ರಾಘವಾಂಕ :- ಸು. 1225. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ವೀರಶೈವ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು. ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ ಹರಡಿಕೊಂಡಿವೆ. ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವನ್ನಾಗಿ ಮಾಡಿಕೊಂಡ ಸಿದ್ಧನಂಜೇಶನ ರಾಘವಾಂಕ ಚಾರಿತ್ರ ಒಂದು ವಿಶೇಷ ರೀತಿಯ ಕೃತಿಯಾಗಿದೆ.

ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳದವ. ಇವನ ತಂದೆ ಮಹಾದೇವಭಟ್ಟ : ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು ಮಾತ್ರವಲ್ಲ ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರುಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು, ಹಂಪೆಯ ಮಾದಿರಾಜ, ಹಂಪೆಯ ಮಹಾದೇವ, ಹಂಪೆಯ ಹರೀಶ್ವರ _ ಇದು ರಾಘವಾಂಕನ ಗುರುಪರಂಪರೆ. ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ. ಈತ ಸಂಸ್ಕೃತ-ಕನ್ನಡ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ_ವೈದಿಕವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ. `ಉಭಯಕವಿ ಕಮಲರವಿ'ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೂ ರಾಜನನ್ನೂ ಮೆಚ್ಚಿಸಿದ. ರಾಜ ಇವನಿಗೆ `ಕವಿಶರಭಭೇರುಂಡ' ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವೂ ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದವನ್ನು ಬೇಡಿದಾಗ, ಆತ ಮೆಚ್ಚಲೊಲ್ಲದೆ, ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ರಾಘವಾಂಕ ಗುರುವಿನ ಇಷ್ಟಾನುಸಾರ 'ಹರಿಶ್ಚಂದ್ರಕಾವ್ಯವ ಮುರಿದು' ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಬಿರುದು ಪಡೆದ. ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ -ಇದಿಷ್ಟು ರಾಘವಾಂಕನನ್ನು ಕುರಿತ ಕಥೆ.

ಇದರಲ್ಲಿ ಐತಿಹಾಸಿಕತೆ ಹಾಗೂ ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ; ಉಭಯ, ಭಾಷಾಪಂಡಿತ; ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಚಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು, ಅನಂತರ ರಾಘವಾಂಕನ ಶೈವಕೃತಿಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು -ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು. ರಾಘವಾಂಕನ ಕೃತಿಗಳು ಆರು: ಹರಿಶ್ಚಂದ್ರ ಕಾವ್ಯ, ಸಿದ್ಧರಾಮಪುರಾಣ, ಸೋಮನಾಥಚರಿತೆ, ವೀರೇಶಚರಿತೆ, ಶರಭ ಚಾರಿತ್ರ, ಹರಿಹರ ಮಹತ್ತ್ವ. ಇವುಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ. ಶರಭ ಚಾರಿತ್ರ ಹರಿಹರ ಮಹತ್ತ್ವ ಇನ್ನೂ ದೊರಕಿಲ್ಲ. ಇದೂ ಅಲ್ಲದೆ "ದೇವಾಂಗ ದಾಸಿಮಯ್ಯನ ಪುರಾಣ" ಎಂಬ ಸಾಂಗತ್ಯ ಗ್ರಂಥವೊಂದು ದೊರೆತಿದ್ದು, ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೆ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ನಿರ್ಣಯವಾಗಬೇಕಾಗಿದೆ.

ಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೆ ಶ್ರೇಷ್ಠವಾದದು ಮಾತ್ರವಲ್ಲ.ಮೂಲ ಆಕಾರ ಕೃತಿ ಸಂಸ್ಕೃತದ ಚೌಂಡ ಕೌಶಿಕ ನಾಟಕ. ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ. `ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶ ಸೃಷ್ಟಿ, ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ' ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. `ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು' ಎನ್ನುವ ತತ್ತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ. ಇದರಲ್ಲಿ 14 ಸ್ಥಲಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ. ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೋರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿ ಹದ, ನಾಟ್ಯಮಯವಾದ ಸನ್ನಿವೇಶಗಳು, ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ, ಇದೆಲ್ಲವನ್ನು ವ್ಯಾಪಿಸಿರುವ ದರ್ಶನ- ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು. ಸಿದ್ಧರಾಮ ಪುರಾಣ `ಕಾಯಕವೆ ಕೈಲಾಸ' ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ. `ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ' ಎಂಬ ಸೂತ್ರವೇ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ತ್ವ. ಇದು ರಾಘವಾಂಕನ ಧರ್ಮಶ್ರದ್ಧೆಯ ಸಾತ್ತ್ವಿಕ ಪ್ರತಿನಿಧಿಯಾಗಿದೆ. ಸೋಮನಾಥ ಚರಿತ್ರೆ ಸೌರಾಷ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಷ್ಟ್ರದ ಸೋಮನಾಥನನ್ನು ಅಲ್ಲಿಯ ಜಿನಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೇಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ. ಹರೀಶ್ಚಂದ್ರ ಕಾವ್ಯದ ಆ ದರ್ಶನವಾಗಲಿ, ಸಿದ್ಧರಾಮಪುರಾಣದ ಅನುಭಾವದೃಷ್ಟಿಯಾಗಲಿ ಈ ಕೃತಿಯಲ್ಲಿ ಕಾಣಿಸಿತು. ವೀರೇಶ ಚರಿತೆ ಹಾಗೂ ಶರಭಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ. ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ. ಶಿವನ ಅವತಾರವಾದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರ ದೇವತೆಗಳಿಗಿಂತ ಶಿವನ ಶ್ರೇಷ್ಠ ಎಂಬುದನ್ನು ಸಾರುವ ಉದ್ದೇಶ ಇದರಲ್ಲಿದೆ. ಶರಭಚಾರಿತ್ರ ಅದರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ.

ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ. `ಜನಬದುಕಬೇಕೆಂದು ಕಾವ್ಯಮುಖದಿಂ ಪೇಳ್ದನನಪೇಕ್ಷೆಯಿಂದ' ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ `ವರಸುತ'ನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು. ತನ್ನದೇ ಅದೊಂದು ಪರಪಂರೆಯನ್ನು ನಿರ್ಮಿಸಿಕೊಂಡವ. ತನಗೆ ಹಿನ್ನಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ, ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ತ್ವದ ಸಾಧನೆ. ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ, ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತ್ತೊಬ್ಬ ಕವಿ ರಾಘವಾಂಕ.

(ಜಿ.ಎಸ್.ಎಸ್.)