‍ನಲ್ಲಿ ಕಾಣುತ್ತೇವೆ. ಎಲೆಕ್ಟ್ರ, ಹೆಲನ್, ಇಫಿಜೀನಿಯ ಇನ್ ಟಾರಿಸ್, ಒರೆಸ್ಟಸ್, ಫೋನಿಸ್ಸೇ, ದಿಬಾಖೆ, ಇಫಿಜೀನಿಯ ಇನ್ ಓಲಿಸ್ - ಇವು ಇವನ ಮುಖ್ಯ ನಾಟಕಗಳು. ಈಸ್ಕಿಲಸ್, ಸೋಫೋಕ್ಲಿಸ್, ಯೂರಿಪಿಡೀಸ್‍ರ ಅನಂತರವೂ ಸುಮಾರು ಇನ್ನೂರು ವರ್ಷಗಳ ಕಾಲ ರುದ್ರನಾಟಕಗಳು ರಚನೆಗೊಳ್ಳುತ್ತ ಬಂದರೂ ಯಾವ ನಾಟಕಗಳೂ ದೊರೆಯುವುದಿಲ್ಲ. ಹೆಸರಿಸಬಹುದಾದಂತಹ ಅನಂತರದ ಇಬ್ಬರು ನಾಟಕಕಾರರೆಂದರೆ ಇಯೋನ್ ಮತ್ತು ಅಗಥೋನ್.
ಪ್ರಾಚೀನ ಗ್ರೀಕ್ ವಿನೋದ ನಾಟಕಗಳನ್ನು (ಕಾಮಿಡಿ) ಡಯಾನಿಸಸ್‍ನ ಹಬ್ಬಗಳಲ್ಲಿ ಪ್ರದರ್ಶಿಸುವಂತಾದದ್ದು ಕ್ರಿ.ಪೂ. 486 ರ ಅನಂತರ. ಆದರೆ ಆ ವೇಳೆಗಾಗಲೆ ಹಲವು ದಶಕಗಳವರೆಗೆ ಈ ಒಂದು ಪ್ರಕಾರ ಜನಪದರ ಮನರಂಜನೆ ಮತ್ತು ಧಾರ್ಮಿಕ ಪ್ರಕ್ರಿಯೆಗಳಲ್ಲಿ ನಿಧಾನವಾಗಿ ವಿಕಾಸಗೊಳ್ಳುತ್ತಿತ್ತು. ಆರಂಭದಲ್ಲಿ ಇದಕ್ಕೊಂದು ನಿಶ್ಚಿತ ಸ್ವರೂಪವಿಲ್ಲದೆ ವಿವಿಧ ಮನರಂಜನೆಯ ಅಂಶಗಳು ಒಂದು ವ್ಯವಸ್ಥೆ, ಕ್ರಮಗಳಿಲ್ಲದೇ ಇದರಲ್ಲಿ ಬರುತ್ತಿದ್ದವು. ಈ ಪ್ರಕಾರದ ಉಗಮ ಆಟಿಕ್ ಕಾಮುಸ್‍ನಲ್ಲಿದೆ ಎಂದು ಹೇಳಲಾಗುತ್ತದೆ. ಈ ಜನಪ್ರಿಯ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಡಯಾನಿಸಸ್‍ನ ಮಹತ್ತ್ವವನ್ನು ಕುರಿತು ಅಶ್ಲೀಲ ಹಾಡುಗಳನ್ನು ಹಾಡಲಾಗುತ್ತಿತ್ತು. ಈ ಕಾಮುಸ್ ಎಂಬ ಪದದಿಂದ ಕಾಮಿಡಿ ಎಂಬ ಪದ ನಿಷ್ಪನ್ನವಾಗಿದೆ. ಈ ಆಚರಣೆಯಲ್ಲಿ ಭಾಗವಹಿಸುವವರು ಕೆಲವೊಮ್ಮೆ ಪಕ್ಷಿ, ಕುದುರೆ, ಕಪ್ಪೆಗಳಂತೆ ವೇಷ ಹಾಕಿಕೊಂಡು ಮುಖವಾಡಗಳನ್ನು ಧರಿಸುತ್ತಿದ್ದರು. ಆಥೆನ್ಸಿಗೆ ಹತ್ತಿರದಲ್ಲಿದ್ದ ಮೆಗರ ಪಟ್ಟಣವೂ ಈ ಪ್ರಕಾರಕ್ಕೆ ತನ್ನ ಕಾಣಿಕೆ ನೀಡಿದೆ. ಕೊರ್‍ಡಾಕ್ಸ್ ಎಂಬ ಸ್ವಚ್ಛಂದ ಕಾಮಪ್ರಚೋದಕ ನೃತ್ಯಗಳೂ ಅಲ್ಲಿ ನಡೆಯುತ್ತಿದ್ದವು. ಇದರ ಫಲವಾಗಿ ಹಳೆಯ ವೈನೋದಿಕ (ಓಲ್ಡ್ ಕಾಮಿಡಿ) ಜನ್ಮ ತಾಳಿತು. ಇದರಲ್ಲಿ ವಿಕೃತ, ಸ್ವಚ್ಛಂದ, ಅಶ್ಲೀಲ ಮತ್ತು ಮೊನಚಾದ ವಿಡಂಬನೆ ಇರುತ್ತಿತ್ತು. ಜೊತೆಗೆ ಇದು ಭಾವಗೀತಾತ್ಮಕತೆಯಿಂದ ಕೂಡಿರುತ್ತಿತ್ತು. ಇದರಲ್ಲಿ ಕಾಲ್ಪನಿಕತೆ, ಉಹಾಪೋಹಗಳೂ ಗಂಭೀರವಾದ ರಾಜಕೀಯ ಉದ್ದೇಶಗಳ ಜೊತೆಗೆ ಕೀಳುಮಟ್ಟದ ಕೋಡಂಗಿತನವೂ ಸೇರಿರುತ್ತಿತ್ತು. ಆ ಸಂದರ್ಭದಲ್ಲಿ ಏನನ್ನುಬೇಕಾದರೂ ಮಾತನಾಡಬಹುದಿತ್ತು; ಏನನ್ನುಬೇಕಾದರೂ ಅನುಕರಿಸಬಹುದಿತ್ತು. ಈ ಪ್ರಯೋಗಗಳು ಎಷ್ಟು ಸಾಧ್ಯವೊ ಅಷ್ಟು ಉಲ್ಲಾಸದಿಂದ ಕೂಡಿರಬೇಕೆಂಬುದು ಇಲ್ಲಿನ ಉದ್ದೇಶವಾಗಿತ್ತು. ಪ್ರಾಣಿಗಳನ್ನು ಅನುಕರಿಸುವವರು ಮೇಳದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಪ್ರಮುಖ ಪಾತ್ರವಹಿಸುವವರಿಗೆ ವಿಶಿಷ್ಟವಾದ ಉಡುಪು ಇರುತ್ತಿತ್ತು; ಬಿಗಿಯಾದ ಚಲ್ಲಣಗಳು, ಅತಿಯಾಗಿ ಒಳಗೆ ಮೆತ್ತೆಗಳಿಂದ ತುಂಬಿರುವ ಜರ್ಕಿನ್‍ಗಳನ್ನು ಬಳಸಲಾಗುತ್ತಿತ್ತು; ಡಯಾನಿಸಸ್‍ನ ಸಂಕೇತವಾದ ಫ್ಯಾಲಸ್‍ನ (ಶಿಶ್ನ) ಪ್ರತೀಕವು ಉಡುಪಿನಲ್ಲಿರುತ್ತಿತ್ತು. ಮುಖವಾಡಗಳೂ ಉತ್ಪ್ರೇಕ್ಷೆಯಿಂದ ಕೂಡಿರುತ್ತಿದ್ದವು. ಈ ಉತ್ಪ್ರೇಕ್ಷೆಗಳ ಹಿಂದೆ ಯಾವುದೋ ಒಂದು ಘನ ಉದ್ದೇಶ, ಅನಿರೀಕ್ಷಿತ ಚೆಲುವು ಇರುತ್ತಿದ್ದವು. ಸಾಹಿತ್ಯವಾಗಿ ಉಳಿದುಬಂದಿರುವ ಅರಿಸ್ಟೋಫೆನೀಸ್‍ನ ಹನ್ನೊಂದು ನಾಟಕಗಳು ಈ ದೃಷ್ಟಿಯಿಂದ ಮಹತ್ತ್ವವಾಗಿವೆ. ಈತ ಈ ಪ್ರಕಾರದ (ಓಲ್ಡ್‍ಕಾಮಿಡಿ) ಮೊಟ್ಟಮೊದಲ ನಾಟಕಕಾರನೇನೂ ಅಲ್ಲ, ಆದರೆ ಈ ಪ್ರಕಾರದ ಬಹಳ ದೊಡ್ಡ ನಾಟಕಕಾರನೆಂದು ಇವನ ಸಮಕಾಲೀನರು ಇವನನ್ನು ಪರಗಣಿಸಿದ್ದರೆಂಬುದನ್ನು ಗಮನಿಸಿದಾಗ, ಹಳೆಯ ವೈನೋದಿಕದ ಪರತಿನಿಧಿ ಇವನೆಂದು ಪರಿಗಣಿಸಬಹುದು. ಅರಿಸ್ಟೋಫೆನೀಸ್‍ನ (ಕ್ರಿ.ಪೂ. 448-380) ಒಂದು ನಾಟಕ ಕ್ರಿ. ಪೂ. 425ರಲ್ಲಿ ಪ್ರದರ್ಶಿತವಾಯಿತು. ಅದೇ ತಾನೇ ಮುಕ್ತಾಯಗೊಂಡಿದ್ದ ಪೆಲಪಾನೀಸಿಯನ್ ಯುದ್ಧಕ್ಕೆ (ಆಥೆನ್ಸ್ ಹಾಗೂ ಸ್ಟಾರ್ಟ್ ನಡುವಿನ ಸಮರ) ಯೂರಿಪಿಡೀಸನ ವಿರೋಧವಿದ್ದಂತೆ ಇವನೂ ಆ ಯುದ್ಧಕ್ಕೆ ವಿರೋಧಿಯಾಗಿದ್ದ. ಆದರೆ ಇವರಿಬ್ಬರೂ ಅದನ್ನು ವಿರೋಧಿಸಿದ ರೀತಿ ಭಿನ್ನವಾದುದಾಗಿತ್ತು. ಯೂರಿಪಿಡೀಸ್ ಆ ಕಾಲದ ಮುಂದುವರೆದ ಆಲೋಚಕರ ಗುಂಪಿಗೆ ಸೇರಿದವನಾಗಿದ್ದು ಪ್ರಾಚೀನ ಗ್ರೀಕ್ ಪುರಾಣಗಳು ಮತ್ತು ದೇವತೆಗಳನ್ನು ತಿರಸ್ಕರಿಸುವ ಮೂಲಕ ಪ್ರತಿಭಟಿಸಿದರೆ ಅರಿಸ್ಟೋಫೇನೀಸ್ ತನ್ನ ಕಾಲದ ನೈತಿಕ ಅವನತಿ ಹೊಂದಿದ ನಾಯಕರನ್ನು ಭತ್ರ್ಸನೆ ಮಾಡುತ್ತ ಪ್ರಾಚೀನ ಗ್ರೀಕರ ಗುಣಗಳನ್ನು ಎತ್ತಿಹಿಡಿಯುವ ಮೂಲಕ ಪ್ರತಿಭಟಿಸಿದ್ದಾರೆ. ತನ್ನ ಯುದ್ದವಿರೋಧಿ ನಿಲುವನ್ನು ಹಲವಾರು ನಾಟಕಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪರಬಾಸಿಸ್ ಮತ್ತು ದಿ ಅಕಾರ್ನಿಯನ್ಸ್ - ಈ ನಾಟಕಗಳಲ್ಲಿ ಅರಿಸ್ಟೋಫೆನೀಸ್ ತನ್ನ ಕಾಲದ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳನ್ನೂ ಆ ಕಾಲದ ರಾಜಕೀಯ ನಾಯಕರನ್ನೂ ಕಟುವಾಗಿ ವಿಡಂಬಿಸಿದ್ದಾನೆ. ದಿ ಕ್ಲೌಡ್ಸ್, ದಿ ವಾಸ್ಪ್ಸ್, ದಿ ಬಡ್ರ್ಸ್, ದಿ ಫ್ರಾಗ್ಸ್, ಲೈಸಿಸ್‍ಟ್ರಾಟ, ಥೆಸ್‍ಮೊಫೋರಿಯೋಜೋó ಇಕ್‍ಲೀಸಿಯಾಸ್ಯೂ, ಪ್ಲೂಟಸ್,_ ಇವು ಇವನ ನಾಟಕಗಳು. ಕ್ರಿ. ಪೂ. 411ರಲ್ಲಿ ಲೈಸಿಸ್‍ಟ್ರಾಟ ಎಂಬ ನಾಟಕ ರಂಗಭೂಮಿಯ ಮೇಲೆ ಪ್ರಯೋಗಗೊಂಡಿತು. ಈ ನಾಟಕದಲ್ಲಿ ಲೈಸಿಸ್‍ಟ್ರಾಟಳು ಯುದ್ದವನ್ನು ನಿಲ್ಲಿಸಿ ಶಾಂತಿಯ ಪರವಾಗಿ ವಾದಿಸುತ್ತಾಳೆ. ಅದಕ್ಕಾಗಿ ಯೋಧರ ಹೆಂಡತಿಯರು ಅನುಸರಿಸಬೇಕಾದ ಪ್ರತಿಭಟನೆಯ ರೀತಿಯನ್ನು ವಿವರಿಸುತ್ತಾಳೆ. ಅರಿಸ್ಟೋಫೆನೀಸ್‍ಗೆ ಸಮಯ ಸಿಕ್ಕಾಗಲೆಲ್ಲ ಯೂರಿಪಿಡೀಸ್‍ನನ್ನು ಗೇಲಿ ಮಾಡುವುದೆಂದರೆ ಬಹಳ ಪ್ರೀತಿ. `ಫ್ರಾಗ್ಸ್ ನಾಟಕದಲ್ಲಿ ಈಸ್ಕಿಲಸ್ ಮತ್ತು ಯೂರಿಪಿಡೀಸ್ ಇವರಿಬ್ಬರಲ್ಲಿ ಯಾರು ಶ್ರೇಷ್ಠ ನಾಟಕಕಾರರು ಎಂಬುದನ್ನು ನಿರ್ಧರಿಸಲು ಪ್ಲೊಟೋನ ಅಧೋಲೋಕದಲ್ಲಿ ಸ್ಪರ್ಧೆ ನಡೆಯುತ್ತದೆ. ಅದಕ್ಕೆ ಬ್ಯಾಕಸ್ ತೀರ್ಪುಗಾರನಾಗಿರುತ್ತಾನೆ. ಅಲ್ಲಿಯು ಕೂಡ ಈಸ್ಕಿಲಸ್‍ನೇ ಶ್ರೇಷ್ಠನೆಂದು ನಿರ್ಧಾರವಾಗುವುದು. ಯೂರಿಪಿಡೀಸ್‍ನ ಬಗೆಗೆ ಅರಿಸ್ಟೋಫೆನೀಸ್ ಹೊಂದಿದ್ದ ವಿರೋಧಿ ಭಾವನೆಗೆ ಇದು ಸಾಕ್ಷಿಯಾಗಿದೆ. ಮುಖ್ಯವಾದ ಮಾತೆಂದರೆ ಅರಿಸ್ಟೋಫೆನೀಸ್‍ನಾಟಕಗಳು ಮುಂದೆ ಬೆಳೆದು ಬಂದ ಮಧ್ಯವೈನೋದಿಕಗಳಿಗೆ (ಮಿಡಲ್‍ಕಾಮಿಡಿ) ದಾರಿ ಮಾಡಿಕೊಟ್ಟವು. ಹಳೆಯ ವೈನೋದಿಕ ತೀಕ್ಷ್ಣವಾದ ವಿಡಂಬನೆ ಮತ್ತು ಸ್ವಚ್ಚಂದತೆಯನ್ನುಳ್ಳದ್ದಾದರೆ ಮಧ್ಯವೈನೋದಿಕ ಹಳೆ ವೈನೋದಿಕದ ಅಂಶಗಳನ್ನು ಉಳಿಸಿಕೊಂಡು ವ್ಯಕ್ತಿಗಳ ನಡವಳಿಕೆ ಮತ್ತು ಸ್ವಭಾವಗಳನ್ನು ಚಿತ್ರಿಸುವುದರ ಕಡೆಗೆ ಒತ್ತುನೀಡಿತು; ಹಳೆಯ ವೈನೋದಿಕದಲ್ಲಿನ ವಿಡಂಬನೆ ಮತ್ತು ಭತನೆ ವ್ಯಕ್ತಿನಿಂದೆಗಳನ್ನು ತ್ಯಜಿಸಿತು. ಈ ಪ್ರಕಾರದ ನಾಟಕಕಾರರು ಹಲವರಿದ್ದಾರೆ. ನವವೈನೋದಿಕವು ಅಲೆಗ್ಸಾಂಡರ್ ಮಹಾಶಯನ ನಿಧನದಿಂದ ಮಿನಾಂಡರ್‍ನ (ಕ್ರಿ. ಪೂ. 342-291) ನಿಧನದ ಮಧ್ಯದ 30 ವರ್ಷಗಳಲ್ಲಿ ಪ್ರಾಚುರ್ಯದಲ್ಲಿತ್ತು. ಈ ನವವೈನೋದಿಕವು ವ್ಯಕ್ತಿಗಳ ನಡೆವಳಿಕೆಗಳ ಚಿತ್ರಣವನ್ನು ಉಳಿಸಿಕೊಂಡು ವ್ಯಕ್ತಿ ನಿಂದೆಯನ್ನು ತ್ಯಜಿಸಿ ಮೃದುತ್ವ, ಗಾಂಭೀರ್ಯ ಮತ್ತು ಔಚಿತ್ಯಗಳನ್ನು ಅಳವಡಿಸಿಕೊಂಡಿತು. ಮಿನಾಂಡರ್ ಫಿಲೀಮನ, ಡಿಫಿಲಸ್, ಅಪಾಲೊಡೊರಸ್, ಫಿಲಿಪ್ಪಿಡೆಸ್, ಮತ್ತು ಪೋಸಿಡಿಪಸ್ ಈ ಕಾಲದ ಮುಖ್ಯ ನಾಟಕಕಾರರು. ಎಲ್ಲೆಯನ್ನು ಮೀರಿ ಹೋಗುವುದಿಲ್ಲ. ಸದ್ಗುಣಗಳನ್ನು ಗುರುತಿಸಿ ದುರ್ಗುಣಗಳನ್ನು ವಿಡಂಬಿಸುವುದು ಇವನ ರೀತಿ. ಮಿನಾಂಡರನ ನಾಟಕಗಳನ್ನು ಕುರಿತು ಕ್ವಿಮಟೆಲಿಯನ್ ಎಂಬಾತ "ವಾಗ್ಮಿಗಳು ತಮ್ಮ ವಾಗ್ಮಿತೆಯನ್ನು ಉತ್ತಮಪಡಿಸಿಕೊಳ್ಳಲು ಅಧ್ಯಯನ ಮಾಡಬೇಕಾದಂಥವು" ಎಂದು ಹೇಳುತ್ತಾನೆ. ಮಿನಾಂಡರನ ನಾಟಕ ದಿ ಗರ್ಲ್ ಫ್ರಂ ಸ್ಯಾಮೊಸ್ (ಸ್ಯಾಮಿಯ) ಎಂಬುದರ ಕೆಲವು ತುಣುಕುಗಳು ಮಾತ್ರ ಈಗ ದೊರೆಯುತ್ತವೆ. ಇದು ಒಂದು ರೊಮ್ಯಾಂಟಿಕ್ ಪ್ರೇಮಕಥೆಯನ್ನು ಉಳ್ಳದ್ದಾಗಿರಬೇಕೆಂದು ತೊರುತ್ತದೆ. ಇದರಲ್ಲಿ ಹಾಸ್ಯಮಯ ವ್ಯಂಗ್ಯ ಹೇರಳವಾಗಿದೆ. ಇವನ ಮತ್ತೊಂದು ನಾಟಕ `ದಿ ಗರ್ಲ್‍ವಿತ್ ಪಾರ್ನ್ ಹೇರ್ ಸುಂದರವಾಗಿದ್ದು ವಾಸ್ತವಿಕ ಜೀವನಕ್ಕೆ ಹತ್ತಿರವಾಗಿದೆ. `ದಿ ಆರ್‍ಬಟ್ರೇಷನ್ ಎಂಬ ನಾಟಕ ಕೂಡ ಪ್ರೇಮವನ್ನೇ ವಾಸ್ತುವಾಗುಳ್ಳದ್ದು. ಆಧುನಿಕ ಕಾಲದ ನಾಟಕದ ಪರಿಕರಗಳನ್ನು ಇದರಲ್ಲಿ ಕಾಣಬಹುದು. ನಡವಳಿಕೆಗಳ ಚಿತ್ರಣದ ಮೇಲಿನ ಒತ್ತು, ನಗು, ಮತ್ತು ಅಳುವಿನ ಮಿಶ್ರಣ, ಪಾತ್ರಗಳ ಬೆಳೆವಣಿಗೆ, ಪುರುಷರು ಮತ್ತು ಸ್ತ್ರೀಯರಿಗೆ ಸಮಾನವಾದ ನೈತಿಕ ಕಾನೂನುಗಳಿರಬೇಕೆಂಬ ಧೋರಣೆ, ಒಂದು ವಿಷಯದ ಸುತ್ತ ನಾಟಕ ಕಟ್ಟುವ ವಿಧಾನ _ ಇವುಗಳೆಲ್ಲ ಆಧುನಿಕ ಸಮಸ್ಯಾತ್ಮಕ ನಾಟಕದ (ಪ್ರಾಬ್ಲಮ್ ಪ್ಲೇ) ರೀತಿಗಳೇ ಆಗಿವೆ. ಹಾಗಾಗಿ ಮಿನಾಂಡರನ ನಾಟಕಗಳಲ್ಲಿ ಆಧುನಿಕ ಹೊಳಹುಗಳನ್ನು ಕಾಣಬಹುದಾಗಿದೆ. ಗ್ರೀಸ್‍ನ ಅವನತಿಯೊಂದಿಗೆ ಈ ನಾಟಕ ಪ್ರಕಾರಗಳೂ ಅವನತಿಯ ಕಡೆ ಸಾಗಿದವು. ರೋಮನ್ ರಂಗಭೂಮಿ: ಗ್ರೀಕ್ ರಂಗಭೂಮಿಯ ಅಸ್ತಂಗತದಲ್ಲಿಯೇ ರೋಮನ್ ರಂಗಭೂಮಿ ಉದಯಕಿರಣಗಳು ಕಾಣಿಸಿಕೊಳ್ಳತೊಡಗಿದವು. ರೋಮ್‍ನ ನಾಟಕದ ಮೇಲೆ ಮಿನಾಂಡರನ ಶೈಲಿ ಪ್ರಭಾವ ಬೀರಿತು. ಇದರ ಪರಿಣಾಮದಿಂದ ಶಿಷ್ಟರೋಮನ್ ನಾಟಕ ಉಗಮವಾಯಿತೆನ್ನುವುದು ನಿಜವಾದರೂ ಪ್ರಾಚೀನ ಕಾಲದಿಂದ ಜನಪದ ನಾಟಕ ರೀತಿಗಳು ರೋಮ್‍ನಲ್ಲಿ ಪ್ರಾಚುರ್ಯದಲ್ಲಿದ್ದವು. ಮೆಗರ ಎಂಬಲ್ಲಿ ನಡೆಯುತ್ತಿದ್ದ ಅಣಕನಾಟಕ, ಹಾಸ್ಯ ಪ್ರಸಂಗಗಳು ರಂಗಪ್ರಯೋಗ_ ಇವುಗಳ ಪ್ರಭಾವವೂ ರೋಮನ್ ವಿನೋದನಾಟಕಗಳಲ್ಲಿ ಮೂಲವಾದವು. ಕೆಲವು ಬಗೆಯ ಪ್ರಹಸನಗಳೂ ಬಳಕೆಯಲ್ಲಿದ್ದವು. ಪ್ಯಾಂಟೊಮೈಮ್ ಮತ್ತು ಮೈಮ್ _ ಇವುಗಳಲ್ಲಿ ಕ್ರಮವಾಗಿ ಮೂಕಾಭಿನಯ ಮತ್ತು ಬರಿಗಾಲಿನ ಅಭಿನಯಗಳಿರುತ್ತಿದ್ದವು. ಇವೇ ವಿನೋದನಾಟಕಗಳಿಗೆ ಮೂಲವಾದವು.
ಆದರೆ ನಿಜವಾದ ಅರ್ಥದಲ್ಲಿ ರೋಮನ್ ವೈನೋದಿಕ, ಗ್ರೀಕ್ ವೈನೋದಿಕದ ಸ್ಪೂರ್ತಿಯಿಂದಲೇ ಹುಟ್ಟಿತು. ಈ ಮಾತು ಇಡಿಯಾಗಿ ರೋಮನ್ ಸಾಹಿತ್ಯಕ್ಕೆ ಅನ್ವಯಿಸುತ್ತದೆ. ರೋಮನ್ ಸಾಹಿತ್ಯವು ಗ್ರೀಕ್ ಸಾಹಿತ್ಯದ ಪ್ರಭಾವದಿಂದಲೇ ಹುಟ್ಟಿತೆನ್ನಬಹುದು.
ಟೈಟಸ್ ಮಸಿಯಸ್ ಪ್ಲೌಟಸ್ (ಕ್ರಿ. ಪೂ 254-179) ಎಂಬಾತ ಗ್ರೀಕ್ ನವವೈನೋದಿಕಗಳ ಬಗೆಗೆ ಚೆನ್ನಾಗಿ ತಿಳಿದಿದ್ದ. ಇವನು ಮಿನಾಂಡರನಿಂದ ವಸ್ತು ಮತ್ತು ಸಂವಿಧಾನಗಳನ್ನು ಎರವಲು ಪಡೆದು ನಾಟಕಗಳನ್ನು ರಚಿಸಿದ. ಇವನು ವಿನೋದನಾಟಕ, ಹಳೆಯ ವೈನೋದಿಕ ಮತ್ತು ಹೊಸ ವೈನೋದಿಕಗಳ ಮಿಶ್ರಣವನ್ನುಳ್ಳದ್ದು. ಇವನ ನಾಟಕಗಳು ಹೆಚ್ಚಾಗಿ ಗ್ರೀಕ್ ಮೂಲಗಳಿಂದ ಅನುವಾದಗೊಂಡಂಥವು.
ಪಬ್ಲಿಯಸ್ ಟೆರೆನ್ಷಿಯಸ್ ಆ್ಯಂಪರ್ ಕ್ರಿ. ಪೂ. 195ರಲ್ಲಿ ಹುಟ್ಟಿದ. ಕಾರ್ಥೇಜೀನವನಾದ ಈತ ರೋಮನ್ ಗುಲಾಮನಾಗಿ ಬಂದವನಿರಬೇಕು ರೋಮ್‍ನಲ್ಲಿ ಇವನಿಗೆ ವಿದ್ಯಾಭ್ಯಾಸ ಮಾಡಿಸಿದವನೆಂದು ಇವನ ಯಜಮಾನ. ಈತ ರಚಿಸಿದ ದಿ ಗರ್ಲ್ ಆಫ್ ಆಂಡ್ರಸ್, ದಿ ಸ್ಟೆಪ್‍ಮದರ್, ದಿ ಸೆಲ್ಫ್ ಟಾರಮೆಂಟರ್, ದಿ ಯೂನುಖ್ ಘೋರ್‍ಮಿಂತೊ ಮತ್ತು ಅಡೆಲ್ಟಿ ಎಂಬ ಆರು ನಾಟಕಗಳು ಉಳಿದುಬಂದಿವೆ. ಇವು ಕೂಡ ಮಿನಾಂಡರನ ನವವೈನೋದಿಕಗಳ ಅನುಕರಣೆಗಳೇ. ಆದರೆ ಈ ನಾಟಕಗಳಲ್ಲಿ ಹಾಸ್ಯದಿಂದ ದೂರ ಸರಿಯುತ್ತ ಸಮಸ್ಯಾತ್ಮಕ ನಾಟಕದ ರೀತಿಯ ಕಡೆಗೆ ರೋಮ್‍ನ ರುದ್ರನಾಟಕಗಳು ನಡೆದಿರುವಂತೆ ತೋರುತ್ತದೆ. ಸೆನೆಕನ ಕೆಲವು ನಾಟಕಗಳನ್ನುಳಿದರೆ ಎಲ್ಲಾ ನಾಶವಾಗಿ ಹೋಗಿದೆ. ಆದರೆ ಕೆಲವು ನಾಟಕಗಳ ತುಣುಕುಗಳು ಮಾತ್ರ ಸಿಕ್ಕುತ್ತವೆ. ಕ್ವಿಂಟಸ್ ಎನ್ನಿಯಸ್ (ಕ್ರಿ. ಪೂ. 239169) ಮಾರ್ಕ್‍ಸ್ ಪೆಕೂವಿಯಸ್ (ಕ್ರಿ. ಪೂ 219-129) ; ಲುಸಿಯಸ್ ಅಕ್ಸಿಯಸ್ (ಕ್ರಿ. ಪೂ. 170-86) ಇವರ ನಾಟಕಗಳ ಕೆಲವು ತುಣುಕುಗಳು ದೊರೆಯುತ್ತವೆ.
ಲೂಸಿಯಸ್ ಅನ್ನಿಯಸ್ ಸೆನೆಕ (ಸು. ಕ್ರಿ. ಪೂ. 4-ಕ್ರಿ. ಶ. 65) ರೋಮ್‍ನ ಬಹಳ ಮುಖ್ಯ ರುದ್ರನಾಟಕಕಾರ. ಇವನು ಸ್ಪೇನಿನಲ್ಲಿ ಹುಟ್ಟಿ ಚಿಕ್ಕಂದಿನಲ್ಲೇ ರೋಮ್‍ಗೆ ಬಂದು ಅಲಂಕಾರಶಾಸ್ತ್ರ ಮತ್ತು ನ್ಯಾಯಶಾಸ್ತ್ರಗಳಲ್ಲಿ ಪಾರಂಗತನಾದ. ಒಂದು ಪಿತೂರಿಯಲ್ಲಿ ಭಾಗವಹಿಸಿದನೆಂದು ಅಪವಾದಕ್ಕೊಳಗಾಗಿ ಸೀಸರ್. ನಿರೋನ ಆಜ್ಞೆಯಂತೆ ಆತ್ಮಹತ್ಯೆ ಮಾಡಿಕೊಂಡ. ಇವನು ಒಂಭತ್ತು ರೂಪಕಗಳನ್ನು ಬರೆದಿದ್ದಾನೆ. ಇವುಗಳಲ್ಲಿ ಆರು ಪೂರ್ಣವಾಗಿವೆ; ಮೂರು ಅಪೂರ್ಣವಗಿವೆ. ಇವನ ಪೂರ್ಣ ನಾಟಕಗಳಿವು; ಅಗಮೆಮ್ನನ್, ಹಕ್ರ್ಯುಲೀಸ್, ಮೀಡಿಯ, ಈಡಿಪಸ್, ಫೀಡ್ರೆ, ಟ್ರೋ ಅಡೀಸ್, ಫಿನಿಸ್ಸೆ, ಥೆಯಸ್ಟೀಸ್ - ಇವು ಅಪೂರ್ಣ ನಾಟಕಗಳು. ಸೆನೆಕ ನಾಟಕಗಳನ್ನು ರಂಗಪ್ರದರ್ಶನಕ್ಕಾಗಿ ಬರೆದಂತೆ ತೋರುವುದಿಲ್ಲ. ವಾಚನಕ್ಕಾಗಿ ಬರೆದಂತೆ ತೋರುತ್ತದೆ. ಇವು ಓದು ಕೊಠಡಿಯ ನಾಟಕಗಳು. ಗ್ರೀಕರಿಂದ ವಸ್ತುವನ್ನು ತೆಗೆದುಕೊಂಡು ಅಗಸ್ಟಸ್ ಚಕ್ರವರ್ತಿಯ ಕಾಲದ ಜನರ ಅಭಿರುಚಿಗನುಗುಣವಾಗಿ ಅವುಗಳನ್ನು ಸೆನೆಕ ರಚಿಸಿದ. ಎಲ್ಲದರ ಅತಿರೇಕ ಚಿತ್ರಣ ಇವನ ನಾಟಕಗಳ ವೈಶಿಷ್ಟ್ಯ. ಇವನ ಪ್ರತಿಯೊಂದು ರೂಪಕವೂ ಭಯಂಕರ ಹಾಗೂ ಭೀಭತ್ಸ ವರ್ಣನೆಗಳಿಂದ ಕೂಡಿದೆ. ನೇಪಥ್ಯದಲ್ಲಿ ನಡೆಯುತ್ತಿರುವ ಕ್ರೂರ ಕೃತ್ಯವನ್ನು ಉದಾಹರಣೆಗೆ : ಈಡಿಪಸ್ ತನ್ನ ಕಣ್ಣುಗಳನ್ನು ಕಿತ್ತುಕೊಳ್ಳುವುದರ ವರ್ಣನೆ, ಮೀಡಿಯ ತನ್ನ ಮಕ್ಕಳನ್ನು ಕ್ರೂರವಾಗಿ ಇರಿದು ಕೊಲ್ಲುವುದರ ವರ್ಣನೆ, ಹಕ್ರ್ಯುಲಿಸ್ ಅಧೊಲೋಕಕ್ಕೆ ಹೋದಾಗ ಅಲ್ಲಿದ್ದ ನಾರಕಿಗಳ ಚೀರಾಟದ ವರ್ಣನೆ, ನಿಯೋಬಿ ಸತ್ತ ತನ್ನ 14 ಮಕ್ಕಳನ್ನು ಒಂದೊಂದಾಗಿ ನಿಧಾನವಾಗಿ ಎಣಿಸುತ್ತ ಗೋಳಾಡುವುದರ ವರ್ಣನೆ, ಥೇಸಿಯಸ್ ತನ್ನ ಮಗ ಹಿಪೊಲಿಟಸ್‍ನ ಹರಿದುಚೂರಾದ ದೇಹ ಭಾಗಗಳನ್ನು ತನ್ನೆದುರಿಗಿರಿಸಿಕೊಂಡು ಗುರುತಿಸುತ್ತ ವಿಲಪಿಸುವ ಭಯಂಕರ ಭೀಭತ್ಸ ಸಂದರ್ಭ, ಇಂಥ ದೃಶ್ಯಗಳನ್ನು ಸೂಕ್ಷ್ಮವಾಗಿ, ವಿವರ ವಿವರವಾಗಿ ವರ್ಣಿಸುವುದೆಂದರೆ ಸೆನೆಕನಿಗೆ ಪರಮಾನಂದ. ಇವನ ಈಡಿಪಸ್ ನಾಟಕದಲ್ಲಿ ನಾಟಕದ ಬಹಳಷ್ಟು ಭಾಗವನ್ನು ಭಾಷಣಗಳಿಗೂ ಆಡು ಗೂಳಿಗಳನ್ನು ಕತ್ತರಿಸಿಬಲಿ ಹಾಕುವುದರ ವರ್ಣನೆಗಳಿಗೂ ಪ್ರೇತಗಳನ್ನು ಅಧೋಲೋಕದಿಂದ ಹೊರತರುವ ವರ್ಣನೆಗಳಿಗೂ ಮೀಸಲಿಡಲಾಗಿದೆ.
ಭೀತಿ ಸೆನೆಕನ ದುರಂತದ ದರ್ಶನ, ರೋಷ, ತಾಪ ಇವುಗಳಿಂದ ಜನಿಸುವ ಭೀತಿ, ಕುರುಡು ಅದೃಷ್ಟದ ಎದುರಿಗೆ ಮನುಜಸಂಕಲ್ಪ ವಿಫಲವಾಗುವದರಿಂದ ಹುಟ್ಟುವ ಭೀತಿ. ಅನೇಕ ಬಗೆಯ ಉನ್ಮಾದಗಳ ಉಲ್ಭಣದಿಂದ ಹುಟ್ಟುವ ಭೀತಿ, ಭಯಂಕರ ನರಕವರ್ಣನೆಯಿಂದ ಹುಟ್ಟುವ ಭೀತಿ-ಹೀಗೆ ಸೆನೆಕನ ರುದ್ರನಾಟಕಕ್ಕೆ ಭೀತಿಯೇ ಭಿತ್ತಿಯಾಗಿದೆ.
ಸೆನೆಕನ ನಾಟಕ ರಚನೆಯ ರೀತಿಯನ್ನು ಕುರಿತು ಸೆನೆಕನ ನಾಟಕದ, ಪಾಕದ ಮೂರು ಮುಖ್ಯವಾದ ಸಾಮಗ್ರಿಗಳೆಂದರೆ, ವರ್ಣನೆ, ಸಿದ್ದಭಾಷಣ ಮತ್ತು ತಾತ್ತ್ವಿಕ ಸಾರೋಕ್ತಿ ಎಂದು ಎಫ್. ಇ. ಬಟ್ಲರ್ ಎಂಬ ವಿದ್ವಾಂಸ ಅಭಿಪ್ರಾಯ ಪಟ್ಟಿದ್ದಾನೆ. ಅಗಸ್ಟಸ್‍ನ ಕಾಲದಲ್ಲಿ ವಾಗ್ವಿಂಜೃಭಣೆಗೆ ಪ್ರಾಮುಖ್ಯ ದೊರೆತದ್ದರಿಂದ ಸೆನೆಕನ ನಾಟಕಗಳಲ್ಲಿ ಅದಕ್ಕೆ ಪ್ರಾಧಾನ್ಯ ದೊರೆಯುವಂತಾಯಿತು. ಗ್ರೀಕ್ ಅಥವಾ ರೋಮ್‍ನ ಯಾವುದೇ ನಾಟಕಕಾರರಿಗೂ ದೊರೆಯದ ಪ್ರಚಾರ, ಕೀರ್ತಿ ಮತ್ತು ಸಂಪತ್ತು ಸೆನೆಕನಿಗೆ ದೊರೆಯಿತು. ಅನಂತರದ ವರ್ಷಗಳಲ್ಲಿ ಸೆನೆಕನ ಗಾಢ ಪ್ರಭಾವ ಯುರೋಪಿಯನ್ ನಾಟಕದ ಮೇಲಾಯಿತು.
ಸೆನೆಕನ ಅನಂತರ ಆಧುನಿಕ ಕಾಲದವರೆಗೆ ಬೆಳೆದುಬಂದ ರುದ್ರನಾಟಕ ಪ್ರಯೋಗವನ್ನು ಗಮನಿಸಿ ಹೇಳುವುದಾದರೆ ಸೆನೆಕನಿಗೆ ದೊರೆತ ಕೀರ್ತಿ ಕೆಲವೊಮ್ಮೆ ಉತ್ಪ್ರೇಕ್ಷಿತವೆನಿಸುತ್ತದೆ ಏಕೆಂದರೆ ಆಧುನಿಕ ಅಭಿರುಚಿ ಮತ್ತು ವಿಮರ್ಶೆಗೆ ಪ್ರಿಯರಾಗುವ ನಾಟಕಕಾರರೆಂದರೆ ಪ್ರಾಚೀನ ಗ್ರೀಕ್ ರುದ್ರನಾಟಕಕಾರನೇ. ದುರಂತ ದರ್ಶನದ ದೃಷ್ಟಿಯಿಂದ ನಾಟಕ ರಚನೆಯ ದೃಷ್ಟಿಯಿಂದ ಅವರನ್ನು ಮೀರಿಸುವ ನಾಟಕಕಾರರು ಮುಂದೆ ಬರಲಿಲ್ಲವೆನ್ನಬಹುದು.
ಗ್ರೀಕ್ ರಂಗಭೂಮಿಯ ಪ್ರೇಕ್ಷಕಾಂಗಣ : ಡಯಾನಿಸಸ್‍ನ ಜಾತ್ರೆ ಆಥೆನ್ಸ್‍ನವರಿಗೆ ದೊಡ್ಡ ಹಬ್ಬ. ನಾಟಕ ಪ್ರದರ್ಶನ ಈ ಹಬ್ಬದ ಕೇಂದ್ರ ಆಕರ್ಷಣೆ. ಈ ಹಬ್ಬ ಇಡೀ ಆಥೆನ್ಸ್‍ನ ನಗರರಾಜ್ಯಕ್ಕೆ ಸೇರಿದ್ದಾದ್ದರಿಂದ ಪ್ರೇಕ್ಷಕರು ರಾಜ್ಯದ ಪ್ರಜೆಗಳೆಲ್ಲರೂ ಆಗಿದ್ದರು. ಈ ಕಾರಣದಿಂದ ಚಿಕ್ಕಪುಟ್ಟ ನಾಟಕಶಾಲೆ ಈ ಉದ್ದೇಶವನ್ನು ಪೂರೈಸಲು ಸಾಧ್ಯವೇ ಇರಲಿಲ್ಲ. ಆಥೆನ್ಸಿನ ನಾಟಕ ಶಾಲೆ ಎಂದರೆ ಊರ ಹೊರಗಿನ ಬೆಟ್ಟಗುಡ್ಡಗಳನ್ನು ಅರ್ಧಚಂದ್ರಾಕೃತಿಯಲ್ಲಿ ಹಂತಹಂತವಾಗಿ ಕಡಿದು ನಿರ್ಮಿಸಿದ ಬಯಲು ರಂಗಮಂದಿರ. ಹಂತಗಳ ಮೇಲೆ ಪ್ರೇಕ್ಷಕರು ಕುಳಿತುಕೊಳ್ಳುತ್ತಿದ್ದರು. ಆಥೆನ್ಸಿನ ಈ ನಾಟಕ ಮಂದದಿರದಲ್ಲಿ ಸು. 30,000 ಜನ ಕೂರಲು ಅವಕಾಶವಿತ್ತೆಂದು ಹೇಳಲಾಗಿದೆ. ಮೇಳರಂಗದ ಮುಂಭಾಗದ ಮೊದಲ ಸಾಲಿನಲ್ಲಿ ರಾಜ್ಯದ ಅಧಿಕಾರಿಗಳಿಗೂ ಗಣ್ಯಯರಿಗೂ ಪ್ರತ್ಯೇಕ ಆಸನಗಳಿರುತ್ತಿದ್ದವು. ಮಧ್ಯೆ ಡಯಾನಿಸಸ್ ದೇವತೆಯ ಅರ್ಚಕನಿಗೆ ಸ್ಥಾನ. ಇವನ ಇಕ್ಕೆಲಗಳಲ್ಲೂ ತೀರ್ಪುಗಾರರಿಗೆ ಮತ್ತು ರಾಯಭಾರಿಗಳಿಗಾಗಿ ಪೀಠಗಳಿರುತ್ತಿದ್ದವು. ಇನ್ನುಳಿದಂತೆ ಪ್ರೇಕ್ಷಕರಿಗೆ ಸಮಾನ ಸ್ಥಾನಮಾನಗಳಿರುತ್ತಿದ್ದವು. ಹೆಂಗಸರಿಗಾಗಿ ಒಂದು ಪ್ರತ್ಯೇಕ ಸ್ಥಳವಿರುತ್ತಿತ್ತು. ಪ್ರೇಕ್ಷಕರು ಆರಾಮವಾಗಿ ಕುಳಿತುಕೊಳ್ಳಲು ಬೇಕಾದ ದಿಂಬು ಮೆತ್ತೆಗಳನ್ನು ಸ್ವತಃ ತರುತ್ತಿದ್ದರು. ಮುಂಜಾನೆ ಆರಂಭವಾಗುತ್ತಿದ್ದ ನಾಟಕ ಪ್ರದರ್ಶನಗಳು ಸಂಜೆಯವರೆಗೆ ನಡೆಯುತ್ತಿದ್ದುದರಿಂದ ತಿಂಡಿತೀರ್ಥಗಳನ್ನೂ ಮುಗಿಸುತ್ತಿದ್ದರು. ಪ್ರೇಕ್ಷಕರು ಬಹುಪಾಲು ನಿಶ್ಯಬ್ಧವಾಗಿಯೇ ನಾಟಕ ನೋಡುತ್ತಿದ್ದರು. ನಾಟಕ ಚೆನ್ನಾಗಿದ್ದರೆ ಚಪ್ಪಾಳೆ ತಟ್ಟಿ, ಹೊಗಳಿ ಮೆಚ್ಚುಗೆ ತೋರಿಸುತ್ತಿದ್ದರು. ಕೆಲಮೊಮ್ಮೆ ನಾಟಕಕಾರರೇ ದುಡ್ಡುಕೊಟ್ಟು ಹೊಗಳುಭಟ್ಟರ ತಂಡವನ್ನು ನೇಮಿಸಿಕೊಳ್ಳುತ್ತಿದ್ದರು. ಆ ಕಾಲದ ಪ್ರೇಕ್ಷಕರು ಕೇವಲ ನಾಟಕವನ್ನು ನೋಡುತ್ತಿದ್ದೇವೆಂಬಂತೆ ನೋಡದೆ ಅದನ್ನು ಧಾರ್ಮಿಕ ಪ್ರಕ್ರಿಯೆಯ ಒಂದು ಭಾಗವಾಗಿ ನೋಡುತ್ತಿದ್ದುದರಿಂದ ಆದಷ್ಟು ಗಂಭೀರವಾಗಿ ನಾಟಕವನ್ನು ನೋಡುತ್ತಿದ್ದರೆನ್ನಬಹುದು. ಸ್ಯಾಟರ್ ನಾಟಕದ ಪ್ರದರ್ಶನದಲ್ಲಿ ಪ್ರೇಕ್ಷಕರ ಸ್ವಚ್ಛಂದ ನಡವಳಿಕೆಗೆ ಹೆಚ್ಚು ಅವಕಾಶ ಸಿಗುತ್ತಿತ್ತೆಂದು ಕಾಣುತ್ತದೆ.
ಮೇಳರಂಗ: ಮೇಳರಂಗ ಗ್ರೀಕ್ ನಾಟಕ ಶಾಲೆಯ ಹೃದಯರಂಗವಿದ್ದಂತೆ. ನಾಟಕದ ಉದ್ದಕ್ಕೂ ಮೇಳದವರು ಅಲ್ಲೇ ನಿಂತಿರುತ್ತಿದ್ದರು. ಮೇಳದವರು ನಿಲ್ಲುವ ಸ್ಥಳವನ್ನು ಅಮೃತಶಿಲೆಯ ನೆಲೆಗಟ್ಟಿನಿಂದ ಮಾಡಲಾಗಿರುತ್ತಿತ್ತು. ಇದರ ವ್ಯಾಸ 80ರಿಂದ 90 ಅಡಿಗಳು. ಪ್ರೆಕ್ಷಕಾಂಗಣಕ್ಕಿಂತ ಕೆಳಹಂತದಲ್ಲಿ ಎಲ್ಲಾ ಪ್ರೇಕ್ಷಕರಿಗೆ ಕಾಣುವಂತೆ ಮೇಳರಂಗವಿರುತ್ತಿತ್ತು. ನೇಪಥ್ಯ: ಮೇಳರಂಗದ ಹಿಂಬದಿಗೆ (ಆಚೆಯಕಡೆ) ಪ್ರೇಕ್ಷಕಾಂಗಣಕ್ಕೆ ಎದುರಾಗಿ ನೇಪಥ್ಯ ಅಥವಾ ನಟರ ಮನೆ ಇರುತ್ತಿತ್ತು. ಇದೊಂದು ಗುಡಾರ ಮಾತ್ರವಾಗಿದ್ದು ನಟರು ವೇಷ ಬದಲಾಯಿಸಿಕೊಳ್ಳಲು ಉಪಯೋಗಿಸುತ್ತಿದ್ದರು. ಕ್ರಮೇಣ ಈ ಗುಡಾರವೇ ದೃಶ್ಯಸಾಧನವಾಗಿ ಉಪಯೋಗವಾಗತೊಡಗಿತು. ಗುಡಾರಕ್ಕೆ ಬದಲಾಗಿ ಮರದ ಕಟ್ಟಡ ಕಟ್ಟಲಾಯಿತು. ಸೋಫೊಕ್ಲಿಸ್ ಈ ನಟರ ಮನೆಯ ಮುಂಭಾಗವನ್ನು ಬಟ್ಟೆಗಳಿಂದ ಮುಚ್ಚಿ, ಚಿತ್ರಗಳಿಂದ ಅಲಂಕರಿಸಿ ಸೀನರಿಗಳನ್ನು ಅಳವಡಿಸಿದ. ಕ್ರಮೇಣ ಈ ಮರದ ಕಟ್ಟಡವೂ ಹೋಗಿ ಕಲ್ಲು ಕಟ್ಟಡ ಬಂತು. ಈ ಕಟ್ಟಡ ನಾಟಕದ ಪರಿಕರಗಳನ್ನು ಇಡುವುದಕ್ಕೂ ಉಪಯೋಗವಾಗುತ್ತಿತ್ತು. ಕಟ್ಟಡದ ಮುಂಭಾಗದಲ್ಲಿ ಮೂರು ಬಾಗಿಲುಗಳಿರುತ್ತಿದ್ದವು. ಮಧ್ಯದ ಬಾಗಿಲು ದೊಡ್ಡದಾಗಿದ್ದು ಅಕ್ಕಪಕ್ಕದವು ಚಿಕ್ಕದಾಗಿರುತ್ತಿದ್ದವು. ಕ್ರಮೇಣ ಐದು ಬಾಗಿಲು ಬಂದವು. ಗ್ರೀಕ್ ನಾಟಕ ಶಾಲೆಯಲ್ಲಿ ಮೇಳರಂಗವಲ್ಲದೇ ನಟರಂಗವೊಂದಿತ್ತೆಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಈಗಾಗಲೇ ಗಮನಿಸಿರುವಂತೆ ವೈನೋದಿಕವಾಗಿರಲಿ, ರುದ್ರನಾಟಕವಾಗಿರಲಿ ಅದರ ಪ್ರಯೋಗ ಮತ್ತು ಪ್ರದರ್ಶನ ಆಧುನಿಕ ಕಾಲದ ಪ್ರಯೋಗ ಪ್ರದರ್ಶನಗಳಿಗಿಂತ ಭಿನ್ನವಾಗಿರುತ್ತಿತ್ತು. ನಾಟಕಕ್ರಿಯೆ ನಡೆಯುವ ಮೇಳರಂಗಕ್ಕೂ ಪ್ರೇಕ್ಷಕಾಂಗಣದ ಪ್ರೇಕ್ಷಕರಿಗೂ ಅಗಾಧ ದೂರವಿರುತ್ತಿತ್ತು. ಗ್ರೀಕ್ ನಾಟಕಶಾಲೆಯ ಈ ಸ್ವರೂಪಕ್ಕೆ ಅನುಗುಣವಾಗಿ ನಟರು ಬಳಸುತ್ತಿದ್ದ ವೇಷಭೂಷಣಗಳು ವಿಕಾಸಗೊಂಡವೆಂದ ತೋರುತ್ತದೆ. ಸಾಮಾನ್ಯವಾಗಿ ಈ ನಾಟಕಗಳ ವಸ್ತು ಹೋಮರನ ಕಾವ್ಯಗಳಲ್ಲಿ ಬರುವ ಕಥಾನಕಳೇ ಆಗಿರುತ್ತಿದ್ದವು. ಆದರೆ ಈ ನಾಟಕಗಳಲ್ಲಿ ಬರುವ ಪಾತ್ರಗಳಿಗೆ ವೇಷಭೂಷಣಗಳನ್ನು ಸಮಕಾಲೀನವಾಗಿಯೇ ಅಳವಡಿಸಿಕೊಂಡರು. ಆ ಕಾಲದ ಸಾಮಾನ್ಯರು ಬಳಸುತ್ತಿದ್ದ ಉಡುಗೆ ತೊಡುಗೆಗಳನ್ನು ಉಚಿತವಾಗಿ ಮಾರ್ಪಡಿಸಿಕೊಂಡು ರಂಗದ ವೇಷಭೂಣವನ್ನು ರೂಪಿಸಿಕೊಂಡಂತೆ ಕಾಣುತ್ತದೆ. ಸಾಮಾನ್ಯವಾಗಿ ಒಂದು ದೊಡ್ಡ ನಿಲುವಂಗಿಯನ್ನು ಆ ಕಾಲದ ಪುರುಷರೆಲ್ಲ ಧರಿಸುತ್ತಿದ್ದರು. ಈ ನಿಲುವಂಗಿಯನ್ನೇ ನಟರು ರಂಗಭೂಮಿಯ ಆವಶ್ಯಕತೆಗನುಗುಣವಾಗಿ ಅಲ್ಪಸ್ವಲ್ಪ ಬದಲಾಯಿಸಿ ಉಪಯೋಗಿಸುತ್ತಿದ್ದರು. ಅರ್ಧತೋಳಿನ ನಿಲುವಂಗಿಗಳನ್ನು ಶ್ರೀಸಾಮಾನ್ಯರು ಬಳಸುತ್ತಿದ್ದರೆ ತುಂಬತೋಳಿನ ನಿಲುವಂಗಿಯನ್ನು ಮುಖ್ಯನಟರು ಬಳಸುತ್ತಿದ್ದರು. ಸೊಂಟಪಟ್ಟಿಯನ್ನು ನಟರು ಎದೆಯಿಂದ ಸ್ವಲ್ಪ ಕೆಳಕ್ಕೆ ಹಾಕಿಕೊಳ್ಳುತ್ತಿದ್ದರು. ದುರಂತಪಾತ್ರವಹಿಸುವ ನಟ ಸಾಮಾನ್ಯರಿಗಿಂತ ಉನ್ನತವಾಗಿರುವ ಹಾಗೆ ಕಾಣಬೇಕಿತ್ತು. ಹೀಗೆ ಸೊಂಟಪಟ್ಟಿಯನ್ನು ಧರಿಸುವುದಕ್ಕೆ ಕಾರಣ, ನಟರು ಬಳಸುವ ನಿಲುವಂಗಿಗಳು ಬಣ್ಣ ಬಣ್ಣದ ಚಿತ್ತಾರಗಳಿಂದ ಕೂಡಿರುತ್ತಿದ್ದವು. ಇವುಗಳ ಮೇಲೆ ಪ್ರಾಣಿ, ಪಕ್ಷಿ ಮೊದಲಾದ ಸಾಂಕೇತಿಕ ಚಿತ್ರಗಳಿರುತ್ತಿದ್ದು ವರ್ಣಮಯವಾಗಿರುತ್ತಿದ್ದವು. ಇದರ ಮೇಲೆ ಇನ್ನೂ ದೀರ್ಘವಾದ ಇನ್ನೊಂದು ನಿಲುವಂಗಿಯನ್ನು ಧರಿಸುತ್ತಿದ್ದರು. ಇದರ ಮೇಲೆಯೂ ಸಾಂಕೇತಿಕವಾದ ಬಣ್ಣಗಳಿಂದ ಚಿತ್ರಗಳನ್ನು ಬರೆದಿರುತ್ತಿದ್ದರು. ಉದಾಹರಣೆಗೆ, ಕಪ್ಪು ಅಥವಾ ಮಬ್ಬುಮಬ್ಬಾದ ವರ್ಣಗಳು ದುಃಖದ ಸಂಕೇತವಾಗಿರುತ್ತಿದ್ದವು. ರಾಣಿಯರ ಪಾತ್ರ ಮಾಡುವವರ ಉಡುಪು ಕೆನ್ನೀಲಿ ಬಣ್ಣದ್ದಾಗಿರುತ್ತಿತ್ತು. ಗ್ರೀಕ್ ನಾಟಕಶಾಲೆಯ ವೈಶಾಲ್ಯಕ್ಕನುಗುಣವಾಗಿ ನಟರು ಬೃಹದಾಕಾರವಾಗಿ ಕಾಣಬೇಕಾದ್ದರಿಂದ ಎತ್ತರವನ್ನು ಹೆಚ್ಚು ಮಾಡುವುದಕ್ಕಾಗಿ ಸಾಂಕೇತಿಕವಾದ ವರ್ಣಗಳಿಂದ ಕೂಡಿದ ಮರದ ಎತ್ತರವಾದ ಅಟ್ಟೆಗಳುಳ್ಳ ಪಾದರಕ್ಷೆಗಳನ್ನು ಬಳಸಲಾಗುತ್ತಿತ್ತು. ಎತ್ತರಕ್ಕನುಗುಣವಾಗಿ ದಪ್ಪ ಇರಬೇಕಾದ್ದರಿಂದ ಉಡುಪಿನೊಳಗೆ ಮೆತ್ತೆಗಳನ್ನು ಹಾಕಿ ದಪ್ಪ ಮಾಡಲಾಗುತ್ತಿತ್ತು.
ಗ್ರೀಕ್ ರುದ್ರನಾಟಕದ ಇನ್ನೊಂದು ಬಹುಮುಖ್ಯವಾದ ಅಂಶವೆಂದರೆ ನಟರು ಬಳಸುತ್ತಿದ್ದ ಮುಖವಾಡಗಳು. ರುದ್ರನಾಟಕದ ಮುಖವಾಡಗಳು, ವೈನೋದಿಕದ ಮುಖವಾಡಗಳು ಭಿನ್ನವಾಗಿರುತ್ತಿದ್ದವು. ಹೀಗೆ ಪಾತ್ರಧಾರಿಗಳು ಈ ಎಲ್ಲ ಬಗೆಯ ಪರಿಕರಗಳನ್ನು ಹೊತ್ತು ಅಭಿನಯವೂ ಅದಕ್ಕನುಗುಣವಾಗಿ ವಿಶಾಲ ಹಾಗೂ ಸ್ಥೂಲವಾದ ಅಂಗಭಂಗಿಗಳನ್ನು ಉಳ್ಳದ್ದಾಗಿರುತ್ತಿತ್ತು. ಮುಖವಾಡದಲ್ಲಿ ಕಣ್ಣುಗಳಿಗೆ, ಬಾಯಿಗಳಿಗೆ ರಂಧ್ರಗಳಿರುತ್ತಿದ್ದವು. ಈ ಕ್ರಮದಿಂದಾಗಿ ನಟರಿಗೆ ನೋಡುವುದಕ್ಕೂ ಗಟ್ಟಿಯಾಗಿ ಮಾತನಾಡುವುದಕ್ಕೂ ಅವಕಾಶವಾಗುತ್ತಿತ್ತು. ರೋಮನ್ ನಾಟಕಶಾಲೆ: ರೋಮ್ ರಂಗಭೂಮಿಯ ಕಡೆಗೆ ಗಮನ ಹರಿಸುವ ಹೊತ್ತಿಗಾಗಲೇ ಸಾಮಾಜಿಕವಾಗಿ ಧಾರ್ಮಿಕಭಾವನೆಗಳು ಕಡಿಮೆಯಾಗಿದ್ದವು. ಗ್ರೀಕರ ಕಾಲದಲ್ಲಿದ್ದಂತೆ ಡಯಾನಿಸಸ್ ದೇವತೆಯ ಪ್ರಾಮುಖ್ಯವೂ ಅಳಿದು ಹೋಗಿತ್ತು. ಗ್ರೀಕ್ ಮಾದರಿಯ ಹೊಸ ರಂಗಶಾಲೆಗಳನ್ನು ಕಟ್ಟುವುದಕ್ಕೆ ಸ್ವಲ್ಪಕಾಲ ರೋಮ್‍ನ ಸೆನೆಟ್ ವಿರೋಧಿಯಾಗಿತ್ತು. ಮನರಂಜನೆಯಾಗಿ ಮತ್ತು ಒಂದು ರೀತಿಯ ನಾಟಕ ಪ್ರದರ್ಶನಕ್ಕಾಗಿ ಮರದಿಂದ ಮಾಡಿದ ಒಂದು ಬಗೆಯ ರಂಗಶಾಲೆ ಕಟ್ಟಲು ಮಾತ್ರ ಅವಕಾಶ ನೀಡಿತ್ತು. ಕ್ರಿ. ಪೂ. 154ರಲ್ಲಿ ಕಲ್ಲಿನಿಂದ ಕಟ್ಟಲಾಗಿದ್ದ ಒಂದು ನಾಟಕಶಾಲೆಯನ್ನು ರೋಮನರು ನಾಶಮಾಡಿದರು. ಕ್ರಿ. ಪೂ. 55-52ರ ಅವಧಿಯಲ್ಲಿ ಪಾಂಪೆಯ ನಿರ್ದೇಶನದಂತೆ ಕಲ್ಲಿನ ನಾಟಕಶಾಲೆಯೊಂದನ್ನು ಮತ್ತೆ ನಿರ್ಮಿಸಲಾಯಿತು. ಈ ನಾಟಕ ಶಾಲೆ ಮುಂದೆ ರೋಮ್‍ನ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾದ ನಾಟಕಶಾಲೆಗಳಿಗೆ ಮಾದರಿಯಾಯಿತು. ಗ್ರೀಕ್ ಬಯಲು ರಂಗಮಂದಿರಗಳ ಪ್ರೇಕ್ಷಕಾಂಗಣವನ್ನು ಬೆಟ್ಟಗಳಲ್ಲಿ ಕೊರೆದು ಮಾಡಲಾಗಿರುತ್ತಿತ್ತು. ಆದರೆ ರೋಮನರು ತಮ್ಮ ನಾಟಕಶಾಲೆಯನ್ನು ಸಮತಟ್ಟಾದ ನೆಲದ ಮೇಲೆ ನಿರ್ಮಿಸತೊಡಗಿದರು. ಅರ್ದಚಂದ್ರಾಕೃತಿಯ ಎತ್ತರವಾದ ಗೋಡೆಗಳನ್ನು ಕಟ್ಟಿ, ಅಲ್ಲಿ ಹಂತಹಂತವಾಗಿ ಪ್ರೇಕ್ಷಕರು ಕುಳಿತುಕೊಳ್ಳಲು ಮೆಟ್ಟಿಲುಗಳ ರೀತಿಯ ಆಸನಗಳನ್ನು ವ್ಯವಸ್ಥೆ ಮಾಡುತ್ತಿದ್ದರು. ಅರ್ಧಚಂದ್ರಾಕೃತಿಯ ಈ ಪ್ರೇಕ್ಷಕಾಂಗಣದ ಎರಡು ಕೊನೆಗಳನ್ನು ಸೇರಿಸಿದಂತೆ ರಂಗಪ್ರದರ್ಶನದ ಕಟ್ಟಡವನ್ನು ಕಟ್ಟಲಾಯಿತು. ಇದು ಮೂರು ನಾಲ್ಕು ಅಂತಸ್ತುಗಳುಳ್ಳದ್ದಾಗಿ ನಟರು ತಮ್ಮ ಆವಶ್ಯಕತೆಗಳಿಗನುಗುಣವಾಗಿ ಬಳಸಿಕೊಳ್ಳುತ್ತಿದ್ದ ನೇಪಥ್ಯ ಮತ್ತು ರಂಗಸಲಕರಣೆಯ ಪ್ರಯೋಗ ಇತ್ಯಾದಿಗಳು ಉಪಯೋಗಕ್ಕೆ ಬರುವಂತೆ ಇದರಲ್ಲಿ ಹಲವಾರು ಕೊಠಡಿಗಳಿರುತ್ತಿದ್ದವು. ಹೊರಗಿನ ಗೋಡೆಯ ಮೇಲೆ ಮತ್ತು ಒಳಗೆ ವರ್ಣಮಯವಾದ ಚಿತ್ರಗಳನ್ನು ಬರೆದಿರುತ್ತಿದ್ದರು. ವಾದ್ಯಮೇಳ ಕುಳಿತುಕೊಳ್ಳಲು ಮಧ್ಯದ ವೇದಿಕೆಯ ಒಂದು ಪಕ್ಕದಲ್ಲಿ ಅವಕಾಶವಿರುತ್ತಿತ್ತು. ರಂಗಪ್ರವೇಶದ್ವಾರಗಳ ವಿಷಯದಲ್ಲೂ ಹಲವಾರು ಬದಲಾವಣೆಗಳಾದವು. ರೋಮನ್ ನಾಟಕಶಾಲೆಯಲ್ಲಿ ತೆರೆದ ಪ್ರವೇಶದ್ವಾರಗಳಿಗೆ ಬದಲಾಗಿ ಮುಚ್ಚಿದ ಪ್ರವೇಶದ್ವಾರಗಳು ಬಳಕೆಗೆ ಬಂದವು. ಹೈಪೋಸೀನಿಯಮ್ ಹೊತ್ತಿರುವಂತೆ ಕಾಣುವ ಮಾನವಾಕೃತಿಗಳ ಶಿಲ್ಪಗಳಿರುತ್ತಿದ್ದವು. ಗ್ರೀಕ್ ನಾಟಕಶಾಲೆಗಳೂ ಸರಳವೂ ಸುಂದರವೂ ಆದ ವಿನ್ಯಾಸ ರೋಮನ್ ವ್ಯವಸ್ಥೆಯಲ್ಲಿ ಅತಿ ಆಲಂಕಾರಕವೂ ಆಡಂಬರದ್ದೂ ಆಯಿತು.
ಕ್ರಿ. ಶ. 6ನೆಯ ಶತಮಾನದ ಕೊನೆಯ ಹೊತ್ತಿಗೆ ರೋಮನ್ ನಾಟಕ ಕೊನೆಗೊಂಡಿತು. ಇದಕ್ಕೆ ಕಾರಣಗಳು ಹಲವಾರು. ರುದ್ರನಾಟಕವನ್ನು ಮೂಕಾಭಿನಯವಾಗಿ, ವೈನೋದಿಕವನ್ನು ಪ್ರಹಸನವಾಗಿ ಪರಿವರ್ತಿಸಿದ್ದು ಒಂದು ಮುಖ್ಯ ಕಾರಣ. ಮೂಕಾಭಿನಯ ಕುಣಿತ ಇವುಗಳು ರೋಮನ್ನರ ಅಭಿರುಚಿಗೆ ಪ್ರಿಯವಾಗಿದ್ದವು. ಸ್ವಚ್ಛಂದ ಅಂಗಚೇಷ್ಟೆಗಳಿಂದ ಚಲನವಲನಗಳಿಂದ ನಟರು ಪ್ರೇಕ್ಷಕರನ್ನು ಸಮ್ಮೋಹನಗೊಳಿಸುತ್ತಿದ್ದರು. ರುದ್ರನಾಟಕದ ಗತಿಯೇ ಹೀಗಾದ ಮೇಲೆ ವೈನೋದಿಕ ಇನ್ನೂ ಅವನತಿಗಿಳಿಯಿತು. ಮೈಮಸ್ ಎಂಬ ಪ್ರದರ್ಶನವಾಗಿ ಇದು ಉಳಿಯಿತು. ಮೊದಲೇ ರೋಮನ್ನರಿಗೆ ನಟನೆ, ನಾಟಕವೆಂದರೆ ಉಪೇಕ್ಷೆಯ ಭಾವನೆಯೇ ಹೆಚ್ಚಾಗಿತ್ತು. ಶರೀರ ವ್ಯಾಯಾಮ, ಶಕ್ತಿಪ್ರದರ್ಶನ ಇವರಿಗೆ ಹೆಚ್ಚು ಪ್ರಿಯವಾದುದಾಗಿತ್ತು. ನಾಟಕ ಪ್ರದರ್ಶನಕ್ಕಾಗಿಯೇ ಇವರು ವಿಶಾಲ ಮಂದಿರಗಳನ್ನೇನೋ ಕಟ್ಟಿದರು. ಆದರೆ ಅಲ್ಲಿ ನಡೆಯುತ್ತಿದ್ದ ರಥಪಂದ್ಯ, ಮಲ್ಲಕಾಳಗ ಇವರಿಗೆ ಪ್ರಿಯವಾಗಿದ್ದವು. ಕಲಾಭಿಜ್ಞತೆಗಿಂತ ವಿಕಟಹಾಸ್ಯ, ದೊಂಬಿಕುಣಿತ, ಇಂದ್ರಿಯ ಪ್ರಚೋದಕ ಕಸರತ್ತು ಇವರಿಗೆ ಹೆಚ್ಚು ತೃಪ್ತಿ ನೀಡುತ್ತಿದ್ದವು. ಬೈದಾಟ, ಲೇವಡಿ, ಗಲಾಟೆಗಳಿಂದ ನೇಪಥ್ಯ ತುಂಬಿಹೋಗುತ್ತಿತ್ತು. ಈ ಪ್ರದರ್ಶನದಲ್ಲಿ ಹೆಂಗಸರೂ ಭಾಗವಹಿಸುತ್ತಿದ್ದರು. ಫ್ಲೊರೋಲಿಯ (ಪುಷ್ಪಾಚಯ) ಮೈಮ್‍ನಿಂದ ಕೂಡಿದ ಒಂದು ಪ್ರದರ್ಶನ. ಇಲ್ಲಿ ಆಧುನಿಕ ರಸಿಕರೇ ಬೆರಗಾಗುವಷ್ಟು ಮಟ್ಟಿಗೆ ಸ್ವಚ್ಛಂದ ಮತ್ತು ವಾಸ್ತವಿಕ ಅಭಿನಯವಿರುತ್ತಿತ್ತು. ಹೀಗೆ ರುದ್ರನಾಟಕ ಮತ್ತು ವೈನೋದಿಕಗಳು ತಮ್ಮ ಸ್ವರೂಪವನ್ನು ಕಳೆದುಕೊಂಡು ಪೇಲವವಾದವು.
ಪ್ರಾಚೀನ ರೋಮನರು ಪ್ರಾಪಂಚಿಕ ಸುಖಕ್ಕೆ ಮಹತ್ತ್ವ ಕೊಟ್ಟು ತತ್ತ್ವದರ್ಶನಾಸಕ್ತಿಯನ್ನು ಕಳೆದುಕೊಂಡದ್ದು ನಾಟಕದಪತನಕ್ಕೆ ಎರಡನೆಯ ಕಾರಣವಾಯಿತು. ವಿಷಯಸಕ್ತಿಯನ್ನು ಕೆರಳಿಸುವ ಬಹಿರಂಗ ವ್ಯಾಪಾರಗಳಿಂದ ಇವರು ಆನಂದಿಸಿದರು. ಹಬ್ಬಹರಿದಿನಗಳಲ್ಲಿ ಈ ಬಗೆಯ ದೃಶ್ಯಗಳು ಇವರನ್ನು ಸೆರೆಹಿಡಿಯುತ್ತಿದ್ದವು. ಮೈನವಿರೇಳಿಸುವ ಭಯಂಕರ ದೃಶ್ಯಗಳು ಇವರಿಗೆ ಪ್ರಿಯವಾಗಿದ್ದವು. ಅಂಗಚ್ಛೇದ, ಹತ್ಯೆ ರಕ್ತಪ್ರವಾಹ ಪ್ರಾಚೀನ ರೋಮನರಿಗೆ ದಿನಚರಿಯ ಆಪ್ತ ವ್ಯವಹಾರವಾಗಿತ್ತು. ಅನಂತರದ ಕಾಲದಲ್ಲಿ ಕೇವಲ ಚರ್ಚಿನ ವಿರೋಧದಿಂದ ನಾಟಕ ನಾಶವಾಗಲಿಲ್ಲ; ಅದಕ್ಕಿಂತ ಮೊದಲೇ ರೋಮನರ ಕೈಯಲ್ಲಿ ಇದು ಶಿಥಿಲವಾಗಿತ್ತು.
ಬಹುಶಃ ನಾಟಕದ ಈ ವ್ಯವಸ್ಥೆಯ ಕಾರಣದಿಂದ, ಆರಂಭದ ಕ್ರಿಶ್ಚಿಯನ್ ಧರ್ಮದಲ್ಲಿ ಹೊಸದಾಗಿ ಶ್ರದ್ಧೆಯನ್ನು ಬೆಳೆಸಿಕೊಂಡವರಿಗೆ ನಾಟಕಕಲೆ ದೂಷಣೀಯವಾಯಿತು. ಹೀಗಾಗಿ ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ನಾಟಕ ಪರಂಪರೆಯನ್ನೇ ನಾಶಮಾಡಲು ಗಾಢವಾಗಿ ಪ್ರಯತ್ನಿಸುತ್ತಿದ್ದರು. ಚಕ್ರವರ್ತಿ ಕಾನ್‍ಸ್ಟಾಂಟೀನ್ (307-337) ಕ್ರಿಶ್ಚಿಯನ್ ಧರ್ಮವನ್ನು ರಾಷ್ಟ್ರಧರ್ಮವೆಂದು ಘೋಷಿಸಿದ ಮೇಲೆ ಕ್ರಿಶ್ಚಿಯನ್ ಧರ್ಮದ ಪ್ರಭಾವ ಸಮಾಜ ಜೀವನದ ಮೇಲೆ ಹೆಚ್ಚು ಹೆಚ್ಚಾಗಿ ಬೀಳಲಾರಂಭಿಸಿತು. ಎಲ್ಲ ಕೆಡಕುಗಳಿಗೆ ನಾಟಕಮಂದಿರಗಳೇ ಮೂಲಕಾರಣವೆಂಬುದು ಇವರ ದೃಢನಂಬಿಕೆಯಾಗಿತ್ತು. ಎಷ್ಟೇ ನಿಷೇಧಿಸುವ ಪ್ರಯತ್ನ ನಡೆದರೂ ನಾಟಕ ಪ್ರದರ್ಶನಗಳನ್ನು ಸಂಪೂರ್ಣ ನಿರ್ನಾಮಮಾಡಲು ಸಾಧ್ಯವಾಗಿಲ್ಲ. ಏಕೆಂದರೆ ಕ್ರಿ.ಶ. 399ರಲ್ಲಿ ಸಂತ ಕ್ರೈಸಾಸ್ಟಮ್ "ನಾಟಕಶಾಲೆಯಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಾರೆ. ಚರ್ಚುಗಳಿಗೆ ಒಬ್ಬನೂ ಬರುವುದಿಲ್ಲ" ಎಂದು ಗೋಳಾಡಿದ್ದಾನೆ.
ಟ್ಯುಟಾನಿಕ್ ಬುಡಕಟ್ಟುಗಳ ಜನರು ರೋಮನ್ ಪ್ರಾಂತ್ಯಗಳನ್ನೂ ರೋಮನ್ ಪಟ್ಟಣಗಳನ್ನೂ ವಶಪಡಿಸಿಕೊಂಡದ್ದೂ ನಾಟಕದ ಪತನಕ್ಕೆ ಮತ್ತೊಂದು ಕಾರಣವೆನ್ನಬಹುದು. ಇವರು ನಾಡಕಮಂದಿರಗಳನ್ನು ನಾಶಮಾಡದಿದ್ದರೂ ನಾಟಕಗಳನ್ನು ತಿರಸ್ಕøತ ಭಾವನೆಯಿಂದ ನೋಡಿದರು. ಅನಂತರದಲ್ಲಿ `ಲಂಬಾರ್ಡರು ನಾಟಕಾಲಯಗಳನ್ನು ಸಂಪೂರ್ಣವಾಗಿ ದ್ವಂಸಮಾಡಿದರು. ಆಗ ಅಳಿದುಳಿದ ನಟರು ಬೀದಿಪಾಲಾದರು.
ಹೀಗೆ ರೋಮ್‍ನಲ್ಲಿ ಹಲವಾರು ಕಾರಣಗಳಿಂದ ನಾಟಕಾಭಿನಯ ನಾಶವಾಯಿತೆಂದು ಹೇಳಬಹುದಾದರೂ ನಾಟಕಕಲೆ ನಾಶವಾಗಲಿಲ್ಲ. ದಿಕ್ಕಾಪಾಲಾಗಿದ್ದ ನಟರು ಶ್ರೀಮಂತರ ಭೋಜಕೂಟಗಳಲ್ಲಿ ಅಥವಾ ಜನಸಂದಣಿಯ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಹೊಟ್ಟೆಹೊರೆದುಕೊಳ್ಳುತ್ತಿದ್ದರು. ಬೀದಿನಾಟಕರೂಪದಲ್ಲಿ ನಾಟಕ ಜೀವ ಹಿಡಿದುಕೊಂಡು ಉಸಿರಾಡತೊಡಗಿತು. ಕುಸ್ತಿಪಟುಗಳು, ಮಾಯಾಮಂತ್ರ ಮಾಡುವವರು, ಕರಡಿ ಕುಣಿಸುವವರು, ಲಾಗಾಪಲ್ಟಿಯವರು ಇವರ ಜೊತೆಯಲ್ಲಿ ಸೇರಿಕೊಂಡು ನಟರು ಜೀವನ ನಡೆಸತೊಡಗಿದರು. ಟ್ಯೂಟನ್ ಜನಾಂಗದವರಿಗೆ ಕಥೆ ಕೇಳುವುದೆಂದರೆ ಬಹಳ ಇಷ್ಟ. ಹೀಗಾಗಿ ಮಿನ್‍ಸ್ಟ್ರಲ್‍ಗಳೆಂಬ (ಚಾರಣರು) ಹಾಡುಗಾರರು ರಾಗವಾಗಿ ಕಥೆ ಹೇಳುವುದು. ನಗಿಸುವ ಹಾಡುಗಳನ್ನು ಹೇಳುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಇದರಿಂದಾಗಿ ನಾಟಕ ಪ್ರದರ್ಶನಕ್ಕೆ ಬದಲಾಗಿ ಕಥಾಶ್ರವಣ ಜನ ಜೀವನದಲ್ಲಿ ಪ್ರಾಧಾನ್ಯ ಪಡೆಯತೊಡಗಿತು.
ಯುರೋಪಿನ ಇತಿಹಾಸವನ್ನು ಸಾಂಸ್ಕøತಿಕವಾಗಿ ಪ್ರಾಚೀನಯುಗ, ಮಧ್ಯಯುಗ ಮತ್ತು ಆಧುನಿಕ ಯುಗವೆಂದು ಮೂರು ಯುಗಗಳಾಗಿ ವಿಂಗಡಿಸುವುದು ವಾಡಿಕೆ. ಪುರಾತನ ಗ್ರೀಕರ ಮತ್ತು ರೋಮನರ ಕಾಲವನ್ನು ಪ್ರಾಚೀನ ಯುಗವೆಂದು ಕರೆಯಲಾಗುತ್ತದೆ. ಸಾಹಿತ್ಯ, ಲಲಿತಕಲೆಗಳಲ್ಲಿ ಇವರು ಮುಟ್ಟಿದ ಎತ್ತರ ಮತ್ತು ಸಾಧಿಸಿದ ಪರಿಪೂರ್ಣತೆ ಅನನ್ಯವಾದದ್ದು. ಈ ಯುಗವನ್ನೇ ಅಭಿಜಾತಯುಗ (ಕ್ಲಾಸಿಕಲ್ ಏಜ್) ಎಂದೂ ಕರೆಯುತ್ತಾರೆ. ಈ ಯುಗವನ್ನು ಸಾಂಸ್ಕøತಿಕವಾಗಿ ಸುವರ್ಣಯುಗವೆಂದೂ ಕರೆಯಬಹುದು. ಅತಿ ವಿಸ್ತಾರವಾಗಿ ಅತ್ಯಂತ ಶಕ್ತ ಸಾಮ್ರಾಜ್ಯವೆಂದು ಪ್ರಸಿದ್ಧಿ ಹೊಂದಿದ್ದ ರೋಮನ್ ಚಕ್ರಾಧಿಪತ್ಯ ಕುಸಿದುಬಿತ್ತು. ಹೀಗೆ ಇದು ಕುಸಿದುಬೀಳುವುದಕ್ಕೆ ಸೈನಿಕ ಕಾರಣಗಳಿರುವಂತೆ ರೋಮನ್ ಅಧಿಕಾರಿಗಳಲ್ಲಿ ಮತ್ತು ಜನತೆಯಲ್ಲಿ ಆಗ ಬೆಳೆದುಬಂದ ಅತಿಭೋಗಲಾಲಸೆ ಇತ್ಯಾದಿಗಳು ಇವರನ್ನು ಕರ್ತವ್ಯ ವಿಮುಖರನ್ನಾಗಿ ಮಾಡಿ ಇವರ ಪತನಕ್ಕೆ ಕಾರಣವಾದವು. ಸಾರ್ವಜನಿಕ ಮನರಂಜನೆಯ ಆಟಗಳು ರಾಜ್ಯದ ಬೊಕ್ಕಸವನ್ನು ಬರಿದುಮಾಡಿದವು. ಹೀಗೆ ನಿಶ್ಯಕ್ತವಾದ ರೋಮ್ ಚಕ್ರಾಧಿಪತ್ಯದ ಮೇಲೆ ಅನೇಕ ಟ್ಯುಟ್ಯಾನಿಕ್ ಬುಡಕಟ್ಟು ಜನಾಂಗಗಳು ಆಕ್ರಮಣ ಮಾಡತೊಡಗಿದವು. ಇವುಗಳಿಗೆ ರೋಮ್ ಸೋತುಹೋಯಿತು. ಈ ಬುಡಕಟ್ಟಿನ ಜನರಿಗೆ ಬಾರ್ಬೇರಿಯನ್ಸ್ (ಅನಾಗರಿಕರು) ಎಂದು ಕರೆಯಲಾಗುತ್ತದೆ. ಬಿಜಾಂಟೀನ್ ನಗರವೂ ಇವರ ದಾಳಿಯಿಂದ ನಾಶಗೊಂಡಿತು. ಇಲ್ಲಿಂದ ಸ್ಥೂಲವಾಗಿ ಮಧ್ಯಯುವ ಪ್ರಾರಂಭವಾಯಿತು. (15ನೆಯ ಶತಮಾನದವರೆಗೆ). ಇದರ ಮೊದಲರ್ಧಭಾಗ ದುರ್ಬಲ ಚಟುವಟಿಕೆಯ ದೃಷ್ಟಿಯಿಂದ ಅಂಧಕಾರಯುಗ ಆಗುತ್ತದೆ. ಈ ಅವಧಿಯಲ್ಲಿ ಕ್ಯಾಥೋಲಿಕ್ ಧರ್ಮ ಬೇರೂರಿ ಹಬ್ಬತೊಡಗಿತು. ಎಲ್ಲ ರಾಜ್ಯಗಳು ಒಂದೊಂದಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದವು. ಲ್ಯಾಟಿನ್ ಭಾಷೆ ಚರ್ಚಿನ ಅಧಿಕೃತ ಭಾಷೆಯಾಗಿ ಬಳಕೆಯಾಗತೊಡಗಿದವು. ಹೀಗಾಗಿ ಪ್ರಾಚೀನ ಗ್ರೀಕ್ ಮತ್ತು ರೋಮ್ ಸಂಸ್ಕøತಿಗಳೂ ಹೊಸ ಕ್ರಿಶ್ಚಿಯನ್ ಸಂಸ್ಕøತಿಯೊಂದಿಗೆ ಬೆರೆತು ಒಂದು ಸಮ್ಮಿಶ್ರ ಸಂಸ್ಕøತಿ ರೂಪುಗೊಳ್ಳತೊಡಗಿತು. ಟ್ಯೂಟನರು ಬರ್ಬರತೆಯ ಜೊತೆಗೆ ಲವಲವಿಕೆ, ಉತ್ಸಾಹ ಸಾಹಸಗಳನ್ನು ತಮ್ಮೊಂದಿಗೆ ತಂದಿದ್ದರು. ಆತ್ಮಾಭಿಮಾನ, ಸ್ವಾಮಿ ಭಕ್ತಿ, ಸ್ತ್ರೀವರ್ಗಕ್ಕೆ ಗೌರವ, ವೀರತೆ ಮೊದಲಾದ ಗುಣಗಳನ್ನು ಇವರು ಹೊಂದಿದ್ದರು. ಇವರ ಆಡಳಿತದಿಂದ ಯುರೋಪಿಗೆ ಬಂದು ಬಗೆಯ ಪುನರುಜ್ಜೀವನ ಪ್ರಾಪ್ತವಾಯಿತು. ದೇಶೀಯ ಕಾವ್ಯಗಳಲ್ಲಿ ವೀರಕಾವ್ಯಗಳು, ಗ್ರೀಕ್, ರೋಮನ್ ಕಾಣಬಹುದು. ಇವರ ಕಥನ ಕಾವ್ಯಗಳಲ್ಲಿ ರುದ್ರನಾಟಕದ ತಿರುಳೂ ಅದರ ಮೂಲ ತತ್ತ್ವವೂ ಅಡಕವಾಗಿರುವುದನ್ನು ಕಾಣಬಹುದು. ಇವುಗಳನ್ನು `ಇಡ ಕಾವ್ಯಗಳೆಂದು ಕರೆಯಲಾಗುತ್ತದೆ. ಈ ಸಾಹಿತ್ಯ ಆಯಾ ದೇಶದ ಜನರ ಸ್ಮøತಿಯಲ್ಲಿ ಮಾತ್ರವಿತ್ತು. ಲಿಖಿತರೂಪಕ್ಕೆ ಇಳಿದದ್ದು 1200ರ ಅನಂತರ. ಇವುಗಳಲ್ಲಿ ನಾಟಕೀಯ ಅಂಶ ಅಂತರ್ಗತವಾಗಿದೆ. ಈ ಯುಗದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಗಳು ಒಂದು ರೀತಿಯಲ್ಲಿ ಮಧ್ಯಯುಗದ ಮುಂದಿನ ಬೆಳವಣಿಗೆಗೆ ಅಗತ್ಯವಾದ ಬುನಾದಿಯನ್ನು ಹಾಕಿದವು. ಆದರೆ ನಿಜವಾದ ಮಧ್ಯಯುಗದ ಕಾಲಾವಧಿಯನ್ನು ಸು. 1100-1500 ಎಂದು ಹೇಳಬಹುದು.
ರಹಸ್ಯ ಹಾಗೂ ಪವಾಡ ನಾಟಕಗಳು : ನಾಟಕದ ಅವನತಿಗೆ ಇತರ ಅನೇಕ ಕಾರಣಗಳಿರುವಂತೆ ಚರ್ಚಿನ ಧೋರಣೆಗಳೂ ಮುಖ್ಯವಾದ ಕಾರಣಗಳಾದವು. ಆದರೆ ಹತ್ತನೆಯ ಶತಮಾನದ ವೇಳೆಗೆ ಇನ್ನೊಂದು ರೂಪದಲ್ಲಿ ನಾಟಕ, ಚರ್ಚಿನ ಆಶ್ರಯದಲ್ಲೇ ಬೆಳೆದು ಬಂದುದನ್ನು ನಾವು ನೋಡುತ್ತೇವೆ. ಹುತಾತ್ಮರಾದ ಕ್ರಿಶ್ಚಿಯನ್ ಸಂತರು ಮತ್ತು ಅವರ ಪವಾಡಗಳನ್ನು ವಸ್ತುವಾಗುಳ್ಳ ರೂಪಕಗಳು ಚರ್ಚಿನ ಆಶ್ರಯದಲ್ಲಿ ಸೃಷ್ಟಿಗೊಳ್ಳತೊಡಗಿದವು. ಮೊದಲು ಧರ್ಮಗ್ರಂಥದಿಂದ ಸೂಕ್ತ ಭಾಗವನ್ನು ಒಬ್ಬ ಕ್ರೈಸ್ತ ಪೂಜಾರಿ ಓದುತ್ತಿದ್ದ. ಇವು ಅವರ ಒಂದು ಪೂರ್ಔ ಚರಿತ್ರೆಯ ಭಾಗವಾಗಿರುತ್ತಿತ್ತು. ಗೀತೆ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಗಳು ಭಾವಗೀತೆಯ ಭಾಗವಾಗಿರುತ್ತಿತ್ತು. ಜೊತೆಗೆ ತೋರಿಸಲಾಗುತ್ತಿದ್ದ ಜೀವಂತ ಚಿತ್ರಗಳು ಧಾರ್ಮಿಕ ದೃಶ್ಯಗಳ ದೃಷ್ಟಾಂತಗಳಾಗಿರುತ್ತಿದ್ದವು. ಅಲ್ಲದೆ ಹಾಡುಗಳೂ ಇರುತ್ತಿದ್ದವು. ಇಂಥ ಕ್ರೈಸ್ತ ಆರಾಧನಾ ನಾಟಕಗಳು ಮೊದಲಿಗೆ ಚರ್ಚಿನ ಒಳಗೇ ಪ್ರಯೋಗವಾಗುತ್ತಿದ್ದವು. ಈ ನಾಟಕಗಳು ಮೊದಲಿಗೆ ಪ್ರವಚನ, ಗೀತೆಯಲ್ಲಿ ಹಾಡುಗಳನ್ನೊಳಗೊಂಡಿರುತ್ತಿದ್ದವು. ಕಾಲಾಂತರದಲ್ಲಿ ನೋಡುವವರ ಸಂಖ್ಯೆ ಬೆಳೆದು ಸ್ಥಳಾಭಾವ ಉಂಟಾಗಿದ್ದರಿಂದ ಚರ್ಚಿನ ಹೊರಗೆ ಬಹಿರಂಗವಾಗಿ ಆಡತೊಡಗಿದರು. ರಹಸ್ಯನಾಟಕ, ಪವಾಡನಾಟಕ, ಉಪದೇಶನಾಟಕ, ಪ್ರಾಸಂಗಿಕ ರೂಪಕ - ಇವು ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳ ಮುಖ್ಯ ಪ್ರಭೇದಗಳು.
ರಹಸ್ಯ ಮತ್ತು ಪವಾಡ ನಾಟಕಗಳು ಬಹಳ ಹಿಂದೆ ಹುಟ್ಟಿ 12 ಮತ್ತು 13ನೆಯ ಶತಮಾನದಲ್ಲಿ ಪ್ರವರ್ಧನಮಾನಕ್ಕೆ ಬಂದು 16ನೆಯ ಶತಮಾನದಲ್ಲೂ ಪ್ರಾಚುರ್ಯದಲ್ಲಿದ್ದವು. ಉಪದೇಶ ನಾಟಕ ಮತ್ತು ಪ್ರಾಸಂಗಿಕ ರೂಪಕಗಳು 15ನೆಯ ಶತಮಾನದಲ್ಲಿ ಹುಟ್ಟಿದವು.
ರಹಸ್ಯ ನಾಟಕಗಳು ಯೇಸುಕ್ರಿಸ್ತನ ಜೀವನ ಚರಿತ್ರೆಗೆ ಸಂಬಂಧಪಟ್ಟಿವೆ. ಸತ್ತು ಸ್ವರ್ಗಾರೋಹ ಮಾಡಿದ ಸಂತರು ಅನಂತರ ಮೆರೆದ ಪವಾಡಗಳನ್ನು ಪವಾಡ ನಾಟಕಗಳು ವಸ್ತುವಾಗುಳ್ಳವಾಗಿದ್ದವು. ಇಂಗ್ಲೆಂಡಿನಲ್ಲಿ ರಹಸ್ಯನಾಟಕ, ಪವಾಡ ನಾಟಕಕ್ಕೆ ಭಿನ್ನತೆ ಇರಲಿಲ್ಲ. ಕ್ರಿಸ್ತನ ಕಥೆಯಾಗಲಿ, ಸಂತರ ಕಥೆಯಾಗಲಿ ಅವನ್ನು `ಮಿರಾಕುಲ್ ಎಂದು ಕರೆಯುತ್ತಿದ್ದರು. ಜರ್ಮನಿ, ಇಟಲಿ, ಸ್ಪೇನ್ ದೇಶಗಳ ಭಾಷೆಗಳಲ್ಲಿ ಈ ನಾಟಕಗಳಿಗೆ ಇದೇ ಅರ್ಥಕೊಡುವ ಪದಗಳೂ ಇದ್ದವು. `ಉಪದೇಶ ರೂಪಕಗಳಲ್ಲಿ ವ್ಯಕ್ತೀಕರಣಗೊಂಡ ಸದ್ಗುಣ, ದುರ್ಗುಣಗಳೇ ಪಾತ್ರಗಳು. ಕೊನೆಗೆ ಇಲ್ಲಿ ಸದ್ಗುಣಕ್ಕೆ ಜಯ. `ಪ್ರಾಸಂಗಿಕ ರೂಪಕ `ಉಪದೇಶ ರೂಪಕ ದಿಂದ ಭಿನ್ನವಾದ ಪ್ರಕಾರ. ಇಲ್ಲಿ ನೀತಿಬೋಧೆ ಹಿಂದಕ್ಕೆ ಸರಿದು ವಿನೋದಕ್ಕೆ ಪ್ರಾಮುಖ್ಯ ಸಿಕ್ಕಿತು. ಆಧುನಿಕ ವಿನೋದ ನಾಟಕಕ್ಕೆ ಇದು ನಾಂದಿಹಾಡಿತು. ಮಧ್ಯಯುಗದ ರೂಪಕಕ್ಕೇ ಇದೇ ಮೂಲ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಚಾರವೆಂದರೆ, ಪ್ರಾಚೀನ ನಾಟಕ ಪರಂಪರೆಯನ್ನು ಕಡಿದು ಹಾಕಿದ ಕ್ರೈಸ್ತ ಚರ್ಚೇ ಹೊಸ ನಾಟಕಕ್ಕೆ ಪೋಷಕವಾದದ್ದು; ಇದರಿಂದಾಗಿ ಆರಾಧನಾ ನಾಟಕ ಮತ್ತು ಮತಪ್ರಕ್ರಿಯಾ ನಾಟಕಗಳು ಪ್ರಾಚುರ್ಯಕ್ಕೆ ಬಂದವು. ಪೂಜಾವಿಧಾನಗಳಲ್ಲಿಯೂ ನಾಟಕೀಯತೆ ಅನಿವಾರ್ಯ ಅಂಶವಾಯಿತು.
ಅನಂತರ ಚರ್ಚಿನ ಹಿಡಿತದಿಂದ ಪ್ರದರ್ಶನಗಳು ಮುಕ್ತಿ ಹೊಂದಿದವು. ಹೊರಗಿನ ನಟರೂ ಭಾಗವಹಿಸತೊಡಗಿದರು. ಪ್ರದರ್ಶನದ ಉಸ್ತುವಾರಿ ವಾಣಿಜ್ಯ ಸಂಘ ಸಂಸ್ಥೆಗಳ ಕೈಗೆ ಬಂತು. ಬಹುಮಟ್ಟಿಗೆ ಧಾರ್ಮಿಕ ಆಚರಣೆಯಾಗಿ ಮರುಹುಟ್ಟು ಪಡೆದ ನಾಟಕ ಹದಿಮೂರನೆಯ ಶತಮಾನದ ಆರಂಭದಲ್ಲಿ ಧರ್ಮವನ್ನು ಮೀರಿ ವ್ಯವಹಾರಿಕ ಪ್ರಪಂಚಕ್ಕೆ ಸೇರಿದ್ದಾಯಿತು. ಹದಿನಾಲ್ಕನೇಯ ಶತಮಾನದಲ್ಲಿ ರಹಸ್ಯನಾಟಕ ಮತ್ತು ಪವಾಡ ನಾಟಕಗಳ ಪ್ರದರ್ಶನ ಎತ್ತರಕ್ಕೇರಿತು. ಫ್ರಾನ್ಸ್, ಇಟಲಿ ಮತ್ತು ಇಂಗ್ಲೆಂಡಿನಲ್ಲಿ ಸಾರ್ವಜನಿಕ ಸಂಸ್ಥೆಗಳು ಹೇರಳ ಹಣ ಖರ್ಚುಮಾಡಿ ಈ ಪ್ರದರ್ಶನಗಳನ್ನು ನಡೆಸುತ್ತಿದ್ದವು. ದೀರ್ಘ ನಾಟಕಚಕ್ರಗಳೂ ರಚನೆಗೊಂಡವು. ಉದಾಹರಣೆಗೆ; ಎಕ್ಟ್ ಆಫ್ ದಿ ಅಪೋಸಲ್ಸ್ (ಕ್ರಿಸ್ತನ ಪಟ್ಟಶಿಷ್ಯರ ಕಾರ್ಯಾವಳಿ) ಎಂಬ ರೂಪಕ. ಇದು ಪ್ರತಿ ಭಾನುವಾರ ಮೂರುನಾಲ್ಕು ಗಂಟೆಗಳ ಕಾಲ ಪ್ರದರ್ಶಿತವಾಗುತ್ತಿತ್ತು. ಮುಗಿಯಲು ಏಳು ತಿಂಗಳು ಹಿಡಿಯುತ್ತಿತ್ತು. ಇದರಲ್ಲಿ ಮುನ್ನೂರಕ್ಕೂ ಹೆಚ್ಚಿನ ನಟರು ಭಾಗವಹಿಸುತ್ತಿದ್ದರು. ವಿಶಾಲ ಮೈದಾನದಲ್ಲಿ ಸ್ವರ್ಗ, ನರಕ, ಭೂಮಿ, ಅರಮನೆ. ಕ್ರಿಸ್ತನ ಗೋರಿ ಇತ್ಯಾದಿ ಸ್ಥಳಗಳನ್ನು ನಿಗದಿಮಾಡಿ ಪಾತ್ರಧಾರಿಗಳು ಅಭಿನಯಿಸುವುದು ಇಲ್ಲವೇ, ಆರುಗಾಲಿಗಳ ಮೇಲೆ ಕಟ್ಟಿದ ಎರಡಂತಸ್ತಿನ ಬಂಡಿಗಳನ್ನು ಚೌಕದಿಂದ ಚೌಕಕ್ಕೆ ಎಳೆಯುವಂಥ ಕುದುರೆಗಳಿಂದ ಸಜ್ಜುಗೊಳಿಸಿ ಬಹಿರಂಗ ಅಟ್ಟಣೆಗಳ ಮೇಲೆ ಆಟ ನಡೆಸುವುದು- ಈ ಎರಡು ವಿಧಾನಗಳನ್ನು ಪ್ರದರ್ಶನದಲ್ಲಿ ಅನುಸರಿಸಲಾಗುತ್ತಿತ್ತು.
ಮಧ್ಯಯುಗದ ಕೊನೆಯ ವೇಳೆಗೆ ಉಪದೇಶ ನಾಟಕ ಅಥವಾ ನೀತಿನಾಟಕ ಹೆಚ್ಚು ಕಾಣಿಸಿಕೊಳ್ಳತೊಡಗಿತು. ಇಲ್ಲಿ ಬರುವ ಪಾತ್ರಗಳೇ ಸದ್ಗುಣ ಮತ್ತು ದುರ್ಗುಣಗಳು. ಪ್ರತಿಯೊಂದಕ್ಕೂ ಹೆಸರಿಗೆ ಅನುಗುಣವಾದ ನಡೆನುಡಿ. ಇಂತಹ ಅನ್ಯೋಕ್ತಿಗಳು ಮಧ್ಯಯುಗದ ವೈಶಿಷ್ಟ್ಯ. ಈ ಜಾತಿಗೆ ಸೇರಿದ ಪ್ರಸಿದ್ದ ರೂಪಕ `ದಿ ಕ್ಯಾಸಲ್ ಆಫ್ ಪರ್‍ಸಿವಿರೆನ್ಸ್.' ಇನ್ನೊಂದು ಅಷ್ಟೇ ಪ್ರಸಿದ್ದ ನಾಟಕ `ದಿ ಎವ್ವರಿಮ್ಯಾನ್.
ಕಾರ್ನಿಷ್ ಮುಕ್ಕೂಟ ನಾಟಕ: ಮಧ್ಯಯುಗದಲ್ಲಿ ಕಾಣಿಸಿಕೊಂಡ ಇನ್ನೊಂದು ಪ್ರಖಾರವೆಂದರೆ ಕಾರ್ನಿಷ್ ಮುಕ್ಕೂಟ ನಾಟಕ. ಇದರ ಮುರು ಮುಖ್ಯ ಭಾಗಗಳೆಂದರೆ ಓರಿಗೋಮುಂಡಿ, ಪ್ಯಾಷಿಯೊಡೊಮಿನಿ, ರಸುರೆಕ್ಸಿಯೊ ಡೊಮಿನಿ. ಈ ಮುಕ್ಕೂಟ ನಾಟಕದ ಕ್ರಿಯೆ ಸೃಷ್ಟಿಯಿಂದ ಆರಂಭಿಸಿ ಕ್ರಿಸ್ತನ ಸ್ವರ್ಗಾರೋಹಣದ ವರಗೆ ಹಬ್ಬಿಕೊಂಡಿದೆ. ಈ ಮುಕ್ಕೂಟನಾಟಕದ ಪ್ರತಿಯೊಂದು ಭಾಗದ ಪ್ರಯೋಗಕ್ಕೆ ಒಂದು ಇಡೀದಿನ ಹಿಡಿಯುತ್ತಿತ್ತು. ಈ ಮೂರು ಭಾಗಗಳನ್ನು ಮೂರು ದಿವಸ ಪ್ರಯೋಗಿಸಲಾಗುತ್ತಿತ್ತು. ಓರಿಗೋಮುಂಡಿಯಲ್ಲಿ 2824 ಸಾಲುಗಳು ಪ್ಯಾಷಿಯೊಡೊಮಿನಿಯಲ್ಲಿ 3216 ಸಾಲುಗಳು, ರೆಸುರೆಕ್ಸಿಯೊಡೆಮಿನಿಯಲ್ಲಿ 2630 ಸಾಲುಗಳು ಇವೆ.
ನಾಟಕ ಪ್ರಯೋಗದ ಸ್ಥಳವನ್ನು `ಪೈನ್ ಆನ್‍ಗಾರಿ' ಎಂದು ಕರೆಯಲಾಗುತ್ತಿತ್ತು. ಇದು ಒಂದು ದೊಡ್ಡ ವೃತ್ತಾಕಾರದ ವಿನ್ಯಾಸವನ್ನೂ 50ರಿಂದ 120 ಅಡಿಗಳ ವ್ಯಾಸವನ್ನೂ ಹೊಂದಿರುತ್ತಿತ್ತು. ಈ ವೃತ್ತವನ್ನು ಎತ್ತರಗೊಳಿಸಿದ ದಿಬ್ಬ ಸುತ್ತುವರಿದಿರುತ್ತಿತ್ತು. ಕೆಲವು ವೇಳೇ ಇದರ ಮೇಲೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಲ್ಲಿನ ಆಸನಗಳನ್ನು ಜೋಡಿಸಿ ವ್ಯವಸ್ಥೆಗೊಳಿಸಲಾಗುತ್ತಿತ್ತು. ಕೇಂದ್ರದಲ್ಲಿನ ದೊಡ್ಡವೃತ್ತದ ಒಳಗಡೆ ಇನ್ನೊಂದು ಚಿಕ್ಕ ವೃತ್ತವಿರುತ್ತಿದ್ದ ಈ ವೃತ್ತದ ಒಳಗೇ ಪ್ರದರ್ಶನ ನಡೆಯುತ್ತಿತ್ತು. ಇದನ್ನು `ಪ್ಲಾಟಿಯೊ ಎಂದು ಕರೆಯಲಾಗುತ್ತಿತ್ತು. ಇದನ್ನೇ ರಂಗಸ್ಥಳ ಎಂದು ಕರೆಯಬಹುದು. ಈ ಪ್ಲಾಟಿಯೊ ಸುತ್ತಲೂ ಪಲ್‍ಪಿಟಾ ಎಂಬ ಎಂಟು ವೃತ್ತಗಳಿರುತ್ತಿದ್ದವು. ಇವು ಪ್ರತಿದಿನದ ನಾಟಕ ಕ್ರಿಯೆಯ ಕೆಲವು ಸ್ಥಿರ ಜಾಗಗಳಾಗಿರುತ್ತಿದ್ದವು. ಅಬ್ರಹಾಂ ಮೆಲ್‍ಚಿಸೆಡೆಕ್ ಮತ್ತು ಐಸಾಕ್ ಮತ್ತು ಸೆಕುಂಡಪಜೀನಾ ಪ್ಯಾಸ್ಟೊರಮ್ ಇವು ಇಂಗ್ಲಿಷ್ ಪವಾಡ ನಾಟಕಗಳು.
ಕಾರ್ನಿಷ್ ಪವಾಡ ನಾಟಕಗಳ ಪ್ರಯೋಗ ಒಂದೇ ಸ್ಥಳದಲ್ಲಿನ ಹಲವಾರು ಏಕಕ್ಷೇತ್ರಗಳಲ್ಲಿ ನಡೆಯುತ್ತದೆ. ಕ್ರಿಯೆ ಮುಂದುವರಿದಂತೆ ಅದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾಗುತ್ತಾ ನಿರಂತರವಾದ ಚಕ್ರಾಕೃತಿಯಲ್ಲಿ ಚಲಿಸುತ್ತದೆ. ಇಂಗ್ಲೆಂಡಿನ ಇನ್ನೂ ಹಲವಾರು ಪ್ರದೇಶಗಳಲ್ಲಿ 14 ಮತ್ತು 15ನೆಯ ಶತಮಾನದಲ್ಲಿ ಆವರ್ತಗಳಾಗಿ ನಾಟಕಗಳನ್ನು ನಿಯೋಜಿಸಲಾಗುತ್ತಿತ್ತು. ಇವುಗಳಲ್ಲಿ ಹಲವಾರು ಪವಾಡನಾಟಕಗಳು, ನೀತಿನಾಟಕಗಳು ಮತ್ತು ಅಂಕಮಧ್ಯದ ದೃಶ್ಯಗಳನ್ನು ಸ್ಥಿರನಾಟಕಗಳಂತೆ ಪ್ರಯೋಗಿಸಲಾಗುತ್ತಿತ್ತು. ಅಂದರೆ, ಒಂದು ಸ್ಥಾವರ ಅಭಿನಯ ಕ್ಷೇತ್ರದ ಮೇಲೆ ಪ್ರಯೋಗಿಸಲಾಗುತ್ತಿತ್ತು. ಇಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳನ್ನು ವೇದಿಕೆ ಅಥವಾ ಇತರ ಸ್ಥಿರ ವಿನ್ಯಾಸಗಳನ್ನು ಗುರುತುಮಾಡಿರಲಾಗುತ್ತಿತ್ತು. ಅಲ್ಲದೆ ಪ್ರಯೋಗದ ಇನ್ನೊಂದು ಹೊಸ ವಿಧಾನವೂ ಹುಟ್ಟಿಕೊಂಡಿತು. ಅದೆಂದರೆ, ಧಾರ್ಮಿಕ ಹಬ್ಬಗಳ ಉತ್ಸವಗಳಲ್ಲಿ ಪ್ರಯೋಗಗೊಳ್ಳುತ್ತಿದ್ದ ನಾಟಕಗಳ ವಿಧಾನಗಳನ್ನು ಮೇಲೆ ಹೇಳಿದ ವಿಧಾನಗಳೊಂದಿಗೆ ಬೆರಕೆ ಮಾಡಿದ್ದು. ಕಾರ್‍ಪಸ್‍ಕ್ರಿಸ್ಟಿ ಹಬ್ಬದ ದಿನದಂದು ಧಾರ್ಮಿಕ ನಾಟಕಚಕ್ರದಿಂದ ಒಂದೊಂದು ನಾಟಕದ ಪ್ರದರ್ಶನವನ್ನು ಒಂದೊಂದು ವಾಣಿಜ್ಯ ಸಂಸ್ಥೆಗೆ ವಹಿಸಿಕೊಡಲಾಗುತ್ತಿತ್ತು. ಉದಾಹರಣೆಗೆ : ಟ್ಯಾನರ್ಸ್ ಸಂಸ್ಥೆಗೆ `ದಿ ಫಾóಲ್ ಆಫ್ ಲುಸಿಫರ್ ನಾಟಕವನ್ನೂ ವೆಬ್‍ಸ್ಟರ್ಸ್ ಸಂಸ್ಥೆಗೆ `ದಿ ಡೇ ಆಫ್ ಜಡ್ಜ್‍ಮೆಂಟ್ ನಾಟಕವನ್ನೂ ವಹಿಸಿಕೊಡಲಾಗುತ್ತಿತ್ತು. ಪ್ರತಿಯೊಂದು ಸಂಸ್ಥೆಯೂ ತನಗೆ ವಹಿಸಲಾದ ನಾಟಕವನ್ನು ಪಜೀನಾದಲ್ಲಿ ಪ್ರದರ್ಶಿಸುತ್ತಿತ್ತು. ಇದೊಂದು ಚಲಿಸುವ ರಂಗಮಂಚವಾಗಿತ್ತೆಂದು ಹೇಳಬಹುದು. ಇದು ಊರಿನ ಒಂದು ಪ್ರದೇಶದಲ್ಲಿ ಪ್ರಯೋಗಗೊಂಡು ಮತ್ತೊಂದು ಪ್ರದೇಶಕ್ಕೆ ತೆರಳಿ ಅದರದೇ ಇನ್ನೋಂದು ಪ್ರದರ್ಶನವನ್ನು ನೀಡುತ್ತಿತ್ತು. ಹಬ್ಬದ ದಿನದಂದು ನಾಟಕ ಪ್ರದರ್ಶನ ಬೆಳಗಿನ ಜಾವ ಆರಂಭವಾಗಿ ನಾಟಕಚಕ್ರದ ಮೊದಲನೆಯ ನಾಟಕ ಊರಿನ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿತ್ತು.
ಈ ವಿವರಗಳನ್ನು ಗಮನಿಸಿದರೆ ಮಧ್ಯಯುಗದಲ್ಲಿ ನಾಟಕದ ವಸ್ತು ಮುಖ್ಯವಾಗಿ ಧಾರ್ಮಿಕವಾದದ್ದಾದರೂ ಅದರ ಪ್ರದರ್ಶನ ಪರಿಣತಿಯಿಂದ ಕೂಡಿರುತ್ತದೆಂದು ತಿಳಿಯುತ್ತದೆ. 20ನೆಯ ಶತಮಾನದ ಇಂತಹ ಹಲವಾರು ಪ್ರಯೋಗಾತ್ಮಕ ಪ್ರದರ್ಶನಗಳಿಗೆ ಈ ನಾಟಕಗಳು ಸ್ಪೂರ್ತಿ ನೀಡಿರಲೂ ಸಾಕು.
ಇತರ ಸಾಮಾಜಿಕ ವಿಷಯಗಳ ಮೇಲೂ ನೀತಿ ನಾಟಕಗಳನ್ನು ಕಟ್ಟುವ ಕೆಲಸ ನಡೆಯಿತು. ಅಷ್ಟೇ ಅಲ್ಲದೆ ಮಧ್ಯಯುಗದ ಕೊನೆಯಲ್ಲಿ ಹಲವಾರು ಮಿಶ್ರಪ್ರಕಾರದ ನಾಟಕಗಳೂ ರಚನೆಗೊಂಡವು. ಇವುಗಳಲ್ಲಿ `ಪ್ರಾಸಂಗಿಕರೂಪಕ ಮುಖ್ಯವಾದ ಪ್ರಕಾರ. ವಿನೋದವೇ ಈ ಪ್ರಕಾರದ ಗುರಿ. ಈ ಕಿರುನಾಟಕಗಳು ಕೆಲವು ಸಾಕಷ್ಟು ಧೀರ್ಘವಾಗಿಯೂ ಇರುತ್ತಿದ್ದವು. ಒಟ್ಟಿನಲ್ಲಿ ಮಧ್ಯಯುಗದ ನಾಟಕ ಪ್ರಕಾರದಲ್ಲಿ ಸೂಕ್ಷ್ಮ ಪಾತ್ರಸೃಷ್ಟಿಯಾಗಲಿ, ಗಹನದರ್ಶನವಾಗಲಿ, ಸಾವಯವ ಬಂಧವಾಗಲಿ ಗೋಚರಿಸುವುದಿಲ್ಲವೆನ್ನಬಹುದು. ಆದರೆ ಮಧ್ಯಯುಗದ ನಾಟಕ ಪರಂಪರೆಯ ಹಿನ್ನಲೆ ಮುಂದಿನ ಪುನರುತ್ಥಾನ ಯುಗದ ಸಾಧನೆ ಮತ್ತು ಸಿದ್ದಿಗಳನ್ನು ಅರಿತುಕೊಳ್ಳಲು ಅನುವುಮಾಡಿಕೊಟ್ಟಿತು.
15ನೆಯ ಶತಮಾನದ ಅಂತ್ಯದಿಂದ 16ನೆಯ ಶತಮಾನದ ಉತ್ತರಾರ್ಧ ಮತ್ತು 17ನೆಯ ಶತಮಾನದ ಆರಂಭದ ಕೆಲವು ದಶಕಗಳ ಕಾಲವನ್ನು ಪುನರುತ್ಥಾನಕಾಲದ ಪೂರ್ವಾರ್ಧಭಾಗ ಎಂದು ಹೇಳಲಾಗುತ್ತದೆ. ಈ ಕಾಲ ಸಾಂಸ್ಕøತಿಕವಾಗಿ, ಭೌದ್ದಿಕವಾಗಿ ಯುರೋಪಿನ ಹೊಸಹುಟ್ಟು ಎನ್ನಬಹುದು. ಈ ಕಾಲದಲ್ಲಿ ಮಾನವಕೇಂದ್ರಿತದೃಷ್ಟಿ ಪ್ರಧಾನವಾಗಿ, ಈ ದೃಷ್ಟಿಕೋನದಲ್ಲಿ ಎಲ್ಲವನ್ನೂ ಪರಿವೀಕ್ಷಿಸುವ ಪ್ರಯತ್ನ ನಡೆಯಿತು. ಗ್ರೀಕ್ ಮತ್ತು ರೋಮನ್ ಅಭಿಜಾತ ಸಾಹಿತ್ಯ ಮತ್ತು ಕಲೆಗಳ ಬಗೆಗೆ ಆಸಕ್ತಿ ಬೆಳೆದು ವಿದ್ವಾಂಸರು ಅವುಗಳ ಗಾಢ ಅಧ್ಯಯನಕ್ಕೆ ತೊಡಗಿದರು. ಅಲ್ಲಿಯವರಗೆ, ಮನುಷ್ಯನ ಜೀವನ ಮತ್ತು ಪ್ರಪಂಚಗಳ ಬಗೆಗಿದ್ದ ದೃಷ್ಟಿಕೋನ ಬದಲಾಯಿತು. ಈ ಕಾಲದ ಮುಖ್ಯ ದೃಷ್ಟಿಕೋನ ಮಾನವ ಪ್ರಧಾನವಾಯಿತು. ಇದರ ಉಗಮ ಇಟಲಿಯಲ್ಲಾಯಿತು. ಕಾನ್‍ಸ್ಟಾಂಟಿನೋಪಲ್‍ನ ಪತನದ ಪರಿಣಾಮವಾಗಿ ಗ್ರೀಕ್ ವಿದ್ವಾಂಸರು ತಮ್ಮ ಅಮೂಲ್ಯ ಗ್ರಂಥರಾಶಿಯೊಂದಿಗೆ ಇಟಲಿಗೆ ಓಡಿಬಂದು ಅವುಗಳ ಅಧ್ಯಯನ, ಅರ್ಥವಿವರಣೆ, ವ್ಯಾಖ್ಯಾನಗಳಲ್ಲಿ ತೀವ್ರವಾಗಿ ತೊಡಗಿದರು. ಪೆಟ್ರಾರ್ಕ್‍ನನ್ನು (1307-13) ಪುನರುತ್ಥಾನದ ಮೂಲ ಪ್ರವರ್ತಕನೆಂದು ಗಣಿಸಲಾಗುತ್ತದೆ.
ಲ್ಯಾಟಿನ್ ಮತ್ತು ಇಟಾಲಿಯನ್ ರಂಗಭೂಮಿ: ಲ್ಯಾಟಿನ್ ಮತ್ತು ಇಟಾಲಿಯನ್ ಭಾಷೆಗಳಲ್ಲಿಯೂ ನಾಟಕಗಳು ರಚನೆಗೊಂಡವು. ಸೆನೆಕನ ದುರಂತ ನಾಟಕ, ಟೆರನ್ಸ್ ಮತ್ತು ಪ್ಲಾಟಸ್ಸರ ವಿನೋದ ನಾಟಕಗಳು ಈ ಕಾಲದ ನಾಟಕಕಾರರಿಗೆ ಆದರ್ಶವಾದವು. ಶ್ರೀಮಂತರು ಹೇರಳವಾಗಿ ಹಣ ಖರ್ಚು ಮಾಡಿ ನಾಟಕಶಾಲೆಗಳನ್ನು ಕಟ್ಟಿಸಿದರು. ಆಡಂಬರದ ನೇಪಥ್ಯದ ಅಲಂಕರಣ ನಡೆಯಿತು. ಸೆನೆಕನ ನಾಟಕಗಳ ಕ್ರಮವರಿತ ಸಂವಿಧಾನ, ಚಾತುರ್ಯದ ಸಂವಾದ, ಪಾತ್ರಚಿತ್ರಣಗಳಲ್ಲಿನ ಏಕಮುಖತೆ _ಇವೆಲ್ಲ ಆಗ ನಾಟಕಕಾರರಿಗೆ ಆದರ್ಶಗಳಾದವು. ಕೆಮಲಿಯನ್ ಫಿಲೋಸ್ಟ್ರಟೊಯಿ ಪಾನ್‍ಫಿಲ (1499) ಎಂಬುದು ಮೊದಲ ಇಟಾಲಿಯನ್ ದುರಂತನಾಟಕ. 1634ರಲ್ಲಿ ಮೇರೆ ಎಂಬಾತ ಬರೆದ ಸೊಫೊನಿಸ್ಟ್ಸ್ó ಎಂಬ ನಾಟಕ ಫ್ರೆಂಚ್ ನವಜಾತ ನಾಟಕಕ್ಕೆ ನಾಂದಿ ಹಾಡಿತು. ಇಟಾಲಿಯನ್ ನಾಟಕಕಾರರು, ಸೆನೆಕನನಿಂದ ಪ್ರಭಾವಿತರಾಗಿ ಭಯಗೊಳಿಸುವ ಘಟನಾವಳಿಗಳನ್ನು ಚಿತ್ರಿಸಿದರು. ಆದರೆ, ಅದರೊಂದಿಗೆ ಸೆನೆಕನಲ್ಲಿಲ್ಲದ ರೊಮ್ಯಾಂಟಿಕ್ ಪ್ರೇಮವನ್ನೂ ಸೇರಿಸಿದರು. ಇದರ ಪ್ರಭಾವ ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್‍ಗಳ ಮೇಲೂ ಆಯಿತು. ಜರ್ಮನಿಯಲ್ಲಿ `ಸುಖಾಂತ ಗಂಭೀರ ನಾಟಕಗಳು ರಚನೆಗೊಂಡವು. ಪುನರುತ್ಥಾನದ ಪ್ರವಾಹ ಇಟಲಿಯಲ್ಲಿ ಆರಂಭವಾಗಿ ಜರ್ಮನಿ, ಫ್ರಾನ್ಸ್‍ಗಳನ್ನೂ ತಲುಪಿತು. ಅನಂತರ ಇಂಗ್ಲೆಂಡನ್ನು ಪ್ರವೇಶಿಸಿತು. ಫ್ರಾನ್ಸ್, ಮಧ್ಯಯುಗದ ನಾಟಕ ಸಂಪ್ರದಾಯವನ್ನೇ ಹೆಚ್ಚಾಗಿ ಮುಂದವರೆಸಿತು. ಸೆನೆಕನ ಪಾಂಡಿತ್ಯಪೂರ್ಣ ಕೃತಿಗಳ ರೀತಿಯಲ್ಲಿ ಕೃತಿಗಳು ರಚನೆಗೊಂಡವು. ಇವು 17ನೆಯ ಶತಮಾನದ ಶ್ರೇಷ್ಠ ಫ್ರೆಂಚ್ ದುರಂತನಾಟಕ ಮತ್ತು ವೈನೋದಿಕಗಳಿಗೆ ಪೂರ್ವಸಿದ್ಧತೆ ಮಾಡಿಕೊಟ್ಟವು. ಈ ಕಾಲದ ಬಹುಮುಖ್ಯ ನಾಟಕಕಾರ `ಗಾರ್ನೀರ್ ನಾಟಕಗಳು ಮುಖ್ಯವಾಗಿ ಲ್ಯಾಟಿನಲ್ಲಿ ರಚನೆಗೊಳ್ಳುತ್ತಿದ್ದವು. ಇದರಿಂದ ಪ್ರಾನ್ಸ್‍ನ ದೇಶೀಯ ನಾಟಕಗಳಿಗೆ ಸಂಯಮ ಮತ್ತು ವಸ್ತುವಿಧಾನದಲ್ಲಿ ಪರಿಣತಿ ಪ್ರಾಪ್ತವಾಯಿತು.
ವೈನೋದಿಕ ಮತ್ತು ದುರಂತ ನಾಟಕ ಪ್ರಕಾರಗಳಲ್ಲಿ ಆಗಿದ್ದ ಪರಿಸ್ಥಿತಿಗನುಗುಣವಾಗಿ ಹೇಳುವುದಾದರೆ ವೈನೋದಿಕ ಸ್ವಲ್ಪಮಟ್ಟಿಗೆ ತನ್ನ ಶಕ್ತಿಯನ್ನು ಉಳಿಸಿಕೊಂಡು ಬೆಳೆಯಬಹುದಾಗಿತ್ತು. ಆದರೆ ಅದು ಕೂಡ ಜೀವಂತಿಕೆ ಕಳೆದುಕೊಂಡು ಅವಸಾನದತ್ತ ನಡೆಯಿತು. ಟಿಟೊ ಲಿವಿಯೋಡೈಫ್ರುಲೆವಿಸಿ (1432-34) ಎಂಬ ನಾಟಕಕಾರ ಪ್ಲೌಟಸ್ಸನ ನಾಟಕಗಳ ಕೆಲವು ಗುಣಗಳನ್ನುಳ್ಳ, ರೊಮ್ಯಾಂಟಿಕ್ ಭಾವನೆಗಳುಳ್ಳ ನಾಟಕಗಳನ್ನು ಬರೆದ. ಈ ನಾಟಕಗಳು ಕೆಲವು ವರ್ಷಗಳ ಅನಂತರ ಪ್ಲೌಟಸ್ ಮತ್ತು ಟೆರನ್ಸ್‍ನ ಮೂಲಕೃತಿಗಳ ಗುಣಗಳನ್ನುಳ್ಳ ವೈನೋದಿಕಗಳೇ ಆಗಿದ್ದವು. ಅರಿಯಸ್ಟೋ (1474-1533) ರಚಿಸಿದ ದಿ ಕ್ಯಾಸ್‍ಕೆಟ್ ನಾಟಕ ಇವನ ಆರಂಭದ ಕೃತಿಯಾಗಿದೆ. ಇವನ `ದಿ ಕೌಂಟರ್ ಪೀಟ್ಸ್ ಸ್ವೋಪಜ್ಞತೆಯಿಂದ ಕುಡಿದ ನಾಟಕ. ಇದನ್ನು ಜಾಜ್‍ಗ್ಯಾಸ್‍ಕಾಯ್ನ್ `ದಿ ಸಪೋಸಸ್ ಎಂಬ ಹೆಸರಿನಲ್ಲಿ 1572ರಲ್ಲಿ ಇಂಗ್ಲಿಷ್‍ಗೆ ಅನುವಾದಿಸಿದ. ಈ ನಾಟಕವನ್ನು ಷೇಕ್‍ಸ್ಪಿಯರ್ ತನ್ನ `ದಿ ಟೇಮಿಂಗ್ ಆಫ್ ದಿ ಷ್ರೂ ನಾಟಕಕ್ಕೆ ಮೂಲವಾಗಿ ಬಳಸಿಕೊಂಡ. ಅರಿಯೊಸ್ಟೋನ ವಿಶೇಷತೆಯೆಂದರೆ ಇವನ ಬರವಣಿಗೆಯಲ್ಲಿರುವ ಪ್ರಸಾದ ಗುಣ. ಇವನ ಮುರು ಮುಖದ್ಯ ನಾಟಕಗಳು: `ದಿ ಬಾಡ್ (1529); `ದಿ ಷಾರ್‍ಲಟನ್ (1520) ಮತ್ತು ` ದಿ ಅಕಾಡೆಮಿಕ್ ಕಾಮಿಡಿ' ಕೊನೆಯ ನಾಟಕವನ್ನು ಬರೆದು ಮುಗಿಸುವುದಕ್ಕೂ ಮುಂಚೆಯೇ ಇವನು ತೀರಿಕೊಂಡದ್ದರಿಂದ ಇದನ್ನು 1543ರಲ್ಲಿ ಇವನ ಸಹೋದರ ಪೂರ್ಣಗೊಳಿಸಿದ. ಪಿಯೆಟ್ರೊ ಅರೆಟಿನೋನ ನಾಟಕಗಳಲ್ಲಿ ಉತ್ತಮ ನಾಟಕವೆಂದರೆ `ದಿ ಪ್ಲೇ ಆಫ್ ದ ಕೋರ್ಟ್ (1534). ಈ ನಾಟಕದಲ್ಲಿ ಬರುವ ಹಾಸ್ಯ ಮತ್ತು ವಿಡಂಬನಾತ್ಮಕ ದೃಶ್ಯಗಳು ಮನಸೆಳೆಯುವಂತಿವೆ. ಏಂಜಲೆಬಿಯಲ್‍ಕೊ ಮತ್ತು ತನ್ನ ಪ್ರಾಂತ್ಯದ ಹಾಸ್ಯಶೈಲಿಯನ್ನು ಪ್ಲೌಟಸ್‍ನ ಹಾಸ್ಯಶೈಲಿಯೊಂದಿಗೆ ಮಿಶ್ರಣ ಮಾಡಿ ಬರೆದ ನಾಟಕವೆಂದರೆ, `ದಿ ಗರ್ಲ್ ಆಫ್ ಅಂಕೊನ (1530). ಇದರಲ್ಲಿ ರೊಮ್ಯಾಂಟಿಕ್ ಮತ್ತು ಅಭಿಜಾತ ಅಂಶಗಳು ಮಿಲನಹೊಂದಿವೆ. ಇವನ ಇನ್ನೆರಡು ಮುಖ್ಯ ನಾಟಕಗಳೆಂದರೆ : `ಸ್ಪ್ರಿಂಗ್ (1520). `ದಿ ಲಿಟಲ್ ಫ್ಲವರ್ (1520). ಗ್ರಾಮಜೀವನದಲ್ಲಿ ಕಂಡುಬರುವ ಪ್ರಣಯಪ್ರಸಂಗಗಳ ವಾಸ್ತವಿಕ ಚಿತ್ರಣ ಈ ಎರಡೂ ನಾಟಕಗಳ ವಸ್ತು. ಇದರ ಪ್ರಭಾವವಾಗಿ ಆರ್‍ಟೆಮಿಯೊ ಗಿಯಾನ್‍ಕಾರ್‍ಲಿ ಎಂಬ ನಾಟಕಕಾರನ ದಿ ಕಾಮೆಡಿ ಆಫ್ ಗೋಟ್ಸ್ (1540) ಮತ್ತು ದಿ ಜಿಪ್ಸಿ (1550)_ ಇವುಗಳ ಮೇಲೆ ಉಂಟಾಗಿರುವುದನ್ನು ಕಾಣಬಹುದು. ಜಿಯಂಬಟ್ಟಿಯಸ್ತ ಡೆಲ್ಲಾ ಪೋರ್ಟಾ ಎಂಬಾತನ ಲೆಸಿನ್ತಿಯ (1516) ಎಂಬ ನಾಟಕದ ವಸ್ತುವೆಂದರೆ ಒಬ್ಬ ಹುಡುಗಿ ಹುಡುಗನಂತೆ, ಒಬ್ಬ ಹುಡುಗ ಹುಡುಗಿಯಂತೆ ಉಡುಪು ಧರಿಸಿರುವುದು ಹಾಗೂ ಇವರಿಬ್ಬರ ಮಧ್ಯದ ಹಾಸ್ಯಮಯ ನಡವಳಿಕೆಯನ್ನು ಚಿತ್ರಿಸುವ ಮೂಲಕ ಸಮಾಜದ ವಿಡಂಬನೆ ಮಾಡುವುದಾಗಿದೆ. ಗಿರೊಲಾಮೊರಾಜೆ, ರಾಫೆಲೊ ಬೊರ್ ಗಿನಿ, ನಿಕೋಲೊ ಸೆಚ್ಚಿ, ಲೂಯಿಗಿಯಾಲ್ ಮನ್ನಿ ಮೊದಲಾದ ನಾಟಕಕಾರರು ತಮ್ಮ ನಾಟಕಗಳ ಮೂಲಕ ಇಟಾಲಿಯನ್ ವೈನೋದಿಕ ರಂಗಭೂಮಿಗೆ ವೈವಿದ್ಯತೆ ತಂದುಕೊಟ್ಟರು. ಆದರೂ ಒಟ್ಟಾರೆ ಹೇಳುವುದಾದರೆ ಈ ನಾಟಕಗಳಲ್ಲಿ ಸತ್ವ ಕಡಿಮೆ. ಈ ಕಾಲದ ನಾಟಕಗಳ ಮುಖವಸ್ತು ಪ್ರಣಯ (ಆದರ್ಶ ಪ್ರಣಯ, ರೊಮ್ಯಾಂಟಿಕ್ ಪ್ರಣಯ).
ಹೆಚ್ಚು ಕಡಿಮೆ ಈ ಕಾಲದ ಗಂಭೀರ ನಾಟಕಗಳ ಸ್ಥಿತಿಯೂ ಇದೇ ಆಗಿದೆ. 14ನೆಯ ಶತಮಾನದ ಆರಂಭದಲ್ಲಿ ಅಲ್ಬರ್ಟಿನೊ ಮುಸಾಟೊನ ದುರಂತ ನಾಟಕ, `ಇಚೆರಿನಾಸ್ (1350) ಲ್ಯಾಟಿನ್ ಭಾಷೆಯಲ್ಲಿ ರಚನೆಗೊಂಡಿದೆ. ಆಂಟೊನಿಯೊ ಕೊಮಿಲ್ಲಿ ಬರೆದ ಫಿಲೊಸ್ಟ್ರಟೊ ಪಾನ್‍ಫಿಲ ಎಂಬ ನಾಟಕ (1499). ಇಟಾಲಿಯನ್ ಭಾಷೆಯಲ್ಲಿ ರಚನೆಗೊಂಡಿರುವ ಮೊದಲ ಇಟಾಲಿಯನ್ ದುರಂತನಾಟಕವಾಗಿದೆ. ಇನ್ನುಳಿದ ದುರಂತ ನಾಟಕಕಾರರೆಂದರೆ ಗಿಯೊವನಿರೂಚೆಲ್ಲಿ, ಗಿಯಾನ್‍ಗಿಯಯಾರ್, ಗಿಯೊಟ್ರೆಸ್ಸಿನೊ_ ಇವರು ಸೆನೆಕನನ್ನೂ ಮೀರಿ ಪ್ರಾಚೀನ ಗ್ರೀಕ್ ಮಾದರಿಗಳನ್ನು ಬಳಸಿಕೊಂಡರು. ಗಿರಾಲ್ಡಿ ಸಿನ್ತಿಯೊ ತನ್ನ ಆರ್‍ಬೆಚ್ಚಿ (1541) ಎಂಬ ನಾಟಕದ ಪ್ರಸ್ತಾವನೆಯಲ್ಲಿ ತನ್ನ ನಾಟಕದಲ್ಲಿ ಕಂಬನಿ ನಿಟ್ಟುಸಿರು, ಯಾತನೆ, ಭಯಾನಕತೆ, ಮತ್ತು ಭೀತಿಹುಟ್ಟಿಸುವ ಸಾವು_ಇವುಗಳನ್ನು ಚಿತ್ರಿಸುವುದಾಗಿ ಹೇಳಿದ್ದಾನೆ. ಷೇಕ್‍ಸ್ಪಿಯರ್‍ನ ಸಿಂಬಲೈನ್ ನಾಟಕದ ಸಂವಿಧಾನ ಈ ನಾಟಕದಿಂದ ಪ್ರಭಾವಗೊಂಡಂತಿದೆ ಎಂಬುದು ವಿದ್ವಾಂಸರ ಅಭಿಮತ.
ಪಾಸ್ಟರಲ್ಸ್ ಮತ್ತು ಆಪೆರಾ ಎಂಬ ಪ್ರಕಾರಗಳ ಉಗಮವನ್ನು ಇಟಲಿಯಲ್ಲಿ ಏಂಜಿಲೊ ಪೊಲಿಜೆಯಾನೊ ಎಂಬುವವನು ಮಂಚುವಾದಲ್ಲಿ (ಮಂಟೂವದಲ್ಲಿ) ನೀಡಿದ ಆರ್‍ಫಿಯೊ ಎಂಬ ಇವನ ರೂಪಕದ ಪ್ರದರ್ಶನದಲ್ಲಿ ಕಾಣಬಹುದು. ಇದರಲ್ಲಿ ಅಪೂರ್ವ ಮಾಂತ್ರಿಕತೆ, ಅಭಿವ್ಯಕ್ತಿಯಲ್ಲಿನ ಸೂಕ್ಷ್ಮತೆ ಇವುಗಳಿದ್ದು ಆ ಕಾಲದ ವೈನೋದಿಕಗಳಾಗಲಿ ಅಥವಾ ಗಂಭೀರ ನಾಟಕಗಳಾಗಲಿ ಕೊಡಲಾರದ ಅನುಭವವನ್ನು ಕೊಟ್ಟಿತು. `ಆರ್‍ಫಿಯೊ ನಾಟಕ ನಿಜವಾದ ಅರ್ಥದಲ್ಲಿ `ಪಾಸ್ಟರಲ್ ಅಲ್ಲ; ಆದರೆ ಅದರ ಹಲವಾರು ದೃಶ್ಯಗಳಲ್ಲಿ ಈ ಅಂಶಗಳಿದ್ದು ಪಾಸ್ಟರಲ್ ಪ್ರಕಾರದ ಉಗಮ ಈ ಕೃತಿಯೊಂದಿಗೆ ಆಯಿತು ಎನ್ನಲಾಗಿದೆ. ಅನಂತರ ಅಭಿವೃದ್ದಿ ಹೊಂದಿದ ಈ ಪಾಸ್ಟರಲ್ ಪ್ರಕಾರ, ಟೌರ್‍ಕ್ವ್ಯಾ ಟೊಟಾಸ್ಸೊನ ಅಮಿಂತ (1573) ಮತ್ತು ಬಟೆಸ್ಟಾ ಗ್ಯುರಿನಿಯ `ಪ್ಯಾಸೊರ್‍ಫೀಡೋ (ದಿ ಫೇತ್‍ಫುಲ್ ಷೆವರ್ಡ್ ಎಂಬ ಹೆಸರಿನಲ್ಲಿ ಇಂಗ್ಲಿಷ್‍ನಲ್ಲಿ 1585ರಲ್ಲಿ ಅನುವಾದಿತವಾಗಿದೆ.) ಎಂಬಂಥ ಕೃತಿಗಳಲ್ಲಿ ಪರಿಣತಿಯನ್ನು ಪಡೆಯಿತು. ಈ ಕೃತಿಗಳ ಮೂಲಕ ಇಟಲಿಯ ಪುನರುತ್ಥಾನ ರಂಗಭೂಮಿಯೂ ಅಭಿವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನೂ ಸಾಧಿಸಿತು. ಈ ಕೃತಿಗಳು ಮಾಂತ್ರಿಕತೆ, ಹಾಸ, ತರಂಗೋಪಮವಾದ ಲಯಬದ್ದತೆ, ಭಾವುಕತೆ ಇವುಗಳಿಂದ ಕೂಡಿ ವಿಶೇಷ ಪ್ರಕಾರವಾಗಿ ಜನರ ಗಮನ ಸೆಳೆದವು ನಿಜ; ಆದರೆ ಇವು ಶ್ರೇಷ್ಠ ನಾಟಕಗಳಾಗಿರಲಿಲ್ಲ.
ಇಲ್ ಪಾಸ್ಟ್ರೊ ಫೀಡೊ ಎಂಬ ಕೃತಿಯೊಂದಿಗೆ ಪಾಸ್ಟರಲ್ ತನ್ನ ಅಂತ್ಯವನ್ನು ಕಂಡುಕೊಂಡಿತು. ಇದೇ ಶೈಲಿಯಲ್ಲಿ ಹಲವಾರು ಕೃತಿಗಳು ಅನಂತರ ರಚನೆಗೊಂಡರೂ ಅವುಗಳಿಗೆ ಪ್ರಾಮುಖ್ಯ ಸಿಗಲಿಲ್ಲ. 16ನೆಯ ಶತಮಾನದ ಕೊನೆಯ ಭಾಗದಲ್ಲಿ ಪ್ರಾಚೀನ ಗ್ರೀಕ್‍ನಾಟಕಗಳನ್ನು ಪಠನ ಮಾಡುತ್ತಿದ್ದರು ಎಂಬ ವಿಚಾರ ಸಂಶೋಧಿತವಾದ ಮೇಲೆ ಆ ಕಾಲದ ನಾಟಕಗಳನ್ನು ಹೀಗೆ ಪ್ರಯೋಗಮಾಡುವ ಪ್ರಯತ್ನ ನಡೆಯಿತು. 1574ರಲ್ಲಿ ವೆನಿಸ್‍ನಲ್ಲಿ ಪ್ರಾಚೀನ ಗ್ರೀಕ್ ನಾಟಕಗಳ ರೀತಿಯ ನಾಟಕವೊಂದನ್ನು ಪ್ರಯೋಗಿಸಲಾಯಿತು. ಆ ಕಾಲದ ಪ್ರಸಿದ್ದ ಸಂಗೀತ ಸಂಯೋಜಕನೊಬ್ಬನಿಂದ ನಾಟಕಕ್ಕೆ ಸಂಗೀತವನ್ನು ಸಂಯೋಜಿಸಲಾಯಿತು. ಅದನ್ನು ಮೇಳದಲ್ಲಿ ಮತ್ತು ತನಿಯಾಗಿ ನಟರು ಹಾಡುತ್ತಿದ್ದರು. ಈ ಕೃತಿಗಳಲ್ಲಿನ ದೃಶ್ಯವೈಭವಕ್ಕೆ ಸಂಗೀತದ ಅಂಶವೂ ಸೇರಿ ಈ ಪ್ರಯೋಗಗಳು ಆಪೆರಾ ಪ್ರಯೋಗಕ್ಕೆ ದಾರಿಮಾಡಿಕೊಟ್ಟವು. ಗಿಯೋವನ್ನಿಬಾರ್ಡಿ ಎಂಬಾತ ಈ ಸಂಗೀತನಾಟಕದ ಬೆಳೆವಣಿಗೆಗೆ ಕಾರಣನಾದ. ವಿನ್‍ಸೆನ್‍ಜೊ ಗೆಲಿಲೆ, ಗಿಯೊಲೊಕಚ್ಚಿನಿ (ಇವನೊಬ್ಬ ಪ್ರಸಿದ್ಧ ಸಂಗೀತಜ್ಞ), ಜೆಕೊಜೊ ಪೆರಿ (ಸಂಗೀತ ಸಂಯೋಜಕ) ಮತ್ತು ಒಟ್ಟಾವಿಯೊ ರಿನುಚ್ಚಿನಿ (ಕವಿ) ಇವರೆಲ್ಲ ಸೇರಿ 1594ರಲ್ಲಿ ಎ- ಡ್ಯಾಫ್ನೆ ಎಂಬ ಪ್ರಯೋಗವನ್ನು ಮಾಡಿದರು. ಈ ಪ್ರಯೋಗ ಆಪೆರಾದ ಉಗಮಕ್ಕೆ ಕಾರಣವಾಯಿತು. ಸ್ವಲ್ಪ ಕಾಲಾನಂತರ ಪೆರಿ ಎಂಬಾತ ಬರೆದ ಯೂರಡೈಸ್ ಹಾಗೂ ಕಚ್ಚಿನಿ ಎಂಬಾತ ಬರೆದ ಇಲ್ ರಟ್ಟೊ_ಡಿ ಸೆಫ್ಯಾಲೊ ಎಂಬ ನಾಟಕಗಳು ನಿಜವಾದ ಅರ್ಥದಲ್ಲಿ ಆಪೆರಾಗಳು. ಇವುಗಳಲ್ಲಿ ಕಾವ್ಯ ಮತ್ತು ಸಂಗೀತಗಳ ಸಮ್ಮಿಲನ ಸಾಧಿತವಾಯಿತು. ಇವುಗಳ ಜೊತೆಗೆ ಭಿನ್ನ ರೀತಿಯ ರಚನೆಗಳು ಹೊರಬರತೊಡಗಿದವು. ಈ ಪ್ರಕಾರಗಳಲ್ಲಿ ಮೊದಲೇ ಸಿದ್ದಪಡಿಸಿದ ವಾಕ್ಯಗಳನ್ನಷ್ಟೇ ನಟರು ಪಠಿಸಬೇಕಾಗಿರಲಿಲ್ಲ. ಸಂದರ್ಭೋಚಿತವಾಗಿ ಬೇರೆಯ ಕವಿಗಳ ವಾಕ್ಯರಚನೆಗಳನ್ನೂ ಬಳಸಿಕೊಳ್ಳಬಹುದಿತ್ತು. ಈ ರೀತಿಯಲ್ಲಿ ಕಮಿಡಿಯ ಡೆಲ್ ಆರ್ಟೆ ಪ್ರಖಾರದ ಉಗಮವಾಯಿತು. ಈ ಪ್ರದರ್ಶನಗಳನ್ನು ಅರಮನೆಯ ದೊಡ್ಡ ಹಜಾರದಲ್ಲಿ ಪ್ರಯೋಗಿಸುತ್ತಿದ್ದರು. ಕಮೆಡಿಯ ಡೆಲ್ ಆರ್ಟೆ ಎಂಬ ಪ್ರಕಾರ ಬಹುಶಃ ಇಟಲಿಯ 16ನೆಯ ಶತಮಾನದ ಸಾಮಾಜಿಕ ಸ್ಥಿತಿಗಳ ಕಾರಣದಿಂದ ಸ್ವತಂತ್ರವಾಗಿ ಹುಟ್ಟಿರಬಹುದು. ಇದರ ಜೊತೆಗೆ ಈ ಒಂದು ಪುನರುತ್ಥಾನ ವಿನೋದ ಪ್ರಕಾರದ ಉಗಮಕ್ಕೆ ಮಧ್ಯಯುಗದ ಲಾಗಾಪಲ್ಟಿಯವರೂ ಸ್ಪೂರ್ತಿ ನೀಡಿರಬೇಕು. ಇವರು ಪ್ರಾಚೀನ ರೋಮನ್ ಮೂಕ ಅಣಕುಗಳ ಸಂಪ್ರದಾಯದ ಉತ್ತರಾಧಿಕಾರಿಗಳಾಗಿದ್ದರು. ನಿರ್ದಿಷ್ಟವಾಗಿ ಹೇಳಬಹುದಾದ ವಿಚಾರವೆಂದರೆ 16ನೆಯ ಶತಮಾನದ ಮಧ್ಯಭಾಗದಲ್ಲಿ ಈ ರೀತಿಯ ಪ್ರದರ್ಶನಗಳು ಕ್ವಚಿತ್ತಾಗಿ ಕಾಣತೊಡಗಿದವು. ಆದರೆ ನಟರ ಚಿಕ್ಕಚಿಕ್ಕ ಗುಂಪುಗಳೇ ದೊಡ್ಡದಾಗಿ ಬೆಳೆದು ಆ ಕಾಲದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ಗೆಲೊಸಿ, ಕಾನ್‍ಫಿಡೆಂಟ್ ಮತ್ತು ಫೆಡಿಲಿ ಎಂಬವರ ನಾಟಕ ತಂಡಗಳಾಗಿ ರೂಪುಗೊಂಡವು. ಆರಂಭದಲ್ಲಿ ಈ ತಂಡಗಳ ಕಾರ್ಯಕ್ರಮಗಳು ಇಟಲಿಯ ನಗರ ಪ್ರದೇಶಗಳಿಗೆ ಸೀಮಿತವಾಗಿರುತ್ತಿದ್ದವು. 16ನೆಯ ಶತಮಾನ ಕೊನೆಗೊಳ್ಳುತ್ತದ್ದಂತೆ ಈ ತಂಡಗಳು ಫ್ರಾನ್ಸ್‍ನಲ್ಲಿ ತಮ್ಮ ಪ್ರದರ್ಶನಗಳನ್ನು ಕೊಡತೊಡಗಿದವು. ಮುಂದಿನ ಶತಮಾನದಲ್ಲಿ ಇವರ ಕಾರ್ಯಚಟುವಟಿಕೆಗಳು ಇಡೀ ಯುರೋಪನ್ನೇ ಆವರಿಸಿದವು. ಆಯಾ ಪ್ರದೇಶದ ವೈಶಿಷ್ಟ್ಯಗಳಿಗನುಗುಣವಾಗಿ ಕಮಿಡಿಯ ಡೆಲ್‍ಆರ್ಟೆ ವ್ಯತ್ಯಾಸಗಳನ್ನು ಪಡೆದುಕೊಂಡಿತು. ಉದಾಹರಣೆಗೆ: ಇಟಲಿಯ ಈ ಪ್ರಕಾರದ ಸ್ಪೂರ್ತಿಯಿಂದ ಜರ್ಮನಿಯಲ್ಲಿ ಹ್ಯಾನ್ಸ್‍ವುಸ್ರ್ಟ್ ಎಂಬ ಒಂದು ರೀತಿ ದೇಶಿಯ ಪ್ರಕಾರ ರೂಪುಗೊಂಡಿತು. ಹಾಗೆಯೇ ಫ್ರಾನ್ಸ್ ಮತ್ತು ಇಂಗ್ಲೆಂಡಿನಲ್ಲಿ ಆಯಾ ಪ್ರದೇಶಗಳ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡು ಭೇರೆ ಬೇರೆಯ ಹೆಸರುಗಳಲ್ಲಿ ಈ ಪ್ರಕಾರ ರೂಪುಗೊಂಡಿತು. ಸುಮಾರು ಇನ್ನೂರು ವರ್ಷಗಳ ಕಾಲ ಈ ಒಂದು ಪ್ರಕಾರ ಯುರೋಪಿನ ಎಲ್ಲ ಭಾಗಗಳಲ್ಲಿ ತನ್ನ ಆಧಿಪತ್ಯ ನಡೆಸಿತು. ಆದರೆ ಸಾಹಿತ್ಯಕವಾಗಿ ಹೆಚ್ಚಿನ ಮಹತ್ತ್ವವಿಲ್ಲದಿದ್ದ ಈ ಕಲಾಪ್ರಕಾರ ಬಹಳ ಭೇಗ ಅವನತಿ ಹೊಂದಿತು. ಆದರೆ ಷೇಕ್‍ಸ್ಪಿಯರ್‍ನ `ದಿ ಟೆಂಪೆಸ್ಟ್; ಗ ಇಟಲಿಯ ಈ ವಿನೋದ ಪ್ರಕಾರಕ್ಕೂ ಸಂಬಂಧವಿರುವುದನ್ನು ಗುರುತಿಸಬಹುದು. ಎಲಿಜಬೆತ್‍ಳ ಕಾಲದ ನಾಟಕಗಳಲ್ಲಿ ಬರುವ ಕೋಡಂಗಿ ಪಾತ್ರಗಳು ಇಟಲಿಯ ಈ ಪ್ರಕಾರದ ಪ್ರಭಾವದಿಂದಲೇ ಬಂದಂತಹವು. ಮೋಲಿಯರ್ ತನ್ನ ಹಾಸ್ಯ ವಿಡಂಬನಾತ್ಮಕ ನಾಟಕಗಳ ರಚನೆಯಲ್ಲಿ ಕಮಿಡಿಯ ಡೆಲ್ ಆರ್ಟೆ ಪರಂಪರೆಯ ಅಂಶಗಳನ್ನು ಬಳಸಿಕೊಂಡಿರುವುದನ್ನು ಗಮನಿಸಬಹುದು. ಇಷ್ಟಾದರೂ ಕಮಡಿಯ ಡೆಲ್ ಆರ್ಟೆ ಶ್ರೇಷ್ಠನಾಟಕ ಕೃತಿಗಳನ್ನು ಕೊಡಲಿಲ್ಲ. ಈ ಕಾಲದ ಇಟಾಲಿಯನ್ ರಂಗಭೂಮಿ ಶ್ರೇಷ್ಠ ನಾಟಕವನ್ನು ಕೊಡದಿದ್ದರೂ ಅದು ಸೃಷ್ಟಿಸಿದ ರಂಗ ಪ್ರಕಾರ ಜೀವಂತವಾಗಿ ಉಳಿದುಕೊಂಡು ಬಂದಿತು.
ಸ್ಪ್ಯಾನಿಷ್ ರಂಗಭೂಮಿ: 1429ರಿಂದ 1519ರ ವರೆಗಿನ 40ವರ್ಷಗಳ ಸ್ಪೇನ್ ಇತಿಹಾಸ ಅದ್ಭುತವಾದದ್ದು. ಇದು, ಸ್ಪೇನ್ ಮಧ್ಯಯುಗದಿಂದ ಆಧುನಿಕ ಯುಗಕ್ಕೆ ಕಾಲಿಟ್ಟ ಪರ್ವಕಾಲ. ರಾಜಕೀಯವಾಗಿ ಅರಗಾನ್ ಕ್ಯಾಸ್ಪೈಲ್ ಪ್ರಾಂತಗಳು ಒಂದಾದದ್ದು, ಮೂರಿಷ್ ಜನರನ್ನು ಹೊಡೆದೋಡಿಸಿದ ಅನಂತರ ಗ್ರೇನಾಡ ಸ್ಪೇನ್‍ನ ಒಂದು ಅಂಗವಾಗಿ ಸೇರಿಕೊಂಡದ್ದು ಅಮೇರಿಕವನ್ನು ಕಂಡುಹಿಡಿದು ಅಲ್ಲಿನ ಕೆಲವು ಭಾಗಗಳ ಮೇಲೆ ಅಧಿಕಾರ ನಡೆಸಲು ಆರಂಭಿಸಿದ್ದು. ಸ್ಪೇನ್ ಚಕ್ರಾಧಿಪತ್ಯವಾಗಿ ಮಾರ್ಪಡಲು ಕಾರಣವಾಯಿತು. ಈ ಎಲ್ಲ ಸಂಗತಿಗಳು ಸ್ಪೇನ್‍ನ ಸಾಂಸ್ಕøತಿಕ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿ ಬಂದವು. ಆದರೆ ಸಾಂಪ್ರದಾಯಿಕವಾಗಿ ಬಂದ ಕ್ಯಾಥೋಲಿಕ್ ಧರ್ಮದ ನಂಬಿಕೆ ಅಂಧಶ್ರದ್ದೆ ಎಂಬಷ್ಟು ಮಟ್ಟಿಗೆ ಬೇರೂರಿತು. ಕ್ಯಾಥೋಲಿಕ್ ಅಲ್ಲದ ಎಲ್ಲವನ್ನೂ ದಮನಮಾಡುವ ಪ್ರವೃತ್ತಿ ಬೆಳೆಯಿತು. ಸ್ಪೇನ್‍ನ ದೊರೆ ಐದನೆಯ ಚಾಲ್ರ್ಸ್ ದಿ ಹೋಲಿ ರೋಮನ್ ಎಂಪರರ್ ಆಗಿ ಆಯ್ಕೆಗೊಂಡ ಮೇಲೆ ಕ್ಯಾಥೋಲಿಕ್ ಧರ್ಮದ ಪ್ರಮುಖ ಶಕ್ತಿಯಾಗಿ ಇದರ ಪ್ರತಿಷ್ಠೆಯೂ ಬೆಳೆಯಿತು. ಈ ಕಾಲದ ಸ್ಪೇನ್‍ನ ಇತಿಹಾಸ ಒಂದು ಕಡೆ ಸಾಂಸ್ಕøತಿಕವಾಗಿ ಹೊಸಹುಟ್ಟನ್ನು ಪಡೆದು ಮಹತ್ತರವಾದ್ದನ್ನು ಸಾಧಿಸುತ್ತಿದ್ದರೆ ಇನ್ನೊಂದು ಕಡೆ ಚರ್ಚಿನ ಮತ್ತು ರಾಜನ ಸರ್ವಾಧಿಕಾರದ ದಮನ ಇವುಗಳನ್ನೊಳಗೊಂಡು ವಿರೋಧಾಭಾಸದಿಂದ ಕೂಡಿತ್ತು. ಜು ಆನ್-ಡೆಲ್ ರನ್ಸಿನ ಎಂಬಾತ ಸ್ಪ್ಯಾನಿಷ್ ನಾಟಕದ ಜನಕ ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು ನಹಾರೊ ಎಂಬುವನನ್ನು ಸ್ಪ್ಯಾನಿಷ್ ನಾಟಕದ ಆದ್ಯನೆಂದು ಅಭಿಪ್ರಾಯಪಡುತ್ತಾರೆ. ಆದರೆ ಇವನ ಕೃತಿಗಳು ನಾಟಕೀಯ ಅಂಶಗಳನ್ನು ಒಳಗೊಂಡ ಕಾವ್ಯಗಳೇ ಹೊರತು ವಾಸ್ತವಿಕವಾದ ನಾಟಕಗಳಲ್ಲ. ಇನ್ನು ಕೆಲವು ವಿದ್ವಾಂಸರು ಸ್ಪ್ಯಾನಿಷ್ ನಾಟಕದ ಉಗಮವನ್ನು ವಿಡಂಬನ ಸಾಹಿತ್ಯ ಪ್ರಕಾರದಲ್ಲಿ ಕಾಣುವುದುಂಟು. ಮಿಂಗೊ ರಿವಲ್‍ಗೂ ಎಂಬ ವಿಡಂಬನಾತ್ಮಕ ಕೃತಿ ಮೇಲುವರ್ಗ ಮತ್ತು ಕೆಳವರ್ಗದ ಮಧ್ಯದ ಅಪಹಾಸ್ಯದ ಸಂವಾದವಾಗಿತ್ತು. ಈ ಕೃತಿಯೇ ಸ್ಪೇನಿನ ವೈನೋದಿಕಕ್ಕೆ ಮೂಲ ಎಂಬುದು ಕೆಲವರ ಅಭಿಪ್ರಾಯ. ಹಾಗೆಯೇ 1502ರಲ್ಲಿ ಪೂರ್ಣಗೊಂಡ ಕ್ಕಲಿಸೊಮೆಲಿಬಿಯರ್ ಟ್ರ್ಯಾಜಿಕಾಮಿಡಿ ಎಂಬ ಕೃತಿಯ ಜನಪ್ರಿಯ ಹೆಸರು ಸೆಲಸ್ಟಿನ್ಟಾ. ಇದನ್ನು ಟ್ರಾಜಿಕಾಮಿಡಿ ಎಂದು ಕರೆದಿದ್ದರೂ ಇದೊಂದು ಕಾದಂಬರಿ. ಸ್ಪೇನ್‍ನ ನಾಟಕಕ್ಕೆ ನಿಜವಾದ ಅರ್ಥದಲ್ಲಿ ಆದ್ಯನಾದವನು ಮತ್ತು ಅದನ್ನು ಬೆಳೆಸಿದವನು ಲೋಪ್-ಡ-ರುಏಡ (1544-67) ಇವನು ಕಸುಬಿನಲ್ಲಿ ಅಕ್ಕಸಾಲಿಗ. ತನ್ನ ಜೊತೆಗಾರ ಟಿಟೊನಿಡ ಹಾಗೂ ಇನ್ನಿತರ ಕವಿಗಳು ಮತ್ತು ನಟವರ್ಗವನ್ನು ಸೇರಿಸಿಕೊಂಡು ಎಲ್ಲಿ ಅನುವಾಯಿತೋ ಅಲ್ಲಿ ಬೆಂಚು, ಹಲಗೆ ಇತ್ಯಾದಿಗಳನ್ನು ಸೇರಿಸಿ ರಂಗಮಂಚವನ್ನು ರೂಪಿಸಿ ನಾಟಕಗಳನ್ನು ಅಭಿನಯಿಸುತ್ತಿದ್ದರು. ಇದು ಸ್ಪೇನನಲ್ಲಿ ಸಾರ್ವಜನಿಕ ನಾಟಕಶಾಲೆ ಆರಂಭಗೊಳ್ಳಲು ಕಾರಣವಾಯಿತು. ಲೋಪ್-ಡ-ರುಏಡ ಹೀಗೆ ನಾಟಕಕರ್ತೃವೂ ನಟನೂ ವ್ಯವಸ್ಥಾಪಕನೂ ಆದ್ದದ್ದು ಒಂದು ವಿಶೇಷ. ಚರ್ಚಿನ ಆವರಣದಲ್ಲೋ ಸ್ಪೇನಿನ ಭವ್ಯಭವನಗಳಲ್ಲೋ ನಡೆಯಿತ್ತದ್ದ ನಾಟಕವನ್ನು ಜನಸಾಮಾನ್ಯರ ಮಧ್ಯಕ್ಕೆ, ಬೀದಿಗೆ ತಂದು ಅವರನ್ನು ನಾಟಕ ಕಲೆಯ ಪೋಷಕರಾಗಿ ಮಾಡಿದ್ದು ರುಏಡ. ಇವನನ್ನು ಅನಂತರ ಅನುಸರಿಸಿದವರು ಕುಏವ ಮತ್ತು ಟಿಮೊನಿಡ. ಈ ಹಿನ್ನಲೆಯಲ್ಲಿ ಮುಂದೆ ಸ್ಪೇನಿನ ನಾಟಕ ರಂಗಕ್ಕೆ ಮಹತ್ತರ ಕೊಡುಗೆ ನೀಡಿದವನು ಲೋಪ್‍ಡ ವೇಗ. ಇಟಲಿಯ ಮಾದರಿಯನ್ನು ಒಪ್ಪಿದ ಇನ್ನಿಬ್ಬರು ನಾಟಕಕಾರರೆಂದರೆ ಕ್ರಿಸ್ಟೊಬೆಲ್ ಡ ವಿರುಯೇಸ್ ಮತ್ತು ಗೆರೊನಿಮಾಬರ್ಮುಡೆಜ್ó. ಇವರು ಸಂಪೂರ್ಣವಾಗಿ ಸೆನೆಕನನ್ನು ಅನುಸರಿಸಿ ಎಷ್ಟು ಸಾಧ್ಯವೋ ಅಷ್ಟು ಹಿಂಸಾತ್ಮಕ ಘಟನೆಗಳನ್ನು ನಾಟಕಗಳಲ್ಲಿ ತಂದು ಎಷ್ಟು ಸಾಧ್ಯವೋ ಅಷ್ಟು ಪಾತ್ರಗಳನ್ನು ದುರ್ಮರಣಕ್ಕೆ ಒಳಗು ಮಾಡುವುದೇ ಇವರ ರೀತಿಯಾಗಿತ್ತು. ಆದರೆ ಇವರ ಬರವಣಿಗೆಯ ಪದ್ಧತಿಗೆ ಪ್ರಾಮುಖ್ಯ ಸಿಗಲಿಲ್ಲ.
ಲೋಪ್ ಡ ವೇಗ (1562-1635) ಸ್ಪೇನಿನ ಮಹಾಲೇಖಕ. ಲೋಪ್ ಫೆಲಿಕ್ಸ್ ಡಿ ವೇಗ ಕಾರ್ಪಿಯೊ ಎಂಬುದು ಇವನ ಪೂರ್ಣ ಹೆಸರು. ಇವನು ಅನೇಕ ಕಾದಂಬರಿಗಳನ್ನು, ನೀಳ್ಗತೆಗಳು, ದೊಡ್ಡ ಕಥೆ ಕಾವ್ಯ ಹೇರಳವಾದ ಭಾವಗೀತೆಗಳನ್ನು ಎಲ್ಲಕ್ಕಿಂತ ಮಿಗಿಲಾಗಿ ಸು 2000 ನಾಟಕಗಳನ್ನು ರಚಿಸಿದ್ದಾನೆ. ಇವುಗಳಲ್ಲಿ 470 ನಾಟಕಗಳು ಉಳಿದು ಬಂದಿವೆ. ಒಂದರ್ಥದಲ್ಲಿ ಸ್ಪೇನಿನ ಸುವರ್ಣಯುಗ ಎಂಬುದು ಲೋಪ್ ಡ ವೇಗನ ಒಬ್ಬನದೇ ಸೃಷ್ಟಿ ಎನ್ನಬಹುದು.
ರುಏಡ ಮತ್ತು ಕುಏವ- ಇವರು ಆಗಲೇ ಸ್ಪೇನಿನ ರಂಗಭೂಮಿಯ ಉಗಮಕ್ಕೆ ಕಾರಣರಾಗಿದ್ದರು. ಸರ್ವಾಂಟೀಸ್ ಕೂಡ. ಇವನು ಮುಖ್ಯವಾಗಿ ಕಾದಂಬರಿಕಾರನಾಗಿದ್ದರೂ ನಾಟಕಗಳನ್ನು ರಚಿಸಿದ್ದ. ಆದರೆ ಲೋಪ್‍ಡವೇಗ ಸ್ಪ್ಯಾನಿಷ್ ನಾಟಕಕ್ಕೆ ಪ್ರಬುದ್ದತೆಯನ್ನು ತಂದುಕೊಟ್ಟ. ಜನರಿಗೆ ಬೇಕಾಗಿದ್ದ ರೊಮ್ಯಾಂಟಿಕ್ ನಾಟಕವನ್ನು ರೂಪಿಸಿದ. ನಾಟಕದಲ್ಲಿ ಮೂರೇ ಅಂಕಗಳಿರಬೇಕೆಂದು ನಿಯಮಿಸಿದವನು ಲೋಪ್ ಡ ವೇಗ. ಮೊದಲನೆಯ ಅಂಕದಲ್ಲಿ ವಸ್ತುವಿನ ಸ್ಥಿತಿಗತಿ ಚಿತ್ರಣಗೊಳ್ಳಬೇಕು. ಎರಡನೆಯ ಅಂಕದಲ್ಲಿ ಸಮಸ್ಯೆಯನ್ನು ಉದ್ಭವಿಸಿ ವಸ್ತುಗೊಂದಲಮಯವಾಗಬೇಕು. ಮೂರನೆಯ ಅಂಕದಲ್ಲಿ ಅವುಗಳಿಗೆ ಪರಿಹಾರ ಸಿಕ್ಕಿ ಕ್ರಿಯೆ ಮುಕ್ತಾಯಕ್ಕೆ ಬರಬೇಕು. ಆರಿಸಿಕೊಂಡ ಕಥೆಗೆ ತಕ್ಕ ಭಾವಭಾವನೆಗಳನ್ನು ಚಿತ್ರಿಸಬೇಕು. ಸಮಯ ಸನ್ನಿವೇಶ, ವಿಭಿನ್ನ ಪಾತ್ರಗಳ ಸ್ವಭಾವಗಳಿಗೆ ಅನುಗುಣವಾಗಿ ಪದ್ಯಜಾತಿಗಳನ್ನು ಬಳಸಬೇಕು ಎಂಬ ನಿಯಮಗಳನ್ನು ತನ್ನ ನಾಟಕರಚನೆಯಲ್ಲಿ ಯಶಸ್ವಿಯಾಗಿ ಅನುಸರಿಸಿದವನು ಈತ. ಪಾತ್ರರಚನೆಯಲ್ಲೂ ಭಾಷಾಬಳಕೆಯಲ್ಲಿಯೂ ತನ್ನದೇ ಆದ ವೈಶಿಷ್ಟ್ಯವನ್ನು ಸಾಧಿಸಿದ. ಇವನ ನಾಟಕಗಳನ್ನು ವೈನೋದಿಕ ಅಥವಾ ಗಂಭೀರ ಎಂದು ಕರಾರುವಕ್ಕಾಗಿ ವಿಭಾಗಿಸಲು ಸಾಧ್ಯವಿಲ್ಲ. ಆದರೂ ಇವನ ಹಲವಾರು ನಾಟಕಗಳನ್ನು ಗಂಭೀರ ವರ್ಗಕ್ಕೆ ಸೇರಿಸಬಹುದು. ಇವನ ಬಲುಪ್ರಸಿದ್ದವಾದ ನಾಟಕ ಎಲ್‍ಕಾಸ್ಟಿಗೊ ಸಿನ್ ವೆಂಗಾನ್ಜಾ. ಈ ನಾಟಕದಲ್ಲಿ ನತದೃಷ್ಟ ಪ್ರಣಯಿಗಳ ವಿಷಮ ಪರಿಸ್ಥಿತಿಯನ್ನು ಹೃದಯಂಗಮವಾಗಿ ಚಿತ್ರಣಗೊಂಡಿದೆ. ಇವನ ಇನ್ನೆರಡು ಪ್ರಸಿದ್ದ ನಾಟಕಗಳೆಂದರೆ ದಿ ಕಿಂಗ್ ದಿ ಬೆಸ್ಟ್ ಆಲ್ ಕಾಲ್‍ಡೆ (1635), ದಿ ಷೀಪ್‍ವೆಲ್ (1614) ಈ ಎರಡು ನಾಟಕಗಳೂ ಆಧುನಿಕ ಯುರೋಪಿನ ನಾಟಕವಿಮರ್ಶಕರ ಗಮನ ಸೆಳೆದಿವೆ. ಅಲ್ಲದೆ ಪ್ರಪಂಚದ ಶ್ರೇಷ್ಠ ನಾಟಕಗಳ ಸಾಲಿನಲ್ಲಿ ಈ ನಾಟಕಗಳು ಸೇರುತ್ತವೆ ಎಂಬುದು ಹಲವರ ಅಭಿಪ್ರಾಯ. ಲೋಪ್ ಡ ವೇಗನ ಅಪರಿಮಿತ ಸಂಖ್ಯೆಯ ನಾಕಟಗಳ ಸೃಷ್ಟಿಯ ಒಳಗೆ ಇನ್ನೊಂದು ಪ್ರಕಾರದ ನಾಟಕಗಳು ಸಿಕ್ಕುತ್ತವೆ. ಅವೇ ಪ್ರೇಮವನ್ನು ವಸ್ತುವಾಗುಳ್ಳ ವೈನೋದಿಕಗಳು. ಇದಕ್ಕೆ ದಿ ಗಾರ್ಡ್‍ನರ್ಸ್ ಡಾಗ್ (1615) ಎಂಬ ನಾಟಕ ಅತ್ಯುತ್ತಮ ಉದಾಹರಣೆ. ಇವನ ಅನೇಕ ನಾಟಕಗಳ ಕಥಾ ಸಂವಿಧಾನದ ಅಡಿಪಾಯ 'ಒಳಸಂಚು, ವಸ್ತು ಸಾಮಾನ್ಯವಾಗಿ ಪ್ರೇಮ, ಪ್ರೇಮದ ಎಲ್ಲ ಬಗೆಯ ಅನುಭವಗಳನ್ನುಳ್ಳ ಲೋಪ್ ಡ ವೇಗ ಆ ಅನುಭವಗಳನ್ನು ತನ್ನ ನಾಟಕ ರಚನೆಯಲ್ಲಿ ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾನೆ. ಪ್ರೇಮವನ್ನು ವಸ್ತುವಾಗುಳ್ಳ ಇವನ ನಾಟಕಗಳಲ್ಲಿ ಅದರ ಅನುಭವ ಎಲ್ಲ ಆಯಾಮಗಳೂ ನಿಸ್ಸಂಕೋಚವಾಗಿ ವಾಸ್ತವವಾಗಿ ಚಿತ್ರಣಗೊಂಡಿವೆ. ಇವನಿಗೆ ಸ್ಪೇನಿನ ರಾಜತ್ವದ ಮೇಲೆ ಗಾಢವಾದ ಗೌರವ. `ಪ್ರೇಮ ಮತ್ತು `ರಾಜತ್ವ ಇವುಗಳಲ್ಲದೆ ಅಥವಾ ಇವುಗಳನ್ನೂ ಮೀರಿಸುವ ಪ್ರಾಮುಖ್ಯವುಳ್ಳ ತತ್ತ್ವ ಲೋಪ್ ಡ ವೇಗನ ಪ್ರಕಾರ ನ್ಯಾಯ ಮತ್ತು ಆತ್ಮಗೌರವ. ಜಗತ್ತಿನ ವಿಸ್ಮಯಗಳಲ್ಲೊಂದು ಎಂದು ಪರಿಗಣನೆಗೆ ಒಳಗಾಗಿರುವ ಇವನು ಸ್ಪ್ಯಾನಿಷ್ ನಾಟಕಪರಂಪರೆಗೆ ಘನತೆ ಗೌರವಗಳನ್ನು ತಂದುಕೊಟ್ಟ ಮಹಾನಾಟಕಕಾರ. ಆಶ್ಚರ್ಯದ ಸಂಗತಿ ಎಂದರೆ ಇತ್ತೀಚಿನ ಕಾಲದವರೆಗೂ ಸ್ಪೇನಿನಿಂದ ಹೊರಗೆ ಇವನ ಬಗೆಗೆ ಹೆಚ್ಚಾಗಿ ತಿಳಿಯದೇ ಇದ್ದದ್ದು. ಆದರೆ 20ನೆಯ ಶತಮಾನದ ಆರಂಭದ ದಶಕಗಳಲ್ಲಿ ಇವನ ಕೆಲವು ಮುಖ್ಯ ಕೃತಿಗಳು ಯುರೋಪಿನ ಭಾಷೆಗಳಿಗೆ ಅನುವಾದಗೊಂಡು ವಿಮರ್ಶಕರ ಪರಿವೀಕ್ಷಣೆಗೆ ಒಳಗಾದವು. ಅನಂತರ ಇವನ ನಾಟಕಗಳ ಹರಹು, ವೈವಿದ್ಯ ಆಳ ಅಗಲಗಳು ಇತರರಿಗೂ ಪರಿಚಯವಾಗಿತೊಡಗಿತು. ಷೇಕ್‍ಸ್ಪಿಯರ್‍ನ ಪ್ರತಿಭೆಗೆ ಸಮಾನವಾದ ಪ್ರತಿಭೆಯುಳ್ಳ ನಾಟಕಕಾರನೆಂಬ ಕೀತಿ ಲೋಪ್ ಡ ವೇಗನಿಗೆ ದೊರೆಯುವಂತಾಯಿತು.
ಸ್ಪೇನಿನ ಸುವರ್ಣಯುಗವೆಂದು ಕರೆಯಲಾದ ಈ ಕಾಲದಲ್ಲಿ ಸುಮಾರು 800ಕ್ಕೂ ಹೆಚ್ಚು ನಾಟಕಕಾರರು ನಾಟಕಗಳನ್ನು ರಚಿಸಿದರು. ಸು. 30000 ಕ್ಕೂ ಹೆಚ್ಚು ನಾಟಕಗಳು ರಚನೆಗೊಂಡವು. ಆದರೂ ಯಾರಿಗೂ ಲೋಪ್ ಡ ವೇಗನಷ್ಟು ಮಹತ್ತ್ವ ಪ್ರಾಪ್ತವಾಗಲಿಲ್ಲ. ಟರ್ಸೊಡಮೊಲೀನಾ ಎಂಬ ನಾಟಕಕಾರ ಡಾನ್ ಜು ಆನ್‍ನ ಪಾತ್ರವನ್ನು ಸೃಷ್ಟಿಮಾಡಿದವನು. ಡಾನ್ ಜು ಆನ್, ಯಾವುದೇ ಸ್ತ್ರೀಯರನ್ನು ತನ್ನ ಬಲೆಗೆ ಹಾಕಿಕೊಳ್ಳಬಲ್ಲ ರಸಿಕ. ಇವನ ನೀತಿಗತೀತವಾದ ಧೋರಣೆಯಿಂದ, ತನ್ನ ವ್ಯಕ್ತಿತ್ವದ ಆಕರ್ಷಣೆಯಿಂದ ಇವನ ಬಲೆಗೆ ಬೀಳದ ಹೆಣ್ಣುಗಳೇ ಇಲ್ಲ. ಇಂತಹ ಪಾತ್ರವನ್ನು ಸೃಷ್ಟಿಸುವ ಮೂಲಕ ಟರ್ಸೊಡಮೊಲೀನಾ ವಿಶಿಷ್ಟ ವ್ಯಕ್ತಿತ್ವವುಳ್ಳ ಒಂದು ಪಾತ್ರವನ್ನು ನೀಡಿದ್ದಾನೆ. ಡಕಾಸ್ಟ್ರೊ (1569-1631) ಇನ್ನೊಬ್ಬ ಗಮನಾರ್ಹ ನಾಟಕಕಾರ. ಇವನ ವೇಗನ ಆದರ್ಶದಲ್ಲಿ ನಾಟಕವನ್ನು ಕಟ್ಟಿದವನು. ಇವನು ಅನೇಕ ನಾಟಕಗಳನ್ನು ಬರೆದಿದ್ದಾನೆ. ಇವುಗಳಲ್ಲಿ ದಿ ಯೂತ್ ಆಫ್ ದಿ ಸಿಡ್ ಎಂಬ ನಾಟಕ ಮುಖ್ಯವಾದದ್ದು.
ಲೋಪ್ ಡ ವೇಗನಷ್ಟೇ ಪ್ರಮುಖವಾದ ನಾಟಕಕಾರನೆಂದರೆ ಫೀಡ್ರೊ ಕಾಲ್ಡೆರಾನ್ ಡ ಬಾರ್ಕ್. ಲೋಪ್ ಡ ವೇಗನ ಮರಣದ ಅನಂತರ ಈತ ಅವನ ಸ್ಥಾನವನ್ನು ಸಮರ್ಥವಾಗಿ ತುಂಬಿದ. ಜಗತ್ತಿನ ಮಹಾನಾಟಕಕಾರರ ಹೆಸರನ್ನು ಹೇಳುವಾಗ ಇವರಿಬ್ಬರ ಹೆಸರನ್ನು ಬಿಡಲಾಗದು. ಲೋಪ್ ಡ ವೇಗನಿಗೂ ಇವನಿಗೂ ಹಲವಾರು ಸಾಮ್ಯವ್ಯತ್ಯಾಸಗಳಿವೆ. ಲೋಪ್ ಡ ವೇಗ ಜನಸಾಮಾನ್ಯರ ನಾಟಕಕಾರನಾದರೆ ಕಾಲ್ಡೆರಾನ್ ಉಚ್ಚವರ್ಗದವರ ನಾಟಕಕಾರನಾಗಿದ್ದಾನೆ. ಸಾಮಾನ್ಯವಾಗಿ ಸಾರ್ವಜನಿಕ ನಾಟಕಶಾಲೆಗಳಲ್ಲಿ ವೇಗನ ನಾಟಕಗಳು ಪ್ರದರ್ಶನವಾಗುತ್ತಿದ್ದರೆ ಕಾಲ್ಡೆರಾನ್‍ನ ನಾಟಕಗಳು ರಾಜಸ್ಥಾನಗಳಲ್ಲಿ ಪ್ರದರ್ಶನವಾಗುತ್ತಿದ್ದವು. ವೇಗನ ಭಾಷೆ ಸ್ವಾಬಾವಿಕ ಮತ್ತು ಸಹಜ. ಕಾಲ್ಡೆರಾನ್‍ನ ಭಾಷೆ ಕೃತಕ. ಸುಸಂಸ್ಕøತ ಮತ್ತು ಗ್ರಾಂಥಿಕ ಕದನ. ಪ್ರೇಮ ಆತ್ಮಗೌರವಗಳೇ ಈ ಇಬ್ಬರ ನಾಟಕಗಳ ವಸ್ತುವಾದರೂ ವೇಗನ ನಾಟಕಗಳ ಅಭಿವ್ಯಕ್ತಿ ಸ್ಪೇನ್‍ನನ್ನೂ ಒಳಗೊಂಡು ವಿಶಾಲ ಮಾನವತೆಯ ಕಡೆಗೆ ಕೈಚಾಚುತ್ತದೆ. ಕಾಲ್ಡೆರಾನ್‍ನ ಕೃತಿಗಳಲ್ಲಿನ ಅಭಿವ್ಯಕ್ತಿ 17ನೆಯ ಶತಮಾನದ ಸ್ಪೇನಿನ ಕುಲೀನರ ಭಾಷೆಗೆ ಮಾತ್ರ ಸೀಮಿತವಾಗಿದೆ.
ಕಾಲ್ಡೆರಾನ್‍ನ ಉತ್ಕøಷ್ಟ ಕಲೆಗಾರ, ರೂಪಕರಚನೆ ವಸ್ತು ಸಂವಿಧಾನ ಯೋಜನೆ ಕಲಾವೈಭವದಲ್ಲಿ ಈತ ಸಮರ್ಥ. ಗಾಢವಾದ ಚಿಂತನೆ ಮತ್ತು ಕಾವ್ಯಶಕ್ತಿ ಇವನ ನಾಟಕಗಳ ಮತ್ತೊಂದು ಮುಖ್ಯ ಲಕ್ಷಣ. ಮತಧರ್ಮದ ವಿಷಯ ಹಲವಾರು ಬಾರಿ ಪ್ರತಿಪಾದಿತವಾಗಿರುವುದು ನಾಟಕಕಲೆಯ ದೃಷ್ಟಿಯಿಂದ ಇವನ ನಾಟಕಗಳಿಗೆ ಪರಿಮಿತಿ ತಂದುಕೊಟ್ಟಿದೆ. ಇವನ ಪ್ರಸಿದ್ದ ನಾಟಕಗಳಲ್ಲಿ ಮುಖ್ಯವಾದದ್ದು ದಿ ವಂಡರ್ ವರ್ಕಿಂಗ್ ಮೆಜಿಷಿಯನ್. ಈ ನಾಟಕ ಸತ್ವಯುತವೂ ಉಜ್ವಲ `ಕಾವ್ಯತ್ವದಿಂದ ಕೂಡಿದ್ದೂ ಆಗಿ ಗಯಟೆಯ ಮಹಾಕೃತಿ `ಫೌಸ್ಟ್ ಗೆ ಸ್ಪೂರ್ತಿ ನೀಡಿತು. 1637ರ ಅನಂತರ ಹತ್ತುವರ್ಷಗಳ ಕಾಲ ಯುದ್ಧದ ಕಾರಣದಿಂದ ಸ್ಪೇನಿನ ನಾಟಕಶಾಲೆಗಳು ಮುಚ್ಚಿಹೋಗಿದ್ದವು. 1648ರಿಮದ ಕಾಲ್ಡೆರಾನ್ ಮತ್ತೆ ನಾಟಕರಚನೆಗೆ ತೊಡಗಿದ. ಈ ಕಾಲದಲ್ಲಿ ರಚನೆಗೊಂಡ ಮುಖ್ಯ ನಾಟಕವೆಂದರೆ `ದಿ ಮೇಯರ್ ಆಫ್ ಜಲಾಮಿಯ, ವಿಮರ್ಶಕರ ಅಭಿಪ್ರಾಯದಲ್ಲಿ ಈ ನಾಟಕವೇ ಇವನ ಸರ್ವಶ್ರೇಷ್ಠ ಕೃತಿ. ಜಲಾಮಿಯ ಎಂಬ ದೊಡ್ಡಗ್ರಾಮದ ಮುಖ್ಯಸ್ಥ ಫೀಡ್ರೋಕ್ರೆಸ್ತೊ ಎಂಬುವವನ ಜೀವನದ ಸುತ್ತ ಹೆಣೆಯಲಾದ ನಾಟಕ ಇದು. ಇವನ ಇನ್ನೊಂದು ಮುಖ್ಯನಾಟಕ `ಫಾರ್ ಎ ಸೀಕ್ರೆಟ್ ರಾಂಗ್, `ಸೀಕ್ರೆಟ್ ರಿವೇಂಜ್. 18ನೆಯ ಶತಮಾನದ ಜರ್ಮನ್ ವಿಮರ್ಶಕರಿಗೆ ಕಾಲ್ಡೆರಾನ್ ಬಗ್ಗೆ ಬಹಳ ಗೌರವ. ಷ್ಲಿಗೆಲ್ ಸಹೋದರರು ಇವನನ್ನು ಷೇಕ್‍ಸ್ಪಿಯರ್‍ನಿಗಿಂತ ಅಧಿಕನೆಂದು ಭಾವಿಸುತ್ತಾರೆ. ಆದರೆ ಹಲವು ವಿದ್ವಾಂಸರ ಪ್ರಕಾರ ಇದು ಉತ್ಪ್ರೇಕ್ಷೆ. ಇತ್ತೀಚಿನ ವಿಮರ್ಶಕರು ವೇಗನನ್ನು ಕಾಲ್ಡೆರಾನ್‍ನಿಗಿಂತಲೂ ಶ್ರೇಷ್ಠನಾಟಕಕಾರನೆಂದು ಹೆಚ್ಚು ಪ್ರತಿಭಾವಂತನೆಂದೂ ಪರಿಗಣಿಸುತ್ತಾರೆ. ಅದೇನೇ ಇರಲಿ ಈ ಯುಗದ ಸ್ಪ್ಯಾನಿಷ್ ರಂಗಭೂಮಿಯ ದೃಷ್ಟಿಯಿಂದ ಈ ಇಬ್ಬರ ಕೊಡುಗೆ ಅಪ್ರತಿಮವಾದದ್ದು.
ಈ ಕಾಲಾವಧಿಯ ಆರಂಭದಲ್ಲಿ ಅನೇಕ ನಾಟಕಕಾರರು ಕಂಡುಬರುತ್ತಾರೆ. ಫರ್ನೆಂಡೊ ಡಿ ರೋಜಸ್ ಎಂಬಾತನ ಸೆಸ್ಪಿನ್ (1499) ಎಂಬ ನಾಟಕ ರಂಗಭೂಮಿಯ ಮೇಲೆ ಪ್ರದರ್ಶನಕ್ಕೆ ಅನರ್ಹಕೃತಿ ಎಂದು ಆಗ ಪರಿಗಣಿತವಾಗಿದ್ದರೂ ಇದು ಅಂತರರಾಷ್ಟ್ರೀಯ ಖ್ಯಾತಿಪಡೆದು ಹಲವಾರು ಉತ್ತಮನಾಟಕಗಳಿಗೆ ಪ್ರಚೋದನೆ ನೀಡಿತು. ಡಾನ್‍ಕ್ವಿಕ್‍ಸಟ್ ಎಂಬ ಕೃತಿಯ ಕರ್ತೃವಾದ ಸರ್ವಾಂಟೀಸ್ (1547-1616) ಕೂಡ ಕೆಲವು ನಾಟಕಗಳನ್ನು ಬರೆದಿದ್ದಾನೆ. ಆದರೆ ಅವು ನಾಟಕಗಳಾಗಿ ಉತ್ತಮ ಕೃತಿಗಳಲ್ಲ. 1587ರಲ್ಲಿ ರಚಿತವಾದ ಇವನ ಕೃತಿಗಳಲ್ಲಿ ಉತ್ತಮವಾದ ನುಮಾನ್ಷಿಯ ಎಂಬುದು ಕೂಡ ಅನೇಕ ಪರಿಮಿತಿಗಳನ್ನು ಹೊಂದಿದೆ. ಇವನ ಇನ್ನೊಂದು ಮುಖ್ಯ ಕೃತಿ ದಿ ಗ್ರೇಟ್ ಸುಲ್ತಾನ (1615) ಇದರಲ್ಲಿ ಪಾತ್ರ ಚಿತ್ರಣ, ವಸ್ತು ನಿರ್ವಹಣೆ ಹಾಸ್ಯಾಸ್ಪದವಾಗಿದೆ.
1620ರಿಂದ 1665ರ ವರೆಗಿನ ಅವಧಿಯನ್ನು ಸ್ಪ್ಯಾನಿಷ್ ರಂಗಭೂಮಿಯ ಸುವರ್ಣಯುಗ ಎಂದು ಕರೆಯಲಾಗಿದೆ. ಈ ಕಾಲದಲ್ಲಿ ಹಲವಾರು ಮೌಲಿಕ ಲೇಖಕರು ಹುಟ್ಟಿಬಂದರು. ಇವರಲ್ಲಿ ಮುಖ್ಯನಾದವನು ಅಗಸ್ಟಿಸ್ ಮಾರೆಟೊ ವೈ ಕೆವೆನಾ ಎಂಬ ನಾಟಕಕಾರ. ಇವನು ಲೋಪ್ ಡ ವೇಗನ ಜೊತೆಯಲ್ಲಿ ಜನಪ್ರಿಯತೆಯಲ್ಲಿ ಸ್ಪರ್ಧಿಸಿದ. ಇವನಿಗೆ ರಂಗಭೂಮಿಯ ಪರಿಚಯ ಚೆನ್ನಾಗಿತ್ತು. ಇವನ ನಾಟಕಗಳಲ್ಲಿ ದೃಶ್ಯಗಳು ಜೀವಂತಿಕೆಯಿಂದ ಕೂಡಿರುತ್ತಿದ್ದವು. ಇವು ಶಕ್ತಿ ಮತ್ತು ಆಸಕ್ತಿಯನ್ನು ಕೆರಳಿಸುವಂಥವಾಗಿದ್ದವು. ಇವನ ವೈನೋದಿಕಗಳಿಗೆ ಪ್ರಚೋದನೆ ನೀಡಿದವು. ಸ್ಕಾರ್ನ್‍ಫಾರ್ ಸ್ಕಾರ್ನ್ (1564), ದಿ ಕಕೂ ಇನ್ ದಿ ನೆಸ್ಟ್ (1654), ಎಲ್‍ಲಿಂಡೊ ಡಾನ್ ಡಿಯಗೊ (1662) _ ನಾಟಕಗಳು ವೇಗನ ನಾಟಕಗಳಿಂದ ಪ್ರಭಾವಿತವಾದಂಥವು. ಈತ ತನ್ನ ವೈನೋದಿಕಗಳಲ್ಲಿ ಹಾಸ್ಯ ಸಂದರ್ಭವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ನಾಟಕ ದೃಶ್ಯಗಳಲ್ಲಿ ಜೀವಂತವಾದ ಸೂಕ್ಷ್ಮ ವ್ಯಂಗ್ಯ ಮತ್ತು ಹಾಸ್ಯಗಳನ್ನು ತರುವುದರಲ್ಲಿ ತನ್ನ ಸಾಮಥ್ರ್ಯವನ್ನು ಮೆರೆದಿದ್ದಾನೆ.
ಫ್ರಾನ್ಸಿಸ್‍ಕೊಡಿ ರೋಜಸ್ ಜೊರಿಲ್ಲಾ ಎಂಬ ನಾಟಕಕಾರ ಕಾಲ್ಡೆರಾನಿಗೆ ಅನೇಕ ವಿಷಯಗಳಲ್ಲಿ ಹತ್ತಿರನಾದವನು. ಕಾಲ್ಡೆರಾನನಂತೆಯೇ ಪ್ರೇಮದ ಒಳಸಂಚು ಮತ್ತು ಆತ್ಮಾಭಿಮಾನದ ವಸ್ತುಗಳನ್ನು ಆಲ್ ಈಕ್ವಲ್ ಬಿಲೊ ದಿ ಕಿಂಘ್. ದಿ ಬೂಬೀಸ್ ಸ್ಫೋರ್ಟ್. ವಾಟ್ ವಿಮೆನ್ ಆರ್ (ಈ ನಾಟಕಗಳ ಕಾಲ 1646-54ರ ಅವಧಿ) ಎಂಬ ನಾಟಕಗಳಲ್ಲಿ ಕೊನೆಮಟ್ಟ ಅನ್ವೇಷಿಸಿದ್ದಾನೆ.
ಟರ್ಸೊಡ್ ಮೊಲೀನಾನ (ಗ್ರೇಬಿಯಲ್ ಟೆಲಿಜ್) ಮೂಲಕ ಡಾನ್ ಜು ಆನ್‍ನ ನಾಟಕೀಯ ಕಥೆ ಪ್ರಾಚುರ್ಯಕ್ಕೆ ಬಂತು. ವೇಗನ ಹಾಗೆಯೇ ಈ ನಾಟಕಕಾರನೂ ಸು 400 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ದಿ ರಿಸೀವರ್ ಆಫ್ ಸೆವಿಲ್ಲಿ ಆಂಡ್ ದಿ ಸಟೋನ್ ಗಸ್ಟ್ (1630). ಎಂಬ ನಾಟಕದ ಮೂಲಕ ಮೊದಲ ಬಾರಿಗೆ ರಂಗಭೂಮಿಯ ಮೇಲೆ ಡಾನ್ ಜು ಆನ್. ನಾಟಕದ ಒಂದು ಪಾತ್ರವಾಗಿ ಕಾಣಿಸಿಕೊಳ್ಳುವಂತಾಯಿತು. ಮೊಲೀನಾನಿಗೆ ಅನೇಕ ಹಾಸ್ಯಪೂರಿತ ವ್ಯಂಗ್ಯನಾಟಕಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಪ್ರಸಿದ್ದವಾದವುಗಳೆಂದರೆ ಡಾನ್ ಗಿಲ್ ಆಫ್ ದಿ ಗ್ರೀನ್ ಟೌಷರ್ಸ್ (1635). ದಿ ಟಿಮಿಡ್ ಫೆಲೊ ಅಟ್ ದಿ ಕೋರ್ಟ್ (1621). ದಿ ಬ್ಲೆಸ್ಡ್ ಮಿಸ್ಟ್ರೆಸ್ (1634). ಮೊಲೀನಾನಿಗೆ ವೈವಿದ್ಯಮಯ ವಸ್ತುಗಳ ಬಗೆಗೆ ಆಸಕ್ತಿ ಇರುವುದು ಇವನ ದಿ ಪೆಸೆಂಟ್ ವುಮೆನ್ ಆಫ್ ವಲ್ಲಿಕಾಸ್ (1620). ಡ್ಯಾಮ್ಡ್ ಫಾರ್ ಲ್ಯಾಕ್ ಆಫ್ ಫೈತ್ (1635__ ಈ ಕೆಲವು ನಾಟಕಗಳಲ್ಲಿ ಕಾಣುತ್ತದೆ. ಮೊದಲನೆಯ ನಾಟಕದಲ್ಲಿ ಬಲತ್ಕಾರಕ್ಕೆ ಒಳಗಾದ ಹೆಂಗಸೊಬ್ಬಳು ತನ್ನನ್ನು ಬಲತ್ಕರಿಸಿದವನನ್ನು ರೈತನ ಮಾರುವೇಷದಲ್ಲಿ ಬಂದು ಪತ್ತೆ ಹಚ್ಚುವ ವಸ್ತು ಇದೆ. ಎರಡನೆಯ ನಾಟಕದಲ್ಲಿ ಒಬ್ಬ ಸನ್ಯಾಸಿನಿಯ ಪಾತ್ರದ ಮೂಲಕ ಧಾರ್ಮಿಕ ವಿಷಯಗಳನ್ನು ಮತ್ತು ಸಮಸ್ಯೆಗಳನ್ನು ಯಶಸ್ವಿಯಾಗಿ ಮತ್ತು ನಾಟಕೀಯವಾಗಿ ಅನ್ವೇಷಿಸಲಾಗಿದೆ.
ಜುಆನ್ ರೂಯಿಸ್ ಡಿ ಆಲಾರ್ಕಾನ್ ವೈ ಮೆಂಡೋನ್‍ಜಾ ಎಂಬ ನಾಟಕಕಾರನ 24 ನಾಟಕಗಳಲ್ಲಿ ಕೆಲವು ಶಕ್ತಿಯುತವಾದ ಪಾತ್ರಚಿತ್ರಣ, ಸಂವಿಧಾನ ಯೋಜನೆಗಳಿಂದ ಕೂಡಿವೆ. ಕ್ರೊಯಲ್ಟಿ ಫಾóರ್ ಆನರ್ (1625), ಗೇಯ್‍ನಿಂಗ್ ಫ್ರೆಂಡ್ಸ್ (1630) ಇವು ಇವನ ಕೆಲವು ಮುಖ್ಯನಾಟಕಗಳು. ಈತ ತನ್ನ ನಾಟಕಗಳಲ್ಲಿ ಕಾಲ್ಡೆರಾನ್ ಮತ್ತು ವೇಗ ಇವರ ಶೈಲಿಯನ್ನು ಅನುಸರಿಸುತ್ತಾನಾದರೂ ವಸ್ತುನಿರ್ವಹಣೆಯಲ್ಲಿ ಸ್ವೋಪತಜ್ಞತೆಯಿದೆ. ದಿ ಹಸ್‍ಬೆಂಡ್ಸ್ ಎಕ್ಸಾಮಿನೇಷನ್ ಇವನ ಯಶಸ್ವೀ ವೈನೋದಿಕ.
ಜೆಸುಯಿಟ್ ರಂಗಭೂಮಿ: ಯುರೋಪಿನ ಪುನರುತ್ಥಾನ ರಂಗಭೂಮಿಯನ್ನು ಕುರಿತ ವಿವೇಚನೆಗೆ ಪೂರಕವಾಗಿ ಜೆಸುಯಿಟ್ ರಂಗಭೂಮಿಯನ್ನು ಕುರಿತು ಸ್ವಲ್ಪ ಮಟ್ಟಿಗಾದರೂ ವಿವೇಚಿಸಬೇಕಾಗುತ್ತದೆ. 1540ರಲ್ಲಿ ಸೇಂಟ್ ಇಗ್‍ನಾಷಿಯಸ್ ಆಫ್ ಲೊಯಾಲಾ ಎಂಬ ಸ್ಪ್ಯಾನಿಷ್ ಯೋಧ ಸನ್ಯಾಸಿಯಾಗಿ ಪರಿವರ್ತನೆ ಹೊಂದಿ ಪೋಪನ ಅನುಮತಿಯೊಂದಿಗೆ `ಸೊಸೈಟಿ ಆಫ್ ಜೀಸಸ್ ಎಂಬ ಒಂದು ಧಾರ್ಮಿಕ ಸಂಸ್ಥೆಯನ್ನು ಆರಂಭಿಸಿದ. ತತ್ತ್ವ ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸಲು ರೂಪಕಮಾಧ್ಯಮ ಹೆಚ್ಚು ಪರಿಣಾಮಕಾರಿ ಎಂದು ತಿಳಿದ ಈ ಸಂಸ್ಥೆ ಧಾರ್ಮಿಕ ವಸ್ತುಗಳನ್ನುಳ್ಳ ಅನೇಕ ರೂಪಕಗಳನ್ನು ಪ್ರಯೋಗಿಸಿತು. ಮಧ್ಯಯುಗದ ರಹಸ್ಯ ನಾಟಕಗಳು ಮತ್ತು ಪವಾಡ ನಾಟಕಗಳ ವಸ್ತುಗಳಿಗೆ ಸಮಾನವಾದ ವಸ್ತುಗಳನ್ನು ಈ ರೂಪಕಗಳು ಒಳಗೊಂಡಿದ್ದರೂ ತಂತ್ರದಲ್ಲಿ ಸಂಪೂರ್ಣವಾಗಿ ಭಿನ್ನವಾಗಿದ್ದವು. ಪ್ರಯೊಗದಲ್ಲಿ ಅನುಸರಿಸುತ್ತಿದ್ದ ಒಂದು ವಿಧಾನವೆಂದರೆ, ದೃಶ್ಯಗಳನ್ನು ಸಾಮಾನ್ಯವಾಗಿ ಕಮಾನಿನಾಕಾರದ ತೆರಪುಳ್ಳ ಅಟ್ಟಣೆಗಳ ಮೇಲೆ ಪ್ರಯೋಗಿಸಲಾಗುತ್ತಿತ್ತು. ಪರದೆಗಳನ್ನೂ ಬಳಸಲಾಗುತ್ತಿತ್ತು. ಎರಡೆನೆಯ ವಿಧಾನವೆಂದರೆ ಚೇಂಬರ್ಸ್ ಆಫ್ ರೆಟರಿಕ್ ಎಂಬ ನಾಟಕ ಕಂಪನಿಯವರು ಅನುಸರಿಸುತ್ತಿದ್ದ ರೀತಿ, ಇವರ ನಾಟಕಗಳ ಮೊರಾಲಿಟಿ ನಾಟಕದ ಪ್ರಭಾವಕ್ಕೆ ಒಳಗಾಗಿದ್ದವು. ಇವುಗಳನ್ನು ಸಾಮಾನ್ಯವಾಗಿ ಒಂದು ಅಟ್ಟಣೆಯ ಮೇಲೆ ಆಡಲಾಗುತ್ತಿತ್ತು. ಅಟ್ಟಣೆಯ ಹಿಂಭಾದಲ್ಲಿ `ಪ್ರವೇಶದ್ವಾರ ಇರುತ್ತಿತ್ತು. ಈ `ಪ್ರವೇಶದ್ವಾರ ಆರ್ಚ್‍ವೇಸ್‍ಗಳನ್ನು ಉಳ್ಳದ್ದಾಗಿದ್ದು ಅವುಗಳನ್ನು ಪರದೆಗಳಿಂದ ಮುಚ್ಚಿಡಲಾಗುತ್ತಿತ್ತು. ಅವಶ್ಯಕತೆ ಬಿದ್ದಾಗ ಪ್ರವೇಶದ್ವಾರದಲ್ಲಿರುವ ದೃಶ್ಯಗಳನ್ನು ಅನಾವರಣ ಮಾಡಲು ಈ ಪರದೆಗಳನ್ನು ಸರಿಸಲಾಗುತ್ತಿತ್ತು. ಈ ಮೂಲದಿಂದಲೂ ಜೆಸುಯಿಟರು ವಸ್ತುಗಳನ್ನು ತೆಗೆದುಕೊಂಡರು. ಸಹಜವಾಗಿಯೇ ಜೆಸುಯಿಟರ ನಾಟಕಗಳು ನೀತಿಪರವಾಗಿದ್ದವು. ಚರ್ಚಿನ ಸರ್ವಾಧಿಕಾರವನ್ನು ಸ್ಥಾಪಿಸುವುದು ಮತ್ತು ಸ್ವತಂತ್ರ ಆಲೋಚನೆಯಿಂದಾಗುವ ದುಷ್ಪರಿಣಾಮವನ್ನು ಚಿತ್ರಿಸುವುದು ಈ ನಾಟಕಗಳ ಮುಖ್ಯ ಉದ್ದೇಶ. ಈ ಪುನರುತ್ಥಾನ ಕಾಲದಲ್ಲಿ ಪ್ರಾಚುರ್ಯಕ್ಕೆ ಬಂದ ವ್ಯಕ್ತಿವಾದ ಮತ್ತು ವಿಚಾರ ಸ್ವಾತಂತ್ರ್ಯ ಇವುಗಳನ್ನು ಹತ್ತಿಕ್ಕಬೇಕೆಂಬ ಜೆಸುಯಿಟರ ಧೋರಣೆ ನಿರಂಕುಶ ಮನೋಭಾವದ್ದಾಗಿತ್ತು. ಇವರ ಪ್ರಕಾರ ರಾಜಭಕ್ತಿ ಅಥವಾ ರಾಜನಿಗೆ ಅಧೀನವಾಗಿರುವುದು. ಚರ್ಚಿನ ಅಧಿಕಾರಕ್ಕೆ ಸದಾ ಒಳಪಟ್ಟಿರುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿತ್ತು. ಜಾಕಬ್ ಗ್ರೇಟ್‍ಸರ್‍ನ `ಟಿಮೋನ್ (1584) ಮತ್ತು ಬಿಡರ್‍ಮನ್ ಫಿಲಮೆನ್ ಇವು ಪ್ರಕಾರದಲ್ಲಿ ಬಂದ ಕೆಲವು ನಾಟಕಗಳು. ಈ ನಾಟಕಗಳ ವೈಶಿಷ್ಟ್ಯವೆಂದರೆ ಇವುಗಳ ರಚನಾವಿನ್ಯಾಸ, ಪಾತ್ರಚಿತ್ರಣ ಕ್ರಿಯೆಯ ಸಂಯೋಜನೆ. ಜೋಸೆಫ್ ಸೈಮನ್ಸ್ ಎಂಬ ಇಂಗ್ಲಿಷ್ ಜೆಸುಯಿಟರ್ ಬರೆದ (1656) ಐದು ದುರುಂತನಾಟಕಗಳು ಪ್ರಮುಖವಾಗಿವೆ. ಇವುಗಳೆಂದರೆ : ಆನ್ ಫಾರ್ಚುನೇಟ್ ಆ್ಯಂಬಿಷನ್ ಪಯಟಿ ಕ್ರೌನ್ಡ್ ವಚ್ರ್ಯು ಕಾನ್ಸೆಂಟ್ ಅಟ್ ಕೋರ್ಟ್. ವಚ್ರ್ಯು ಆರ್ ಕ್ರಿಶ್ಚಿಯನ್ ಫಾರ್‍ಟಿಟ್ಯೂಡ್, ಇಂಪಯಟಿ ಪನಿಷ್ಡ್. ಜರ್ಮನಿಯಲ್ಲಲ್ಲದೆ ಸಿಸಿಲಿಯಲ್ಲಿಯೂ ಈ ಜೆಸುಯಿಟ್ ರಂಗಭೂಮಿ ಪ್ರಾಚುರ್ಯದಲ್ಲಿತ್ತು. 18ನೆಯ ಶತಮಾನದಲ್ಲೂ ಈ ಬಗೆಯ ಹಲವಾರು ನಾಟಕಗಳು ರಚನೆಗೊಂಡು ಪ್ರಯೋಗಗೊಂಡು ಸಾಮಾನ್ಯ ಜನರಲ್ಲಿಯೂ ರಂಗಭೂಮಿಯ ಆಸಕ್ತಿಯನ್ನು ಉಂಟುಮಾಡಿದವು.
ಫ್ರೆಂಚ್ ರಂಗಭೂಮಿ: ಇತರ ಎಲ್ಲೆಡೆಗಳಲ್ಲಿನಂತೆ ಫ್ರಾನ್ಸ್‍ನ ರಂಗಭೂಮಿಯ ಉಗಮವೂ ಧಾರ್ಮಿಕ ಮೂಲವುಳ್ಳದ್ದು. 14ನೆಯ ಶತಮಾನದಲ್ಲಿ ಫ್ರಾನ್ಸ್‍ನ ಧಾರ್ಮಿಕ ರಂಗಭೂಮಿ ಪ್ರಬಲವಾಗಿದ್ದು ಅದರ ಪರಿಣಾಮ 15ನೆಯ ಶತಮಾನದಲ್ಲೂ ಮುಂದುವರಿದು, 16ನೆಯ ಶತಮಾನದ ಮಧ್ಯಭಾಗದವರೆಗೂ ಉಳಿದುಕೊಂಡಿತ್ತು. ಹೀಗೆ ಧಾರ್ಮಿಕ ವಸ್ತುಗಳಿಂದ ಆರಂಭವಾದ ಫ್ರೆಂಚ್ ನಾಟಕ ಸಂತರ ಕಥೆಗಳನ್ನು ನಾಟಕದ ವಸ್ತುವಾಗಿ ಒಳಗೊಂಡಿತು. ದೊರೆ 14ನೆಯ ಲೂಯಿ ಮತ್ತು 2ನೆಯ ಪೋಪ್ ಜೂಲಿಯನ್ ಇವರಿಬ್ಬರ ಮಧ್ಯೆ ನಡೆದ ಸೆಣೆಸಾಟದ ಪರಿಣಾಮವಾಗಿ ನಾಟಕದ ಬೆಳೆವಣಿಗೆ ಕೆಲಮಟ್ಟಿಗೆ ಕುಂಠಿತವಾಯಿತು. ಅಭಿಜಾತ (ಕ್ಲಾಸಿಕಲ್) ಸಾಹಿತ್ಯದ ಅಧ್ಯಯನ 14ನೆಯ ಶತಮಾನದಲ್ಲಿ ಫ್ರಾನ್ಸ್‍ನಲ್ಲಿ ಪ್ರಾಧಾನ್ಯ ಪಡೆಯಿತು. ಈ ಶತಮಾನದ ಉತ್ತರಾರ್ಧದಲ್ಲಿ ಫ್ರಾನ್ಸ್‍ಗೆ ಮುದ್ರಣಾಲಯದ ಆಗಮನವೂ ಆಯಿತು. ಜೊಡೆಲ್ ಎಂಬಾತ ಫ್ರೆಂಚ್ ನಾಟಕ ಪಿತಾಮಹನಾಗಿ ಕಾಣಿಸಿಕೊಂಡ. ಕ್ಲಿಯೊಪಾತ್ರ ಕ್ಯಾಪ್ಟಿವ್ (1552) ಎಂಬ ತನ್ನ ದುರಂತನಾಟಕವನ್ನು ಈತ ಫ್ರೆಂಚ್ ಸಾಹಿತ್ಯದ ಪ್ಲಿಯಡ್ಸ್ (ಏಳು ಜನರ ತಂಡ) ಎಂದು ಪ್ರಸಿದ್ದರಾಗಿರುವ ಇನ್ನೂ ಆರುಜನ ಕವಿಗಳೊಂದಿಗೆ ಪ್ರಯೋಗಮಾಡಿದ. ಇದು ಫ್ರೆಂಚ್ ಭಾಷೆಯ ಪ್ರಥಮ ಕ್ರಮಬದ್ದ ನಾಟಕವೆನಿಸಿದೆ. ಇವನ ವೈನೋದಿಕ ಲಿರೆವೊನ್ಟ್ರಿ ಎಂಬುದು ಎರಡನೆಯ ಹೆನ್ರಿಯ ಸಮ್ಮುಖದಲ್ಲಿ ಪ್ರಯೋಗಗೊಂಡಿತು (1502). ಯೂಜೀನ್ ಎಂಬ ಇವನ ಇನ್ನೊಂದು ವೈನೋದಿಕ ಅತ್ಯಂತ ಅನೀತಿಯುತ ಹಾಗೂ ಸ್ವಚ್ಚಂದವಾದದು ಎಂಬ ಟೀಕೆಗೆ ಗುರಿಯಾಗಿದೆ. ಬುನ್‍ಯನ್ ಎಂಬ ಫ್ರೆಂಚ್ ಲೇಖಕ ಫ್ರೆಂಚ್ ಭಾಷೆಯ ಪೂರ್ಣ ಪ್ರಮಾಣದ ದುರಂತನಾಟಕವನ್ನು ರಚಿಸಿದ. ರಾಬರ್ಟ್ ಗಾರ್ನೀರ್‍ನ ಕೈಯಲ್ಲಿ ಫ್ರೆಂಚ್ ದುರಂತನಾಟಕ, ಶೈಲಿಯ ಗಾಭೀರ್ಯದ ದೃಷ್ಟಿಯಿಂದ ಪ್ರಬುದ್ಧತೆ ಪಡೆಯಿತು. ಈತ ತನ್ನ ನಾಟಕಗಳಿಗೆ ಗ್ರೀಕ್ ಪುರಾಣಗಳಿಂದ ಮತ್ತು ಪ್ರಾಚೀನ ಇತಿಹಾಸದಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಂಡ. ಲೇ ಜೂ ಇವೇಸ್ ಎಂಬುದು ಇವನ ಉತ್ತಮ ಗಂಭೀರ ನಾಟಕವಾಗಿದೆ. ಲಾರಿವೆ ಎಂಬ ಕವಿ ನಿತ್ಯಜೀವನದಿಂದ ವಸ್ತುಗಳನ್ನು ತೆಗೆದುಕೊಂಡು ಅನೇಕ ವೈನೋದಿಕಗಳನ್ನು ಬರೆದ. ಇವನ ವೈನೋದಿಕಗಳು ಭಾಷೆಯಲ್ಲೂ ವಸ್ತುನಿರ್ವಹಣೆಯಲ್ಲೂ ಸ್ವಚ್ಚಂದವಾಗಿವೆ ಎಂಬ ಟೀಕೆಗೆ ಒಳಗಾಗಿದ್ದವು.
16ನೆಯ ಶತಮಾನದಲ್ಲಿ ನಡೆದ ಧಾರ್ಮಿಕ ಮತ್ತು ಅಂತಃಕಲಹಗಳು ಫ್ರಾನ್ಸ್‍ನ ಸಾಹಿತ್ಯ ಚಟುವಟಿಕೆ ಚುರುಕುಗೊಳ್ಳಲು ಕಾರಣವಾಯಿತು. ಈ ಶತಮಾನದಲ್ಲಿ ಕೇವಲ ಕೆಲವರಿಗಾಗಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳು 17ನೆಯ ಶತಮಾನದಲ್ಲಿ ಜನಸಾಮಾನ್ಯರಿಗಾಗಿಯೂ ಪ್ರದರ್ಶನಗೊಳ್ಳಲು ತೊಡಗಿದವು. ಅಲೆಕ್ಸಾಂಡರ್ ಹಾರ್ಡಿ (1560-1631) ಈ ಕಾಲದ ಪ್ರಸಿದ್ದ ನಾಟಕಕಾರನೂ ನಟನೂ ಆಗಿದ್ದ. ಇವನ ವೈನೋದಿಕಗಳು ಮತ್ತು ಕಟುವಿಡಂಬನಾತ್ಮಕ ನಾಟಕಗಳು ರಂಗಭೂಮಿಯ ಮೇಲೆ ಪ್ರಯೋಗಗೊಂಡವು. ಇವನು ಸು. 800 ನಾಟಕಗಳನ್ನು ಬರೆದಿದ್ದಾನೆಂದು ಪ್ರತೀತಿ ; ಇವನೂ ತನ್ನ ನಾಟಕಗಳಲ್ಲಿ ಸ್ವಚ್ಚಂದ ಭಾಷೆ ಮತ್ತು ಸಂದರ್ಭಗಳನ್ನು ಚಿತ್ರಿಸುತ್ತಿದ್ದುದರಿಂದ ಸಭ್ಯರೂ ಅದರಲ್ಲಿಯೂ ಸ್ತ್ರೀಯರು ಈ ನಾಟಕಗಳಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲವೆಂದು ತಿಳಿದುಬರುತ್ತದೆ.
ಕಾರ್ಡಿನಲ್ ರಿಚಲ್ಯೂ ಅಧಿಕಾರಕ್ಕೆ (1624) ಬಂದ ಮೆಲೆ ಸಾಹಿತ್ಯ ಮತ್ತು ನಾಟಕಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿತು. ಇವನ ಪೋಷಣೆಯಲ್ಲಿ ನಾಟಕ ರಚನೆಮಾಡಿದ ಮುಖ್ಯ ನಾಟಕಕಾರನೆಂದರೆ ರೋಟ್‍ರೂ. ಇವನು ಅನೇಕ ದುರಂತ ಹಾಗೂ ಹಾಸ್ಯ ನಾಟಕಗಳನ್ನು ಬರೆದ. ರಿಚಲ್ಯೂನ ಮೇಲ್ವಿಚಾರಣೆಯಲ್ಲಿ ರಚನೆಗೊಂಡ ಈ ನಾಟಕಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಸ್ವಚ್ಚಂದತೆ ಅಶ್ಲೀಲತೆಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾದವು. ಅನೇಕ ನಾಟಕಗಳು ಇವನ ಅರಮನೆಯ ನಾಟಕ ಶಾಲೆಯಲ್ಲಿ ಪ್ರದರ್ಶನಗೊಂಡವು. 1630ರಲ್ಲಿ ಚಾಪಿಲಿನ್ ಎಂಬ ವಿದ್ವಾಂಸ ನಾಟಕ ಕಲೆಯನ್ನು ಕುರಿತು ಬರೆಯುತ್ತ "ನಾಟಕಕಾರರು ತಮ್ಮ ನಾಟಕಗಳಲ್ಲಿ ಮೂರು ಏಕತೆಗಳನ್ನು ಶ್ರದ್ಧೆಯಿಂದ ಪಾಲಿಸಬೇಕು. ಕಾಲದ ಏಕತೆ ಎಂದರೆ ಒಂದು ದಿನದ 24 ಗಂಟೆಗಳು; ಒಂದೇ ಆದ ಕಾರ್ಯಗಳ ಸರಪಣಿ ಒಂದೇ ಸ್ಥಳದಲ್ಲಿ ನಡೆದು ಮುಗಿಯಬೇಕು. ನಾಯಕ ಉನ್ನತ ವಂಶಕ್ಕೆ ಸೇರಿದವನಾಗಿರಬೇಕು. ಅವನ ನಡವಳಿಕೆ ಗಂಭೀರವಾಗಿರಬೇಕು. ರಂಗದ ಮೇಲೆ ಕೂಗಾಟ, ಅತಿರೇಕದ ನಡವಳಿಕೆ ಇರಕೂಡದು" ಎಂಬ ನಿಯಮಗಳನ್ನು ಹಾಕಿದ. ಇವು ಫ್ರಾನ್ಸ್‍ನ `ನವ ಅಭಿಜಾತ ನಾಟಕಕ್ಕೆ ಮಾರ್ಗದರ್ಶಕ ಸೂತ್ರಗಳಾದವು. ಈ ಸೂತ್ರಗಳನ್ನೆಲ್ಲ ಅನುಸರಿಸಿ ಬರೆಯಲಾದ ಪ್ರಥಮ ಕೃತಿಯೆಂದರೆ ಮೇರೆ ಎಂಬಾತ ಬರೆದ ಸೋಫಿನಿಸ್ಟ ಎಂಬ ನಾಟಕ.
ಫ್ರೆಂಚ್ ಸಾಹಿತ್ಯದಲ್ಲಿ ನಾಟಕ ಪ್ರಕಾರಕ್ಕೆ ಗೌರವ ತಂದುಕೊಟ್ಟವನು ಹಾಗೂ ಫ್ರೆಂಚ್ ರಂಗಭೂಮಿಯ ಪುನರುತ್ಥಾನಕ್ಕೆ ಕಾರಣನಾದವನು ಕಾರ್ನೀಲ್. ಈತ ನವ ಅಭಿಜಾತ ಸೂತ್ರಗಳನ್ನು ತನ್ನ ನಾಟಕಗಳಲ್ಲಿ ಸಾಮಾನ್ಯವಾಗಿ ಅನುಸರಿಸಿದ್ದಾನೆ. ಹಾಸ್ಯನಾಟಕಗಳನ್ನು ಬರೆಯುವುದರ ಮೂಲಕ ಈತ ನಾಟಕ ರಚನೆಯನ್ನು ಆರಂಭಿಸಿದ. ಮೆಲಿಟೆ ಎಂಬುದು ಇವನ ಮೊದಲ ಹಾಸ್ಯನಾಟಕ. ಮೂಲತಃ ವಕೀಲನಾಗಿದ್ದ ಇವನು ರಂಗಭೂಮಿಯ ಕಡೆಗೆ ಆಕರ್ಷಿತನಾಗಲು ಕಾರಣ ಇವನಿಗಿದ್ದ ಊರಿಗೇ ಒಂದು ನಾಟಕ ಕಂಪೆನಿ ಬಂದು ನಾಟಕಗಳನ್ನಾಡಿದ್ದು. ಅನಂತರದ ವರ್ಷಗಳಲ್ಲಿ ಪ್ಯಾರಿಸ್‍ಗೆ ಬಂದು ಇವನು ಹಲವಾರು ಹಾಸ್ಯನಾಟಕಗಳನ್ನು ರಚಿಸಿದ. ಇವನು ನಾಟಕರಚನೆಯನ್ನು ಆರಂಭಿಸಿದ ಸಂದರ್ಭದಲ್ಲಿ ಇನ್ನೂ ನವ ಅಭಿಜಾತ ನಾಟಕದ ಸೂತ್ರಗಳು ಸ್ಪಷ್ಟವಾಗಿ ರೂಪುಗೊಂಡಿರಲಿಲ್ಲ. ರೋಟ್ರೊ ಮೊದಲಾದ ನಾಟಕಕಾರರೂ ಟ್ರ್ಯಾಜಕಾಮಿಡಿಗಳನ್ನು ಬರೆಯುತ್ತಿದ್ದರು. ನಾಟಕ ವಿಮರ್ಶಕರು ಫ್ರೆಂಚ್ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಯಾವ ಮಾರ್ಗವನ್ನು ಅನುಸರಿಸಬೇಕೆಂದು ಚರ್ಚಿಸುತ್ತಿದ್ದರು. ಮೇರೆ ಈ ನವ ಅಭಿಜಾತ ನಾಟಕದ ಪ್ರವರ್ತಕನಾದ. ಈ ಕಾಲದಲ್ಲಿಯೇ ಕಾರ್ನೀಲನ ಲೇಸಿಡ್ ಎಂಬ ನಾಟಕ ಫ್ರೆಂಚ್ ಅಭಿಜಾತ ರೂಪಕಮಾರ್ಗದ ಶ್ರೇಷ್ಠಕೃತಿಯೆಂದು ಪರಿಗಣಿತವಾಗಿದೆ. ಈ ಕೃತಿಯನ್ನು ರಚಿಸುವುದಕ್ಕೂ ಮೊದಲೇ ಈತ ಮಿದಿ ಎಂಬ ಉತ್ತಮ ಟ್ರ್ಯಾಜಿಡಿಯನ್ನು 1635ರಲ್ಲಿ ಬರೆದಿದ್ದ. ಆದರೆ ಅದು ಅಲ್ಲಿಯವರೆಗೆ ಬಂದಿದ್ದ ದುರಂತ ನಾಟಕಗಳಲ್ಲಿ ಶ್ರೇಷ್ಠವಾದದ್ದಾದರೂ 1637ರ ಜನವರಿಯಲ್ಲಿ ರಂಗಪ್ರದರ್ಶನ ಕಂಡ ಲೇಸಿಡ್ ಕೃತಿ ಫ್ರೆಂಚ್ ದುರಂತನಾಟಕಗಳಲ್ಲಿ ಶ್ರೇಷ್ಠವೆಂದು ಪ್ರಸಿದ್ದಿಗೆ ಬಂತು. ಆದರೆ ಇದರ ಯಶಸ್ಸನ್ನು ಕಂಡು ಸಹಿಸಲಾರದ ಕೆಲವರು ಕ್ಷುಲ್ಲಕ ಕಾರಣಕ್ಕಾಗಿ ಕೃತಿಯನ್ನು ತೆಗೆಳಿದರು. ದುರದೃಷ್ಟಕರ ವಿಷಯವೆಂದರೆ ಫ್ರ್ರೆಂಚ್ ಅಕಾಡೆಮಿ ಕೂಡ ಇದನ್ನು ಟೀಕಿಸಿತು. ಆದರೆ ಅಸಂಖ್ಯಾತ ಜನಸಾಮಾನ್ಯ ಸಹೃದಯರು ಇದನ್ನು ನೋಡಿದ್ದಷ್ಟೇ ಅಲ್ಲದೆ ಹಾಡಿ ಹೊಗಳಿದರು. ವಿದ್ವಾಂಸರ ಟೀಕೆಯಿಂದ ಮನನೊಂದ ಕಾರ್ನೀಲ್ ಮೂರು ವರ್ಷಗಳ ಕಾಲ ಏನನ್ನೂ ಬರೆಯಲಿಲ್ಲ. ಆದರೆ 1640-43ರ ಅವಧಿಯಲ್ಲಿ ಹೊರೇಸ್, ಸಿನ್ನಾ, ಪಾಲಿಯೂಕ್ಟೆ ಎಂಬ ಮೂರು ಗಂಭೀರ ನಾಟಕಗಳನ್ನು ರಚಿಸಿದ. ಥಿಯೋಡೋರ್, ಪೆರಾಕ್ಲಿಯಸ್ ಆಂಡ್ರೊಮಿಡಿ, ನಿಕೋಮಿಡಿ, ಪರ್ಥರಿಟೆ ಇವು ಇವನ ಇತರ ಕೆಲವು ಮುಖ್ಯ ನಾಟಕಗಳು. ತನ್ನ ಇಳಿಗಾಲದಲ್ಲಿ ಮೋಲಿಯೆನ ಜತೆ ಸೇರಿ ಸೈಕೆ ಎಂಬ ಅಪೇರಾವನ್ನು ಪ್ರದರ್ಶಿಸಿದ. ಘನ ಅಭಿಪ್ರಾಯಗಳು, ವಿವಿಧ ಉಕ್ತಿ ವೈಚಿತ್ರ್ಯಗಳ ಬಳಕೆ_ ಇವು ಕಾರ್ನೀಲನ ನಾಟಕಗಳ ವೈಶಿಷ್ಟ್ಯ.
ರಾಸೀನ್ (1639-99) ಫ್ರೆಂಚ್ ರುದ್ರನಾಟಕಕಾರರಲ್ಲಿ ವಿಶಿಷ್ಟನಾದವನು. ವ್ಯಕ್ತಿತ್ವದಲ್ಲಿ ಬದುಕಿನಲ್ಲಿ, ನಾಟಕರಚನೆಯಲ್ಲಿ ಇತರರಿಂದ ಪ್ರತ್ಯೇಕವಾಗಿ ನಿಲ್ಲುವಂತಹವನು. 1664ರಲ್ಲಿ ಮೊದಲ ನಾಟಕ ಪ್ರದರ್ಶನಗೊಂಡಿತು. ಈ ಅವಧಿಯಲ್ಲಿ ಇವನು ತನ್ನ ನಾಟಕಗಳ ಮೂಲಕ ಫ್ರೆಂಚ್ ಅಭಿಜಾತ ನಾಟಕ ಪರಂಪರೆಯ ಶ್ರೇಷ್ಠ ನಾಟಕಕಾರನಾಗಿ ರೂಪುಗೊಂಡಿದ್ದ. ಫ್ರೆಂಚ್ ರಂಗಭೂಮಿಗೆ ಅಲ್ಲಿಯವರೆಗೆ ಇರದಿದ್ದ ಗುಣಲಕ್ಷಣಗಳನ್ನು ರಾಸೀನ್ ತಂದುಕೊಟ್ಟ. ಇವನ ನಾಟಕಗಳಲ್ಲಿನ ಸಂವಾದ ರೊಮ್ಯಾಂಟಿಕ್ ಆದದ್ದಾದರೂ ಅಭಿಜಾತೆಯ ಸಂಯಮದಿಂದ ಕೂಡಿದ್ದು. ಇವನು ತನ್ನ ಕಾಲದ ಭಾಷಾರೀತಿಯನ್ನು ತನ್ನ ನಾಟಕಗಳ ಸಂವಾದಗಳಲ್ಲಿ ಬಳಸಿಕೊಳ್ಳುವ ವಿಧಾನ ವಿಶೇಷವಾದದ್ದು. ನಾಟಕೀಯತೆ ಹಾಗೂ ಸಹಜತೆಯನ್ನು ಒಟ್ಟಿಗೆ ಸಮತೋಲನಗೊಳಿಸುವ ವಿಶೇಷ ಶೈಲಿ ಈತನದು. ರಾಸೀನನ ಪದ್ಯವನ್ನು ಅನುಸರಿಸುವುದು ಕಷ್ಟಸಾಧ್ಯ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. ಅಭಿಜಾತ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿ ರಾಸೀನನ ಬರವಣಿಗೆ ಕಂಡುಬರುತ್ತದೆ. ತನ್ನ ಕಾಲಕ್ಕೆ ಹೊಂದಿಕೊಳ್ಳುವಂತೆ ಪ್ರಾಚೀನ ಅಭಿಜಾತ ಶೈಲಿಯನ್ನು ಅಳವಡಿಸಿಕೊಂಡದ್ದು ಇವನ ಸಾಧನೆ. ರಾಸೀನನ ಸ್ಥಾನಮಾನಗಳ ನಿರ್ಧಾರ ಜಾಗತಿಕ ನಾಟಕದ ಸಂದರ್ಭದಲ್ಲಿ ತೊಡಕಿನದು ಇವನ ಶೈಲಿ ಮತ್ತು ಆಯ್ಕೆಮಾಡಿಕೊಳ್ಳುವ ವಸ್ತು ಅನೇಕ ಪರಿಮಿತಿಗಳಿಂದ ಕೂಡಿದ್ಧಾಗಿದೆ. ಆದರೆ ಈತ ಸರಳ ವಿಧಾನಗಳ ಮೂಲಕವೇ ನಾಟಕೀಯ ಆಸಕ್ತಿಯನ್ನು ಸಮರ್ಥವಾಗಿ ಉಂಟುಮಾಡಬಲ್ಲ. ಹಿಂಸಾತ್ಮಕ ಕ್ರಿಯೇ, ಸಂದರ್ಭಗಳ ವೈಭವೀಕರಣಗಳಿಲ್ಲದೆಯೂ ದುರಂತ ನಾಟಕದ ಪರಿಣಾಮವನ್ನು ತರಬಹುದೆಂಬುದನ್ನು ಈತ ತನ್ನ ನಾಟಕಗಳ ಮೂಲಕ ತೋರಿಸಿಕೊಟ್ಟ. ಫಾತ್ರಗಳ ಅಂತರಂಗದ ಭಾವನೆಗಳ ಚಲನೆಗಳನ್ನು ಸೂಕ್ಷ್ಮವಾಗಿ, ಪಾತ್ರಗಳ ಮೂಲಕ ಅಭಿವ್ಯಕ್ತಿಸಿದರೆ ಅದು ದುರಂತಾನುಭವವನ್ನು ಸಮರ್ಥವಾಗಿ ಉಂಟುಮಾಡುತ್ತದೆ ಎಂಬುದನ್ನು ತನ್ನ ನಾಟಕಗಳಲ್ಲಿ ಸಾಧಿಸಿ ತೋರಿಸಿದ. ಇವನ ನಾಟಕಗಳ ವಿಧಾನ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಫ್ರೆಂಚ್ ನಾಟಕಗಳ ಮೇಲಷ್ಟೇ ಅಲ್ಲದೆ ಫ್ರಾನ್ಸ್‍ನ ಹೊರಗೂ ಪ್ರಭಾವ ಬೀರಿತು. ಆಂಡ್ರೊಮ್ಯಾಕೆ ಎಂಬ ನಾಟಕದ ಮೂಲಕ ರಾಸೀನನ ವಿಶಿಷ್ಟ ನಾಟಕ ಪ್ರತಿಭೆ ಪ್ರಕಾಶಕ್ಕೆ ಬಂದಿತು. ಇವನ ಏಕಮಾತ್ರ ವಿನೋದನಾಟಕ `ಲೇ ಫ್ಲೆಡ್ಯೂಸ್ ಇದರ ಮೇಲೆ ಅರಸ್ಟೋಫೆನೀಸ್‍ನ ಪ್ರಭಾವ ಗಾಢವಾಗಿದೆ. ಬ್ರಿಟಾನಿಕಸ್ (1669), ಬೆರೇನಿಸಲ್ (1670), ಬಜಾಸೆಟ್ (1672), ಮತ್ರಿದಾತೆ (1773), ಇಫಿಜೀನಿ (1674), ಫೀಡ್ರೆ (1677) _ ಇವು ಇವನ ಕೆಲವು ನಾಟಕಗಳು.
ರಿಚಲ್ಯೂ ಎಂಬಾತ ಒಂದು ಕಥಾವಸ್ತುವನ್ನು ಕೊಟ್ಟು ಬಾಯ್‍ಸೊಬ್ರರ್ಟ್, ಕೊಲೆಟೆಟ್, ಕಾರ್ನೀಲ್, ಲೆಸ್ಟೊಯ್‍ಲಿ ಮತ್ತು ರೋಟ್ರೂ_ ಈ ನಾಟಕಕಾರೆರಿಗೆ ಒಂದು ವೈನೊದಿಕ ರಚಿಸಲು ನಿರ್ದೇಶಿಸಿದ. 1638ರಲ್ಲಿ ಆ ಕೃತಿ ಪ್ರಕಟವಾಯಿತು. ಹೊಸ ವೈನೋದಿಕಕ್ಕೆ ಮಾದರಿಯನ್ನು ಸೃಷ್ಟಿಸುವುದು ಇದರ ಮೂಲೋದ್ದೇಶವಾಗಿತ್ತು. ರಿಚಲ್ಯೂಗೆ ಅಭಿಜಾತ ನಾಟಕದ ಕಟ್ಟುನಿಟ್ಟು, ಸಂಯಮ, ಕ್ರಮಬದ್ದತೆ, ನಿಯಮಗಳ ಅನುಸರಣೆ _ ಇವು ಪ್ರಿಯವಾದಂತಹವು. ಈ ರೀತಿಯಲ್ಲಿ ಅವನು ಬರೆಸಿದ ನಾಟಕ ಲಾ ಕಾಮಿಡಿ ಡೆಸ್ ಟುಯಿಲರಿಸ್. ಈ ಐವರು ನಾಟಕಕಾರರಲ್ಲಿ ಅತ್ಯಂತ ಪ್ರತಿಭಾವಂತನೆಂದರೆ ಕಾರ್ನೀಲ್. ವೆಲಿಟೆ ಎಂಬ ನಾಟಕದಲ್ಲಿ ಇವನ ನಾಟಕೀಯ ಕಲೆಯ ಪರಿಣತಿ ವ್ಯಕ್ತವಾಗುತ್ತದೆ. ಈ ನಾಟಕ ಮತ್ತು ಲಾ ಕಾಮಿಡಿ ಡೆಸ್‍ಟುಯಿಲರಿಸ್ ನಾಟಕದ ರಚನೆಯ ಮಧ್ಯೆ ಇನ್ನೂ ಹಲವಾರು ನಾಟಕಗಳು ಹೊರಬಿದ್ದವು. ದಿ ವಿಡೊ (1633), ದಿ ಪ್ಯಾಲೆಸ್ ಗ್ಯಾಲರಿ (1634). ದಿ ಕಾಮಿಕ್ ಇಲ್ಯೂಷನ್ (1639) _ ಈ ನಾಟಕಗಳು ಕಾರ್ನೀಲನನ್ನು ಒಬ್ಬ ವೈನೋದಿಕ ನಾಟಕಕಾರರನ್ನಾಗಿಯೂ ಗುರುತಿಸುವಂತೆ ಮಾಡಿದವು. ಒಂದು ಅಭಿಜಾತ ನಿಖರತೆ, ಸರಳ ವಿಧಾನ, ಸಮತೋಲನವುಳ್ಳ ದೃಶ್ಯಜೋಡಣೆ ಈ ವೈನೋದಿಕಗಳ ವೈಶಿಷ್ಟ್ಯ. ಈ ನಾಟಕಗಳು ಅಲ್ಲಿಯವರೆಗೆ ರಚನೆಗೊಂಡ ಹಾಸ್ಯನಾಟಕಗಳ ಅಸ್ತವ್ಯಸ್ತತೆಯನ್ನು ಹೋಗಲಾಡಿಸಿ ಆ ಪ್ರಕಾರಕ್ಕೆ ಒಂದು ಗಾಂಭೀರ್ಯ ತಂದುಕೊಡುವ ಕೆಲಸ ಮಾಡಿದವು. ಇದಲ್ಲದೆ ನಿಜವಾದರೂ ಕಾರ್ನೀಲನನ್ನು ಫ್ರೆಂಚ್ ವೈನೋದಿಕದ ಮುನ್ಸೂಚನಕನೆಂದು ಕರೆಯಬಹುದೆ ವಿನಾ ಈ ಪ್ರಕಾರದ ಪರಿಣತ ಎನ್ನಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕೂಡ ಇದೆ. ಇವನ ದಿ ಲಯರ್ (1644) ಎಂಬ ವಿನೋದ ನಾಟಕ ವೈನೋದಿಕದ ಗುಣಲಕ್ಷಣಗಳು ಹೇಗಿರಬೇಕೆಂಬುದಕ್ಕೆ ಉತ್ತಮ ದೃಷ್ಟಾಂತವಾಗಿದೆ. ಇಲ್ಲಿ ಸ್ಪ್ಯಾನಿಷ್ ವೈನೋದಿಕದ ಪ್ರಭಾವವನ್ನೂ ಗುರುತಿಸಬಹುದು. ಅಲ್ಲದೆ ಈ ಕಾಲದಲ್ಲಿ ಇತರರಿಂದ ರಚನೆಗೊಂಡ ವೈನೋದಿಕಗಳ ಮೇಲೂ ಸ್ಪ್ಯಾನಿಷ್ ವೈನೋದಿಕದ ಪ್ರಭಾವ U್ಫಢವಾಗಿರುವುದನ್ನು ಗುರುತಿಸಬಹುದು. ಅನಂತರದ ದಶಕಗಳಲ್ಲಿ ಫಿಲಿಪ್ಪೆ, ಕ್ವಿನಾಲ್ಟ್, ಸ್ಯಾಮ್ಯುಲ್, ಚಪ್ಪುಸಿಯು, ರೇಮಾಂಡ್ ಪಾಯ್‍ಸನ್, ಮೊದಲಾದವರೂ ವೈನೋದಿಕಗಳನ್ನು ರಚಿಸಿದ್ದಾರೆ.
ಮೋಲಿಯರ್ (1622-73) ಎಂದು ಜಗತ್ಪ್ರಸಿದ್ಧನಾದ ವೈನೋದಿಕ ನಾಟಕಕಾರ ಜೀನ್ ಬಾಪ್‍ಟಿಸ್ಟ್ ಪ್ರೊಕ್ಯುಲಿನ್. ಇವನು ನಾಟಕಗಳನ್ನು ರಚನೆಮಾಡತೊಡಗಿದ ಸಂದರ್ಭದಲ್ಲಿ, 17ನೆಯ ಶತಮಾನದ ಕೊನೆಯ ಪೂರ್ವಾರ್ಧಕ್ಕೆ ಸೇರಿದ ಮೇಲಿನ ನಾಟಕಕಾರರೆಲ್ಲ ಆಗಿಹೋಗಿದ್ದರು. ವೈನೋದಿಕ ನಾಟಕಕಾರನಾದ ಈತನನ್ನು ಕೆಲವರು ಇಂಗ್ಲಿಷ್ ವಿಮರ್ಶಕರು ಷೇಕ್‍ಸ್ಪಿಯರ್‍ಗೆ ಸಮಾನನೆಂದು ಪರಿಗಣಿಸುವುದುಂಟು. ವಿದ್ಯಾವಂತನೂ ಸುಸಂಸ್ಕøತನೂ ವಕೀಲನೂ ಆಗಿದ್ದ ಇವನು ನಟನೂ ಆಗಿದ್ದ. ಈತ ತನ್ನ ವೈನೋದಿಕಗಳು ಹಾಸ್ಯನಾಟಕಗಳು, ವಿಡಂಬನಾತ್ಮಕ ನಾಟಕಗಳು ಇವುಗಳ ಮೂಲಕ ಫ್ರೆಂಚ್ ಸಮಾಜದ ಎಲ್ಲ ಕ್ಷೇತ್ರಗಳನ್ನೂ ವಿಡಂಬಿಸಿದ. ರಾಜಾಸ್ಥಾನದ ಆಸ್ಥಾನಿಕರು, ಕುಲೀನ ಶ್ರೀಮಂತರು, ಪಾದ್ರಿಗಳು, ವೈದ್ಯರು ಇವರೆಲ್ಲರೂ ಇವನ ವಿಡಂಬನೆಗೆ ಗುರಿಯಾದವರೇ. 14ನೆಯ ಲೂಯಿ ಮತ್ತು ಮೊಲೀಯಾರ್ ಇವರಿಬ್ಬರ ಸಂಬಂಧ ಸ್ನೇಹಮಯವಾಗಿದ್ದು ಮೊಲೀಯರ್‍ನಿಗೆ ಲೂಯಿಯಿಂದ ಸಂಭಾವನೆ ದೊರಕುತ್ತಿತ್ತು. ಬಹುಶಃ ಈ ಕಾರಣದಿಂದ ಇವನ ಬಗೆಗಿನ ಇತರರ ಅಸಮಧಾನ ಇವನಿಗೆ ಏನೂ ತೊಂದರೆ ಮಾಡದಿದ್ದರೂ ಒತ್ತಾಯಕ್ಕೆ ಮಣಿದು ಲೂಯಿ ಇವನ ಕೆಲವು ವಿಡಂಬನಾತ್ಮಕ ರೂಪಕಗಳನ್ನು ನಿಷೇಧಿಸಿದುದೂ ಉಂಟು. 1643ರಲ್ಲಿ ಮೋಲಿಯರ್ ತನ್ನದೇ ಆದ ಒಂದು ನಾಟಕ ಕಂಪೆನಿಯನ್ನು ಆರಂಭಿಸಿದ. ಈ ಕಂಪೆನಿಯೊಂದಿಗೆ ಬೇರೆ ಬೇರೆ ಪ್ರಾಂತ್ಯಗಳಿಗೆ ಹೋಗಿ ನಾಟಕಗಳನ್ನು ಪ್ರದರ್ಶಿಸಿದ. 1658ರ ಕೊನೆ ಭಾಗದಲ್ಲಿ ಇವನ ನಾಟಕ ಖಂಪೆನಿ ರಾಜಾಸ್ಥಾನಕ್ಕೂ ಕಾಲಿಟ್ಟು ಅಲ್ಲಿ ನಾಟಕಗಳ ಪ್ರದರ್ಶನ ನೀಡಿತು. ಲೌವ್ ಈಸ್ ದಿ ಬೆಸ್ಟ್ ಡಾಕ್ಟರ್ ಎಂಬ ಹಾಸ್ಯನಾಟಕ 1655ರಲ್ಲಿ ಪ್ರಯೋಗಗೊಂಡಿತು. ಅನಂತರ ಇವನ ಶ್ರೇಷ್ಠ ನಾಟಕವೆಂದು ಪರಿಗಣಿತವಾಗಿರುವ ದಿ ಮಿಸ್ ಆಂತ್ರೋಪ್ (1666) ಎಂಬುದು ರಚನೆಗೊಂಡಿತು. ಈ ನಾಟಕದಲ್ಲಿ ಹಾಸ್ಯ ದೃಷ್ಟಿಕೋನದಿಂದ ಜೀವನವನ್ನು ನೋಡಿದರೂ ಜೀವನದ ಇನ್ನೂ ಆಳವಾದ ಅನುಭವಗಳು ಅನ್ವೇಷಿತವಾಗಿ ಈ ನಾಟಕ ಸಾಂಪ್ರದಾಯಿಕ ಹಾಸ್ಯನಾಟಕದ ಪರಿಧಿಯಿಂದಾಚೆಗೆ ಕೈಚಾಚಿ ತಾತ್ತ್ವಿಕವೂ ಆಗುತ್ತದೆ. ಇವನ ಮತ್ತೊಂದು ಪ್ರಸಿದ್ದ ನಾಟಕ ತಾರ್ತೂಫ್. ಇವನ ಕೊನೆಗಾಲದಲ್ಲಿ ರಚನೆಗೊಂಡ ಮುಖ್ಯ ನಾಟಕಗಳಿವು: `ದಿ ಡಾಕ್ಟರ್ ಇನ್‍ಸ್ಪೈಟ್ ಆಫ್ ಹಿಮ್‍ಸೆಲ್ಫ್ (1666). ದಿ ಮೈಸರ್ (1668), ದಿ ಮ್ಯಾಗ್ನಿಫಿಸೆಂಟ್ ಲವರ್ (1670), ದಿ ಬೂಜ್ರ್ವಾ ಜೆಂಟಲ್‍ಮನ್ (1673). ಇದರ ನಾಲ್ಕನೆಯ ಪ್ರಯೋಗದಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ಮೋಲಿಯರ್ ರಂಗದ ಮೇಲೆಯೇ ಕುಸಿದು ಬಿದ್ದು ಮರಣಹೊಂದಿದ.
ಮೋಲಿಯರ್ ತನ್ನ ನಾಟಕಗಳ ಮೂಲಕ ವಿಶಿಷ್ಟ ವೈನೋದಿಕ ಪ್ರಪಂಚವನ್ನು ಸೃಷ್ಟಿಸಿ ಪ್ರಪಂಚದ ಅತಿಶ್ರೇಷ್ಠ ವೈನೊದಿಕ ನಾಟಕಕಾರನೆಂದು ಪರಿಗಣಿತನಾಗಿದ್ದಾನೆ. ಇವನ ನಾಟಕಗಳ ಶಕ್ತಿಯೆಂದರೆ, ಪ್ರೇಕ್ಷಕರಲ್ಲಿ ಆಲೋಚನಾಪರ ನಗೆಯನ್ನು ಪ್ರಚೋದಿಸುವುದು, ತಾರ್ಕಿಕ ಸಮತೋಲನ. ಅತಿರೇಕಗಳ ನಿವಾರಣೆ. ಜೀವನದ ವಾಸ್ತವಿಕತೆಗಳನ್ನು ಒಪ್ಪಿಕೊಳ್ಳುವುದು. ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದು._ ಇಂತಹ ಕಾರ್ಯಗಳನ್ನು ಇವನ ನಾಟಕಗಳು ಜನರನ್ನು ನಗಿಸುತ್ತಲೇ ಮಾಡುತ್ತವೆ.
ವಾಲ್ಟೇರ್ ಎಂಬ ನಾಟಕಕಾರ ಕೂಡ ತನ್ನ ನಾಟಕಗಳಲ್ಲಿ ರಾಜಪ್ರತಿನಿಧಿತ್ವವನ್ನು ಕಟುವಾಗಿ ವಿಡಂಬಿಸಿದ್ದಾನೆ. ಇವನ ಹಾಸ್ಯನಾಟಕಗಳು ಕಟುವಿಡಂಬನಾತ್ಮಕ ಭತ್ರ್ಸನೆಗಳಾಗಿವೆ. ಇವನು ಹಲವಾರು ಗಂಭೀರನಾಟಕಗಳನ್ನೂ ಬರೆದಿದ್ದಾನೆ. ಆದರೆ ರಂಗಭೂಮಿಗೆ ಮತ್ತು ನಾಟಕ ವಿನ್ಯಾಸಕ್ಕೆ ಇವನ ವಿಶೇಷ ಕೊಡುಗೆ ಏನೂ ಇಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. ಜೈರ್ (1772) ಮತ್ತು ಮೆರೋಪ್ ಇವನ ಮುಖ್ಯ ನಾಟಕಗಳು. ರಿಚರ್ಡ್‍ಸನ್‍ನ ಕಾದಂಬರಿ ಪಮೀಲಾ ದ ನಾಟಕ ರೂಪವಾದ ನ್ಯಾನೈನ್ ಇವನ ಪ್ರಮುಖ ವಿಡಂಬನಕೃತಿ. ಫ್ರೆಂಚ್ ರಂಗಭೂಮಿ ಅನಂತರದ ದಿನಗಳಲ್ಲಿ ಅವನತಿಗಿಳಿಯಿತು. 14ನೆಯ ಲೂಯಿ ತನ್ನ ಮುದಿವಯಸ್ಸಿನಲ್ಲಿ ಅತಿಧಾರ್ಮಿಕ ಪ್ರವೃತ್ತಿಯವನಾಗಿ, ಧಾರ್ಮಿಕ ಕಟ್ಟುಪಾಡುಗಳನ್ನು ತನ್ನ ಪ್ರಜೆಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಿದ. ಇದರ ಪರಿಣಾಮವಾಗಿ ಇವನ ಪ್ರಜೆಗಳು ಬಹಿರಂಗದಲ್ಲಿ ಇವನು ಹಾಕಿದ ನಿಯಮಗಳನ್ನು ಅನುಸರಿಸುವಂತೆ ನಟಿಸಿ ಒಳಗೊಳಗೇ ಅತ್ಯಂತ ಸ್ವಚ್ಚಂದದ ಜೀವನವನ್ನು ನಡೆಸತೊಡಗಿದರು. ಲೂಯಿಯ ಮರಣದ ಅನಂತರ ಸಮಾಜದ ಈ ಸ್ವಚ್ಚಂದ ಪ್ರವೃತ್ತಿ ಮತ್ತೂ ಅತಿರೇಕಕ್ಕೆ ಹೋಯಿತು. ಇದರ ಪರಿಣಾಮ ನಾಟಕ ರಚನೆ ಮತ್ತು ರಂಗಭೂಮಿಯ ಮೇಲೂ ಆಗಿ ರಂಗಭೂಮಿಯ ಚಟುವಟಿಕೆಗಳು ಹಿನ್ನೆಲೆಗೆ ಸರಿದವು. ಆದರೂ ಡಿಡೆರಾಟ್ (1713-84) ಷೆನಿಯರ್ (1764-1811) ಮೊದಲಾದವರು ನಾಟಕಗಳನ್ನು ಬರೆದರು. ವಿಕ್ಟರ್ ಹ್ಯೂಗೊ ಮತ್ತು ಅಲೆಗ್ಸಾಂಡರ್ ಡ್ಯೂಮಾ ಮೊದಲಾದವರು 19ನೆಯ ಶತಮಾನದಲ್ಲಿ ರೊಮ್ಯಾಂಟಿಕ್ ವಸ್ತುಗಳನ್ನು ಆಯ್ಕೆಮಾಡಿಕೊಂಡು ನಾಟಕಗಳನ್ನು ರಚಿಸಿದರು. ಹೀಗಾಗಿ ಮತ್ತೆ ರಂಗಭೂಮಿಯ ಚಟುವಟಿಕೆಗಳು ಆರಂಭಗೊಂಡವು. ಇದೇ ಕಾಲದಲ್ಲಿ ಪ್ರಸಿದ್ಧಳಾದ ಮೆಡಾಂ ಸರಾ ಬೆರ್ನ್‍ಹಾರ್ಟ್ (1845-1923) ಎಂಬ ನಟಿಯನ್ನು ಅತ್ಯಂತ ಪ್ರತಿಭಾವಂತಳೆಂದು ಪರಿಗಣಿಸಲಾಗುತ್ತದೆ.
ಜರ್ಮನ್ ರಂಗಭೂಮಿ: 10ನೆಯ ಶತಮಾನದವರೆಗೆ ಜರ್ಮನಿಯಲ್ಲಿ ಯಾವ ನಾಟಕಗಳು ಇರಲಿಲ್ಲ. ಈ ಕಾಲಾವಧಿಯಲ್ಲಿ ಬದುಕಿದ್ದ ಹ್ರೊಟ್ಸ್‍ವಿಟ ಎಂಬ ಕ್ರೈಸ್ತ ಸನ್ಯಾಸಿನಿಯರ ಮಠದ ಅಧಿಕಾರಿಣಿಯೊಬ್ಬಳು ಸಂತರಿಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಲ್ಯಾಟಿನ್ ಭಾಷೆಯಲ್ಲಿ ನಾಟಕ ರಚಿಸಿದಳು. 12ನೆಯ ಶತಮಾನದಲ್ಲಿ ಜರ್ಮನರಿಗೆ ಪ್ರಿಯವಾದ ಕಲಾಪ್ರಕಾರವೆಂದರೆ ಸಂಗೀತವಾಗಿತ್ತು. ಈ ಕಾಲದಲ್ಲಿ ಷ್ರೋವ್ ಟ್ಯೂಸ್ಡೆ ಪ್ಲೇಸ್ ಎಂದು ಕರೆಯಲಾಗುತ್ತಿದ್ದ ಹಾಸ್ಯ ನಾಟಕಗಳು ರಚನೆಗೊಳ್ಳುತ್ತಿದ್ದವು. 15ನೆಯ ಶತಮಾನದಲ್ಲಿ ಈ ರೀತಿಯ ನಾಟಕಗಳನ್ನು ಮತ್ತು ಪವಾಡ ನಾಟಕಗಳನ್ನು ಹಲವಾರು ನಾಟಕಕಾರರು ರಚಿಸಿದರು. ಈ ಕಾಲದ ಪ್ರಸಿದ್ದ ನಾಟಕಕಾರರೆಂದರೆ ರಿಯುಚಲಿನ್. ಇವನು 1494ರ ವೇಳೆಗೆ ಹಲವಾರು ನಾಟಕಗಳನ್ನು ಲ್ಯಾಟಿನ್ ಭಾಷೆಯಲ್ಲಿ ರಚಿಸಿದ. ಈ ಕಾಲದಲ್ಲಿಯೇ (1480) ಅಪೋಥಿಯೋಸಸ್ ಆಫ್ ಪೋಪ್ ಎಂಬ ಒಂದು ಹಾಸ್ಯನಾಟಕ ಪ್ರಯೋಗವಾಯಿತು. ಇದೇ ಕಾಲದಲ್ಲಿ ಗಂಭೀರ ನಾಟಕಗಳೂ ವೈನೋದಿಕಗಳೂ ಟ್ರ್ಯಾಜಿಕಾಮಿಡಿಗಳೂ ರಚನೆಗೊಂಡವು. ಈ ಯುಗವನ್ನು ಸುಧಾರಣಾ ಮಹಾಯುಗ ಎಂದು ಕರೆಯಲಾಗುತ್ತದೆ.
ಇಟಲಿಯಲ್ಲಿ ಆರಂಭವಾದ ಪುನರುತ್ಥಾನದ ಪರಿಣಾಮ ಜರ್ಮನಿಯ ಮೇಲೂ ಆಗಿ ಅಲ್ಲಿ ಅದು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಇತರೆಡೆಗಳಲ್ಲಿ ಆದಂತೆಯೇ ಇಲ್ಲಿಯೂ ಜನರು ಜಾಗೃತರಾದರು. ಆಲೋಚಿಸತೊಡಗಿದರು. ಅಲ್ಲಿಯವರೆಗೆ ಬೇರುಬಿಟ್ಟಿದ್ದ ನಂಬಿಕೆಗಳನ್ನು ಪ್ರಶ್ನಿಸತೊಡಗಿದರು; ರೋಮನ್ ಕ್ಯಾಥೊಲಿಕ್ ಚರ್ಚಿನ ಆಚರೆಣೆಗಳನ್ನೂ ವಿಮರ್ಶಿಸತೊಡಗಿದರು. ಪುನರುತ್ಥಾನ ಕಾಲದ ವಿದ್ವಾಂಸರು ಸಮಾಜ ಸುಧಾರಣೆ ರಂಗಭೂಮಿ ಅತ್ಯುತ್ತಮ ಮಾಧ್ಯಮ ಎಂದು ತಿಳಿದು ಲ್ಯಾಟಿನ್ ಮತ್ತು ದೇಶೀಯ ಭಾಷೆಯಲ್ಲಿ ಬೈಬಲ್ಲಿನ ಕಥೆಗಳನ್ನು ನಾಟಕಗಳನ್ನಾಗಿ ಪರಿವರ್ತಿಸಿ ಪ್ರಯೋಗಿಸಿದರು. ಇದಕ್ಕೆ ಲೂಥರ್ ಪ್ರೋತ್ಸಾಹ ನೀಡಿದ. ಈ ಬಗೆಯ ಪ್ರಚೋದನೆಯಿಂದ ಹ್ಯಾನ್ಸ್‍ಸ್ಯಾಕ್ ಎಂಬುವವನು ಅನೇಕ ಜರ್ಮನ್ ನಾಟಕವನ್ನು ಬರೆದ. ಇವನು ಜರ್ಮನ್ ರಂಗಭೂಮಿಯ ಪಿತಾಮಹನೆನಿಸಿಕೊಂಡಿದ್ದಾನೆ.
16 ಮತ್ತು 17 ನೆಯ ಶತಮಾನದಲ್ಲಿ ಸ್ಕೂಲ್ ಕಾಮಿಡಿ ಎಂದು ಕರೆಯಲಾಗುತ್ತಿದ್ದ ಹಾಸ್ಯ ನಾಟಕಗಳು ರಚನೆಗೊಂಡವು. ಇವುಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರಯೋಗಿಸುತ್ತಿದ್ದರು. 16ನೆಯ ಶತಮಾನದ ಕೊನೆಯ ಭಾಗದಲ್ಲಿ ಇಂಗ್ಲೆಂಡಿನಿಂದ ಆಗಮಿಸಿದ್ದ ಕೆಲವರು ಹಾಸ್ಯಗಾರರು ಜರ್ಮನಿಯಲ್ಲಿ ತಮ್ಮ ಭಾಷೆಯಲ್ಲಿಯೇ ಹಲವಾರು ನಾಟಕಗಳನ್ನಾಡಿದರು. ಇದು ಬಹಳ ಪರಿಣಾಮ ಬೀರಿತು. ನೂರೆಂಬರ್ಗ್ ಮತ್ತು ಆಗ್ಸ್‍ಬರ್ಗ್ ನಗರಗಳಲ್ಲಿ ನಾಟಕ ಶಾಲೆಗಳು ನಿರ್ಮಾಣಗೊಂಡವು. ಇದನ್ನನುಸರಿಸಿ ಇತರ ನಗರಗಳಲ್ಲೂ ನಾಟಕ ಶಾಲೆಗಳು ನಿರ್ಮಾಣಗೊಂಡವು. ಬ್ರುನ್ಸ್‍ವಿಕ್‍ನ ಡ್ಯೂಕ್ ಆಗಿದ್ದ ಜೂಲಿಯಸ್ ತನ್ನ ರಾಜಧಾನಿಯಲ್ಲಿ ನಾಟಕಶಾಲೆಯೊಂದನ್ನು ಕಟ್ಟಿಸಿದ್ದಲ್ಲದೇ ಒಂದು ನಾಟಕ ಕಂಪನಿಯನ್ನೂ ಹುಟ್ಟುಹಾಕಿದ. ಇದಕ್ಕಾಗಿ ಇವನು ಹಲವಾರು ವೈನೋದಿಕ ಹಾಗೂ ಗಂಭೀರ ನಾಟಕಗಳನ್ನು ರಚಿಸಿದ. 1618 ರಿಂದ 1648ರ ವರೆಗೆ ನಡೆದ 30 ವರ್ಷಗಳ ಯುದ್ಧದಲ್ಲಿ ಜರ್ಮನಿ ಒಂದರ್ಥದಲ್ಲಿ ಹಾಳಾಗಿ ಹೋಯಿತು. ಈ ಅವಧಿಯಲ್ಲಿ ನಾಟಕ ಸಾಹಿತ್ಯವೂ ಅವನತಿ ಹೊಂದಿತು. ಹೀಗಾಗಿ 17ನೆಯ ಶತಮಾನದಲ್ಲಿ ನಾಟಕ ಸಾಹಿತ್ಯ ಹೆಚ್ಚಿನ ಪ್ರಗತಿ ಹೊಂದಲಿಲ್ಲ. ಈ ಅವಧಿಯಲ್ಲಿ ಇಟಾಲಿಯನ್ ಅಪೇರಾಗಳನ್ನು ರಾಜಾಸ್ಥಾನಗಳಲ್ಲಿ ಆಡಲಾಗುತ್ತಿತ್ತು. 18ನೆಯ ಶತಮಾನದಲ್ಲಿ ನ್ಯೂಬರ್ ಎಂಬ ನಿರ್ದೇಶಕಿಯೊಬ್ಬಳು ಲಿಪ್‍ಜಿಗ್‍ನಲ್ಲಿ ಕಾವ್ಯದ ಪ್ರಾಧ್ಯಾಪಕನಾಗಿದ್ದ ಗಾಟ್‍ಷೆಡ್ ಎಂಭುವವನ ಸಹಾಯದಿಂದ ನಟರಿಗಾಗಿ, ಅವರು ಹೇಗಿರಬೇಕೆಂಬುದರ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದಳು. ಇದರಿಂದ ನಾಟಕಕಾರರಿಗೂ ರಂಗಭೂಮಿಗೂ ಇದ್ದ ಸಂಬಂಧ ಇನ್ನೂ ಗಾಢವಾದದ್ದಾಯಿತು. ಹೀಗಾಗಿ ಅನೇಕ ನಾಟಕ ಕೃತಿಗಳು ರಂಗಭೂಮಿಗಾಗಿ ರಚನೆಗೊಂಡವು. ಎ.ಡಬ್ಲ್ಯು.ಷ್ಲಿಗೆಲ್ ಕೂಡ ಐವಾನ್ ಎಂಬ ನಾಟಕವನ್ನು ರಂಗಭೂಮಿಗಾಗಿ ರಚಿಸಿದ. ಷ್ಲಿಗೆಲ್ ಮತ್ತು ಇತರರು ಸೇರಿ ಲಿಪ್‍ಜಿಗ್‍ಸ್ಕೂಲ್ ಎಂಬ ನಾಟಕ ಕಂಪನಿಯನ್ನು ಆರಂಭಿಸಿದರು. ಈ ಕಂಪನಿ ಅಭಿನಯ ಕಲೆಯ ಅಭಿವೃದ್ಧಿಗೆ ಕಾರಣವಾಯಿತು. ವಿಮರ್ಶಕನಾದ ಲೆಸ್ಸಿಂಗ ಕೂಡ ಇದನ್ನು ಪ್ರೋತ್ಸಾಹಿಸಿದ. ಇವನೂ ಹ್ಯಾಂಬರ್ಗ್‍ನಲ್ಲಿ ಒಂದು ರಾಷ್ಟ್ರೀಯ ರಂಗಶಾಲೆಯನ್ನು ಆರಂಭಿಸಿದ. ನಾಟಕ ಕಲೆಯನ್ನು ಕುರಿತ ಇವನ ವಿಮರ್ಶೆ ಮತ್ತು ಮೀಮಾಂಸೆ ಆ ಕಾಲದ ನಾಟಕಕಾರರಿಗೆ ಮಾರ್ಗದರ್ಶೀ ಸೂತ್ರಗಳನ್ನು ಒದಗಿಸಿತು. ಇವನ ಸೂತ್ರಗಳು ಲಭ್ಯವಾಗುವವರೆಗೂ ಯಾವುದೇ ನಾಟಕವಾಗಿದ್ದರೂ ಅದರಲ್ಲಿ ಹಾರ್ಲೆಕ್ವಿಂಗ್ ಪಾತ್ರ ಅವಶ್ಯವಾಗಿ ಇರಲೇಬೇಕಿತ್ತು. ಲೆಸ್ಸಿಂಗ್‍ನ ಪ್ರಭಾವದಿಂದ ಆ ನಿಯಮ ತಪ್ಪಿತು. ಲೆಸ್ಸಿಂಗ ಹಲವಾರು ನಾಟಕಗಳನ್ನೂ ಬರೆದಿದ್ದಾನೆ. ಮಿನ್ನವಾನ್ ಬಾರ್ನ್ ಹೆಲ್ಮ್ ಎಂಬ ಇವನ ನಾಟಕ ಸೈನಿಕ ಅನುಭವದ ಆಧಾರದ ಮೇಲೆ ರಚನೆಗೊಂಡ ಟ್ರ್ಯಾಜಿಕಾಮಿಡಿಯಾಗಿದೆ. ಇದು ನಿಜವಾದ ಅರ್ಥದಲ್ಲಿ ಜರ್ಮನ್ ಭಾಷೆಯ ಮೊದಲ ಪರಿಪೂರ್ಣ ನಾಟಕ. ಎಮಿಲಿಗೆಲೊಟಿ ಎಂಬುದು ಇವನ ಉತ್ತಮ ಗಂಭೀರ ನಾಟಕ. ನಾಥನ್ ದಿ ವೈಸ್ ಎಂಬ ಮತ್ತೊಂದು ಇವನ ಉತ್ತಮ ಗಂಭೀರ ನಾಟಕ. ನಾಥನ್ ದಿ ವೈಸ್ ಎಂಬ ಮತ್ತೊಂದು ನಾಟಕ ಧಾರ್ಮಿಕ ಸಹನೆಯನ್ನು ಪ್ರತಿಪಾದಿಸುತ್ತಿದೆ. ಷಿಲ್ಲರ್ (1759-1805) ಎಂಬಾತ ಹಲವಾರು ನಾಟಕಗಳನ್ನು ಬರೆದಿದ್ದಾನೆ. ಇವನು ತನ್ನ ಶಾಲೆಯ ದಿನಗಳಲ್ಲೇ ದಿ ರಾಬರ್ಸ್ ಎಂಬ ನಾಟಕವನ್ನು ಬರೆದ. ಇವನ ಫಿಯಸ್ಕೋ ಎಂಬ ಗಂಭೀರ ನಾಟಕ ವಿನ್ಯಾಸದ ದೃಷ್ಟಿಯಿಂದ ಉತ್ತಮವೆನಿಸಿದೆ. ದಿ ಕೋಟ್ರ್ಸ್ ಇಂಟ್ರೀಗ್ ಅಂಡ್ ಲವ್, ಡಾನ್ ಕಾರ್‍ಲೋಸ್. ವಾಲೆನ್‍ಸ್ಟೀನ್ - ಇವು ಇವನ ಇತರ ಪ್ರಸಿದ್ಧ ಗಂಭೀರ ನಾಟಕಗಳು. ಮೇರಿಸ್ಟುವರ್ಡ್, ಮೈಡ್ ಆಫ್ ಆರ್ಲಿಯನ್ಸ್, ಬ್ರೈಡ್ ಆಫ್ ಮೆಸ್ಸಿನ, ವಿಲಿಯಂ ಟೆಲ್- ಇವು ಇವನ ಇತರ ಮುಖ್ಯ ನಾಟಕಗಳಾಗಿವೆ. ವಿಲಿಯಂಟೆಲ್ ಎಂಬ ನಾಟಕದಲ್ಲಿ ಸ್ವಿಟ್ಜರ್‍ಲೆಂಡ್‍ನವರಿಗೂ ಆಸ್ಟ್ರಿಯನ್ನರಿಗೂ ನಡೆದ ಹೋರಾಟವನ್ನು ಚಿತ್ರಿಸಲಾಗಿದೆ.
ಗಯಟೆ (1740-1832) ಷಿಲ್ಲರನ ಸ್ನೇಹಿತನಾಗಿದ್ದ. ಇವನ ಗೊಯಡ್ಜ್ ಎಂಬ ಐತಿಹಾಸಿಕ ನಾಟಕಗಳಲ್ಲಿ ಊಳಿಗಮಾನ್ಯ ಪದ್ಧತಿಯ ದೌಷ್ಟ್ರ್ಯಯವನ್ನು ಚಿತ್ರಿಸಲಾಗಿದೆ. ಇಫಿಜಿನೀ ಆಫ್ ಟೌರಿಸ್ (1787) ಎಂಬ ನಾಟಕ ಸೋಫೋಕ್ಲಿಸ್‍ನ ನಾಟಕದ ಅನುಕರಣೆ. ಎಗ್ಮಾಂಟ್ (1787), ಟಾರ್‍ಕ್ವಾಟೋ ಟ್ಯಾಸೊ (1790) ಇವು ಇವನ ಇತರ ನಾಟಕಗಳು. ಗಯಟೆ (ನೋಡಿ- ಗಯಟೆ) ಜಗತ್ಪ್ರಸಿದ್ಧನಾಗಿರುವುದು ಫೌಸ್ಟ್ (1808-32) ಎಂಬ ಕೃತಿಯಿಂದ. ಇದು ಜರ್ಮನ್ ರಂಗಭೂಮಿಗೆ ಮಾತ್ರವಲ್ಲದೇ ಜಾಗತಿಕ ರಂಗಭೂಮಿಗೆ ಕೊಟ್ಟ ಮಹತ್ತ್ವಪೂರ್ಣ ಕೃತಿಯಾಗಿದೆ. ಇದು ಭಾವಗೀತಾತ್ಮಕತೆ ಮತ್ತು ನಾಟಕೀಯ ಪ್ರಸಂಗಗಳನ್ನು ಒಟ್ಟಿಗೇ ಬಳಸಿಕೊಳ್ಳುತ್ತದೆ. ಮನಃಶಾಸ್ತ್ರೀಯ ಅನ್ವೇಷಣೆ ಮತ್ತು ತಾತ್ತ್ವಿಕತೆ ಈ ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇದನ್ನು ನಾಟಕವೆಂದೇ ಪರಿಗಣಿಸಲಾದರೂ ಇದರ ಅತಿ ದೀರ್ಘತೆ ಮತ್ತು ಇತರ ಅಂಶಗಳಿಂದಾಗಿ ಇದನ್ನು ರಂಗಭೂಮಿಯ ಮೇಲೆ ಪ್ರಯೋಗಿಸುವುದು ಕಷ್ಟಸಾಧ್ಯ ವಿಚಾರ. ಆದರೆ ಪ್ರಪಂಚದ ಮಹಾಸಾಹಿತಿಗಳ ಸಾಲಿನಲ್ಲಿ ನಿಲ್ಲುವ ಕೀರ್ತಿಯನ್ನು ಗಯಟೆಗೆ ತಂದುಕೊಟ್ಟ ಕೃತಿ ಇದು. ಸಂಸ್ಕøತ ಸಾಹಿತ್ಯದ ಪ್ರಸಿದ್ಧ ಕವಿ ಕಾಳಿದಾಸನ ಶಾಕುಂತಲಾ ನಾಟಕವನ್ನು ಜರ್ಮನ್ ಭಾಷೆಗೆ ಇವನು ಅನುವಾದಿಸಿರುವುದನ್ನೂ ಇಲ್ಲಿ ನೆನೆಯಬಹುದು. ಕ್ಯಾಥೆಹೆನ್ ವಾನ್ ಹೆಯಿಲ್ ಬ್ರಾನ್ ಎಂಬುದು ರೊಮ್ಯಂಟಿಕ್ ಸಂಪ್ರದಾಯದ ಇವನ ಜನಪ್ರಿಯ ನಾಟಕ. ಹರ್ಮನ್ಸ್‍ಸ್ಕೆಲಾಕ್ಟ್ ಎಂಬ ನಾಟಕದಲ್ಲಿ ನೆಪೋಲಿಯನ್ನನ ಪತನವನ್ನು ವಸ್ತುವಾಗಿ ಚಿತ್ರಿಸಿದ್ದಾನೆ. ಬ್ರೋಕನ್ ಷಿಕರ್ಸ್ ಒಂದು ಹಾಸ್ಯ ನಾಟಕ; ನ್ಯಾಯಾಧೀಶನಾಗಿದ್ದವನೇ ಅಪರಾಧಿ ಎಂದು ತಿಳಿಸುವುದು ಈ ನಾಟಕದ ವಸ್ತು.
ಕವಿ ವರ್ನರ್ ತನ್ನ ಅಭಿಜಾತ ನಾಟಕಗಳಿಂದ ಜರ್ಮನ್ ನಾಟಕಕ್ಕೆ ಗಾಂಭೀರ್ಯ ತಂದುಕೊಟ್ಟ. ಹೆನ್ರಿಕ್ ಹೆಯ್ನ್ (1799-1856) ಎಂಬಾತ ಈ ಕಾಲದ ಜರ್ಮನಿಯ ಪ್ರಸಿದ್ಧ ಕವಿ. ಆಲ್ ಮನ್ಸೂರ್, ರ್ಯಾಡ್‍ಕ್ಲಿಫ್ - ಇವು ಇವನ ನಾಟಕಗಳು. ಇವನು ಯಂಗ್ ಜರ್ಮನ್ ಸ್ಕೂಲಿಗೆ ಸೇರಿದವನು. ಇದ್ಕಕೆ ಸೇರಿದ ಇನ್ನೊಬ್ಬ ಜರ್ಮನ್ ನಾಟಕಕಾರ ಕಾಲ ಗುಡ್ಸಗೋವ್ (1811-79). ಇವನು ರಂಗಭೂಮಿಗಾಗಿ ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತಂತೆ ಹಲವಾರು ನಾಟಕಗಳನ್ನು ಬರೆದಿದ್ದಾನೆ. ನೀರೊ, ರಿಚರ್ಡ್‍ಸ್ಯಾವೇಜ್ ಷಾಟ್‍ಕುಲ್, ಮೊಲನ್‍ವೆಬರ್, ಪ್ರೋಟೊಟೈಪ್ ಆಫ್ ತಾರ್ತೂಫ್, ಯೂರಿಯಲ್ ಆಕೋಸ್ಟಾ - ಇವು ಇವನ ಇತರ ನಾಟಕಗಳು.
19 ನೆಯ ಶತಮಾನದಲ್ಲಿ ಆಸ್ಟ್ರಿಯದ ಫ್ರೀಡ್ರಿಕ್ ಹಾಲ್ಮ್ (1806-76) ಎಂಬ ಪ್ರಸಿದ್ಧ ನಾಟಕಕಾರ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಗ್ರಿಸೆಲ್ಡಿಸ್, ರೌಂಡ್ ಟೇಬಲ್ ಎಂಬ ಎರಡು ನಾಟಕಗಳು ಪ್ರಸಿದ್ದವಾಗಿವೆ. ಫ್ರೀಡ್ರಿಕï ಹೆಬೆಲ್ ಎಂಬುವನು ಹಲವಾರು ಗಂಭೀರ ನಾಟಕಗಳನ್ನು ಬರೆದಿದ್ದಾನೆ. ಡೈನಿಬೆಲುಂಗೆನ್, ಜೂಡಿತ್, ಜಿನೋವೀವ, ಮೇರಿ ಮ್ಯಾಗ್ಡಲಿನ್ - ಇವು ಇವನ ಪ್ರಸಿದ್ಧ ನಾಟಕಗಳು.
ಇಂಗ್ಲೆಂಡಿನ ರಂಗಭೂಮಿ: ಇಂಗ್ಲೆಂಡಿನ ರಂಗಭೂಮಿಯೂ ಯೂರೋಪಿನ ಇತರ ರಂಗಭೂಮಿಗಳಂತೆಯೇ ಅವುಗಳಿಗೆ ಸಮಾನವಾದ ರೀತಿಯಲ್ಲೇ ಬೆಳೆದುಕೊಂಡು ಬಂದಿದೆ. ಆರಂಭದ ವರ್ಷಗಳಲ್ಲಿ (1066-1216) ಐತಿಹಾಸಿಕ ಸಂದರ್ಭಗಳನ್ನೊಳಗೊಂಡ ಮತ್ತು ರೊಮ್ಯಾಂಟಿಕ್ ಸಂದರ್ಭಗಳನ್ನೊಳಗೊಂಡ ಹಲವಾರು ರೂಪಕಗಳು ರಚನೆಗೊಂಡು ಪ್ರದರ್ಶನಗೊಂಡಿರಬೇಕು. ಇತರೆಡೆಗಳಲ್ಲಾದಂತೆ ಇಲ್ಲಿಯೂ ಈ ಪ್ರಯೋಗಗಳು ಒರಟುತನ ಮತ್ತು ಸ್ವಚ್ಛಂದತೆಯಿಂದ ಕೂಡಿದವುಗಳಾಗಿದ್ದವು. ಚರ್ಚ್ ಇವುಗಳನ್ನು ನಿಷೇಧಿಸಿದ್ದೇ ಅಲ್ಲದೆ ಪವಾಡನಾಟಕಗಳು ಮತ್ತು ರಹಸ್ಯ ನಾಟಕಗಳ ರಚನೆಗೆ ಹಾಗೂ ಪ್ರಯೋಗಕ್ಕೆ ಪ್ರೋತ್ಸಾಹ ನೀಡಿತು. ರೈಸಿಂಗ್ ಆಫ್ ಲ್ಯಾಜರಸ್, ಹಿಸ್ಟರಿ ಆಫ್ ಡೇನಿಯಲ್ - ಇವು ಈ ಬಗೆಯ ನಾಟಕಗಳು. ಚೆಸ್ಟರ್‍ಮಿಸ್ಟ್ರೀಸ್, ಮಮಿಂಗ್ಸ್, ಪೆಜೆಂಟ್ಸ್ ಮುಂತಾದ ಮನರಂಜನಾ ವಿಧಾನಗಳು ಆಗ ಪ್ರಾಚುರ್ಯದಲ್ಲಿದ್ದವು. 12, 13 ಮತ್ತು 14 ನೆಯ ಶತಮಾನಗಳಲ್ಲಿ ಚಿಸ್ಟರ್‍ಮಿಸ್ಟ್ರೀಸ್ ನಾಟಕಗಳು ಸಾಮಾನ್ಯವಾಗಿ ಲ್ಯಾಟಿನ್‍ನಲ್ಲಿ ರಚನೆಗೊಂಡು ಪ್ರಯೋಗಗೊಂಡವು. ಪೆಜೆಂಟ್‍ಗಳನ್ನು ಹೀಗೆ ವಿವರಿಸಬಹುದು. ಪ್ರತಿಯೊಂದು ಕಂಪನಿಯೂ ತನ್ನದೇ ಆದ ಪೆಜೆಂಟನ್ನು ಹೊಂದಿರುತ್ತಿತ್ತು. ಇದರಲ್ಲಿ ಎತ್ತರದ ಒಂದು ಅಪ್ಪಣೆ ಇರುತ್ತಿದ್ದು ಅದರಲ್ಲಿ ಮೇಲೊಂದು, ಕೆಳಗೊಂದು - ಹೀಗೆ ಎರಡು ಕೋಣೆಗಳಿರುತ್ತಿದ್ದವು. ಈ ವ್ಯವಸ್ಥೆ ನಾಲ್ಕು ಚಕ್ರಗಳ ಒಂದು ಬಂಡಿಯ ಮೇಲೆ ಇರುತ್ತಿತ್ತು. ಕೆಳಗಿನ ಕೋಣೆಯಲ್ಲಿ ಪ್ರಸಾಧನ ಮಾಡಿಕೊಂಡು ಮೇಲಿನ ಕೋಣೆಯಲ್ಲಿ ಅಭಿನಯಿಸುತ್ತಿದ್ದರು. ಬೇರೆ ಬೇರೆ ಓಣಿಗಳಿಗೆ ಹೋಗಿ ಪ್ರದರ್ಶನ ನೀಡಲಾಗುತ್ತಿತ್ತು. 16 ನೆಯ ಶತಮಾನದವರೆಗೆ ನಿರ್ದಿಷ್ವವಾದ ರಂಗಶಾಲೆಗಳು ಇರಲಿಲ್ಲವೆಂದು ಹೇಳಲಾಗುತ್ತದೆ.
15 ಮತ್ತು 16 ನೆಯ ಶತಮಾನಗಳ ಅವಧಿಯಲ್ಲಿ ಹಲವಾರು ಪ್ರಾಚೀನ ಅಭಿಜಾತ ನಾಟಕಗಳು ಅನುವಾದಗೊಂಡವು. ನಾಲ್ಕನೆಯ ಹೆನ್ರಿಯ ಕಾಲದಲ್ಲಿ ಲೂಡಿ ಎಂಬ ಹೆಸರಿನಲ್ಲಿ ಹಲವಾರು ಮೊಗವಾಡ ನಾಟಕಗಳು (ಮಾಸ್ಕರೇಡ್ಸ್) ಪ್ರಯೋಗಗೊಳ್ಳುತ್ತಿದ್ದವು. ಕ್ರೈಸ್ತ ಹಬ್ಬಗಳ ಸಂದರ್ಭದಲ್ಲಿ ಇದನ್ನು ಪ್ರದರ್ಶಿಸಲಾಗುತ್ತಿತ್ತು. ಮೂರನೆಯ ರಿಚರ್ಡ್‍ನ ಕಾಲದಲ್ಲಿ ಮತ್ತು 7 ಹಾಗೂ 8ನೆಯ ಹೆನ್ರಿಯ ಕಾಲದಲ್ಲಿ ನಟರ ಸ್ಥಾನಮಾನಗಳು ಉತ್ತಮಗೊಂಡವು. ಈ ಕಾಲದ ವಾಡನಾಟಕ ಮತ್ತು ರಹಸ್ಯ ನಾಟಕಗಳಲ್ಲಿಯೂ ಸಾಮಾಜಿಕ ವಿಡಂಬನೆ, ವ್ಯಕ್ತಿ ವಿಡಂಬನೆ ಇರುತ್ತಿತ್ತು. ಜಾನ್ ಸ್ಕೆಲ್ಟನ್ ಎಂಬವನು ಆಗ ಬರೆದ ಕೂಲಿನಕ್ಲೌಟ್ ಮತ್ತು ವೈ ಕಮ್ ಹಿ ನಾಟ್ ಟು ಕೋರ್ಟ್ ಎಂಬವು ಉತ್ತಮ ವಿಡಂಬನಾತ್ಮಕರೂಪಕಗಳಾಗಿವೆ.
ಟ್ಯೂಡರ್ ಮನೆತನದ ಆಳ್ವಿಕೆ ಕಾಲದಲ್ಲಿ ಧಾರ್ಮಿಕ ವಿಚಾರಗಳ ಬಗೆಗೆ ತೀವ್ರ ಚರ್ಚೆ ನಡೆದು ರಂಗಭೂಮಿಯನ್ನು ಬದಲಾವಣೆಯ ಒಂದು ಉಪಕರಣವನ್ನಾಗಿ ಬಳಸಿಕೊಳ್ಳಲಾಯಿತು. ಆ ಕಾಲದ ಧಾರ್ಮಿಕ ಸಮಸ್ಯೆಗಳನ್ನೊಳಗೊಂಡ ಹಲವಾರು ಇಂಟರ್‍ಲ್ಯೂಡ್‍ಗಳು ರಚನೆಗೊಂಡು ಪ್ರಯೋಗಗೊಂಡವು. ದೊರೆ 6ನೆಯ ಎಡ್ವರ್ಡ್ `ದಿ ಹೋರ್ ಆಫ್ ಬೆಬಿಲಾನ್ ಎಂಬ ಒಂದು ಸುಂದರ ವೈನೋದಿಕವನ್ನು ರಚಿಸಿದ. ಕ್ವೀನ್ ಮೇರಿಯ ಕಾಲದಲ್ಲಿ ರಿಪಬ್ಲಿಕಾ ಎಂಬ ಒಂದು ನೀತಿ ಬೋಧಕ ನಾಟಕ ರಚನೆಗೊಂಡು ಆಸ್ಥಾನದಲ್ಲಿ ಪ್ರಯೋಗಗೊಂಡಿತು. ಇದರಲ್ಲಿ ಪ್ರಟಸ್ಟೆಂಟರನ್ನು ತೀವ್ರವಾಗಿ ಟೀಕಿಸಲಾಗಿತ್ತು. ರಾಣಿ ಮೇರಿಯನ್ನೇ ಇಲ್ಲಿ ಪ್ರತೀಕಾರನ್ಯಾಯದ ಗುಣವುಳ್ಳವಳಾಗಿ (ಕ್ಯಾರೆಕ್ಟರ್ ಆಫ್ ನೆಮಿಸಿಸ್) ಚಿತ್ರಿಸಲಾಯಿತು.
ಈಟನ್ ಶಾಲೆಯ ನಿಕೋಲಾಸ್ ಊಡಾನ್ ಎಂಬ ಮುಖ್ಯೋಪಾಧ್ಯಾಯ ಲ್ಯಾಟಿನ್ ಭಾಷೆಯಲ್ಲಿ ಹಲವಾರು ರೂಪಕಗಳನ್ನು ರಚಿಸಿ ತನ್ನ ವಿದ್ಯಾರ್ಥಿಗಳಿಂದಲೇ ಪ್ರಯೋಗ ಮಾಡಿಸಿದ. 1540 ರಲ್ಲಿ ಈ ಹಾಸ್ಯ ನಾಟಕಗಳನ್ನು ಇವನು ಬರೆದ. ಇವನನ್ನೇ ಇಂಗ್ಲಿಷ್ ವೈನೋದಿಕದ ಆದ್ಯ ಪ್ರವರ್ತಕನೆಂದು ಪರಿಗಣಿಸಲಾಗಿದೆ. ಇವನ ರಾಲ್ಫ್ ರೋಯಿಸ್ಟರ್ ಎಂಬ ನಾಟಕ ಇಂಗ್ಲಿಷ್ ಭಾಷೆಯ ಮೊದಲ ಸಂಪೂರ್ಣ ವೈನೋದಿಕವಾಗಿದೆ. ಸು. 1565ರಲ್ಲಿ ಜಾನ್ ಸ್ಟೀಲ್ ಎನ್ನುವವನು ಗ್ಯಾಮರ್ ಗುರುಟನ್ಸ್ ನೀಡ್ಲ್ ಎಂಬ ಹಾಸ್ಯ ನಾಟಕವನ್ನು ರಿಚಿಸಿದ. ತಾಮಸ್ ಸ್ಯಾಕ್ವಿಲ್ ಎನ್ನುವವನು 1562ರಲ್ಲಿ ಒಂದೆನೆಯ ಎಲಿಜಬೆತ್‍ಳ ಎದುರಿಗೆ ಪ್ರಯೋಗಿಸಿದ ಅವನ ನಾಟಕ ಗೊರ್‍ಬೆಡೆಕ್ ಎಂಬುದು ಇಂಗ್ಲಿಷ್ ಭಾಷೆಯ ಮೊದಲ ಪೂರ್ಣಪ್ರಮಾಣದ ದುರಂತ ನಾಟಕ. ಇದೇ ಕಾಲದಲ್ಲಿ ರಚನೆಗೊಂಡ ಮತ್ತೊಂದು ದುರಂತ ನಾಟಕ ಏಪಿಯಸ್ ಅಂಡ್ ವರ್ಜೀನಿಯ. ಇದರ ಕರ್ತೃ ಯಾರೆಂಬುದು ತಿಳಿದುಬಂದಿಲ್ಲ. ಪ್ರೆಸ್ಟನ್‍ನ ಕ್ಯಾಂಬಿಸಿಸ್, ಪೆಟ್‍ಸ್ಟೋನ್‍ನ ಪ್ರಮೋಸನ್ ಅಂಡ್ ಕೆಸಾಂಡ್ರ - ಇವುಗಳೂ ಈ ಕಾಲದಲ್ಲಿಯೇ ರಚನೆಗೊಂಡ ದುರಂತ ನಾಟಕಗಳು. 16 ನೆಯ ಶತಮಾನದಲ್ಲಿ ಹಲವು ಐತಿಹಾಸಿಕ ನಾಟಕಗಳೂ ರಚನೆಗೊಂಡಿವೆ. ವಿಕ್ಟರಿಸ್ ಆಫ್ ಹೆನ್ರಿ ಗಿ ಎಂಬುದು 1588 ರಲ್ಲಿ ಪ್ರಕಟಗೊಂಡಿತು. ಷೇಕ್‍ಸ್ಪಿಯರ್ ತನ್ನ ಹೆನ್ರಿ ಗಿ ನಾಟಕಕ್ಕೆ ಈ ನಾಟಕದಿಂದಲೇ ವಸ್ತುವನ್ನು ತೆಗೆದುಕೊಂಡು ಅದನ್ನು ರೂಪಾಂತರಿಸಿದ.
ಒಂದನೆಯ ರಾಣಿ ಎಲಿಜûಬೆತ್‍ಳ ಅಧಿಕಾರಾವಧಿಯನ್ನು ಇಂಗ್ಲೆಂಡಿನ ಸುವರ್ಣಯುಗವೆಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಎಲಿಜûಬೆತ್ ನಾಟಕಕಲೆಗೆ ನೀಡಿದ ಪ್ರೋತ್ಸಾಹ ಅಪರಿಮಿತವಾದದ್ದು. ಇವಳು ಸ್ವತಃ ನಾಟಕಗಳನ್ನು ನೋಡಲು ನಾಟಕಶಾಲೆಗಳಿಗೆ ಹೋಗುತ್ತಿದ್ದಳೆಂದು ಪ್ರತೀತಿ. 1577ರಲ್ಲಿ ಇಟಲಿಯ ನಟರು ವಿಂಡ್‍ಸರ್‍ನಲ್ಲಿ ಎಲಿಜûಬೆತ್ ರಾಣಿಯ ಎದುರಿಗೆ ನಾಟಕವನ್ನಾಡಿದರು. ಇದರಿಂದ ಪ್ರಭಾವಿತಳಾದ ಈಕೆ ಇಂಗ್ಲಿಷ್‍ನಲ್ಲಿಯೂ ನಾಟಕಪ್ರಕಾರಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಲು ನಿರ್ಧರಿಸಿದಳು.
ಷೇಕ್‍ಸ್ಪಿಯರ್‍ನಿಗೂ ಸ್ವಲ್ಪ ಹಿಂದೆ ಹಲವಾರು ನಾಟಕಕಾರರು ನಾಟಕಗಳನ್ನು ರಚಿಸಿದ್ದಾರೆ ಮತ್ತು ರಂಗಭೂಮಿಯ ಮೇಲೂ ಅವುಗಳನ್ನು ಪ್ರಯೋಗಿಸಿದ್ದಾರೆ. ಈ ಕಾಲದ ಕೆಲವು ನಾಟಕಕಾರರೆಂದರೆ ಲಿಲ್ಲಿ, ಕಿಡ್, ಗೀನ್, ಮಾರ್ಲೋ, ಪೀಲೆ, ಜಾನ್ ಹೇವುಡ್ ಮತ್ತು ತಾಮಸ್ ಹೇವುಡ್.
ಲಿಲ್ಲಿ ಅನೇಕ ಗದ್ಯಹಾಸ್ಯನಾಟಕಗಳನ್ನು ಬರೆದಿದ್ದಾನೆ. ಆದರೆ ದಿ ವುಮೆನ್ ಇನ್ ದಿ ಮೂನ್ ಎಂಬುದು ಸ್ವಚ್ಛಂದ ಛಂದದಲ್ಲಿ ರಚನೆಗೊಂಡಿರುವ ನಾಟಕ. ತಾಮಸ್ ಕಿಡ್ (1558-92) ಮತ್ತು ಕ್ರಿಸ್ಟಫರ್ ಮಾರ್ಲೋ (1564-93) ಇವರಿಬ್ಬರಲ್ಲಿ ದುರಂತ ನಾಟಕ ರಚನೆಯಲ್ಲಿ ಮೊದಲಿಗರು ಯಾರು ಎಂಬುದರ ಬಗೆಗೆ ವಿವಾದವಿದೆ. ಕಿಡ್ ರಚಿಸಿದ ಸ್ಪ್ಯಾನಿಷ್ ಟ್ರ್ಯಾಜಿಡಿಯೇ ಮಾರ್ಲೋನ ಟ್ಯಾಂಬರ್‍ಲೇನ್ ನಾಟಕಕ್ಕಿಂತ ಮೊದಲು ರಚನೆಗೊಂಡಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಹ್ಯಾಮ್‍ಲೆಟ್ ಎಂಬ ದುರಂತ ನಾಟಕವನ್ನೂ ಕಿಡ್ ರಚಿಸಿದ್ದಾನೆ. ಷೇಕ್‍ಸ್ಪಿಯರ್ ಅನಂತರ ಕಿಡ್‍ನ ಹ್ಯಾಮ್‍ಲೆಟ್ ನಾಟಕವನ್ನೇ ಅಲ್ಪಸ್ವಲ್ಪ ಬದಲಾಯಿಸಿಕೊಂಡು ತನ್ನ ಹ್ಯಾಮ್‍ಲೆಟ್ ನಾಟಕವನ್ನು ರಚಿಸಿರಬೇಕೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ.
ಮಾರ್ಲೋನ ಟ್ಯಾಂಬರ್‍ಲೇನ್ ದಿ ಗ್ರೇಟ್ ಎಂಬ ದುರಂತನಾಟಕವನ್ನು, ಆ ಕಾಲದಲ್ಲಿ ಅಲ್ಲಿಯವರೆಗೆ ಬಂದಿದ್ದ ದುರಂತನಾಟಕಗಳೆಲ್ಲಕ್ಕಿಂತ ಶ್ರೇಷ್ಠವೆಂದು ಪರಿಗಣಿಸಲಾಗಿತ್ತು. ದುರಂತ ನಾಟಕಕ್ಕೆ ಸ್ವಚ್ಛಂದ ಛಂದ ಅನುಕೂಲಕರವಾದದ್ದೆಂದು ಮೊದಲಿಗೆ ಕಂಡುಕೊಂಡವರು ಕಿಡ್ ಮತ್ತು ಮಾರ್ಲೋ.
ಮಾರ್ಲೋ 1588ರಲ್ಲಿ ಡಾಕ್ಟರ್ ಫೌಸ್ಟನ್ ಎಂಬ ನಾಟಕವನ್ನು ರಚಿಸಿದ. ಇದರ ಮರು ವರ್ಷವೇ ಜ್ಯೂ ಆಫ್ ಮಾಲ್ಟ (1589), ಡಿಡೊ ದಿ ಕ್ವೀನ್ ಆಫ್ ಕಾರ್ಥೇಜ್ (1593) ಮೊದಲಾದ ನಾಟಕಗಳು ರಚನೆಗೊಂಡವು. ಎಲಿಜûಬೆತ್‍ನ ಕಾಲದ ನಾಟಕಕಾರರಲ್ಲಿ ಮಾರ್ಲೋನನ್ನು ಷೇಕ್‍ಸ್ಪಿಯರನಿಗೆ ಕೇವಲ ಎರಡನೆಯವನನ್ನಾಗಿ ಪರಿಗಣಿಸಲಾಗುತ್ತದೆ. ಹೆಗ್ಗಡಲಿನಂತೆ ಉಕ್ಕೇರುವ ರಾಗವಿಜೃಂಭಣೆಯಲ್ಲಿ ಷೇಕ್‍ಸ್ಪಿಯರ್‍ನನ್ನೂ ಮೀರಿಸುವ ಸಾಮಥ್ರ್ಯವುಳ್ಳವನು ಮಾರ್ಲೋ ಎಂಬ ಹೆಗ್ಗಳಿಕೆಗೆ ಇವನು ಪಾತ್ರನಾಗಿದ್ದಾನೆ. ಡಾಕ್ಟರ್ ಫೌಸ್ಟಸ್ ನಾಟಕ ಗಯಟೆಯ ಫೌಸ್ಟ್ ನಾಟಕಕ್ಕಿಂತ ಉತ್ತಮವೆಂದದ್ದೆಂದು ಕೆಲವು ವಿಮರ್ಶಕರು ಹೇಳುವುದುಂಟು.
1576 ರಲ್ಲಿ ಲೈಸಿಸ್ಟರ್‍ನ ನಾಟಕ ಕಂಪನಿಗೆ, ಬ್ಲ್ಯಾಕ್ ಫ್ರೆಯರ್ಸ್ ಎಂಬ ಸ್ಥಳದಲ್ಲಿ ಮೊದಲನೆಯ ಸಾರ್ವಜನಿಕ ನಾಟಕ ಶಾಲೆಯನ್ನು ಕಟ್ಟಲು ಅನುಮತಿ ದೊರೆಯಿತು. ಅನಂತರ ಸೌತ್‍ವಾರ್ಕ್‍ನಲ್ಲಿ `ಗ್ಲೋಬ್ ನಾಟಕಶಾಲೆ ನಿರ್ಮಾಣವಾಯಿತು. ಈ ನಾಟಕಶಾಲೆಯಲ್ಲಿಯೆ ಷೇಕ್‍ಸ್ಪಿಯರ್‍ನ ಕಂಪನಿ ನಾಟಕಗಳು ಪ್ರದರ್ಶಿಸುತ್ತಿತ್ತು. ಈ ಕಾಲಾವಧಿಯ ಇನ್ನೆರಡು ನಾಟಕಶಾಲೆಗಳೆಂದರೆ ಸ್ವಾನ್ ಮತ್ತು ಹೋಪ್.
ಈ ಕಾಲದ ಸಾರ್ವಜನಿಕ ನಾಟಕಶಾಲೆಯ ಸಾಮಾನ್ಯ ಲಕ್ಷಣಗಳನ್ನು ಹೀಗೆ ಸಂಗ್ರಹಿಸಬಹುದು; ನೇಪಥ್ಯದ ಮುಂಭಾಗ ಮುಂಚಾಚಿಕೊಂಡು ಪ್ರೇಕ್ಷಕರು ನಿಂತಿರುತ್ತಿದ್ದ ಕುಳಿಯೊಳಕ್ಕೆ ಪ್ರವೇಶಿಸುತ್ತಿತ್ತು. ಹೀಗೆ ಮುಂಚಾಚಿದ ಈ ಭಾಗಕ್ಕೆ ಏಪ್ರನ್ ಎಂದು ಕರೆಯುತ್ತಿದ್ದರು. ಈ ಏಪ್ರನ್‍ನ ಮೇಲೆಯೂ ನಾಟಕ ಕ್ರಿಯೆ ಜರುಗುತ್ತಿತ್ತು. ಮುಂದಣ ಪರದೆ ಯಾವುದೂ ಇರುತ್ತಿರಲಿಲ್ಲ. ರಂಗಸಜ್ಜು ಬಹಳ ಸರಳವಾಗಿದ್ದು ತೀರ ಅನಿವಾರ್ಯವಾದ ವಸ್ತುಗಳನ್ನು ಮಾತ್ರ ಅಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ರಾಜಾಸ್ಥಾನ, ಉದ್ಯಾನವನ ಅಥವಾ ಯುದ್ಧಭೂಮಿ ಮುಂತಾದವುಗಳನ್ನು ಪ್ರೇಕ್ಷಕರು ಸಂದರ್ಭೋಚಿತವಾಗಿ ಊಹಿಸಿಕೊಳ್ಳುತ್ತಿದ್ದರು. ಮೀಸೆಮೂಡದ ಹುಡುಗರೇ ಸ್ತ್ರೀಪಾತ್ರಗಳನ್ನೂ ವಹಿಸುತ್ತಿದ್ದರು. ಹೀಗಾಗಿ ನಾಟಕಕಾರ ಅಂತಹ ಸಂದರ್ಭಗಳನ್ನು ಕಾವ್ಯಮಯವಾಗಿ ವರ್ಣಿಸುತ್ತಿದ್ದ. ಇದನ್ನು ಕೇಳುತ್ತ ನೋಡುತ್ತ ಇರುವ ಪ್ರೇಕ್ಷಕರಿಗೆ ಸಂದರ್ಭವನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ.
ಎಲಿಜûಬೆತ್‍ನ ಯುಗದ ಮಹಾನಾಟಕಕಾರನಷ್ಟೇ ಅಲ್ಲದೇ ಜಗತ್ತಿನ ಕೆಲವೇ ಕೆಲವು ಮಹಾನಾಟಕಕಾರರಲ್ಲಿ ಒಬ್ಬನಾದ ಷೇಕ್‍ಸ್ಪಿಯರ್ (1564-1616) ಸ್ಟ್ರಾಟ್‍ಫೋರ್ಡ್ ಆನ್ ಅವಾನ್‍ನಲ್ಲಿ ಶ್ರೀಮಂತ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದವನು. ಕವಿಯಾಗಿ, ನಾಟಕಕಾರನಗಿ, ನಟನಾಗಿ ತನ್ನ ದೈತ್ಯ ಪ್ರತಿಭೆಯನ್ನು ಮೆರೆದವನು. ಇವನು ಬರೆದ 37 ನಾಟಕಗಳನ್ನು ವಿದ್ವಾಂಸರು ಸಂಪಾದಿಸಿದ್ದಾರೆ. ಇವುಗಳಲ್ಲಿ ಐತಿಹಾಸಿಕ ನಾಟಕಗಳನ್ನು ಭಿನ್ನ ಭಿನ್ನ ರೀತಿಯ ವೈನೋದಿಕಗಳು ಮತ್ತು ದುರಂತನಾಟಕಗಳು ಸೇರುತ್ತವೆ. ಬೇರೆ ಬೇರೆಯ ಮೂಲಗಳಿಂದ ಕಥಾವಸ್ತುವನ್ನು ಆಯ್ಕೆಮಾಡಿಕೊಂಡು, ಇಜ್ಜಲಿನಂತಿದ್ದ ಅವುಗಳನ್ನು ರೂಪಾಂತರಿಸಿ ವಜ್ರಗಳನ್ನಾಗಿ ಪರಿವರ್ತಿಸಿದ ಉಜ್ಜ್ವಲ ಪ್ರತಿಭೆ ಷೇಕ್‍ಸ್ಪಿಯರನದು. ಇವನ ದುರಂತನಾಟಕಗಳನ್ನು ಅಭಿಜಾತ ಮಾನದಂಡಗಳಿಂದ ಅಳೆಯಲು ಸಾಧ್ಯವಿಲ್ಲ. ಇವನ ನಾಟಕಗಳೇ ಒದಗಿಸಿಕೊಡುವ ಮಾನದಂಡಗಳಿಂದ ಅಳೆಯಬೇಕೆಂಬುದನ್ನು ವಿಮರ್ಶಕರು ಅರಿತುಕೊಳ್ಳುವಂತಾಯಿತು.
ರಿಚರ್ಡ್ 11, ರಿಚರ್ಡ್ 111, ರಿಚರ್ಡ್ VI, ಹೆನ್ರಿ ಈವ, (1, 11,) ಹೆನ್ರಿಗಿ - ಇವು ಐತಿಹಾಸಿಕ ನಾಟಕಗಳು. ದಿ ಕಾಮಿಡಿ ಆಫ್ ಎರರ್ಸ್, ಲಾಸ್ ಲೇಬರ್ಸ್‍ಲಾಸ್ಟ್, ಎ ಮಿಡ್‍ಸಮ್ಮರ್ ನೈಟ್ಸ್ ಡ್ರೀಮ್ಸ್, ದಿ ಟು ಜಂಟ್ಲ್‍ಮನ್ ಆಫ್ ವೆರೋನ, ದಿ ಟೇಮಿಂಗ್ ಆಫ್ ದಿ ಷ್ರ್ಯೂ, ದಿ ಮರ್ಚೆಂಟ್ ಆಫ್ ವೆನಿಸ್, ಮಚ್ ಆಡೊ ಎಬೌಟ್ ನಥಿಂಗ್, ಆ್ಯಸ್ ಯು ಲೈಕ್ ಇಟ್, ದಿ ಟ್ವಲಲ್ಫ್ತ್ನೈಟ್- ಇವು ವೈನೋದಿಕಗಳು. ಟೈಟಸ್ ಎಂಡ್ರೋನಿಕಸ್ ಎಂಬುದು ಸೆನೆಕನ ಮಾದರಿಯ ಸೇಡು ನಾಟಕ. ರೋಮಿಯೋ ಅಂಡ್ ಜೂಲಿಯಟ್ ಒಂದು ರೊಮ್ಯಾಂಟಿಕ್ ಟ್ರ್ಯಾಜಿಡಿ. ಜೂಲಿಯಸ್ ಸೀಸರ್, ಆಂಟೋನಿ ಅಂಡ್ ಕ್ಲಿಯೋಪಾತ್ರ, ಕೋರಿಯೋಲ್ಯಾರಸ್, ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್, ಮ್ಯಾಕ್‍ಬೆತ್, ಟಿಮನ್ ಆಫ್ ಆಥೆನ್ಸ್ - ಇವು ದುರಂತ ನಾಟಕಗಳು. ಪೆರಿಕ್ಲಿಸ್, ಸಿಂಬಲೆನ್, ದಿ ವಿಂಟರ್ಸ್ ಟೇಲ್ ಮತ್ತು ಟೆಂಪೆಸ್ಟ್ - ಇವು ಟ್ರ್ಯಾಜಿ ಕಾಮಿಡಿಗಳು.
ಷೇಕ್‍ಸ್ಪಿಯರ್‍ನ ನಾಟಕಗಳ ವೈಶಿಷ್ಟ್ಯವೆಂದರೆ ಕಾವ್ಯತ್ವದೊಂದಿಗೆ ಮಿಳನಗೊಂಡಿರುವ ನಾಟಕೀಯತೆ. ಇವನ ನಾಟಕಗಳಲ್ಲಿನ ಈ ಗುಣ ಇವನನ್ನು ಶ್ರೇಷ್ಠ ಕವಿಯನ್ನಾಗಿಯೂ ನಾಟಕಕಾರನನ್ನಾಗಿಯೂ ಮಾಡಿದೆ. ದೃಶ್ಯಕಾವ್ಯ ಮತ್ತು ಕಾವ್ಯರೂಪಕಗಳನ್ನು ರಚಿಸುವುದರಲ್ಲಿ ಇವನನ್ನು ಮೀರಿಸುವ ಇನ್ನೊಬ್ಬ ಕವಿ-ನಾಟಕಕಾರ ಇಲ್ಲ. ನಾಟಕಕ್ಕೆ ಬ್ಲಾಂಕ್‍ವರ್ಸ್ ಅತ್ಯುತ್ತಮ ಛಂದೋ ರೂಪವೆಂಬುದನ್ನು ಕಂಡುಕೊಂಡ ಈತ ತನ್ನ ನಾಟಕೀಯ ಸಂವಾದದ ಎಲ್ಲ ಆಯಾಮಗಳನ್ನೂ ವೈವಿಧ್ಯಮಯವಾಗಿ ಬಳಸಿಕೊಂಡು ಅಭಿವ್ಯಕ್ತಿಸಿದೆ. ಇವನ ನಾಟಕಗಳಲ್ಲಿ ಕಾಣುವ ಮಾನವಾಶಕ್ತಿ (ಹ್ಯೂಮನಿಸಂ) ವಿಶೇಷವಾದದ್ದು. ಸ್ತ್ರೀಪಾತ್ರವಾಗಿರಲಿ, ಪುರುಷ ಪಾತ್ರವಾಗಿರಲಿ ಯಾವುದೇ ಪಾತ್ರವನ್ನೂ ವಸ್ತುನಿಷ್ಠವಾಗಿ ಚಿತ್ರಿಸುವ ಸಾಮಥ್ರ್ಯ ಷೇಕ್‍ಸ್ಪಿಯರನದು. ಜೀವನ ರಹಸ್ಯದ ಆಳ ಎತ್ತರಗಳನ್ನು ದಟ್ಟವೂ ತೀಕ್ಷ್ಣವೂ ಆದ ಮಾನವ ದರ್ಶನವನ್ನೂ ಇವನ ನಾಟಕಗಳು ಹೊಂದಿವೆ. ಷೇಕ್‍ಸ್ಪಿಯರ್ ಸ್ವತಃ ತಾನೇ ರಂಗಭೂಮಿಯ ನಟನಾಗಿದ್ಧರಿಂದ, ರಂಗಭೂಮಿ ಇವನಿಗೆ ಒದಗಿಸಿಕೊಟ್ಟ ಎಲ್ಲ ಪರಿಕರಗಳನ್ನೂ ಬಳಸಿಕೊಂಡು ನಾಟಕಗಳನ್ನು ರಚಿಸಲು ಸಾಧ್ಯವಾಯಿತು. ಇವನು ನಾಟಕಗಳನ್ನು ಬಳಸಿಕೊಂಡು ನಾಟಕಗಳನ್ನು ರಚಿಸಲು ಸಾಧ್ಯವಾಯಿತು. ಇವನು ನಾಟಕಗಳನ್ನು ಬರೆದದ್ದು ರಂಗಭೂಮಿಗಾಗಿಯೇ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಇವನ ಎಲ್ಲ ನಾಟಕಗಳು ಬಹುಶಃ ಪ್ರಪಂಚದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಷೇಕ್‍ಸ್ಪಿಯರ್ ನಾಟಕಗಳನ್ನು ರಚಿಸುತ್ತಿದ್ದ ಅವಧಿಯಲ್ಲಿಯೇ ಇನ್ನೂ ಹಲವರಿಂದ ನಾಟಕಗಳು ರಚನೆಗೊಂಡಿರುದನ್ನು ಕಾಣಬಹುದು. 1642 ರಲ್ಲಿ ಬಂದ ಕಾನೂನು ನಾಟಕಶಾಲೆಗಳನ್ನು ಮುಚ್ಚಿಸಿಬಿಟ್ಟಿತು. ಈ ಅವಧಿಯವರೆಗೂ ಹಲವಾರು ನಾಟಕಕಾರರು ನಾಟಕಗಳನ್ನು ರಚಿಸಿದ್ದಾರೆ. ಇವರಲ್ಲಿ ಮುಖ್ಯರಾದವರು: ಜಾರ್ಜ್ ಚ್ಯಾಪ್‍ಮನ್ (ಚಾರಿತ್ರಿಕ ಗಂಭೀರ ನಾಟಕಗಳನ್ನು ರಚಿಸಿದ್ದಾನೆ.) ತಾಮಸ್ ಹೇವುಡ್ (ಡೊಮ್ಯಾಸ್ಟಿಕ್ ಟ್ರ್ಯಾಜಿಡಿ ಎಂಬ ಹೊಸ ಪ್ರಕಾರವನ್ನು ಸೃಷ್ಟಿಸಿದವನು), ಬ್ಯೂಮಂಟ್ ಮತ್ತು ಫ್ಲೆಚರ್ (ಇವರಿಬ್ಬರೂ ಜಂಟಿಯಾಗಿ ನಾಟಕ ರಚನೆ ಮಾಡವ ಪದ್ಧತಿಯನ್ನು ರೂಢಿಗೆ ತಂದವರು), ಜಾನ್ ವೆಬ್‍ಸ್ಟರ್, ಫಿಲಿಪ್ ಮ್ಯಾಸೆಂಜರ್, ಜಾನ್ ಫೋರ್ಡ್.
ಬೆನ್ ಜಾನ್‍ಸನ್ ಎಂಬಾತ ಅಭಿಜಾತ ನಾಟಕ ವಿನ್ಯಾಸವನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿದ. ಆದರೆ ಆಗಿನ ಅಭಿರುಚಿಗೆ ಅದು ಇಷ್ಟವಾಗದೇ ಇವನ ಆ ಬಗೆಯ ನಾಟಕಗಳು ಹೆಚ್ಚು ಯಶಸ್ವಿಯಾಗಲಿಲ್ಲ; ವೈನೋದಿಕಗಳು ಯಶಸ್ವಿಯಾದವು. ಎವ್ವೆರಿ ಮ್ಯಾನ್ ಇನ್ ಹಿಸ್ ಹ್ಯೂಮರ್, ವೋಲ್‍ಫೋನ್, ದಿ ಸೈಲೆಂಟ್ ವುಮೆನ್, ಬಾರ್ತಲೋಮಿಯೋ ಫೇರ್ - ಈ ನಾಟಕಗಳು ಇವನ ಯಶಸ್ವಿ ಕಾಮಿಡಿಗಳಾಗಿವೆ.
ಜಾರ್ಜ್ ಚ್ಯಪ್‍ಮನ್ ಬರೆದ ದಿ ಬ್ಲೈಂಡ್ ಬೆಗ್ಗರ್ ಆಫ್ ಅಲೆಕ್ಸಾಂಡ್ರಿಯ, ಆ್ಯನ್ ಹ್ಯೂಮರ್ಸ್ ಡೇಸ್ ಮರ್ತ್, ಆಲ್‍ಫೂಲ್ಸ್, ದಿ ಜಂಟ್ಲ್‍ಮನ್ ವುಷರ್, ಮೇ ಡೆ, ದಿ ವಿಡೋಸ್ ಟಿಯರ್ಸ್ ಎಂಬ ವೈನೋದಿಕಗಳೂ ತಾಮಸ್ ಡೆಕರನ ದಿ ಷೂ ಮೇಕರ್ಸ್ ಹಾಲಿಡೆ, ದಿ ಆನೆಸ್ಟ್ ಹೋರ್, ಮ್ಯಾಚ್ ಮಿ ಇನ್ ಲಂಡನ್, ದಿ ವಂಡರ್‍ಫುಲ್ ಕಿಂಗ್‍ಡಂ ಎಂಬ ವೈನೋದಿಕಗಳೂ ತಾಮಸ್ ಮಿಡ್ಲ್‍ಟನ್‍ನ ದಿ ವೋಲ್ಡ್ ಲಾ, ದಿ ಫೀನಿಕ್ಸ್, ದಿ ವಿಚ್ ಎಂಬ ವೈನೋದಿಕಗಳೂ ಈ ಕಾಲದ ಗಮನೀಯ ನಾಟಕಗಳು. ತಾಮಸ್ ಮಿಡ್ಲ್‍ಟನ್‍ನನ್ನು ರೊಮ್ಯಾಂಟಿಕ್ ನಾಟಕದ ಪ್ರವರ್ತಕನೆಂದು ಪರಿಗಣಿಸಲಾಗುತ್ತದೆ.
ಸ್ಯಾಮ್ಯುಯಲ್ ಡೇನಿಯಲ್ ಎಂಬಾತ ಹಲವಾರು ನಾಟಕಗಳನ್ನು ಬರೆದಿದ್ದಾನೆ. ಆದರೆ ಅವು ಯಾವುವೂ ಪರಿಗಣನೆಗೆ ಯೋಗ್ಯವಾಗಿಲ್ಲ. ಆದರೆ ಇವನು ಬರೆದಿರುವ ಪಾಸ್ಟರಲ್ ನಾಟಕಗಳಾದ ದಿ ಕ್ವೀನ್ ಆರ್ಕೇಡಿಯಾ ಮತ್ತು ಹೈಮನ್ಸ್ ಟ್ರಯಂಫ್ ಇವನಿಗೆ ಜನಪ್ರಿಯತೆಯನ್ನು ತಂದುಕೊಟ್ಟಿವು. ಬ್ಯೂಮಂಟ್ ಮತ್ತು ಫ್ಲೆಚರ್ ಇವರಿಬ್ಬರೂ ನಾಟಕಕಾರರೂ ಜಂಟಿಯಾಗಿ ಹಲವಾರು ದುರಂತ ನಾಟಕಗಳನ್ನೂ ಕಾಮಿಡಿಗಳನ್ನೂ ಬರೆದಿದ್ದಾರೆ. ಪ್ರತ್ಯೇಕವಾಗಿಯೂ ನಾಟಕಗಳನ್ನು ರಚಿಸಿದ್ದಾರೆ. ವುಮೆನ್ ಹೇಟರ್ ಎಂಬುದು ಬ್ಯೂಮಂಟನ ಒಂದು ವಿಡಂಬನಾತ್ಮಕ ನಾಟಕ. ದಿ ಫೈತ್ಫುಲ್ ಷಪರ್ಡೆಸ್ ಎಂಬುದು ಫ್ಲೆಚರ್ ಬರೆದ ಪಾಸ್ಟರಲ್ ನಾಟಕ. ದಿ ಸ್ಕಾಮ್ರ್ಮ್‍ಫುಲ್ ಲೇಡಿ, ದಿ ಮೇಯ್ಡ್ಸ್ ಟ್ರ್ಯಾಜಿಡಿ, ಎ ಕಿಂಗ್ ಆರ್ ನೋ ಕಿಂಗ್ - ಇವು ಇವರಿಬ್ಬರೂ ಜಂಟಿಯಾಗಿ ಬರೆದ ಕೆಲವು ಮುಖ್ಯ ನಾಟಕಗಳು. ವಿಟ್ ವಿತೌಟ್ ಮನಿ. ವುಮೆನ್ ಪ್ಲೀeóïಡ್, ದಿ ವೈಲ್ಡ್ ಗೂಸ್, ದಿ ಮ್ಯಾಡ್ ಲವರ್ - ಇವು ಫ್ಲೆಚರನ ಇನ್ನಿತರ ಕೆಲವು ನಾಟಕಗಳು. ಫಿಲಿಪ್ ಮ್ಯಾಸೆಂಜರ್ ಕೂಡ ಒಬ್ಬ ಸಮರ್ಥ ನಾಟಕಕಾರ. ನ್ಯೂ ವೇ ಟು ಪೇ ವೋಲ್ಡ್ ಡೇಟ್ಸ್, ದಿ ರೋಮನ್ ಎಕ್ಟರ್ (ಇದು ಒಂದು ವಿಶಿಷ್ಟವಾದ ದುರಂತ ನಾಟಕ), ದಿ ಪಿಕ್ಚರ್ಸ್ ಮತ್ತು ದಿ ಬ್ಯಾಷ್‍ಫುಲ್ ಲವರ್ (ಕಾಮಿಡಿಗಳು) - ಇವು ಇವನು ಬರೆದ ನಾಟಕಗಳು. ನಥಾನಿಯಲ್ ಫೀಲ್ಡ್ ಎಂಬಾತ ನಟನೂ ನಾಟಕಕಾರನೂ ಆಗಿದ್ದ. ದಿ ವುಮೆನ್ ಈಸ್ ಎ ವೆದರ್ ಕಾಕ್, ಅಮೆಂಡ್ಸ್ ಫಾರ್ ಲೇಡಿಸ್ - ಇವು ಇವನ ಎರಡು ನಾಟಕಗಳು. ಜಾನ್ ಫೋರ್ಡ್ ಎಂಬುವನು ಹಲವಾರು ವೈನೋದಿಕಗಳನ್ನೂ ದುರಂತ ನಾಟಕಗಳನ್ನೂ ಬರೆದಿದ್ದಾನೆ. ದಿ ಲವರ್ಸ್ ಮೆಲಾಂಕಲಿ, ದಿಬ್ರೋಕನ್‍ಹಾರ್ಟ್, ಲವ್ಸ್ ಸ್ಯಾಕರಿಫೈಸ್ - ಇವು ಇವನ ನಾಟಕಗಳು. ವೆಬ್‍ಸ್ಟರ್ ಎಂಬಾತ ಕೂಡ ಉತ್ತಮ ದುರಂತ ನಾಟಕಗಳನ್ನು ರಚಿಸಿದ್ದಾನೆ. ದಿ ವೈಟ್ ಡೆವಿಲ್, ದಿ ದಚಸ್ ಆಫ್ ಮಾಲ್‍ಫಿ - ಇವು ಇವನ ಮುಖ್ಯ ನಾಟಕಗಳು. ಜೇಮ್ಸ್ ಶೆರ್ಲಿ ಎಂಬುವನು ಹಲವಾರು ಉತ್ತಮ ದುರಂತ ನಾಟಕಗಳನ್ನೂ ವೈನೋದಿಕಗಳನ್ನೂ ರಚಿಸಿದ್ದಾನೆ. ದಿ ವೆಡಿಂಗ್ ಮತ್ತು ದಿ ಎಕ್ಸಾಂಪಲ್ - ಇವು ಇವನ ಮುಖ್ಯ ವೈನೋದಿಕಗಳು. ಮಹಾಕವಿ ಮಿಲ್ಟನ್ ಕೂಡ ಆರ್ಕೆಡ್ಸ್ ಮತ್ತು ಕೋಮಸ್ ಎಂಬ ಎರಡು ಮಾಸ್ಕ್ ಪ್ರಕಾರದ ನಾಟಕಗಳನ್ನು ಬರೆದಿದ್ದಾನೆ. 17 ನೆಯ ಶತಮಾನದ ಆರಂಭದಲ್ಲಿ ಲಂಡನ್ನಿನಲ್ಲಿ 11 ನಾಟಕಶಾಲೆಗಳು ನಾಟಕಗಳ ಪ್ರದರ್ಶನ ನೀಡುತ್ತಿದ್ದವು. ರಾಣಿ ಒಂದನೆಯ ಎಲಿಜಬೆತ್‍ಳು ನಾಟಕಕ್ಕೆ ನೀಡಿದ ಪ್ರೋತ್ಸಾಹ ಒಂದನೆಯ ಜೇಮ್ಸ್ ಮತ್ತು ಒಂದೆನಯ ಚಾಲ್ರ್ಸ್‍ರ್ ಕಾಲದಲ್ಲಿಯೂ ಮುಂದುವರೆಯಿತು. 1631 ವೇಳೆಗೆ 17 ನಾಟಕ ಶಾಲೆಗಳು ಹುಟ್ಟಿಕೊಂಡವು. ಆದರೆ 1642 ರಲ್ಲಿ ಅಂತರ್ಯುದ್ಧ ಕಾರಣದಿಂದ ಎಲ್ಲ ನಾಟಕ ಶಾಲೆಗಳನ್ನೂ ಮುಚ್ಚಲಾಯಿತು. ಪ್ಯೂರಿಟನ್ನರು ಅಧಿಕಾರದಲ್ಲಿದ್ದ ಅವಧಿಯಲ್ಲಿ ನಾಟಕವನ್ನು ನಿಷೇಧಿಸಲಾಯಿತು. ರಂಗಭೂಮಿ ಮತ್ತು ಪ್ಯೂರಿಟನ್ನರ ನಡುವೆಘರ್ಷಣೆ ಆರಂಭವಾಯಿತು. ರೆಸ್ಟೊರೇಷನ್ ಅವಧಿಯಲ್ಲಿ ಮತ್ತೆ ನಾಟಕ ಕಲೆಗೆ ಪ್ರೋತ್ಸಹ ದೊರೆತಾಗ ಪ್ಯೂರಿಟನ್ನರ ವಿರುದ್ಧ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ನಾಟಕ ರಚನೆ ಮತ್ತು ಪ್ರಯೋಗಗಳು ನಡೆಯಲಾರಂಭವಾಯಿತು. ಕೌಲಿ ಎಂಬ ಪ್ರಸಿದ್ಧ ಕವಿ ಲವ್ಸ್ ರಿಡ್ಲ್ ಎಂಬ ನಾಟಕವನ್ನು ಆ ಕಾಲದಲ್ಲಿ ರಚಿಸಿದ. ಇದಲ್ಲದೆ ಇವನು ಇನ್ನೂ ಕೆಲವು ವೈನೋದಿಕಗಳನ್ನು ಬರೆದ. 1660ರ ವರೆಗೆ ನಾಟಕಪ್ರಯೋಗಗಳ ಮೇಲಿನ ನಿಷೇಧ ಮುಂದುವರೆಯಿತು. ಆದರೆ ಅದೇವರ್ಷ ಎರಡು ನಾಟಕಕಂಪನಿಗಳಿಗೆ ನಾಟಕಪ್ರದರ್ಶನಕ್ಕೆ ಅನುಮತಿಯೂ ದೊರೆಯಿತು. ಬೆಟರ್‍ಟನ್ ಎಂಬವನು ಆ ಕಾಲದ ಪ್ರಸಿದ್ಧ ನಟ. ಹಾಗೂ ನಾಟಕಕಾರ. ಇವನು ಮೊದಲ ಬಾರಿಗೆ ಇಂಗ್ಲಿಷ್ ರಂಗಭೂಮಿಯಲ್ಲಿ ಸೀನರಿಗಳನ್ನು ಉಪಯೋಗಿಸಿದವನು. ಷೇಕ್‍ಸ್ಪಿಯರನ ನಾಟಕಗಳಲ್ಲಿನ ನಾಯಕ ಪಾತ್ರಗಳನ್ನು ಅಭಿನಯಿಸುವುದರಲ್ಲಿ ಇವನು ಪ್ರಸಿದ್ಧನಾಗಿದ್ದ. 1660 ಡಿಸೆಂಬರ್ 8ರಂದು ಪ್ರಥಮಬಾರಿಗೆ ಮಿಸೆಸ್ ಹ್ಯೂಸ್ ಎಂಬ ನಟಿ ರಂಗಭೂಮಿಯ ಮೇಲೆ ಅಭಿನಯಿಸಿದಳು. ಇವಳು ಅಭಿನಯಿಸಿದ್ದು ಒಥೆಲೋ ನಾಟಕದಲ್ಲಿ ಡೆಸ್‍ಡಿಮೋನಾಳ ಪಾತ್ರ. ಸ್ತ್ರೀಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರೂ ಸ್ತ್ರೀಯರೂ ಸ್ತ್ರೀ ಪಾತ್ರಗಳನ್ನು ಅಭಿನಯಿಸುವ ಪರಂಪರೆ ಬೆಳೆಯತೊಡಗಿತು. ಹೀಗೆ ಸ್ತ್ರೀಯರು ರಂಗಭೂಮಿಯ ಮೇಲೆ ಬರುವುದನ್ನು ಕೆಲವರು ಸ್ವಾಗತಿಸಿದರೆ ಮತ್ತೆ ಕೆಲವರು ವಿರೋಧಿಸುವ ಪರಿಪಾಟವಿತ್ತು.
ರೆಸ್ಟೋರೆಷನ್ ಕಾಲಾವಧಿಯಲ್ಲಿ ಸಾಮಾನ್ಯವಾಗಿ ರಂಗಭೂಮಿಯ ಮೇಲೆ ನಾಟಕ ಆರಂಭವಾಗುವುದಕ್ಕೆ ಮೊದಲು ಒಂದು ಮೂಕಾಭಿಯದ ಪ್ರದರ್ಶನ ಇರುತ್ತಿತ್ತು. ಒಬ್ಬ ನಟ ರಂಗದ ಮೇಲೆ ಬಂದು ಸಂಜ್ಞೆಗಳು ಮತ್ತು ಅಂಗಭಂಗಿಗಳ ಮೂಲಕ ಮುಂದೆ ಪ್ರದರ್ಶನಗೊಳ್ಳಲಿರುವ ನಾಟಕದ ವಸ್ತು ಏನೆಂಬುದನ್ನು ತೋರಿಸುತ್ತಿದ್ದ. ವಿಕರ್‍ಲೆ ಎಂಬವನು ರೆಸ್ಟೋರೇಷನ್ ಕಾಲದ ಒಟ್ಟು ಮುಖ್ಯ ನಾಟಕಕಾರ. ಲವ್ ಇನ್ ಎ ವುಡ್, ಜಂಟ್ಲ್‍ಮನ್ ಡಾನ್ಸಿಂಗ್ ಮಾಸ್ಟರ್, ಕಂಟ್ರಿ ವೈಫ್, ಪ್ಲೈಯ್ನ್ ಡೀಲರ್ - ಇವು ಇವನ ಮುಖ್ಯ ಕಾಮಿಡಿಗಳು. ಇವನ ವೈನೋದಿಕಗಳು ಪ್ಯೂರಿಟನ್ನರಿಂದ ಅನೈತಿಕ, ಸ್ವಚ್ಛಂದ ಎಂಬ ಟೀಕೆಗಳಿಗೆ ಒಳಗಾದವು. ಪ್ಯೂರಿಟನ್ನರ ಅತಿರೇಕದ ವಿಧಿನಿಷೇಧಗಳ ನೈತಿಕಲತೆಗೆ ತೋರಿಸಿದ ಇನ್ನೊಂದು ಅತಿರೇಕದ ಪ್ರತಿಕ್ರಿಯೆಯಾಗಿ ರೇಸ್ಟೋರೇಷನ್ ವೈನೋದಿಕಗಳು ಕಂಡುಬರುತ್ತವೆ. ವಿಕರ್‍ಲೆಯ ನಾಟಕಗಳಲ್ಲಿರುವ ಮೊನಚಾದ ವಿಡಂಬನೆ ಮತ್ತು ಮಾತುಗಾರಿಕೆ ಇವು ಆಗಿನ ಪ್ರೇಕ್ಷಕರಿಗೆ ಪ್ರಿಯವಾಗಿದ್ದವು. ಕಾಂಗ್ರೀವ್ ಈ ಕಾಲದ ಇನ್ನೊಬ್ಬ ನಾಟಕಕಾರ. ವಿಕರ್‍ಲೆಗಿಂತಲೂ ವಿದಗ್ಧನಾದ ಇವನ ನಾಟಕಗಳಲ್ಲಿ ರೇಸ್ಟೋರೇಷನ್ ವೈನೋದಿಕದ ಅತಿರೇಕಗಳಿದ್ದರೂ ಔಚಿತ್ಯ ಪ್ರಜ್ಞೆ ಕಂಡುಬರುತ್ತದೆ. ಇವನ ಮುಖ್ಯನಾಟಕಗಳಿವು : ಓಲ್ಡ್ ಬ್ಯಾಚುಲರ್, ದಿ ಡಬಲ್ ಡೀಲರ್, ಲವ್ ಫಾರ್ ಲವ್, ದಿ ಮೌರ್ನಿಂಗ್ ಬ್ರೈಡ್. ಶಿಲ್ಪಶಾಸ್ತ್ರಜ್ಞನಾಗಿದ್ದ ಸರ್ ಜಾನ್ ವ್ಯಾನ್‍ಬ್ರಗ್ ಎಂಬಾತನ ನಾಟಕಗಳಲ್ಲಿ ಹಾಸ್ಯ ಮತ್ತು ವ್ಯಂಗ್ಯ ಹಾಸುಹೊಕ್ಕಾಗಿರುತ್ತದೆ. ಇವನು ತನ್ನ ನಾಟಕಗಳನ್ನು ಪ್ರದರ್ಶಿಸಲು ತನ್ನದೇ ಒಂದು ರಂಗಶಾಲೆಯನ್ನು ನಿರ್ಮಿಸಿಕೊಂಡಿದ್ದ. ಇವನ ವೈನೋದಿಕಗಳಿವು : ದಿ ರಿಲ್ಯಾಪ್ಸ್, ಪ್ರವೋಕ್ಡ್ ವೈಫ್, ಈಸೋಪ್, ದಿ ಕಾನ್ಫಿಡರಸಿ, ದಿ ಪ್ರವೋಕ್ಡ್ ಹಸ್‍ಬೆಂಡ್, ದೀ ಮಿಸ್ಟೇಕ್. 1714 ರಲ್ಲಿ ಇವನಿಗೆ ನೈಟ್‍ಹುಡ್ ಪದವಿಯನ್ನು ನೀಡಲಾಯಿತು.
ರೆಸ್ಟೋರೇಷನ್ ನಾಟಕಕಾರರಲ್ಲಿ ಇನ್ನೊಬ್ಬ ಬಹುಮುಖ್ಯ ನಾಟಕಕಾರ ಜಾನ್ ಡ್ರೈಡನ್ (1631 - 1700). ಕವಿ ಮತ್ತು ನಾಟಕಕಾರನಾಗಿದ್ದ ಇವನು ಹಲವಾರು ಪದ್ಯ - ವಿಡಂಬನೆಗಳನ್ನು ಬರೆದಿರುವುದಲ್ಲದೆ ವರ್ಜಿಲನ ಕಾವ್ಯವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾನೆ. ಇವನು ವೈನೋದಿಕ, ಟ್ರ್ಯಾಜಿಕಾಮಿಡಿ, ಆಪೆರಾ - ಈ ಎಲ್ಲ ಪ್ರಕಾರಗಳಲ್ಲಿ ನಾಟಕಗಳನ್ನು ರಚಿಸಿದ್ದಾನೆ. ಅಲ್ಲದೆ ಹೀರೋಯಿಕ್ ಟ್ರ್ಯಾಜಿಡಿ ಎಂಬ ಪ್ರಕಾರವನ್ನೂ ಈತ ಆರಂಭಿಸಿದ. ಇವನ ಜನಪ್ರಿಯ ವೈನೋದಿಕಗಳಿವು : ಮ್ಯಾರೆಜ್ - ಅ - ಲಾಪೋಡ್ (1672), ಸರ್ ಮಾರ್ಟಿನ್ ಮಾರ್ಕ್ ಆಲ್ (1667) ಮತ್ತು ಆ್ಯಂ ಫಿಟ್ರಿಯಾನ್. ದಿ ಕಾಂಕ್ವೆಸ್ಟ್ ಆಫ್ ಗ್ರನಾಡ ಎಂಬುದು ಒಂದು ಹೀರೋಯಿಕ್ ಟ್ರ್ಯಾಜಿಡಿ. ಇವನ ಔರಂಗಜೇಬ್ (1675) ಎಂಬ ನಾಟಕ ಈಗಲೂ ಜನಪ್ರಿಯವಾಗಿದೆ. ಇವುಗಳಲ್ಲದೆ ದಿ ವೈಲ್ಡ್ ಗ್ಯಾಲೆಂಟ್ (1663), ಎನ್ ಈವ್‍ನಿಂಗ್ಸ್ ಲವ್ (1668), ಸೀಕ್ರೆಟ್ ಲವ್ (1667) ಮೊದಲಾದ ವೈನೋದಿಕಗಳನ್ನು ಇವನು ಬರೆದಿದ್ದಾನೆ.
ತಾಮಸ್ ಓಟ್‍ವೆ ಈ ಕಾಲದ ಇನ್ನೊಬ್ಬ ನಾಟಕಕಾರ. ಇವನು ಡಾನ್ ಕಾರ್ಲೋಸ್ ಎಂಬ ರುದ್ರನಾಟಕವನ್ನೂ ವೆನಿಸ್ ಪ್ರಿಸರ್‍ವ್ಡ್, ಸೋಲ್ಡರ್ಸ್ ಫಾರ್‍ಚೂನ್ ಎಂಬ ವೈನೋದಿಕಗಳನ್ನು ಬರೆದಿದ್ದಾನೆ.
ರೆಸ್ಟೋರೇಷನ್ ವೈನೋದಿಕಗಳು ಅನೀತಿಯುತ, ಸ್ವಚ್ಛಂದ ಎಂಬ ಟೀಕೆಗೆ ಗುರಿಯಾಗಿದ್ದರೂ ಇಂತಹ ನಾಟಕಗಳನ್ನು ಆಗಿನ ಜನ ಇಷ್ಟಪಟ್ಟು ನೋಡಿ ಆನಂದಿಸುತ್ತಿದ್ದರು ಎಂಬುದು ಮುಖ್ಯ ವಿಚಾರ. ರಂಗಭೂಮಿ ಎಂಬುದು ಒಂದರ್ಥದಲ್ಲಿ ಪ್ರೇಕ್ಷಕರು ಸೃಷ್ಟಿಸಿದ್ದು. ಬಹಳ ಸಂದರ್ಭಗಳಲ್ಲಿ ಅವರ ಅಭಿರುಚಿಯೇ ರಂಗಭೂಮಿಯ ಅಭಿರುಚಿಯನ್ನೂ ರೂಪಿಸುತ್ತದೆ ; ಹಾಗೆಯೆ ರಂಗಭೂಮಿಯೂ ಪ್ರೇಕ್ಷಕರ ಅಭಿರುಚಿಯನ್ನು ರೂಪಿಸುವ ಕೆಲಸ ಮಾಡುತ್ತದೆ.
1725 ರ ಅನಂತರ ಪಾಸ್ಟರಲ್ ನಾಟಕಗಳು, ಆಪೆರಾಗಳು ಮತ್ತು ಕಟು ವಿಡಂಬನೆಗಳು ರಂಗಭೂಮಿಯ ಮೇಲೆ ಹೆಚ್ಚು ಜನಪ್ರಿಯವಾದವು. ವೈನೋದಿಕಗಳ ಅವನತಿಗೆ ಕಟು ವಿಡಂಬನೆಗಳೇ ಕಾರಣ. ಹಾಗೆಯೇ ಸೆಟೈರೆಗಳೂ ಈ ಕಾಲದಲ್ಲಿ ಜನಪ್ರಿಯವಾದವು.
ಷೆರಿಡನ್ ಬರೆದ ದಿ ರೈವಲ್ಸ್, ದಿ ಸ್ಕೂಲ್ ಫಾರ್ ಕ್ಯಾಂಡಲ್ಸ್ - ಈ ನಾಟಕಗಳು ಸಂಭಾಷಣೆಯ ತೀವ್ರತೆ, ಸಾಮಾಜಿಕ ವಿಡಂಬವನೆಯಿಂದಾಗಿ ಪ್ರಾಮುಖ್ಯ ಪಡೆದಿವೆ. ರಿಚರ್ಡ್‍ಸನ್ ಮತ್ತು ಆಲಿವರ್ ಗೋಲ್ಡ್‍ಸ್ಮಿತ್ ಮೊದಲಾದವರೂ ರಂಗಭೂಮಿಗಾಗಿ ಕೆಲವು ನಾಟಕಗಳನ್ನು ರಚಿಸಿದ್ದಾರೆ.
ನಾಟಕರಚನೆ ನಾಟಕ ಪ್ರಯೋಗ ಇವುಗಳು ಆಯಾ ಕಾಲದಲ್ಲಿ ದೊರೆಯುತ್ತಿದ್ದ ರಂಗ ಪರಿಕರಗಳನ್ನು ಮತ್ತು ನಟನಟಿಯರ ಅಭಿನಯಗಳನ್ನು ಅವಲಂಬಿಸಿರುತ್ತದೆ. ಕ್ವೀನ್ ಆ್ಯನ್‍ಳ ಅಧಿಕಾರಾವಧಿತಯಲ್ಲಿ (1701 - 14) ನಾಟಕಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಜೊತೆಗೆ ನಾಟಕಶಾಲೆಗಳಲ್ಲಿ ಪ್ರಯೋಗವಾಗುವ ನಾಟಕಗಳ ಮೇಲೆ ನಿಯಂತ್ರಣ ತರುವ ಕಾನೂನುಗಳೂ ರಚನೆಗೊಂಡವು. ಈ ಕಾಲದಲ್ಲಿ ರಂಗಭೂಮಿಯ ಬೆಳವಣಿಗೆಗೆ ಕಾರಣರಾದ ಪ್ರಸಿದ್ಧ ನಟರಿದ್ದರು. ಇವರುಗಳಲ್ಲಿ ಬಹಳ ಶ್ರೇಷ್ಠನೆಂದು ಪರಿಗಣಿತನಾದವನು ಬೆಟರ್‍ಟನ್. ಕೋಲೆ ಸಿಬರ್ ಎಂಬಾತ ನಟನೂ ನಾಟಕಕಕಾರನೂ ಆಗಿದ್ದ. ಗ್ಯಾರಿಕ್ ಎಂಬ ನಟ 1741 ರಲ್ಲಿ ತನ್ನ ಅಭಿನಯ ಚತುರತೆಯಿಂದ ಪ್ರಸಿದ್ಧಿಗೆ ಬಂದ. ಇವನಿಗಿಂತ ಸ್ವಲ್ಪ ಹಿಂದಿದ್ದ ಸಮರ್ಥ ನಟನೆಂದರೆ ಜೇಮ್ಸ್ ಕ್ವಿನ್. ಇವರಿಬ್ಬರೂ ಒಟ್ಟಿಗೆ ಕೆಲವು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಸರ್ ಹೆನ್ರಿ ಟೇಲರ್ (1800 - 86) ನಾಲ್ಕು ದುರಂತ ನಾಟಕಗಳನ್ನು ಒಂದು ವೈನೋದಿಕವನ್ನೂ ಬರೆದಿದ್ದಾನೆ. ಲಾರ್ಡ್ ಲಿಟ್ಟನ್, ಲಾರ್ಡ್ ಟೆನಿಸನ್, ರಾಬರ್ಟ್‍ಸನ್, ಗಿಲ್‍ಬರ್ಟ್, ಬೈರನ್ ಮೊದಲಾದ 19 ನೆಯ ಶತಮಾನದ ಕವಿಗಳೂ ರಂಗಭೂಮಿಗಾಗಿನಾಟಕಗಳನ್ನು ರಚಿಸಿದ್ದಾರೆ. ಆಗ ಪೊಯಟ್ ಲಾರಿಯಟ್ ಆಗಿದ್ದ ಲಾರ್ಡ್ ಟೆನಿಸನ್ ಮುಖ್ಯವಾಗಿ ರೊಮ್ಯಾಂಟಿಕ್ ಪರಂಪರೆಯ ಕವಿ. ಇವನು ಬರೆದಿರುವ ನಾಟಕಗಳಿವು : ಕ್ವೀನ್ ಮೇರಿ (1876), ದಿ ಫಾಲ್ಕನ್ (1879), ಹೆರಾಲ್ಡ್(1876), ಬೆಕೆಟ್ (1879),. ರಾಬರ್ಟ್ ಬ್ರೌನಿಂಗ್ ಎಂಬ ಕವಿ ಸ್ಟ್ಯಾಫೋರ್ಡ್ (1837), ದಿ ರಿಟರ್ನ್ ಆಫ್ ದಿ ಡ್ರೂಸಸ್ (1843) ಎಂಬ ನಾಟಕಗಳನ್ನು ಬರೆದಿದ್ದಾನೆ. ಈ ನಾಟಕಗಳು ಆಗ ಪ್ರಸಿದ್ಧರಾಗಿದ್ದ ನಟ ನಟಿಯರಿಂದ ರಂಗಭೂಮಿಯ ಮೇಲೆ ಪ್ರಯೋಗಗೊಂಡರೂ ಯಶಸ್ವಿಯಾಗಲಿಲ್ಲ. ಆದರೆ ಲಿಟ್ಟನ್ ಬರೆದ ದಿ ಕಾನ್‍ಸ್ಪಿರಸಿ (1839) ಮತ್ತು ಐತಿಹಾಸಿಕ ನಾಟಕ ವಿಲಿಯಂ ಟೆಲ್ (18245) ಜನಪ್ರಿಯವಾದವು. ಬೈರನ್ ಬರೆದ ನಾಟಕಗಳಲ್ಲಿ ಮುಖ್ಯವಾದದ್ದು ಮ್ಯಾನ್‍ಫ್ರೆಡ್ (1817). ಜಾನ್‍ಕೀಟ್ಸ್, ವಡ್ರ್ಸ್‍ವರ್ತ್, ರಾಬರ್ಟ್‍ಸದೆ, ಕಾಲರಿಡ್ಜ್ ಇವರೆಲ್ಲರೂ ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಆದರೆ ಇವು ಯಾವುವೂ ರಂಗಭೂಮಿಯ ಮೇಲೆ ಸಫಲವಾಗಲಿಲ್ಲ.
19 ನೆ ಶತಮಾನದ ಪ್ರಸಿದ್ಧ ನಟಿ ಮಿಸ್ ಓ ನೀಲ್ ಮತ್ತು ಕೆಂಬೆಲ್ ಕುಟುಂಬಕ್ಕೆ ಸೇರಿದ ಮೂವರು ಸಹೋದರರು. ಒಬ್ಬಳು ಸಹೋದರಿ ಮತ್ತು ಓರ್ವ ಮಗಳು - ಇವರೆಲ್ಲರೂ ರಂಗಭೂಮಿಯ ಮೇಲೆ ಪ್ರಸಿದ್ಧರಾಗಿದ್ದ ನಟ ನಟಿಯರು. ಇವರಲ್ಲದೆ ಹೆಲೆನ್ ಫಾಸಿಟ್, ಎಡ್ಮಂಡ್ ಕೀನ್, ಡಬ್ಲ್ಯು. ಸಿ. ಮ್ಯಾಕ್ರೆಡಿ, ಸರ್ ಬ್ಯಾನ್‍ಕಾಫ್ಟ್, ಕೆಂಡಾಲ್ ಮೊದಲಾದವರು 19 ನೆಯ ಶತಮಾನದ ರಂಗಭೂಮಿಯ ಪ್ರಸಿದ್ಧ ನಟ ನಟಿಯರಾಗಿದ್ದರು. ಈ ನಟನಟಿಯರೇ 19 ನೆಯ ಶತಮಾನದ ಇಂಗ್ಲಿಷ್ ರಂಗಭೂಮಿಯನ್ನು ಜೀವಂತವಾಗಿಟ್ಟಿದ್ದರು.
ರಷ್ಯನ್ ರಂಗಭೂಮಿ : ರಷ್ಯನ್ ಸಾಹಿತ್ಯ 11ನೆಯ ಶತಮಾನದ ವೇಳೆಗೆ ಆರಂಭವಾದರೂ ನಿಜವಾದ ಅರ್ಥದಲ್ಲಿ ರಷ್ಯನ್ ನಾಟಕಸಾಹಿತ್ಯ ಆರಂಭವಾದದ್ದು 18 ನೆಯ ಶತಮಾನದ ಆರಂಭದಲ್ಲಿ. ಅಲ್ಲಿಯವರೆಗೆ ಜನಪದ ಗೊಂಬೆಯಾಟಗಳು ಸಾಮಾನ್ಯ ಜನರ ಮನರಂಜನ ರೂಪಗಳಾಗಿದ್ದವು. 1756 ರಲ್ಲಿ ಸೇಂಟ್ ಪೀಟರ್ಸ್ ಬರ್ಗ್‍ನಲ್ಲಿ ಮೊದಲನೆಯ ನಾಟಕಶಾಲೆ ಆರಂಭಗೊಂಡಿತು. ಅಲ್ಲಿಯವರೆಗೆ ಕೆಲವು ಧಾರ್ಮಿಕ ವಸ್ತುಗಳುಳ್ಳ ರೂಪಕಗಳು ರಚನೆಗೊಂಡಿದ್ದವು. ವಿಸಿನ್ ಎಂಬ ಕವಿ ನಿಡೊರೊಸೆಲ್ ಎಂಬ ಕಾಮಿಡಿಯನ್ನು ಬರೆದಿದ್ದ. ಇದರಲ್ಲಿ ರಷ್ಯನ್ ಸಮಾಜವನ್ನೂ ಸರ್ಫ್‍ಗಳನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದುದನ್ನೂ ಚಿತ್ರಿಸಲಾಗಿದೆ. ಎರಡನೆಯ ಕ್ಯಾಥರೀನ್ ಮತ್ತು ಅಲೆಗ್ಸಾಂಡರ್ ಇವರ ಆಡಳಿತದ ಅವಧಿಯಲ್ಲಿ 18 ನೆಯ ಶತಮಾನದಲ್ಲಿ ಹಲವಾರು ನಾಟಕಗಳು ರಚನೆಗೊಂಡವು. ಕ್ಯಾಥರೀನ್ ರಾಣಿಯೂ ಕೆಲವು ನಾಟಕಗಳನ್ನು ಬರೆದಿದ್ದಾಳೆ.
ಪುಷ್ಕಿನ್ ರಷ್ಯನ್ ಭಾಷೆಯ ಬಹಳ ದೊಡ್ಡಕವಿ ಮತ್ತು ನಾಟಕಕಾರ. 19 ನೆಯ ಶತಮಾನಕ್ಕೆ ಮುಂಚೆ ಮತ್ತು ಈ ಶತಮಾನದ ಆದಿಯಲ್ಲಿ ಮೋಲಿಯರ್, ಕಾರ್ನೀಲ್, ರಾಸೀನ್ ಮೊದಲಾದವರ ನಾಟಕಗಳು ರಷ್ಯನ್ ಭಾಷೆಗೆ ಅನುವಾದಗೊಂಡು ಪ್ರಯೋಗಗೊಳ್ಳುತ್ತಿದ್ದವು. ಈ ಅವಧಿಯಲ್ಲಿ ರಷ್ಯನ್ ರಂಗಭೂಮಿಯ ಮೇಲೆ ಹಲವಾರು ನಾಟಕಗಳು ಪ್ರದರ್ಶನಗೊಂಡರೂ ರಷ್ಯನ್ ಸಾಂಪ್ರದಾಯಿಕ ಚರ್ಚನ್ನು ವಿಡಂಬಿಸುವುದಾಗಲಿ, ಟೀಕಿಸುವುದಾಗಲಿ ನಿಷೇಧಿತವಾಗಿತ್ತು. ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿದ್ದ ರಂಗಶಾಲೆಗಳನ್ನೂ ಸ್ವತಃ ಚಕ್ರವರ್ತಿಯೇ ನಿಯಂತ್ರಿಸುತ್ತಿದ್ದ. ಅಲ್ಲದೆ, ನಾಟಕರಚನೆ, ಪ್ರಯೋಗ ಮತ್ತು ಪ್ರದರ್ಶನಗಳನ್ನೂ ಪ್ರೋತ್ಸಾಹಿಸುತ್ತಿದ್ದ.
ಪರಿಕಲ್ಪನೆಯ ಸ್ವೋಪಜ್ಞತೆ, ನಿರ್ವಹಣೆಯಲ್ಲಿನ ಚೆಲುವು - ಇವುಗಳನ್ನು ರಷ್ಯನ್ ಕಾಮಿಡಿಗಳಾದ ಅಲೆಗ್ಸಾಂಡರ್ಸೆರ್‍ಗಿವಿಚ್ ಗ್ರಿಬಿಡೊ ಬರೆದ ಟೂ ಕ್ಲೆವರ್ ಬೈಹಾಫ್ ಮತ್ತು ನಿಕೋಲಯ್ ವ್ಯಾಸಿಲಿಯೆವಿಚ್ ಗೋಗೋಲ್ ಬರೆದ ಇನ್ಸ್‍ಪೆಕ್ಟರ್ ಜನರಲ್ ನಾಟಕಗಳಲ್ಲಿ ಕಾಣಬಹುದು. ಈ ಕಾಲದಲ್ಲಿ ಯೂರೋಪಿನ ಇತರ ಭಾಗಗಳಲ್ಲಿ ರಚನೆಗೊಳ್ಳುತ್ತಿದ್ದ ಕಾಮಿಡಿಗಳಿಗೂ ರಷ್ಯನ್ ಕಾಮಿಡಿಗಳಿಗೂ ಮೂಲಭೂತ ವ್ಯತ್ಯಾಸಗಳಿವೆ. ಈ ನಾಟಕಗಳಲ್ಲಿ ಕಂಡುಬರುವ ಹಾಸ್ಯಭರಿತ ವಾಸ್ತವಿಕತೆ ಇಲ್ಲಿಗೇ ವಿಶಿಷ್ಟವಾದದ್ದು. ಕ್ಯಾಥರೀನ್ ದಿ ಗ್ರೇಟ್ ಕಾಲದಲ್ಲಿ ಇಂತಹ ಕಾಮಿಡಿಗಳ ರಚನೆಗೆ ಪ್ರೋತ್ಸಾಹ ದೊರಕಿತು. ಈ ಕಾಲದಲ್ಲಿಯೇ ರಷ್ಯದ ವ್ಯಂಗ್ಯಯುಕ್ತ ವಿಡಂಬನಾತ್ಮಕ ಕಾಮಿಡಿಗಳ ರಚನೆಗೆ ಮುನ್ಸೂಚನೆಗಳು ದೊರೆಯುತ್ತವೆ. ಓ, ಟೈಮ್ ! (1772) ದಿ ಇಂಪೋಸ್ಟರ್ (1786), ದಿ ಸೈಬೀರಿಯನ್ ಸಾರ್ಸರರ್ (1786)- ಈ ನಾಟಕಗಳಲ್ಲಿ ಜೀವನವನ್ನು ನೇರವಾಗಿ ಪರೀಕ್ಷಿಸುವ, ಅದರ ವೈಪರೀತ್ಯಗಳನ್ನು ವ್ಯಂಗ್ಯವಾಗಿ ಚಿತ್ರಿಸುವ ಪರಿಯನ್ನು ಕಾಣುತ್ತೇವೆ. ಡೆನಿಸ್ ಇವ್ಯಾನೊವಿಚ್ ಫಾನ್‍ವಿಜಿನ್ ಎಂಬುವನು ಬರೆದ ದಿ ಬ್ರಿಗೇಡಿಯರ್ (1766) ಎಂಬ ವೈನೋದಿಕದಲ್ಲಿ ವಸ್ತು ಸಂವಿಧಾನಕ್ಕಿಂತ ಪಾತ್ರ ಚಿತ್ರಣ ಮತ್ತು ಸನ್ನಿವೇಶ ಚಿತ್ರಣಕ್ಕೆ ಹೆಚ್ಚಿನ ಪ್ರಾಮುಖ್ಯ ಸಿಕ್ಕಿರುವುದನ್ನು ನೋಡುತ್ತೇವೆ. ಈ ನಾಟಕವಲ್ಲದೆ ದಿಬೂಬಿ (1782), ದಿ ಚಾಯ್ಸ್ ಆಫ್ ಎ ಟ್ಯೂಟರ್ (1790) - ಈ ನಾಟಕಗಳಲ್ಲೂ ಇವನ ವ್ಯಂಗ್ಯ ವಿಡಂಬನೆಯನ್ನು ಕಾಣಬಹುದು. ಅನಂತರ ವ್ಯಾಸಿಲಿ ಎಕೋವ್ಲೆವಿಚ್ ಕ್ಯಾಪ್‍ನಿಸ್ಟ್ ಎಂಬಾತ ಬರೆದ ಚಿಕಾನೆರಿ (1788) ಎಂಬ ನಾಟಕದಲ್ಲಿ, ಪ್ರಾಂತೀಯ ನ್ಯಾಯಾಧೀಶರು ನಡೆಸುವ ಕುತಂತ್ರಗಳನ್ನು ವ್ಯಂಗ್ಯವಾಗಿ ವಾಸ್ತವಿಕವಾಗಿ ಚಿತ್ರಿಸಲಾಗಿದೆ. ಈ ಒಂದು ಪರಂಪರೆಯಿಂದ ಗ್ರೀಬೋಯ್ ಡೋವ್‍ನ ವೋವ್ ಫ್ರಂ ವಿಟ್ (1821) ನಾಟಕದಂಥ ಕೃತಿಗಳು ಮುಂದೆ ರಚನೆಗೊಂಡವು. ಮಾಸ್ಕೊ ಥಿಯೇಟರ್‍ನಲ್ಲಿ ಇದು ಪ್ರದರ್ಶಿತವಾಯಿತು. ಈ ಹಿನ್ನೆಲೆಯಲ್ಲಿ ಗೋಗೋಲನ ದಿ ಇನ್ಸ್‍ಪೆಕ್ಟರ್ ಜನರಲ್ ರಚನೆಗೊಂಡಿತು. ಇದು ಆ ಕಾಲ ಶ್ರೇಷ್ಠ ರಷ್ಯನ್ ಕಾಮಿಡಿ ಎಂದು ಪರಿಗಣಿತವಾಗಿದೆ. ಇದರಲ್ಲಿರುವ ವ್ಯಂಗ್ಯ ಮತ್ತು ವಾಸ್ತವಿಕ ಚಿತ್ರಣ ಹಾಗೂ ಹಾಸ್ಯ ಇವು ಷೇಕ್‍ಸ್ಪಿಯರನ ಕಾಮಿಡಿಗಳಿಗೆ ಸಮಾನ ಗುಣಗಳನ್ನು ಉಳ್ಳದ್ದಾಗಿದೆ. ಈ ನಾಟಕವನ್ನು ಮೊದಲು ಅಚ್ಚು ಹಾಕಿಸಿದಾಗ ಪುಟದ ಆರಂಭದಲ್ಲಿ ಹೀಗೆ ಬರೆಯಲಾಗಿತ್ತು : ನಿನ್ನ ಮುಖದಲ್ಲಿರುವ ನ್ಯೂನತೆಗಳಿಗಾಗಿ ಕನ್ನಡಿಯನ್ನು ತೆಗಳಬೇಡ. ಇದೇ ಧಾಟಿಯಲ್ಲಿ ಇವನು ಬರೆದ ಮತ್ತೊಂದು ನಾಟಕ ಮ್ಯಾರೇಜ್ (1847).
ಜರ್ಮನಿಯ ಹೆಬೆಲ್ ಮತ್ತು ಫ್ರಾನ್ಸ್‍ನ ಎಮಿಲಿ ಜೋಲಾ - ಇವರು ಪಶ್ಚಿಮ ಯೂರೋಪಿನ ರಂಗಭೂಮಿಯ ಮೇಲೆ ಗಾಢಪ್ರಭಾವ ಬೀರುತ್ತಿದ್ದ ಕಾಲದಲ್ಲಿ ರಷ್ಯದಲ್ಲಿ, ಇನ್ನೆಲ್ಲಿಯೂ ಇರದ ವಿಶೇಷವಾದ ನಾಟಕಶೈಲಿಯ ಆವಿಷ್ಕರಣ ವಾಗುತ್ತಿತ್ತು. ಅದರ ಪರಾಕಾಷ್ಠಸ್ಥಿತಿಯನ್ನು ಚೆಕಾಫ್‍ನಲ್ಲಿ ಕಾಣಬಹುದು. ಅಲೆಗ್ಸಾಂಡರ್ ನಿಕೋಲಿಯೆವಿಚ್ ಆಸ್ಟ್ರೋವ್‍ಸ್ಕಿ ಎನ್ನುವವ ಸಂಪೂರ್ಣವಾಗಿ ರಂಗಕ್ಕಾಗಿ ನಾಟಕಗಳನ್ನು ರಚಿಸುವುದರಲ್ಲಿ ತೊಡಗಿಸಿಕೊಂಡಿದ್ದ. ಇವನ ನಾಟಕಗಳು ಪ್ರಸಂಗಾತ್ಮಕವಾಗಿದ್ದರೂ (ಎಪಿಸೋಡಿಕಲ್) ಇವುಗಳಲ್ಲಿ ವಾಸ್ತವಿಕತೆ ಕಲಾತ್ಮಕವಾಗಿ ಚಿತ್ರಣಗೊಂಡಿರುತ್ತದೆ. ಸ್ಲೈಸ್ ಆಫ್ ಲೈಫ್ ವಿನ್ಯಾಸವನ್ನು ಇವನ ನಾಟಕಗಳಲ್ಲಿ ಕಾಣುತ್ತೇವೆ. ಎ ಹಾಲಿಡೇ ಡ್ರೀಮ್ ಬಿಫೋರ್ ಡಿನ್ನರ್ (1857), ದಿ ವಾರ್ಡ್ (1859), ಆಫ್ಟರ್ ದಿ ಡಿನ್ನರ್ ಕಮ್ಸ್ ದಿ ರೆಕರಿಂಗ್ - ಇವು ಇವನ ಮುಖ್ಯ ನಾಟಕಗಳು. ಈ ನಾಟಕಗಳಲ್ಲಿ ಚೆಕಾಫ್‍ನಲ್ಲಿ ಕಂಡುಬರುವ ವಿಶೇಷ ನಾಟಕ ವಿನ್ಯಾಸದ ಹೊಳಪುಗಳನ್ನೂ ಕಾಣುತ್ತೇವೆ. ಸಾಮಾನ್ಯವಾಗಿ ಆಸ್ಟ್ರೋವ್‍ಸ್ಕಿಯ ನಾಟಕಗಳು ವಾಸ್ತವವಾದ ನೆಲಗಟ್ಟಿನ ಮೇಲೆ ನಿಂತಿರುತ್ತವೆ. ಎ ಲುಕ್ರೇಟಿವ್ ಜಾಬ್ (1856), ದಿ ಡೈರಿ ಆಫ್ ಎ ಸ್ಕೌಂಡ್ರಲ್ (1868), ರಾಬಿಡ್ ಮನಿ (1870) - ಇವು ಇವನ ಇತರ ನಾಟಕಗಳು.
ಸೆರ್‍ಗೆವಿಚ್ ಟರ್ಗೆನೆವ್ (1818 - 83) ನಾಟಕಕಾರನಷ್ಟೇ ಅಲ್ಲದೆ ಕಾದಂಬರಿಕಾರ ಕೂಡ. ಈತ ಅನೇಕ ನಾಟಕಗಳನ್ನು ಬರೆದಿದ್ದಾನೆ. 1847 - 50 ರ ಅವಧಿಯಲ್ಲಿ ಇವನ ನಟಕಗಳು ರಚನೆಗೊಂಡಿವೆ. ಇವನ ಕೆಲವು ಮುಖ್ಯ ನಾಟಕಗಳಿವು : ಪ್ರೊವಿನ್ಷಿಯಲ್ ಲೇಡಿ 91851), ಎ ಕನ್‍ವರ್‍ಜೇಷನ್ ಆನ್ ದಿ ಹೈವೆ, ಎ ಮಂತ್ ಇನ್ ದಿ ಕಂಟ್ರಿ (1850), ಇನ್ಸಾಲ್‍ವೆನ್ಸಿ, ವೇರ್ ಇಟ್ ಈಸ್ ತಿನ್ ಇಟ್ ಬ್ರೇಕ್ಸ್ (1848), ದಿ ಬ್ಯಾಚಲರ್ (1849).
ಸೂಕ್ಷ್ಮ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ಮತ್ತು ಪಾತ್ರಗಳ ಮಾನಸಿಕಸ್ಥಿತಿಯನ್ನು ಚಿತ್ರಿಸುವಲ್ಲಿ ಟರ್ಗೆನೆವ್ ಸಮರ್ಥ. ಆಸ್ಟ್ರೋವ್‍ಸ್ಕಿ ತನ್ನ ನಾಟಕಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ವರ್ಗಗಳನ್ನು ಚಿತ್ರಿಸುವುದರ ಮೇಲೆ ಒತ್ತು ಹಾಕಿದರೆ ಟರ್ಗೆನೆವ್ ಪಾತ್ರಗಳ ಅಂತರಂಗಕ್ಕೆ ಸಂಬಂಧಪಟ್ಟ ಜಟಿಲತೆಗಳನ್ನು ಚಿತ್ರಿಸುವುದರ ಮೇಲೆ ಒತ್ತು ಹಾಕಿದ್ದಾನೆ.
ಆಸ್ಟ್ರೋವ್‍ಸ್ಕಿ ಮತ್ತು ಟರ್ಗೆನೆವ್ ಇಬ್ಬರೂ ಗೋಗೋಲ್ ಮತ್ತು ಗ್ರಿಬೊಯೆಡೋವ್ ಆರಂಭಿಸಿದ ನಾಟಕ ಪರಂಪರೆಯ ಬುನಾದಿಯ ಮೇಲೆ ಒಂದು ಹೊಸ ವೈನೋದಿಕ ಪರಂಪರೆಯನ್ನು ನಿರ್ಮಿಸಿದವರೆನ್ನಬಹುದು. ಇತರ ವಾಸ್ತವವಾದಿ ನಾಟಕಕಾರರಲ್ಲಿ ಕಾಣದ ಕಾವ್ಯತ್ವವನ್ನು ಇವರ ನಾಟಕಗಳಲ್ಲಿ ಕಾಣುತ್ತೇವೆ. ಇವರ ನಾಟಕಗಳಲ್ಲಿ, ಜೀವನದ ಮಧ್ಯೆ ನಾವು ಇದ್ದೇವೆ ಎನ್ನಿಸುತ್ತಿದ್ದರೂ ಕೇವಲ ತೆಗೆದು ಹಾಕಲಾದ ನಾಲ್ಕನೆಯ ಗೋಡೆಯ ಮೂಲಕ ನಾವು ಜೀವನವನ್ನು ನೋಡುತ್ತಿದ್ದೇವೆ ಎನ್ನಿಸುವುದಿಲ್ಲ. ಅದರ ಬದಲಿಗೆ ದೃಶ್ಯಗಳ ಒಳಗೆ ಮತ್ತು ಹೊರಗೆ ಒಂದೇ ಕಾಲದಲ್ಲಿ ಇದ್ದು ಪಾತ್ರಗಳು ದೃಶ್ಯಗಳ ಹೊರಗೆ ಮತ್ತು ಒಳಗೆ ಪ್ರವೇಶಿಸುತ್ತಿರುವಂತೆ ಅವರನ್ನು ಕಾಣುತ್ತಿದ್ದೇವೆ ಎನ್ನಿಸುತ್ತದೆ, ಒಂದರ್ಥದಲ್ಲಿ ಪ್ರೇಕ್ಷಕನೂ ಅಲ್ಲಿ ಪಾತ್ರಧಾರಿಯಾಗಿರುತ್ತಾನೆ.
ಕೌಂಟ್ ಅಲೆಕ್ಸಿ ಕಾನ್‍ಸ್ಟಾಂಟಿನೋವಿಚ್ ಟಾಲ್‍ಸ್ಟಾಯ್ ಕೆಲವು ನಾಟಕಗಳನ್ನು ಬರೆದಿದ್ದಾನೆ. ದಿ ಡೆತ್ ಆಫ್ ಇವನ್ ದಿ ಟೆರಿಬಲ್ (1866), ಜಾóರ್‍ಬೊರಿಸ್ (1870), ಜಾóರ್ ಫಿಯೋದರ್ ಇವ್ಯಾನೊವಿಚ್ (1868) - ಇವು ಇವನ ಮುಖ್ಯ ನಾಟಕಗಳು. ಇವುಗಳಲ್ಲಿ ರಷ್ಯ ಇತಿಹಾಸದ ಆಕರ್ಷಣೀಯ ಅಭಿವ್ಯಕ್ತಿಯನ್ನು ಕಾಣಬಹುದು. ಇವು ಮಾಸ್ಕೊ ಆರ್ಟ್ ಥಿಯೇಟರ್‍ನಲ್ಲಿ ಯಶಸ್ವಿಯಾಗಿ ಪ್ರಯೋಗಗೊಂಡವು.
ಪ್ರಪಂಚದ ಮಹಾಕಾದಂಬರಿಕಾರನೆಂದು ಪ್ರಸಿದ್ಧನಾಗಿರುವ ಕೌಂಟ್ ಲಿಯೊಟಾಲ್‍ಸ್ಟಾಯ್ (1828 - 1910) ಅನೇಕ ನಾಟಕಗಳನ್ನೂ ಬರೆದಿದ್ದಾನೆ. ಇವನ ನಾಟಕಗಳಲ್ಲಿ ನಾಟಕೀಯ ವಿನ್ಯಾಸದ ದೃಷ್ಟಿಯಿಂದ ನ್ಯೂನತೆಗಳು ಕಂಡುಬಂದರೂ ಪಾತ್ರಚಿತ್ರಣದಲ್ಲಿ ತೀವ್ರತೆ, ದೃಶ್ಯ ನಿರ್ಮಾಣದಲ್ಲಿ ಒಂದು ಘನತೆ ಕಂಡುಬರುತ್ತದೆ. 1887 ರಲ್ಲಿ ಇವನು ರಚಿಸಿದ ದಿ ಪೋಸ್ಟ್ ಡಿಸ್ಟಿಲರ್ ಇವನನ್ನು ರಂಗಭೂಮಿ ಪರಿಚಯಿಸಿತು. ದಿ ಪವರ್ ಆಫ್ ಡಾರ್ಕ್‍ನೆಸ್ (1889), ದಿ ಫ್ರೂಟ್ಸ್ ಆಫ್ ಎನ್‍ಲೈಟನ್‍ಮೆಂಟ್ (1891), ದಿ ಲಿವಿಂಗ್ ಕಾಪ್ರ್ಸ್ (1900) - ಇವು ಇವನ ನಾಟಕಗಳು. ಲೈಟ್‍ಶೈನ್ಸ್ ಇನ್ ಡಾರ್ಕ್‍ನೆಸ್ ಎಂಬ ಇನ್ನೊಂದು ನಾಟಕದಲ್ಲಿ ಯಾತನೆಗೆ ಒಳಗಾದ ತನ್ನ ಅಂತರಂಗಕ್ಕೆ ಅಭಿವ್ಯಕ್ತಿ ಕೊಟ್ಟಿದ್ದಾನೆ.
ಆ್ಯಂಟಿನ್‍ಚೆಕಾಫ್ (1860 - 1904) ನಾಟಕಕಾರನಾಗಿ ಹೆಚ್ಚು ಪ್ರಸಿದ್ಧನಾದವನು. ಆಗ ರಷ್ಯದಲ್ಲಿ ಜನಪ್ರಿಯವಾಗಿದ್ದ ಫ್ರೆಂಚ್ ಹಾಸ್ಯನಾಟಕಗಳಲ್ಲಿ ಮಾದರಿಯಲ್ಲಿ ಇವನು ಹಲವಾರು ಏಕಾಂಕ ನಾಟಕಗಳನ್ನು ಬರೆದ. ಇವುಗಳಲ್ಲಿ ಜನಪ್ರಿಯವಾದವುಗಳೆಂದರೆ ದಿ ಬೇರ್ (1888), ಸದಿ ಪ್ರಪೋಸಲ್ (1889), ದಿ ವೆಡ್ಡಿಂಗ್ (1890). ಜೀವನದ ದುರಂತವನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ಹಾಸ್ಯದೊಂದಿಗೆ ಚಿತ್ರಿಸುವ ಪ್ರತಿಭೆ ಚೆಕಾಫ್‍ನದು. ಈ ಒಂದು ಗುಣವನ್ನು ಇವನ ನಾಟಕಗಳಲ್ಲಿ ಹೇಗೋ ಹಾಗೆಯೇ ಸಣ್ಣ ಕತೆಗಳಲ್ಲಿಯೂ ಕಾಣಬಹುದು. ಇವನ ಆನ್ ದಿ ಹೈ ರೋಡ್ ಎಂಬ ನಾಟಕ ಪೂರ್ಣವಾಗಿ ದುರಂತ ಪ್ರಜ್ಞೆಯನ್ನು ಉಳ್ಳದ್ದಾಗಿದೆ. ಇವನ ಪೂರ್ಣಪ್ರಮಾಣದ ಮೊದಲ ನಾಟಕ ಇವಾನೋವ್. ಕ್ಷಣಿಕ ವ್ಯಾವೋಹದ ಕಾರಣದಿಂದಾದ ಮದುವೆಯೊಂದರ ದುರಂತವನ್ನು ಈ ನಾಟಕ ಚಿತ್ರಿಸುತ್ತದೆ.
ದಿ ವುಡ್ ಡೆಮನ್ (1889), ದಿ ಸೀಗಲ್ (1896) - ಇವು ಇವನ ಪೂರ್ಣ ಪ್ರಮಾಣದ ಪ್ರಸಿದ್ಧ ನಾಟಕಗಳು. ಈ ನಾಟಕಗಳು ರಂಗಭೂಮಿಯ ಮೇಲೆ ಯಶಸ್ವಿಯಾಗಲಿಲ್ಲ. ಹೀಗಾಗಿ ನಾಟಕಗಳನ್ನೇ ಬರೆಯಬಾರದೆಂದು ಯೋಚಿಸುತ್ತಿದ್ದ ಸಮಯದಲ್ಲಿ ಮಾಸ್ಕೊ ಆರ್ಟ್ ಥಿಯೇಟರ್‍ನ ಯಜಮಾನ ನೆಮಿರೊವಿಚ್ ಡ್ಯಾನ್‍ಚೆಂಕೊ ಎಂಬುವನು ಚೆಕಾಫ್‍ನನ್ನು ಪ್ರೋತ್ಸಾಹಿಸಿದ. ಸ್ಟಾನ್ಸ್‍ಲಾವ್‍ಸ್ಕಿ ಎಂಬಾತ ಸೀಗಲ್ ನಾಟಕವನ್ನು ನಿರ್ದೇಶಿಸಿ ಪ್ರಯೋಗ ಮಾಡಲು ಚೆಕಾಫ್‍ನನ್ನು ಒಪ್ಪಿಸಿದ.
ಇವಾನೋವ್ ನಾಟಕದಲ್ಲಿ ಒಂದು ಕೆಂದ್ರಪಾತ್ರದ ಮೇಲೆ ಒತ್ತು ಬಿದ್ದಿದ್ದರೆ, ಸೀಗಲ್ ನಾಟಕದಲ್ಲಿ ಒಂದು ಗುಂಪಿನ ಮೇಲೆ ಒತ್ತುಬಿದ್ದಿರುವುದು ಕಂಡು ಬರುತ್ತದೆ. ಇಲ್ಲಿ ಸಂವಿಧಾನಕ್ಕಿಂತ ಈ ಪಾತ್ರಗಳ ಮಧ್ಯದ ಸಂಕೀರ್ಣ ಸಂಬಂಧದ ಚಿತ್ರಣ ಮುಖ್ಯವಾಗಿರುತ್ತದೆ. ನಾಟಕ ಕ್ರಿಯೆಗಿಂತ ಪಾತ್ರಗಳ ಸ್ವಭಾವಾದಿಗಳ ಸಂಬಂಧ ಮತ್ತು ಕರ್ಷಣದಿಂದ ನಾಟಕೀಯತೆ ಮೂಡುತ್ತದೆ. ಇಂಥ ನಾಟಕವನ್ನು ಸಾಂಪ್ರದಾಯಿಕ ರೀತಿಯಲ್ಲಿ ರಂಗಭೂಮಿಯ ಮೇಲೆ ಪ್ರದರ್ಶಿಸುವುದು ಕಷ್ಟ. ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದವನು ನಿರ್ದೇಶಕನಾಗಿದ್ದ ಕಾನ್‍ಸ್ಟಾಂಟಿನ್ ಸ್ಟಾನ್ಸ್‍ಲಾವ್‍ಸ್ಕಿ. 1898 ರಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ಈ ಪ್ರದರ್ಶನದ ವೈಶಿಷ್ಟ್ಯವೆಂದರೆ ಚೆಕಾಫ್‍ನ ನಾಟಕಗಳಲ್ಲಿರುವ ಟ್ರ್ಯಾಜಿಡಿ ಮತ್ತು ಕಾಮಿಡಿಯ ಸೂಕ್ಷ್ಮ ಸಮತೋಲನವನ್ನು ರಂಗದ ಮೇಲೆ ಯಶಸ್ವಿಯಾಗಿ ನಾಟಕೀಕರಣಗೊಳಿಸಿದ್ದು. ಈ ನಾಟಕದ ಪ್ರಯೋಗದಲ್ಲಿ ಅದರ ದುರಂತ ಅನುಭವಕ್ಕೆ ಬರುವುದು. ಆ ನಾಟಕದಲ್ಲಿನ ವೈನೋದಿಕ ಸಾಧ್ಯತೆಗಳನ್ನೂ ಪ್ರಯೋಗದಲ್ಲಿ ಅಭಿವ್ಯಕ್ತಿಸಿದಾಗ ನಾಕಟದಲ್ಲಿನ ಅಸಂಗತತೆಯೇ ದುರಂತದ ತೀವ್ರತೆಯನ್ನು ಹೆಚ್ಚು ಮಾಡುವಂಥದ್ದು. ಚೆಕಾಫ್‍ನ ಮತ್ತೆರಡು ಮುಖ್ಯ ನಾಟಕಗಳು : ದಿ ತ್ರೀ ಸಿಸ್ಟರ್ಸ್ (1901), ದಿ ಚೆರ್ರಿ ಆರ್ಚರ್ಡ್ (1904). ಚೆಕಾಫ್ûನ ಸೃಜನಾತ್ಮಕ ಶಕ್ತಿ ಅತ್ಯಂತ ಉನ್ನತಸ್ಥಿತಿಯಲ್ಲಿದ್ದ ಕಾಲದಲ್ಲಿಯೇ ದುರದೃಷ್ಟವಶಾತ್ ಇವನು ಮರಣಹೊಂದಿದ 91904). 20 ನೆಯ ಶತಮಾನದಲ್ಲಿ ರೂಪುಗೊಂಡ ಆಧುನಿಕ ನಾಟಕದ ಮುನ್ಸೂಚನೆಗಳನ್ನೆಲ್ಲ ಚೆಕಾಫ್‍ನ ನಾಟಕಗಳಲ್ಲಿ ಕಾಣುತ್ತೇವೆ.
ಡೆನ್ಮಾರ್ಕ್‍ನಲ್ಲಿ ಕೂಡ 17 ನೆಯ ಶತಮಾನದವರೆಗೆ ಯಾವುದೇ ನಾಟಕ ಸಾಹಿತ್ಯವೂ ರಚನೆಗೊಂಡಿರಲಿಲ್ಲ. 1721 ರಲ್ಲಿ ಕೋಪನ್‍ಹೇಗನ್‍ನಲ್ಲಿ ಒಂದು ನಾಟಕಶಾಲೆ ನಿರ್ಮಾಣಗೊಂಡಿತು. ಹಾಲ್‍ಬರ್ಗ್ ಎಂಬ ನಾಟಕಕಾರನೊಬ್ಬ ನಾಲ್ಕು ವರ್ಷಗಳ ಅವಧಿಯಲ್ಲಿ 20 ವೈನೋದಿಕಗಳನ್ನು ರಚಿಸಿದ. ಜೋನ್ಸ್ ಇವಾಲ್ಡ್ ಎಂಬವ ಸ್ಕಾಂಡಿನೇವಿಯದ ಪುರಾಣ ಮತ್ತು ಇತಿಹಾಸದ ವಸ್ತುಗಳನ್ನು ಬಳಸಿಕೊಂಡು ಹಲವಾರು ನಾಟಕಗಳನ್ನು ರಚಿಸಿದ. ಈ ಕಾಲದಲ್ಲೇ ಬರುವ ವೆಸೆಲ್ ಎಂಬ ನಾಟಕಕಾರ ಲವ್ ವಿತೌಟ್ ಸ್ಟಾಕಿಂಗ್ಸ್ ಎಂಬ ನಾಟಕವನ್ನು ಬರೆದ.
ಸ್ವೀಡಿಷ್ ರಂಗಭೂಮಿ : ಸ್ವೀಡನ್‍ನಲ್ಲೂ 16 ನೆಯ ಶತಮಾನಕ್ಕಿಂತ ಮುಂಚೆ ಯಾವ ನಾಟಕಗಳೂ ಇರಲಿಲ್ಲ. ಮೆಸ್ಸೆನಿಯಾಸ್ ಎಂಬ ನಾಟಕಕಾರ ಹಲವಾರು ನಾಟಕಗಳನ್ನು ಬರೆದಿದ್ದಾನೆಂದು ಪ್ರತೀತಿ. ಡ್ಯಾಲಿನ್‍ನಲ್ಲಿ 1737 ರಲ್ಲ ದಿ ನ್ಯೂ ರಾಯಲ್ ಥಿಯೇಟರ್ ಆರಂಭವಾಯಿತು. ಅಲ್ಲಿ ಮೆಸ್ಸೆನಿಯಾಸ್‍ನ ಬ್ರಿನ್ಹಿಲ್ಡಾ ಎಂಬ ಒಂದು ದುರಂತ ನಾಟಕ ಪ್ರಯೋಗಗೊಂಡಿತು.
ನಾರ್ವೆಯ ಹೆನ್ರಿಕ್ ಇಬ್ಸೆನ್ (1828 - 1906) ಮತ್ತು ಸ್ವೀಡನ್ನಿನ ಆಗಸ್ಟ್ ಸ್ಟ್ರಿಂಡ್‍ಬರ್ಗ್ (1849 - 1912) ಇವರಿಬ್ಬರನ್ನು ಸ್ಕಾಂಡಿನೇವಿಯದ ಶ್ರೇಷ್ಠ ನಾಟಕಕಾರರೆಂದು ಪರಿಗಣಿಸಲಾಗಿದೆ. ಸ್ಟ್ರಿಂಡ್‍ಬರ್ಗ್ ಆರಂಭದಲ್ಲಿ ಕೆಲವು ಐತಿಹಾಸಿಕ ನಾಟಕಗಳನ್ನೂ ವೈನೋದಿಕಗಳನ್ನೂ ಸಾಂಪ್ರದಾಯಿಕ ರೀತಿಯಲ್ಲಿ ಬರೆದಿದ್ದಾನೆ. ಇವುಗಳಲ್ಲಿ ಮುಖ್ಯವಾದಂಥವು ದಿ ಸೀಕ್ರೇಟ್ ಆಫ್ ದಿ ಗಿಲ್ಡ್ (1880), ದಿ ವಾಂಡರಿಂಗ್ಸ್ ಆಫ್ ಲಕ್ಕಿ ಪರ್ (1882). 1887 ರಲ್ಲಿ ಇವನ `ಫಾದರ್ ನಾಟಕ ಪ್ರಕಟವಾಯಿತು. ಈ ನಾಟಕದೊಂದಿಗೆ ಸ್ಟ್ರಿಂಡ್‍ಬರ್ಗ್‍ನ ಅಂಧಕಾರಮಯ, ನಿರಾಶಾವಾದಿ ಯಾತನಾಮಯ ವಾಸ್ತವವಾದಿ ನಾಟಕದ ಸರಣಿಯೇ ಆರಂಭವಾಯಿತು. ಈ ನಾಟಕದಲ್ಲಿ ಗಂಡು ಹೆಣ್ಣಿನ ಸಂಬಂಧದ ವೈರುಧ್ಯಗಳನ್ನು ಅತ್ಯಂತ ತೀವ್ರವಾಗಿ ಚಿತ್ರಿಸಲಾಗಿದೆ. ಗಂಡು ಹೆಣ್ಣಿನ ಮಧ್ಯದ ಈ ಸಮರದಲ್ಲಿ ಕೊನೆಗೆ ಗೆಲುವು ಹೆಣ್ಣಿನದೇ. ಇಷ್ಟೇ ತೀಕ್ಷ್ಣವಾದ ನಾಟಕ `ಮಿಸ್ ಜೂಲಿ ' 1888 ರಲ್ಲಿ ಪ್ರಕಟಗೊಂಡಿತು. ಅನಂತರ `ಪ್ಲೇಯಿಂಗ್ ವಿತ್ ಫೈರ್ ನಂತಹ ಏಕಾಂಕ ನಾಟಕಗಳು ರಚನೆಗೊಂಡವು. ಇವುಗಳ ಅನಂತರ ನಾಟಕೀಯ ವಾಸ್ತವಿಕತೆಯನ್ನು ಅತಿರೇಕಕ್ಕೆ ತೆಗೆದುಕೊಂಡು ಹೋದ ನಾಟಕಗಳೂ ರಚನೆಗೊಂಡವು. ಮುಂದಿನ ಹತ್ತು ವರ್ಷಗಳಲ್ಲಿ ಸ್ಟ್ರಿಂಡ್‍ಬರ್ಗ್ ಒಂದಾದ ಮೇಲೊಂದರಂತೆ ವಿವಿಧ ಶೈಲಿಯ ನಾಟಕಗಳನ್ನು ರಚಿಸಿದ. ಅನಂತರ ಕೆಲವು ಸಾಂಕೇತಿಕ ನಾಟಕಗಳನ್ನೂ ರಚಿಸಿದ. ಎ ಡ್ರೀಮ್ ಪ್ಲೆ (1902), ದಿ ಗೋಸ್ಟ್ ಸೊನಾಟ (1907) ಈ ನಾಟಕಗಳಲ್ಲಿ ಕನಸಿನ ತಂತ್ರವನ್ನು ಸಾಂಕೇತಿಕತೆಯ ಸಾಧನೆಗಾಗಿ ಬಳಸಿಕೊಳ್ಳಲಾಗಿದೆ. ಸಾಂಕೇತಿಕ ಮತ್ತು ಧಾರ್ಮಿಕ ಛಾಯೆಯನ್ನುಳ್ಳ ಅಡ್ವೆಂಟ್ (1898), ಈಸ್ಟರ್ (1900), ಡಾನ್ಸ್ ಆಫ್ ಡೆತ್ (ಎರಡು ಭಾಗ) ನಾಟಕಗಳು ರಚನೆಗೊಂಡವು. ಈತ 1907 - 09 ರ ಅವಧಿಯಲ್ಲಿ ಛೇಂಬರ್ ಪ್ಲೇಸ್ (ಒಳಕೋಣೆಯ ನಾಟಕಗಳು) ಎಂಬ ನಾಟಕಗಳನ್ನು ರಚಿಸಿದ. ಇವು ಒಂದು ಪರಿಮಿತ, ಪರಿಣತ ಪ್ರೇಕ್ಷಕರಿಗಾಗಿ ಒಂದು ಕೋಠಡಿಯಲ್ಲಿ ಪ್ರಯೋಗ ಮಾಡಲು ಸಾಧ್ಯವಿರುವಂತಹವು. ಈ ಬಗೆಯ ಮುಖ್ಯ ನಾಟಕಗಳಿವು : ದಿ ಸ್ಟಾರ್ಮ್ (1907), ದಿ ಬನ್ರ್ಟ್‍ಲಾಟ್. ಸ್ಟ್ರಿಂಡ್‍ಬರ್ಗ್‍ನ ಪ್ರಾಮುಖ್ಯ ಇರುವುದು ಇವನು ನಡೆಸಿದ ನಾಟಕ ರಚನೆಯಲ್ಲಿನ ಪ್ರಯೋಗಗಳಲ್ಲಿ. ಗಂಡು ಹೆಣ್ಣುಗಳ ಸಂಬಂಧದ ಸಂಕೀರ್ಣತೆಯನ್ನು ಇನ್ನಾರೂ ಅನ್ವೇಷಿಸದ ಆಳ ಅಗಲಗಳಲ್ಲಿ ಸ್ಟ್ರಿಂಡ್‍ಬರ್ಗ್ ತನ್ನ ನಾಟಕಗಳಲ್ಲಿ ಅನ್ವೇಷಿಸಿದ್ದಾನೆ.
ಇಬ್ಸೆನ್ ಮತ್ತು ಯಾರ್ನ್‍ಸನ್ ಈ ಇಬ್ಬರೂ ನಾರ್ವೆಯ ಬಹಳ ದೊಡ್ಡ ನಾಟಕಕಾರರೆಂದು ಪರಿಗಣಿತರಾಗಿದ್ದಾರೆ. ಇಬ್ಸೆನ್ ಎಂದೊಡನೆಯೇ ನೆನಪಿಗೆ ಬರುವುದು ಇವನ `ಗೋಸ್ಟ್ಸ ನಾಟಕ. ಇವನು ನಾಟಕಕಾರನಾಗಿ ಪ್ರಸಿದ್ಧಿಗೆ ಬರುವುದಕ್ಕೂ ಮುಂಚೆಯೇ ಇವನ ಬರ್ಗೆನ್‍ನಲ್ಲಿದ್ದ ನಾಟಕಶಾಲೆಯೊಂದರಲ್ಲಿ ನಿರ್ದೇಶಕನಾಗಿದ್ದ. ರೊಮ್ಯಾಂಟಿಕ್ ಪರಂಪರೆಯಲ್ಲಿ ರಚನೆಗೊಂಡ ಇವನ ಮೊದಲ ನಾಟಕ `ಕ್ಯಾಟಿಲಿನಾ. ಆಗ ಪ್ರಸಿದ್ಧನಾಗಿದ್ದ ಸ್ಕ್ರೈಬ್ ಎಂಬ ನಾಟಕಕಾರನ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದವು. ನಾಟಕ ತಂತ್ರದ ದೃಷ್ಟಿಯಿಮದ ಇಬ್ಸೆನ್ ಸ್ಕ್ರೈಬ್‍ನಿಂದ ಪ್ರಭಾವಿತನಾಗಿದ್ದಾನೆ.
1855 ರಲ್ಲಿ ಬಂದ `ಲೇಡಿ ಇಂ ಜರ್ ಆಫ್ ಅಸ್ಟ್ರಾಟ್ ನಾಟಕದಲ್ಲಾಗಲೇ ಇಬ್ಸೆನ್ ತನ್ನ ಹೊಸ ನಾಟಕ ಪರಂಪರೆಯನ್ನು ಆರಂಭಿಸಿದ್ದರ ಬಗೆಗೆ ಸೂಚನೆಗಳು ದೊರೆಯುತ್ತವೆ. ನಾಟಕೀಯತೆಯನ್ನು ಸಾಧಿಸುವುದರಲ್ಲಿ, ಪಾತ್ರ ಚಿತ್ರಣದಲ್ಲಿ ಪರಿಣತಿ ಪಡೆಯುತ್ತಿರುವುದು ತಿಳಿಯುತ್ತದೆ. ದಿ ವೈಕಿಂಗ್ಸ್ ಅಟ್ ಹೆಲ್‍ಗೆಲ್ಯಾಂಡ್ (1858) ಮತ್ತು ದಿ ಪ್ರಿಟೆಂಡರ್ಸ್ ನಾಟಕವನ್ನು ಒಂದು `ಸಾಂಕೇತಿಕ ಗಂಭೀರ ನಾಟಕ ಎಂದು ಕರೆಯಲಾಗಿದೆ. 1862 ರಲ್ಲಿ ರಚನೆಗೊಂಡ `ಲವ್ಸ್ ಕಾಮಿಡಿ' ಸಾಂಪ್ರದಾಯಿಕ ಪ್ರೇಮ ಸಂಬಂಧಗಳಿಗೆ ಪ್ರತಿಯಾಗಿ ಭಿನ್ನ ರೀತಿಯ ಸಂಬಂಧಗಳನ್ನು ಚಿತ್ರಿಸುತ್ತದೆ.
1864 ರಲ್ಲಿ ಇಬ್ಸೆನ್‍ಗೆ ಇಂದು ಪ್ರವಾಸ ವೇತನ ದೊರಕಿ ಆರ್ಥಿಕ ಅನುಕೂಲವಾಯಿತು. ಇವನ `ಬ್ರ್ಯಾಂಡ್ (1865) ನಾಟಕವೇ ಇವನಿಗೆ ಈ ಫೆಲೋಷಿಪ್ ಬರಲು ಕಾರಣವಾಯಿತು. ಇದೊಂದು ಪದ್ಯರೂಪದಲ್ಲಿರುವ ಸಾಂಕೇತಿಕ ನಾಟಕ. ದಿ ಪಿಲ್ಲರ್ಸ್ ಆಫ್ ಸೊಸೈಟಿ, ಎ ಡಾಲ್ಸ್ ಹೌಸ್ (1878 - 79), ಗೋಸ್ಟ್ಸ್ (1881), ದಿ ಎನಿಮಿ ಆಫ್ ಪೀಪಲ್ (1881), ದಿ ವೈಲ್ಡ್ ಡಕ್ (1884) ಇವು ಇವನ ಮುಖ್ಯನಾಟಕಗಳು. ಭ್ರಷ್ಟಾಚಾರ, ಆಷಾಢಭೂತಿತನ, ಮದುವೆಯಲ್ಲಿ ಸತ್ಯ ಮತ್ತು ಅಸತ್ಯದ ಸ್ಥಾನ ಇವುಗಳನ್ನು ಅತ್ಯಂತ ವಾಸ್ತವಿಕವಾಗಿ ಈ ನಾಟಕಗಳಲ್ಲಿ ಅನ್ವೇಷಿಸಲಾಗಿದೆ. ದಿ ವೈಲ್ಡ್‍ಡಕ್ ನಾಟಕ ಈ ಹಿಂದಿನ ನಾಟಕಗಳಲ್ಲಿನ ವಾಸ್ತವವಾದವನ್ನು ಉಳಿಸಿಕೊಂಡು ಸಾಂಕೇತಿಕವೂ ಆಗುತ್ತದೆ. ಇಲ್ಲಿ ಬರುವ ಕುಂಟು ಬಾತುಕೋಳಿ ನಾಟಕದ ನಾಯಕಿಯ ಅವಸ್ಥೆಗೆ ಸಂಕೇತವಾಗಿ ಬಿಡುತ್ತದೆ. 1890 ರಲ್ಲಿ ಬರೆಯಲಾದ `ಹೆಡ್ಡಾಗ್ಯಾಬಲರ್ ಎಂಬುದು ಕೃತಕತೆ ಮತ್ತು ನಟನೆ ಇವುಗಳನ್ನು ಒಳಗೊಂಡ ಒಂದು `ಡಾರ್ಕ್ ಕಾಮಿಡಿ;. ಈ ನಾಟಕದಲ್ಲಿ ಇಬ್ಸೆನನ ನಾಟಕ ರಚನೆಯ ಪರಿಣತಿ ಔನ್ನತ್ಯವನ್ನು ಮುಟ್ಟಿತು. ಇಬ್ಸೆನ್ನನ ಪ್ರಭಾವ ರಂಗಭೂಮಿಯ ಮೇಲೆ ಗಾಢವಾಗಿ ಮುಂದುವರಿಯಿತು. ಅನಂತರ ಬಂದ ನಾಟಕಕಾರರೂ ಕೂಡ ಇಬ್ಸೆನನ `ವಾಸ್ತವ ದಿಂದ ಪ್ರಭಾವಿತರಾದರು. ಇಬ್ಸೆನ್ ತನ್ನ ನಾಟಕಗಳಲ್ಲಿ ಸದಾ ಕಾವ್ಯತ್ವವನ್ನು ಉಳಿಸಿಕೊಂಡು ಬಂದವನು. ಇವನ ನಾಟಕಗಳಲ್ಲಿನ ಈ ಗುಣವೇ ಅವುಗಳ ನನು ವರ್ತಮಾನಕ್ಕೂ ಸಂಗತವಾಗಿಸಿದೆ.
ನಾರ್ವೆಯ ಇನ್ನೊಬ್ಬ ಪ್ರಮುಖ ನಾಟಕಕಾರ ಯಾರ್ನ್‍ಸನ್ (1832 - 1910). ಇಬ್ಸೆನನ ಕೀರ್ತಿ, ನಾಟಕಕಾರನಾಗಿ ಇವನ ಪ್ರಾಮುಖ್ಯವನ್ನು ಮಸುಳಿಸುವಂತೆ ಮಾಡಿತು. ವಾಸ್ತವವಾಗಿ ಅನೇಕ ದೃಷ್ಟಿಗಳಲ್ಲಿ ಇವನು ಇಬ್ಸೆನ್ನನಷ್ಟೇ ಪ್ರತಿಭಾವಂತ ನಾಟಕಾರ. ಬಿಟ್‍ವೀನ್ ದಿ ಬ್ಯಾಟಲ್ಸ್ (1857), ಹುಲ್ಡಾ ದಿ ಹಾಲ್ಟ್ (1858) ಮೊದಲಾದ ಇವನ ನಾಟಕಗಳು ರಂಗಭೂಮಿಯ ಮೇಲೆ ಯಶಸ್ವಿಯಾಗಿವೆ. ನಾರ್ವೆಯನ್ನು ಆಳಿದ `ವೈಕಿಂಗ್ ರ ಇತಿಹಾಸವೇ ಈ ನಾಟಕಗಳ ವಸ್ತು. ಸೀಗುರ್ಡ್ ದಿ ಕ್ರುಸೇಡರ್ (1872), ದಿ ಎಡಿಟರ್ (1874), ಎ ಬ್ಯಾಂಕರಪ್ಟ್ (1874) 0- ಇವು ಇವನ ಇತರ ನಾಟಕಗಳು. ಈ ನಾಟಕಗಳಲ್ಲಿ ವಾಸ್ತವವಾದ ಯಶಸ್ಸನ್ನು ಕಾಣುತ್ತೇವೆ. ಎ ಗಾಂಟೆಲೆಟ್ ಮತ್ತು ಬಿಯಾಂಡ್ ಹ್ಯೂಮನ್ ಮೈಟ್ (1883) ಇವನ ಮತ್ತೆರಡು ಜನಪ್ರಿಯ ನಾಟಕಗಳು. ಇಬ್ಸೆನ್ನನನ್ನು ರಗಭೂಮಿಯ 19 ನೆಯ ಶತಮಾನದ ಪ್ಯೂರಿಟನ್ ಎಮದು ಕರೆಯಬಹುದಾದರೆ ಯಾರ್ನ್‍ಸನ್‍ನನ್ನು ಒಬ್ಬ ನಿಜವಾದ `ಮಾನವತಾವಾದಿ (ಹ್ಯುಮನಟೇರಿಯನ್) ಎಂದು ಕರೆಯಬಹುದು.
ಅಮೆರಿಕನ್ ರಂಗಭೂಮಿ : ಅಮೆರಿಕ ಸಮಯುಕ್ತ ಸಮಸ್ಥಾನಗಳ ನಾಟಕದ ಇತಿಹಾಸ ಅಷ್ಟೇನೂ ದೀರ್ಘವಾದದ್ದಲ್ಲ. ಅಲ್ಲಿದ್ದ ವಸಾಹತುಗಳು ಇಂಗ್ಲೆಂಡಿನಿಂದ ಸ್ವತಂತ್ರವಾಗಲು ತೊಡಗಿದ ಕಾಲದಲ್ಲಿ ನಾಟಕ ಪ್ರದರ್ಶನಗಳು ಆರಂಭವಾದವೆಂದು ಹೇಳಬಹುದು. ವೇಗವಾಗಿ ಬೆಳೆಯುತ್ತಿದ್ದ ನಗರಗಳಲ್ಲಿ ನಾಟಕಶಾಲೆಗಳು ನಿರ್ಮಾಣವಾಗಲು ತೊಡಗಿದವು. 18 ನೆಯ ಶತಮಾನದ ಮಧ್ಯಭಾಗದಷ್ಟು ಹೊತ್ತಿಗೆ ಶಾಶ್ವತ ನಾಟಕ ಶಾಲೆಗಳು ನಿರ್ಮಾಣಗೊಳ್ಳತೊಡಗಿದವು. 1767 ರಲ್ಲಿ `ಜಾನ್ ಸ್ಟ್ರೀಟ್ ಥಿಯೇಟರ್ ಆರಂಭವಾಯಿತು. ಆ ಶತಮಾನದ ಕೊನೆಯ ಭಾಗದಲ್ಲಿ ಬಹಳ ಮುಖ್ಯವಾದ `ಪಾರ್ಕ್ ಥಿಯೇಟರ್ ನಿರ್ಮಾಣಗೊಂಡಿತು. 1787 ರಲ್ಲಿ ರಾಯಲ್ ಟೈಲರ್ ಎನ್ನುವವನು ಬರೆದ ದಿ ಕಾಂಟ್ರಾಸ್ಟ್ ಎಂಬ ಒಂದು ಹಾಸ್ಯ ನಾಟಕ ಆ ಕಾಲದಲ್ಲಿ ಅಮೆರಿಕದಿಂದ ಬಂದ ಒಂದು ಮುಖ್ಯ ನಾಟಕ. 19 ನೆಯ ಶತಮಾನದಲ್ಲಿ ನಿಧಾನವಾಗಿ ಅಮೆರಿಕನ್ ನಾಟಕ ರೂಪುಗೊಳ್ಳಲು ತೊಡಗಿತು. 1830 ರ ವೇಳೆಗೆ ಯಾವುದೇ ಪ್ರಮುಖ ನಾಟಕವಾಗಲೀ, ಪ್ರಮುಖ ನಾಟಕಕಾರರಾಗಲೀ ಬಂದಿರಲಿಲ್ಲ. ಅಮೆರಿಕ ರಾಜಕೀಯವಾಗಿ ಒಂದು ರಿಪಬ್ಲಿಕ್ ಆಗುತ್ತಿದ್ದಂತೆಯೇ ಎಲ್ಲ ಕ್ಷೇತ್ರಗಳಲ್ಲೂ ವೇಗವಾದ ಬೆಳವಣಿಗೆ ಆಗತೊಡಗಿತು. ನಾಟಕ ಕ್ಷೇತ್ರದಲ್ಲೂ ಈ ಬೆಳವಣಿಗೆಗಳು ಆಗತೊಡಗಿದವು. ತಿರುಗಾಟದ ನಾಟಕ ಕಂಪೆನಿಗಳು ಪ್ರಮುಖ ನಗರಗಳಲ್ಲಿ ಮತ್ತು ದೂರ ಪ್ರದೇಶಗಳಲ್ಲಿ ನಾಟಕವನ್ನು ಪ್ರದರ್ಶಿಸತೊಡಗಿದವು. ಈ ಶತಮಾನದ ಮಧ್ಯದ ಹೊತ್ತಿಗೆ ಅಮೆರಿಕದಲ್ಲೇ ಹುಟ್ಟಿ ನಟನಟಿಯರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸತೊಡಗಿದರು. ತಾಮಸ್ ಗಾಡ್‍ಫ್ರೇ ಎನ್ನುವವನು ಬರೆದ ದಿ ಪ್ರಿನ್ಸ್ ಆಫ್ ಪಾರ್ಥಿಯ (1765) ಎಂಬ ನಾಟಕವನ್ನು ಅಮೆರಿಕದ ಮೊದಲ ದುರಂತನಾಟಕವೆಂದು ಪರಿಗಣಿಸಬಹುದು. ರಾಬರ್ಟ್ ರೋಜರ್ಸ್ ಬರೆದ `ದಿ ಸ್ಯಾವೇಜಸ ಆಫ್ ಅಮೆರಿಕ (1766) ಒಂದು ಗಮನೀಯ ನಾಟಕ ಕೃತಿ. ಅನಂತರ ಐದು ದಶಕಗಳವರೆಗೆ ಅಂತಹ ಗಮನಾರ್ಹ ಕೃತಿಗಳು ರಚನೆಗೊಳ್ಳಲಿಲ್ಲ. 1830 ರ ವರೆಗೆ ಇದೆ ಸ್ಥಿತಿ ಮುಂದುವರಿಯಿತು.
ಯೂಜೀನ್ ಓನೀಲ್‍ನಿಂದ ಅಮೆರಿಕದ ನಾಟಕ ಪರಂಪರೆ ಆರಂಭವಾಯಿತೆಂದು ಹೇಳಬಹುದು. ಪ್ರಪಂಚ ನಾಟಕಕ್ಕೆ ಅಮೆರಿಕದ ನಿಜವಾದ ಕೊಡುಗೆ ಇರುವುದು 20 ನೆಯ ಶತಮಾನದಲ್ಲಿ. ಆರ್ಥರ್‍ಮಿಲ್ಲರ್ ಮೊದಲಾದ ಅಮೆರಿಕದ ಮುಖ್ಯ ನಾಟಕಕಾರರು ನಾಟಕಗಳನ್ನು ರಚಿಸಿದ್ದು 20 ನೆಯ ಶತಮಾನದ ಮೊದಲರ್ಧ ಭಾಗದಲ್ಲಿ.
ಭಾರತೀಯ, ಚೀನ, ಜಪಾನಿ ರಂಗಭೂಮಿ (ಪೌರಾತ್ಯ): ಪಾಶ್ಚಾತ್ಯ ರಂಗಭೂಮಿಯ ಇತಿಹಾಸದ ಸಂದರ್ಭದಲ್ಲಿ ಯಾವ ಕಾಲವನ್ನು ಮಧ್ಯಯುಗ ಹಾಗೂ ಪುನರುತ್ಥಾನ ಕಾಲ ಎಂದು ಕರೆಯುತ್ತೇವೆಯೊ ಆ ಕಾಲದಲ್ಲಿ ಚೀನ, ಜಪಾನ್ ಮತ್ತು ಭಾರತಗಳಲ್ಲಿ ನಾಟಕ ಹಾಗೂ ರಂಗಭೂಮಿ ಅತ್ಯಂತ ಶ್ರೀಮಂತವೂ ಪರಿಣತವೂ ಆದ ಅಭಿವ್ಯಕ್ತಿಯನ್ನು ಪಡೆದುಕೊಂಡಿತ್ತು. ಪಾಶ್ಚಾತ್ಯ ರಂಗಭೂಮಿಗೆ ಪೌರಾತ್ಯ ರಂಗಭೂಮಿ ಪಾಶ್ಚಾತ್ಯ ರಂಗಭೂಮಿಯ ಮೇಲೆ ಮಾಡಿದ ಪ್ರಭಾವ ಕ್ವಚಿತ್ತಾದದ್ದು. ಗಯಟೆ ಮೊದಲಾದ ಜರ್ಮನ್ ಲೇಖಕರು ಕಾಳಿದಾಸನ ನಾಟಕಗಳಲ್ಲಿನ ಸೌಂದರ್ಯವನ್ನು ಕುರಿತು ಬರೆದರೂ ಶಾಕುಂತಲಾ ನಾಟಕವನ್ನು ಗಯಟೆ ಜರ್ಮನ್ ಭಾಷೆಗೆ ಅನುವಾದಿಸಿದ್ದರೂ ಅದರ ಪ್ರಭಾವ ಜರ್ಮನ್ ರಂಗಭೂಮಿಯ ಮೇಲಾದದ್ದು ಬಹಳ ಕಡಿಮೆ. ಲಿನಬ್ಯಾಕ್ ಎಂಬ ವಿದ್ವಾಂಸ ಜಪಾನಿನ ರಂಗಭೂಮಿಯನ್ನು ಕುರಿತು ಅಧ್ಯಯನ ಮಾಡಿ `ತಿರುಗು ಅಟ್ಟಣೆ ಯನ್ನು (ರಿವಾಲ್ವಿಂಗ್ ಪ್ಲಾಟ್‍ಫಾರಂ) ಪಾಶ್ಚಾತ್ಯ ರಂಗಭೂಮಿಯಲ್ಲೂ ಬಳಸಿಕೊಂಡ. ಅನೇಕ ಪೌರಾತ್ಯ ನಾಟಕಗಳು ಯೂರೋಪಿಯನ್ ಭಾಷೆಗಳಿಗೆ ಅನುವಾದಗೊಂಡು ಪಾಶ್ಚಾತ್ಯರಿಗೆ ಪೌರಾತ್ಯ ರಂಗಭೂಮಿಯ ಪರಿಚಯವಾಗತೊಡಗಿತು. ಭಾರತ, ಚೀನ, ಜಪಾನ್ ರಂಗಭೂಮಿಗಳು ಪಾಶ್ಚಾತ್ಯ ರಂಗಭೂಮಿಯ ಸಂಸರ್ಗಕ್ಕೆ ಬರತೊಡಗಿದವು.
ಆದರೆ ಈ ಪ್ರಭಾವ ಪಾಶ್ಚಾತ್ಯ ರಂಗಭೂಮಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಆಗತೊಡಗಿದ್ದು 29 ನೆಯ ಶತಮಾನದ ಆರಂಭದಿಂದ. ಈ ಅವಧಿಯಲ್ಲಿ ಪಾಶ್ಚಾತ್ಯ ಪ್ರೇಕ್ಷಕರಿಗಾಗಿ ಹಲವಾರು ಪೌರಾತ್ಯ (ಭಾರತ, ಚೀನ, ಜಪಾನ್) ನಾಟಕಗಳು ಅನುವಾದಗೊಂಡು ಪ್ರಯೋಗಗೊಂಡವು. ಅಲ್ಲದೆ ಬ್ರೆಕ್ಟ್‍ನ ಎಪಿಕ್ ಥಿಯೇಟರ್‍ನಲ್ಲಿ ಬಳಸಲಾಗುವ ಅನೇಕ ತಂತ್ರಗಳಿಗೆ ಮೂಲ ಪ್ರಚೋದನೆ ಪೌರಾತ್ಯ ನಾಟಕರಂಗವೇ ಎನ್ನಬಹುದು. ಬ್ರೆಕ್ಟ್‍ನ ಏಲಿಯನೇಷನ್, ಹಿಸ್ಟಾರಿಫಿಕೇಷನ್ ತಂತ್ರಗಳು ಪೌರಾತ್ಯ ರಂಗಭೂಮಿಯ ಪರಂಪರೆಯಿಂದಲೇ ಪಡೆದುಕೊಂಡಂತಹವು. ತನ್ನ ನಾಟಕ ತತ್ತ್ವಕ್ಕೆ ಅನುಗುಣವಾಗಿ ಆ ತಂತ್ರಗಳನ್ನು ಬ್ರೆಕ್ಟ್ ತನ್ನ ನಾಟಕಗಳ ರಚನೆಯಲ್ಲಿ ಮತ್ತು ಪ್ರಯೋಗಗಳಲ್ಲಿ ಬಳಸಿಕೊಳ್ಳುವುದನ್ನು ಕಾಣುತ್ತೇವೆ.
ಚೀನದೇಶದಲ್ಲಿಯೂ ನಾಟಕ ಉಗಮವನ್ನು ಅಲ್ಲಿನ ಪ್ರಾಚೀನ ಧಾರ್ಮಿಕ ಪ್ರಕ್ರಿಯೆಗಳಲ್ಲಿಯೇ ಕಾಣುತ್ತೇವೆ. `ಚೌ ರಾಜಮನೆತನದ (ಕ್ರಿ. ಪೂ. 1122 - 255) ಕಾಲದಲ್ಲಿಯೇ ರಂಗಪ್ರಯೋಗಗಳು ನಡೆಯುತ್ತಿದ್ದವು ಎಂಬುದಕ್ಕೆ ಆಧಾರಗಳಿವೆ. ಅನಂತರ ಕ್ರಿ. ಶ. 8 ನೆಯ ಶತಮಾನದಲ್ಲಿ `ಟ್ಯಾಂಗ್ ರಾಜಮನೆತನದ ಮಿಂಗ್ ಹುಯಾಂಗ್ ಎಂಬ ಚಕ್ರವರ್ತಿ ನಾಟಕ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ. ಆದರೆ `ಯುವಾನ್ ರಾಜಮನೆತನದ ಕಾಲದಲ್ಲಿ (1280 - 1360) ಬರೆಯಲಾದ ಸುಮಾರು 130 ನಾಟಕಗಳು ಈಗ ದೊರೆತಿರುವ ಚೀನದ ಪ್ರಾಚೀನ ನಾಟಕ ಕೃತಿಗಳು. ಇವು ಶುದ್ಧ ಅಭಿಜಾತ ಪರಂಪರೆಗೆ ಸೇರಿದ ನಾಟಕ ಕೃತಿಗಳು. ಅನಂತರ ಜನಪ್ರಿಯ ಅಂಶಗಳು ಇವುಗಳಲ್ಲಿ ಸೇರ್ಪಡೆಯಾದವು. ಈ `ಯುವಾನ್ ಕಾಲದ ನಾಟಕಗಳಲ್ಲಿನ ಮುಂದಿನ ಚೀನದ ನಾಟಕ ಪರಂಪರೆಯ ಮೂಲವನ್ನು ಕಾಣಬಹುದು.
ಚೀನದ ರಂಗಭೂಮಿ ಬಹಳ ವಿಶಿಷ್ಟವಾದದ್ದು. ಎಲಿಜಬೆತನ ನಾಟಕ ಶಾಲೆಯಲ್ಲಿ ಯಂತೆಯೇ ಇಲ್ಲಿ ಕೂಡ ರಂಗಮಂಚವೂ ಪ್ರೇಕ್ಷಕರ ಮಧ್ಯಕ್ಕೆ ಚಾಚಿಕೊಂಡಿರುತ್ತಿತ್ತು. ಅದರ ಎದುರಿಗೆ ಮತ್ತು ಅಕ್ಕಪಕ್ಕಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುತ್ತಿದ್ದರು. ನೆಲದ ಮೇಲೆ ಸಾಮಾನ್ಯವಾಗಿ ಪರುಷರು ಸ್ವಲ್ಪ ಎತ್ತರದ ಪ್ರತ್ಯೇಕ ಸ್ಥಳಗಳಲ್ಲಿ ಸ್ರ್ತೀಯರು ಕುಳಿತುಕೊಳ್ಳುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಮೇಲೆ ಮತ್ತು ಹಿಂದೆ ಪಾತ್ರಗಳು ಕಾಣಿಸಿಕೊಳ್ಳಲು ಉಪ್ಪರಿಗೆಯ ಮೊಗಸಾಲೆ ಇರುತ್ತಿತ್ತು. ಇಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಪಾತ್ರಗಳು ದೇವತೆಗಳದ್ದಾಗಿತ್ತು.
ಈ ರಂಗಭೂಮಿಯ ವೈಶಿಷ್ಟ್ಯವೆಂದರೆ ನಾಟಕ ನಡೆಯುತ್ತಿದ್ದಾಗಲೇ ರಂಗಮಂಚದ ಮೇಲಿನ ಪರಿಕರಗಳನ್ನು ತೆಗೆದುಕೊಂಡು ಹೋಗುವುದು, ಬೇಕಾದವುಗಳನ್ನು ತಂದಿಡುವುದು ಮುಂತಾದ ಕ್ರಿಯೆಗಳನ್ನು ಮಾಡುತ್ತಿದ್ದದ್ದು. ಇದರಿಂದ ಪ್ರೇಕ್ಷಕರಿಗೆ ಯಾವ ಮುಜುಗರವೂ ರಸಭಂಗವೂ ಆಗುತ್ತಿರಲಿಲ್ಲ. ರಂಗದ ಮೇಲೆ ಅಭಿನಯಿಸುವ ಪಾತ್ರಗಳನ್ನು ಷಂಗ್ (ಪುರುಷ ಪಾತ್ರಗಳು ಅಥವಾ ವಿಕಾರ ರೂಪದ ರಾಕ್ಷಸ ಪಾತ್ರಗಳು), ಜೋನ್ (ಹಾಸ್ಯಪಾತ್ರಗಳು) ಎಂಬ ಭಾಗಗಳಾಗಿ ವರ್ಗೀಕರಿಸಲಾಗುತ್ತಿತ್ತು. ಪ್ರತಿಯೊಂದು ವರ್ಗದ ಪಾತ್ರಕ್ಕೂ ವಿಶೇಷವಾದ ಅಂಗ ಭಂಗಿಗಳನ್ನೂ ಪೋಷಾಕುಗಳನ್ನು ನಡಿಗೆಯ ರೀತಿಗಳನ್ನೂ ಅಳವಡಿಸಿರಲಾಗುತ್ತಿತ್ತು. ಒಂದು ಪಾತ್ರ ಯಾವುದೇ ನಾಟಕದಲ್ಲಿ ಬರಲಿ, ಅದು ಯಾವ ವರ್ಗಕ್ಕೆ ಸೇರಿದ್ದು ಎಂಬುದು ತಕ್ಷಣವೇ ತಿಳಿಯುತ್ತಿತ್ತು. ಪೋಷಾಕುಗಳು ಶ್ರೀಮಂತ ಮತ್ತು ವರ್ಣಮಯವಾಗಿರುತ್ತಿದ್ದು ನಾಟಕದ ವಸ್ತುವಿಗನುಗುಣವಾಗಿ ಪಾತ್ರೋಚಿತವಾಗಿರುತ್ತಿದ್ದವು.
ಚೀನದ ನಾಟಕಗಳನ್ನು ಪಾಶ್ಚಾತ್ಯ ಆಪೆರಾಗಳಿಗೆ ಹೋಲಿಸಬಹುದು. ನಾಟಕದ ಕ್ರಿಯೆಯ ಉದ್ದಕ್ಕೂ ಸಂಗೀತ ಗದ್ದಲ ಮಾಡುತ್ತ ಅದನ್ನು ಅನುಸರಿಸುವುದು ಈ ನಾಟಕಗಳ ರೀತಿ. ಅಲ್ಲಲ್ಲಿ ಸಂಭಾಷಣೆ ಬರುತ್ತಿದ್ದರೂ ದೀರ್ಘವಾದ ಸ್ವಗತಗಳಿರುವುದೇ ಹೆಚ್ಚು. ಇಲ್ಲಿನ ಅಭಿನಯದ ಯಾವ ರೀತಿಯೇ ಆಗಲೀ, ಹಸ್ಯ ಸಂದರ್ಭಗಳೇ ಆಗಲೀ ಅತಿರೇಕಕ್ಕೆ ಹೋಗುತ್ತಿದ್ದುದೂ ಉಂಟು. ಇಲ್ಲಿನ ಅಭಿವ್ಯಕ್ತಿಯ ರೀತಿಯೆಲ್ಲ ಉತ್ಪ್ರೇಕ್ಷಿತವಾದದ್ದು. ಸಾಮಾನ್ಯಯವಾಗಿ ಟ್ರ್ಯಾಜಿಡಿ ಕಾಮಿಡಿಗಳೆಂದು ಕರೆಯಬಹುದಾದ ಈ ನಾಟಕಗಳು ಒಂದಾದ ಮೇಲೊಂದರಂತೆ ಒಂದು ಸರಣಿಯಲ್ಲಿ ಪ್ರಯೋಗಗೊಳ್ಳುತ್ತಿದ್ದವು. ಉದಾ : ದಿ ವೆಸ್ಟ್ರನ್ ಛೇಂಬರ್ ಎಂಬ ನಾಟಕ ಒಂದು ನಾಟಕವಾಗಿರದೆ ಒಂದೇ ವಸ್ತು ಮುಂದುವರಿಯುವ ಐದು ಚಿಕ್ಕ ಚಿಕ್ಕ ನಾಟಕಗಳ ಒಂದು ನಾಟಕ ಸರಣಿಯಾಗಿದೆ. `ದಿ ಸರ್ಕಲ್ ಆಫ್ ಚಾಕ್ ಇದೇ ಬಗೆಯ ನಾಟಕ. ಬರ್ಟಾಲ್ಟ್ ಬ್ರೆಕ್ಟ್‍ನ `ಕಕೇಷಿಯನ್ ಚಾಕ್ ಸರ್ಕಲ್ ನಾಟಕಕ್ಕೆ ಈ ನಾಟಕವೇ ಆಧಾರವೆಂದು ತಿಳಿಯುತ್ತದೆ. ದಿ ಆರ್ಫನ್ ಆಫ್û ಚೈನ, ದಿ ಸಾರೋಸ್ ಆಫ್ ಹ್ಯಾನ್, ಫಿಷಿಂಗ್ ಅಂಡ್ ಮೊಸ್ಯಾಕರ್ ಮೊದಲಾದವು ಕೆಲವು ಪ್ರಮುಖ ನಾಟಕಗಳು. ಈ ನಾಟಕಗಳಲ್ಲಿ ಚೆಲುವು ಇದೆ. ಪ್ರಯೋಗ ರೀತಿಯಲ್ಲಿ ವೈಶಿಷ್ಟ್ಯವಿದೆ.
ಜಪಾನಿನ ರಂಗಭೂಮಿ ಕೂಡ ಧಾರ್ಮಿಕ ಪ್ರಕ್ರಿಯೆಗಳಿಂದಲೇ ಆರಂಭಗೊಂಡಿವೆ. ಪ್ರಾಚೀನ ಕಾಲದಿಂದಲೂ ಜಪಾನೀಯರು ಸಂಗೀತ, ನೃತ್ಯ ಮತ್ತು ಪೌರಾಣಿಕ, ಐತಿಹಾಸಿಕ ಕಥಾನಕಗಳು ಮತ್ತು ಮೂಕಾಭಿನಯಗಳನ್ನು ಹೊಂದಿದ್ದರು. 12 ನೆಯ ಶತಮಾನದಲ್ಲಿ ಇಸ್ನೊ - eóÁನ್ - ಜಿó ಎಂಬ ಓರ್ವ ಕವಯಿತ್ರಿ ಹಲವಾರು ನಾಟಕಗಳನ್ನು ಬರೆದು ಸ್ವತಃ ನೃತ್ಯಗಾತಿಯೂ ಆಗಿದ್ದ ಈಕೆ ಪುರುಷ ಪೋಷಾಕು ಹಾಕಿ ನಾಟಕಗಳನ್ನು ಪ್ರದರ್ಶಿಸಿದಳೆಂದು ಪ್ರತೀತಿ. ಆದರೂ ಪೂರ್ಣಾರ್ಥದಲ್ಲಿ ನಾಟಕ ಎಂದು ಕರೆಯಬಹುದಾದ ರೂಪಕಗಳನ್ನು ನಾವು ಕಾಣುವುದು 16 ನೆಯ ಶತಮಾನದ ಹೊತ್ತಿಗೆ , ಅನಂತರದಲ್ಲಿ 1924 ರಲ್ಲಿ `ಎಡ್ಡೊ ಎಂಬಲ್ಲಿ ಒಂದು ನಾಟಕಶಾಲೆ ನಿರ್ಮಾಣಗೊಂಡಿತು. ಸಾಮಾನ್ಯವಾಗಿ ನಾಟಕ ಪ್ರಯೋಗ ಸೂರ್ಯೋದಯದಲ್ಲಿ ಪ್ರಾರಂಭವಾಗಿ ಸೂರ್ಯಾಸ್ತದೊಂದಿಗೆ ಮುಗಿಯುತ್ತಿತ್ತು. ಜಪಾನಿನ ರಂಗಭೂಮಿಗೆ ಸಂಬಂಧಿಸಿದಂತೆ ಎರಡು ಪ್ರಧಾನವಾದ ನಾಟಕ ರೀತಿಗಳನ್ನು ಕಾಣುತ್ತೇವೆ : (1) ಕಬೂಕಿ (2) ನೋ ನಾಟಕಗಳು. `ಕಬೂಕಿ' ಯನ್ನು `ನೋ ನಾಟಕದ ಜನಪ್ರಿಯ ಅವತರಣಿಕೆ ಎಂದು ಕರೆಯಬಹುದು. `ಕಬೂಕಿ' ನಾಟಕಗಳಿಗೆ ಜನಪ್ರಿಯ ಐತಿಹ್ಯಗಳು, ಮಿಥ್‍ಗಳು ಮತ್ತು ಐತಿಹಾಸಿಕ ಸಂದರ್ಭಗಳೇ ವಸ್ತುಗಳು.
ಕಬೂಕಿ ರಂಗಭೂಮಿ ಮುಂಚಾಚಿದ್ದ ರಂಗಮಂಚವನ್ನುಳ್ಳದ್ದಾಗಿದ್ದು ಮೂರು ಕಡೆಗಳಲ್ಲಿಯೂ ಪ್ರೇಕ್ಷಕರಿಂದ ಸುತ್ತುವರಿದಿರುತ್ತಿತ್ತು. ಈ ಪ್ರೇಕ್ಷಕರ ಮಧ್ಯಕ್ಕೆ ಎರಡು ಇಕ್ಕಟ್ಟಾದ `ಹನಾಮಿಚಿ' (ಹೂದಾನಿ) ಗಳಿರುತ್ತಿದ್ದವು. ಈ ದಾರಿಗಳಿಂದಲೇ ನಟರು ರಂಗಮಂಚಕ್ಕೆ ನಡೆದುಬರುತ್ತಿದ್ದರು. ಹೀಗಾಗಿ ಪ್ರೇಕ್ಷಕರಿಗೂ ಅಭಿನಯಿಸುವವರಿಗೂ ಇರುತ್ತಿದ್ದ ವ್ಯತ್ಯಾಸ ಮಸುಕಾಗಿ, ಪ್ರೇಕ್ಷಕರೂ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರೊ ಎನಿಸುತ್ತಿತ್ತು. ಚೀನದಲ್ಲಿಯಂತೆಯೇ ಇಲ್ಲಿಯೂ ರಂಗಪರಿಕರಗಳನ್ನು ತೆಗೆಯುವುದೂ ಜೋಡಿಸುವುದೂ ಪ್ರೇಕ್ಷಕರ ಕಣ್ಣೆದುರಿಗೆ ನಡೆಯುತ್ತಿತ್ತು. ಆದರೆ ವೈಭವದಿಂದ ಕೂಡಿದ ವರ್ಣಮಯ ದೃಶ್ಯಸಂಯೋಜನೆ ಕಬೂಕಿಯ ವೈಶಿಷ್ಟ್ಯವಾಗಿದೆ. ಅಭಿನಯವೂ ಶೈಲೀಕೃತವಾಗಿರುತ್ತಿತ್ತು. ಪ್ರಸಾದನ ಅಡಂಬರದಿಮದ ಕೂಡಿದ್ದು ವರ್ಣಮಯವಾಗಿರುತ್ತಿತ್ತು. ಖಳನಾಯಕರ ಮುಖಗಳನ್ನು ಕೆಂಪುಬಣ್ಣದಿಂದ, ನಾಯಕರ ಮುಖಗಳನ್ನು ಬಿಳಿಬಣ್ಣದಿಂದ ಅಲಂಕರಿಸುತ್ತಿದ್ದರು. ಅಂಗಭಂಗಿಗಳನ್ನು ಉತ್ಪ್ರೇಕ್ಷಿತ ಚಲನವಲನಗಳ ಮೂಲಕ ಅಭಿನಯಿಸಲಾಗುತ್ತಿತ್ತು. ತಿರುಗು ರಂಗಮಂಚವನ್ನು (ರಿವಾಲ್ವಿಂಗ್ ಸ್ಟೇಜ್) ಉಪಯೋಗಿಸುತ್ತಿದ್ದುದರಿಂದ ದೃಶ್ಯ ಬದಲಾವಣೆ ಸುಲಭವಾಗಿರುತ್ತಿತ್ತು.
ಸಾಮಾನ್ಯವಾಗಿ ಕಬೂಕಿ ನಾಟಕಗಳು ದೀರ್ಘವಾಗಿರುತ್ತಿದ್ದವು ; ಪ್ರಸಂಗಗಳ ಸರಪಣಿಯಂತಿರುತ್ತಿದ್ದವು. `ಜಿಡೈಮಾನೊ (ಐತಿಹಸಿಕಗಳು), `ಸವಮೋನೊ (ವ್ಯಕ್ತಿಗಳ ಬಗೆಗಿನ ಮೆಲೊಡ್ರಾಮಾಗಳು), ಷೊಸಾಗೋಟೊ (ನೃತ್ಯಗಳು)- ಇವುಗಳನ್ನು ನಾಟಕಗಳಿಂದ ಆರಿಸಿಕೊಂಡು ಒಂದು ದಿನದ ಪ್ರದರ್ಶನ ಮಾಡುವುದು ವಾಡಿಕೆಯಾಗಿತ್ತು.
ಟೆಕೇಡಾ ಇಸುಮೊ ಎಂಬುವನು ಬರೆದ ಚುಷಿಂಗ್‍ಗುರ (1748) ಎಂಬ ನಾಟಕದಲ್ಲಿ ಮೊದಲನೆಯ ದೃಶ್ಯದಲ್ಲಿ ಯಜಮಾನ ಹರಾಕಿರಿ ಮಾಡಿಕೊಂಡು ಸತ್ತ ಮೇಲೆ ಮುಂದಿನ ಪ್ರಸಂಗಗಳಲ್ಲಿ ಯಜಮಾನನಿಲ್ಲದ ದಿಕ್ಕುತಪ್ಪಿದ ಇವನ ಅನುಯಾಯಿಗಳು ಮಾಡುವ ಕೃತ್ಯಗಳು ಒಂದಾದ ಮೇಲೊಂದರಂತೆ ದೃಶ್ಯಗಳಾಗಿ ಕಾಣಿಸಿಕೊಳ್ಳುತ್ತಾ ಹೋಗುತ್ತವೆ. ಈ ದೃಶ್ಯಗಳ ಹಿನ್ನೆಲೆಯಲ್ಲಿರುವ ಇತಿಹಾಸ ಅಥವಾ ಇತಿವೃತ್ತಗಳನ್ನು, ಅವುಗಳನ್ನು ಬಲ್ಲ ಪ್ರೇಕ್ಷಕರು ಮಾತ್ರ ಅರ್ಥಮಾಡಿಕೊಳ್ಳಲುಸಾಧ್ಯ ಎನ್ನುವ ಮಟ್ಟಿಗೆ ಘಟನೆಗಳು ತ್ವರಿತಗತಿಲ್ಲಿ ಘಟಿಸುತ್ತಿದ್ದವು. ಚಿಕಮಟ್ಸು ಬರೆದ ದಿ ಬ್ಯಾಟಲ್ಸ್ ಆಫ್ ಕುಕುಸೆನ್ಯಾ (1710) ಎಂಬುದು ಘರ್ಷನೆ. ಕೊಲೆ, ವಂಚನೆ, ಹಿಂಸೆ ಮತ್ತು ಸ್ವಾಮಿ ಭಕ್ತಿಯನ್ನು ಕಬೂಕಿ ವಿಧಾನದಲ್ಲಿ ಚಿತ್ರಿಸುವ ನಾಟಕ. 14 - 15 ನೆಯ ಶತಮಾನಗಳ ಅವಧಿಯಲ್ಲಿ ಕನಾಮಿ ಕಿಯೋಟ್ಸುಗು ಮತ್ತು ಅವನ ಮಗ ಸಿಯಾಮಿ ಮೋಟೋಕಿಯೊ ಇವರಿಂದ ನೋ ನಾಟಕ ರೂಪುಗೊಂಡು ಬೆಳೆಯಿತು. ಇದರ ಉಗಮವನ್ನು ದೇವಾಲಯಗಳಲ್ಲಿ ಕಾಣಬಹುದಾದರೂ ಅನಂತರದ ಕಾಲದಲ್ಲಿ ಇದು ಸುಸಂಸ್ಕøತ ಕುಲೀನರ ವಿರಾಮವನ್ನು ತುಂಬಲು ಬಳಕೆಯಾಗುತ್ತಿತ್ತು. ಇದರ ಹಲವಾರು ಅಂಶಗಳು ಜನಪ್ರಿಯ ಕಬೂಕಿ ಪ್ರಕಾರದಲ್ಲಿ ಮಿಲನಗೊಂಡವು. ಆದರೆ `ನೋ ಪ್ರಕಾರ ಮಾತ್ರ ತನ್ನ ಅಭಿಜಾತತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದಿತ್ತು. ನೋ ಪ್ರಯೋಗಗಳಿಗೆ ಬಳಕೆಯಾಗುತ್ತಿದ್ದ ರಂಗ ಬಹಳ ಸರಳವಾದದ್ದು. ಸು 18 ಅಡಿ ಚಚ್ಚೌಕವಾಗಿದ್ದು 4 ಕಡೆಯಲ್ಲೂ ಪ್ರೇಕ್ಷಕರಿಂದ ಸುತ್ತುವರಿಯಲ್ಪಟ್ಟಿರುತ್ತಿತ್ತು. ಅದರ ಬಲಭಾಗದಲ್ಲಿ ಹಾಡುವ ಮೇಳಕ್ಕಾಗಿ ಒಂದು ಇಕ್ಕಟ್ಟಾದ ವೇದಿಕೆ ಇರುತ್ತಿತ್ತು. ಹಿಂಭಾಗದಲ್ಲಿ ಮೇಳಕ್ಕಾಗಿ (ಆರ್ಕೆಸ್ಟ್ರಾ) ಮತ್ತೊಂದು ವೇದಿಕೆ ಇರುತ್ತಿತ್ತು. ನೇಪಥ್ಯವು ಬೇರೆಯ ಒಂದು ಕೊಠಡಿಯಾಗಿದ್ದು ಅದನ್ನು ಮುಖ್ಯ ರಂಗ ಮಂಚಕ್ಕೆ ಒಂದು ಇಕ್ಕಟ್ಟಾದ ದಾರಿಯ ಮೂಲಕ ಸೇರಿಸಲಾಗುತ್ತಿತ್ತು. ಇದರ ಮೂಲಕವೇ ನಟರು ಕಾಣಿಸಿಕೊಳ್ಳುತ್ತಿದ್ದದ್ದು. ಈ ಸೇತುವೆಯಂತಿರುವ ದಾರಿಗೆ ಹಷಿಗಕಾರಿ ಎಂದು ಕರೆಯುತ್ತಾರೆ. ಸೀನರಿ ಒಂದು ಸರಳವಾದ ಮರದ ಹಲಗೆಯ ಮೇಲೆ ಸಾಂಕೇತಿಕವಾಗಿದ್ದು ಪೈನ್‍ವೃಕ್ಷಗಳು ಮತ್ತು ಬೊಂಬುಗಳನ್ನು ಬಣ್ಣದಲ್ಲಿ ಚಿತ್ರಿಸಲಾಗುತ್ತಿತ್ತು.
ನಟರ ವೇಷಭೂಪಣಗಳು ಶ್ರೀಮಂತವೂ ವರ್ಣಮಯವೂ ಆಗಿರುತ್ತಿದ್ದವು. ಮುಖ್ಯಪಾತ್ರಗಳು ಧರಿಸುತ್ತಿದ್ದ ಮುಖವಾಡಗಳು ಅತ್ಯಂತ ಶ್ರೇಷ್ಠ ಕಲೆಯನ್ನುಳ್ಳ ಕೆತ್ತನೆಯ ಕೆಲಸವನ್ನು ಒಳಗೊಂಡಿರುತ್ತಿದ್ದವು. ಇದರಲ್ಲಿ ಪುರುಷರೇ ಅಭಿನಯಿಸುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ಅವರಿಗೆ ಅಭಿನಯ ತರಬೇತಿ ನೀಡಲಾಗುತ್ತಿತ್ತು. ನೋ ನಾಟಕದ ತರಬೇತಿಗಾಗಿ ಅನೇಕ ಅಧಿಕೃತ ಶಾಲೆಗಳು ಇರುತ್ತಿದ್ದವು. ಈ ಕಲೆ ತಂದೆಯಿಂದ ಮಗನಿಗೆ ವಂಶಪಾರಂಪರ್ಯವಾಗಿ ಬಂದದ್ದಾಗಿರುತ್ತಿತ್ತು. ನೋ ನಾಟಕ ಮತ್ತು ನೋ ರಂಗ. ಇದು ಆರಂಭವಾದಂದಿನಿಂದ ಇಲ್ಲಿಯವರೆಗೆ ಯಾವುದೇ ಮೂಲಭೂತವಾದ ವ್ಯತ್ಯಾಸವನ್ನು ಹೊಂದೆ ಹಾಗೆಯೇ ಉಳಿದು ಬಂದಿವೆ. ಶತಮಾನಗಳುದ್ದಕ್ಕೂ ಪನಾಮಿ ಕಿಯೋಟ್ಸುಗು ಮತ್ತು ಸಿಯಾಮಿ ಮೋಟೋಕಿಯೊ ಇವರಿಂದ ಆರಂಭಗೊಂಡ ಈ ಕಲೆ ಯಾವುದೇ ಬದಲಾವಣೆ ಹೊಂದದೆ ಮುಂದುವರಿದುಕೊಂಡು ಬಂದಿದೆ. ಈ ಐದು ವರ್ಗಗಳಿಂದಲು ಒಂದೊಂದು ಭಾಗವನ್ನು ಆಯ್ಕೆಮಾಡಿಕೊಂಡು ಒಂದಾದ ಮೇಲೊಂದರಂತೆ ಅವುಗಳನ್ನು ಪ್ರದರ್ಶಿಸುವುದು ವಾಡಿಕೆ. ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ಮಧ್ಯೆ ಒಂದು ಹಾಸ್ಯ ಪ್ರಸಂಗವನ್ನು ತರಲಾಗುತ್ತದೆ. ಇದನ್ನು ಕಿಯೋಗೆನ್ ಎಂದು ಕರೆಯುತ್ತಾರೆ. ಪ್ರಾಸ್ತಾವಿಕದಲ್ಲಿ ಸೂರ್ಯದೇವತೆ ಭಾಗವಹಿಸುತ್ತಾಳೆ. ಮೊದಲನೆಯ ನಾಟಕ ಭಾಗದಲ್ಲಿ (ಶುರುಮೋನೊ) ಒಬ್ಬ ಯೋಧನ ಪ್ರೇತ ಕಾಣಿಸಿಕೊಳ್ಳುತ್ತದೆ. ಎರಡನೇಯ ಭಾಗದಲ್ಲಿ ಒಂದು ಅತಿಮಾನುಷ ಸಂದರ್ಭ ಬರುತ್ತದೆ. ಕೊನೆಯದರಲ್ಲಿ ಮನುಷ್ಯರ ಭಾವಾವೇಶಗಳ ಘರ್ಷಣೆ ಅಥವಾ ಯಾವುದಾದರೂ ಒಂದು ಮೌಲ್ಯ ಪ್ರತಿಪಾದನೆ ಇರುತ್ತದೆ. ನಾಯಕ (ಷಿಟೆ). ಅವನ ಹತ್ತಿರದ ಅನುಯಾಯಿ ಟ್ಸುರೆ ನಾಯಕನಿಗೆ ಎರಡನೆಯವನಾಗಿ ಬರುವ ಪಾತ್ರ ವಾಕಿ ಮತ್ತು ಅವನ ಅನುಯಾಯಿ. ಒಂದು ಮಗು (ಕೊಕಾಟ) ಇವರುಗಳಲ್ಲದೆ ಆಯ್ ಎಂಬ ಹೆಚ್ಚಿನ ಒಬ್ಬ ನಟ. ಇವರುಗಳು ನೋ ನಾಟಕದಲ್ಲಿ ಬರುವ ಮುಖ್ಯ ಪಾತ್ರಗಳು, ಸಿಯಾಮಿ ಬರೆದ ಎಟ್‍ಸುಮೋರಿ ಎಂಬ ನಾಟಕ. ಕೊಂಪಾರುಜೆಂಬೊ ಮೊಟಯಾಸು ಬರೆದ ಹಟ್ಸುಯಾಕಿ ಎಂಬ ನೋ ನಾಟಕಗಳು ಪ್ರಸಿದ್ಧವಾದವು.
ನೋ ಮತ್ತು ಕಬೂಕಿ ಪ್ರಕಾರಗಳಷ್ಟೆ ಪ್ರಮುಖವಾದ ಇನ್ನೊಂದು ಪ್ರಕಾರ ಗೊಂಬೆಯಾಟ. ಚಿಕಮಟ್ಸು ಮೊದಲಾದ ನಾಟಕಾರರು ಗೊಂಬೆಯಾಟ ಎರಡೂ ಒಂದಕ್ಕೊಂದು ಪೂರಕವಾಗಿಯೇ ಬೆಳೆದುಕೊಂಡು ಬಂದಿದೆ. 1600ರ ಹೊತ್ತಿಗೆ ಸಂಗೀತ ಅಭಿನಯ (ಗೊಂಬೆಗಳು) ಮತ್ತು ಕಥನ ಇವುಗಳು ಸಮ್ಮಿಲನಗೊಂಡ ಗೊಂಬೆಯಾಟದ ಕಲೆ ಬೆಳೆಯಿತು. ಸಾಂಪ್ರದಾಯಿಕ ಕುಸುರಿಕೆಲಸ ಮತ್ತು ಪರಿಪೂರ್ಣ ಅಲಂಕಾರ ಇವುಗಳು ಗೊಂಬೆಯಾಟ ವಿವಿಧ ರೀತಿಗಳಲ್ಲಿ ಚೀನ ಮತ್ತು ಭಾರತಿಗಳಲ್ಲೂ ಬೆಳೆದುಬಂದಿದೆ.
ಪಾಶ್ಚಾತ್ಯ ರಂಗಭೂಮಿಯ ಮೇಲೆ ಕೊಂಚ ಪ್ರಾಭಾವ ಬಿರಿದ ಪೌರಾತ್ಯ ದರಂಗ ಭೂಮಿಯಲ್ಲಿ ಪ್ರಥಮವೂ ಮುಖ್ಯವೂ ಆದದ್ದು ಭಾರತೀಯ ರಂಗ ಭೂಮಿ, ನಾಟಕ ಅಥವಾ ರಂಗಭೂಮಿಯ ಉಗಮ ಭಾರತದಲ್ಲಿ ಯಾವಾಗ, ಆಯಿತು ಎಂದು ಹೇಳುವುದು ಕಷ್ಟದ ಕೆಲಸ. ಊರ್ವಶಿ ಸ್ವರ್ಗದಿಂದ ಭೂಮಿಗೆ ನಾಟಕ ಕಲೆಯನ್ನು ತಂದಳು ಎಂಬ ಒಂದು ಪೌರಾಣಿಕ ಕಥೆಯಿದೆ. ಇದರ ಪ್ರಕಾರ ಒಮ್ಮೆ ಊರ್ವಶಿ ಇಂಧ್ರನ ಎದುರಿಗೆ ನಾಟ್ಯವಾಡುತ್ತಿದ್ದವಳು. ಇದ್ದಕ್ಕಿದ್ದಂತೆ ಅನ್ಯಮನಸ್ಕಳಾಗಿ ನೃತ್ಯದ ಮೇಲೆ ಮನಸ್ಸನ್ನು ಕೇಂದ್ರಿಕರಿಸಿದಾದಳು. ಇದನ್ನು ಗಮನಿಸಿದ ಇಂದ್ರ ಅವಳನ್ನು ಮತ್ರ್ಯಲೋಕಕ್ಕಟ್ಟಿದ. ಈ ರೀತಿಯಿಂದ ಸ್ವರ್ಗದಲ್ಲಿದ್ದ ನಾಟಕ ಮತ್ರ್ಯಕ್ಕೆ ಬಂತು.
ನಮಗೆ ದೊರೆತಿರುವ ನಾಟ್ಯಶಾಸ್ತ್ರವನ್ನು ಕುರಿತಂತೆ ಕ್ರಮಬದ್ದವಾದ ಆಲೋಚನೆಗಳನ್ನುಳ್ಳ ಗ್ರಂಥ ನಾಟ್ಯಶಾಸ್ತ್ರ, ಶಾಸ್ತ್ರ ಇದರ ಕರ್ತೃ ಭರತನೆಂದು ಪ್ರತೀತ. ಈ ಕೃತಿ ಆಶ್ಚರ್ಯಕರ ರೀತಿಯಲ್ಲಿ ನಾಟ್ಯಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿವರಗಳನ್ನು ಕೊಡುತ್ತದೆ. ಪಾಶ್ಚಾತ್ಯ ನಾಟಕಕ್ಕೆ ಅರಿಸ್ಟಾಟಲನ ಕಾವ್ಯಮೀಮಾಂಸೆ ಹೇಗೋ ಹಾಗೆ ಭಾರತೀಯ ನಾಟ್ಯಕ್ಕೆ ನಾಟ್ಯಶಾಸ್ತ್ರ. ಇದರಲ್ಲಿ ನಾಟ್ಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಸಮಗ್ರವಾಗಿ ವಿವೇಚಿಸಲಾಗಿದೆ. ವಿವಿಧ ರೀತಿಯ ನಾಟ್ಯಪ್ರಕಾರಗಳನ್ನು ಕುರಿತೂ ಇಲ್ಲಿ ವಿವೇಚಿಸಲಾಗಿದೆ. ನಾಟಕ ನಾಟಿಕಾ ಪ್ರಕರಣ ಬಾಣ, ವ್ಯಾಯೋಗ, ಸಮವಕಾರ, ಡಿಮ, ಈಹಾಮೃಗ, ಅಂಕ ವೀಥಿ ಪ್ರಹಸನ ಇವುಗಳ ಗುಣಲಕ್ಷಣಗಳನ್ನು ಕುರಿತು ಹೇಳಲಾಗಿದೆ. ಛಂದಸ್ಸನ್ನು ಕುರಿತು. ಅಲಂಕಾರಗಳನ್ನು ಕುರಿತು, ಹಾಸ್ಯ ಪ್ರಕಾರಗಳನ್ನು ಕುರಿತು ಈ ಕೃತಿಯಲ್ಲಿ ವಿವೇಚಿಸಲಾಗಿದೆ. ಈ ಕೃತಿ ನಾಟಕಕ್ಕೆ ಸಂಬಂಧಿಸಿದ ವಿಶ್ವಕೋಶದಂತಿದೆ.
ಸಂಸ್ಕ್ರತ ನಾಟಕಗಳನ್ನು ಪ್ರಯೊಗಿಸುತ್ತಿದ್ದ ರಂಗಮಂಟಪ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಬಹುದು. ರಾಜನ ಅರಮನೆಯಲ್ಲಿ ರಂಗಮಂದಿರವಿರುತ್ತಿತ್ತು. ಸೂಕ್ಷ್ಮ ಪರಿಶೀಲನೆಯ ಅನಂತರ ಆ ರಂಗಮಂದಿರವನ್ನು ಕಟ್ಟುವ ಸ್ಥಳವನ್ನು ಆರಿಸಲಾಗುತ್ತಿತ್ತು. ನಾಟ್ಯಶಾಸ್ತ್ರದಲ್ಲಿ ಹೇಳಿರುವ ಪ್ರಮಾಣಕ್ಕನುಗುಣವಾಗಿ ಇದನ್ನು ನಿರ್ಮಿಸಲಾಗುತ್ತಿತ್ತು. ನಾಲ್ಕು ವರ್ಣಗಳನ್ನೂ ಪ್ರತಿನಿಧಿಸುವಂತಿರುವ ನಾಲ್ಕು ಸ್ತಂಭಗಳು ಒಂದೊಂದು ಮೂಲೆಯಲ್ಲೂ ಇದ್ದು ಅವು ಭಾವಣಿಯನ್ನು ಹೊತ್ತಿರುತ್ತಿದ್ದವು. 100 ಅಡಿ ಉದ್ದ 50 ಅಡಿ ಅಗಲದ ಹಜಾರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಒಂದು ಭಾಗದಲ್ಲಿ ರಾಜ ಮತ್ತು ಅವನ ಪರಿವಾರದವರು ಕುಳಿತುಕೊಳ್ಳಲು ವ್ಯವಸ್ಥೆಯೂ ಇನ್ನೊಂದು ಭಾಗದಲ್ಲಿ ನಟವರ್ಗದವರು ಇರುವ ವ್ಯವಸ್ಥೆಯೂ ಇರುತ್ತಿತ್ತು. ಪ್ರೇಕ್ಷಕರ ಎದುರಿಗೆ ಒಂದು ಅಟ್ಟಣೆಯಾಕಾರದ ರಂಗಮಂಚವಿರುತ್ತಿತ್ತು. ಇದರ ಅಕ್ಕಪಕ್ಕದಲ್ಲಿ ಎರಡು ಕೋಣೆಗಳಿರುತ್ತಿದ್ದವು. ಅವುಗಳನ್ನು ತೆರೆಯಿಂದ ಮುಚ್ಚಿದ್ದು ಅವಕಾಶಬಿದ್ದಾಗ ತೆರೆಯನ್ನು ಮೇಲೆಳೆದರೆ ಹಿಂಬದಿಯ ಭಿತ್ತಿಯ ಮೇಲೆ ಚಿತ್ರಣಗೊಂಡಿದ್ದ ದೃಶ್ಯಗಳು ಗೋಚರವಾಗುತ್ತಿದ್ದವು. ಶೈಲೀಕೃತವಾದ ಅಭಿನಯ ಇರುತ್ತಿತ್ತು. ಉದಾ: ದುಂಬಿಯು ಶಕುಂತಲೆಯನ್ನು ಪೀಡಿಸುವ ಸಂದರ್ಭದಲ್ಲಿ ಶಕುಂತಲೆಯ ಪಾತ್ರವನ್ನು ಅಭಿನಯಿಸುವ ನಟಿ ಭಯವನ್ನು ವ್ಯಕ್ತಪಡಿಸಲು ತನ್ನ ತಲೆಯನ್ನು ಅತ್ತಿತ್ತ ಚಲಿಸುವುದು ಮತ್ತು ತುಟಿಗಳ ಕಂಪನ ಮತ್ತು ದುಂಬಿಯ ಆಕ್ರಮಣದ ರೀತಿಯನ್ನು ಹಸ್ತದ ಮೂಲಕ ಸೂಚಿಸುವುದು. ಈ ಮೂಲಕ ಭಯದ ಭಾವವನ್ನು ವ್ಯಕ್ತಪಡಿಸಲಾಗುತ್ತಿತ್ತು. ಪ್ರಧಾನ ರಸಕ್ಕೆ ಪೂರಕವಾಗಿ ಅಭಿನಯದ ಎಲ್ಲ ಪರಿಕರಗಳೂ ಬಳಕೆಯಾಗುತ್ತಿದ್ದವು. ಸಂಸ್ಕøತದ ಅತ್ಯಂತ ನಾಟಕಕೃತಿಯೊಂದು ಪರಿಗಣಿತವಾಗಿರುವ ಮೃಚ್ಚಕಟಿಕಾ ಒಂದು ಪ್ರಕರಣವಾಗಿದೆ. ಸು. 2000 ವರ್ಷಗಳ ಹಿಂದೆ ಶೂದ್ರಕನಿಂದ ಇದು ರಚನೆಗೊಂಡಿರಬೇಕೆಂದು ತಿಳಿಯಲಾಗಿದೆ. ಈ ಪ್ರಕರಣದ ವೈಶಿಷ್ಟ್ಯವೆಂದರೆ ರಾಜ್ಯಕ್ಕಾಗಿ ನಡೆದ ಒಳಪಿತೂರಿಗಳ ಜೊತೆಗೆ ಅಂದಿನ ಸಾಮಾಜಿಕ ರಾಜಕಿಯ ಸ್ಥಿತಿಗತಿಗಳನ್ನು ಸಮರ್ಥವಾಗಿ ಇದು ಚಿತ್ರಿಸಿರುವುದು. ಕ್ರಾಂತಿಯ ಅನಂತರ ಕೊನೆಯಲ್ಲಿ ರಾಜತ್ವದಲ್ಲಿ ಆಗುವ ಬದಲಾವಣೆ. ಹಾಗೆಯೇ ಚಾರುದತ್ತ ಹಾಗೂ ವಸಂತಸೇನೆಯ ಪ್ರಣಯ, ರಾಜನ ಮೇಲೆ ಗಾಢವಾಗಿ ಪ್ರಭಾವ ಬೀರುತ್ತಿದ್ದ ರಾಜನ ಭಾವಮೈದುನನಾದ ಶಕಾರನ ಪಾತ್ರಚಿತ್ರಣ ಇವುಗಳೆನ್ನೆಲ್ಲ ಒಳಗೊಂಡ ಈ ನಾಟಕ ಆಧುನಿಕ ಕಾಲಕ್ಕೂ ಅತ್ಯಂತ ಸಂಗತವಾಗಿದೆ.
ಸಂಸ್ಕøತದ ನಾಟಕ ಇತಿಹಾಸದಲ್ಲಿ ಬಹಳ ದೊಡ್ಡ ಹೆಸರು ಕಾಳಿದಾಸನದು. ಇವನ ಶಾಕುಂತಲಾ ನಾಟಕ ಜಾಗತಿಕ ನಾಟಕಕ್ಕೆ ಕೊಟ್ಟ ಒಂದು ಶ್ರೇಷ್ಠ ಕೊಡುಗೆಯಾಗಿದೆ. ಈ ನಾಟಕವನ್ನು ಗಯಟೆ, ಷ್ಲಿಗೆಲ್, ಹಮ್ ಬೋಲ್ಡ್ ಮೊದಲಾದ ಪಾಶ್ಚಾತ್ಯ ಲಾಕ್ಷಣಿಕರು ಹಾಗೂ ಕವಿಗಳು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಮೋನಿಯರ್ ವಿಲಿಯಮ್ಸ್ ಇದನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದಾನೆ. ವಿಕ್ರಮೋರ್ವಶೀಯ, ಮಾಳವಿಕಾಗ್ನಿಮಿತ್ರ ಇವು ಕಾಳಿದಾಸನ ಮತ್ತೆರಡು ಪ್ರಮುಖ ನಾಟಕಗಳು.
ಸಂಸ್ಕøತದ ಮತ್ತೊಬ್ಬ ಶ್ರೇಷ್ಠ ಹಾಗೂ ಪ್ರಸಿದ್ಧ ನಾಟಕಕಾರ ಭಾಸ, ಇವನು ಕಾಳಿದಾಸನಿಗಿಂತಲೂ ಹಿಂದಿನ ನಾಟಕಕಾರನೆಂದು ಈಗ ಭಾವಿಸಲಾಗಿದೆ. ಇವನು ಬರೆದ ನಾಟಕಗಳು ದೊರೆತದ್ದು ಈ ಶತಮಾನದ ಆದಿಯಲ್ಲಿ ಊರುಭಂಗ, ಮಧ್ಯಮವ್ಯಾಯೋಗ, ಪಂಚರಾತ್ರ, ಪ್ರತಿಮಾನಾಟಕ, ಸ್ವಪ್ನವಾಸವದತ್ತ ಮೊದಲಾದವು ಇವನ ನಾಟಕಗಳು, ಪಾತ್ರಚಿತ್ರಣ ಮತ್ತು ಸಂದರ್ಭ ನಿರ್ವಹಣೆಯಲ್ಲಿ ಇವನು ತೊರುವ ಸಂಯಮ ಇವನ ನಾಟಕಗಳ ವೈಶಿಷ್ಟ್ಯ ಕಟ್ಟಾ ಯುದ್ಧ ವಿರೋಧಿಯಾಗಿ ಇವನು ಮಹಾಭಾರತ ಯುದ್ಧವನ್ನು ತನ್ನ ಪಂಚರಾತ್ರ ನಾಟಕದಲ್ಲಿ ನಿವಾರಿಸಿದ್ದಾನೆ.
ಕನೂಜದ ರಾಜನಾಗಿದ್ದ ಶ್ರೀಹರ್ಷನು ರತ್ನಾವಳಿ, ಪ್ರಿಯದರ್ಶಿಕಾ ಎಂಬ ನಾಟಕಗಳನ್ನು ಬರೆದಿರುವನಲ್ಲದೆ ಪ್ರಸಿದ್ಧ ನಾಗಾನಂದ ನಾಟಕವನ್ನು ರಚಿಸಿದ್ದಾನೆ. ಭವಭೂತಿಯ ಉತ್ತರರಾಮಚಿರಿತ ಮಾಲತೀಮಾಧಾನ, ಭಟ್ಟನಾರಾಯಣನ ವೇಣಿಸಂಹಾರ (ಇದು ಪಂಪ, ರನ್ನರ ಮೇಲೆ ಬಹಳವಾಗಿ ಪ್ರಭಾವ ಬೀರಿರುವ ಕೃತಿ) ರಾಜಶೇಖರನ ವಿದ್ದಸಾಲೊಭಂಜಿಕಾ, ಪ್ರಚಂಡಪಾಂಡವ, ಬಾಲರಾಮಾಯಣ, ವಿಶಾಖದತ್ತನ ಮುದ್ರಾರಾಕ್ಷಸ ಈ ನಾಟಕಗಳೆಲ್ಲ ಈ ಅವಧಿಯಲ್ಲೇ ಕಾಣಿಸಿಕೊಳ್ಳುವ ನಾಟಕ ಕೃತಿಗಳು, ಕೃಷ್ಣಮಿಶ್ರ ಎಂಬ ವಿದ್ವಾಂಸ 12ನೆಯ ಶತಮಾನದಲ್ಲಿ ಪ್ರಬೋಧ ಚಂದ್ರೋದಯವೆಂಬ ನಾಟಕವನ್ನು ಬರೆದು ಮೈಥಿಲದಲ್ಲಿ ಪ್ರಯೋಗಿಸಿದಾಗ ಅದನ್ನು ನೋಡಲು ಮಗಧದ ದೊರೆ ಮತ್ತು ಗಣ್ಯರು ಬಂದಿದ್ದರೆಂದು ಪ್ರತೀತ, 13ನೆಯ ಶತಮಾನದ ಕೊನೆಯ ಹೊತ್ತಿಗೆ ಸಂಸ್ಕøತ ನಾಟಕಗಳ ರಚನೆ ನಿಂತೇಹೋಯಿತೆಂದು ಹೇಳಬೇಕು. ಅಲ್ಲಿ ಇಲ್ಲಿ ನಾಟಕಗಳು ರಚನೆಗೊಂಡರೂ ಗುಣಮಟ್ಟದ ದೃಷ್ಟಿಯಲ್ಲಿ ಅವು ಸಾಮಾನ್ಯವಾಗಿರುತ್ತಿದ್ದವು.
ಪ್ರಾದೇಶಿಕ ಭಾಷೆಗಳಲ್ಲಿ ಜನಪದ ನಾಟಕದಿಂದ ಹಿಂದಿನ ಕಾಲದಿಂದಲೂ ಪ್ರಾಚುರ್ಯಾದಲ್ಲಿತ್ತೆಂದು ಹೇಳಲು ಸಾಧ್ಯವಿಲ್ಲ. ಬಹುಶಃ ಇವೇ ಸಾಮಾನ್ಯ ಜನರ ನಾಟಕಾಸಕ್ತಿಯನ್ನು ತೃಪ್ತಿಗೊಳಿಸುತ್ತಿದ್ದುವೆಂದು ತೋರುತ್ತದೆ. (ನೋಡಿ- ಜನಪದ-ರಂಗಭೂಮಿ)
ಕನ್ನಡರಂಗಭೂಮಿ: ಪ್ರಾದೇಶಿಕ ಭಾಷೆಗಳಲ್ಲಿ ಹಲವಾರು ಸಂಸ್ಕøತ ನಾಟಕಗಳು ಅನುವಾದಗೊಂಡಿರಬೇಕು. ಕನ್ನಡದಲ್ಲಂತೂ 1680ರಲ್ಲಿ ಚಿಕ್ಕದೇವರಾಯನ ಆಸ್ಥಾನ ಕವಿಯಾಗಿದ್ದ ಸಿಂಗರಾರ್ಯ ಸಂಸ್ಕøತದ 'ಮಿತ್ರವಿಂದಾಗೋವಿಂದ ನಾಟಕವನ್ನು ಕನ್ನಡಕ್ಕೆ 'ರತ್ನಾವಳಿ ಎಂಬ ಶೀರ್ಷಿಕೆಯಲ್ಲಿ ಪರಿವರ್ತಿಸಿದ. ಇದೇ ಕನ್ನಡದ ಮೊದಲನೆಯ ನಾಟಕ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಪಾರಸೀ ಕಂಪನಿಯವರು ಕರ್ನಾಟಕದಲ್ಲಿ ಸಂಚರಿಸಿ ಹಲವಾರು ನಾಟಕ ಪ್ರದರ್ಶನಗಳನ್ನು ನೀಡತೊಡಗಿದರು. ಆಧುನಿಕ ಕನ್ನಡರಂಗಭೂಮಿಯ ಚಟುವಟಿಕೆಗಳಿಗೆ ಇದರಿಂದ ಬೀಜಾಂಕುರವಾಯಿತು. ಬಾಲಿವಾಲ ಕಂಪನಿಯವರು ಮೈಸೂರು ಅರಸರ ಮುಂದೆ ನಾಟಕಗಳನ್ನು ಪ್ರದರ್ಶನ ನೀಡಿದರು. ಇದರಿಂದ ಪ್ರಚೋದಿತರಾಗಿ ಆಸ್ಥಾನದಲ್ಲಿದ್ದ ವಿದ್ವಾಂಸ ಸಂಸ್ಕøತದಿಂದ ಇಂಗ್ಲಿಷಿನಿಂದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದರು. ಬಸವಪ್ಪ ಶಾಸ್ತ್ರೀಗಳ 'ಕನ್ನಡ ಶಾಕುಂತಲ ಹೀಗೆ ಅನುವಾದಗೊಂಡ ಯಶಸ್ವೀ ಕೃತಿ ಇಂದಿಗೂ ಇದು ಉತ್ತಮ ಅನುವಾದವೆಂದೇ ಪರಿಗಣಿತವಾಗಿದೆ. ದೇವಶಿಖಾಮಣಿ ಅಳಸಿಂಗರಾಚಾರ್ಯರ ಸ್ವಪ್ನವಾಸವದತ್ತ. ಪಂಚರಾತ್ರ ನಾಟಕಗಳ ಅನುವಾದಗಳು ಜನರ ಮೆಚ್ಚುಗೆ ಪಡೆದಿದೆ. ಸೀತಾರಾಮಶಾಸ್ತ್ರೀಗಳ ಪ್ರತಿಮಾನಾಟಕ, ಅನಂತರಾಯಣ ಶಾಸ್ತ್ರೀಗಳ ನಾಗನಂದ, ನಂಜನಗೊಡು ಸುಬ್ಬಾಶಾಸ್ತ್ರೀಗಳ ಪ್ರತಿಮಾನಾಟಕ ಅನಂತನಾರಾಯಣ ಶಾಸ್ತ್ರೀಗಳ ಮೃಚ್ಚಕಟಿಕಾ ಇವು ಉತ್ತಮ ಅನುವಾದಗಳು. ಎಲ್. ಗುಂಡ್ಡಪ್ಪನವರು ಭಾಸನ ನಾಟಕಗಳ ಮೂಲ ಶ್ಲೋಕಗಳನ್ನು ಹೊಸ ಛಂದಸ್ಸಿನಲ್ಲಿ ರೂಪಿಸಿ ಹೊಸ ಪ್ರಯೋಗ ನಡೆಸಿದರು.
ಕನ್ನಡದಲ್ಲಿ ಸಂಸ್ಕøತ ನಾಟಕಗಳ ಅನುವಾದದ ಜೊತೆಯಲ್ಲಿಯೇ ಇಂಗ್ಲಿಷ್ ನಾಟಕಗಳ ಭಾಷಾಂತರವೂ ನಡೆಯಿತು. ಹೀಗೆ ಭಾಷಾಂತರಿಸಿದವಲ್ಲಿ ಗುಂಡೋಕೃಷ, ಎಂ.ಎಲ್. ಶ್ರೀಕಂಠೇಶಗೌಡರು. ವಾಸುದೇವಾಚಾರ್ಯರು, ಬಸವಪ್ಪಶಾಸ್ತ್ರೀಗಳೂ ಮುಖ್ಯರು ಷೇಕ್ಸಸ್ಪಿಯರನ ಹಲವಾರು ನಾಟಕಗಳು ಕನ್ನಡಕ್ಕೆ ರೂಪಾಂತರಗೊಂಡವು ಒಥೆಲೋ (ಶರಾಸೇನ ಚರಿತ್ರೆ), ಮರ್ಚೆಂಟ್ ಆಫ್ ವೆನಿಸ್ (ಪಾಂಚಾಲೀ ಪರಿಣಯ), ರೊಮಿಯೊ ಅಂಡ್ ಜೋಲಿಯಟ್ (ರಾಮವರ್ಮ ಲೀಲಾವತಿ), ಎ ಮಿಡ್ ಸಮ್ಮರ್ ನೈಟ್ಸ ಡ್ರೀಮ್ (ವಸಂತ ಯಾಮೀನಿ ಚಮತ್ಕಾರಗಳೂ) ಗೋಲ್ಡಸ್ಮಿತ್‍ನ ಷಿ ಸ್ಟೂಪ್ಸ್ ಟು ಕಾಂಕರ್ (ಪತಿವಶೀಕರಣ) ಈ ಹೆಸರುಗಳಲ್ಲಿ ರೂಪಾಂತರ ಗೊಂಡವೂ. ಇಲ್ಲೆಲ್ಲ ಇಂಗ್ಲಿಷ್ ನಾಟಕಗಳನ್ನು ಕನ್ನಡಕ್ಕೆ ಅನ್ವಯವಾಗುವಂತೆ ಕಸಿಮಾಡುವ ಪ್ರಯತ್ನವನ್ನು ನಾವು ಕಾಣುತ್ತೇವೆ.
ಹತ್ತೊಂಬತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಕನ್ನಡ ನಾಟಕ ಹೀಗೆ ರೂಪ ಪಡೆದುಕೊಳ್ಳತೊಡಗಿತು. ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ (1887) ಕನ್ನಡದಲ್ಲಿ ರಚಿತವಾದ ಮೊದಲ ಸಾಮಾಜಿಕ ನಾಟಕ. ಇದಕ್ಕೆ 'ಕನ್ಯಾವಿಕ್ರಯದ ಪರಿಣಾಮವು ಎಂಬ ಇನ್ನೊಂದು ಹೆಸರು ಇದೆ. ಈ ಶತಮಾನದ ಅವಧಿಯಲ್ಲಿಯೇ ಕನ್ನಡದ ವೃತ್ತಿರಂಗಭೂಮಿ ಖಚಿತ ಸ್ವರೂಪ ಪಡೆದದ್ದು ಅನೇಕ ಅನುವಾದ ರೂಪಾಂತರ ನಾಟಕಗಳನ್ನು ವೃತ್ತಿರಂಗದ ಮೇಲೆ ಪ್ರದರ್ಶಿಸಲಾಯಿತು. ಪಾರಸಿ ಕಂಪನಿಯವರು ತೊರಿಸಿದ ದೃಶ್ಯಗಳ ವೈಭವ ಬೆಳಕಿನ ಸಂಯೋಜನೆ, ರಂಗಭೂಮಿಯ ಚಮತ್ಕಾರಗಳು ಮತ್ತು ಸಂಗೀತ ಮೊದಲಾದವನ್ನು ಕನ್ನಡದವೃತ್ತಿ ರಂಗಭೂಮಿ ಅಳವಡಿಸಿಕೊಳ್ಳತೊಡಗಿತು. ಉತ್ತರ ಕರ್ನಾಟಕದಲ್ಲಿ ವೃತ್ತಿರಂಗ ಭೂಮಿ ಕೃತಿಗಳು ರಂಗಭೂಮಿಯ ಮೇಲೆ ಪ್ರದರ್ಶನ ಗೊಂಡವು. ಹೀಗೆ ಕನ್ನಡದ ವೃತ್ತಿರಂಗಭೂಮಿ ಸಮೃದ್ಧವಾಗತೊಡಗಿತು.
ವರದಾಚಾರ್ಯ, ಗುಬ್ಬಿವೀರಣ್ಣ, ಮಹಮದ್ ಪೀರ್, ನಾಗೇಂದ್ರರಾಯ, ಹಂದಿಗನೂರು ಸಿದ್ಧರಾಮಪ್ಪ, ಸುಬ್ಬಯ್ಯನಾಯ್ಡು, ಲಕ್ಷ್ಮೀಬಾಯಿ, ಸುಂದರಮ್ಮ, ಜಯಮ್ಮ ಮೊದಲಾದ ಪ್ರಸಿದ್ಧ ನಟನಟಿಯರು ಈ ವೃತ್ತಿರಂಗಭೂಮಿಯ ವರ್ಚಸಿಗೆ ಕಾರಣರಾದರು. ಆದರೆ ನಾಟಕ ಕಂಪೆನಿಗಳು ಸದಾ ಆರ್ಥಿಕವಾಗಿ ಕಷ್ಟದ ಸ್ಥಿತಿಯಲ್ಲಿ ನಡೆದರೂ ಇವು ಸಾಧನೆಗಳನ್ನು ಮಾಡಿರುವುದನ್ನು ಮೆಚ್ಚಬೇಕು. ಗುಬ್ಬಿ ವೀರಣ್ಣನಂತಹವರು ತಮ್ಮ ವ್ಯವಹಾರಿಕ ಕುಶಲತೆಯಿಂದ, ದೂರದರ್ಶಿತ್ವದಿಂದ ನಾಟಕ ಕಂಪನಿಯನ್ನು ಹತೋಟಿಯಲ್ಲಿಟ್ಟುಕೊಂಡು ಯಶಸ್ಸು ಸಾಧಿಸಿದರು.
ಕ್ರಮೇಣ ಕಂಪನಿ ನಾಟಕಗಳ ಪ್ರಯೋಗಗಳು ಚರ್ವಿತ ಚರ್ವಣಗಳಾಗಿ ಅಪಗತಿಗೆ ಇಳಿದವು. ಇಂಥ ಒಂದು ಸಂದರ್ಭದಲ್ಲಿ ಕನ್ನಡದಲ್ಲಿ ಹವ್ಯಾಸಿ ರಂಗಭೂಮಿಯ ಉಗಮವಾಯಿತೆಂದು ಹೇಳಬಹುದು. ಈ ಶತಮಾನದ 2, 3 ನೆಯ ದಶಕಗಳಲ್ಲಿ ಹವ್ಯಾಸಿ ರಂಗಭೂಮಿ ರೂಪಪಡೆಯಲು ತೊಡಗಿತು. ಕೈಲಾಸಂ, ಶ್ರೀರಂಗ ಮೊದಲಾದವರು ಸಾಮಾಜಿಕ ನಾಟಕಗಳನ್ನು ರಚಿಸತೊಡಗಿದರು. ಕೈಲಸಂ ಅವರ `ಟೊಳ್ಳುಗಟ್ಟಿ ಕನ್ನಡರಂಗಭೂಮಿಯ ದಿಕ್ಕನ್ನೇ ಬದಲಾಯಿಸಿತು. ವರದಕ್ಷಿಣೆ, ಬಾಲ್ಯ ವಿವಾಹ, ವಿಧವಾ ವಿವಾಹ, ಬಡತನ ಮೊದಲಾದ ಸಾಮಾಜಿಕ ಸಮಸ್ಯೆಗಳೇ ಇವರ ನಾಟಕದ ವಸ್ತುವಾದವು. ಅಗತ್ಯವಿಲ್ಲದಿದ್ದರೂ ರಂಗಭೂಮಿಯ ಮೇಲೆ ಬರುತ್ತಿದ್ದ ಸಂಗೀತವನ್ನು ಬಿಡಲಾಯಿತು. ಆಡುಮಾತು, ದಿನನಿತ್ಯದ ವೇಷಭೂಷಣಗಳು ಪ್ರಾಧಾನ್ಯ ಪಡೆದವು. ಪ್ರಸಾಧನ, ರಂಗಸಜ್ಜಿಕೆ, ಮೊದಲಾದವು ವಾಸ್ತವಿಕವಾದವು. ಹೀಗಾಗಿ ` ವಾಸ್ತವವಾದ ನಾಟಕ ಕನ್ನಡದಲ್ಲೂ ಅಡಿಯಿಟ್ಟಿತು. ಅಲ್ಲದೆ ಕನ್ನಡ ನವೋದಯಕ್ಕೆ ಕಾರಣರಾದ ಬಿ. ಎಂ. ಶ್ರೀ ಅವರು ಗ್ರೀಕ್ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದರು. ಇವರ ಪಾರಸಿಕರು, ಅಶ್ವತ್ತಾಮನ್ - ಇವು ಇಂತಹ ನಾಟಕಗಳು. ವಿ. ಸೀ. ಮಾಸ್ತಿ, ಕುವೆಂಪು, ಕಾರಂತ, ಬೇಂದ್ರೆ, ಪರ್ವತವಾಣಿ, ಗೋಕಾಕ್, ಸಿ. ಕೆ. ವೆಂಕಟರಾಮಯ್ಯ ಮೊದಲಾದವರು ರಂಗಭೂಮಿಗಾಗಿಯೇ ನಾಟಕಗಳನ್ನು ರಚಿಸಿದರು. ಸಂಸರ ನಾಟಕಗಳು ಕನ್ನಡ ರಂಗಭೂಮಿಗೆ ವಿಶಿಷ್ಟತೆ ತಂದುಕೊಟ್ಟವು.
ಕೈಲಾಸಂ ಮತ್ತು ಶ್ರೀರಂಗರಿಂದ ಆರಂಭವಾದ ಹವ್ಯಾಸಿ ರಂಗಭೂಮಿ ವೈವಿಧ್ಯಮಯ ಆಯಾಮಗಳನ್ನು ಪಡೆದುಕೊಂಡಿತು. ಕಂಪನಿ ನಾಟಕಗಳಲ್ಲಿನ ರಂಗಸಂಗೀತದ ಮೇಲಿನ ಅವಧಾರಣೆ ಹಲವು ಸಂದರ್ಭಗಳಲ್ಲಿ ಅಭಾಸವಾಗುವಷ್ಟು ಅತಿರೇಕಕ್ಕೆ ಹೋಯಿತು. ಅಲ್ಲೆಲ್ಲ ಸಾಮಾನ್ಯವಾಗಿ ಬಳಕೆಯಾಗುತ್ತಿದ್ದ ವಸ್ತುವೆಂದರೆ ಪೌರಾಣಿಕವಾದದ್ದು ಅಥವಾ ಐತಿಹಾಸಿಕವಾದದ್ದು. ಅದರಲ್ಲೂ ಇತಿಹಾಸವನ್ನು ವಸ್ತುವಾಗುಳ್ಳ ನಾಟಕಗಳು ಇತಿಹಾಸವನ್ನು ವೈಭವೀಕರಿಸುತ್ತಿದ್ದವು. ಹಲವು ವೇಳೆ ಭಿನ್ನ ಭಿನ್ನ ರೀತಿಯ ಅಭಿನಯ ಶೈಲಿಗಳು ಅರ್ಥವಿಲ್ಲದೆ ಮಿಶ್ರಣಗೊಳ್ಳುತ್ತಿದ್ದವು. ಪ್ರೇಕ್ಷಕರನ್ನು ನಗಿಸುವುದಕ್ಕಾಗಿಯೇ ಅನುಚಿತ ಸಂಭಾಷಣೆಗಳು, ಹಾಡುಗಳು, ಸಂದರ್ಭಗಳು ಬಳಕೆಯಾಗುತ್ತಿದ್ದವು. ಕಂಪನಿ ನಾಟಕಗಳ ಈ ಒಂದು ಅವಸ್ಥೆಯನ್ನು ಕಂಡ ಕೈಲಾಸಂ ಅವರು ಮೇಲೆ ಹೇಳಿದ ಯಾವ ಅಂಶಗಳನ್ನೂ ಒಳಗೊಳ್ಳದೆ ವಾಸ್ತವವಾದದ ನಾಟಕವನ್ನು ಪ್ರಾಚುರ್ಯಕ್ಕೆ ತಂದರು. ಕಂಪನಿ ನಾಟಕಗಳ ಕಟುವಾದ ವಿಡಂಬನೆಯನ್ನು `ನಮ್‍ಕಂಪ್ನಿ ನಾಟಕದಲ್ಲಿ ಕೈಲಾಸಂ ಮಾಡಿದ್ದರೆ. ಈ ನಾಟಕದಲ್ಲಿನ ಕಂಪನಿ ನಾಟಕವನ್ನು ಕುರಿತ ಇವರ ಟೀಕೆ ಈಗ ನಮಗೆ ಅತಿಯಾಯಿತು ಎನಿಸಿದರೂ ಈ ನಾಟಕವನ್ನು ಇವರು ಬರೆದ ಸಂದರ್ಭದಲ್ಲಿ ಔಚಿತ್ಯವಿತ್ತೆಂದೇ ಹೇಳಬೇಕು.
ಅನಂತರ ಕೈಲಾಸಂ ಮತ್ತು ಶ್ರೀರಂಗದ ಪರಂಪರೆಯಲ್ಲಿ ಅನೇಕರು ನಾಟಕ ರಚಿಸಿದರು. ಈ ವಾಸ್ತವವಾದದ ನಾಟಕ ರಂಗಭೂಮಿಯ ಮೇಲಿನ ಅವಾಸ್ತವಿಕತೆಯನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಯಿತಾದರೂ ವಾಸ್ತವಿಕತೆಯ ಅತಿರೇಕದಿಂದ ನಾಟಕಕಲೆ ಹಿನ್ನೆಲೆಗೆ ಸರಿಯತು. ಇಂತಹ ಒಂದು ಪರಿಸ್ಥಿತಿಯಲ್ಲಿ ಮತ್ತೆ ನಾಟಕ ಹೊಸದಾಗಬೇಕಾಯಿತು. ಈ ಹೊತ್ತಿಗಾಗಲೇ ನವೋದಯಕ್ಕೆ ಪ್ರತಿಕ್ರಿಯೆಯಾಗಿ ನವ್ಯ ಕಾಲಿಡತೊಡಗಿತ್ತು. ನವ್ಯಕಾವ್ಯ, ನವ್ಯವಿಮರ್ಶೆ, ರೂಪುಗೊಳ್ಳತೊಡಗಿತು. ಈ ಹಿನ್ನೆಲೆಯಲ್ಲಿ ನವ್ಯನಾಟಕದ ಉಗಮವೂ ಆಯಿತು. ನವ್ಯನಾಟಕದ ಒಂದು ಪ್ರಧಾನ ಕವಲಾಗಿ `ಅಸಂಗತ ನಾಟಕ ಹುಟ್ಟಿತು. ಕನ್ನಡದ ಆಧುನಿಕ ಸಾಹಿತ್ಯ ಪ್ರಕಾರಗಳಿಗೆ ಪಾಶ್ಚಾತ್ಯ ಸಾಹಿತ್ಯ ಹೇಗೆ ಪ್ರಚೋದನೆ ನೀಡಿತೊ ಹಾಗೆಯೇ ಅಸಂಗತ ನಾಟಕಕ್ಕೂ ಅಬ್ಸರ್ಡ್ ಡ್ರಾಮ ಪ್ರಚೋದನೆ ನೀಡಿತು. ಜೀವನದ ಅರ್ಥರಾಹಿತ್ಯ, ಮತ್ತು ಅಸಂಗತತೆಯ ಮೇಲೆ ಅವಧಾರಣೆ ಕೊಡುವ ಪಾಶ್ಚಾತ್ಯ ಅಬ್ಸರ್ಡ್ ನಾಟಕ ಕನ್ನಡದ ಅಸಂಗತ ನಾಟಕದ ಮೇಲೆ ಪ್ರಭಾವ ಬೀರಿದ್ದು ಸಹಜವಾಗಿಯೇ ಇದೆ. ಬಹುಶಃ ಸುಮತೀಂದ್ರನಾಡಿಗರ `ಬೊಕ್ಕುತಲೆಯ ನರ್ತಕಿ' ಕನ್ನಡದ ಮೊದಲ ಅಸಂಗತ ನಾಟಕವಾಗಿದೆ. ಇದು ಅಯನೆಸ್ಕೋನ ಬಾಲ್ಡ್ ಸಪ್ರ್ಯಾನೊ ಎಂಬ ನಾಟಕದ ರೂಪಾಂತರ. ಅನಂತರ ಬಂದ ಮುಖ್ಯ ಅಸಂಗತ ನಾಟಕಗಳೆಂದರೆ ನವರತ್ನ ಅವರ ಎಲ್ಲಿಗೆ, ಗೋಡೆ ಬೇಕೆ ಗೋಡೆ, ಬೊಂತೆ, ಚಂದ್ರಶೇಖರ ಪಾಟೀಲರ ಕೊಡೆಗಳು ಮತ್ತು ಅಪ್ಪ. ಚಂದ್ರಕಾಂತ ಕುಸುನೂರ ಅವರ ಆನಿ ಬಂತೊಂದಾನಿ, ಪಿ, ಲಂಕೇಶರ ತೆರೆಗಳು, ಚಂದ್ರಶೇಖರ ಕಂಬಾರರ ಚಾಳೇಶ, ಚದುರಂಗದ ಇಲಿಬೋನು - ಇವು ಕನ್ನಡದ ಪ್ರಸಿದ್ಧ ಅಸಂಗತ ನಾಟಕಗಳು.
ಅಸಂಗತ ನಾಟಕಗಳಲ್ಲಿ ಅನ್ವೇಷಿತವಾಗುವ ಮುಖ್ಯವಸ್ತು. ಮನುಷ್ಯಜೀವನದ ಅರ್ಥರಾಹಿತ್ಯ ಮತ್ತು ಅಸಾಂಗತ್ಯ. ಈ ನಾಟಕಗಳಿಂದ ಕನ್ನಡ ರಂಗಭೂಮಿಗೆ ಒಂದು ಹೊಸ ಆಯಾಮ ಲಭ್ಯವಾಯಿತು. ರಂಗಸಜ್ಜಿಕೆಯ ದೃಷ್ಟಿಯಿಂದ, ಅಭಿನಯದ ದೃಷ್ಟಿಯಿಂದ ಅಲ್ಲಿಯವರೆಗೆ ಇದ್ದ ಪರಂಪರೆಯನ್ನು ಮುರಿದು ಭಿನ್ನ ಪರಂಪರೆಯನ್ನು ಈ ನಾಟಕಪ್ರಕಾರ ಸಂಸ್ಥಾಪಿಸಿತು. ಈ ನಾಟಕಗಳಲ್ಲಿ ಅನ್ವೇಷಿತವಾಗುತ್ತಿದ್ದ ವಸ್ತುಗಳೆಂದರೆ ಮನುಷ್ಯನ ಅಸ್ತಿತ್ವಕ್ಕೆ ಸಂಬಂಧಿಸಿದಂತಹ ಹುಟ್ಟು, ಸಾವು, ಮಾನವ ಸಂಬಂಧಗಳು, ವ್ಯಕ್ತಿಯ ಏಕಾಂತತೆ, ತ್ಯಕ್ತಸ್ಥಿತಿ ಇತ್ಯಾದಿಗಳು. ವ್ಯಕ್ತಿಗಳ ಸಾಮಾಜಿಕ ಸಂಬಂಧಗಳಿಗೆ ಇಲ್ಲಿ ಪ್ರಾಮುಖ್ಯವಿಲ್ಲ. ಈ ಕಾರಣಕ್ಕಾಗಿಯೊ ಏನೋ ಅಸಂಗತ ನಾಟಕ ಬಹಳ ಬೇಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.
ಅನಂತರ ಅಸಂಗತ ನಾಟಕಗಳ ತಂತ್ರಗಳನ್ನೂ ಜನಪದ ನಾಟಕಗಳ ಅಂಶಗಳನ್ನೂ ಒಳಗೊಂಡು ಕನ್ನಡದ ಎಪಿಕ್ ನಾಟಕ ರೂಪುಗೊಂಡಿತು. ಈ ನಾಟಕ ರೀತಿಗೆ ಬರ್ಟಾಲ್ಟ್ ಬ್ರೆಕ್ಟ್‍ನ `ಎಪಿಕ್ ಥಿಯೇಟರ್ ಪ್ರಚೋದನೆ ನೀಡಿತು. ಅಸಂಗತ ನಾಟಕಕಾರರು ಜೀವನದ ಅಸಂಗತತೆಯನ್ನು ಅಸಂಗತ ರೂಪದಲ್ಲೇ ವ್ಯಕ್ತಪಡಿಸಿದರು. ಆದರೆ ಪಾಶ್ಚಾತ್ಯ ನಾಟಕಗಳಲ್ಲಾದಂತೆ ಆಲ್ಬರ್ಟ್ ಕಮು ಜೀವನದ ಅಸಾಂಗತ್ಯವನ್ನು ಸಾಂಪ್ರದಾಯಿಕ ರೂಪದಲ್ಲೇ ಚಿತ್ರಿಸುತ್ತಾನೆ. ಆದರೆ ಬೆಕೆಟ್, ಅಯನೆಸ್ಕೊ ಮುಂತಾದ ಅಸಂಗತ ನಾಟಕಕಾರರು ತಮ್ಮ ಅಸಂಗತ ದರ್ಶನವನ್ನು ಅಸಂಗತ ಬಂಧದಲ್ಲಿಯೇ ಅಭಿವ್ಯಕ್ತಿಸುತ್ತಾರೆ. ಹಾಗೆಯೇ ಗಿರೀಶ್‍ಕಾರ್ನಾಡರ ನಾಟಕಗಳಾದ ಯಯಾತಿ, ತುಘಲಕ್, ಅಂಜುಮಲ್ಲಿಗೆ ಮೊದಲಾದ ನಾಟಕಗಳು ಜೀವನದ ಅಶಾಂಗತ್ಯಗಳನ್ನು ಚಿತ್ರಿಸಿದರೂ ಸಾಂಪ್ರದಾಯಿಕ ನಾಟಕಬಂಧವನ್ನು ಪಾತ್ರಚಿತ್ರಣವನ್ನೂ ಮಾಡುತ್ತವೆ. ಬ್ರೆಕ್ಟ್ ಪ್ರತಿಪಾದಿಸಿದ ಏಲಿಯನೇಷನ್, ಮತ್ತು ಹಿಸ್ಟಾರಿಫಿಕೇಷನ್ ಈ ತತ್ತ್ವಗಳನ್ನು ಕನ್ನಡದ ನಾಟಕಕಾರರು ಬಳಸಿಕೊಂಡರು. ಈ ರೀತಿಯ ಪ್ರಮುಖ ನಾಟಕಗಳೆಂದರೆ ಎಚ್. ಎಂ. ಚನ್ನಯ್ಯನವರ ಎಲ್ಲರಂಥವನಲ್ಲ ನನಗಂಡ, ಹುಯ್ಯಲವೋ ಡಂಗುರವ, ಚಂದ್ರಶೇಖರ ಪಾಟೀಲರ ಗೋಕರ್ಣದ ಗೌಡಶಾನಿ, ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ ಈ ನಾಟಕಗಳು ಇನ್ನೊಂದು ಅರ್ಥದಲ್ಲಿ ಕನ್ನಡ ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿದವು. ಇಲ್ಲಿ ಸಂಗಿತ ಬಳಕೆಗೊಂಡರೂ ಸಾಂಪ್ರದಾಯಿಕ ಸಂಗೀತ ನಾಟಕಗಳಲ್ಲಿ ಇದು ಬಳಕೆಯಾಗುವ ರೀತಿಯಿಂದ ಭಿನ್ನವಾದದ್ದು. ಎಪಿಕ್ ನಾಟಕತತ್ತ್ವದ ಪ್ರಕಾರ ರಂಗಸಜ್ಜಿಕೆ, ಅಭಿನಯ ಮತ್ತು ಸಂಗೀತ ಈ ಎಲ್ಲವೂ ನಾಟಕ ಕ್ರಿಯೆಯ ಮೇಲೆ ಟೀಕೆ ಮಾಡುವಂತಿರಬೇಕು. ಕನ್ನಡ ಎಪಿಕ್‍ನಾಟಕಗಳಲ್ಲೂ ಈ ವಿಧಾನವನ್ನೇ ಸಾಮಾನ್ಯವಾಗಿ ಬಳಸಲಾಗಿದೆ. ಈ ಅಂಶವನ್ನು ಇವುಗಳ ವಿನ್ಯಾಸ ಮತ್ತು ಪ್ರಯೋಗಗಳೆರಡರಲ್ಲೂ ಕಾಣಬಹುದಾಗಿದೆ. ಬಿ. ವಿ. ಕಾರಂತರು ನಿರ್ದೇಶಿಸಿರುವ ಪ್ರಯೋಗಗಳಲ್ಲಿ ಈ ವಿಧಾನ ಅರ್ಥಪೂರ್ಣವಾಗಿ ಬಳಕೆಯಾಯಿತು. ಹಾಗೆಯೇ ಸಿಂಹ, ಪ್ರಸನ್ನ, ಕಂಬಾರ, ಗೀರಿಶ್‍ಕಾರ್ನಾಡ್, ಎಚ್. ಎಂ. ಚೆನ್ನಯ್ಯ ಮೊದಲಾದ ನಿರ್ದೇಶಕರು ಈ ರೀತಿಯ ಪ್ರಯೋಗಗಳಿಗೆ ಹೆಸರಾದರು.
ಕನ್ನಡ ನಾಟಕ ಸಾಮಾಜಿಕ ಆಯಾಮಗಳನ್ನು ಪಡೆದುಕೊಳ್ಳುತ್ತ ಅಸಂಗತ ನಾಟಕದ ರೀತಿಯ ಕಡೆಯಿಂದ ಎಪಿಕ್ ನಾಟಕದ ರೀತಿಯ ಕಡೆಗೆ ಚಲಿಸಿತು ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ದಲಿತ ಮತ್ತು ಬಂಡಾಯ ಸಾಹಿತ್ಯದ ನಿಲುವುಗಳನ್ನು ವ್ಯಕ್ತಮಾಡುವ ನಾಟಕಗಳೂ ರಚನೆಗೊಂಡಿವೆ. ದೇವನೂರು ಮಹದೇವ ಅವರ ಕಥೆಗಳೂ ಕಾದಂಬರಿಗಳೂ (ಒಡಲಾಳ, ಕುಸುಮಬಾಲೆ) ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯ ಮೇಲೆ ಪ್ರಯೋಗಗೊಂಡಿವೆ. ಈ ನಿಟ್ಟಿನಲ್ಲಿ ಅಗಾಧವಾಗಿ ಕೆಲಸ ಮಾಡಿದವರೆಂದರೆ ಕರ್ನಾಟಕ ರಂಗಾಯಣದವರು. ಹಾಗೆಯೇ ಸಮತೆಂತೋ ಕುಡ ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿಗೆ ಅರ್ಥಪೂರ್ಣತೆ ತಂದುಕೊಡುವ ಹಲವಾರು ಪ್ರಯೋಗಗಳನ್ನು ಮಾಡಿದೆ. ಅಲ್ಲದೆ ಸಮುದಾಯ ತಂಡ ಕೂಡ ಸಾಮಾಜಿಕ ವಸ್ತುವನ್ನೊಳಗೊಂಡ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಸಿಂಧುವಳ್ಳಿ ಅನಂತಮೂರ್ತಿಯವರ `ರಂಗಮನೆ ಕೆಲವೇ ಕೆಲವರು ಪರಿಣತ ಪ್ರೇಕ್ಷಕರಿಗಾಗಿ ಹಲವಾರು ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗ ಮಾಡಿದೆ. ಬೆಂಗಳೂರಿನ ಬೆನಕ, ಪ್ರಭಾತ್ ಕಲಾವಿದರು, ಸ್ಪಂದನ, ಸಿಂಹಸೆಲೆಕ್ಟ್ ಆರ್ಟಿಸ್ಟ್ಸ್ ಮೊದಲಾದ ತಂಡಗಳೂ ಈ ದಿಶೆಯಲ್ಲಿ ಹಲವಾರು ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗ ಮಾಡಿವೆ.
ಉತ್ತರ ಕರ್ನಾಟಕದ ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಮೊದಲಾದ ಸ್ಥಳಗಳಲ್ಲಿ ಕೂಡ ರಂಗಾಸಕ್ತರು ಇದೇ ರೀತಿಯ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ಆದರೆ ಮುಖ್ಯವಾಗಿ ಈ ಬಗೆಯ ಪ್ರಯೋಗಗಳು ಹೆಚ್ಚಾಗಿ ನಡೆದದ್ದು ಮೈಸೂರು, ಬೆಂಗಳೂರುಗಳಲ್ಲಿ.
ಇಲ್ಲಿ ಹೆಸರಿಸಬೇಕಾದ ಇನ್ನೊಂದು ಮುಖ್ಯ ಪ್ರಯತ್ನವೆಂದರೆ ಕೆ. ವಿ. ಸುಬ್ಬಣ್ಣನವರ ಹೆಗ್ಗೋಡಿನ ನೀನಾಸಂ ತಿರುಗಾಟ ತಂಡ. ಈ ತಂಡ ಕರ್ನಾಟಕದಾದ್ಯಂತ ಮತ್ತು ಭಾರತದ ವಿವಿದೆಡೆಗಳಲ್ಲಿ ಮತ್ತು ಅಮೆರಿಕದಂಥ ರಾಷ್ಟ್ರಗಳಲ್ಲೂ ನಾಟಕಗಳನ್ನು ಪ್ರಯೋಗ ಮಾಡಿ ಯಶಸ್ಸುಗಳಿಸಿದೆ. ಗೀರಿಶ್ ಕಾರ್ನಾಡ್, ಕಂಬಾರ ಮೊದಲಾದವರ ನಾಟಕಗಳು ಈ ತಂಡದವರಿಂದ ಪ್ರದರ್ಶನಗೊಂಡಿವೆ. ಒಟ್ಟಾರೆ ಹೇಳುವುದಾದರೆ ಕರ್ನಾಟಕ ರಂಗಭೂಮಿ 20 ನೆಯ ಶತಮಾನ ಮುಗಿಯುತ್ತಿರುವ ಸಂದರ್ಭದಲ್ಲಿ ಸಿನಿಮಾ ಮತ್ತು ದೂರದರ್ಶನಗಳ ಸ್ಪರ್ಧೆಯನ್ನು ಎದುರಿಸಿ ಬೆಳೆದಿವೆ ಮತ್ತು ಬೆಳೆಯುತ್ತಿದೆ ಎನ್ನಬಹುದು.
ಆಧುನಿಕ ರಂಗಭೂಮಿ : ಇಪ್ಪತ್ತನೆಯ ಶತಮಾನದ ಯೂರೋಪಿಯನ್, ಅಮೆರಿಕನ್ ನಾಟಕ ಮತ್ತು ರಂಗಭೂಮಿ ರೂಪುಗೊಳ್ಳಲು ಹಿನ್ನೆಲೆಯಾಗಿ 19 ನೆಯ ಶತಮಾನದಲ್ಲಿ ನಡೆದ ಪ್ರಯೋಗಗಳು ಕಾರಣವಾದವು. 19 ನೆಯ ಶತಮಾನದಲ್ಲಿ ಬೌದ್ಧಿಕಕ್ಷೇತ್ರದಲ್ಲಿ ನಡೆದ ಕ್ರಾಂತಿ ಸಾಹಿತ್ಯದ ಇತರ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದಂತೆ ನಾಟಕ ಕ್ಷೇತ್ರದ ಮೇಲೂ ಪ್ರಭಾವ ಬೀರಿತು. ಮಾಕ್ರ್ಸ್‍ನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳಿಂದಾಗಿ ಅಲ್ಲಿಯವರೆಗೆ ಬದಲಾಗದ ಸತ್ಯಗಳೆಂದು ಪರಿಗಣಿತವಾಗಿದ್ದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳ ಬಗೆಗಿನ ದೃಷ್ಟಿಕೊನ ಬದಲಾಗತೊಡಗಿತು. ಫ್ರಾಯ್ಡ್‍ನ ಮನೋವಿಜ್ಞಾನ ಸಿದ್ಧಾಂತಗಳು ಅಲ್ಲಿಯವರೆಗೆ ಬದಲಾಗದವು ಎಂದು ನಂಬಲಾಗಿದ್ದ ಮಾನವ ಸ್ವಭಾವಕ್ಕೆ ಸಂಬಂಧಿಸಿದ ಅನೇಕ ಸೂಕ್ಷ್ಮವಿಚಾರಗಳು ಹೊಸನೆಲೆಯಲ್ಲಿ ಅನ್ವೇಷಿತವಾಗತೊಡಗಿದವು. ಐನ್‍ಸ್ಟೈನನ ಸಾಪೇಕ್ಷತಾವಾದದಂಥ ವೈಜ್ಞಾನಿಕ ಸಿದ್ಧಾಂತಗಳು ವಿಶ್ವದಲ್ಲಿ ಯಾವುದೂ ನಿರಪೇಕ್ಷವಾದ ಸತ್ಯವೆನ್ನುವುದು ಇಲ್ಲ. ಎಲ್ಲವೂ ಸಾಪೇಕ್ಷ ಎಂಬುದನ್ನು ತೋರಿಸಿಕೊಟ್ಟವು. ಡಾರ್ವಿನ್ನನ ವಿಕಾಸವಾದ. ಅಲ್ಲಿಯವರೆಗೆ ಕ್ರಿಶ್ಚಿಯನ್ನರು ನಂಬಿದ್ದ ಮನುಷ್ಯನ ಉಗಮದ ಬಗೆಗಿನ ನಂಬಿಕೆಯನ್ನು ಬುಡಮೇಲು ಮಾಡಿತು. ಹೀಗೆ ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಶ್ಯಾಸ್ತ್ರ ಮತ್ತು ಭೌತಶಾಸ್ತ್ರಗಳಲ್ಲಿ ಅನ್ವೇಷಿತವಾದ ಕ್ರಾಂತಿಕಾರಕ ವಿಚಾರಗಳು ತತ್ತ್ವಶಾಸ್ತ್ರ ಮತ್ತು ಸಾಹಿತ್ಯದ ಮೇಲೂ ಗಾಢವಾದ ಪ್ರಭಾವ ಬೀರಿದವು. ಇದರ ಫಲವಾಗಿ ವಿಶ್ವವನ್ನು ಕುರಿತ ದೃಷ್ಟಿಕೋನವೇ ಬದಲಾಯಿತು. ಇಂಪ್ರೆಷನಿಸಂ, ಎಕ್ಸ್‍ಪ್ರೆಷನಿಸಂ, ಸರ್ರಿಯಲಿಸಂ, ಸಿಂಬಲಿಸಂ ಮೊದಲಾದ ಕಲಾಸಿದ್ಧಾಂತಗಳೂ ಈ ಹಿನ್ನೆಲೆಯಲ್ಲಿ ರೂಪುಗೊಂಡವು. ನವ್ಯವಾದ ಕೂಡ ಈ ಹಿನ್ನೆಲೆಯಲ್ಲೇ ರೂಪುಗೊಂಡಿತು.
19 ನೆಯ ಶತಮಾನದ ಅಂತ್ಯಕ್ಕೆ ಪಾಶ್ಚಾತ್ಯ ನಾಟಕದ ಘಟ್ಟ ಮುಗಿದು ಸಂಪೂರ್ಣವಾಗಿ ಭಿನ್ನವಾದ ಇನ್ನೊಂದು ಘಟ್ಟ ಇದ್ದಕ್ಕಿದಂತೆಯೇ ಆರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ 20 ನೆಯ ಶತಮಾನದ ಪಾಶ್ಚಾತ್ಯ ನಾಟಕದ ಸಾಧನೆಗಳಿಗೆ ಕಾರಣರಾದವರು 19 ನೆಯ ಶತಮಾನದ ಅಂತ್ಯದ ಹೊತ್ತಿಗೆ ನಾಟಕ ರಚನೆಯನ್ನು ಆರಂಭಿಸಿದವರೇ ಆಗಿದ್ದಾರೆ. 1900 ರ ಅನಂತರವೂ ಅವರು ನಾಟಕ ರಚನೆ ಮಡಿದ್ದಾರೆ. ಜಾರ್ಜ್ ಬರ್ನಾಡ್ ಷಾನಂಥವರು 20 ನೆಯ ಶತಮಾನದ ಮೊದಲರ್ಧ ಭಾಗದಲ್ಲಿಯೂ ತಮ್ಮ ಬಹುಮುಖ್ಯ ನಾಟಕಗಳನ್ನು ರಚಿಸಿದ್ದಾರೆ. 1899 ರಲ್ಲಿ ಇಬ್ಸೆನನ ಕೊನೆಯ ನಾಟಕ ರಚನೆಗೊಂಡಿತು. 1900 - 20 ರ ಅವಧಿಯಲ್ಲಿನ ರಂಗಮಂದಿರಗಳು ಮತ್ತು ವಿವಿಧ ಶೈಲಿಗಳು ಆ ಅವಧಿಯಲ್ಲಿನ ನಾಟಕಕಾರರಿಗೆ ಹೊಸ ಸಾಧ್ಯತೆಗಳನ್ನು ಒದಗಿಸಿಕೊಟ್ಟವು. 20 ನೆಯ ಶತಮಾನದ ಮೊದಲ ಎರಡು ದರ್ಶಕಗಳಲ್ಲಿ ಯೇಟ್ಸ್, ಸಿಂಗ್, ಬೆನವೆಂಟಿ, ಸಿಯರಾ, ಗಾರ್ಕಿ, ಆಂಡ್ರೀವ್, ಲೆನಾರ್‍ಮಾಂಡ್ ಮತ್ತು ಬರ್ನಾರ್ಡ್ ಮೊದಲಾದ ನಾಟಕಕಾರರು ಪಾಶ್ಚಾತ್ಯ ರಂಗಭೂಮಿಗೆ ವೈವಿಧ್ಯವನ್ನು ತಂದುಕೊಟ್ಟದ್ದಲ್ಲದೆ ಅದನ್ನು ಶ್ರೀಮಂತಗೊಳಿಸಿದರು. ಒಂದನೆಯ ಮಹಾಯುದ್ಧ ನಡೆದ ಕಾಲದಲ್ಲಿ ಮತ್ತು ಅನಂತರ ರಂಗಭೂಮಿಯ ಆಯಾಮಗಳನ್ನು ವಿವಿಧ ದಿಕ್ಕುಗಳಲ್ಲಿ ವಿಸ್ತರಿಸಿದವರು ಇವರು. ಈ ಎರಡು ದಶಕಗಳಲ್ಲಿ ನಿರಂತರ ಪ್ರಯೋಗ ಶೀಲತೆಯನ್ನು ಕಾಣುತ್ತೇವೆ. 1895 ರಲ್ಲಿ ಅಡಾಲ್ಫೆ ಅಪ್ಪಿಯ ಎಂಬ ಸ್ವಿಟ್‍ಜûರ್‍ಲೆಂಡ್‍ನ ಒಬ್ಬ ಕಲಾವಿದ ನಾಟಕ ಕಲೆಯಲ್ಲಿ ಸಂಗೀತದ ಪ್ರಾಮುಖ್ಯವನ್ನು ಕುರಿತು ಒಂದು ಕೃತಿಯನ್ನೇ ರಚಿಸಿದ. ಇದರಲ್ಲಿ ಕಾಲ್ಪನಿಕ ಆ - ವಾಸ್ತವವಾದಿ ಅಟ್ಟಣೆಗಳನ್ನು ರಂಗಭೂಮಿಯ ಮೇಲೆ ಉಪಯೋಗಿಸುವುದರ ಬಗೆಗೂ ಬರೆದ. `ನಾಟಕೀಯತೆ ಮತ್ತು `ಸಂಗೀತ ಗಳ ಸಾಂಗತ್ಯವನ್ನು ಕುರಿತೂ ಹೇಳಿದ್ದಾನೆ. ಇದು 20 ನೆಯ ಶತಮಾನದ ಅವಸ್ತವವಾದಿ ನಾಟಕಗಳ ರಚನೆಗೆ ಪ್ರೇರಣೆಯಾಯಿತು. ಸ್ಟಾನ್ಸ್‍ಲಾವ್‍ಸ್ಕಿ ಮತ್ತು ನೆಮಿರೊವಿಚ್ ಡಾನ್ ಚಿಂಕೊ ಇವರುಗಳ ಪ್ರಯತ್ನದಿಂದ `ದಿ ಮಾಸ್ಕೊ ಆರ್ಟ್ ಥಿಯೇಟರ್ ಪ್ರಾರಂಭವಾಯಿತು. ಜೇಕ್ಸ್ ಕಾಪಿಯನ `ಥಿಯೇಟರ್ ಡು ವ್ಯುಕ್ಸ್ ಕೊಲೊಂಬಿಯರ್ 1913 ರಲ್ಲಿ ಆರಂಭವಾಯಿತು. ಇವುಗಳ ಆರಂಭ ವಿಭಿನ್ನಶೈಲಿಯ ನಾಟಕಗಳ ರಚನೆ ಮತ್ತು ಪ್ರಯೋಗಕ್ಕೆ ಕಾರಣವಾಯಿತು.
ಈ ಅವಧಿಯಲ್ಲಿ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ರೆಪರ್ಟರಿ ಥಿಯೇಟರ್‍ನ ಬೆಳವಣಿಗೆಯಾದದ್ದು ಒಂದು ವೈಶಿಷ್ಟ್ಯ. 19 ನೆಯ ಶತಮಾನದ ಮಧ್ಯಭಾಗದವರೆಗೆ ಸಣ್ಣಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಿರುಗಾಟದ ನಾಟಕ ತಂಡಗಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಕ್ರಮೇಣ ಇವು ಕಡಿಮೆಯಾಗುತ್ತ ಬಂದಿದ್ದರಿಂದ ಇವುಗಳ ಸ್ಥಾನದಲ್ಲಿ ಹವ್ಯಾಸಿ ರಂಗತಂಡಗಳು ಬರತೊಡಗಿದವು. 20 ನೆಯ ಶತಮಾನದ ಆರಂಭದಲ್ಲಿ ಕಾಣಿಸಿಕೊಳ್ಳತೊಡಗಿದ ಈ ಬಗೆಯ ತಂಡಗಳು ಎರಡನೆಯ ದಶಕದ ವೇಲೆಗೆ ಪೂರ್ಣ ಪ್ರಮಾಣದಲ್ಲಿ ಬೆಳೆದವು. ಇಂಗ್ಲೆಂಡಿನಲ್ಲಿ ಬರ್ಮಿಂಗ್ ಹ್ಯಾಮ್ ರೆಪರ್ಟರಿ ಥಿಯೇಟರ್ 1913 ರಲ್ಲಿ ಆರಂಭಗೊಂಡಿತು. ರೆಪರ್ಟರಿ ಥಿಯೇಟರ್‍ಗಳು ಆಯಾಕಾಲದ ನಾಟಕ ರಚನೆಯ ಮೇಲೆ ಪ್ರಭಾವ ಬೀರಿದೆ. 20 ನೆಯ ಶತಮಾನದಲ್ಲಿ ಹವ್ಯಾಸಿ ರಂಗಭೂಮಿ ಅತ್ಯಂತ ಪ್ರಭಾವಶಾಲಿಯಾಗಿ ವ್ಯಾಪಾರಿ ಪ್ರದರ್ಶನಕ್ಕೆ (ಕಮರ್ಷಿಯಲ್ ಸ್ಟೇಜ್) ಪ್ರತಿಯಾಗಿ ಬೆಳೆಯಿತು ಎಂಬುದು ಮುಖ್ಯವಾದ ಸಂಗತಿ.
20 ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಮೆರಿಕದಲ್ಲಿ `ಲಿಟಲ್ ಥಿಯೇಟರ್ಸ್ ಉಗಮವಾಯಿತು. ಇದಕ್ಕೆ ಸಮಾನಾಂತರವಾದ ಬೆಳವಣಿಗೆಗಳು ಯೂರೋಪಿನ ದೇಶಗಳಲ್ಲಿ ಜಪಾನಿನಲ್ಲಿ ಮತ್ತು ದಕ್ಷಿಣ ಅಮೆರಿಕಗಳಲ್ಲೂ ಆದವು. ಈ ಸಂಬಂಧಿಸಿದ ಚಟುವಟಿಕೆಗಳು 1914 - 15 ರ ಅವಧಿಯಲ್ಲಿ ತೀವ್ರಗೊಂಡವು. ಅಮೆರಿಕದ ಎಲ್ಲ ಭಾಗಗಳಲ್ಲಿ ಲಿಟಲ್ ಥಿಯೇಟರ್ಸ್ ಒಂದಾದ ಮೇಲೊಂದರಂತೆ ಹುಟ್ಟಿಕೊಂಡವು; ರಂಗಭೂಮಿಗೆ ಸಂಬಂಧಿಸಿದ ಮುಂದಾಳುಗಳು ಹುಟ್ಟಿಕೊಂಡರು : ಹೊಸ ರಂಗತಂತ್ರಗಳು ರೂಪುಗೊಂಡವು. ಹಲವಾರು ರಂಗ ಪತ್ರಿಕೆಗಳು ಹುಟ್ಟಿಕೊಂಡವು. ಈ ಪತ್ರಿಕೆಗಳಲ್ಲಿ ರಂಗಕ್ಕೆ ಸಂಬಂಧಿಸಿದ ಹೊಸ ವಿಚಾರಗಳು ಚರ್ಚೆಗೆ ಒಳಗಾದವು. ಬ್ರಾಡ್‍ವೇಯ ವಾಣಿಜ್ಯ ಪ್ರಧಾನ ರಂಗಮಂದಿರಗಳಿಗೆ ಪ್ರತಿಯಾಗಿ ಲಿಟಲ್ ಥಿಯೇಟರ್ಸ್ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತು. ಷಿಕಾಗೋ ಲಿಟಲ್ ಥಿಯೇಟರ್ಸ್ ಈ ಪ್ರಯೋಗಗಳ ಕೇಂದ್ರ ಸ್ಥಾನವಾಯಿತು. eóÉೂನಾಗೇನ್ ಎಂಬಾಕೆಯ ತಂಡ ನಾಟಕ ರಚನೆ ಮತ್ತು ಪ್ರಯೋಗಗಳಲ್ಲಿ ಹೊಸತನ ತಂದಿತು.
ಅಲೈನ್‍ಬನ್ರ್ಸ್‍ಡಾಲ್ ನೇತೃತ್ವದಲ್ಲಿ ಲಾಸ್ ಏಂಜಲೀಸ್ ಲಿಟಲ್ ಥಿಯೇಟರ್ ಸ್ಥಾಪಿತವಾಯಿತು. ಪ್ರಾವಿನ್ಸ್‍ಟೌನ್ ತಂಡ ಅಮೆರಿಕದ ಮಹಾ ನಾಟಕಕಾರನೆಂದು ಪ್ರಖ್ಯಾತನಾಗಿರುವ ಯೂಜೀನ್ ಓನೀಲ್‍ನನ್ನು ಬೆಳಕಿಗೆ ತಂದಿತು. ಹೀಗೆ ಬ್ರಾಡ್‍ವೇಯಿಂದ ಜನಸಾಮಾನ್ಯರಿಗೆ ನಾಟಕವನ್ನು ತರುವ ಕೆಲಸವನ್ನು ಲಿಲ್ ಥಿಯೇಟರ್ ಚಳವಳಿ ಮಾಡಿತು. ಈ ಚಳವಳಿ ಬ್ರಾಡ್‍ವೇ ರಂಗಮಂದಿರದಲ್ಲಿ ಪ್ರದರ್ಶಿತವಾಗುತ್ತಿದ್ದ, ಅದ್ದೂರಿಯ ಪ್ರಯೋಗಗಳ ವಿರೋಧದ ಚಳವಳಿಯೂ ಆಯಿತು. ವ್ಯಾಪಾರಿ ಮನೋಭಾವದ ರಂಗಭೂಮಿಯ ಜೊತೆಗಿನ ಸ್ಫರ್ಧೆಯಲ್ಲಿ ಕೆಲವು ಗಳಿಸುವುದು ಆರಂಭದಲ್ಲಿ ಅಷ್ಟು ಸುಲಭಸಾಧ್ಯ ವಿಚಾರವಾಗಿರಲಿಲ್ಲ. ಏಕೆಂದರೆ ಬ್ರಾಡ್‍ವೇ ಜನರ ಅಭಿರುಚಿಗೆ ಅನುಗುಣವಾದ ಎಲ್ಲ ಗಿಮಿಕ್ಸ್‍ಗಳನ್ನೂ ಉಪಯೋಗಿಸಿಕೊಂಡು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿತ್ತು. ಕ್ರಮೇಣ ಅಂಥ ಪ್ರಯೋಗಗಳನ್ನು ಮತ್ತೆ ಮತ್ತೆ ನೋಡಿದ ಪ್ರೇಕ್ಷಕರು ಬೇಸತ್ತು ಬ್ರಾಡ್‍ವೇಯ ಹೊರಗಿನ ಲಿಟಲ್ `ಥಿಯೇಟರ್ಸ್‍ಗಳ ಕಡೆಗೆ ಆಕರ್ಷಿತರಾದರು. ಲಿಟಲ್ ಥಿಯೇಟರ್ಸ್, ಪ್ರದರ್ಶನದಲ್ಲಿ ಪ್ರಯೋಗದ ಹೊಸತನವನ್ನು ತರುವ ಪ್ರಯತ್ನ ಮಾಡಿದವು. ಷಾ, ಇಬ್ಸೆನ್, ಸ್ಟ್ರಿಂಡ್‍ಬರ್ಗ್ ಮೊದೆಲಾದ ನಾಟಕಕಾರರ ನಾಟಕಗಳು ಹವ್ಯಾಸಿ ನಟನಟಿಯರ ಅಭಿನಯದೊಡನೆ ಪ್ರದರ್ಶನಗೊಂಡು ಜನಪ್ರಿಯವಾದವು.
ನ್ಯೂ ಯಾರ್ಕ್‍ನಲ್ಲಿ ಥಿಯೇಟರ್‍ಗಿಲ್ಡ್ ತನ್ನ ಆರಂಭದ ಕಷ್ಟಗಳನ್ನು ಆಟ್ಟೊ ಎಚ್. ಖಾನ್ ಎಂಬ ಶ್ರೀಮಂತನ ಉದಾರ ಸಹಾಯದಿಂದ ಬಗೆಹರಿಸಿಕೊಂಡಿತು. ಅನಂತರ ತನ್ನ ಕಾಲ ಮೇಲೆ ತಾನೇ ನಿಲ್ಲುವ ವ್ಯವಸ್ಥೆ ಮಾಡಿಕೊಂಡು ತನ್ನದೇ ಆದ ರಂಗಮಂದಿರವನ್ನೂ ಅದು ನಿರ್ಮಿಸಿಕೊಂಡಿತು. ನ್ಯೂ ಯಾರ್ಕ್‍ನಲ್ಲಿನ ದಿ ನೈಬರ್‍ಹುಡ್ ಪ್ಲೇ ಹೌಸ್ ಪ್ರಯೋಗಾತ್ಮಕವಾದ ಪ್ರದರ್ಶನಗಳಿಗಾಗಿ ಇರೀನ್ ಮತ್ತು ಅಲಿಸ್ ಲೆವಿಸೋನ್ ಅವರಿಂದ ಆರ್ಥಿಕ ಸಹಾಯವನ್ನು ಪಡೆಯುತ್ತಿತ್ತು. ಹೀಗಾಗಿ ಅದಕ್ಕೆ ಹೊಸ ಹೊಸ ಪ್ರಯೋಗ ಮಾಡಲು 10 ವರ್ಷಗಳವರೆಗೆ ಸಾಧ್ಯವಾಯಿತು. `ದಿ ಕ್ಲೀವ್‍ಲ್ಯಾಂಡ್ ಪ್ಲೇ ಹೌಸ್, `ದಿ ಸಾಂತಾ ಬಾರ್ಬರಾ ಕಮ್ಯುನಿಟಿ ಥಿಯೇಟರ್, `ದಿ ಡಲ್ಲಾಸ್ ಲಿಟಲ್ ಥಿಯೇಟರ್ ಷಿಕಗೋದಲ್ಲಿನ `ಗುಡ್‍ಮನ್ ಮೆಮೊರಿಯಲ್ ಥಿಯೇಟರ್ ಮೊದಲಾದವು ತಮ್ಮದೇ ಆದ ರಂಗಮಂದಿರಗಳನ್ನು ಹೊಂದಿದ್ದು ಹೊಸ ಹೊಸ ನಾಟಕಗಳನ್ನು ಭಿನ್ನ ಭಿನ್ನ ಶೈಲಿಗಳಲ್ಲಿ ಪ್ರದರ್ಶಿಸತೊಡಗಿದವು. ನಟರ ಅಭಿನಯವೂ ಹೆಚ್ಚು ಹೆಚ್ಚು ಪರಿಣತಿಗೊಳ್ಳತೊಡಗಿತು. ಈ ರಂಗಮಂದಿರಗಳಲ್ಲಿ ಕೇವಲ ನಾಟಕ ಪ್ರದರ್ಶನಗಳಿಗೆ ಮಾತ್ರ ಅವಕಾಶವಿದ್ದು ಬೇರೆ ಯಾವುದೇ ರೀತಿಯ ವ್ಯಾಪಾರೀ ದೃಷ್ಟಿಯ ಪ್ರದರ್ಶನಗಳಿಗೆ ಅವಕಾಶವಿರಲಿಲ್ಲ. ಇವುಗಳು ಒಂದರ್ಥದಲ್ಲಿ ಅಮೆರಿಕದ ರಂಗಭೂಮಿಯ ಇತಿಹಾಸವನ್ನು ಸೃಷ್ಟಿಮಾಡತೊಡಗಿದವು.
ಈ ಅವಧಿಯಲ್ಲಾದ ಒಂದು ಮುಖ್ಯ ಬದಲಾವಣೆ ಎಂದರೆ ಅಲ್ಲಿಯವರೆಗೆ `ನಿರ್ದೇಶಕ ಎನ್ನುವವನು ಕೇವಲ ನಾಟಕ ಕಂಪೆನಿಯ ಮಾನೇಜರ್ ನೇಮಿಸಿದ. ಆತನ ಅಧೀನದ ವ್ಯಕ್ತಿಯಾಗಿದ್ದ ಅಥವಾ ನಾಯಕ ನಾಯಕಿ ಎನಿಸಿಕೊಳ್ಳುವಂಥಹ ಪಾತ್ರವಹಿಸುವ ವ್ಯಕ್ತಿಯ ಒಬ್ಬ ಸಹಾಯಕ ಮಾತ್ರ ಆಗಿರುತ್ತಿದ್ದ. ಆದರೆ 1915 ರ ಅನಂತರ ನಿರ್ದೇಶಕನಿಗೆ ರಂಗಪ್ರದರ್ಶನಗಳಲ್ಲಿ ಪ್ರಧಾನ ಸ್ಥಾನ ದೊರೆಯತೊಡಗಿದವು. ನಾಟಕಕಾರನ ನಾಟಕಕೃತಿಯನ್ನು ರಂಗಭೂಮಿಯ ಕೃತಿಯಾಗಿ ರೂಪಿಸುವಲ್ಲಿ ನಿರ್ದೇಶಕನ ಜವಾಬ್ದಾರಿ ಹೆಚ್ಚಾಗತೊಡಗಿತು. `ನಾಟಕ ರಂಗದ ಮೇಲೆ ರೂಪುಗೊಳ್ಳುವ ಕಲೆ ಎಂಬ ಅಂಶದ ಮೇಲೆ ಒತ್ತು ಬಿದ್ದು, ರಂಗ ಪ್ರಯೋಗದಲ್ಲಿ ಬಳಕೆಯಾಗುವ ಎಲ್ಲ ಪರಿಕರಗಳನ್ನೂ ಪ್ರಯೋಗದ ಒಟ್ಟು ಪರಿಣಾಮಕ್ಕೆ ಪೂರಕವಾಗುವಂತೆ ಬಳಸಿಕೊಳ್ಳುವ ಜವಾಬ್ದಾರಿ ನಿರ್ದೇಶಕನದಾಯಿತು. ನಟರು, ಬೆಳಕು, ಸಂಭಾಷಣೆ, ಚಲನವಲನಗಳು, ರಂಗ ವ್ಯವಸ್ಥೆ (ಸ್ಟೇಜ್ ಸೆಟ್ಟಿಂಗ್) ಮೊದಲಾದವುಗಳನ್ನು ನಿರ್ದೇಶಕ ನಿಯಂತ್ರಿಸತೊಡಗಿದ. ರಂಗದ ಮೇಲೆ ರೂಪುಗೊಳ್ಳುವ ಕಲಾಕೃತಿ, ಅದು ಒಬ್ಬ ನಾಟಕಕಾರ ಬರೆದ ನಾಟಕಕೃತಿಯಾದರೂ ನಿರ್ದೇಶಕನ ವ್ಯಾಖ್ಯಾನದಿಂದಾಗಿ ಅದು ಅವನ ಅರ್ಥವನ್ನೂ ಒಳಗೊಂಡು ನಿರ್ದೇಶಕನ `ವಿಶಿಷ್ಟ ಸೃಷ್ಟಿ ಎಂಬ ಭಾವನೆ ಪ್ರಬಲವಾಯಿತು. ಆದ್ದರಿಂದ ಒಂದೇ ನಾಟಕಕೃತಿಯನ್ನು ಬೇರೆ ಬೇರೆ ನಟರ ತಂಡಗಳು, ಬೇರೆ ಬೇರೆ ನಿರ್ದೇಶಕರ ನಿರ್ದೇಶನದಲ್ಲಿ ಪ್ರಯೋಗ ಮಾಡಿದಾಗ ಪ್ರತಿಯೊಂದು ಪ್ರಯೋಗವೂ ವಿಶಿಷ್ಟವೂ ಭಿನ್ನವೂ ಆಗಿಬಿಡುತ್ತಿತ್ತು. ಹೀಗೆ ನಿರ್ದೇಶಕ, ರಂಗದಲ್ಲಿ ಎಲ್ಲವನ್ನೂ ನಿಯಂತ್ರಿಸುವ ಒಂದು ಶಕ್ತಿಯಾಗಿ ಪರಿಣಮಿಸಿದ.
ರಷ್ಯದಲ್ಲಿ ವೆಸ್‍ವೊಲೋಡ್ ಮೆಯರ್‍ಹೋಲ್ಡ್ ಮತ್ತು ಅಲೆಗ್ಸಾಂಡರ್ ಟೈರಾಫ್ - ಇವರು ನಿರ್ದೇಶನದ ವಿಷಯದಲ್ಲಿ ಕ್ರಾಂತಿಕಾರಕ ಕೆಲಸ ಮಾಡಿದರು. ಇವರ ಪ್ರಯೋಗ ಶೀಲತೆ ಯೂರೋಪಿನ ಇತರ ದೇಶಗಳ ಮೇಲೂ ಪ್ರಭಾವ ಬೀರಿತು. ಅಮೆರಿಕದಲ್ಲಿ ಅಗಸ್ಟಿನ್ ಡಂಕನ್, ರಾಬರ್ಟ್ ಎಡ್‍ಮಂಡ್ ಜೆóೂೀನ್ಸ್ ಮೊದಲಾದವರು ಹೊಸ ಶೈಲಿಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ ನಿರ್ದೇಶಕರುಗಳಾದರು.
ಈ ಅವಧಿಯಲ್ಲಿ ಮೂಡಿಬಂದಂಥ ಭಿನ್ನ ಭಿನ್ನ ರೀತಿಯ ಚಳವಳಿಗಳನ್ನು `ಇಂಪ್ರೆಷನಿಸಂ' ಎಂಬ ಒಂದು ತಲೆಬರೆಹದಡಿಯಲ್ಲಿ ಸೇರಿಸಬಹುದು. ಏಕೆಂದರೆ ಯಾವುದನ್ನು ನಾವು ವೈಯಕ್ತಿಕ ನಾಟಕ (ಡ್ರಾಮಾ ಆಫ್ ದಿ ಇಂಡಿವಿಜುಯಲ್) ಎಂದು ಕರೆಯುತ್ತೇವೆಯೋ ಅದು ಹಲವಾರು ವಿಚಾರಗಳಲ್ಲಿ ಭಿನ್ನವಾಗಿದ್ದರೂ ಹಲವು ಸಮಾನ ಅಂಶಗಳನುಳ್ಳವಾಗಿರುತ್ತದೆ. ಇವೆಲ್ಲವೂ ಮಾನವನ ಅಂತರಂಗವನ್ನು ಅನ್ವೇಷಿಸುವಂತಹವುಗಳಾಗಿದ್ದು ಇತರ ಹಲವಾರು ಅಂಶಗಳಲ್ಲಿ ಯಾವ ಅಂಶದ ಮೇಲೆ ಒತ್ತು ಹಾಕುತ್ತದೆ ಎಂಬುದರ ಆಧಾರದ ಮೇಲೆ ಅವುಗಳನ್ನು ಭಿನ್ನ ಭಿನ್ನ ವರ್ಗಗಳಾಗಿ ಪರಿಗಣಿಸಲಾಗುತ್ತದೆ.
1896 ರಲ್ಲಿ ಆಲ್‍ಫ್ರೆಡ್‍ಜಾರಿ ಎಂಬಾತ ಯುಬುರಾಯ್ ಎಂಬ ಒಂದು ತೀಕ್ಷ್ಣ ವಿಡಂಬನಾತ್ಮಕ ನಾಟಕವನ್ನು ರಚಿಸಿದ. ಈ ನಾಟಕದಿಂದಲೇ ಸರ್ರಿಯಲಿಸ್ಟ್ ನಾಟಕದ ಆರಂಭವಾಯಿತೆನ್ನಲಾಗಿದೆ. 1917ರಲ್ಲಿ ಗ್ಯುಲಾಯ್ ಮೇ ಅಪೋಲ್ಲಿನಯೇರ್ ಎಂಬಾತ ದಿ ಬ್ರೆಸ್ಟ್ಸ್ ಆಫ್ ಟೈರಿಸಿಯಸ್ ಎಂಬ ನಾಟಕವನ್ನು ಸರ್ರಿಯಲಿಸ್ಟ್ ನಾಟಕವೆಂದು ಪ್ರಕಟಿಸಿ ಪ್ರಯೋಗಿಸಿದ. ಎಂಟು ವರ್ಷಗಳ ಅನಂತರ ಆಂಡ್ರೆ ಬ್ರೆಟನ್ ಮೊದಲ ಸರ್ರಿಯಲಿಸ್ಟ್ ಪ್ರಣಾಳಿಕೆಯನ್ನು ಪ್ರಕಟಿಸಿದ. ಸರ್ರಿಯಲಿಸಂನಲ್ಲಿ ಸೃಜನಶೀಲ ಮತ್ತು ವಿನಾಶಕಾರಕ ಶಕ್ತಿಗಳೆರಡನ್ನೂ ಕಾಣುತ್ತೇವೆ.
`ದಿ ಬ್ರೆಸ್ಟ್ಸ ಆಫ್ ಟೈರಿಸಿಯಸ್ ನಾಟಕ ಪ್ರಕಟಗೊಂಡ ವರ್ಷವೇ ಜೂರಿಚ್‍ನಲ್ಲಿ ಟ್ರಿಸ್ಟಾನ್‍ಜಾರಾ, ಹ್ಯಾನ್ಸ್ ಆರ್ಟ್ ಮೊದಲಾದವರು ಡಾಡಾಯಿಸ್ಟ್ ಎಂಬ ಒಂದು ಸರ್ವನಾಶ ಧೋರಣೆಯ ಚಳವಳಿಯನ್ನು ಆರಂಭಿಸಿದರು. ಎಂಟು ವರ್ಷಗಳ ಅನಂತರ ಆ ಚಳವಳಿಯ ಪ್ರಣಾಳಿಕೆ ಪ್ರಕಟವಾಯಿತು. ಡಾಡಾಯಿಸಂ ಮತ್ತು ಸರ್ರಿಯಲಿಸಂಗಳ ಮಧ್ಯೆ ನಿಕಟ ಸಂಬಂಧವಿದೆ. ಆದರೆ ಡಾಡಾಯಿಸಂ ಎಲ್ಲ ಸಾಂಪ್ರದಾಯಿಕ ಮೌಲ್ಯಗಳನ್ನೂ ನಾಶಮಾಡಬೇಕೆಂಬ, ಜೀವನದ ಎಲ್ಲ ಅಂಶಗಳನ್ನೂ ವಿರೋಧಿಸಬೇಕೆಂಬ ಸರ್ವನಾಶಧೋರಣೆಯುಳ್ಳದ್ದು. ಆದರೆ ಸರ್ರಿಯಲಿಸಂ ಕೇವಲ ಸರ್ವನಾಶ ಧೋರಣೆಯುಳ್ಳದ್ದಲ್ಲ. ಅದರಲ್ಲಿ ಕೆಲವು ಇತ್ಯತ್ಮಕ ಅಂಶಗಳೂ ಇವೆ. ಸುಪ್ತಪ್ರಜ್ಞೆಯ ಪರಿಕಲ್ಪನೆಯನ್ನು ಒಪ್ಪಿಕೊಂಡ ಇವರಿಗೆ ವಾಸ್ತವಿಕತೆ ಎಂದರೆ ಕೇವಲ ಹೊರ ಪ್ರಪಂಚದ ಚಿತ್ರಣದಷ್ಟೇ ಆಗಿರದೆ ವ್ಯಕ್ತಿಯ ಅಂತರಂಗದ ಗುಹ್ಯಾತ್‍ಗುಹ್ಯ ತರವಾದ ಒಳಪದರಗಳ ಅನ್ವೇಷಣೆಯೂ ಹೌದು.
ಅತಿರೇಕವಾದಿಗಳು ಸ್ವಯಂಚಾಲಿತ ಬರೆವಣಿಗೆ ಮತ್ತು ಕನಸುಗಳ ಯಥಾವತ್ತಾದ ನಿರೂಪಣೆಯೇ ಕಲೆಯ ಉದ್ದೇಶ ಎಂದು ವಾದಿಸಿದರು. ಆದರೆ ಇವರುಗಳಲ್ಲಿ ಈ ಅತೀರೇಕಕ್ಕೆ ಹೋಗದ ಕೆಲವರು ಸ್ವಯಂಚಾಲಿತ ಬರೆವಣಿಗೆ (ಆಟೋಮ್ಯಾಟಿಕ್ ರೈಟಿಂಗ್) ಮತ್ತು ಕನಸುಗಳ ಅಭಿವ್ಯಕ್ತಿ ಈ ಅಂಶಗಳನ್ನೂ ಒಪ್ಪಿಕೊಂಡರೂ ಇವುಗಳನ್ನು ನಿಯಂತ್ರಿಸುವ ಬುದ್ಧಿಯೆ ಕೆಲಸವೂ ಇದೆ ಎಂದು ತಿಳಿದರು. ಇಲ್ಲದಿದ್ದರೆ ಕಲೆಯ ತರತಮವನ್ನು ನಿರ್ಣಯಿಸಲು ಸಾಧ್ಯವಾಗದೆ ಎಲ್ಲ ಬರೆವಣಿಗೆಗಳೂ ಸಮಾನ ಮಹತ್ತ್ವದವೆಂದು ತಿಳಿಯಲಾಗುತ್ತದೆ. ಸಾಲ್‍ವಡೋರ್ ಡಾಲಿಯಂತಹ ಪ್ರತಿಭಾವಂತ ವರ್ಣಚಿತ್ರಕಾರರು ಸರ್ರಿಯಲಿಸಂ ವಿಧಾನದಲ್ಲಿ ಶ್ರೇಷ್ಠ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಜೇಮ್ಸ್‍ಜಾಯ್ಸ್ ತನ್ನ `ಯೂಲಿಸಿಸ್ ಮತ್ತು `ಫಿನನೆಗನ್ಸ್ ವೇಕ್ ಕಾದಂಬರಿಗಳಲ್ಲಿ ಈ ವಿಧಾನದಿಂದ ಪ್ರಭಾವಿತನಾಗಿರುವುದನ್ನು ಕಾಣುತ್ತೇವೆ.
ಸರ್ರಿಯಲಿಸಂ ತತ್ತ್ವನಾಟಕ ರಚನೆ ಮತ್ತು ಪ್ರಯೋಗದ ಮೇಲೆಯೂ ಪ್ರಭಾವ ಬೀರಿತು. ಜೇನ್ ಕಾಕ್‍ಟೀವ್ ಎಂಬ ಫ್ರೆಂಚ್ ನಾಟಕಕಾರ ಈ ವಿಧಾನದಲ್ಲಿ ಮುಖ್ಯ ನಾಟಕಗಳನ್ನು ರಚಿಸಿದ್ದಾನೆ. ದಿ ಕಪಲ್ ಆಫ್ ದಿ ಐಫಲ್ ಟವರ್, ರೋಮಿಯೊ ಅಂಡ್ ಜೂಲಿಯಟ್, ದಿ ಹ್ಯೂಮನ್ ವಾಯ್ಸ್, ದಿ ಈಗಲ್ ವಿತ್ ಟೂ ಹೆಡ್ಸ್ - ಈ ನಾಟಕಗಳಲ್ಲಿ ತನ್ನ ವಾಸ್ತವವಾದಿ ಶೈಲಿಯನ್ನು ಬಿಟ್ಟು ಸಾಂಕೇತಿಕತೆಯನ್ನು ಒಳಗೊಂಡ ಶೈಲಿಗಳನ್ನು ಬಳಸಿಕೊಂಡ ಇವನ ನಾಟಕಗಳಲ್ಲಿ ತಟಕ್ಕನೆ ಭಿನ್ನ ಭಿನ್ನ ಶೈಲಿಗಳನ್ನು ಮುಶ್ರಣ ಮಾಡುವುದನ್ನೂ ಕಾಣುತ್ತೇವೆ. ಇವನ ನಾಟಕಗಳು ವಾಸ್ತವವಾದಿ ಶೈಲಿಗಿಂತ ಹೆಚ್ಚಾಗಿ ಇಂಪ್ರೆಷನಿಸಂ ಶೈಲಿಯನ್ನು ಬಳಸಿಕೊಳ್ಳುತ್ತವೆ. ಹಾಗೆಯೇ ಸರ್ರಿಯಲಿಸ್ಟಿಕ್ ಶೈಲಿಯನ್ನೂ ಬಳಸಿಕೊಳ್ಳುವ ಇವನ ನಾಟಕ ರಚನೆಯಲ್ಲಿನ ಈ ವಿಶೇಷತೆ ರಂಗ ಪ್ರಯೋಗದ ಮೇಲೆಯೂ ಪರಿಣಾಮ ಬೀರಿತು. ರಂಗ ಪರಿಕರಗಳ ಬಳಕೆಯಲ್ಲೂ ವಿಭಿನ್ನ ಪರಿಕರಗಳ ಮಿಶ್ರಣ ಆವಶ್ಯಕವಾಯಿತು.
ಇದೇ ರೀತಿಯಿಂದ ಗಮನಿಸಬೇಕಾದ ಮತ್ತೊಬ್ಬ ನಾಟಕಕಾರ ಫರ್‍ನ್ಯಾಂಡ್ ಕ್ರಾಮ್‍ಲಿಂಕ್. ಇವನು ಫ್ರ್ಯಾಂಕೊಬೆಲ್ಚಿಯಂ ನಾಟಕಕಾರ. ಇವನ ನಾಟಕಗಳಲ್ಲಿ ಸರ್ರಿಯಲಿಸ್ಟಿಕ್ ವಿಧಾನ ಪ್ರಧಾನವಾಗಿ ಬಳಕೆಯಾಗಿದೆ. ಒಂದು ದೃಶ್ಯ ವಾಸ್ತವಿಕವಾಗಿದ್ದರೆ ಇನ್ನೊಂದು ದೃಶ್ಯ ಒಂದು ಕಸಿನನಂತಿರುತ್ತದೆ. ಸತ್ಯ ಎಂಬುದು ವಾಸ್ತವಿಕತೆ ಮತ್ತು ಕನಸುಗಳ ಮಿಶ್ರಣದಿಂದಾದದ್ದು ಎಂಬುದನ್ನು ಇವನ ನಾಟಕಗಳು ಚಿತ್ರಿಸುತ್ತವೆ. ದಿ ಮೇಕರ್ ಆಫ್ ದಿ ಮಾಸ್ಕ್ಸ್ (1908), ದಿ ಮರ್ಚೆಂಟ್ ಆಫ್ ರಿಗ್ರೆಟ್ಸ್ (1913), ದಿ ವುಮನ್ ಹೂಸ್ ಹಾರ್ಟ್ ಈಸ್ ಟೂ ಸ್ಮಾಲ್ (1934) - ಈ ನಾಟಕಗಳಲ್ಲಿ ಇವನ ನಾಟಕ ರಚನಾ ಕೌಶಲ ಎದ್ದು ಕಾಣುತ್ತದೆ. ಪದಗಳ ಸಮೃದ್ಧ ಬಳಕೆ, ಕುಶಲ ನಾಟಕೀಯ ಸಂದರ್ಭಗಳ ಸೃಷ್ಟಿ, ವಾಸ್ತವಿಕತೆ ಮತ್ತು ಅವಾಸ್ತವಿಕತೆಗಳ ಮಿಶ್ರಣ, ಪಾತ್ರಗಳ ಬಹಿರಂಗ ಜೀವನವನ್ನು ಚಿತ್ರಿಸುತ್ತಲೇ ಅವುಗಳ ಅಂತರಂಗದ ಜೀವನವನ್ನು ಚಿತ್ರಿಸುವುದು ಮೊದಲಾದ ಸಂಗತಿಗಳನ್ನು ಇವನ ನಾಟಕಗಳಲ್ಲಿ ಕಾಣುತ್ತೇವೆ.
ರೋಜರ್ ವಿಟ್‍ರ್ಯಾಕ್ ಎಂಬ ಫ್ರೆಂಚ್ ನಾಟಕಕಾರ ದಿ ಮಿಸ್ಟರೀಸ್ ಆಫ್ ಲವ್ ಎಂಬ ನಾಟಕದಲ್ಲಿ ಪ್ರೇಮಿಯ ಗೋಜಲುಗೋಜಲಾದ ಕನಸುಗಳನ್ನು ಚಿತ್ರಿಸುತ್ತಾನೆ. ಚಿಲ್ಡ್ರನ್ ಇನ್ ಪವರ್ ಎಂಬ ನಾಟಕ ಸಮಾಜದ ವಿಷಮತೆಗಳನ್ನು ಒಂದು ಕಾಲ್ಪನಿಕ ಜಗತ್ತನ್ನು ಸೃಷ್ಟಿಸುವುದರ ಮೂಲಕ ವಿಡಂಬಿಸುತ್ತದೆ. ಈ ನಾಟಕದಲ್ಲಿ ಒಂಬತ್ತು ವರ್ಷದ ಒಂದು ಮಗು ಒಬ್ಬ ಪ್ರಬುದ್ಧನ ಹಾಗೆ ಮಾತನಾಡುತ್ತದೆ ಮತ್ತು ವರ್ತಿಸುತ್ತದೆ.
ಸರ್ರಿಯಲಿಸಂನ ಹಾಗೆಯೇ ಮನೋವಿಶ್ಲೇಷಣೆ ಕೂಡ (ಸೈಕೊಅನಾಲಿಸಿಸ್) ನಾಟಕದ ಮೇಲೆ ತನ್ನ ಪ್ರಭಾವ ಬೀರಿತು. ಹೆನ್ರಿನೆಲೆನಾರ್‍ಮಂಡ್ ಮನೋವಿಶ್ಲೇಷಣಾತ್ಮಕ ನಾಟಕಗಳನ್ನು ಬರೆದವರಲ್ಲಿ ಮುಖ್ಯನಾದವನು. ಇವನ ನಾಟಕಗಳಲ್ಲಿ ಪಾತ್ರಗಳ ಸುಪ್ತಪ್ರಜ್ಞೆಯ ಚಲನವಲನಗಳ ಚಿತ್ರಣದ ಮೇಲೆ ಹೆಚ್ಚು ಒತ್ತು ಹಾಕಲಾಗುತ್ತದೆ. ದಿ ಈಟರ್ ಆಫ್ ಡ್ರೀಮ್ಸ್ (1922) ನಾಟಕದಲ್ಲಿ ಒಬ್ಬ ಮನೋವಿಶ್ಲೇಷಣಕಾರರನ್ನೇ ಕೇಂದ್ರವಾಗಿಟ್ಟುಕೊಂಡು ಅವನನ್ನೇ ಮನೋವಿಶ್ಲೇಷಣೆ ಮಾಡುವ ಸಂದರ್ಭವನ್ನು ಸೃಷ್ಟಿಸಲಾಗಿದೆ. ಮ್ಯಾನ್ ಅಂಡ್ ಹಿಸ್ ಫ್ಯಾಂಟಮ್ಸ್ (1924) ನಾಟಕದಲ್ಲಿ ಹಲವಾರು ಸ್ತ್ರೀಯರ ಜೊತೆಗಿನ ಡಾನ್‍ಜುಆನ್‍ನ ಪ್ರಣಯ ಸಂದರ್ಭಗಳಿಗೆ ಕಾರಣಗಳನ್ನು ಅವನ ಬಾಲ್ಯ ಜೀವನದ ಅನುಭವಗಳಲ್ಲಿ ಹುಡುಕುವ ಪ್ರಯತ್ನ ಮಾಡಲಾಗಿದೆ. ದಿ ರೆಡ್ ಟೂತ್, ದಿ ಕವರ್ಡ್ (1926) ಇವನ ಇತರ ನಾಟಕಗಳು. ಪಾಲ್‍ರೈನಾಲ್, ಸ್ಟೀವ್ ಪ್ಯಾಸಿಯರ್ ಮೊದಲಾದ ನಾಟಕಕಾರರೂ ಮನೋವಿಶ್ಲೇಷಣಾತ್ಮಕ ನಾಟಕಗಳನ್ನು ಬರೆದಿದ್ದಾರೆ.
ಜೀನ್ ಜಾಕ್ಸ್ ಬರ್ನಾರ್ಡ್ (1888) ಫ್ರೆಂಚ್ ನಾಟಕಕಾರ, ಕವಿ ಮತ್ತು ಥಿಯೇಟರ್ ಆಫ್ ಸೈಲೆನ್ಸ್ ಎಂಬ ನಾಟಕ ಪರಂಪರೆಯ ಸಿದ್ಧಾಂತಕಾರ. ಇವನು ಹೆಚ್ಚು ಮಾತುಗಳನ್ನು ಬಳಸುವ, ವಾಗ್ವಿಜೃಂಭಣೆಗೆ ಅವಕಾಶ ಕೊಡುವ ನಾಟಕ ರೀತಿಯನ್ನು ವಿರೋಧಿಸಿದವನು. ಇವನ ಎಲ್ಲ ನಾಟಕಗಳಲ್ಲಿ ವ್ಯಕ್ತಿ ವ್ಯಕ್ತಿಯ ಮಧ್ಯದ ಅತ್ಮೀಯ ಸಂಬಂಧದ ಸಂಕೀರ್ಣತೆಗಳನ್ನು ವಿಸ್ಲೇಷಿಸಲಾಗಿದೆ. ಅದರಲ್ಲೂ ಗಂಡುಹೆಣ್ಣಿನ ಸಂಬಂಧದ ಸಮಸ್ಯೆಗಳನ್ನು ಅತ್ಯಂತ ಆತ್ಮೀಯವಾದ ಮತ್ತು ಆ ಸಂಬಂಧದ ಮಾನಸಿಕ ಸ್ಥಿತಿಯ ಸಂಕೀರ್ಣತೆಗಳನ್ನು ಸೂಕ್ಷ್ಮವಾಗಿ ಅನ್ವೇಷಿಸುತ್ತವೆ. ಇವನ ನಾಟಕಗಳಲ್ಲಿ ಮಾತಿಗಿಂತ ಮೌನ ಹೆಚ್ಚು ಅರ್ಥಪೂರ್ಣ ವಾಗಿರುತ್ತದೆ. ದಿ ಸಲ್ಕಿಫೈರ್ 91921), ಮಾರ್‍ಟೈನ್ (1922), ದಿ ಇನ್‍ವಿಟೇಷನ್ ಟು ಎ ವಾಯೇಜ್ (1924), ದಿ ಸ್ಪ್ರಿಂಗ್‍ಟೈಮ್ ಆಫ್ ಅದರ್ಸ್ (1924), ದಿ ಸೋಲ್ ಇನ್ ಪೆಯಿನ್ (1`926)- ಇವನ ಮುಖ್ಯ ನಾಟಕಗಳು. ಬರ್ನಾರ್ಡ್ ಜೊತೆಗೆ ವಿಲ್‍ಟ್ರ್ಯಾಕ್‍ನ ಹೆಸರನ್ನು ಸೇರಿಸಬಹುದು. ದಿ ಪಿಲಿಗ್ರಿಮ್ (1926), ಎಸ್. ಎಸ್. ಟೆನಸಿಟಿ ಮೊದಲಾದವು ಇವನ ನಾಟಕಗಳು. ಇವನ ನಾಟಕಗಳಲ್ಲಿ ಬರುವ ಸಂದರ್ಭಗಳು ಸರಳವಾದವುಗಳಾದರೂ ಅವುಗಳನ್ನು ಇವನು ಬಹಳ ಆತ್ಮೀಯವಾಗಿ ಮಾನಸಿಕ ಒಳನೋಟಗಳಿಂದ ಚಿತ್ರಿಸುವುದರಿಂದ ಪರಿಣಾಮ ಬೀರುತ್ತವೆ. ಪಾಲ್‍ಗೆರಾಲ್ಡಿ ಎಂಬಾತ ಕೂಡ ತನ್ನ ನಾಟಕಗಳಲ್ಲಿ ಪ್ರೇಮವನ್ನೇ ಪ್ರಧಾನ ವಸ್ತುವಾಗಿ ಬಳಸುತ್ತಾನೆ. ದಿ ನೆಸ್ಟ್ (1917), ಟು ಲವ್ (1921), ಕ್ರಿಸ್ಟಿಂಗ್ (1937), ಡ್ಯೂಮೊ (1938) ಮೊದಲಾದವು ಇವನ ಮುಖ್ಯ ನಾಟಕಗಳು. ಜೀನ್ ಸಾರ್‍ಮೆಂಟ್, ಜೀನ್ ವಿಕ್ಟರ್‍ಪೆಲರಿನ್ ಮೊದಲಾದ ನಾಟಕಕಾರರನನ್ನು, ಪ್ರೇಮದ ವಸ್ತುವನ್ನು ಮನಶ್ಯಾಸ್ತ್ರೀಯ ಒಳನೋಟದಿಂದ ಚಿತ್ರಿಸುವ ನಾಟಕಕಾರರ ಪಟ್ಟಿಯಲ್ಲಿ ಸೇರಿಸಬಹುದು. ಈ ಫ್ರೆಂಚ್ ನಾಟಕಕಾರರೊಂದಿಗೆ ಇಂಗ್ಲಿಷ್‍ನಲ್ಲಿ ಬರೆದ ಚಾಲ್ರ್ಸ್ ಮೋರ್‍ಗಾನ್‍ನನ್ನು ಸೇರಿಸಬಹುದು. ದಿ ಫ್ಲ್ಯಾಷಿಂಗ್ ಸ್ಟ್ರೀಂ (1938), ದಿ ರಿವರ್ ಲೈನ್ (1952), ಮತ್ತು ದಿ ಬರ್ನಿಂಗ್ ಗ್ಲಾಸ್ (1954) - ಇವು ಇವನ ನಾಟಕಗಳು. ಇವುಗಳಲ್ಲಿ ಮನುಷ್ಯ ಸ್ವಭಾವನ್ನು ಪ್ರಸ್ತುತ ಸಾಮಾಜಿಕ, ರಾಜಕೀಯ, ತತ್ತ್ವಶಾಸ್ತ್ರೀಯ ಸಮಸ್ಯೆಗಳ ಸಂದರ್ಭದಲ್ಲಿ ಚಿತ್ರಿಸಲಾಗಿದೆ.
ಜಾನ್ ಆಸ್‍ಬಾರ್ನ್ (1929) ಇಂಗ್ಲಿಷ್ ನಾಟಕಕಾರ. ನಟನಾಗಿ ರಂಗದ ಜೊತೆಗೆ ತನ್ನ ಸಂಬಂಧವನ್ನು ಆರಂಭಿಸಿದ ಇವನು ಮೊದಲಿಗೆ ಇತರರೊಂದಿಗೆ ಸೇರಿ ಮೂರು ನಾಟಕಗಳನ್ನು ಬರೆದ. ಇವನ ಪ್ರಸಿದ್ಧ ನಾಟಕ ಲುಕ್ ಬ್ಯಾಕ್ ಇನ್ ಆ್ಯಂಗರ್. ಇದು ರಾಯಲ್‍ಕೋರ್ಟ್‍ನಲ್ಲಿನ ಇಂಗ್ಲಿಷ್ ಸ್ಟೇಜ್ ಕಂಪನಿಯಿಂದ ಪ್ರದರ್ಶನಗೊಂಡಿತು. ಒಬ್ಬ ನಾಟಕಕಾರನ ಮೊದಲ ನಾಟಕವನ್ನು ಈ ಕಂಪನಿ ಹೀಗೆ ಪ್ರದರ್ಶಿಸಿದ್ದು ಅದೇ ಮೊದಲು. ಈ ನಾಟಕ ಬ್ರಿಟಿಷ್ ನಾಟಕದ ಪುನಶ್ಚೇತನಕ್ಕೆ ಕಾರಣವಾಯಿತು. ಇವನ ಮತ್ತೊಂದು ಪ್ರಸಿದ್ಧ ನಾಟಕ ದಿ ಎಂಟ್ರಟೈನರ್ (1957). ಈ ನಾಟಕದಲ್ಲಿ ಸರ್ ಲಾರೆನ್ಸ್ ಒಲಿವಿಯರ್ ಎಂಬ ನಟ ಪಾತ್ರವಹಿಸಿದ್ದು ಈ ನಾಟಕದ ಮಹತ್ತ್ವಕ್ಕೆ ಕಾರಣವಾಯಿತು. ಇದರಲ್ಲಿ ಆಸ್‍ಬಾರ್ನ್ ವಾಸ್ತವವಾದಿ ಶೈಲಿಯೊಂದಿಗೆ ಬ್ರೆಕ್ಟ್‍ನ ಎಪಿಕ್ ನಾಟಕ ಶೈಲಿಯನ್ನು ಬಳಸಿಕೊಂಡಿದ್ದಾನೆ. 1961 ರಲ್ಲಿ ಬಂದ ಇವನ ಲೂಥರ್ ನಾಟಕ ಸಾರ್ವಜನಿಕರಿಂದಲೂ ನಾಟಕ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತು. ಅನಂತರ ಈತ ದಿ ಬ್ಲಡ್ ಆಫ್ ದಿ ಬ್ಯಾಂಬಗ್ರ್ಸ್ (1962) ಮತ್ತು ಅಂಡರ್ ಪ್ಲೇನ್ ಕವರ್ (1962) ಎಂಬ ಏಕಾಂಕಗಳನ್ನು ಪ್ರಕಟಿಸಿದ. ಇವುಗಳಲ್ಲಿ ಮೊದಲನೆಯದು ವಿಡಂಬನಾತ್ಮಕ ನಾಟಕವಾದರೆ ಎರಡನೆಯದು ಮದುವೆಯಲ್ಲಿನ ಸ್ತ್ರೀ ಪುರುಷ ವಿಷಯದಲ್ಲಿನ ಅಂಧ ಭಕ್ತಿಯ ವಸ್ತುವನ್ನು ಮತ್ತು ಈ ದೃಷ್ಟಿಯಿಂದ ಪಾತ್ರಗಳನ್ನು ವಿಶ್ಲೇಷಿಸುತ್ತದೆ. ವಿಮರ್ಶಕರ ಪ್ರಕಾರ ಲುಕ್ ಬ್ಯಾಕ್ ಇನ್ ಆಂಗರ್ ಅನಂತರ ಇವನು ಬರೆದಿರುವ ಅತಿಮುಖ್ಯವಾದ ನಾಟಕವೆಂದರೆ ಇನ್ ಅಡ್‍ಮಿಸಿಬಲ್ ಎವಿಡೆನ್ಸ್, ಟೆಲಿವಿಷನ್‍ಗಾಗಿ 1960 ರಲ್ಲಿ ಸಬ್ಜೆಕ್ಡ್ ಆಫ್ ಸ್ಕ್ಯಾಂಡಲ್ ಅಂಡ್ ಕನ್‍ಸನ್ರ್ಸ್ ಎಂಬ ದೃಶ್ಯ ರೂಪಕವನ್ನು ರಚಿಸಿಕೊಟ್ಟ. ಇವನ ನಾಟಕಗಳು ಆಧುನಿಕ ಇಂಗ್ಲಿಷ್ ನಾಟಕ ಪರಂಪರೆಗೆ ಹೊಸ ಆಯಾಮವನ್ನು ಜೋಡಿಸಿದವು.
ಜಿ. ಬಿ. ಪ್ರೀಸ್ಟ್ಲೆ (1894) ಎಂಬಾತ 1931 ರಲ್ಲಿ ತನ್ನದೇ ಕಾದಂಬರಿ ದಿ ಗುಡ್ ಕಂಪ್ಯಾನಿಯನ್ ಟು ದಿ ಸ್ಟೇಜ್ ಎಂಬುದನ್ನು ಎಡ್ವರ್ಡ್ ನಾಬ್‍ಲಾಕ್ ಎಂಬಾತನ ಸಹಕಾರದೊಂದಿಗೆ ನಾಟಕ ರೂಪಕ್ಕೆ ಪರಿವರ್ತಿಸಿದ. 1930 ರ ದಶಕದಲ್ಲಿ ಕಾಲದ (ಟೈಮ್) ಸ್ವರೂಪದ ಬಗೆಗೆ ಇವನಿಗೆ ಆಸಕ್ತಿಯುಂಟಾಗಿ ಡೇಂಜರಸ್ ಕಾರ್‍ನರ್ (1932) ಎಂಬ ನಾಟಕದಲ್ಲಿ ಕಾಲದ ಸ್ವರೂಪದ ಸಂಕೀರ್ಣತೆಯನ್ನು ಅನ್ವೇಷಿಸಿದ್ದಾನೆ. 1937 ರಲ್ಲಿ ರಚಿಸಿದ ಇವನ ಟೈಮ್ ಅಂಡ್ ಕಾನ್‍ವೇಸ್ ಮತ್ತು ಐ ಹ್ಯಾವ್ ಬೀನ್ ಹಿಯರ್ ಬಿಫೋರ್ ಎಂಬ ನಾಟಕಗಳಲ್ಲಿ ಕಾಲವನ್ನು ಕುರಿತ ಪರಿಭಾವನೆ ಪ್ರಧಾನವಾಗಿದೆ. ಲ್ಯಾಬರ್‍ನನ್ ಗ್ರೋವ್ (1933), ಈಡನ್ ಎಂಡ್ (1934), ವೆನ್ ವಿ ಆರ್ ಮ್ಯಾರಿಡ್ (1938) - ಇವು ಇವನ ಹಾಸ್ಯ ನಾಟಕಗಳು. ಮ್ಯೂಸಿಕ್ ಅಟ್ ನೈಟ್ (1938) ಮತ್ತು ಜಾನ್‍ಸನ್ ಓವರ್ ಜಾರ್ಡನ್ (1939) ಮೊದಲಾದ ಪ್ರಾಯೋಗಿಕ ನಾಟಕಗಳನ್ನು ಇವನು ರಚಿಸಿದ್ದಾನೆ. ದೆ ಕೇಮ್ ಟು ಎ ಸಿಟಿ (1943) ಎಂಬ ಇವನ ಒಂದು ಅನ್ಯೋಕ್ತಿ ನಾಟಕ ಹೆಚ್ಚು ಜನಪ್ರಿಯವಾಯಿತು. ಯುದ್ಧಾನಂತರ ಇವನ ಮುಖ್ಯ ನಾಟಕಗಳಿವು : ದಿ ಇನ್‍ಸ್ಪೆಕ್ಟರ್ ಕಾಲ್ಸ್ (1945) ಮತ್ತು ದಿ ಲಿಂಡನ್ ಟ್ರೀ (1947). 50ರ ದಶಕದಲ್ಲಿ ಇವನು ಹೆಚ್ಚಾಗಿ ನಾಟಕಗಳನ್ನು ಬರೆಯಲಿಲ್ಲ. 1964 ರಲ್ಲಿ ಐರಿಸ್ ಮರ್ಡಾಕ್ ಎಂಬಾಕೆಯ ಎ ಸಿವಿಯರ್ಡ್ ಹೆಡ್ ಎಂಬ ಕಾದಂಬರಿಯನ್ನು ಅವಳ ಸಹಯೋಗದೊಂದಿಗೆ ರಂಗಕ್ಕಾಗಿ ನಾಟಕ ರೂಪಕ್ಕೆ ಅಳವಡಿಸಿದ.
1947 ರ ಅನಂತರ ಅಮೆರಿಕದಲ್ಲಿ ಬಹಳ ಮುಖ್ಯ ನಾಟಕಕಾರರೆಂದು ಎದ್ದುಕಾಣುವ ಇಬ್ಬರೆಂದರೆ ಆರ್ಥರ್ ಮಿಲ್ಲರ್ ಮತ್ತು ಟೆನೆಸ್ಸಿ ವಿಲಿಯಮ್ಸ್. ಆರ್ಥರ್ ಮಿಲ್ಲರನ ನಾಟಕಗಳು ಸಾಮಾನ್ಯವಾಗಿ ಈ ಶತಮಾನದ ಮಧ್ಯಭಾಗದ ಮನುಷ್ಯನ ಅದೃಷ್ಟದ ದುರಂತತೆಯ ಚಿತ್ರಣ ನೀಡುತ್ತವೆ. ಇವನ ಮೊದಲ ನಾಟಕ ಆಲ್ ಮೈ ಸನ್ಸ್ (1947). ಇದು ಇವನ ಅತ್ಯಂತ ಯಶಸ್ವೀ ನಾಟಕ. ಇದರಲ್ಲಿ ಯುದ್ಧವನ್ನು ಲಾಭಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸಲಾಗಿದೆ. ಡೆತ್ ಆಫ್ ಎ ಸೇಲ್ಸ್‍ಮನ್ (1947) ನಾಟಕದಲ್ಲಿ ಒಬ್ಬ ವಾಣಿಜ್ಯೋದ್ಯಮಿಗೆ ಸಾವು ಅವನ ಹತ್ತಿರ ಹತ್ತಿರ ಬಂದಂತೆ ಅವನಿಗೆ ತನ್ನ ಜೀವನದ ಅರ್ಥರಾಹಿತ್ಯ ಅರಿವಿಗೆ ಬರುವುದನ್ನು ಗಾಢವಾಗಿ ಚಿತ್ರಿಸಲಾಗಿದೆ. 1953 ರಲ್ಲಿ ವಿನು ಬರೆದ ದಿ ಕ್ರೂಸಿಬಲ್ ಎಂಬ ನಾಟಕ 17 ನೆಯ ಶತಮಾನದ ವಿಚ್ ಹಂಟಿಂಗ್‍ನ ವಸ್ತುವನ್ನುಳ್ಳದ್ದಾಗಿದ್ದರೂ 20 ನೆಯ ಶತಮಾನದ 50 ನೆಯ ದಶಕದ ಅಮೆರಿಕದಲ್ಲಿ ಮೆಕಾರ್ಥಿಯ ಕಮ್ಯುನಿಸ್ಟರ ವಿಚ್ ಹಂಟಿಂಗ್ ಅನ್ನು ಸೂಚಿಸುತ್ತದೆ. ದಿ ವ್ಯೂ ಫ್ರಮ್ ದಿ ಬ್ರಿಡ್ಜ್ ಎಂಬ ನಾಟಕದಲ್ಲಿ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಎದುರಿಸುವಂಥ ಸಂದರ್ಭದ ಚಿತ್ರಣವನ್ನು ಕಾಣಬಹುದು. ಆಫ್ಟರ್ ದಿ ಫಾಲ್ (1964) ನಾಟಕದಲ್ಲಿ ಬರುವ ಕೇಂದ್ರ ಪಾತ್ರ ತನ್ನ ಕ್ರಿಯೆಗಳ ಮೂಲವನ್ನು ಅರಸಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಚಿತ್ರಿಸುತ್ತದೆ. ನಡೆದ ಸತ್ಯ ಘಟನೆಯ ಆಧಾರದ ಮೇಲೆ ರಚನೆಗೊಂಡ ನಾಟಕ ಇನ್‍ಸಿಡೆಂಟ್ ಅಟ್‍ವಿಚಿ, ಈ ನಾಟಕವನ್ನು ಲಿಂಕನ್ ಸೆಂಟರ್ ಕಂಪನಿ ಪ್ರದರ್ಶಿಸಿತು. ಅನಂತರ ಇವನು ಬರೆದ ದಿ ಪ್ರೈಸ್ ಎಂಬ ನಾಟಕ ಬ್ರಾಡ್‍ವೇ ಥಿಯೇಟರ್‍ನಲ್ಲಿ ಪ್ರದರ್ಶಿತವಾಯಿತು.
ಟೆನೆಸ್ಸಿ ವಿಲಿಯಮ್ಸ್‍ನ ಮೊದಲ ನಾಟಕ ಬ್ಯಾಟಲ್ ಆಫ್ ಏಂಜಲ್ಸ್. 1940 ರಲಲಿ ಬೋಸ್ಟನ್ನಿನ ಗ್ರೂಪ್ ಥಿಯೇಟರ್ ಇದನ್ನು ಪ್ರದರ್ಶಿಸಿತು. ಇವನಿಗೆ ಅತ್ಯಂತ ಕೀರ್ತಿಯನ್ನು ತಂದುಕೊಟ್ಟ ನಾಟಕವೆಂದರೆ ದಿ ಗ್ಲಾಸ್ ಮೆನೆಜರಿ. ಇವನ ಕೆಲವು ಪ್ರಸಿದ್ದ ನಾಟಕಗಳಿವು : ಎ ಸ್ಟ್ರೀಟ್ ಕಾರ್ ನೇಮ್ಡ್ ಡಿಸೈರ್ (1947), ಸಮ್ಮರ್ ಅಂಡ್ ಸ್ಮೋಕ್ (1948), ದಿ ರೋಸ್ ಟ್ಯಾಟೂ (1951), ಕ್ಯಾಟ್ ಆನ್ ಎ ಹಾಟ್ ಟಿನ್ ರೂಫ್ (1955), ಸ್ವೀಟ್ ಬರ್ಡ್ ಆಫ್ ಯೂತ್ (1959), ನೈಟ್ ಆಫ್ ದಿ ಇಗುವಾನಾ (1962), ಸಡನ್ಲಿ ಲಾಸ್ಟ್ ಸಮ್ಮರ್ (1958), ಇನ್ ದಿ ಬಾರ್ ಆಫ್ ಎ ಟೋಕಿಯೊ ಹೋಟೆಲ್ (1969), ಟೆನೆಸ್ಸಿ ವಿಲಿಯಮ್ಸ್ ನಾಟಕೀಯ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ಶಕ್ತನಾದವನು. ಇವನ ನಾಟಕಗಳಲ್ಲಿ ಯುವ ಪಾತ್ರಗಳಿಗೆ ಮತ್ತು ಮಧ್ಯವಯಸ್ಸಿನ ಸ್ತ್ರೀ ಪಾತ್ರಗಳಿಗೆ ಅಭಿನಯದ ಅವಕಾಶಗಳು ಅಪರಿಮಿತವಾಗಿರುತ್ತವೆ. ಹಾಗಾಗಿ ಇವನ ನಾಟಕಗಳು ಬ್ರಾಡ್‍ವೇಯಲ್ಲೂ ಹಾಲಿವುಡ್‍ನಲ್ಲೂ ಚಲನಚಿತ್ರಗಳಾಗಿಯೂ ಹೆಚ್ಚು ಜನಪ್ರಿಯವಾದವು. ಎ ಸ್ಟ್ರೀಟ್ ಕಾರ್ ನೇಮ್ಡ್ ಡಿಸೈರ್ ಎಂಬ ನಾಟಕದಲ್ಲಿ ನಟಿಸಿದ್ದ ಮಾರ್ಲಾನ್‍ಬ್ರಾಂಡೊ ಎಂಬ ನಟ ಅನಂತರ ಹಾಲಿವುಡ್‍ನ ಸುಪ್ರಸಿದ್ಧ ಚಿತ್ರನಟನಾಗಿ ಖ್ಯಾತಿಗಳಿಸಿದ.
1864 - 1918 ರ ಅವಧಿಯಲ್ಲಿ ಬರುವ ಫ್ಯಾಂಕ್‍ವೆಡೆಕಿಂಡ್. ನಟ ಹಾಗೂ ನಾಟಕಕಾರನಾಗಿದ್ದವನು. ಹಾಪ್ಟ್‍ಮನ್‍ನ ವಾಸ್ತವವಾದ ಮತ್ತು ಮತ್ತು ಅಭಿವ್ಯಕ್ತಿವಾದಗಳೆರಡರ ಅಂಶಗಳನ್ನೂ ಇವನ ನಾಟಕಗಳು ಒಳಗೊಂಡಿವೆ. 1890 ರಲ್ಲಿ ಇವನ ದಿ ವಲ್ರ್ಡ್ ಆಫ್ ಯೂತ್ ನಾಟಕ ಪ್ರಕಟಗೊಂಡಿತು. ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಿಶೋರಿಯೊಬ್ಬಳ ಹಗಲುಗನಸುಗಳನ್ನು, ಅದರಲ್ಲೂ ಹದಿ ವಯಸ್ಸಿನ ಹುಡುಗಿಯರ ಮನಸ್ಸಿನಲ್ಲಿ ಬರಬಹುದಾದ ಕಾಮಪರವಾದ ಭಾವನೆಗಳನ್ನು ಇದು ಚಿತ್ರಿಸುತ್ತದೆ. ಈ ವಸ್ತುವೇ ಇವನ ಎಲ್ಲ ನಾಟಕಗಳ ಮೂಲವಾಯಿತು. ಅತೃಪ್ತಕಾಮ, ಅತಿರೇಕವಾಗಿ ಅದರಲ್ಲಿ ತೊಡಗುವಿಕೆ, ಸದಾ ಅದನ್ನೇ ಕುರಿತು ಆಲೋಚಿಸುವ ಅತಿರೇಕ ಮತ್ತು ವಿಪರೀತ ಸ್ಥಿತಿ ಇವುಗಳ ಅನ್ವೇಷಣೆ ಇವನ ನಾಟಕಗಳಲ್ಲಿ ಕಂಡಿಬರುತ್ತವೆ. ಸ್ಟ್ರಿಂಗ್ಸ್ ಅವೇಕನಿಂಗ್ ಎಂಬ ನಾಟಕ ಕೂಡ ಇದೇ ವಸ್ತುವನ್ನು ಇನ್ನೂ ಪ್ರತ್ಯಕ್ಷವಾಗಿ ವಿವರವಾಗಿ ಚಿತ್ರಿಸುತ್ತದೆ. 1963 ರಲ್ಲಿ ಈ ನಾಟಕವನ್ನು ಬ್ರಿಟನ್‍ನಲ್ಲಿ ಪ್ರದರ್ಶನ ಯೋಗ್ಯವಲ್ಲವೆಂದು ನಿಷೇಧಿಸಲಾಯಿತು. ಅನಂತರ ಇದರ ಕೆಲವು ಭಾಗಗಳನ್ನು ತೆಗೆದು ಹಾಕಿದ ಮೇಲೆ ಪ್ರದರ್ಶನಕ್ಕೆ ಅನುಮತಿ ನೀಡಲಾಯಿತು. ಪಾಂಡೊರಾಸ್ ಬಾಕ್ಸ್ 1903) ಮತ್ತು ಅರ್ತ್ ಸ್ಪಿರಿಟ್ (1895) ಈ ನಾಟಕಗಳಲ್ಲಿ ಲೂಲೂ ಎಂಬ ಹೆಸರಿನ ಒಬ್ಬಳು ಅತಿಕಾಮಿ ಹೆಂಗಸಿನ ಚಿತ್ರಣವಿದೆ. ಈ ನಾಟಕಗಳು ಆಲ್‍ಬನ್‍ಬರ್ಗ್‍ನ ಲೂಲೂ ಅಪೇರಾ ಆವೃತ್ತಿಯಲ್ಲಿ ಹೆಚ್ಚು ಜನಪ್ರಿಯವಾಗಿವೆ. ದಿ ಟೆನರ್ (1899) ಇವನ ಒಂದು ಮೂಕ್ಕೂಟ ನಾಟಕ. ಮ್ಯೂಸಿಕ್ (1907), ಕ್ಯಾಸಲ್ ವೆಟರ್‍ಸ್ಟೀನ್ - ಇವು ಇವನ ಎಕ್ಸ್‍ಪ್ರೆಷನಿಸ್ಟಿಕ್ ನಾಟಕಗಳಾಗಿವೆ. ಷೇಮ್ ಅಂಡ್ ಜೆಲಸಿ (1914), ಹಕ್ರ್ಯುಲಿಸ್ (1917) ಇದೆ ಪ್ರಕಾರದ ಇತರ ನಾಟಕಗಳು.
ಗೆರ್‍ಹಾರ್ಟ್ ಹಾಪ್ಟ್‍ಮನ್ (1862 - 1946) ಎಂಬಾತನನ್ನು ಇಬ್ಸೆನ್ ಮತ್ತು ಸ್ಟ್ರಿಂಡ್‍ಬರ್ಗ್‍ಗೆ ಸಮಾನವೆಂದು ಪರಿಗಣಿಸಲಾಗಿದೆ. ಇಬ್ಸೆನನ ಹಾಗೆಯೇ ಇವನು ಸೂಕ್ಷ್ಮ ಪರಿವೀಕ್ಷಣಾ ಸಾಮಥ್ರ್ಯವುಳ್ಳವನು. ಜರ್ಮನ್ ಉಪಭಾಷೆಗಳನ್ನು ನಾಟಕದಲ್ಲಿ ಬಳಸಿಕೊಳ್ಳುವುದರಲ್ಲಿ ಸಮರ್ಥ. ಇವನ ನಾಟಕಗಳಲ್ಲಿ ಜೀವನದ ವಸ್ತುನಿಷ್ಠ ನಿರೂಪಣೆಯನ್ನು ಕಾಣುತ್ತೇವೆ: ಸಾಮಾಜಿಕ ಸಮಸ್ಯೆಗಳನ್ನೂ ಇವನ ನಾಟಕಗಳು ಚಿತ್ರಿಸುತ್ತವೆ. ಅಲ್ಲದೆ ಜೀವನದ ಅರ್ಥವನ್ನು ತನ್ನ ನಾಟಕಗಳಲ್ಲಿ ಸಮರ್ಥವಾಗಿ ಅನ್ವೇಷಿಸುತ್ತಾನೆ. 1889 ರಲ್ಲಿ ಇವನ ಮೊದಲ ನಾಟಕ ಬಿಫೋರ್ ಸನ್‍ರೈಸ್ ಪ್ರಯೋಗಗೊಂಡಾಗ ಬುದ್ದಿಜೀವಿಗಳಲ್ಲಿ ಆಸಕ್ತಿ ಹುಟ್ಟಿತು. ಈ ನಾಟಕದಲ್ಲಿ ಒಂದು ಹಳ್ಳಿಯ ಪತನವನ್ನು ಚಿತ್ರಿಸಲಾಗಿದೆ. ಈತ ಅನಂತರ ದಿ ರಿಕನ್ಸಿಲಿಯೇಷನ್ (1890) ಮತ್ತು ಲೋನ್ಲಿಮೆನ್ (1891) ಎಂಬ ನಾಟಕಗಳನ್ನು ಬರೆದ. 1892 ರಲ್ಲಿ ದಿ ವೀವರ್ಸ್ ಎಂಬ ವೈಭವಯುತವಾದ ಐತಿಹಾಸಿಕ ನಾಟಕವನ್ನು ರಚಿಸಿದ. ಇದು ಸಿಲೆಸಿಯಾದ ನೇಕರರು 1844 ರಲ್ಲಿ ನಡೆಸಿದ ದಂಗೆಯನ್ನು ವಸ್ತುವಾಗುಳ್ಳ ನಾಟಕ. ಈ ನಾಟಕದಲ್ಲಿ ಯಾವೊಬ್ಬ ನಾಯಕನೂ ಇರದೇ ಇಡೀ ಸಮೂಹವೇ ನಾಯಕನೆನ್ನುವಂತೆ ಚಿತ್ರಣಗೊಂಡಿದೆ. ಆ ಕಾಲದಲ್ಲಿ ಜರ್ಮನ್ ರಂಗಭೂಮಿಯ ಮೇಲೆ ಈ ನಾಟಕ ಗಾಢ ಪ್ರಭಾವ ಬೀರಿತು. 1893 ರಲ್ಲಿ ದಿ ಬೀವರ್ ಕೋರ್ಟ್ ಎಂಬ ವಿಡಂಬನಾತ್ಮಕ ಹಾಸ್ಯ ನಾಟಕವನ್ನು ಬರೆದ. 1893 ರಲ್ಲಿ ಹ್ಯಾನ್ನೆಲೆ ಎಂಬ ಫ್ಯಾಂಟಿಸಿಯನ್ನು ಬರೆದ. ಈ ಸಂಕನ್ ಬೆಲ್ (1896) ಎಂಬ ಒಂದು ಸಾಂಕೇತಿಕ ನಾಟಕವನ್ನು ಪ್ರದರ್ಶಿಸಿದ. ಅನಂತರ ಈತ ತಾನು ಬರೆದ ನಾಟಕಗಳಲ್ಲಿ ನ್ಯಾಚುರಲಿಸಂ ಮತ್ತು ಸಿಂಬಲಿಸಂಗಳನ್ನು ಮಿಶ್ರ ಮಾಡಿ ರಚಿಸಿದ. 1894 ರಲ್ಲಿ ಬರೆದ ಫ್ಲೋರಿಯನ್ ಗೆಯರ್ ಎಂಬ ಐತಿಹಾಸಿಕ ನಾಟಕವನ್ನು 16 ನೆಯ ಶತಮಾನದ ರೈತವರ್ಗವನ್ನು ಕೇಂದ್ರ ವಸ್ತುವಾಗಿ ಮಾಡಿಕೊಂಡು ಆ ಕಾಲದ ಸಾಮಾಜಿಕ ಸ್ಥಿತಿಯನ್ನು ಸೃಷ್ಟಿಸಿದ. ಮೈಕೇಲ್ ಕ್ರೇಮರ್ (1900) ಎಂಬ ಒಂದು ವಾಸ್ತವವಾದಿ ನಾಟಕವನ್ನು ರಚಿಸಿದ. ಹೆನ್ರಿಕ್ (1902), ರೋಸ್ ಬನ್ರ್ಡ್ ಎಂಬ ನಾಟಕಗಳಲ್ಲಿ ವಿವಿಧ ಶೈಲಿಗಳನ್ನು ಮಿಶ್ರಣ ಮಾಡಿ ರಚಿಸಿದ. 1911 ರಲ್ಲಿ ದಿ ರ್ಯಾಟ್ಸ್ ಎಂಬ ಒಂದು ದುರಂತ ನಾಟಕವನ್ನು ರಚಿಸಿದ.
ಗ್ರೀಕ್ ದುರಂತ ನಾಟಕದ ಮೂಲ ಸಾವು, ಕೊಲೆ ಎಮದು ಹಾಪ್ಡ್‍ಮನ್ ಭಾವಿಸಿದ. ಇಲ್ಲಿ ದುಷ್ಟುರಿಂದ ಸಜ್ಜನರಿಗೆ ನೋವು, ಸಾವು ; ಕಡೆಯಲ್ಲಿ ದುರ್ಜನರಿಗೂ ನೋವು, ಸಾವು. ಇದು ಗ್ರೀಕ್ ಗಂಭೀರ ನಾಟಕದ ತಿರುಳು ಎಂದೂ ತಿಳಿದ. ಮೊದಲ ತನ ರೂಪಕಗಳಿಗೆ ಬಿಡೆಂಟ್ಲಿ ಎಂಬ ಅಂಕಿತವಿಡುತ್ತಿದ್ದ. ಆದರೆ 1907 ರಲ್ಲಿ ಗ್ರೀಸಿಗೆ ಭೇಟಿಕೊಟ್ಟ ಅನಂತರ ಬರೆದ ನಾಟಕಗಳಿಗೆ ಟ್ರ್ಯಾಜಿಡಿ ಎಂದೇ ಹೆಸರಿಟ್ಟ. ಹಾಪ್ಟ್‍ಮನ್‍ನ ಪ್ರಕಾರ ವ್ಯಕ್ತಿಯ ನೋವುಗಳಿಗೆ ಕರಣ ಬೇರೆಯವರ ಕೆಟ್ಟತನವಲ್ಲ, ವಿಧಿಯಲ್ಲ ; ಅದು ಅವನ ಸ್ವಭಾವದಲ್ಲೆ ಅಡಗಿರುವ ಗುಣಧರ್ಮ. ಈ ಧೋರಣೆಯನ್ನು ಇವನ ನಾಟಕಗಳು ಚಿತ್ರಿಸುತ್ತವೆ.
ಸಿಂಬಲಿಸ್ಟ್ ಚಳವಳಿಯ ಪ್ರಣಾಳಿಕೆ ಪ್ರಕಟವಾಗುವುದಕ್ಕೂ ಮುಂಚೆ ಪ್ಯಾರಿಸ್‍ನಲ್ಲಿ ಪೊಯಟಿಕ್ ಥಿಯೇಟರ್ ಅನ್ನು ಜೀವಂತವಾಗಿಡುವ ಪ್ರಯತ್ನವನ್ನು ಕೆಲವು ನಾಟಕಕಾರರು ಮಾಡಿದರು. ನವಿಕಾಂಪ್ಟೆ, ಹೆನ್ರಿ, ದಿ ಬೊರ್ನಿಯರ್, ಫ್ರೆಂಕಾಯಿಸ್ ಕೊಪ್ಪಿ ಮೊದಲಾದವರು ರೊಮ್ಯಾಂಟಿಕ್ ಐತಿಹಾಸಿಕ ನಾಟಕ ಪ್ರಕಾರಕ್ಕೆ ಹೊಸ ಆಯಾಮ ತಂದುಕೊಟ್ಟರು. ಕೊಪ್ಪಿ ಕೆವಲು ಏಕಾಂಕ ನಟಕಗಳನ್ನು ಬರೆದಿದ್ದಾನೆ. ದಿ ಪಾಸರ್‍ಬೈ, ದಿ ಲುಟಿಮೇಕರ್ ಆಫ್ ಕ್ರೊಮಿನಾ (18760, ದಿ ಟ್ರೆಷರ್ (1879) - ಈ ಏಕಾಂಕ ನಾಟಕಗಳಲ್ಲಿ ನಾಟಕಕಾರನ ನಾಟಕೀಯ ಪ್ರತಿಭೆ ಚೆನ್ನಾಗಿ ವ್ಯಕ್ತವಾಗಿದೆ.
ಎಡ್‍ಮಂಡ್ ರೋಸ್ಟಾಂಡ್ (1868 - 1918) ಕೂಡ ಈ ಅವಧಿಯ ಮುಖ್ಯ ನಾಟಕಕಾರ. ಇವನು ಫ್ರಾನ್ಸ್‍ನಲ್ಲಲ್ಲದೆ ಅಂತಾರಾಷ್ಟ್ರೀಯ ಕೀರ್ತಿಯನ್ನು ಪಡೆದ ನಾಟಕಕಾರ. ನಾಟಕ ರಚನೆಯಲ್ಲಿ ಇವನು ಅತ್ಯಂತ ಕುಶಲನಾಗಿದ್ದ. ಹೊಸದಾಗಿ ನಾಟಕಗಳನ್ನು ಬರೆಯತೊಡಗಿದವರಿಗೆ ಇವನ ನಾಟಕಗಳು ಮಾದರಿಗಳಾಗಿದ್ದವು. ಭಾಷೆಯ ಬಳಕೆಯಲ್ಲಿ ಇವನು ಎತ್ತಿದ ಕೈ. ಇವನ ನಾಟಕಗಳಲ್ಲಿ ರೊಮ್ಯಾಂಟಿಸಿಸಂನ ಶಕ್ತಿ ಮತ್ತು ನವ ರೊಮ್ಯಾಂಟಿಸಿಸಂನ ಸೂಕ್ಷ್ಮತೆ, ವ್ಯಕ್ತಿಗಳ ಅಂತರಂಗ ಪರಿವೀಕ್ಷಣೆಗಳು ಸೂಕ್ತವಾಗಿ ಸಮ್ಮಿಲನಗೊಂಡಿರುತ್ತವೆ. ಇವನ ಮೊದಲ ನಾಟಕ ದಿ ರೊಮಾನ್ಸರ್ಸ್ (1894) ಭಾವಗೀತಾತ್ಮಕತೆಯುಳ್ಳ ಒಮದು ಸುಂದರ ನಾಟಕ. ಅನಂತರ ದಿ ಫಾರವೇ ಪ್ರಿನ್ಸಸ್ (1895) ಎಂಬ ನಾಟಕವನ್ನು ಬರೆದ. ಇದರಲ್ಲಿ ನವರೋಮ್ಯಾಂಟಿಕ್ ಚಳವಳಿಯ ಮಧ್ಯಯುಗೀನ ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಈ ಮಧ್ಯಯುಗೀನ ವಸ್ತುಗಳಿಗೆ, ಈ ನವರೊಮ್ಯಾಂಟಿಕರು ಕ್ರಿಸ್ತನ ಜೀವನದ ಅಂಶಗಳನ್ನೂ ಸೇರಿಸಿ ಕೃತಿಗಳನ್ನು ರಚಿಸುತ್ತಿದ್ದರು. ರೀಸ್ಟಾಂಡ್ ತನ್ನ ದಿ ವುಮೆನ್ ಆಫ್ ಸಮೇರಿಯ (1897) ನಾಟಕದಲ್ಲಿ ರುಡೆಲ್‍ಳ ಆದರ್ಶ ಪ್ರೇಮವನ್ನು ದಿವ್ಯ ಪ್ರೇಮವನ್ನಾಗಿ ಚಿತ್ರಿಸಿದ್ದಾನೆ. ಸಿರ್ಯಾನೊ ಡಿ ಬರ್ಗೆರಾಕ್ (1897) ಎಂಬ ನಾಟಕದಲ್ಲಿ ತನ್ನ ಹಿಂದಿನ ವಿಧಾನಗಳನ್ನು ಬಿಟ್ಟು 17 ನೆಯ ಶತಮಾನದ ಫ್ರಾನ್ಸ್‍ನ ಜನಜೀವನವನ್ನು ಅಧ್ಯಯನ ಮಾಡಿ ಅದರ ಚಿತ್ರಣದ ಹಿನ್ನೆಲೆಯಲ್ಲಿ ಸಿರ್ಯಾನೊನ ವ್ಯಕ್ತಿತ್ವವನ್ನು ಐತಿಹಾಸಿಕ ವಾಸ್ತವಿಕತೆಯೊಂದಿಗೆ ಚಿತ್ರಿಸಿದ್ದಾನೆ. ವಾಸ್ತವಿಕವಾದದ್ದು ಮತ್ತು ಕೃತಕವಾದದ್ದು ಇವುಗಳ ವೈಷಮ್ಯವನ್ನು ಈ ನಾಟಕ ತೀವ್ರವಾಗಿ ಚಿತ್ರಿಸುತ್ತದೆ. ದಿ ವುಮೆನ್ ಆಫ್ ಸಮೇರಿಯದ ವಸ್ತು ನಾಟಕಕಾರನ ಕಲ್ಪನೆಯಿಂದ ಹುಟ್ಟಿದ್ದು. ಇದರಲ್ಲಿ ಒಂದು ಗಟ್ಟಿಮುಟ್ಟಾದ ಕ್ರಿಯೆಯಿಲ್ಲ. ಆದರೆ ಸಿರ್ಯಾನೊ ನಾಟಕದ ವಸ್ತು ಐತಿಹಾಸಿಕವಾದದ್ದು. ಇದರಲ್ಲಿ ಚಿತ್ರಣಗೊಳ್ಳುವ ಸಿರ್ಯಾನೊ ಮತ್ತು ಅವನ ಅನುಯಾಯಿಗಳು ರಕ್ತಮಾಂಸಗಳಿಂದ ತುಂಬಿರುವ ಜೀವಂತ ವ್ಯಕ್ತಿಗಳಂತೆ ಚಿತ್ರಣಗೊಳ್ಳುತ್ತಾರೆ. ರೋಕ್ಸ್ಯಾನಳ ಬಗೆಗಿನ ಸಿರ್ಯಾನೊನ ಪ್ರೇಮ ಅವಳಿಗೆ ತಿಳಿಯದೆ, ಅವನಲ್ಲಿಯೇ ಉಳಿದು ಕೊನೆಗೆ ಅವನು ಸಾಯುವ ಸಂದರ್ಭ ದುರಂತಮಯವಾಗಿದೆ. ಇವನ ಇನ್ನೊಂದು ನಾಟಕ ಲ ಎಗ್ಲಾನ್ (1900). ಇದರಲ್ಲಿ ನೇಪೋಲಿಯನ್ನನ ಮಗ ಮತ್ತೆ ನೆಪೋಲಿಯನ್ನನ ಸಾಮ್ರಾಜ್ಯವನ್ನು ಕಟ್ಟುವ ಪ್ರಯತ್ನದಲ್ಲಿ ನೆಪೋಲಿಯನ್ನನಲ್ಲಿದ್ದ ಮನಸ್ಥೈರ್ಯವಾಗಲಿ, ಸಂಕಲ್ಪ ಶಕ್ತಿಯಾಗಲಿ ಇಲ್ಲದ ಅವನು ನಿಶ್ಚಿತ ಕಾರ್ಯವನ್ನು ಸಾಧಿಸುವಲ್ಲಿ ವಿಫಲನಾಗುತ್ತಾನೆ. ಈ ಕೃತಿ ನಾಟಕವಾಗಿ ಯಶಸ್ವಿಯಾಗಲಿಲ್ಲ. ಆದರೆ ಈತ 1910 ರಲ್ಲಿ ಬರೆದ ಚಾಂಟೆಕ್ಲೇರ್ಮತ್ತು 1921 ರಲ್ಲಿ ಬರೆದ ಡಾನ್ ಜುಅನ್ಸ್ ಲಾಸ್ಟ್ನೈಟ್ ನಾಟಕಗಳಲ್ಲಿ ಮತ್ತೆ ಇವನ ಪ್ರತಿಭೆ ಉನ್ನತ ಮಟ್ಟದ್ದಾಗಿ ಕಂಡುಬರುತ್ತದೆ. ನಾಟಕ ರಚನಾ ವಿನ್ಯಾಸದಲ್ಲಿ ಮತ್ತು ಪ್ರತಿಯೊಂದು ದೃಶ್ಯವನ್ನು ಸೂಕ್ತವಾಗಿ ಯೋಚಿಸುವಲ್ಲಿ ರೋಸ್ಟಾಂಡನ ಕುಶಲತೆ ವ್ಯಕ್ತವಾಗಿದೆ. ಇವನ ನಾಟಕಗಳಲ್ಲಿನ ಬೆಡಗು, ವಿಡಂಬನೆ ಮತ್ತು ವ್ಯಂಗ್ಯ ಇವುಗಳ ಜತೆಗಿನ ರೊಮ್ಯಾಂಟಿಕ್ ಧೋರಣೆ ಫ್ರೆಂಚ್ ರಂಗಭೂಮಿಯಲ್ಲಿ ಇವನಿಗೆ ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಮಾರಿಸ್ ಮ್ಯಾಟರ್‍ಲಿಂಕ್ (1862 - 1949) ಆರಂಭದಲ್ಲಿ ಸಿಂಬಲಿಸ್ಟ್ ಸ್ಕೂಲ್‍ಗೆ ಸೇರಿದ ಕವಿಯಾಗಿ ಪ್ರಸಿದ್ಧನಾಗಿದ್ದ. ಅನಂತರ ಕಾವ್ಯತ್ವವನ್ನು ನಾಟಕವಾಗಿಸುವ ಕ್ರಿಯೆಯಲ್ಲಿ ತೊಡಗಿ ಹಲವಾರು ನಾಟಕಗಳನ್ನು ಬರೆದ. ಇವುಗಳನ್ನೇ ಸಿಂಬಲಿಸ್ಟ್ ನಾಟಕಗಳೆಂದು ಕರೆಯಲಾಗುತ್ತದೆ. ಮೂಲತಃ ಬೆಲ್ಜಿಯಮ್‍ನವನಾದ ಮ್ಯಟರ್ ಲಿಂಕ್ ಫ್ರೆಂಚ್ ಭಾಷೆಯಲ್ಲಿ ನಾಟಕಗಳನ್ನು ರಚಿಸಿದ. ಇವನ ಮೊದಲ ನಾಟಕ ದಿ ಪ್ರಿನ್ಸಸ್ ಮ್ಯಾಲೀನ್ 1889 ರಲ್ಲಿ ಹೊರಬಂತು. ದಿ ಇನ್‍ಟ್ರೂಡರ್ (1890), ದಿ ಬ್ಲೈಂಡ್ (1890), ಪೆಲಿಯಾಸ್ ಎಟ್ ಮೆಲಿಸ್ಯಾಂಡೆ (1892) - ಈ ಮೊದಲಾದ ನಾಟಕಗಳು ಸಿಂಬಲಿಸ್ಟ್ ಪರಂಪರೆಗೆ ಸೇರಿದವುಗಳಾಗಿವೆ. ಮೊನ್ನಮೊನ್ನ (1902) ಎಂಬುದು ಇವನ ಪ್ರಸಿದ್ಧ ನಾಟಕ. ಈ ನಾಟಕ ಮತ್ತು ದಿ ಬ್ಲೂ ಬರ್ಡ್ (1908) ನಾಟಕಗಳಲ್ಲಿ ಸಾಂಕೇತಿಕತೆಯನ್ನು ಯಶಸ್ವಿಯಾಗಿ ಬಳಸಿಕೊಂಡ. ಬ್ಲೂಬರ್ಡ್ ನಾಟಕವನ್ನು ಸ್ಟ್ಯಾನ್ಸ್‍ಲಾವ್‍ಸ್ಕಿ ಮಾಸ್ಕೊ ಆರ್ಟ್ ಥಿಯೇಟರ್‍ನಲ್ಲಿ ಪ್ರಯೋಗಿಸಿದ ಮೇಲೆ ಅದಲ್ಲೆ ಹೆಚ್ಚಿನ ಪ್ರಸಿದ್ಧಿ ದೊರೆಯಿತು. ಅನಂತರವೂ ಈತ ಹಲವಾರು ನಾಟಕಗಳನ್ನು ರಚಿಸಿದ. ಆದರೆ ಈ ನಾಟಕಗಳಾವುವೂ ಅಷ್ಟು ಯಶಸ್ವಿಯಾಗಲಿಲ್ಲ. ದಿ ಬಿಟ್ರೋತಲ್ (1918) ನಾಟಕದಲ್ಲಿ ತನ್ನ ಹಿಂದಿನ ನಾಟಕಗಳಲ್ಲಿನ ಫ್ಯಾಂಟಸಿಯ ಅಂಶವನ್ನು ಮುಂದುವರಿಸಿದ. ಇವನು ತನ್ನ ನಾಟಕಗಳಲ್ಲಿ ಸಂಕೇತಗಳನ್ನು ಬಳಸಿ ಮನಸ್ಸಿನ ಒಳಪದರಗಳನ್ನು ಚಿತ್ರಿಸುವ ಪ್ರಯತ್ನ ಮಾಡುತ್ತಾನೆ. ಸಾವು ಮತ್ತು ಅತೀಂದ್ರಿಯತೆ ಇವನ ನಾಟಕಗಳ ಮುಖ್ಯ ವಸ್ತುಗಳು. ಮನುಷ್ಯನ ಸುಪ್ತಚೇತನದಲ್ಲಿನ ಗಂಭೀರತೆಯನ್ನು ನಾಟಕಗಳಲ್ಲಿ ಚಿತ್ರಿಸುವುದಲ್ಲಿ ಇವನು ಅತ್ಯಂತ ಸಮರ್ಥ. ರೋಸ್ಟಾಂಡ್ ಮತ್ತು ಮ್ಯಾಟರ್‍ಲಿಂಕರ ಅನಂತರ ಪ್ಯಾರಿಸ್ ರಂಗಭೂಮಿಗೆ ಮಹತ್ತ್ವಪೂರ್ಣ ಕೊಡುಗೆಗಳನ್ನು ನೀಡಿದವರು ಕಂಡುಬರುವುದಿಲ್ಲ.
ಜಾರ್ಜ್ ಬರ್ನಾರ್ಡ್ ಷಾ (1856-1950) ಆಂಗ್ಲೋ ಐರಿಷ್ ನಾಟಕಕಾರನಾಗಿ ಪ್ರಸಿದ್ದನಾಗಿದ್ದಾನೆ. ಮೊದಲಿಗೆ ಇವನು ಫೆಬಿಯುನ್ ಸೊಸೂಟಿಗಾಗಿ ವಿವಿಧ ವಿಷಯಗಳ ಮೇಲೆ ಭಾಷಣಗಳನ್ನು ಮಾಡುತ್ತಿದ್ದ 1880ರ ಆದಿಭಾಗದಲ್ಲಿ ಪಾಲ್ ಮಾಲ್ ಗೆಜೆಟ್‍ಗಾಗಿ ಅನೇಕ ವಿಮರ್ಶೆಗಳನ್ನು ಬರೆದ. ವಲ್ರ್ಡ ಎಂಬ ಪತ್ರಿಕೆಗಾಗಿ ವರ್ಣಚಿತ್ರಕಲೆಯನ್ನು ಕುರಿತ ವಿಮರ್ಶೆಗಳನ್ನು ಬರೆದ. ಸ್ಮಾರ್ ಎಂಬ ಪತ್ರಿಕೆಗಾಗಿ ಸಂಗೀತದ ಬಗೆಗೂ ವಿಮರ್ಶೆಗಳನ್ನು ಬರೆದ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಗೀತದ ಬಗೆಗೂ ವಿಮರ್ಶೆಗಳನ್ನು ಬರೆಯುವ ಸಂರ್ಭದಲ್ಲಿ ನಾಟಕ ಪ್ರಕಾರ ಮತ್ತು ರಂಗದ ಬಗೆಗೆ ತನ್ನದೇ ಆದ ಸಿದ್ದಾಂತಗಳನ್ನು ರೂಪಿಸಿದ ಇಬ್ಸೆನ್‍ನನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಇವನು ವಾಸ್ತನಿಕವಾಗಿ ವಿಡಂನಾತ್ಮಕ ನಾಟಕ ಪ್ರಕಾರಕ್ಕೆ ಹೆಚ್ಚು ಒತ್ತುಕೊಟ್ಟು ತನ್ನ ಸಿದ್ದಾಂತಗಳನ್ನು ರೂಪಿಸಿದ ಇವನ ಮೊದಲ ನಾಟಕ ವಡೋಯರ್ಸ ಹೌಸಸ್. ಇದು 1885ರಲ್ಲಿ ರಚನೆಗೊಂಡು 1892ರಲ್ಲಿ ರಂಗದ ಮೇಲೆ ಪ್ರಯೋಗಗೊಂಡು ಅತ್ಯಂತ ಯಶಸ್ವಿಯಾಯಿತು. ಅಂದಿನಿಂದ ಇವನು ತನ್ನ ಕೊನೆಯ ನಾಟಕವನ್ನು ಬರೆಯುವವರೆಗಿನ ರಂಗ ಭೂಮಿಯ ಅವಧಿಯನ್ನು ಬರ್ನಾರ್ಡ್ ಷಾ ಯುಗವೆಂದು ಕರೆಯುವಷ್ಟರಮಟ್ಟಿಗೆ ಬ್ರಿಟಿಷ್ ರಂಗಭೂಮಿಯ ಮೇಲೆ ಇವನ ಗಾಢ ಪ್ರಭಾವವಿದೆ. ಮಾಸ್ಟರ್ ಆಫ್ ಪರ್ಷಸ್‍ಫುಲ್ ಲಾಪ್ಟಲ್ ಎಂದು ವಿಮರ್ಶಕರಿಂದ ಕರೆಯಿಸಿಕೊಂಡ ಇವನ ನಾಟಕಗಳು ಉದ್ದೇಶರಹಿತ ನಗೆ ಅಥವಾ ಹಾಸ್ಯವನ್ನು ಉಳ್ಳವಲ್ಲ. ಆ ನಗೆಯ ಹಿಂದೆ ಒಂದು ಸ್ಪಷ್ಟವಾದ ಉದ್ದೇಶವಿರುತ್ತದೆ. ನ್ಯಾಚುರಲಿಸ್ಟಿಕ್ ಡ್ರಾಮ ಮತ್ತು ನಿಯೋ ರೊಮ್ಯಾಂಟಿಕ್ ನಾಟಕಗಳಲ್ಲಿ ನಡುನಡುವೆ ಕೆಲವು ಹಾಸ್ಯಪ್ರಸಂಗಗಳು ಬರುತ್ತಿದ್ದುದುಂಟು. ಆದರೆ ಈ ಹಾಸ್ಯ ಪ್ರವೃತ್ತಿ ಮುಂದೆ ಕೇವಲ ಭ್ರಮಾ ಲೋಕವಾಗಿ ಪರಿಣಮಿಸಿದ್ದನ್ನು ಹಲವಾರು ನಾಟಕಗಳಲ್ಲಿ ಕಾಣುತ್ತೇವೆ. ಆದರೆ ಈ ಕಾಲದ ಹಲವಾರು ನಾಟಕಗಳಲ್ಲಿ ಮತ್ತು ಆಪೆರಾಗಳಲ್ಲಿ ಹಾಸ್ಯ ಹಾಸ್ಯಕ್ಕಾಗಿ ಬರುವುದುಂಟು. ಕಲೆಗಾಗಿ ಕಲೆ ಎಂಬ ಸಿದ್ದಾಂತವನ್ನು ಪ್ರತಿಪಾದಿಸಿದ ಆಸ್ಕರ್ ವೈಲ್ಡ ತನ್ನ ಕೆಲವು ನಾಟಕಗಳಲ್ಲಿ ಸಾಮಾಜಿಕ ವಸ್ತುವಿನೊಂದಿಗೆ ತೀರ ವಿಡಂಬನಾತ್ಮಕ ಭಾಷೆಯನ್ನು ಬಳಸುತ್ತಾರೆ. ಇಲ್ಲೆಲ್ಲ ಸಾಮಾಜಿಕ ಸಮಸ್ಯೆಯನ್ನು ಗಂಭೀರ ಉದ್ದೇಶಗಳನ್ನಿಟ್ಟುಕೊಂಡು ಚಿತ್ರಿಸದೆ ಒಂದು ರೀತಿಯಲ್ಲಿ ಲಘುವಾಗಿ ಚಿತ್ರಿಸಲಾಗಿದೆ.
ಬರ್ನಾರ್ಡ್ ಷಾ ತನ್ನ ನಾಟಕಗಳಲ್ಲಿ ಸಮಾಜದ ಎಲ್ಲ ಸಮಸ್ಯೆಗಳನ್ನು ಕುರಿತು ಗಾಢವಾದ ಒಳನೋಟಗಳೊಂದಿಗೆ ಬರೆದ. ಇವನ ಎರಡನೆಯ ನಾಟಕ ಆರಮ್ಸ್ ಆಂಡ್ ದಿ ಮಾನ್ಯನ್ (1894) ನೀತಿಯೊಂದನ್ನು ನಾಟಕೀಯವಾಗಿ ಪ್ರತಿಪಾದಿಸುತ್ತದೆ. ಇವನು ತನ್ನ ಪ್ರತಿಯೊಂದು ನಾಟಕಕ್ಕೂ ನಾಟಕಕ್ಕಿಂತ ದೀರ್ಘವಾದ ಉಪೋದ್ಘಾತವನ್ನು ಬರೆದಿದ್ದಾರೆ. ಆ ಮುನ್ನುಡಿಗಳಲ್ಲಿ ಆಯಾ ನಾಟಕದ ವಸ್ತು ಸಂವಿಧಾನ ವಿಷಯ ಮತ್ತು ನಾಟಕದ ಪ್ರಯೋಗದ ವಿಧಾನ ಇತ್ಯಾದಿಗಳನ್ನು ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾನೆ. ಅದರಲ್ಲೂ ಮುಖ್ಯವಾಗಿ ನಾಟಕದಲ್ಲಿ ಷಾ ಸಮಾಜ ಮತ್ತು ರಾಜಕೀಯವನ್ನು ಕುರಿತ ತನ್ನ ಆಲೋಚನೆಗಳನ್ನು ವಿಶ್ಲೇಷಿಸಿದ್ದಾರೆ. ಸಾಮಾಜಿಕ ರಾಜಕೀಯ ಇತ್ಯಾದಿಗಳನ್ನು ಕುರಿತಂತೆ ತನ್ನ ಅಭಿಪ್ರಾಯಗಳನ್ನು ಆಲೋಚನೆಗಳನ್ನು ಪ್ರತಿಪಾದಿಸಲು ಈತ ನಾಟಕಗಳನ್ನು ಬಳಸಿಕೊಳ್ಳುತ್ತಾನೆ ಎಂದು ಇವನ ನಾಟಕಗಳ ಬಗೆಗೆ ಒಂದು ಮುಖ್ಯವಾದ ಆರೋಪ. ಹೀಗಾಗಿ ಪಾತ್ರಗಳು ವಿಚಾರಗಳ ಮುಖವಾಡಗಳಾಗುತ್ತದೆ. ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯವೂ ಇದೆ. ನಾನೊಬ್ಬ ವಿಚಾರಗಳ ಪ್ರಚಾರಕನೇ ಹೊರತು ನಾಟಕಕಾರವಲ್ಲ ಎಂಬುದು ತಿಳಿಯುತ್ತದೆ. ಇವನ ನಾಟಕಗಳ ಪಾತ್ರಗಳು ಒಂದೊಂದು ವಿಚಾರದ ಪ್ರತೀಕಗಳಂತೆ ರಚೆನಗೊಂಡಿವೆ. ಎನಿಸುತ್ತಿದ್ದಂತೆಯೇ ಅವು ಅತ್ಯಂತ ಶಕ್ತವಾದ ವೈಯಕ್ತಿಕ ಬದ್ದತೆಯುಳ್ಳ ಪಾತ್ರಗಳಂತೆ ಜೀವಂತಗೊಳ್ಳುತ್ತದೆ. ಹೀಗೆ ವಿಚಾರಗಳನ್ನು ನಾಟ್ಯೇಕರಿಸುವ ಮತ್ತೊಬ್ಬ ನಾಟಕಕಾರ ಬ್ರಿಟಿಷ್ ರಂಗಭೂಮಿಯಲ್ಲಾಗಲಿ ಅಥವಾ ಜಾಗತಿಕ ರಂಗಭೂಮಿಯಲ್ಲಾಗಲಿ ಸಿಕ್ಕುವುದಿಲ್ಲ. ಷಾನ ವ್ಯಕ್ತಿತ್ವದಲ್ಲಿ ಸಹಜವಾಗಿ ಅಂರ್ಗತವಾಗಿರುವ ಬುದ್ದಿವಂತಿಕೆ ಸಾಮಾಜಿಕ ಕೆಡುಕುಗಳ ಬಗೆಗಿನ ವಿರೋಧ ಹಾಸ್ಯವ್ಯಂಗ್ಯದಿಂದ ಕೂಡಿದ ದೃಷ್ಟಿಕೋನ- ಇವನ ನಾಟಕಗಳಲ್ಲಿ ಸಹಜವಾಗಿ ಅಭಿವ್ಯಕ್ತಿ ಪಡೆಯುತ್ತದೆ. ಫ್ರೆಂಚ್ ನಾಟಕಕಾರನಾದ ಬ್ರ್ಯೂನ ನಾಟಕಗಳೊಂದಿಗೆ ಷಾನ ನಾಟಕಗಳನ್ನು ಹೋಲಿಸಲಾಗುತ್ತಿದೆ. ಬ್ರ್ಯೂನನ್ನು ಷಾ ಮೆಚ್ಚಿಕೊಂಡಿದ್ದರೂ ಇಬ್ಬರ ನಡುವೆ ಬಹಳ ವ್ಯತ್ಯಾಸಗಳಿವೆ. ಬ್ರ್ಯೂ ನಾಟಕ ಪ್ರಕಾರವನ್ನು ಕೇವಲ ಪ್ರಚಾರ ಮಾಧ್ಯಮವಾಗಿ ಬಳಸಿಕೊಳ್ಳುತ್ತಾರೆ. ಆದರೆ ಷಾನ ನಾಟಕಗಳಲ್ಲಿ ವಿಚಾರಗಳ ಪ್ರಚಾರವೇ ಪ್ರಧಾನವಾಗಿದ್ದರೂ ಅದು ನಾಟಕದ ಸಂದರ್ಭದಲ್ಲಿ ಮೂಡಿಬಂದಂತೆ ಚಿತ್ರಣಗೊಳ್ಳುತ್ತದೆ. ಹೀಗಾಗಿ ಇವನ ಥಿಯೇಟರ್ ಆಫ್ ದಿ ಐಡಿಯಾಸ್ (ವಿಚಾರಗಳ ರಂಗಭೂಮಿ) ಥೀಯೆಟರ್ ಕೂಡ ಆಗಿದೆ.
ಷಾ ಒಬ್ಬ ಸಮರ್ಥ ನಾಟಕಾರ. ಒಂದು ವಿಚಾರ ತಲೆ ಎತ್ತುತ್ತಿರುವಂತೆಯೇ ಷಾನ ನಾಟಕೀಯ ಪ್ರತಿಭೇಯ ಮೂಸೆಯಲ್ಲಿ ಅದು ಬೆಂದು ಸೂಕ್ಷ್ಮವಾದ ನಾಟಕೀಯ ಪರಿಣಾಮವನ್ನು ಕೊಡುವಂತಹ ವಿಷಯವಾಗಿಬಿಡುತ್ತದೆ. ಷಾನ ಈ ಬಗೆಯ ವಿಶೇಷ ಶಕ್ತಿ ಇವನ ಯಶಸ್ವಿ ನಾಟಕಗಳಲ್ಲಿ ವ್ಯಕ್ತವಾಗುತ್ತದೆ. ಉದಾಹರಣೆಗೆ ಆ್ಯಂಡ್ರೋಕ್ಲಿಸ್ ಅಂಡ್ ದಿ ಲಯನ್ (1913) ಎಂಬ ನಾಟಕದಲ್ಲಿ ಪೇಗನಿಸು ಕ್ರಿಶ್ಚಿಯನ್ ಮೌಲ್ಯವಾದ ವಧಶೇಯತೆ ನೈತಿಕ ಹಾಗೂ ಧಾರ್ಮಿಕ ಶ್ರದ್ದೆಗೆ ದೃಢಕಾಯ ಸಹಕಾರಿ ಎಂಬುದನ್ನು ಒತ್ತಿಹೇಳುವ ಮಸ್ಕ್ಯಲರ್ ಕ್ರಿಶ್ಚಿಯಾನಿಟಿ-(ಈ ಮೂರು ಅಂಶಗಳನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ ಒಂದರ ಪರವಾದ ಸಮರ್ಧನೆಯನ್ನು ಓದುತ್ತಿರುವಾಗ ಅದೇ ಸರಿ ಸತ್ಯ ಎನಿಸುತ್ತದೆ. ಇಲ್ಲಿ ಷಾ ಒಂದೊಂದು ಷಾ ಒಂದೊಂದು ಪಾತ್ರವನ್ನು ಒಂದೊಂದು ದೃಷ್ಟಿಕೋನದ ಮುಖವಾಣಿಯನ್ನಾಗಿ ಮಾಡಿಕೊಂಡಿದ್ದಾನೆವೆಸಿದರೂ ಆ ಪಾತ್ರಗಳು ಅತ್ಯಂತ ಶಕ್ತಿಯುತವಾದ ವ್ಯಕ್ತಿಗಳಾಗಿ ಚಿತ್ರಣಗೊಳ್ಳುತ್ತಾರೆ. ಸೇಂಟ್ ಜೋನ್ (1923) ನಾಟಕದಲ್ಲಿ ಬರುವ ಪಾತ್ರಗಳು ಮಾದರಿಗಳಂತಿದ್ದರೂ ನಂಬಿಕೆಗಳ, ಧಾರ್ಮಿಕತೆಯ ವ್ಯಕ್ತಿಕರಣಗಳಾಗಿವೆ. ಜೋನಗಳನ್ನು ಮರಕ್ಕೆ ಕಟ್ಟಿ ಸುಡುವುದರೊಂದಿಗೆ ಈ ನಾಟಕ ಅಂತ್ಯವಾದರೂ ಇದನ್ನು ಒಂದು ದುರಂತನಾಟಕವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಇನ್‍ಕ್ವಿಸಿಟರ್‍ನ ನ್ಯಾಯಾಲಯದಲ್ಲಿ ಜೋನಳ ವಿಚಾರಣೆ ನಡೆಯುತ್ತದೆ ಎನಿಸುತ್ತದೆ. ಷಾನ ನಾಟಕಗಳಲ್ಲಿ ಬರುವ ಪಾತ್ರಗಳು ಒಂದು ವಿಚಾರದ ಮುಖವಾಡಗಳಾಗಿರದೆ ವಿಚಾರ ಮತ್ತು ಮುಖವಾಡ ಎರಡೂ ಒಂದೇ ಆಗಿರುತ್ತದೆ. ಸೇಂಟ್ ಜೋನ್ ನಾಟಕದಲ್ಲಿ ನಾಟಕಕಾರನಾದ ಷಾನ ಶಕ್ತಿ ಸಾಮಥ್ರ್ಯಗಳೆಲ್ಲ ಗರಿಷ್ಠ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ. 1895ರಲ್ಲಿ ಬರೆದ ಕ್ಯಾಂಡಿಡ ಎಂಬ ನಾಟಕವನ್ನು ಕಾಮಿಡಿ ಆಫ್ ಫನ್ ವರ್ಗಕ್ಕೆ ಸೇರಿಸಲಾಗುತ್ತದೆ. ಈ ನಾಟಕವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬರೆಯಲಾಗಿದೆ. ಇವನ ಮತ್ತೊಂದು ನಾಟಕ ಡೆವಿಲ್ಸ್ ಡಿಸೈಪಲ್ (1897) ಇದು ಜೆಕಾಫನ ನಾಟಕಗಳನ್ನು ನೆನಪಿಗೆ ತರುತ್ತದೆ. ಇದರಲ್ಲಿ ಷಾನ ನಾಟಕಗಳಲ್ಲಿ ಸಹಜವಾಗಿ ಕಂಡು ಬರುವ ಅಂಶಗಳ ಜೊತೆಗೆ ಮೌಲಿಕವಾಗಿ ಯಾವುದೇ ಒಂದು ಅಂಶ ಕಳೆದು ಹೋಗುತ್ತಿರುವುದರ ಬಗ್ಗೆ ಕಳಕಳಿ, ಅದರ ಬಗೆಗಿನ ನಿಸ್ಸಹಾಯಕತೆ ಚಿತ್ರಣ ಗೊಳ್ಳುತ್ತದೆ. ಪಾತ್ರಗಳು ಜೀವಂತವಾದ್ದು ಓದುಗಿನ ಅಂತರಂಗವನ್ನು ತೂಗಿಬಿಡುತ್ತದೆ. ಇವನ ಬ್ಯಾಕ್ ಟು ಮೇಥುಸೆಲ (1922) ನಾಟಕ ಮಹತ್ತ್ಯಾಕಾಂಕ್ಷೆಯ ನಾಟಕ. ವೈಶಾಲ್ಯದಲ್ಲಿ ಗಯಟೆಯ ಫೌಸ್ಟಗೆ ಸಮಾನವಾದದ್ದು ಮತ್ತು ತಾಮಸ್ ಹಾರ್ಡಿಯ ದಿ ಡೈನಾಸ್ಟ್ಸಗೆ ಸಮಾನವಾಗಿದದ್ದು. ಈಡನ್ ಆಪ್ ಗಾರ್ಡನ್‍ನಲ್ಲಿನ ಆದಮ್ ಮತ್ತು ಈವ್‍ದಿಂದ ಆರಂಭವಾದ ಮಾನವನ ಇತಿಹಾಸ ವರ್ತಮಾನವನ್ನೂ ಮಿರಿ ಭವಿಷ್ಯತ್ತಿನಾಚೆಗೆ ಕೈ ಚಾಚುವ ಪರಿಕಲ್ಪನೆ ಪಂಚ ನಾಟಕಚಕ್ರದಲ್ಲಿ ಒಡಮೂಡಿ ಬರುತ್ತದೆ. ಇವುಗಳಲ್ಲದೆ ಟೂ ಟ್ರೂ ಟುಬಿ ಗುಡ್ (1932) ಆನ್ ದಿ ರಾಕ್ಸ್ (1933). ದಿ ಸಿಂಪಲ್‍ಟನ್ ಆಫ್ ದಿ ಅನೆಕ್ಸಪೆಕ್ಟೆಡ್ ಐಸಲ್ಸ್ (1935) ದಿ ಮಿಲಿಯನೆರೆಸ್ (1936), ಜಿನೀವ (1938), ಗುಡ್‍ಕಿಂಗ್ ಚಾಲ್ರ್ಸ್ ಗೋಲ್ಡನ್‍ಡೆಸ್ ಇವು ಇವನ ಇತರ ನಾಟಕಗಳು, ಆದರೆ ಇವನು ತನ್ನ ಕೊನೆಗಾಲದಲ್ಲಿ ಬರೆದ ನಾಟಕಗಳು ಶ್ರೇಷ್ಠನಾಟಕಗಳ ಗುಂಪಿಗೆ ಸೇರಲಾರವು ಎಂಬುದು ವಿಮರ್ಶಕರ ಅಭಿಪ್ರಾಯ.
20ರಿಂದ 40ರ ದಶಕದ ಈ ಅವಧಿಯಲ್ಲಿ ಆಧುನಿಕ ನಾಟಕ ಭಿನ್ನಸ್ವರೂಪವನ್ನು ಪಡೆದುಕೊಳ್ಳತೊಡಗಿತು. ಈ ಅವಧಿಯಲ್ಲಿಯೇ ಎಪಿಕ್ ಮತ್ತು ಅಬ್ಸರ್ಡ ಥಿಯೇಟರ್‍ಗಳು ಪ್ರಚುರ್ಯಕ್ಕೆ ಬಂದವು ವಾಸ್ತಕವವಾದಿ ವಿಡಂಬನ ನಾಟಕ ತನ್ನ ಪ್ರಾಮುಖ್ಯವನ್ನು ಕಳೆದುಕೊಳ್ಳದತಕೊಡಗಿತ್ತು. ರಷ್ಯನ್ ಲೇಖಕ ಮ್ಯಾಕ್ಸಿಂಗರ್ಕಿ (1868-1936) ಕಾರ್ಮಿಕ ವರ್ಗದಿಂದ ಬಂದವನು. ಇವನು ಕಾದಂಬರಿಕಾರನೂ ಸಣ್ಣಕಥೆಗಾರನೂ ನಾಟಕಕಾರನೂ ಆಗಿದ್ದ ಸಸೀನ್ಸ, ಇನ್ ದಿ ಹೌಸ್ ಆಫ್ ಬೆಸ್ಸೆಮೆನೊವ್ ಎಂಬುದು ಇವನ ಮೊದಲನೆಯ ನಾಟಕ ಇದು 1901ರಲ್ಲಿ ರಚನೆಗೊಂಡು 1902ರಲ್ಲಿ ಮಾಸ್ಕೂ ಆರ್ಟ್ ಥಿಯೇಟರ್‍ನಲ್ಲಿ ಪ್ರಯೋಗವಾಯಿತು. ಇವನ ದಿ ಲೋಯರ್ ಡೆಪ್ತ್ಸ್ (1902) ಎಂಬ ನಾಟಕ ಮಾಸ್ಕೊ ಆರ್ಟ್ ಥಿಯೇಟರ್‍ನಲ್ಲಿ ಪ್ರಯೋಗಗೊಂಡಾಗ ಗಾರ್ಕಿ ಒಬ್ಬ ಮುಖ್ಯ ನಾಟಕಕಾರನಾಗಿ ಸ್ಥಾನ ಪಡೆದುಕೊಂಡ. ಅಂದಿನಿಂದ ಇಂದಿನವರೆಗೆ ಈ ನಾಟಕ ನಿರಂತರವಾಗಿ ಭಿನ್ನ ಭಿನ್ನ ತಲೆಮಾರಿನ ನಟನಟಿಯರಿಂದ, ನಿರ್ದೇಶಕರುಗಳಿಂದ, ಮತ್ತೆ ಮತ್ತೆ ನವನವೋನ್ಮೆಷಶಾಲಿನಿಯಾಗಿ ಪ್ರಯೋಗಗೊಳ್ಳುತ್ತಲೇ ಇದೆ. ಗಾರ್ಕಿ ಈ ನಾಟಕವನ್ನು ವಾಸ್ತವವಾದಿ ಶೈಲಿಯಲ್ಲಿ ಬರೆದಿದ್ದರೂ ವಾಸ್ತವಿಕತೆಯನ್ನು ಮೀರಿದ ಸತ್ಯಗಳನ್ನು ಈ ನಾಟಕ ಅಭಿವ್ಯಕ್ತಿಸುತ್ತದೆ. ಈ ನಾಟಕವನ್ನು ಗಾರ್ಕಿ ಸೀನ್ಸ್ ಫ್ರಮ್ ರಷ್ಯನ್ ಲೈಫ್ ಎಂದು ಕರೆಯುತ್ತಾರೆ. ಒಂದಾದ ಮೇಲೊಂದರಂತೆ ಬರುವ ದೃಶ್ಯಗಳು, ಒಂದು ಗುಹೆಯನ್ನು ಹೋಲುವ, ಒಂದೇ ಆಸರೆಯಲ್ಲಿ ಜೀವಿಸುತ್ತಿರುವ ತ್ಯಕ್ತಜೀವಿಗಳ ದಾರುಣ ಜೀವನವನ್ನು ಚಿತ್ರಿಸುತ್ತದೆ. ನಾಟಕದ ವಸ್ತು ಒಂದಲ್ಲ ಹಲವಾರು. ಇದರಲ್ಲಿ ಒಂದು ವಸ್ತುವೆಂದರೆ, ವ್ಯಾಸಿಲಿ ಎಂಬಾತ ಆ ಮನೆಯ ಮಾಲೀಕನಾದ ಕಾಸ್ಟಿಲೇವ್ ಎನ್ನುವವನ ಪತ್ನಿ ಪಾಸ್ಕಾ ಎಂಬಾಕೆಯೊಂದಿಗೆ ಹೊಂದಿದ್ದ ಪ್ರಣಯ ಸಂದರ್ಭ ಮತ್ತು ಅದರ ಪರಿಣಾಮವಾಗಿ ನಡೆಯುವ ಹಲವಾರು ಘಟನೆಗಳನ್ನು ಇಷ್ಟನ್ನು ಬಿಟ್ಟರೆ, ಗಾರ್ಕಿ ತನ್ನ ಪಾತ್ರಗಳಿಗೆ ಸಂಬಂಧಿಸಿದ ಕಥೆಗಳನ್ನು ನಾಟಕೀಯವಾಗಿಸುತ್ತ ಹೋಗುತ್ತಾನೆ. ದಿ ಲೋಯರ್ ಡೆಪ್ತ್ಸ್ ನಾಟಕವನ್ನು ಇವನ ಮಹಾನ್‍ಕೃತಿ ಎಂದು ಪರಿಗಣಿಸಲಾಗಿದೆ. ಎನಿಮೀಸ್ (1906), ದಿ ಜಡ್ಜ (1915), ಇಗೋರ್ ಬುಲಿಕೋವ್ ಅಂಡ್ ಅದರ್ಸ್ (1932) - ಇವು ಗಾರ್ಕಿಯ ಇತರ ನಾಟಕಗಳು.
1899ರಲ್ಲಿ ಕೆಲವರು ಉತ್ಸಾಹಿಗಳು ಐರಿಷ್ ಲಿಟರರಿ ಥಿಯೇಟರ್ ಎಂಬ ಒಂದು ಸಮಸ್ಥೆಯನ್ನು ಆರಂಭಿಸಿದರು. ಮಿಸ್ ಹಾರ್‍ನಿಮನ್ ಎಂಬ ಶ್ರೀಮಂತೆಯ ಪೋಷಣೆಯಲ್ಲಿ ಈ ಸಂಸ್ಥೆ ಮುಂದುವರಿಯಿತು. ಕೇವಲ 3 ವರ್ಷಗಳಲ್ಲಿ ವೈ. ಬಿ. ಯೇಟ್ಸ್ ಮತ್ತು ಲೇಡಿ ಗ್ರೆಗೂರಿ - ಇವರ ನೇತೃತ್ವದಲಲಿ ಅಬ್ಬೆನಾಟಕ ಶಾಲೆಯಲ್ಲಿ ಇದು ಸ್ಥಾಪಿತವಾಯಿತು. ಯೇಟ್ಸ್ ನಾಟಕಗಳನ್ನು ಬರೆದಿದ್ದರೂ ಕವಿಯಾಗಿ ಹೆಚ್ಚು ಪ್ರಸಿದ್ಧನಾದವನು. ನಾಟಕಕಾರನಾಗಿಯೇ ಪ್ರಾಮುಖ್ಯ ಪಡೆದವನೆಂದರೆ ಜಾನ್ ಮಿಲ್ಲಿಂಗ್‍ಟನ್‍ಸಿಂಗ್. ಇವನು ಚೆಕಾಫ್‍ನಷ್ಟೇ ಮಹತ್ತ್ವಪೂರ್ಣ ನಾಟಕಕಾರ. ಇವನ ಪ್ರಭಾವ ಕೇವಲ ಐರ್ಲೆಂಡಿನಲ್ಲಲ್ಲದೆ ಜಾಗತಿಕವಾಗಿ ಹಬ್ಬಿತು. ರಷ್ಯ ಜನಜೀವನ ಚೆಕಾಫನಿಗೆ ಸ್ಫೂರ್ತಿ ನೀಡಿದಂತೆ ಐರ್ಲೆಂಡಿನ ವಿಶಿಷ್ಟ ಜನಜೀವನ ಸಿಂಗ್‍ನಿಗೆ ಸ್ಫೂರ್ತಿಯಾಯಿತು.
ಅತ್ಯಂತ ಪ್ರತಿಭಾವಂತನಾದ ಸಿಂಗ್ ಪ್ಯಾರಿಸ್‍ನಲ್ಲಿ ದಿಕ್ಕುದೆಸೆಯಿಲ್ಲದ ಬೊಹಿಮಿಯನ್ ಜೀವನವನ್ನು ನಡೆಸುತ್ತ ಕಾಲಹರಣ ಮಾಡುತ್ತಿದ್ದುದನ್ನು ಕಂಡ ಯೇಟ್ಸ್ ಆತ ಐರ್ಲೆಂಡಿಗೆ ಹಿಂತಿರಗಿ ಬರಲು ಪ್ರಚೋದಿಸಿ ಐರ್ಲೆಂಡಿನಲ್ಲಿ ನೆಲೆಸುವಂತೆ ಮಾಡಿದ. ಹೀಗೆ ಬಂದ ಸಿಂಗ್ ಐರ್ಲೆಂಡಿನ ಏರನ್ ದ್ವೀಪದಲ್ಲಿ ನೆಲೆಸಿದ. ಅಲ್ಲಿನ ಜನಜೀವನ ಇವನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಆಕ್ರಮಿಸಿತು. ಅಲ್ಲಿನ ಜನರ ಸರಳ ಜೀವನಕ್ರಮ ಇವನಿಗೆ ಬಹಳ ಅರ್ಥಪೂರ್ಣವಾಗಿ ಕಂಡಿತು. ಲಂಡನ್, ಪ್ಯಾರಿಸ್, ಬರ್ಲಿನ್ ಮೊದಲಾದ ಯೂರೋಪಿಯನ್ ನಗರಗಳ ಜೀವನಕ್ರಮವನ್ನು ಬಲ್ಲ ಸಿಂಗನಿಗೆ ಈ ದ್ವೀಪದ ಜನರ ಜೀವನಕ್ರಮ ಆದಿಮವೂ ಅತ್ಯಂತ ಸಹಜವೂ ಆಗಿ ಕಂಡುಬಂತು. ವಿಶಿಷ್ಟ ಪ್ರತಿಭೆಯ ಇವನು ಆ ವಸ್ತುಗಳನ್ನಿಟ್ಟುಕೊಂಡು ಶ್ರೇಷ್ಠ ನಾಟಕಗಳನ್ನು ರಚಿಸಿದ. ಆ ಮೂಲಕ ವಾಸ್ತವವಾದಿ ನಾಟಕದ ಆಯಾಮಗಳನ್ನು ವೈವಿಧ್ಯಮಯವಾಗಿ, ದುರಂತ ಮತ್ತು ಹರ್ಷ ಈ ಎರಡು ಅಂಶಗಳು ಜೀವನದಲ್ಲಿ ಒಟ್ಟಿಗೆ ಇರವುದನ್ನು ತನ್ನ ನಾಟಕಗಳಲ್ಲಿ ಸೃಷ್ಟಿಸಿದ.
ಇವನ ಮೊದಲ ಎರಡು ನಾಟಕಗಳಾದ ಇನ್ ದಿ ಷ್ಯಾಡೋ ಆಫ್ ದಿ ಗ್ಲೆನ್, ರೈಡರ್ಸ್ ಟು ದಿ ಸೀ - ಇವು ಕ್ರಮವಾಗಿ 1903 ಮತ್ತು 1904 ರಲಲಿ ಪ್ರಕಟಗೊಂಡವು. ಅನಂತರ ದಿ ವೆಲ್ ಆಫ್ ದಿ ಸೆಯಿಂಟ್ಸ್ 1905). ದಿ ಪ್ಲೇಬಾಯಾಫ್ ದಿ ವೆಸ್ಟ್ರನ್ ವಲ್ರ್ಡ್ (1907) ಪ್ರಕಟವಾದವು. ಈ ನಾಟಕಗಳಲ್ಲಿ ಸಿಂಗ್ ಸಾಮಾಜಿಕ ಮತ್ತು ರಾಜಕೀಯ ವಸ್ತುಗಳನ್ನು ಅಪ್ಪಿತಪ್ಪಿಯೂ ತರುವುದಿಲ್ಲ. ಉದಾಹರಣೆಗೆ ರೈಡರ್ಸ್ ಟು ದಿ ಸೀ ನಾಟಕದಲ್ಲಿ ಇವನ ಆಸಕ್ತಿ ಸಂಪೂರ್ಣವಾಗಿ ಮನುಷ್ಯರು ಮತ್ತು ಅವರ ಸುತ್ತಲಿನ ಪ್ರಕೃತಿ ಈ ಸಂಬಂಧದ ಅನ್ವೇಷಣೆಯಾಗಿದೆ. ಸಿಂಗ್ ತನ್ನ ನಾಟಕಗಳಲ್ಲಿ ಬಳಸುವ ಭಾಷೆ ಗದ್ಯವಾದರೂ ಕಾವ್ಯದ ಅಂಶಗಳನ್ನೊಳಗೊಂಡ ಜನಸಾಮಾನ್ಯರ ಭಾಷೆಯ ಸೊಗಡನ್ನುಳ್ಳದ್ದು. ಪರಿಸರವನ್ನು ಆವಿಷ್ಕರಣಗೊಳಿಸುವುದರಲ್ಲಿ ದುರಂತರ ನಿಜವಾದ ಅನುಭವವನ್ನು ತರಲಾಗುತ್ತದೆ. ಓದುಗನ ಅಂತರಂಗವನ್ನು ಕಾಡುವ ರೀತಿಯ ಇವನ ಗದ್ಯ ಶೈಲಿ ವಸ್ತುವಿಗೆ ಸಂಗತವಾದದ್ದಾಗಿರುತ್ತದೆ. ಇವನು ಬಳಸುವ ಭಾಷೆಯಲ್ಲೇ ಅಡಗಿರುವ ಸಂಗೀತ ಓದುಗರ ಇಂದ್ರಿಯಗಳನ್ನು ಆಕ್ರಮಿಸಿ ಬರಲಿರುವ ದುರಂತರ ಛಾಯೆಯನ್ನು ಮೂಡಿಸಿಬಿಡುತ್ತದೆ. ರೈಡರ್ಸ್ ಟು ದಿ ಸೀ ನಾಟಕದಲ್ಲಿನ ಮೌರ್ಯಗಳ ಚಿಕ್ಕ ಸಂಸಾರದಲ್ಲಿ ಒಡಮೂಡಿರುವ ನಿರಾಶೆ ಮತ್ತು ದುರಂತರ ಚಿತ್ರಣ ಈ ರೀತಿಯಲ್ಲಿದೆ. ಸಿಂಗನ ಪ್ರತಿಭೆ ತನ್ನ ಪೂರ್ಣ ಆವಿಷ್ಕರಣ ಪಡೆಯುವುದು ಒಂದರ್ಥದಲ್ಲಿ ಇವನ ಕಾಮಿಡಿಗಳಲ್ಲಿ. ಇನ್ ದಿ ಷ್ಯಾಡೊ ಆಫ್ ದಿ ಗ್ಲೆನ್ ನಾಟಕದಲ್ಲಿ ಸಿನಿಸಿಸಂ ಮತ್ತು ಅನುಕಂಪ ಒಂದರೊಡನೊಂದು ಬೇರೆಯುವುದನ್ನು ಕಾಣುತ್ತೇವೆ. ಹೆಸಿಂತ್ ಹಾಲ್‍ವೆ (1906), ಸ್ಪ್ರೆಡಿಂಗ್ ದಿ ನ್ಯೂಸ್ (1904), ದಿ ಜ್ಯಾಕ್ ಡಾ (1907), ದಿ ವರ್ಕ್ ಹೌಸ್ ವರ್ಡ್ (1908), ದಿ ಇಮೇಜ್ (1909) - ಈ ನಾಟಕಗಳಲ್ಲೆಲ್ಲ ಮುಖ್ಯವಾಗಿ ಅನ್ವೇಷಿತವಾಗುವ ವಸ್ತು. ನಿಜವಾದದ್ದು ಮತ್ತು ವ್ಯಕ್ತಿಗಳು ನಿಜವಾದದ್ದು ಎಂದು ತಿಳಿದಿರುವುದು - ಇವುಗಳ ನಡುವಿನ ವಿರುದ್ಧಾತ್ಮಕ ಸಂಬಂಧ. ಇದೇ ವಸ್ತು ಬೇರೆ ಬೇರೆ ಆಯಾಮಗಳಲ್ಲಿ ಮತ್ತು ಬೇರೆ ಬೇರೆ ಸನ್ನಿವೇಶಗಳಲ್ಲಿ ಅನ್ವೇಷಿತವಾಗುತ್ತದೆ. ಕರ್ತವ್ಯ ನಿರ್ವಹಣೆ ನಾನಾ ಬಗೆಯ ಕಷ್ಟಗಳಿಗೆ ಎಡೆಮಾಡುತ್ತದೆ. ಭೀತಿ ಉಟ್ಟಿಸುತ್ತದೆ, ಕರ್ತವ್ಯದಿಂದ ವಿಮುಖನಾಗುವಂತೆ ಮಾಡುತ್ತದೆ ; ಆದರೆ ಇಂತಹ ಪರಿಸ್ಥಿತಿಯೊಡನೆ ಹೋರಾಡಿ ಗೆಲ್ಲುವ ಶಕ್ತಿಸಾಮಥ್ರ್ಯವನ್ನು ವ್ಯಕ್ತಿ ತೋರಿಸಬೇಕಾಗುತ್ತದೆ. ಆದರೆ ಬಹಳ ಸಂದರ್ಭಗಳಲ್ಲಿ ಸೋಲು ಖಂಡಿತ. ಮನುಷ್ಯ ಬಹುಶಃ ನೋವನ್ನು ಅನುಭವಿಸುವುದಕ್ಕಾಗಿಯೇ ಹುಟ್ಟಿರಬೇಕು. ಆ ನೋವನ್ನು ದೃಢತೆ ಮತ್ತು ಸ್ಥೈರ್ಯದಿಂದ ಗೆಲ್ಲಬೇಕು ಅಥವಾ ಅದನ್ನು ಪರಿಹಾಸ್ಯಕ್ಕೆ ಗುರಿಮಾಡಿ ಅದಕ್ಕಿಂತ ತಾನು ಹೆಚ್ಚೆಂಬುದನ್ನು ಸಿದ್ಧಮಾಡಿ ತೋರಿಸಬೇಕು. ಈ ದೃಷ್ಟಿಯಿಂದ ನೋಡಿದಾಗ ಪರಿಹಾರವೇ ಸಹಿಷ್ಣುತೆಯ ಇನ್ನೊಂದು ಮುಖ. ಕೆಲವು ವಿಮರ್ಶಕರು ಇವನನ್ನು ನಿರಾಶಾವಾದಿ ಎಂದು ಕರೆದಿದ್ದಾರೆ. ಆದರೆ ಇವನು ನಿರಾಶಾವಾದಿಯೂ ಅಲ್ಲ, ಆಶಾವಾದಿಯೂ ಅಲ್ಲ. ಜೀವನವನ್ನು ಅತಿ ಸರಳೀಕರಿಸಿ ನೋಡುವುದು ಸಿಂಗ್‍ನಿಗೆ ಸಾಧ್ಯವೇ ಇಲ್ಲ. ಏಕೆಂದರೆ ಜೀವನ ಕಠಿಣ ನಿಜ. ಅದು ಕೆಲವೊಮ್ಮೆ ಕರಾಳ ಮತ್ತು ರುದ್ರ ; ಆದರೆ ಅದರ ಕರಾಳತೆ ಮತ್ತು ರೌದ್ರತೆಯೇ ಮನುಷ್ಯನಿಗೆ ಒಂದು ಸವಾಲಾಗಿ ಪರಿಣಮಿಸಿ ಮನುಷ್ಯನನ್ನು ಚೈತನ್ಯಶಾಲಿಯನ್ನಾಗಿ ಮಾಡುತ್ತದೆ. ಹೀಗೆ ನಿಗೂಢ ರೀತಿಯಲ್ಲಿ ಜೀವನ ಚೆಲುವಾಗಿದೆ. ಈ ಜೀವನ ದರ್ಶನವನ್ನು ಈತ ತನ್ನ ಪಾತ್ರಗಳು ಮತ್ತು ಘಟನೆಗಳ ಚಿತ್ರಣಗಳ ಮೂಲಕ ತನ್ನ ಅನ್ಯಾದೃಶವಾದ ಭಾಷಾ ಶೈಲಿಯ ಮೂಲಕ, ವಿಶಿಷ್ಟ ರೀತಿಯ ನಾದಮಾರ್ದವದ ಮೂಲಕ ಜೀವನದ ಬಿಕ್ಕಟ್ಟು ಸಂಕಟ, ಸಾವು ಮೊದಲಾದವುಗಳಿಗೆ ಪ್ರೀತಿಯ ಮುಖವಾಡ ಹಾಕಿ ಕುರೂಪವನ್ನು ಸುಂದರವಾಗಿಸಿಬಿಡುತ್ತಾನೆ.
ವಿಲಿಯಂ ಬಟ್ಲರ್ ಯೇಟ್ಸ್ (1865 - 1939) ನಾಟಕಗಳನ್ನು ಬರೆಯುತ್ತಿದ್ದ ಸಂದರ್ಭದಲ್ಲಿ ಅಬ್ಬೆ ಥಿಯೇಟರ್ ಗ್ರೂಪ್ ಎಂಬ ನಾಟಕ ಸಂಸ್ಥೆ ಡಬ್ಲಿನ್‍ನಲ್ಲಿ ಆರಂಭವಾಯಿತು. ಅನಂತರ ಅದನ್ನು ಐರಿಷ್ ಪ್ಲೇಯರ್ ಎಂಬ ಹೆಸರಿನಲ್ಲಿ ಕರೆಯಲಾಯಿತು. ಈ ನಾಟಕ ಕಂಪೆನಿಯ ನಟರು ಯೇಟ್ಸ್‍ನ ಕಾವ್ಯನಾಟಕಗಳನ್ನು ತಮ್ಮ ಅಭಿನಯ ಚತುರತೆಯಿಂದ ಜೀವ ತುಂಬಿ ಪ್ರದರ್ಶಿಸಿದರು. ಸಂಭಾಷನೆಗಳನ್ನು ನಟರು ಸಹಜವಾಗಿ ನಿರ್ವಹಿಸುತ್ತಿದ್ದ ರೀತಿ. ಸಹಜ ಸರಳ ಅಭಿನಯ ಇವುಗಳಿಂದಾಗಿ ಐರಿಷ್ ಮತ್ತು ಬ್ರಿಟಿಷ್ ರಂಗಭೂಮಿಗೆ ಒಂದು ಹೊಸತನವನ್ನು ತಂದುಕೊಟ್ಟರು. ಸ್ಟಾನ್ಸ್‍ಲಾವ್‍ಸ್ಕಿ ಪ್ರತಿಪಾದಿಸಿದ ಅಭಿನಯ ವಿಧಾನ ಮತ್ತು ಪ್ರಯೋಗ ವಿಧಾನಗಳು ರಂಗಭೂಮಿಯ ಮೇಲೆ ಚೆಕಾಫ್‍ನ ನಾಟಕಗಳಿಗೆ ಅರ್ಥವಂತಿಕೆ ತಂದುಕೊಟ್ಟಂತೆ ಈ ಐರಿಷ್ ನಟರು ತಮ್ಮ ವಿಶೇಷ ಅಭಿನಯ ಮತ್ತು ಪ್ರಯೋಗ ವಿಧಾನಗಳಿಂದ ಸಿಂಗನ ನಾಟಕಗಳಿಗೂ ಅರ್ಥವಂತಿಕೆಯನ್ನು ತಂದುಕೊಟ್ಟರು. ಈ ನಟರ ತಂಡ ಯೇಟ್ಸ್ ಮತ್ತು ಸಿಂಗನ ನಾಟಕಗಳಲ್ಲದೆ ಸೀನ್‍ಓಕೇಸಿ ಎಂಬ ವಾಸ್ತವವಾದಿ ನಾಟಕಾರ ನಾಟಕಗಳನ್ನು ಪ್ರದರ್ಶಿಸುತ್ತಿತ್ತು.
ಅಭಿವ್ಯಕ್ತಿವಾದ (ಎಕ್ಸ್‍ಪ್ರೆಷನಿಸಂ) ಎಂದರೆ ಸ್ಥೂಲವಾಗಿ ಭಾವನೆಗಳನ್ನು ಕೆರಳಿಸುವ ವಸ್ತುಗಳ ಬಗೆಗೆ ಬರೆಯದೆ ಭಾವನೆಗಳ ಬಗೆಗೆ ಬರೆಯುವುದು. ಅಂದರೆ ಕೃತಿಯ ರೂಪದ ಮೇಲೆ ಒತ್ತು ಹಾಕಿ ಭಾವನೆಗಳನ್ನು ಅಭಿವ್ಯಕ್ತಿಸುವುದೇ ವಿನಾ ಭಾವನೆಗಳನ್ನು ಪ್ರಚೋದಿಸಿದ ವಸ್ತುಗಳ ಮೇಲೆ ಒತ್ತುಹಾಕುವುದಲ್ಲ. ಈ ವಿಧಾನ ಇತರ ಕಲೆಗಳಲ್ಲಿಯಂತೆಯೇ ನಾಟಕ ರಚನೆ ಮತ್ತು ಪ್ರಯೋಗದಲ್ಲೂ ಪ್ರಾಚುರ್ಯಕ್ಕೆ ಬಂತು. ರಂಗದಲ್ಲಿ ನಟನಟಿಯರ ಚಲನವಲನಗಳು, ವರ್ಣಗಳು, ಬೆಳಕಿನ ವ್ಯವಸ್ಥೆ, ಅಭಿನಯ, ಪದಗಳು ಮತ್ತು ಅವುಗಳ ಅರ್ಥ ಈ ಅಂಶಗಳನ್ನು ಈ ಅಭಿವ್ಯಕ್ತಿವಾದದ ದೃಷ್ಟಿಕೋನಕ್ಕನುಗುಣವಾಗಿ ಬಳಸಿಕೊಳ್ಳಲಾಗುತ್ತದೆ. ಆ ಮೂಲಕವಾಸ್ತವವಾದಿ ಪರಂಪರೆಗೆ ಸಾಧ್ಯವಾಗದ ಅನುಭವದ ಸಂಕೀರ್ಣತೆಯನ್ನು, ಆಳವನ್ನು ರಂಗಭೂಮಿಯ ಭಾಚೆಗೆ ಪರಿವರ್ತಿಸಿ ರಂಗದ ಮೇಲೆ ಅಭಿವ್ಯಕ್ತಿಸಲು ಸಾಧ್ಯವಾಯಿತು. ಈ ಪರಂಪರೆಯಲ್ಲಿ ಜರ್ಮನ್ ನಾಟಕಕಾರಾದ ಅರ್ನಸ್ಟ್ ಟೋಲರ್ ಮತ್ತು ಜಾರ್ಜ್ ಕೈಸರ್ - ಇವರ ನಾಟಕಗಳು ಅಮೆರಿಕನ್ ರಂಗಭೂಮಿಯ ಮೇಲೂ ಪ್ರಯೋಗಗೊಂಡಿವೆ. ಎಲ್ಲರಿಗಿಂತ ಮುಖ್ಯವಾಗಿ ಗೋರ್ಡನ್‍ಕ್ರೈಗ್ ಎಂಬಾತ ಎಕ್ಸ್‍ಪ್ರೆಷನಿಸ್ಟಕ್ ಪರಂಪರೆಗೆ ದೊಡ್ಡ ಕೊಡುಗೆಗಳನ್ನು ಕೊಟ್ಟವನು. ಈತ ವಾಸ್ತವವಾದಿ ಶೈಲಿಗೆ ಪ್ರತಿಯಾಗಿ ರಂಗಭೂಮಿಯ ಮೇಲೆ ಅಭಿವ್ಯಕ್ತಿವಾದದ ಶೈಲಿಯನ್ನು ಯಶಸ್ವಿಯಾಗಿ ತಂದ.
1934 ರಲ್ಲಿ ನೊಬೆಲ್ ಪಡೆದ ಲ್ಯೂಗಿ ಪಿರಾಂಡೆಲೊ (1867 - 1936) ಎಕ್ಸ್ಪ್ರೆಷನಿಸ್ಟ್ ಶೈಲಿಯ ನಾಟಕಕಾರರಲ್ಲಿ ಬಹಳ ಮುಖ್ಯನಾದವನು. ಇವನು ವಾಸ್ತವವಾದಿ ಪರಂಪರೆಯಲ್ಲಿ ಬೆಳೆದು ಬಂದವನಾದರೂ ಅದರ ಪರಿಮಿತಿಗಳನ್ನರಿತು ಅಭಿವ್ಯಕ್ತಿ ಶೈಲಿವಾದದ ವಿಧಾನವನ್ನು ತನ್ನ ನಾಟಕಗಳಲ್ಲಿ ಬಳಸತೊಡಗಿದ. ಇವನ ನಾಟಕಗಳಲ್ಲಿ ಮನುಷ್ಯನ ಯೋಜನೆಗಳ ನಿರರ್ಥಕತೆ, ಸತ್ಯವನ್ನು ಒಂದು ಸೂತ್ರದಲ್ಲಿ ಹಿಡಿದಿಡಲು ಸಾಧ್ಯವಿಲ್ಲವೆಂಬುದರ ಪರಿವೆ - ಈ ವಿಚಾರಗಳು ಮತ್ತೆ ಮತ್ತೆ ಅನ್ವೇಷಿತವಾಗಿರುವ ವಸ್ತುಗಳಾಗಿವೆ. ಇವನ ಅತ್ಯಂತ ಪ್ರಸಿದ್ಧ ನಾಟಕ ಸಿಕ್ಸ್ ಕ್ಯಾರೆಕ್ಟರ್ ಇನ್ ಸರ್ಚ್ ಆಫ್ ಎನ್ ಆತರ್ (1921). ಇದರಲ್ಲಿ ಸತ್ಯ ಮತ್ತು ಭ್ರಮೆ ಇವುಗಳನ್ನು ಬೇರ್ಪಡಿಸಲಾಗದಂತೆ ಹೆಣೆಯಲಾಗಿದೆ. ಥಿಂಕ್ ಆಫ್ ಇಟ್ ಗಿಯೊಕೊಮಿನೊ (1916). ರೈಟ್ ಯು ಆರ್ ಇಫ್ ಯು ಥಿಂಕ್ ಯು ಆರ್ (1916) - ಈ ನಾಟಕಗಳಲ್ಲಿ ವಾಸ್ತವಿಕತೆ ಮತ್ತು ಭ್ರಮೆಯ ಮಧ್ಯದ ಗೆರೆ ಎಷ್ಟು ತೆಳುವಾದದ್ದು ಎಂಬುದನ್ನು ಸೂಚಿಸಲಾಗಿದೆ. ಈಚ್ ಇನ್ ಹಿಸ್ ಓನ್ ವೇ (1934), ಟು ನೈಟ್ ವಿ ಇಂಪ್ರೂವೈಸ್ (1930), ಅವರ್ ಲಾರ್ಡ್ ಆಫ್ ದಿ ಶಿಪ್ (1925) - ಇವನ ಇತರ ನಾಟಕಗಳು. ದಿ ಜೆಯಿಂಟ್ಸ್ ಆಫ್ ದಿ ಮೌಂಟೆನ್ (1937) ಇವನ ಕೊನೆಯ ನಾಟಕ.
ದಿ ಷ್ಯಡೊ ಆಫ್ ದಿ ಗನ್‍ಮನ್ ಎಂಬ ನಾಟಕದ ಮೂಲಕ ಪ್ರಸಿದ್ದಿಗೆ ಬಂದ ಸೀನ್ ಓ ಕೇಸಿ (1880 - 1964) ಐರಿಷ್ ನಾಟಕಕಾರ. ಅಬ್ಬೆ ಥಿಯೇಟರ್‍ನಲ್ಲಿ ಈ ನಾಟಕ 1923 ರಲ್ಲಿ ಪ್ರಯೋಗಗೊಂಡಿತು. ಈ ನಾಟಕದ ಮೂಲಕ ಬ್ರಿಟಿಷ್ ರಂಗಭೂಮಿಯ ನಾಟಕದ ಆಕಾಶದಲ್ಲಿ ಒಂದು ಹೊಸತಾರೆ ಉದಯಿಸಿತು ಎಂಬ ಪ್ರಶಂಸೆಗೆ ಒಳಗದ. ಜುನೋ ಅಂಡ್ ದಿ ಪೆಕಾಕ್ (1924), ದಿ ಪ್ಲೊ ಎಂಡ್ ದಿ ಸ್ಟಾರ್ಸ್ (1926) ಎಂಬ ಇವನ ದುರಂತ ನಾಟಕಗಳು ಇವನಿಗೆ ಕೀರ್ತಿಯನ್ನು ತಂದುಕೊಟ್ಟವು. ಸಿಲೆವರ್ ಟ್ಯಾಸಿ (1928) ಎಂಬ ನಾಟಕದಲ್ಲಿ ಈತ ಅಲ್ಲಿಯವರೆಗೆ ಬರೆಯುತ್ತಿದ್ದ ವಾಸ್ತವವಾದಿ ಶೈಲಿಯನ್ನು ಬಿಟ್ಟು ಎಕ್ಸ್ಪ್ರೆಷನಿಸ್ಟಕ್ ಶೈಲಿಯನ್ನು ಬಳಸಿದ. ವಿತ್ ಇನ್ ದಿ ಗೇಟ್ಸ್ (1934) ಎಂಬ ನಾಟಕ ಸಂಪೂರ್ಣವಾಗಿ ಎಕ್ಸ್‍ಪ್ರೆಷನಿಸ್ಟಿಕ್ ವಿಧಾನೆದಲ್ಲಿ ರಚನೆಗೊಂಡಿದ್ದು. 1940 ರಲ್ಲಿ ಯೂನಿಟಿ ಥಿಯೇಟರ್‍ಗಾಗಿ ದಿ ಸ್ಟಾರ್ ಟನ್ರ್ಸ್ ರೆಡ್ ಎಂಬ ನಾಟಕಗಳನ್ನು ಬರೆದುಕೊಟ್ಟ. ಪರ್ಪಲ್ ಡಸ್ಟ್ (1945). ರೆಡ್ ರೋಸಸ್ ಫಾರ್ ಮಿ (1943) ಎಂಬ ವರ್ಣಮಯ ಫ್ಯಾಂಟಸಿಗಳನ್ನೂ ರಚಿಸಿದ. ಇವುಗಳಲ್ಲಿನ ಸಂಭಾಷಣೆಯ ಭಾಷೆ ವ್ಯಂಗ್ಯದಿಂದ ಕೂಡಿದ್ದು, ವೈನೋದಿಕ ಮತ್ತು ದುರಂತರ ಅಂಶಗಳನ್ನು ಉಳ್ಳ ಈ ನಾಟಕಗಳು ಎಕ್ಸ್‍ಪ್ರೆಷನಿಸ್ಟಿಕ್ ನಾಟಕ ಪರಂಪರೆಗೆ ಮಹತ್ತ್ವದ ಕೊಡುಗೆಗಳಾಗಿದೆ.
ಅಮೆರಿಕದಲ್ಲಿ ಅಭಿವ್ಯಕ್ತಿವಾದದ ಶೈಲಿಯಲ್ಲಿ ನಾಟಕವನ್ನು ಬರೆದವನೆಂದರೆ ಯೂಜಿನ್ ಓನೀಲ್. ಇವನು ಈ ವಾದಕ್ಕಷ್ಟೇ ಸೀಮಿತವಾಗದೇ ಇತರ ನಾಟಕಗಳನ್ನೂ ರಚಿಸಿದ. ವಸ್ತವವಾದಿ ಶೈಲಿಯನ್ನು ಉಚಿತವಾಗಿ ಬಳಸುತ್ತಿದ್ದ ಇವನು ಅದರ ಕೊರತೆಯನ್ನು ಅಭಿವ್ಯಕ್ತಿವಾದ ಶೈಲಿಯನ್ನು ಬಳಸುವುದರ ಮೂಲಕ ತುಂಬಲು ಪ್ರಯತ್ನಿಸಿದ. ಎಂಪರರ್ ಜೋನ್ಸ್, ದಿ ಹೇರಿ ಏಪ್, ಲ್ಯಸರಲ್ ಲಾಫ್ಸ್ - ಈ ನಾಟಕಗಳಲ್ಲಿ ಇವನ ಅಭಿವ್ಯಕ್ತಿವಾದದ ಶಕ್ತಿ ಏನೆಂಬುದು ಗೊಚರಿಸುತ್ತದೆ. ಆ ಮೂಲಕ ಪ್ರೇಕ್ಷಕರಿಗೆ ಒಮದು ಹೊಸ ರೋಮಾಂಚನಕಾರಿ ಅನುಭವ ಉಂಟಾಗುವಂತೆ ಮಾಡಿದೆ.
ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಫ್ರಾನ್ಸ್‍ನಲ್ಲಿ, ಯೂರೋಪಿನ ಎಲ್ಲೆಡೆಗಳಲ್ಲಾದಂತೆ ಸಾಂಸ್ಕøತಿಕ ಚಟುವಟಿಕೆಗಳಿಗೆ ಧಕ್ಕೆಯೊದಗಿತು. ನಾಟಕ ಚಟುವಟಿಕೆಗಳೂ ಹಿನ್ನೆಲೆಗೆ ಸರಿದವು. ಆದರೆ ಫ್ರಾನ್ಸ್‍ನಲ್ಲಿ ನಾಟಕ ಚಟುವಟಿಕೆ ಇನ್ನೊಂದು ರೀತಿಯಲ್ಲಿ ಚುರುಕುಗೊಂಡಿತು. ಜರ್ಮನಿ ಫ್ರಾನ್ಸ್‍ನ್ನು ಆಕ್ರಮಿಸಿಕೊಂಡಿದ್ದ ಕಾಲದಲ್ಲಿ ಆಕ್ರಮಣಕಾರರ ವಿರುದ್ಧದ ಪ್ರತಿಭಟನೆ ಅನೇಕ ರೀತಿಗಳಲ್ಲಿ ವ್ಯಕ್ತವಾಯಿತು. ಸಾತ್ರ್ರ (1905). ಮಾಲ್ರೊ ಈ ಲೇಖಕರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಜ್ಞಾತವಾಗಿ ಕೆಲಸ ಮಾಡತೊಡಗಿದರು. ವ್ಯಕ್ತಿಯ ಅಸ್ತಿತ್ವವೇ ಸಂದಿಗ್ಧವಾಗಿದ್ದ ಈ ಕಾಲದಲ್ಲಿ ಸಾತ್ರ್ರರನ ಅಸ್ತಿತ್ವವಾದ ಸಂದಿಗ್ಧ ತತ್ತ್ವಶಾಸ್ತ್ರವಾಗಿ ರೂಪುಗೊಂಡಿತು. ಈ ಮೊದಲೇ ಕಿರ್ಕೆಗಾರ್ಡ್, ಯಾಸ್ಪರ್ಸ್ ಮೊದಲಾದ ತತ್ತ್ವಶಾಸ್ತ್ರಜ್ಞರು ಅಸ್ತಿತ್ವವಾದವನ್ನು ರೂಪಿಸಿದ್ದರೂ ನಾಸ್ತಿಕ ಅಸ್ತಿತ್ವವಾದವನ್ನು ರೂಪಿಸಿದವನು ಸಾತ್ರ್ರ. ಅತ್ತ್ವಕ್ಕಿಂತ ಅಸ್ತತ್ವವೇ ಮೊದಲು ಎಂಬ ಸಾತ್ರ್ರರನ ನಿಲುವು ಈ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಯಿತು. ಸಾತ್ರ್ರನ ಕಾದಂಬರಿಗಳು, ಕಥೆಗಳು ಮತ್ತು ನಟಕಗಳು ಇವನ ಈ ಬಗೆಯ ನಿಲುವನ್ನು ಸಾಹಿತ್ಯಿಕವಾಗಿ ನಿರೂಪಿಸುವ ಕೆಲಸವನ್ನು ಮಾಡಿದವು. ವ್ಯಕ್ತಿ ತನ್ನ ಕಾರ್ಯಗಳಿಗೆ ತಾನೇ ಜವಾಬ್ದಾರ. ತಾನೇನಾಗಬೇಕೆಂಬುದನ್ನು ಆರಿಸಿಕೊಲ್ಳಲು ಸ್ವತಂತ್ರ ; ಆದರೆ ಸ್ವಾತಂತ್ರ್ಯ ಅವನಿಗೆ ವರವೂ ಹೌದು ಶಾಪವೂ ಹೌದು. ಮನುಷ್ಯನಿಗೆ ಆಧಾರವಾಗಿ ಯಾವ ಬಾಹ್ಯಮೌಲ್ಯಗಳೂ ಇಲ್ಲ. ಅನಂತ ಜವಾಬ್ದಾರಿಗಳೊಂದಿಗೆ ಅವನು ಈ ಪ್ರಪಂಚದಲ್ಲಿ ಎಸೆಯಲ್ಪಟ್ಟವನು. ಯಾವ ಹೊರಗಿನ ಸಹಾಯವೂ ಅವನಿಗಿಲ್ಲ. ಅವನೇ ಮಾಡಿಕೊಂಡದ್ದಿಲ್ಲದೆ ಬೇರೆ ಗುರಿ ಅವನಿಗಿಲ್ಲ. ವ್ಯಕ್ತಿ ತಾನೇನಾಗಿದ್ದೆನೆ ಎಂಬುದಕ್ಕೆ ತಾನೇ ಜವಾಬ್ದಾರ. ಈ ಪ್ರಪಂಚದಲ್ಲಿನ ಯಾವ ಅರ್ಥವೂ ವ್ಯಕ್ತಿಯ ಅಸ್ತಿತ್ವದ ಆಯ್ಕೆಯಿಂದ ಬರುತ್ತದೆ, ತನ್ನ ಅವಸ್ಥೆಗೆ ತಾನೇ ಜವಾಬ್ದಾರ, ಸಾತ್ಮ ಮತ್ತು ಅವನ ತಲೆಮಾರಿನ ಲೇಖಕರಿಗೆ, ಆ ಪ್ರತಿರೋಧ ಮುಖ್ಯವಾಯಿತು. ಆಗ ತಮ್ಮನ್ನು ಆಕ್ರಮಿಸಿದ್ದ ನಾಜಿಗಳ ವಿರುದ್ಧ `ಇಲ್ಲ (ನೇತಿ) ಎಂಬ ಸ್ವಾತಂತ್ರ್ಯವನ್ನು ಪಡೆದುಕೊಂಡರು. `ನೇತಿ' ಎಂಬ ಧೋರಣೆ ಈ ಸಂರ್ಭದಲ್ಲಿ ಕೇವಲ ತತ್ತ್ವಶಾಸ್ತ್ರೀಯ ನಿಲುವಾಗದೆ ಚಳವಳಿಗಾರರಿಗೆ ಆಕ್ರಮಣಕಾರರಿಗೆ ವಿರುದ್ಧದ `ನೇತಿ' ಆಗುತ್ತದೆ.
ಸಾತ್ರ್ರ 9 ತಿಂಗಳು ಜರ್ಮನರ ಸೆರೆಯಾಳಾಗಿದ್ದ. ಸೆರೆಯಾಳಾಗಿದ್ದಾಗಲೇ ಅವನು ಕೈದಿಗಳಿಗಾಗಿ ಒಂದು ನಾಟಕ ಬರೆದು ಆಡಿಸಿದ. `ದಿ ಫ್ಲೈಸ್ ನಾಟಕ ಜರ್ಮನರನ್ನು ಪರೋಕ್ಷವಾಗಿ ವಿರೋಧಿಸುವ, ಪ್ರತಿಭಟಿಸುವ ನಾಟಕ. ಈ ನಾಟಕವನ್ನು ಜರ್ಮನ್ ಅಧಿಕಾರಿಗಳು ನೋಡಿದರೂ ತಮ್ಮನ್ನು ಕುರತ ಪ್ರತಿಭಟನೆ ಅರ್ಥವಾಗಲಿಲ್ಲ. ಆದರೆ ಅದನ್ನು ನೋಡಿದ ಫ್ರೆಂಚ್ ಪ್ರೇಕ್ಷಕರಿಗೆ ಆ ಅರ್ಥ ಸುಸ್ಪಷ್ಟವಾಗಿತ್ತು. ಹೀಗೆ ಸಾತ್ರ್ರನಂಥವರ ಕೈಯಲ್ಲಿ ನಾಟಕ ಒಂದು ತಂತ್ರದಂತೆ ಬಳಕೆಯಾಯಿತು. ಇವನ ನೋ ಎಕ್ಸಿಟ್ ಅಥವಾ ಇನ್ ಕ್ಯಾಮರಾ, ಆಲ್ಟೋನಾ ಮೊದಲಾದ ನಾಟಕಗಳು ತತ್ತ್ವಶಾಸ್ತ್ರದಲ್ಲಿ ಅವನು ಏನನ್ನು ಪ್ರತಿಪಾದಿಸಿದನೊ ಅದಕ್ಕೆ ದೃಷ್ಟಾಂತಗಳಂತಿದ್ದರೂ ನಾಟಕದ ಭಾಷೆ, ತಂತ್ರ, ಸಂವಿಧಾನ, ಪಾತ್ರ - ಈ ದೃಷ್ಟಿಗಳಿಂದ ಅತ್ಯಂತ ಪರಿಣಾಮಕಾರಿ ನಾಟಕಗಳಾಗಿವೆ. ಇವುಗಳನ್ನು ಇವನ ಒಟ್ಟು ಸಾಹಿತ್ಯ ಸೃಷ್ಟಿ ಹಾಗೂ ತತ್ತ್ವಶಾಸ್ತ್ರದ ಸಂದರ್ಭದಲ್ಲಿ ನೋಡಬೇಕಾಗುತ್ತದೆ. ನಾವು ಯಾವುದನ್ನು ಅಸ್ತಿತ್ವವಾದಿ ನಾಟಕ ಎಂದು ಕರೆಯುತ್ತೇವೆಯೊ ಆ ನಾಟಕ ಪರಂಪರೆಗೆ ಇವನ ನಾಟಕಗಳು ಶ್ರೇಷ್ಠ ಉದಾಹರಣೆಗಳಾಗಿವೆ.
1945 ರಲ್ಲಿ ಸಾತ್ರ್ರನಿಗೆ ಫ್ರೆಂಚ್ ಲೀಜನ್ ಬಹುಮಾನ ಬಂದಾಗ ಅದನ್ನು ತಿರಸ್ಕರಿಸಿದ. 1965 ರಲ್ಲಿ ನೊಬೆಲ್ ಬಹುಮಾನ ಬಂದಾಗಲೂ ಅದನ್ನು ತಿರಸ್ಕರಿಸಿದ. ಅಮೆರಿಕದ ವಿಯೆಟ್ನಾಂ ಧೋರಣೆಯನ್ನು ಪ್ರತಿಭಟಿಸಿ 1965 ರ ತನ್ನ ಅಮೆರಿಕ ಪ್ರವಾಸವನ್ನು ರದ್ದುಪಡಿಸಿದ. ಹೀಗೆ ನುಡಿದಂತೆ ನಡೆದ ಸಾತ್ರ್ರ 20 ನೆಯ ಶತಮಾನದ ಧೀಮಂತ ತತ್ತ್ವಶಾಸ್ತ್ರಜ್ಞನೂ ಸಾಹಿತಿಯೂ ಚಳವಳಿಗಾರನೂ ಆಗಿದ್ದಾನೆ. ಅಸ್ತಿತ್ವವಾದ ಪ್ರಭಾವ ಜಾಗತಿಕ ಸಾಹಿತ್ಯದ ಮೇಲೆ ಗಾಢವಾಗಿ ಉಂಟಾಗಲು ಸಾತ್ರ್ರನ ಬರೆವಣಿಗೆಗಳೂ ಕಾರಣವಾಗಿವೆ. ``ಸಾತ್ರ್ರನನ್ನು ಅಧ್ಯಯನ ಮಾಡುವುದೆಂದರೆ ನಮ್ಮ ಈ ಯುಗವನ್ನು ಅಧ್ಯಯನ ಮಾಡಿದಂತೆ ಎಂಬ ಐರಿಸ್ ಮರ್ಡಾಕ್‍ಳ ಮಾತು ಅರ್ಥಪೂರ್ಣವಾದುದು.
ಅಸ್ತಿತ್ವವಾದಿ ನಾಟಕ ಪರಂಪರೆಗೆ ಸೇರುವ ಇನ್ನಿಬ್ಬರು ಪ್ರಮುಖ ನಾಟಕಕಾರರೆಂದರೆ ಆಲ್ಬರ್ಟ್ ಕಮು ಮತ್ತು ಜೀನ್‍ಜೆನೆ, ಆಲ್ಬರ್ಟ್ ಕಮು ಸಾತ್ರ್ರ್‍ನಂತೆಯೇ ತತ್ತ್ವಶಾಸ್ತ್ರಜ್ಞ. ಕಾದಂಬರಿಕಾರ ಮತ್ತು ನಾಟಕಕಾರ. ಇವನು ಆಲ್ಜೀರಿಯದಲ್ಲಿ ಹುಟ್ಟಿ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ. ಇವನು 1936 ರಲ್ಲಿ ಥಿಯೇಟರ್ ಆಫ್ ಟ್ರವೈಲ್ ಎಂಬ ನಾಟಕ ಕಂಪೆನಿಯನ್ನು ಆರಂಭಿಸಿ ಈಸ್ಕಿಲಸ್‍ನ `ಪ್ರೊಮಿಥಿಯಸ್ ಬೌಂಡ್ ನಂತಹ ಪ್ರಾಚೀನ ಗ್ರೀಕ್ ನಟಕಗಳಿಂದ ಹಿಡಿದು ಮಾಲ್ರೊನ ಕೃತಿಯೊಂದನ್ನು ನಾಟಕವಾಗಿ ಪರಿವರ್ತಿಸಿ ತನ್ನ ಕಂಪೆನಿಯಲ್ಲಿ ಪ್ರದರ್ಶಿಸಿದ. ನಾಜಿಗಳು ಫ್ರಾನ್ಸನ್ನು ಆಕ್ರಮಿಸಿಕೊಂಡ ಸಂದರ್ಭದಲ್ಲಿ ಇವನು ಪ್ಯಾರಿಸ್‍ನಲ್ಲೇ ಇದ್ದು ಕಮ್‍ಬಾಟ್ ಎಂಬ ಪ್ರತಿಭಟನಾ ಪತ್ರಿಕೆಯನ್ನು ಸಂಪಾದಿಸಿದ. ಇದೇ ಸಂದರ್ಭದಲ್ಲಿ ಇವನ ಮೊದಲೆರಡು ನಾಟಕಗಳಾದ `ದಿ ಕ್ರಾಸ್ ಪರ್ಪಸ್ (1944) ; ` ಕ್ಯಾಲಿಗುಲ (1945) ರಚನೆಗೊಂಡವು. ಈ ನಾಟಕಗಳಲ್ಲಿ ಕಮು ತನ್ನ ಅಸಂಗತ (ಅಬ್ಸರ್ಡ್) ತತ್ತ್ವವನ್ನು ಸಾಹಿತ್ಯಿಕವಾಗಿ, ನಾಟಕೀಯವಾಗಿ ಚಿತ್ರಿಸಿದ್ದಾನೆ. ಇವುಗಳಲ್ಲದೆ ಇವನು ಫಾಕ್ನರ್‍ನ ಆಸ್ ಐ ಲೇ ಡೈಯಿಂಗ್ ಮತ್ತು ದಾಸ್ತೊವ್‍ಸ್ಕಿಯ ದಿ ಡೆವಿಲ್ಸ್ - ಈ ಕೃತಿಗಳನ್ನು ನಾಟಕಗಳಾಗಿ ಪರಿವರ್ತಿಸಿದ್ದಾನೆ. ದಿ ಮಿಥ್ ಆಫ್ ಸಿಸಿಫಸ್ ಮತ್ತಿ ದಿ ರೆಬೆಲ್ - ಈ ತತ್ತ್ವಶಾಸ್ತ್ರೀಯ ಕೃತಿಗಳಲ್ಲಿ ಈತ ಪ್ರತಿಪಾದಿಸಿದ ಅಸಾಂಗತ್ಯ ಮತ್ತು ಬಂಡಾಯ ತತ್ತ್ವವನ್ನು ಇವನ ಕಾದಂಬರಿಗಳು, ಸಣ್ಣಕಥೆಗಳು ಮತ್ತು ನಾಟಕಗಳು ಸಾಹಿತ್ಯಿಕವಾಗಿ ಪ್ರತಿಪಾದಿಸುತ್ತವೆ.
ಸಾತ್ರ್ರ ಮತ್ತು ಆಲ್ಬರ್ಟ್‍ಕಮು ಫ್ರಾನ್ಸ್‍ನ ಅಸ್ತಿತ್ವವಾದಿ ರಂಗಭೂಮಿಯನ್ನು ರೂಪಿಸಿದರು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಯುರೋಪಿನ ಜನಜೀವನದ ವಿಷಮತೆ, ಸಂದಿಗ್ಧತೆಗಳನ್ನು ಇವರಿಬ್ಬರೂ ತಾತ್ತ್ವಿಕವಾಗಿ ವಿವೇಚಿಸಿದ್ದಲ್ಲದೆ ಅವುಗಳನ್ನು ಸಾಹಿತ್ಯಿಕವಾಗಿಯೂ ಅಭಿವ್ಯಕ್ತಿಸಿದವರು. ಪಾರಂಪರಿಕವಾಗಿ ಬಂದ ನಾಟಕ ವಿನ್ಯಾಸದಲ್ಲಿಯೇ ಜೀವನದಲ್ಲಿನ ನಿರರ್ಥಕತೆ ಮತ್ತು ಅಸಾಂಗತ್ಯಗಳನ್ನು ರೂಪಿಸಿದವರು. ಸುಸಂಗತವಾದ ನಾಟಕೀಯ ಬಂಧದಲ್ಲಿ ಜೀವನದ ಅಸಾಂಗತ್ಯವನ್ನು ಚಿತ್ರಿಸಿದರು. ಯಾವುದೇ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿ ಉಂಟಾದ ಬದಲಾವಣೆಗಳು ಮನುಷ್ಯನ ಸ್ಥಿತಿಯನ್ನು ಪೂರ್ಣವಾಗಿ ಬದಲಾಯಿಸಲಾರವು ಎಂಬುದು ಕಮುನಂತಹವರ ಧೋರಣೆಯಾಗಿತ್ತು.
ಮನುಷ್ಯ ಜೀವನದ ವಿಷಮತೆಯನ್ನು ಇವರಷ್ಟೇ ತೀವ್ರವಾಗಿ ಚಿತ್ರಿಸುವ ಬರ್ಟಾಲ್ಟ್ ಬ್ರೆಕ್ಟ್‍ನ (1898 - 1956) ಧೋರಣೆ ಭಿನ್ನವಾದದ್ದಾಗಿದೆ. ಮನುಷ್ಯನ ಸಾಮಾಜಿಕ ಜೀವನದ ವಿಷಮತೆ ಎನ್ನುವುದು ಆಧ್ಯಾತ್ಮಿಕ ಸತ್ಯವಲ್ಲ, ಅದು ಸಾಮಾಜಿಕ, ರಾಜಕೀಯ ವ್ಯವಸ್ಥೆಗಳ ಫಲ. ಈ ವ್ಯವಸ್ಥೆಗಳನ್ನು ಬದಲಾಯಿಸುವುದರ ಮೂಲಕ ಮನುಷ್ಯ ಜೀವನದ ವಿಷಮತೆಯನ್ನು ತೊಡೆದುಹಾಕಬಹುದೆಂದು ಬ್ರೆಕ್ಟ್‍ನ ನಂಬಿಕೆ. ಮಾಕ್ರ್ಸ್‍ನ ಸಿದ್ಧಾಂತಗಳಿಂದ ಪ್ರಭಾವಿತನಾದ ಬ್ರೆಕ್ಟ್ ಸಾಮಾಜಿಕ ಬದಲಾವಣೆಯನ್ನು ಬಯಸುವವನು ಮತ್ತು ಮನುಷ್ಯನ ಜೀವನವನ್ನು ಹೇಗೆ ಉತ್ತಮಪಡಿಸಬೇಕೆಂಬುದರ ಬಗೆಗೆ ಕಾಳಜಿಯುಳ್ಳವನು. ಈ ವಿಚರದಲ್ಲಿ ಇವನು ಅಸ್ತಿತ್ವವಾದಿ ಲೇಖಕರಿಗಿಂತ ಭಿನ್ನನಾಗುತ್ತಾನೆ. ಈ ಹಿನ್ನೆಲೆಯಲ್ಲಿ ಇವನು ತನ್ನ ಈ ನಿಲುವನ್ನು ನಾಟಕವಾಗಿಸುವ ಪ್ರಯತ್ನದಲ್ಲಿ, ಅದಕ್ಕೆ ನಾಟಕೀಯ ವಿನ್ಯಾಸವನ್ನು ರೂಪಿಸುವ ಪ್ರಯತ್ನ ಮಾಡಿದ. ಇದರ ಫಲವಾಗಿ ರೂಪಗೊಂಡದ್ದು ಇವನ ಎಪಿಕ್ ನಾಟಕ ಸಿದ್ಧಾಂತ. ಈ ಸಿದ್ಧಾಂತವನ್ನು ರೂಪಿಸುವಲ್ಲಿ ಇವನಿಗೆ ಪೌರಾತ್ಯ ನಾಟಕ ರಂಗಭೂಮಿ ಗಾಢವಾಗಿ ಪ್ರಭಾವ ಬೀರಿತು.
ಬ್ರೆಕ್ಟ್ ನಾಟಕ ಬರೆಯಲು ಪ್ರಾರಂಭಿಸಿದಾಗ ಜರ್ಮನಿಯಲ್ಲಿ ಎಕ್ಸ್‍ಪ್ರೆಷನಿಸ್ಟರು ಪ್ರಬಲರಾಗಿದ್ದರು. 1918 ರಲ್ಲಿ ಇವನು ಬರೆದ ಮೊದಲ ನಾಟಕ `ಬಾಲ್. ಇದು ಎಕ್ಸ್‍ಪ್ರೆಷನಿಸಮ್‍ನಿಂದ ಪ್ರಭಾವಿತವಾದದ್ದು. ಎಪಿಕ್ ನಾಟಕತತ್ತ್ವ ರೂಪುಗೊಳ್ಳುವಲ್ಲಿಯವರೆಗೆ ಬ್ರೆಕ್ಟ್ ಅನೇಕ ಪ್ರಯೋಗಗಳನ್ನು ಮಾಡಿದ. ಹಲವಾರು ಪ್ರಭಾವಗಳನ್ನು ಅರಗಿಸಿಕೊಂಡ. ಈ ಅವಧಿಯವರೆಗೆ (1918) ಸೇರುವ ಇವನ ನಾಟಕಗಳು : ಎ ಮ್ಯಾನ್ಸ್ ಮ್ಯಾನ್, ದಿ ತ್ರಿ ಪೆನ್ನಿ ಆಪೆರಾ, ಫಾಲ್ ಆಫ್ ಟೌನ್ ಆಫ್ ಮಹಾಗೊನ್ನಿ.
ಬ್ರೆಕ್ಟ್ ಎಪಿಕ್ ನಾಟಕತತ್ತ್ವವನ್ನು ರೂಪಿಸಿದ ಅವಧಿಯಲ್ಲಿ ರಚಿಸಿದ ಮುಖ್ಯ ನಾಟಕಗಳಿವು : ದಿ ಗುಡ್ ವುಮೆನ್ ಆಫ್ ಸೆಜುವಾನ್, ದಿ ಲೈಫ್ ಆಫ್ ಗೆಲಿಲಿಯೊ, ದಿ ಮದರ್ ಕರೇಜ್, ದಿ ಕಕೇಷಿಯನ್ ಚಾಕ್ ಸರ್ಕಲ್, ಬ್ರೆಕ್ಟ್‍ನ ಎಪಿಕ್ ನಾಟಕ ಸಿದ್ಧಾಂತವನ್ನು ಸ್ಥೂಲವಾಗಿ ಹೀಗೆ ನಿರೂಪಿಸಬಹುದು. ವಾಸ್ತವವಾದಿ ನಾಟಕಕಾರ ರೀತಿಯಲ್ಲಿ ಸಮಕಾಲೀನ ವಸ್ತುವನ್ನು ವಾಸ್ತವವಾಗಿ ಬಳಸಿಕೊಳ್ಳಕೂಡದು. ನಾಟಕ ಕ್ರಿಯೆಯನ್ನು ಅಪರಿಚಿತಗೊಳಿಸಬೇಕು. ಹೀಗೆ ಮಾಡುವಲ್ಲಿ `ಹಿಸ್ಟಾರಿಫಿಕೇಶನ್ ಬಹಳ ಮುಖ್ಯ. ಅಂದರೆ ನಾಟಕಕ್ಕೆ ವಸ್ತುವನ್ನು ಭಿನ್ನ ಭಿನ್ನ ಕಾಲದೇಶಗಳಿಂದ ಆಯ್ಕೆಮಾಡಿಕೊಳ್ಳಬೇಕು. ಹೀಗೆ ಆಯ್ಕೆ ಮಾಡಿಕೊಂಡ ವಸ್ತುವಿನ ಪ್ರಾಚೀನತ್ವದ ಮೇಲೆ ಒತ್ತುಹಾಕಬೇಕು. ಅಂದರೆ, ಪ್ರೇಕ್ಷಕನಿಗೆ ಆ ಕ್ರಿಯೆ ನಡೆದ ಕಾಲ ದೇಶದಲ್ಲಿ ತಾನಿದ್ದಿದ್ದರೆ ಒಂದು ನಿರ್ದಿಷ್ಟ ಪ್ರತಿಕ್ರಿಯೆ ತೋರಿಸುವ ಮೂಲಕ ಕಾರ್ಯಪ್ರವೃತ್ತನಾಗಿರುತ್ತಿದ್ದೆನೆನ್ನಿಸುವಂತಿರಬೇಕು. ಆಗ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯ ಹಾಗೂ ಆವಶ್ಯಕ ಎಂಬ ಭಾವನೆ ಪ್ರೇಕ್ಷಕನಿಗೆ ಉಂಟಾಗುತ್ತದೆ. ಈ ಪರಿಣಾಮವನ್ನು, ನಾಟಕದ ಕೃತಕತೆ (ಮೇಕ್ ಬಿಲೀವ್) ರಂಗ ಪ್ರಯೋಗದ ಸಂದರ್ಭದಲ್ಲಿ ಪ್ರೇಕ್ಷಕರ ಗಮನಕ್ಕೆ ತರುತ್ತಿರಬೇಕು. ಇದಕ್ಕಾಗಿ ಹಾಡುಗಳು, ಮಧ್ಯೆ ಮಧ್ಯೆ ಕಥಾನಿರೂಪಣೆ, ಚಲನಚಿತ್ರಗಳಾಗಿ ತೆಗೆದ ಘಟನೆಗಳ ಉಪಯೋಗ ಇವುಗಳನ್ನು ಮಾಡಬಹುದು. ನಾಟಕವೆಂದರೆ ಅದು ಚಿತ್ರಿಸುವ ಜೀವನದ ಮೇಲಿನ ವ್ಯಾಖ್ಯಾನವಾಗಿರಬೇಕು. ಅದನ್ನು ಪ್ರೇಕ್ಷಕ ಸದಾ ಜಾಗೃತ ಮನಸ್ಕನಾಗಿದ್ದು ವಿಮರ್ಶಾತ್ಮಕವಾಗಿಯೇ ನೋಡಬೇಕು. ನಾಟಕ ಕ್ರಿಯೆಯಲ್ಲಿ ಪ್ರೇಕ್ಷಕಸದಾ ತಲ್ಲೀನನಾಗದಂತೆ ನಾಟಕ ವಿನ್ಯಾಸ ಮತ್ತು ಪ್ರಯೋಗ ಇರಬೇಕು. ನಾಟಕ ಪ್ರಯೋಗದ ಪ್ರತಿಯೊಂದು ಅಂಶವೂ ತ್ಯಕ್ತತೆಗೆ (ವಿಲಿಯನೇಷನ್) ಸಾಧಕನಾಗಬೇಕು. ಸೀನರಿ, ಸಂಗೀತ ಮೊದಲಾದ ರಂಗಪರಿಕರಗಳೂ ಕ್ರಿಯೆಯ ಮೇಲೆ ಟೀಕೆ ಮಾಡುವಂತಿರಬೇಕು. ರಂಗಸಜ್ಜಿಕೆ ಆದಷ್ಟು ಪ್ರೇಕ್ಷಕರ ಎದುರಿಗೇ ನಡೆಯಬೇಕು. ಇವೆಲ್ಲದರ ಉದ್ದೇಶ ನಾಟಕದ ಪರಿಣಾಮ ಪ್ರೇಕ್ಷಕನ ಮೇಲೆ ಪ್ರಭಾವ ಬೀರಿ ನಾಟಕ ಮಂದಿರದ ಹೊರಗೂ ಅವನು ಕ್ರಿಯಾಶೀಲನಾಗುವಂತೆ ಪ್ರಚೋದಿಸಬೇಕು. ಸಾಮಾಜಿಕ ಬದಲಾವಣೆಗೆ ನಾಟಕ ಕಾರಣವಾಗಿರಬೇಕು.
ಬ್ರೆಕ್ಟ್ ತನ್ನ ದೇಶ ಪರ್ಯಟನೆಯಿಂದ ಈಸ್ಟ್ ಬರ್ಲಿನ್‍ಗೆ ಹಿಂದುರಿಗಿದ ಅನಂತರ ಬರ್ಲಿನರ್ ಎನ್‍ಸೆಂಬಲ್ ಎಂಬ ತನ್ನದೇ ಆದ ನಾಟಕ ಕಂಪನಿಯನ್ನು ಸ್ಥಾಪಿಸಿ ತನ್ನ ನಾಟಕಗಳನ್ನು ಪ್ರಯೋಗಿಸಿದ್ದಲ್ಲದೇ ಇತರರ ನಾಟಕಗಳನ್ನು ಪ್ರಯೋಗಿಸಿದ. ಇವನ ಪತ್ನಿ ಹೆಲನ್‍ವೀಗಲ್ ಈ ನಾಟಕಗಳಲ್ಲಿ ಸಾಮಾನ್ಯವಾಗಿ ಪ್ರಧಾನ ಸ್ತ್ರೀ ಪಾತ್ರ ವಹಿಸುತ್ತಿದ್ದಳು. ಈಕೆ 1956ರಲ್ಲಿ ಬ್ರೆಕ್ಟ್ ತೀರಿಕೊಂಡ ಮೇಲೆ ಈ ಕಂಪನಿಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು ಮುಂದುವರಿದಳು. ಯುರೋಪಿನ ಮತ್ತು ಅಮೆರಿಕದ ಹಲವಾರು ಕಡೆಗಳಲ್ಲಿ ಯಶಸ್ವಿಯಾಗಿ ನಾಟಕಗಳ ಪ್ರದರ್ಶಗಳನ್ನು ಈ ಕಂಪನಿ ನೀಡಿತು. ಪ್ರೇಕ್ಷಕರಿಗೆ ಎಪಿಕ್ ನಾಟಕದ ಸಂದೇಶವಿದು: "ಎಚ್ಚರಗೊಳ್ಳಿ" ನೀವೇ ಯೋಚಿಸಿ".
ಜಾಗತಿಕವಾಗಿ ಎಪಿಕ್ ನಾಟಕದ ಪ್ರಭಾವ ಗಾಢವಾದದ್ದು. ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಭಾಷೆಗಳ ನಾಟಕಗಳ ಮೇಲೆ ರಚನಾವಿನ್ಯಾಸದ ದೃಷ್ಟಿಯಿಂದ ಮತ್ತು ರಂಗಪ್ರಯೋಗದ ದೃಷ್ಟಿಯಿಂದ ಇದು ಮಾಡಿದ ಪ್ರಭಾವ ಗಾಢವೂ ಅರ್ಥಪೂರ್ಣವಾದದ್ದು ಆಗಿದೆ.
1950ರ ದಶಕದಲ್ಲಿ ಪ್ರಾಚುರರ್ಯಕ್ಕೆ ಬಂದ ಇನ್ನೊಂದು ಮುಖ್ಯ ನಾಟಕ ವಿಧಾನವೆಂದರೆ ಅಸಂಗತ ನಾಟಕ ಅಥವಾ ಥಿಯೇಟರ್ ಆಫ್ ದಿ ಅಬ್ಸರ್ಡ ಪರಂಪರೆಯಿಂದ ಬಂದ ನಾಟಕ ರಚನಾ ವಿಧಾನಕ್ಕೆ ಪ್ರತಿಯಾಗಿ ರೂಪುಗೊಂಡ ನಾಟಕ ಪರಂಪರೆ ಇದು. ಸಾಮಾನ್ಯವಾಗಿ ನಾಟಕ ಎಂದರೆ ಸಂವಿಧಾನ. ಪಾತ್ರಪೋಷಣೆ ಇವು ಇದ್ದೇ ಇರುತ್ತದೆ. ಆದರೆ ಅಬ್ಸರ್ಡ್ ಪರಂಪರೆಯ ನಾಟಕಗಳಲ್ಲಿ ಈ ಯಾವುದೇ ಅಂಶಗಳೂ ಇಲ್ಲದೆ ಅವುಗಳು 'ನಾಟಕಗಳಾಗುವುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ. ಈ ನಾಟಕಗಳಲ್ಲಿ 'ಕ್ರಿಯೆ ಗೊಂದು ಹಂತದಿಂದ ಇನ್ನೊಂದು ಹಂತಕ್ಕೆ ಬೆಳೆಯುವುದಿಲ್ಲ. ಪಾತ್ರಗಳು ಕೂಡ ನಾಟಕದ ಆರಂಭದಿಂದ ಮುಗಿಯುವವರೆಗೆ ಯಾವ ಬೆಳೆವಣಿಗೆಯನ್ನೂ ಕಾಣವೆ ಇರುತ್ತದೆ. ಅಂದರೆ ಕ್ರಿಯೆ ಮತ್ತು ಪಾತ್ರಗಳ ಬೆಳೆವಣಿಗೆ ಸ್ಥಗಿತವಾಗಿರುತ್ತದೆ. ಜೀವನದ ಅಸಾಂಗತ್ಯವನ್ನು ಸಾತ್ರ್ರ ಮತ್ತು ಕಮು ಚಿತ್ರಿಸುವ ರೀತಿಗೂ ಅಬ್ಸರ್ಡ್ ನಾಟಕಾರವೆಂದು ಕರೆಯಲಾಗುವ ಸ್ಯಾಮ್ಯುಲಯಲ್ ಬೆಕೆಟ್, ಯೂಜಿನ್ ಅಯನೆಸ್ಕೂ, ಜೀನ್‍ಜೆನೆ ಮೊದಲಾದವರು ಚಿತ್ರಿಸುವುದಕ್ಕೂ ಒಂದು ಮೂಲಭೂತವಾದ ವ್ಯತ್ಯಾಸವಿದೆ. ಅದೆಂದರೆ ಸಾತ್ರ್ರ ಮತ್ತು ಕಮು ಸಾಂಪ್ರದಾಯಿಕ ನಾಟಕದ ವಿನ್ಯಾಸದಲ್ಲಿ ಅಸಂಗತತೆಯ ಅನುಭವವನ್ನು ಚಿತ್ರಿಸಿದರೆ ಅಬ್ಸರ್ಡ್ ನಾಟಕಕಾರರು ಆ ಅಸಂಗತತೆಯ ಅನುಭವಕ್ಕೆ ತಕ್ಕ ಅಸಂಗತ ಬಂಧದಲ್ಲೇ ಅದನ್ನು ಚಿತ್ರಿಸುತ್ತಾರೆ. ಅಂದರೆ ಇಲ್ಲಿ ವಸ್ತು ಬಂಧ ಅವಿನಾಸಂಬಂಧ ಪಡೆದುಕೊಳ್ಳುತ್ತದೆ. ಅಬ್ಸರ್ಡ್ ನಾಟಕಕಾರ ನಾಟಕಗಳನ್ನು ಅಧ್ಯಯನಮಾಡಿ ಈ ಬಗೆಯ ನಾಟಕಗಳಿಗೆ ಥಿಯೇಟರ್ ಆಫ್ ದಿ ಅಬ್ಸರ್ಡ್ ಎಂಬ ಪದವನ್ನು ಸಂಗೀತಶಾಸ್ತ್ರದಿಂದ ಎರವಲು ಪಡೆಯಲಾಗಿದೆ. ಸಂಗೀತ ಶಾಸ್ತ್ರದಲ್ಲಿ ಅಬ್ಸರ್ಡ್ ನೊಟ್ ಎಂದರೆ ಹೊಂದಿಕೊಳ್ಳಲಾರದ ಲಯ ಎಂದು ಅರ್ಥ ಹಾಗೆಯೇ ಸಾಹಿತ್ಯದಲ್ಲಿ ಕೂಡ ಹೊಂದಿಕೊಳ್ಳಲಾರದ್ದು ಎಂಬ ಅರ್ಥದಲ್ಲಿಯೇ ಈ ಪದ ಬಳಕೆಗೊಳ್ಳುತ್ತದೆ. ಸಾಮಾಜಿಕ ಸದರ್ಭಕಕೆ ಯಾವುದೇ ರೀತಿಯಲ್ಲಿ ಒಗ್ಗಿಕೊಳ್ಳಲಾರದ ವ್ಯಕ್ತಿಗಳು ಇಲ್ಲಿ ಪಾತ್ರಗಳಾಗಿ ಬರುತ್ತಾರೆ. ಯಾವುದೇ ತರ್ಕಕ್ಕೆ ಸಿಕ್ಕದ ಅಸಂಗತಾನುಭವವನ್ನು ತರ್ಕಾದತೀತವಾದ ಬಂಧದಲ್ಲಿ ಹಿಡಿದಿಡುವ ನಾಟಕಗಳ ರಚನಾವಿಧಾನವನ್ನು ಇಮಿಡೇಡಿವ್ ಫಾರ್ಮ್ ಎಂದು ಕರೆಯಲಾಗುತ್ತದೆ.
ಈ ನಾಟಕ ಪರಂಪರೆಯಲ್ಲಿ ಬರುವ ಬಹಳ ಮುಖ್ಯ ನಾಟಕಕಾರವೆಂದರೆ ಸ್ಮಾಮ್ಯುಯಲ್ ಬೆಕೆಟ್ ಇವನು ಆಂಗ್ಲೋ ಐರಿಷ್ ಕುಟುಂಬದಲ್ಲಿ 1906ರಲ್ಲಿ ಡಬ್ಲಿನ್‍ನಲ್ಲಿ ಹುಟ್ಟಿದ. ಆದರೂ ಇವನು ತನ್ನ ಕೃತಿಗಳನ್ನು ರಚಿಸಿದ್ದು ಹೆಚ್ಚಾಗಿ ಫ್ರೆಂಚ್ ಭಾಷೆಯಲ್ಲಿ ಜೇಮ್ಸ್ ಜಾಯ್ಸ್‍ನ ನಿಕಟವರ್ತಿಯಾಗಿದ್ದ ಇವನು ಜಾಯ್ಸ್‍ನಿಂದ ಗಾಢವಾಗಿ ಪ್ರಭಾವಿತನಾದ. ಅನೇಕ ತಾತ್ಕಾಲಿಕ ವೃತ್ತಿಗಳಲ್ಲಿ ಕೆಲಸಮಾಡಿ ಕೊನೆಗೆ 1937ರಲ್ಲಿ ಪ್ಯಾರಿಸ್‍ಗೆ ಬಂದು ಶಾಶ್ವತವಾಗಿ ನೆಲಸಿದ. ಎವನು ಮರ್ಫಿ (1938) ವ್ಯಾಟ್ (1958) ಮೊಲಾಯ್ (1915) ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಆದರೂ ಇವನು ಜಾಗತಿಕವಾಗಿ ಪ್ರಸಿದ್ಧನಾದದ್ದು ತನ್ನ ನಾಟಕಗಳಿಂದ ಇವನ ಸುಪ್ರಸಿದ್ಧ ನಾಟಕ ವೆಯ್‍ಟಿಂಗ್ ಪಾರ್ ಗೋಡೊ (1903) ಇದು ಮೊದಲು ಪ್ಯಾರಿಸ್‍ನಲ್ಲಿ ರಂಗಭೂಮಿಯ ಮೇಲೆ ಪ್ರಯೋಗಗೊಂಡದ್ದು 1953ರಲ್ಲಿ ನಿರರ್ಥಕ ಪ್ರದತೀಕ್ಷೆ ಅಥವಾ ನಿರೀಕ್ಷೆ ಈ ನಾಟಕದ ವಸ್ತು. ವ್ಲಾದಿಮೀರ್ ಮತ್ತು ಎಸ್ಟ್ರೊಗೆನ್ ಎಂಬ ಇಬ್ಬರು ಅಲೆಮಾರಿಗಳು ಗೋಡೊ ಎಂಬಾತನ ಆಗಮನಕ್ಕಾಗಿ ನರೀಕ್ಷಿಸುವುದು ಈ ನಾಟಕದ ವಸ್ತು. ವ್ಲಾದಿಮೀರ್ ಮತ್ತು ಎಸ್ಟ್ರೊಗೆನ್ ಎಂಬ ಇಬ್ಬರು ಅಲೆಮಾರಿಗಳು ಗೋಡೋ ಎಂಬಾದತನ ಆಗಮಕ್ಕಾಗಿ ನಿರೀಕ್ಷಣೆ ನಾಟಕದಲ್ಲಿ ಮನುಷ್ಯ ಜೀವನದ ಅನಿರ್ದಿಷ್ಟ ಸ್ಥಿತಿಗೆ, ಅರ್ಥಹೀನತೆಗೆ ಪ್ರತದೀಕವಾಗುತ್ತದೆ. ಬೆಕೆಟನನ್ನು ನಿರಂತರವಾಗಿ ಕಾಡಿಸಿದ ವಸ್ತುಗಳಲ್ಲಿ ಹೆಚ್ಚು ಸಂಕೀರ್ಣವೂ ಗಾಢವೂ ಆಗಿದ್ದದ್ದೆಂದರೆ ದೇವರು ದೇವರನ್ನು ದ್ವೇಷಿಸುವ ಇವನು. ದೇವರನ್ನು ತನ್ನ ನಾಚಿಕೆಗಳಲ್ಲಿ ಬರುವ ಟೈರೆಂಟ್‍ಗಳ ಜೊತೆ ಕರಗಿಸಿಬಿಡುತ್ತಾನೆ. ಕ್ರಿಸ್ತನನ್ನು ಉದ್ದಾರಕನೆಂದು ನೋಡದೆ ಸಾಮಾನ್ಯ ಮಾನವನಂತೆ ನೋವನ್ನು ಅನುಭವಿಸುವ ವ್ಯಕ್ತಿಯನ್ನಾಗಿ ಕಾಣುತ್ತಾನೆ. ಮುಕ್ತಿ ಎಂಬುದು ಒಂದು ಕಿನ್ನರಕಥೆ, ಅದು ಭಯಂಕರ ವಾದದ್ದು ಏಕೆಂದರೆ ಅದು ಬಳಲಿದ ಚೇತನಗಳಿಗೆ ಮೋಹಕವಾದದ್ದು ಮತ್ತು ಮೋಸಮಾಡುವಂಥದ್ದು. ಭಯಂಕರ ಸತ್ಯವೆಂದರೆ ಸಾವು ಮಾತ್ರ. ಅದನ್ನು ಸಹನೀಯ ಮಾಡುವ ಎಲ್ಲ ಪ್ರಯತ್ನಗಳೂ ಅರ್ಥರಹಿತವಾದಂಥವೂ ಮತ್ತು ಮಥ್ಯೆಗಳೂ.
ಮನಷ್ಯನ ಮೂಲಭೂತವಾದ ಗುರಿಯ ಬಗೆಗೆ ಸದಾ ಆಸಕ್ತನಾಗಿರುವಂಥವನು ಆದರೆ ಆ ಗುರಿ ನಿರರ್ಥಕವಾದ್ದು ಅರಿತು ಕೊಂಡಿರುವಂಥವನು ಮನುಷ್ಯ ಜೀವನದ ಈ ಒಂದು ಅಸ್ತವ್ಯಸ್ತತೆಯನ್ನು ಗೋಜಲನ್ನು ಒಳಗೊಳ್ಳುವ ಒಂದು ನಾಟಕೀಯ ರೂಪವನ್ನು ಕಂಡುಕೊಳ್ಳುವುದೆ ಒಬ್ಬ ನಾಟಕಕಾರನ ಕೆಲಸವಾಗಿದೆ ಅಂಥ ಕಲೆ ಸೂಚನಾತ್ಮಕವಾದದ್ದಾರಿರುತ್ತದೆ; ಚರ್ಚಾತ್ಮಕವಾದದ್ದಾಗಿರುವುದಿಲ್ಲ. ಅಬ್ಸರ್ಡ್ ನಾಟಕರೂಪ ಈ ರೀತಿ ಸೂಚನಾತ್ಮಕವಾದದ್ದು ಬೆಕೆಟ್‍ನ ಎರಡನೆಯ ನಾಟಕ ಎಂಡ್‍ಗೇಮ್ (1957). ಅನಂತರ ಕ್ರ್ಯಾಪ್ಸ್ ರಾಸ್ಟ್ ಟೇಪ್ ಆಲ್ ದಟ್ ಫಾಲ್, ಎಂಬರ್ಸ್‍ಡ ಮೊದಲಾದ ನಾಟಕಗಳನ್ನು ರಚಿಸಿದ ಕಮ್ ಎಂಡ್ ಗೊ (1965), ದಿ ಪ್ಲೆ (1963) ಮೊದಲಾದ ನಾಟಕಗಳನ್ನು ಬೆಕೆಟ್ ಬರೆದಿದ್ದರೂ ಇವನ ಸರ್ವ ಶ್ರೇಷ್ಟ ಕೃತಿಯೆಂದರೆ ವೆಯ್‍ಟಂಗ್ ಫಾರ್ ಗೋಡೋ.
ಬ್ಲಿನ್ ಎಂಬ ಸುಪ್ರಸಿದ್ದ ನಿರ್ದೇಶಕ ವೆಯಿಟಿಂಗ್ ಫಾರ್ ಗೋಡೋ ನಾಟಕವನ್ನು ಮೊದಲ ಬಾರಿಗೆ ರಂಗದ ಮೇಲೆ ತಂದವನು. ಬೆಕೆಟ್‍ನ ನಾಟಕಗಳಿಗೆ ಬೇಕಾಗುವ ರಂಗಸಜ್ಜಿಕೆ ಬಹಳ ಸರಳವಾದುದು. ಇಲ್ಲಿನ ರಂಗಸಜ್ಜಿಕೆ ಎಂದರೆ ಒಂದು ಹಳ್ಳಿಗಾಡಿನ ರಸ್ತೆ ಮತ್ತು ಒಂದು ಒಣ ಮರ, ಎಂಡ್‍ಗೇಮ್‍ಗೆ ಬೇಕಾಗುವ ರಂಗಸಜ್ಜಿಕೆ ಎಂದರೆ ಒಂದು ಸರಳವಾದ ಸಣ್ಣಕೋಣೆ, ಅಲ್ಲಿ ಎರಡು ಕಸದ ಬುಟ್ಟಿಗಳು ಒಂದು ಕುರ್ಚಿ, ಗೋಡೆಯ ಮೇಲೆ ಒಂದು ಕುರ್ಚಿ ಮೇಜಿನ ಮೇಲೆ ಒಂದು ಟೇಪ್‍ರೆಕಾರ್ಡರ್, ಹಿನ್ನೆಲೆಯಲ್ಲಿ ಆಕಾಶ ಗೋಳಾಕೃತಿಯಲ್ಲಿ ಬಾಗಿ ದೂರ ದಿಗಂತದಲ್ಲಿ ಭೂಮಿಗೆ ಸ್ಪರ್ಶಿಸುತ್ತಿರುವಂತೆ ಯೋಜಿಸಲಾದ ಒಂದು ನೀಲಿ ಪರದೆ, ಹೀಗೆ ಒಂದು ಗರಿಷ್ಠ ಪ್ರಮಾಣದ ಸರಳತೆ ಬೆಕೆಟ್‍ನ ಆದರ್ಶ ರಂಗಮಂಚದ ಮೇಲಿನ ಈ ಪ್ರಜ್ಞಾಪೂರ್ವಕವಾದ ಬರಡುತನ, ಪ್ರೇಕ್ಷಕರನ್ನು ತಾವು ಮುಂದೆ ನೋಡಲಿರುವ ನಾಟಕಕ್ಕೆ ಸಿದ್ಧಮಾಡುತ್ತದೆ. ಈ ಹಿನ್ನಲೆ ಸಾಂಪ್ರದಾಯಿಕ ರಂಗದ ಕತೆಯನ್ನು ಒಟ್ಟಿಗೆ ಬದುಕುವಂತಹವು. ಈ ಎಲ್ಲ ಪಾತ್ರಗಳ ವೈಶಿಷ್ಟ್ಯವೆಂದರೆ ಅವುಗಳ ಸರಳತೆ, ಅಲ್ಲದೆ ಬೆಕೆಟ್‍ನ ನಾಟಕಗಳ ಕ್ರಿಯೆ 'ಸ್ಥಗಿತ (ಕಾನ್‍ಸ್ಟಂಟ್) ವಾದದ್ದು ಅದು ಚಲಿಸುವುದೇ ಇಲ್ಲ. ಇವನ ನಾಟಕಕಾರಗಳ ತಂತ್ರ, ಸಾಂಪ್ರದಾಯಿಕ ಪಾಶ್ಚಾತ್ಯ ನಾಟಕ ಪರಂಪರೆಯಿಂದ ಬಂದದ್ದಲ್ಲ. ಅದು ಪೌರಾತ್ಯ ನಾಟಕ ಪರಂಪರೆ ಮತ್ತು ಸರ್ಕಸ್ ಹಾಗೂ ಮ್ಯೂಸಿಕಲ್ ಹಾಲ್ ತಂತ್ರಗಳಿಂದ ಬಂದಂಥದ್ದು. ಹೀಗೆ ಬೆಕೆಟ್ ಮೈಮ್ ಮತ್ತು ಕ್ಲೌನರಿಗಳನ್ನು ತನ್ನ ನಾಟಕಗಳಲ್ಲಿ ಬಳಸಿಕೊಳ್ಳುತ್ತಾನೆ. ಇವನ ನಾಟಕಗಳು ಮನುಷ್ಯನ ಜೀವನದ ಶೂನ್ಯತೆಯನ್ನು ತುಂಬುವ ಪ್ರಯತ್ನಗಳನ್ನು ವ್ಯಂಜಿಸುವುದರಿಂದ ಅಲ್ಲಿ ಆ ತಂತ್ರಗಳು ಅರ್ಥಪೂರ್ಣವಾಗಿರುತ್ತವೆ.
1928ರಲ್ಲಿ ಹುಟ್ಟಿದ ಎಡ್ವರ್ಡ್ ಅಲ್ಟಿ ಅಮೆರಿಕದ ನಾಟಕಕಾರ. ಇವನ ದಿಜೂ ಸ್ಟೋರಿ (1958) ಮತ್ತು ದಿ ಅಮೆರಿಕನ್ ಡ್ರೀಂ (1961)- ಈ ನಾಟಕಗಳೂ ಅಬ್ಸರ್ಡ್ ಪರಂಪರೆಗೆ ಸೇರಿದಂತಹವು. ದಿ ಜೂ ಸ್ಟೋರಿ ಬರ್ಲಿನ್‍ನಲ್ಲಿ ಪ್ರಯೋಗಗೊಂಡಿತು (28 ಸೆಪ್ಟೆಂಬರ್ 1959). ಇದು ಅಮೆರಿಕದಲ್ಲಿ ಪ್ರಯೋಗಗೊಳ್ಳದೆ ಜರ್ಮನಿಯಲ್ಲಿ ಪ್ರಯೋಗಿಸಲು ನಿರಾಕರಿಸಿದ್ದೇ ಆಗಿದೆ. ಇದಕ್ಕೆ ಕೆಲವು ರಾಜಕೀಯ ಕಾರಣಗಳೂ ಅಲ್ಲದೆ ಈ ನಾಟಕ ಚಿಕ್ಕದಾಗಿದ್ದದ್ದೂ ಕಾರಣವಾಗಿದೆ ಕೊನೆಗೆ ನ್ಯೂ ಯಾರ್ಕ್‍ನಲ್ಲಿ 1960 ಜನವರಿ 14ರಂದು ಪ್ರಾವಿನ್ಸ್ ಟೌನ್ ಪ್ಲೇ ಹೌಸಿನಲ್ಲಿ ಬೆಕೆಟ್‍ನ 'ಕ್ರ್ಯಾಪ್ಸ್ ಲಾಸ್ಟ ಟೇಪ್ ನಾಟಕದೊಂದಿಗೆ ಪ್ರಯೋಗವಾಯಿತು. ಈ ನಾಟಕದಲ್ಲಿ ಮಾನವಕುಲದಿಂದಲೇ ತ್ಯಕ್ತನಾದ ಒಬ್ಬ ವ್ಯಕ್ತಿಯ ಚಿತ್ರಣವನ್ನು ನೀಡಲಾಗಿದೆ. ವ್ಯಕ್ತಿವ್ಯಕ್ತಿಗಳ ಮಧ್ಯದ ಸಂವಹನ ಸಾಧ್ಯತೆಗಳೇ ಇಲ್ಲವಾಗಿರುವ ಅಮೇರಿಕನ್ ಸಮಾಜದ ಅವಸ್ಥೆಯನ್ನು ಈ ನಾಟಕ ಸಾಂಕೇತಿಕ ವಾಗಿ ಚಿತ್ರಿಸುತ್ತದೆ. ಇವನ ಇನ್ನೊಂದು ನಾಟಕ ದಿ ಡೆತ್ ಆಫ್ ಬೆಸಿಸ್ ಸ್ಮಿತ್. ಈ ನಾಟಕವೂ ಮೊದಲು ಪ್ರಯೋಗಗೊಂಡದ್ದು ಬರ್ಲಿನ್‍ನಲ್ಲಿ ಹೂ ಈಸ್ ಅಪ್ರೈಡ್ ಆಫ್ ವರ್ಜಿನೀಯ (1962), ದಿ ಬ್ಯಾಲೆಡ್ ಆಫ್ ಸ್ಯಾಡ್ ಕೆಫೆ (1936), ಟೈನಿ ಆಲಿಸ್ (1964) ಮತ್ತು ಡೆಲಿಕೇಟ್ ಬ್ಯಾಲನ್ಸ್ (1966)- ಇವು ಇವನ ಮುಖ್ಯ ನಾಟಕಗಳು.
1912ರಲ್ಲಿ ರೊಮೇನಿಯದಲ್ಲಿ ಹುಟ್ಟಿದ ಮೈಜೀನ್ ಅಯನೆಸ್ಕೊ ಫ್ರೆಂಚ್ ಭಾಷೆಯಲ್ಲಿ ನಾಟಕಗಳನ್ನೂ ರಚಿಸಿದ 'ಥಿಯೇಟರ್ ಆಫ್ ದಿ ಅಬ್ಸರ್ಡ್ ನಾಟಕ ಪರಂಪರೆಯಲ್ಲಿ ಇವನದು ಮುಖ್ಯವಾದ ಹೆಸರು ಇವನ ಬಾಲ್ಯವೆಲ್ಲ ಪ್ಯಾರಿಸ್‍ನಲ್ಲಿ ಕಳೆಯಿತು. ಇವನ ತಾಯಿ, ಫ್ರೆಂಚ್ ತಂದೆ ರೊಮೇನಿಯನ್ ಅಯನೆಸ್ಕೋ ಕೆಲಕಾಲ ಫ್ರೆಂಚ್ ಭಾಷೆಯ ಅಧ್ಯಾಪಕನಾಗಿ ರೊಮೇನಿಯಲ್ಲಿ ಕೆಲಸ ಮಾಡಿದ 1936 ರಲ್ಲಿ ಇವನು ಪ್ರಾನ್ಸ್‍ಗೆ ಹಿಂದಿರುಗಿದ. ಇವನು ನಾಟಕ ರಚನೆಗೆ ಆರಂಭಿಸಿದ್ದು ಒಂದು ಆಕಸ್ಮಿಕ. ಇವನು ಇಂಗ್ಲಿಷ್ ಭಾಷೆಯನ್ನು ಕಲಿಯುವ ಪ್ರಯತ್ನದಲ್ಲಿದ್ದ ಆಗ ಇಂಗ್ಲಿಷ್ ಭಾಷೆಯನ್ನು ಕಲಿಯುವ ಪ್ರಯತ್ನದಲ್ಲಿದ್ದ ಆಗ ಇಂಗ್ಲಿಷ್ ಭಾಷೆಯನ್ನು ಕಲಿಯುವ ಸ್ವಯಂಬೋಧಿನಿಯೊಂದನ್ನು ಓದುತ್ತಿದ್ದ. ಆಗ ಇವನಿಗೆ ಸಂವಹನದ ಕ್ಲಿಷ್ಟತೆ ಎಂಬಕುದು ಅರಿವಿಗೆ ಬಂದು ಇದನ್ನೇ ವಸ್ತುವಾಗಿಟ್ಟುಕೊಂಡು ನಾಟಕವನ್ನೇಕೆ ಬರೆಯಬಾರದೆಂದು ಯೋಚಿಸಿ 'ದಿ ಬಾಲ್ಡ್ ಸಪ್ರ್ಯಾನೊ ಎಂಬ ತನ್ನ ಮೊದಲ ನಾಟಕವನ್ನು 1945ರಲ್ಲಿ ರಚಿಸಿದ.
ಅಯನೆಸ್ಕೋ ಸಂಪ್ರದಾಯಿಕ ನಾಟಕಕ್ಕೆ ಬದಲಾಗಿ ಅತಿರೇಕದ ಸಂದರ್ಭಗಳನ್ನುಳ್ಳ ಆಘಾತ ಉಂಟುಮಾಡುವ ರೀತಿಯ ನಾಟಕವನ್ನು ಬಯಸಿದವನು. ಬ್ರೆಕ್ಟ್‍ನ ನಾಟಕಗಳಿಗಿಂತಲೂ ತೀವ್ರವಾಗಿ ಇನ್ನೊಂದು ರೀತಿಯಲ್ಲಿ ಏಲಿಯನೇಷನ್ ಪರಿಣಾಮವನ್ನು ಉಂಟುಮಾಡುವಂತೆ ತನ್ನ ನಾಟಕಗಳನ್ನು ರಚಿಸಿದ. ಅದೇ ರಿತಿಯಲ್ಲಿ ನಾಟಕಗಳ ಪ್ರಯೋಗವನ್ನು ಮಾಡಬೇಕೆಂದು ಬಯಸಿದ ಭಾಷೆಯ ಸಂವಹನದ ಕ್ಲಿಷ್ಟತೆ, ವಸ್ತುಗಳು ವ್ಯಕ್ರಿಯನ್ನೇ ಮೀರಿ ಬೆಳೆದು ಅವನನ್ನು ಎಲ್ಲ ದಿಕ್ಕುಗಳಿಂದ ಆಕ್ರಮಿಸುವ ಆಧುನಿಕ ಜೀವನದ ಅವಸ್ಥೆ ಮನುಷ್ಯನ ಅಸಂಗತ ಸ್ಥಿತಿ, ಶೂನ್ಯತೆ ಇವುಗಳೇ ಇವನ ನಾಟಕಗಳ ಮುಖ್ಯ ವಸ್ತುವಾಗಿರುತ್ತದೆ. ದಿ ಲೆಸನ್ (1951) ನಾಟಕದಲ್ಲಿ ಭಾಷೆಯ ಸಂವಹನದ ಕ್ಲಿಷ್ಠತೆಯ ವಸ್ತುವನ್ನು ಅನ್ವೇಷಿಸಲಾಗಿದೆ. ಪಾಠಹೇಳಿಕೊಡುತ್ತಿದ್ದ ತನ್ನ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಹತ್ಯೆ ಮಾಡುವುದರೊಂದಿಗೆ ಇದು ಅಂತ್ಯವಾಗುತ್ತದೆ. ಒಬಿಡಿಯನ್ಸ (1950), ದಿ ಚರ್ ಈಸ್ಟಿನ್ ಎಗ್ಸ್ (1951)- ಎರಡು ನಾಟಕಗಳಲ್ಲೂ ವ್ಯಕ್ತಿ ವ್ಯಕ್ತಿಯನ್ನು ಈಗಾಗಲೇ ಇರುವ ವ್ಯವಸ್ಥೆಯೊಂದಿಗೆ ಒತ್ತಾಯ ಪೂರ್ವಕವಾಗಿ ಹೊಂದಿಕೊಳ್ಳುವಂತೆ ಮಾಡುವುದರ ಭೀಕರತೆಯನ್ನು ಚಿತ್ರಿಸುತ್ತದೆ. ದಿ ಚೇರ್ಸ್ (1951) ನಾಟಕದಲ್ಲಿ ವೃದ್ಧ ದಂಪತಿಗಳಿಬ್ಬರೂ ತಾವಿರುವ ಕೋಣೆಯನ್ನೆಲ್ಲ ಒಂದೊಂದಾಗಿ ಖಾಲಿ ಕುರ್ಚಿಗಳನ್ನು ತಂದಿಡುವ ಮೂಲಕ ತುಂಬಿಬಿಡುತ್ತಾರೆ. ಮನೆಗೆ ಬಂದ ಅತಿಥಿಗಳು ಅವುಗಳಲ್ಲಿ ಕುಳಿತುಕೊಂಡಿರುವಂತೆ ಭ್ರಮಿಸುತ್ತಾರೆ. ಆ ಭಾಷಣ ಅಸಂಗತವೂ ಅರ್ಥವಿಲ್ಲದ್ದು ಆಗಿರುತ್ತದೆ. ನಾಟಕ ಮುಕ್ತಾಯವಾಗುವಷ್ಟರಲ್ಲಿ ಪ್ರೇಕ್ಷಕರಿಗೆ. ಜೀವನದಲ್ಲಿ ಶೂನ್ಯ ಹೇಗೆ ವ್ಯಕ್ತಿಯನ್ನು ಶೋಷಿಸಿಬಿಡಬಹುದು ಎಂಬ ಅನುಭವವನ್ನು ತಂದು ಕೊಡುತ್ತದೆ. ದಿ ವಿಕ್ಟಿಮ್ಸ್ ಆಫ್ ಡ್ಯೂಟಿ (1952) ಎಂಬ ನಾಟಕ ಸಾತ್ರ್ರರನ ಅಸ್ತಿತ್ವವಾದ ಮತ್ತು ಫ್ರಾನ್ಸ್‍ನ ಮನೋವಿಶ್ಲೇಷಣೆ ಎರಡನ್ನೂ ವಿಡಂಬಿಸುತ್ತದೆ. ಈ ನಾಟಕ ಒಂದು ಥ್ರಿಲ್ಲರ್ ಮತ್ತು ಒಂದು ಮನೋವಿಶ್ಲೇಷಣಾತ್ಮಕ ನಾಟಕ ಎರಡೂ ಆಗಿದೆ. ಈ ಎಲ್ಲ ನಾಟಕಗಳೂ ಏಕಾಂತ ನಾಟಕಗಳಾಗಿವೆ.
ಏಕಾಂತ ನಾಟಕಗಳ ಅನಂತರ ಬಂದ ಇವನ ಪೂರ್ಣಪ್ರಮಾಣದ ಮೂರು ಅಂಕಗಳ ನಾಟಕಗಳಿವು: ಅಮೆಡಿ ಅಥವಾ ಹೌಟು ಗೆಟ್ ರಿಡ್ ಆಫ್ ಇಟ್ (1953) ಎಂಬ ನಾಟಕ ವಿವಾಹವಾದ ಗಂಡುಹೆಣ್ಣಿನ ಸಂಬಂಧ ಅರ್ಥರಹಿತವಾಗುತ್ತಿರುವುದನ್ನು ಸಾಂಕೇತಿಕವಾಗಿ ಚಿತ್ರಿಸುತ್ತದೆ.
ದಿ ಕಿಲ್ಲರ್ (1957) ಎಂಬ ನಾಟಕದಲ್ಲಿ ಒಂದು ನಗರದಲ್ಲಿ ಒಬ್ಬ ಹುಚ್ಚ ಅನೇಕರ ಕೊಲೆ ಮಾಡಿರುತ್ತಾನೆ. ಅವನನ್ನು ಹಿಡಿಯುವ ಪ್ರಯತ್ನವನ್ನು ಚಿರಂಗರ್ ಎಂಬ ವ್ಯಕ್ತಿ ಮಾಡಿ ಕೊನೆಗೆ ತಾನೇ ಅವನಿಂದ ಕೊಲೆಗೀಡಾಗುತ್ತಾನೆ ರೈನೊಸರಸ್ (1958) ನಾಟಕದಲ್ಲಿ ಒಬ್ಬ ವ್ಯಕ್ತಿ ತನ್ನ ಸುತ್ತಮುತ್ತಲಿನ ಎಲ್ಲ ವ್ಯಕ್ತಿಗಳೂ ಘೇಂಡಾಮೃಗಗಳಾಗಿ ರೂಪಾಂತರ ಹೊಂದುತ್ತಿರುವುದನ್ನು ನಿಸ್ಸಹಾಯಕವಾಗಿ ನೋಡುತ್ತಿರುತ್ತಾನೆ. ಅವನೊಬ್ಬನೇ ಮನುಷ್ಯರ ಪ್ರತಿನಿಧಿಯಾಗಿ ಉಳಿಯುತ್ತಾನೋ ಅಥವಾ ಅವನೋ ಘೇಂಡಾಮೃಗವಾಗಿ ಪರಿವರ್ತಿತನಾಗುತ್ತಾನೋ ಎಂಬ ಅನುಮಾನದಲ್ಲಿ ನಾಟಕ ಮುಕ್ತಾಯವಾಗುತ್ತದೆ.
ಪೂರ್ಣಪ್ರಮಾಣದ ನಾಟಕಗಳಿಗಿಂತ ಏಕಾಂಕ ನಾಟಕರಚನೆಯಲ್ಲಿ ಇವನ ಪರಿಣತಿ ಕಂಡುಬರುತ್ತದೆ. ಏಕೆಂದರೆ ಇವನ ನಾಟಕಗಳು ಸಾಂಪ್ರದಾಯಿಕ ನಾಟಕದ ವಿನ್ಯಾಸಕ್ಕೆ ಪ್ರತಿಯಾಗಿ ಒಂದು ಕಾವ್ಯಪ್ರತಿಮೆ ನಾಟಕೀಯವಾಗಿ ಬೆಳೆಯುತ್ತ ಹೋಗುವುದು ಇವನ ನಾಟಕಗಳ ರೀತಿ. ಇವನ ದಿ ಚೇರ್ಸ್ ದಿ ಲೆಸನ್ ಮೊದಲಾದ ಏಕಾಂಕಗಳು ಅಬ್ಸರ್ಡ್ ನಾಟಕ ಪರಂಪರೆಯ ಶ್ರೇಷ್ಠ ನಾಟಕಗಳ ಪಂಕ್ತಿಯಲ್ಲಿ ನಿಲ್ಲುವಂಥವು.
ಫ್ರೆಂಚ್ ಕಾದಂಬರಿಕಾರ ಜೆನೆಜೀನ್ 1910 ರಲ್ಲಿ ಹುಟ್ಟಿದ. ಒಬ್ಬ ಅನಾಥ ಬಾಲಕನಾಗಿ ತಂದೆ ತಾಯಿ ಯಾರೆಂಬುದೂ ತಿಳಿಯದೆ ಸಮಾಜದಿಂದ ತ್ಯಕ್ತರಾದ ಕಳ್ಳರು. ಸಲಿಂಗರತ್ಯಾಸಕ್ತರೂ ಆದ ಅಧೋಲೋಕದ ಜನರ ಜೊತೆ ಬೆಳೆದ. ಮಧ್ಯಮವರ್ಗದವರಿಗೆ ಗೊತ್ತಿಲ್ಲದ ಈ ಬಗೆಯ ಜೀವನ ಇವನಿಗೆ ಕರತಲಾಮಲಕವಾಯಿತು. ಕಳ್ಳತನ ಮಾಡುವುದರಿಂದಲೇ ಬದುಕುತ್ತಿದ್ದ ಜೆನೆ ಹಲವಾರು ಬಾರಿ ಸೆರೆಮನೆಗೆ ಹೋಗಿ ಬಂದ. ದೀರ್ಘ ಸೆರೆಮನೆವಾಸದ ಒಂದು ಅವಧಿಯಲ್ಲಿ ಇವನು ತನ್ನ ಮೊದಲ ಕಾದಂಬರಿ `ದಿ ಲೇಡಿ ಆಫ್ ದಿ ಫ್ಲವರ್ ಬರೆದ. ಅದು ಹೇಗೋ ಪ್ರಕಟವಾಗಿ ಹೊರಪ್ರಪಂಚ್ ಬೆಳಕು ಕಂಡಿತು. ಇದನ್ನು ಓದಿದ ಸಾತ್ರ್ರ, ಮಾಲ್ರೊ ಮೊದಲಾದ ಫ್ರೆಂಚ್ ಲೇಖಕರು ಜೆನೆ ಪ್ರತಿಭಾವಂತನೆಂದು ಗುರುತಿಸಿ ಇವನ ಬಿಡುಗಡೆಯನ್ನು ಕೋರಿ ಫ್ರೆಂಚ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಆ ಮನವಿಯನ್ನು ಮನ್ನಿಸಿದ ಫ್ರೆಂಚ್ ಅಧ್ಯಕ್ಷರು ತಮ್ಮ ವಿಶೇಷ ಅಧಿಕಾರವನ್ನು ಉಪಯೋಗಿಸಿ eóÉನೆಯನ್ನು ಬಿಡುಗಡೆ ಮಾಡಿದರು. ಅನಂತರ eóÉನೆ ತಾನು ಪಡೆದ ಅಧೋಲೋಕದ ಜೀವನಾನುಭವಗಳನ್ನೇ ಮೂಲದ್ರವ್ಯವಾಗಿಟ್ಟುಕೊಂಡು ಕಾದಂಬರಿ, ನಾಟಕ, ಕಾವ್ಯಗಳನ್ನು ಬರೆದ. ಕಾದಂಬರಿ, ಕಾವ್ಯಗಳ ರಚನೆಯಲ್ಲಿ ಇವನು ಎಷ್ಟು ಪ್ರಸಿದ್ಧನೊ ಅದಕ್ಕಿಂತ ಹೆಚ್ಚಾಗಿ ನಾಟಕಕಾರನಾಗಿ ಪ್ರಸಿದ್ಧಿ ಪಡೆದ. ಇವನು ಬರೆದ ಮೊದಲನೆಯ ನಾಟಕ `ದಿ ಡೆತ್ ವಾಚ್ (1948) ದೀರ್ಘವಾದ ಏಕಾಂಕ ನಾಟಕ. ಈ ನಾಟಕದ ಕ್ರಿಯೆ ಒಂದು ಜೈಲುಖಾನೆಯಲ್ಲಿ ನಡೆದಂತೆ ಚಿತ್ರಣಗೊಂಡಿದೆ. ಇದು ಮೂರು ಮಂದಿ ಕೈದಿಗಳ ಮಧ್ಯದ ಮಾನಸಿಕ ಘರ್ಷಣೆಯನ್ನು ಚಿತ್ರಿಸುತ್ತದೆ. ನಾಟಕದಲ್ಲಿ ಕಾಣಿಸಿಕೊಳ್ಳದ ಸ್ನೋಬಾಲ್ ಎಂಬ ನೀಗ್ರೊ ಕೊಲೆಗಾರ ಇವರಿಗೆ ಆದರ್ಶ. ಈ ನಾಟಕದ ವಿನ್ಯಾಸ ಒಂದು ಕನಸಿನೋಪಾದಿಯಲ್ಲಿದೆ. ಸುಮಾರು ಇದೇ ಕಾಲದಲ್ಲಿ ಬರೆದ ಇನ್ನೊಂದು ನಾಟಕ ಮೈಡ್ಸ್. ಒಂದು ಮನೆಯ ಇಬ್ಬರು ದಾದಿಯರು ತಮ್ಮ ಯಜಮಾನಿಯನ್ನು ಅತ್ಯಂತ ತೀವ್ರವಾಗಿ ದ್ವೇಷಿಸುತ್ತಿರುತ್ತಾರೆ. ಆಕೆಯನ್ನು ಕೊಲೆಮಾಡುವ ಯೋಚನೆಯನ್ನೂ ಹೊಂದಿರುತ್ತಾರೆ. ಆದರೆ ಕೊಲೆ ಮಾಡಲಾಗದ ಅವರು ಯಜಮಾನಿ ಮನೆಯಲ್ಲಿಲ್ಲದಾಗ ದಾದಿಯರಲ್ಲಿ ಒಬ್ಬಳು ಯಜಮಾನಿಯಾಗಿಯೂ ಇನ್ನೊಬ್ಬಳು ದಾದಿಯಾಗಿಯೂ ಅಭಿನಯಿಸುತ್ತಾರೆ. ದಾದಿ, ಯಜಮಾನಿಯಂತೆ ನಟಿಸುತ್ತಿದ್ದ ದಾದಿಯನ್ನು ಕೊಂದುಹಾಕುತ್ತಾಳೆ. ಈ ಒಂದು ಕ್ರಿಯೆ ಧಾರ್ಮಿಕ ಕ್ರಿಯೆಯಂತೆ ನಡೆಯುತ್ತದೆ. eóÉನೆಯ ಎಲ್ಲ ನಾಟಕಗಳ ಮೂಲ ಧಾರ್ಮಿಕ ಪ್ರಕ್ರಿಯೆ, ಸ್ವಪ್ನ, ವಿಪರೀತ ಭಾವನೆ. ಇವುಗಳು ಇವನ ನಾಟಕಗಳಲ್ಲಿ ವಾಸ್ತವಿಕತೆಯ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅಂದರೆ ವಾಸ್ತವಿಕತೆಯು, ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಚಿತ್ರಿತವಾಗುತ್ತದೆ. ಕನ್ನಡಿಯ ಪ್ರತೀಕ eóÉನೆಯ ನಾಟಕಗಳಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ.
ದಿ ಬಾಲ್ಕನಿ (19570, ದಿ ಬ್ಲ್ಯಾಕ್ಸ್ (1957), ದಿ ಸ್ಕ್ರೀನ್ಸ್ (1961) ಮೊದಲಾದ ನಾಟಕಗಳಲ್ಲೂ ಜೀವನವನ್ನು ಕುರಿತ eóÉನೆಯ ಧೋರಣೆ ಬೇರೆ ಬೇರೆ ಆಯಾಮಗಳಲ್ಲಿ ಅನ್ವೇಷಿತವಾಗುತ್ತದೆ. ಅರ್ಟಾಡ್‍ನ ಥಿಯೇಟರ್ ಆಫ್ ಕ್ರೂಯಲ್ಟಿ ಅಥವಾ `ಥಿಯೇಟರ್ ಅಂಡ್ ಇಟ್ಸ್ ಡಬಲ್ ಈ ಸಿದ್ಧಾಂತಗಳು eóÉನೆಯ ಮೇಲೆ ಪ್ರಭಾವ ಬೀರಿದರೂ eóÉನೆ ತನ್ನ ಜೀವನ ದರ್ಶನಕ್ಕೆ ಅನುಗುಣವಾದ ನಾಟಕೀಯ ರೂಪವನ್ನು ತಾನೇ ಕಂಡುಕೊಳ್ಳುವ ಪ್ರಯತ್ನ ನಡೆಸಿದ.
ಆರ್ಥರ್ ಅಡಮೋವ್ (1908 - 70) ರಷ್ಯದಲ್ಲಿ ಹುಟ್ಟಿ ಫ್ರಾನ್ಸ್‍ನಲ್ಲಿ ನೆಲೆಸಿ ಫ್ರೆಂಚ್ ಭಾಷೆಯಲ್ಲಿ ತನ್ನ ಕೃತಿಗಳನ್ನು ರಚಿಸಿದ. ಒಬ್ಬ ಸರ್ರಿಯಲಿಸ್ಟ್ ಕವಿಯಾಗಿ ಕಾವ್ಯರಚನೆ ಆರಂಭಿಸಿದ ಇವನು ಮಾನಸಿಕ ಅಸ್ವಸ್ಥೆಯಿಂದಾಗಿ 1930 ರಲ್ಲಿ ಕಾವ್ಯ ರಚನೆಯನ್ನು ನಿಲ್ಲಿಸಿದ. ಇವನ ಮಾನಸಿಕ ಅಸ್ವಸ್ಥತೆಯೇ ಇವನನ್ನು ಅಬ್ಸರ್ಡ್ ನಾಟಕದತ್ತ ಹೊರಳುವಂತೆ ಮಾಡಿತು. 1945 ರಲ್ಲಿ ದಿ ಪ್ಯಾರಡಿ ಎಂಬ ನಾಟಕವನ್ನು ಬರೆದ ಇವನ ಪ್ರೊಫೆಸರ್ ಟರೇನ್ ಎಂಬ ನಾಟಕ. ಈತ ಕಂಡ ಒಂದು ಕನಸಿನ ಯಥಾವತ್ತಾದ ನಾಟಕ ರೂಪದ ದಾಖಲೆಯಾಗಿದೆ ಎಂದು ಹೇಳಲಾಗಿದೆ. ಅಬ್ಸರ್ಡ್ ನಾಟಕ ತಂತ್ರವನ್ನು ಬ್ರೆಕ್ಟ್‍ನ ಎಪಿಕ್ ನಾಟಕ ತಂತ್ರದೊಂದಿಗೆ ಮೆಳೈಸಿ ಇವನು `ಪವಾಲೊ ಪವೋಲಿ ನಾಟಕವನ್ನು ರಚಿಸಿದ. ಅಬ್ಸರ್ಡ್ ಮತ್ತು ಎಪಿಕ್ ನಾಟಕ ತಂತ್ರಗಳನ್ನು ಉಪಯೋಗಿಸಿ ರಾಜಕೀಯ ವಸ್ತುಗಳನ್ನುಳ್ಳ ನಾಟಕವನ್ನು ರಚಿಸಿದ್ದು ಅಡಮೋವ್‍ನ ವೈಶಿಷ್ಟ್ಯ.
ಸ್ಲಾವಮಿರ್ ಮ್ರೋಸಕ್ ಪೋಲಿಷ್ ನಾಟಕಕಾರ. ಇವನೂ ರಾಜಕೀಯ ವಿಡಂಬನೆಗಾಗಿ ಅಬ್ಸರ್ಡ್ ನಾಟಕ ತಂತ್ರಗಳನ್ನು ಬಳಸಿಕೊಂಡ. ಟ್ಯಾಂಗೊ (1965), ದಿ ಪೋಲೀಸ್ (1958), ಸ್ಟ್ರಿಪ್, ಟೀಸ್ - ಇವು ಇವನ ಪ್ರಸಿದ್ಧ ನಾಟಕಗಳು.
ಅರಬಲ್ 1932 ರಲ್ಲಿ ಸ್ಪೇನಿನ ಆಡಳಿತದಲ್ಲಿದ್ದ ಮೊರಾಕ್ಕೋದಲ್ಲಿ ಹುಟ್ಟಿದ. ಸ್ಪ್ಯಾನಿಷ್ ಅಂತರ್ಯುದ್ಧದ ಬಳಿಕ ಮೊದಲು ಇವನು ಮ್ಯಾಡ್‍ಗೆ ಬಂದು ಅನಂತರ ಪ್ಯಾರಿಸ್‍ನಲ್ಲಿ ನೆಲೆಸಿದ. ಬೆಕೆಟ್, ಕಾಫ್ಕ್, ಮಾಕ್ರ್ವಿದಿ ಸಾದ್ ಮೊದಲಾದವರಿಂದ ಪ್ರಭಾವಿತನಾದ. ಈತ 1958 ರಲ್ಲಿ ಮೊದಲ ನಾಟಕ ಸಂಕಲನವನ್ನು ಪ್ರಕಟಿಸಿದ. ಇವನ ಫ್ರೆಂಚ್ ನಾಟಕಗಳ ಅನುವಾದಗಳು ಅನಂತರ ಪ್ರಕಟವಾದವು. ದಿ ಆಟೊಮೊಬೈಲ್, ದಿ ಟೂ ಎಕ್ಸಿಕ್ಯೂಷನರ್ಸ್, ದಿ ಪಿಕ್‍ನಿಕ್ ಆನ್ ದಿ ಬ್ಯಾಟಲ್‍ಫೀಲ್ಡ್, ಗ್ರೇವ್‍ಯಾರ್ಡ್ ಇವು ಇವನ ಮುಖ್ಯ ನಾಟಕಗಳು. ಇವನ ನಾಟಕಗಳ ವೈಶಿಷ್ಟ್ಯವೆಂದರೆ ಅಲ್ಲಿ ಜೀವನವನ್ನು ನೋಡುವ ಪ್ರಜ್ಞೆ ಒಬ್ಬ ಮುಗ್ಧ ಬಾಲಕನದಾಗಿರುತ್ತದೆ. ಈ ಮುಗ್ಧತೆ ಅಥವಾ ಅಸ್ಥಿತ್ವವಾದಿ ಪಾರಿಭಾಷಿಕ ಪದವನ್ನು ಬಳಸಿಯೇ ಹೇಳುವುದಾದರೆ ಲುಸಿಡಿಟಿ, ಸ್ವಚ್ಛತೆ, ಇವನ ಜೀವನವನ್ನು ಕುರಿತ ದೃಷ್ಟಿಕೋನವಾಗಿರುತ್ತದೆ. ಈ ದೃಷ್ಟಿಕೋನದ ಕಾರಣದಿಂದ ಇವನ ಜೀವನ ದೃಷ್ಟಿ ನೀತಿಗತೀತವಾಗಿರುತ್ತದೆ. ಹೀಗಾಗಿ `ದಿ ಟೂ ಎಕ್ಸಿಕ್ಯೂಷನರ್ಸ್ ನಾಟಕದಲ್ಲಿ ಎಕ್ಸಿಕ್ಯೂಟ್ ಮಾಡುವವನು ಯಾರು, ಎಕ್ಸಿಕ್ಯೂಷನ್‍ಗೆ ಒಳಗಾಗುವವನು ಯಾರು ಎಂಬುದು ಅಸ್ಪಷ್ಟವಾಗಿ ಈ ಎರಡು ಸ್ಥಾನಗಳೂ ಮತ್ತೆ ಮತ್ತೆ ನಾಟಕದುದ್ದಕ್ಕೂ ಅದಲು ಬದಲಾಗುವುದನ್ನೂ ವಾಸ್ತವಿಕತೆಯನ್ನು ಕಾಣುವ ದೃಷ್ಟಿ ಸಂಕೀರ್ಣವಾಗುವುದನ್ನೂ ಕಾಣುತ್ತೇವೆ.
ಆ್ಯಂಟೊನಿಮ್ ಆರ್ಟಾಡ್ (1896 - 1948) ಫ್ರೆಂಚ್ ನಾಟಕಕಾರ. ನಾಟಕ ಸಿದ್ಧಾಂತಕಾರ ಹಾಗೂ ನಿರ್ದೇಶಕ. ಮೊದಲ ಕವಿಯಾಗಿ ಕಾವ್ಯರಚನೆಗೆ ತೊಡಗಿದ ಇವನು ಚಲನಚಿತ್ರ ನಟನೂ ಆಗಿದ್ದ. 1925 ರಲ್ಲಿ ಸರ್ರಿಯಲಿಸ್ಟ್ ಚಳವಳಿಯ ಸಂಯೋಜಕನಾಗಿ 1927 ರಲ್ಲಿ ರೋಜರ್ ವಿಟ್‍ರ್ಯಾಕ್‍ನೊಂದಿಗೆ ಥಿಯೇಟರ್ ಆಲ್‍ಫ್ರೆಡ್ ಜ್ಯಾರಿ ಎಂಬ ನಾಟಕ ಕಂಪನಿಯನ್ನು ಆರಂಭಿಸಿ ಅಲ್ಲಿ ವಿಟ್‍ರ್ಯಾಕ್‍ನ ಸರ್ರಿಯಲಿಸ್ಟ್ ನಾಟಕಗಳನ್ನು ಪ್ರಯೋಗಿಸಿದ. ಇವನ ಸೈದ್ಧಾಂತಿಕ ಬರೆಹಗಳು ಆಗಿನ ರಂಗಭೂಮಿಯ ಮೇಲೆ ಮಾಡಿದ ಪರಿಣಾಮದ ದೃಷ್ಟಿಯಿಂದ ಇವನು ಪ್ರಮುಖನಾಗುತ್ತಾನೆ. ರೋಜರ್ ಬ್ಲಿನ್ ಮತ್ತು ಬರಾಲ್ಟ್ ಮೊದಲಾದ ಆಗಿನ ಪ್ರಸಿದ್ಧ ನಿರ್ದೇಶಕರು ಇವನ `ದಿ ಥಿಯೇಟರ್ ಅಂಡ್ ದಿ ಡಬಲ್ ಸಿದ್ಧಾಂತದಿಂದ ಗಾಢವಾಗಿ ಪ್ರಭಾವಿತರಾದರು. ಈ ಸಿದ್ಧಾಂತ ಬೆಕೆಟ್‍ನ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಲು, ಯುಕ್ತರೂಪವನ್ನು ಕಂಡುಕೊಳ್ಳಲು ಬ್ಲಿನ್ನನಿಗೆ ಸಹಾಯಕವಾಯಿತು. ಅರ್ಟಾಡ್ ತನ್ನ ನಾಟಕ ಸಿದ್ಧಾಂತದಲ್ಲಿ ಪುರಾಣ (ಮಿತ್) ಮತ್ತು ಮಾಂತ್ರಿಕತೆಗಳಿಗೆ (ಮ್ಯಾಜಿಕ್) ಒತ್ತುಹಾಕಿ ಕಥನಾತ್ಮ ಕತೆಯನ್ನು ಹಿನ್ನೆಲೆಗೆ ತಳ್ಳಿದ. ಪ್ರೇಕ್ಷಕರ ಸುಪ್ತ ಪ್ರಜ್ಞೆಯ ಮೇಲೆ ಪ್ರಭಾವ ಬೀರುವುದು ನಾಟಕದ ಉದ್ದೇಶವೆಂದು ಅರ್ಟಾಡ್ ತಿಳಿದಿದ್ದ. ಸಂಭಾಷಣೆಯನ್ನು ಹಿನ್ನೆಲೆಗೆ ತಳ್ಳಿ, ಅಂಗಭಂಗಿ ಚಲನವಲನಗಳಿಗೆ ಪ್ರಾಮುಖ್ಯತೆ ಕೊಟ್ಟು ಬೆಳಕು ಮತ್ತು ಕತ್ತಲುಗಳ ವೈರಾಧ್ಯವನ್ನು ಬಳಸಿಕೊಂಡು ಧಾರ್ಮಿಕ ಪ್ರಕ್ರಿಯೆ ಮತ್ತು ಅಭಿಚಾರಗಳ (ಇನ್‍ಕಾರ್ನೇಷನ್) ಮೂಲಕ ಪರಿಣಾಮವನ್ನು ಸಾಧಿಸುವುದು ಇವನ ಉದ್ದೇಶವಾಗಿರುತ್ತಿತ್ತು. ಈತ ತನ್ನ ನಾಟಕ ಪ್ರಯೋಗ ಸಿದ್ಧಾಂತದಲ್ಲಿ ಬಲಿದ್ವೀಪದ ನೃತ್ಯಗಳ ತಂತ್ರಗಳನ್ನು ಅಳವಡಿಸಿದ. ಇವನ ನಾಟಕ ಸಿದ್ಧಾಂತಗಳು ಅಬ್ಸರ್ಡ್ ನಾಟಕ ತಂತ್ರಗಳನ್ನು ರೂಪಿಸುವಲ್ಲಿ ಹೆಚ್ಚು ಪ್ರಭಾವ ಬೀರಿದವು.
19 ನೆಯ ಶತಮಾನದ ಮಧ್ಯ ಹಾಗೂ ಅಂತ್ಯಭಾಗಗಳಿಂದ ಆರಂಭವಾಗಿ 20 ನೆಯ ಶತಮಾನದ ಆದಿಭಾಗವನ್ನು ಒಳಗೊಂಡು 20 ನೆಯ ಶತಮಾನದುದ್ದಕ್ಕೂ ಕಂಡುಬರುವ ಪ್ರಧಾನವಾದ ಬೌದ್ಧಿಕ ನಿಲುವೆಂದರೆ `ಶೋಧನೆ. ಹೊಸ ಹೊಸದನ್ನು ಕಾಣಬೇಕೆಂಬ ಹಂಬಲ ಅಥವಾ ಹಳೆಯದನ್ನೇ ಹೊಸ ದೃಷ್ಟಿ ಕೋನದಿಂದ ನೋಡುವ ಪ್ರವೃತ್ತಿ. ಪ್ರಯೋಗಶೀಲತೆ, ಅಲ್ಲಿಯವರೆಗೆ ಪ್ರಶ್ನಿಸಬಾರದೆಂದು ತಿಳಿದಿದ್ದನ್ನು ಪ್ರಶ್ನಿಸುವ ಪ್ರವೃತ್ತಿ, ಯಾವುದೂ ನಿರಪೇಕ್ಷವಲ್ಲ ಎಲ್ಲದರ ಮಹತ್ತ್ವ ಸಾಪೇಕ್ಷವಾಗಿಯೇ ನಿರ್ಣಯವಾಗುವಂಥದ್ದೆಂಬ ನಿಲುವು ಇವುಗಳನ್ನು ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಕಾಣುತ್ತೇವೆ. ಕಲೆ, ಸಾಹಿತ್ಯಗಳೂ ನಾಟಕ ರಂಗವೂ ಇದರಿಂದ ಹೊರಗುಳಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ 20 ನೆಯ ಶತಮಾನದ 60 ರ ದಶಕದ ವರೆಗಿನ ರಂಗಭೂಮಿ ಹಿಂದೆಂದೂ ಕಾಣದ ಪ್ರಯೋಗ ಶೀಲತೆಯನ್ನೂ ಕಂಡಿತು. ಈ ಪ್ರಯೋಗ ಶೀಲತೆಗೆ ದೃಷ್ಟಾಂತವಾಗಿ ಪಾಶ್ಚಾತ್ಯರಲ್ಲಿ ರೂಪುಗೊಂಡ ಕಲಾ ಸಿದ್ಧಾಂತಗಳು ರಂಗಭೂಮಿಯನ್ನು ರೂಪಿಸಿದವು. ಹಾಗೆಯೇ ರಂಗಭೂಮಿಯ ಪ್ರಯೋಗಗಳು ಕಲಾ ಸಿದ್ಧಾಂತವನ್ನು ರೂಪಿಸಿದವು. ಈ ಪ್ರಕ್ರಿಯೆ ಕೇವಲ ಪಾಶ್ಚಾತ್ಯ ರಂಗಭೂಮಿಗೆ ಮಾತ್ರ ಸೀಮಿತವಾಗದೆ ಜಾಗತಿಕ ಆಯಾಮ ಪಡೆದುಕೊಂಡಿತು.
20 ನೆಯ ಶತಮಾನದ ರಂಗಭೂಮಿಯ ವಿಶೇಷತೆಯನ್ನು ಕುರಿತು ನೋಡುವಾಗಲೇ ಈ ಅವಧಿಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಯ ಕಾರಣದಿಂದ ರೂಪುಗೊಂಡ ಸಮೂಹ ಮಾಧ್ಯಮಗಳು ರಂಗಪ್ರಕ್ರಿಯೆಯ ಮೇಲೆ ಬೀರಿದ ಪ್ರಭಾವವನ್ನೂ ಗುರುತಿಸಬೇಕಾಗುತ್ತದೆ. ತಾಮಸ್ ಆಲ್ವ ಎಡಿಸನ್ 1889 ರಲ್ಲಿ `ಚಲಿಸುವ ಚಿತ್ರ ಗಳನ್ನು ಪ್ರದರ್ಶಿಸುವ ಕೈನೆಟೊಸ್ಕೋಪ್ ಅನ್ನು ಕಂಡುಹಿಡಿದ. ಅನಂತರ ನ್ಯೂಯಾರ್ಕ್, ಲಂಡನ್, ಮಾಸ್ಕೊ ಮೊದಲಾದ ನಗರಗಳಲ್ಲಿ ಈ ಬಗೆಗೆ ನಡೆದ ಸಂಶೋಧನೆಗಳು ಚಲನಚಿತ್ರದ ತಾಂತ್ರಿಕತೆಯನ್ನು ಉತ್ತಮಪಡಿಸಿದವು. ಇದರ ಫಲವಾಗಿ 1903 ರಲ್ಲಿ `ದಿ ಗೇಟ್ ಟ್ರೈನ್ ರಾಬರಿ' ಮೊದಲನೆಯ `ಸ್ಕ್ರೀನ್ ಡ್ರಾಮ ಎಂದು ಪರದೆಯ ಮೇಲೆ ಪ್ರದರ್ಶಿತವಾಯಿತು. ರಷ್ಯದ ಐನ್ಸ್‍ಸ್ಟೀನನು ನಿರ್ದೇಶಿಸಿದ `ದಿ ಬ್ಯಟಲ್‍ಶಿಪ್ ಪೊಟಮ್‍ಕಿನ್ ತೆರೆಯನ್ನು ಕಂಡಿತು. ಈ ಎರಡು ಚಲನಚಿತ್ರಗಳು ಆಧುನಿಕ ಚಲನಚಿತ್ರಕ್ಕೆ ಮೂಲ. ಈ ಚಲನ ಚಿತ್ರಗಳಲ್ಲಿ ಉಪಯೋಗವಾಗಿರುವ ತಂತ್ರಗಳೇ ಅನಂತರದ ಚಲನಚಿತ್ರಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಬಳಕೆಯಾದವು. ಈ ಘಟ್ಟದಿಂದ ಮುಂದೆ ಚಲನಚಿತ್ರ ವೇಗವಾಗಿ ವಿಕಾಸಗೊಂಡು ಅಭಿವೃದ್ಧಿ ಹೊಂದಿತು. ಒಂದು ಚಿಕ್ಕ ಹಳ್ಳಿಯಾಗಿದ್ದ ಹಾಲಿವುಡ್ ಕ್ಯಾಲಿಫೋರ್ನಿಯದಲ್ಲಿ ಈಗ ಚಲನಚಿತ್ರಗಳನ್ನು ತಯಾರಿಸುವ ಬೃಹತ್ತಾದ ಕೇಂದ್ರವಾಗಿ ರೂಪುಗೊಂಡಿದೆ. ಹಾಗೆಯೇ ಇಂಗ್ಲೆಂಡ್, ಫ್ರಾನ್ಸ್, ರಷ್ಯಗಳಲ್ಲಿ ಮತ್ತು ಇತರ ಯೂರೋಪಿಯನ್ ಕೇಂದ್ರಗಳಲ್ಲಿ ಚಲನಚಿತ್ರ ತನ್ನದೇ ಆದ ವೈಶಿಷ್ಟ್ಯದೊಂದಿಗೆ ರೂಪುಗೊಳ್ಳತೊಡಗಿತು. ಭಾರತದಲ್ಲಿಯೂ ಕಲ್ಕತ್ತ, ಮುಂಬಯಿ, ಚೆನ್ನೈ (ಹಿಂದಿನ ಮದರಾಸು) ಮತ್ತಿ ಇನ್ನಿತರ ಪ್ರಾಂತೀಯ ಕೇಂದ್ರಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ, ಸ್ಟುಡಿಯೋಗಳು ಹುಟ್ಟಿಕೊಂಡವು. ನಟನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ರೂಪುಗೊಳ್ಳತೊಡಗಿದರು. ಒಂದೇ ಚಿತ್ರ ಹಲವಾರು ಪ್ರದೇಶಗಳಲ್ಲಿ ಹಲವಾರು ಚಲನ ಚಿತ್ರಮಂದಿರಗಳಲ್ಲಿ ಮತ್ತೆ ಮತ್ತೆ ಪ್ರದರ್ಶನಗೊಳ್ಳತೊಡಗಿದ್ದರಿಂದ ಲಕ್ಷಾಂತರ ಪ್ರೇಕ್ಷಕರು ಅವುಗಳನ್ನು ನೋಡುವ ಅವಕಾಶ ಉಂಟಾಯಿತು.
ಹೀಗೆ ಜಾಗತಿಕವಾಗಿ ಸಿನಿಮಾ ಅಗಾಧ ಪ್ರಮಾಣದಲ್ಲಿ ಬೆಳೆಯಿತು. ಸರಳವಾದ ಕೆಳದರ್ಜೆಯ ಚಲನಚಿತ್ರಗಳೂ ಹೇರಳವಾಗಿ ನಿರ್ಮಾಣಗೊಂಡವು ಎಂಬುದು ನಿಜವಾದರೂ ಇದೇ ಸಂದರ್ಭದಲ್ಲಿ ಚಾರ್ಲಿ ಚಾಪ್ಲಿನ್, ಸರ್ ಒಲಿವಿಯರ್ ಲಾರೆನ್ಸ್, ರಿಚರ್ಡ್‍ಬರ್ಟನ್ ಮೊದಲಾದ ಶ್ರೇಷ್ಠ ನಟರನ್ನೂ ಚಲನಚಿತ್ರಕೊಟ್ಟಿದೆ. ಹಾಗೆಯೇ ಇಂಗ್‍ಮರ್ ಬರ್ಗ್‍ಮನ್, ವಿಟೋರಿಯ ಡಿಸಿಕ, ಅಕಿರ ಕುಸರವ, ಸ್ವೀವನ್ ಸ್ಫಿಲ್‍ಬರ್ಗ್ ಮೊದಲಾದ ಶ್ರೇಷ್ಠ ನಿರ್ದೇಶಕರನ್ನೂ ಸಿನಿಮಾ ಕೊಟ್ಟಿದೆ. ಇಲ್ಲಿ ಕೆಲವು ಮುಖ್ಯ ಪ್ರಶ್ನೆಗಳು ಉದ್ಭವಿಸುತ್ತವೆ : ಚಲನಚಿತ್ರವನ್ನು ನಾಟಕವೆಂದು ಪರಿಗಣಿಸಬಹುದೇ ? ಹಾಗೆಯೇ ಅನಂತರ ವಿಕಾಸಗೊಂಡು ಈಗ ಅತ್ಯಂತ ಪರಿಣಾಮಕಾರಿ ಸಂವಹನ ಮಧ್ಯಮವೆಂದು ಪರಿಗಣಿತವಾಗಿರುವ ದೂರದರ್ಶನದಲ್ಲಿ ಬರುವ ನಾಟಕೀಯ ಕಾರ್ಯಕ್ರಮಗಳನ್ನು ನಾಟಕವೆನ್ನಬಹುದೇ ?
ಸಾಮಾನ್ಯವಾಗಿ ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಆಯಾಕಾಲದ ವೈಜ್ಞಾನಿಕತೆ ಹಾಗೂ ತಂತ್ರಜ್ಞಾನಗಳು ಪ್ರಭಾವವನ್ನು ಬೀರಿಯೇ ಬೀರುತ್ತವೆ. ಕಲಾ ಪ್ರಕಾರಗಳು ಕೂಡ ಆಯಾ ಕಾಲದ ತಂತ್ರಜ್ಞಾನದೊಂದಿಗೆ ಬೆಳೆದುಬರುತ್ತವೆ. ಉದಾ : ಪ್ರಾಚೀನ ಗ್ರೀಕ್‍ನಾಟಕ, ರಂಗಭೂಮಿ ತನ್ನ ಕಾಲದ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುತ್ತದೆ. ಆ ಕಾಲದ ಬಯಲು ರಂಗಭೂಮಿಗಳು ಹೀಗೆ ರೂಪುಗೊಂಡಂಥವು. ಅನಂತರ ಬಂದ ಇಂಗ್ಲೆಂಡಿನ ಎಲಿಜಬೆತೆನ್ ಯುಗದ ನಾಟಕಗೃಹಗಳಾಗಲಿ, ಪಿಕ್ಚರ್ ಫ್ರೇಂ ನಾಟಕ ಗೃಹಗಳಾಗಲಿ, ಎರಿನಾಟೈಪ್ ಥಿಯೇಟರ್‍ನಂಥ ರಂಗಗೃಹಗಳಾಗಲಿ ತಮ್ಮ ಕಾಲದಲ್ಲಿ ಉಪಲಬ್ಧವಿದ್ದ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡೇ ರೂಪುಗೊಂಡಂಥವು. ಮೇಲಿನ ಈ ಮಾತುಗಳು 20 ನೆಯ ಶತಮಾನಕ್ಕೂ ಅನ್ವಯವಾಗುತ್ತವೆ. ಮಾನವನ ಇತಿಹಾಸದಲ್ಲಿ ಬಹುಶಃ 20 ನೆಯ ಶತಮಾನದಲ್ಲಿ ಉಂಟಾದಷ್ಟು ವೈಜ್ಞಾನಿಕತೆ ಮತ್ತು ತಂತ್ರಜ್ಞಾನಗಳ ಬೆಳವಣಿಗೆ ಹಿಂದೆಂದೂ ಆಗಿರಲಿಲ್ಲವೆಂದು ಹೇಳಬಹುದು. ವಿದ್ಯುತ್ತಿನ ಸಂಶೋಧನೆ, ಎಲೆಕ್ಟ್ರಾನ್ ಕ್ಷೇತ್ರದಲ್ಲಿನ ಕ್ರಾಂತಿ ಇವು ಸಿನಿಮಾ. ದೂರದರ್ಶನ ಕಂಪ್ಯೂಟರ್, ಮಲ್ಟಿಮೀಡಿಯ ಮೊದಲಾದ ಆವಿಷ್ಕರಣಗಳಿಗೆ ಕಾರಣವಾಗಿ ಈಗ ಮನುಷ್ಯ ಜೀವನದ ಮೇಲೆ ಅತ್ಯಂತ ಗಾಢವಾದ ಪರಿಣಾಮ ಬೀರುತ್ತಿದೆ. ಮೊದಲಿಗೆ ಸಿನಿಮಾ ಬಂದಾಗ ಅದರ ನವೀನತೆಯ ಆಕರ್ಷಣೆಯ ಕಾರಣದಿಂದ ನಾಟಕ ಪ್ರಯೋಗಗಳಿಗೆ ಸ್ವಲ್ಪಮಟ್ಟಿನ ಧಕ್ಕೆಯಾದದ್ದೇನೋ ನಿಜ. ಅದು ಸಿನಿಮದೊಂದಿಗೆ ಈ ದೃಷ್ಟಿಯಿಂದ ಪೈಪೋಟಿಗೆ ನಿಂತಾಗ ಸಹಜವಾಗಿಯೇ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ನವತಂತ್ರಜ್ಞಾನದ ಉಪಯೋಗವನ್ನು ನಾಟಕರಂಗವೂ ಉಪಯೋಗಿಸಿಕೊಳ್ಳತೊಡಗಿದಾಗ ರಂಗಮಂದಿರಗಳಲ್ಲಿಯೂ ಬದಲಾವಣೆಗಳು ಉಂಟಾಗತೊಡಗಿದವು. ಬೆಳಕಿನ ಸಂಯೋಜನೆ, ಧ್ವನಿಸಂಯೋಜನೆ, ದೃಶ್ಯಗಳ ಅಳವಡಿಕೆ ಮೊದಲಾದವನ್ನು ನವತಂತ್ರಜ್ಞಾನದ ಸಹಾಯದಿಂದ ಅಳವಡಿಸಿಕೊಳ್ಳಲಾಯಿತು. ಇದರಿಂದ ರಂಗಮಂದಿರ ಆಧುನೀಕರಣಕ್ಕೆ ಒಳಗಾಯಿತು. ಇದನ್ನು ತಂತ್ರಜ್ಞಾನದಿಂದಾದ ಇತ್ಯಾತ್ಮಕ ಪ್ರಭಾವವೆಂದೇ ಪರಿಗಣಿಸಬೇಕು. ಈ ಎರಡು ಅಭಿವ್ಯಕ್ತಿ ಮಾಧ್ಯಮಗಳೂ ದೃಶ್ಯಮಾಧುಮಗಳೇ ಆಗಿವೆ. ಇವುಗಳ ಮಧ್ಯೆ ಭಿನ್ನತೆಗಳಿರುವುದೂ ನಿಜ. ಸಿನಿಮಾದಲ್ಲಿ ಒಮ್ಮೆ ಸೆಲ್ಯುಲಾಯ್ಡ್ ಟೇಪ್‍ನಲ್ಲಿ ಮುದ್ರಿತವಾದುದನ್ನು ಯಾವ ವ್ಯತ್ಯಾಸಗಳು ಇಲ್ಲದೆ ಪ್ರದರ್ಶಿಸಲು ಸಾಧ್ಯವಿದೆ. ಆದರೆ ಅದೇ ಒಂದು ನಾಟಕ ಹಲವಾರು ಪ್ರದರ್ಶನಗಳನ್ನು ಕಂಡರೂ ಒಂದೊಂದು ಪ್ರದರ್ಶನವೂ ಒಂದೊಂದು ಪ್ರಯೋಗವೂ ಯಥಾವತ್ತಾದ ನಕಲಾಗಿರಲು ಸಾಧ್ಯವಿಲ್ಲ. ಹೀಗೆ ಈ ಎರಡು ಮಾಧ್ಯಮಗಳ ಮಧ್ಯೆ ಇರುವ ಭಿನ್ನತೆಗಳೇ ಅವುಗಳ ವೈಶಿಷ್ಟ್ಯಗಳೂ ಆಗಿವೆ. ನಾಟಕ ಕೊಡುವುದನ್ನು ಸಿನಿಮಾ ಕೊಡಲಾರದು. ಹಾಗೆಯೇ ಸಿನಿಮಾ ಕೊಡುವುದನ್ನು ಸಂಪೂರ್ಣವಾಗಿ ನಾಟಕ ಕೊಡಲಾರದು. ನಾಟಕ ತನ್ನ ವೈಶಿಷ್ಟ್ಯದ ಆಧಾರದ ಮೇಲೆಯೇ ಸಿನಿಮದಿಂದ ಬಂದ ಪೈಪೋಟಿಯನ್ನು ಯಶಸ್ವಿಯಾಗಿ ಎದುರಿಸಿ ಮತ್ತೆ ತನ್ನ ಪ್ರಾಮುಖ್ಯವನ್ನು ಸ್ಥಾಪಿಸಿಕೊಂಡಿವೆ. ಈಗಲೂ ಪ್ಯಾರಿಸ್‍ನಂಥ ನಗರದಲ್ಲಿ ಸಿನಿಮಾ ಮಂದಿರಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿ ನಾಟಕ ಮಂದಿರಗಳಿವೆ. ಹಾಗೆಯೇ ರಷ್ಯದ ಮಾಸ್ಕೋದಲ್ಲಿನ ನಾಟಕ ಮಂದಿರಗಳು ಸಿನಿಮ ಮಂದಿರಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ. ಕೆಲವು ಪ್ರದರ್ಶನಗಳಿಗಂತೂ ಕನಿಷ್ಠ ಒಂದು ವರ್ಷಕ್ಕೂ ಮುಂಚೆಯೇ ಟಿಕೆಟ್ ಕಾದಿರಿಸಬೇಕಾಗುತ್ತದೆ. ಅಗಾಥಕ್ರಿಸ್ಟಿ ರಚಿಸಿದ `ಮೌಸ್‍ಟ್ರ್ಯಾಪ್ ಎಂಬ ನಾಟಕ ಲಂಡನ್ನಿನ ಒಂದು ನಾಟಕಶಾಲೆಯಲ್ಲಿ ನಿರಂತರವಾಗಿ 75 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಿದೆ ಎಂಬ ಸಂಗತಿ, ಮ್ಯಾಕ್ಸಿಗಾರ್ಕಿಯ `ಲೋಯರ್ ಡೆಪ್ತ್ಸ್ ನಾಟಕ ಇದೇ ರೀತಿ ಮಾಸ್ಕೋದ ರಂಗಶಾಲೆಯೊಂದರಲ್ಲಿ ಪ್ರದರ್ಶನ ಗೊಳ್ಳುತ್ತಿದ್ದು ಹಲವಾರು ತಲೆಮಾರುಗಳ ಕಲೆಗಾರರು ಅದರಲ್ಲಿ ಅಭಿನಯಿಸಿದ್ದಾರೆ. ಈಗಲೂ ಅಭಿನಯಿಸುತ್ತಿದ್ದಾರೆ ಎಂಬ ಸಂಗತಿ ನಟಕದ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದಕ್ಕೆ ಉದಾಹರಣೆಗಳಾಗಿವೆ.
ಸಿನಿಮಾ ಮತ್ತು ನಾಟಕದ ಬಗೆಗೆ ಹೇಳುವ ಮಾತುಗಳು ದೂರದರ್ಶನ ಮತ್ತು ನಾಟಕಗಳ ಸಂಬಂಧದ ಬಗ್ಗೆಯೂ ಅನ್ವಯವಾಗುತ್ತವೆ. ತಾಂತ್ರಿಕತೆಯ ದೃಷ್ಟಿಯಿಂದಲೂ ಚಲನಚಿತ್ರದ ಕೊಡುಗೆ ಅದ್ಭುತವಾದದ್ದು. ಇದರ ಮುಂದುವರಿಕೆಯೇ ದೂರದರ್ಶನ. ನಾಟಕೀಯ ಪ್ರಸಂಗಗಳನ್ನು ರೂಪಿಸುವುದರ ಜೊತೆಗೆ ಸಾಕ್ಷ್ಯಚಿತ್ರಗಳು ಮತ್ತು ಅನ್ವೇಷಣಾತ್ಮಕ ಚಿತ್ರಗಳು ನಡೆಯುತ್ತಿರುವ ಘಟನೆಗಳನ್ನು ಅದೇ ಕ್ಷಣದಲ್ಲಿ ಜಗತ್ತಿನಾದ್ಯಂತ ತೋರಿಸುವ ಸಾಧ್ಯತೆ ಇವುಗಳನ್ನು ದೂರದರ್ಶನ ಸಾಧಿಸುತ್ತಿದೆ.
20 ನೆಯ ಶತಮಾನದ ಕೊನೆಯ ಭಾಗದಲ್ಲಿ ತಂತ್ರಜ್ಞಾನ ಬೆಲೆಯುತ್ತಿರುವ ವೇಗವನ್ನು ಗಮನಿಸಿದರೆ ರಂಗಭೂಮಿ ಇನ್ನೂ ಅನೇಕ ಹೊಸ ಆವಿಷ್ಕರಣಗಳ ಜೊತೆ ಸ್ಪರ್ಧಿಸಬೇಕಾಗಬಹುದು. ಆದರೆ ಒಂದು ಮಾತಂತೂ ನಿಜ ; ಎಲ್ಲಿ ಜೀವಂತ ನಟನಟಿಯರು ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಾರೋ ಅಂಥ ಪ್ರದರ್ಶನಗಳಿಗೆ ಪ್ರೇಕ್ಷಕರ ಕೊರತೆ ಎಂದೂ ಇರಲಾರದು. ಮಾನವನ ಸಂಸ್ಕøತಿಯ ವಿಕಾಸದೊಂದಿಗೆ ವಿಕಾಸಗೊಂಡ ನಾಟಕಕಲೆ ಒಂದಲ್ಲ ಒಂದು ರೂಪದಲ್ಲಿ ಮುಂದೆಯೂ ಉಳಿದುಬರುತ್ತದೆ ಎಂಬ ಬಗ್ಗೆ ಅನುಮಾನವಿಲ್ಲ.