- ರಾಮಚಂದ್ರಪ್ಪ ಬರಗೂರು:-
ಕನ್ನಡ ಚಳುವಳಿ ಕೇವಲ ಭಾಷಿಕ ಚಳವಳಿ ಆಗಬಾರದು; ಅದು ಸಾಮಾಜಿಕ ಸಾಂಸ್ಕøತಿಕ ಆಂದೋಳನವಾಗಿ ಬೆಳೆಯಬೇಕು. ಕುರ್ಚಿಯಲ್ಲಿ ಮನುಷ್ಯನಿಂದ ಪ್ರಜಾಪ್ರಭುತ್ವ ಅಳಿಯುತ್ತದೆ. ಕುರ್ಚಿಯನ್ನು ಕುಬ್ಜಗೊಳಿಸಿ ಬೆಳೆಯುವ ಮನುಷ್ಯನಿಂದ ಪ್ರಜಾಪ್ರಭುತ್ವ ಉಳಿಯುತ್ತದೆ. ಧರ್ಮಗಳ ವಕ್ತಾರರು ತಮ್ಮ ಮತ್ತು ಧರ್ಮದ ಮಠಮಾರಿತನವನ್ನು ಮೆರೆಯುವುದಕ್ಕೆ ಭವ್ಯ ಪರಂಪರೆಯ ಮಾತನ್ನಾಡುತ್ತಾರೆ. ಇದಕ್ಕಾಗಿ ಅನೇಕ ಸಂತರನ್ನೂ ಕವಿಗಳನ್ನೂ ಕಾವ್ಯಗಳನ್ನೂ ಉದಾಹರಿಸಿ ವಿಜೃಂಭಿಸುತ್ತಾರೆ. ಆದರೆ ನಾನು ಗ್ರಹಿಸಿದಂತೆ ನಮ್ಮ ಸಂತರು ಮತ್ತು ಕವಿಗಳು ಧರ್ಮಾವಲಂಬಿಗಳಾಗಿದ್ದಾಗಲೂ ಸಾಂಸ್ಥಿಕ ನೆಲೆಯಲ್ಲಿ ಧರ್ಮವನ್ನು ಗ್ರಹಿಸಲ್ಲ-ಇವೆಲ್ಲವೂ ಬರಗೂರು ರಾಮಚಂದ್ರಪ್ಪ ಅವರ ಮಾತುಗಳು. ಇವು ಸೂಚ್ಯವಾಗಿ ಅವರ ವ್ಯಕ್ತಿತ್ವ ಮತ್ತು ಚಿಂತನಾ ಕ್ರಮವನ್ನು ಪರಿಚಯಿಸುತ್ತವೆ.
ಸಿನಿಮಾ, ಸಂಸ್ಕøತಿ, ಶಿಕ್ಷಣ, ಆಡಳಿತ ಮುಂತಾದ ಹಲವು ಪೂರಕ ಸಂಬಂಧೀ ಕ್ಷೇತ್ರಗಳಲ್ಲಿ ಕೃಷಿ ಮಾಡಿ, ಅಲ್ಲೆಲ್ಲಾ ಬರಗೂರು ಅವರು ನಡೆ-ನುಡಿಗಳೊಂದಾದ ನೆಲೆಯಲ್ಲಿ ಬದುಕಿದವರು ಮತ್ತು ಬರೆದವರು. ಸಾಹಿತ್ಯ, ಸಂಘಟನೆ ವ್ಯಕ್ತಿತ್ವದ ಛಾಪನ್ನು ಮೂಡಿಸಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಬರಗೂರು ಅವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರಿನಲ್ಲಿ 1947 ಅಕ್ಟೋಬರ್ 18 ರಂದು ಜನಿಸಿದರು. ಅಲ್ಲಿಂದ ಮುಂದೆ ಪ್ರಾಥಮಿಕ ಶಿಕ್ಷಣವನ್ನು ಹುಟ್ಟಿದ ಊರಿನಲ್ಲಿ ಪೂರೈಸಿ, ಕಾಲೇಜು ಶಿಕ್ಷಣವನ್ನು ತುಮಕೂರಿನಲ್ಲಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದರು. ತುಮಕೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೇವೆಯನ್ನು ಆರಂಭಿಸಿದ ಇವರು ಅನಂತರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2003ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಈ ನಡುವೆ ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ಸಂಚಾಲಕರಾಗಿ, ಅನಂತರ ಒಂಭತ್ತು ವರ್ಷಗಳ ಕಾಲ ರಾಜ್ಯ ಸಂಚಾಲಕರಾಗಿ ಮಾಡಿದ ಕಾರ್ಯ ಕರ್ನಾಟಕದ ಕಳೆದ ಕಾಲು ಶತಮಾನದ ಇತಿಹಾಸದಲ್ಲಿ ಸ್ಮರಣೀಯವಾದುದಾಗಿದೆ. ಇದರೊಂದಿಗೆ ತುಮಕೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆ ವಿಶಿಷ್ಟವಾದುದಾಗಿದೆ. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ, ವಿಮರ್ಶಕರಾಗಿ, ಕತೆ-ಕಾದಂಬರಿಕಾರರಾಗಿ ಅನೇಕ ಕೃತಿಗಳನ್ನು ಹೊರತಂದಿದ್ದಾರೆ. ಸಿನಿಮಾ ರಂಗದಲ್ಲಿ ಅನೇಕ ಪ್ರಶಸ್ತಿ ವಿಜೇತ ಚಿತ್ರಗಳನ್ನು ಮಾಡಿದ್ದಾರೆ. ಸಾಹಿತಿಯಾಗಿ ಕರ್ನಾಟಕದ ಸಾಂಸ್ಕøತಿಕ ರಂಗವನ್ನು ಪ್ರವೇಶಿಸಿದ ಬರಗೂರು ಅವರು ಇದುವರೆಗೂ ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂವು, ಗುಲಾಮ ಗೀತೆ, ಮಗುವಿನ ಹಾಡು, ಕಾಂಟೆಸ್ಸಾದಲ್ಲಿ ಕಾವ್ಯ (ಸಮಗ್ರ ಸಂಕಲನ) ಎಂಬ ಕವನಸಂಗ್ರಹಗಳನ್ನು, ಸುಂಟರಗಾಳಿ, ಕಪ್ಪು ನೆಲದ ಕೆಂಪು ಕಾಲು, ಒಂದು ಊರಿನ ಕತೆಗಳು (ಆಯ್ದ ಕತೆಗಳು) ಎಂಬ ಸಣ್ಣಕತೆಗಳ ಸಂಕಲನಗಳನ್ನು, ಸೂತ್ರ, ಉಕ್ಕಿನಕೋಟೆ, ಬೆಂಕಿ ಒಂದು ಊರಿನ ಕತೆ, ಸೂರ್ಯ, ಸಂಗಪ್ಪನ ಸಾಹಸಗಳು, ಸೀಳು ನೆಲ, ಭರತ ನಗರಿ, ಗಾಜಿನ ಮನೆ, ಸ್ವಪ್ನ ಮಂಟಪ ಎಂಬ ಕಾದಂಬರಿಗಳನ್ನು; ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕøತಿ ಮತ್ತು ಸೃಜನಶೀಲತೆ, ಬಂಡಾಯ ಸಾಹಿತ್ಯ ಮೀಮಾಂಸೆ, ಇಣುಕು ನೋಟ, ಸಂಸ್ಕøತಿ ಉಪಸಂಸ್ಕøತಿ, ವರ್ತಮಾನ, ರಾಜಕೀಯ ಚಿಂತನೆ, ಸಂಸ್ಕøತಿ: ಶ್ರಮ ಮತ್ತು ಸೃಜನಶೀಲತೆ (ಆಯ್ದ ಲೇಖನಗಳ ಬೃಹತ್ ಸಂಕಲನ), ಪರಂಪರೆಯೊಂದಿಗೆ ಪಿಸುಮಾತು ಎಂಬ ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕಗಳೊಂದಾದ ಕೃತಿಗಳನ್ನು, ಮುಳ್ಳು ಹಾದಿ, ಕಪ್ಪು ಹಲಗೆ, ಕೋಟೆ ಎಂಬ ನಾಟಕಗಳನ್ನು ಬರೆದಿದ್ದಾರೆ. ಇವರು ಸಂಪಾದಕರಾಗಿ, ಪ್ರಧಾನ ಸಂಪಾದಕರಾಗಿ, ಜಂಟಿ ಸಂಪಾದಕರಾಗಿ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೊರ ಬಂದ ಮತ್ತು ಕರ್ನಾಟಕದ ಹಲವು ಮುಖಗಳನ್ನು ಪರಿಚಯಿಸುವ ಬೃಹತ್ ಗ್ರಂಥ ಕರ್ನಾಟಕ ಸಂಗಾತಿ, ಕಂಪ್ಯೂಟರ್ ಪದ ವಿವವರಣ ಕೋಶ, ಸಮೂಹ ಮಾಧ್ಯಮ ಪದವಿವರಣ ಕೋಶ, ವಿಶ್ವವಿದ್ಯಾಲಯ ಪದವಿವರಣ ಕೋಶ, ಆಡಳಿತ ಪದವಿವರಣ ಕೋಶ — ಇವು ಇಲ್ಲಿ ಪ್ರಸ್ತುತಗೊಳ್ಳುತ್ತವೆ. ಸಮುದಾಯ ಸಂಘಟನೆಯ ಸಮುದಾಯ ವಾರ್ತಾಪತ್ರ, ಬೆಂಗಳೂರು ವಿಶ್ವವಿದ್ಯಾಲಯದ ತ್ರೈಮಾಸಿಕವಾದ ಸಾಧನೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹೊರಬಂದ ಬಂಡಾಯ ಕಾವ್ಯ, ಕನಕ ಸಂಪುಟ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಹೊರಬಂದ ಜಾನಪದ: ವೈಜ್ಞಾನಿಕ ವಿಧಾನಗಳು ಇದೇ ನೆಲೆಯಲ್ಲಿ ಮುಖ್ಯವಾಗುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಬೃಹತ್ ಪ್ರಮಾಣದ ಮೌಲಿಕ ಕೃತಿಗಳನ್ನು ತಂದಿರುವುದು ಇವರ ಪ್ರಮುಖ ಕಾರ್ಯಗಳಲ್ಲಿ ಒಂದೆನಿಸಿದೆ. ಅವುಗಳಲ್ಲಿ 12 ಸಂಪುಟಗಳ ಕನ್ನಡ ಸಾಹಿತ್ಯದ ಪುನರ್ ಮೌಲ್ಯೀಕರಣ ಮಾಲೆ 40 ಕೃತಿಗಳ ಉಪಸಂಸ್ಕøತಿಗಳ ಅಧ್ಯಯನ ಮಾಲೆ, 10 ಕೃತಿಗಳ ಅಂತರ್ ಶಿಸ್ತೀಯ ಅಧ್ಯಯನ ಮಾಲೆ, 18 ಕೃತಿಗಳ ಜ್ಞಾನಪೀಠ ಪ್ರಶಸ್ತಿ ವಿಜೇತರು ಮಾಲೆ, 15 ಕೃತಿಗಳ ಮರೆಯಬಾರದ ಬರಹಗಾರರು- ಸಾಹಿತ್ಯ ವಾಚಿಕೆ ಮಾಲೆ, 50 ಕೃತಿಗಳ ಸಾಮಾಜಿಕ ಚಿಂತನ ಮಾಲೆ, ಗ್ರಾಮೀಣ ಸಂಸ್ಕøತಿ ಪದಕೊಶ, ಹಳ್ಳಿಯ ಅಧ್ಯಯನ ಮಾಲೆ, 8 ಕಮ್ಮಟದ ಕೃತಿಗಳು, 5 ಕೃತಿಗಳ ನೊಬೆಲ್ ಪ್ರಶಸ್ತಿ ವಿಜೇತರ ವಾಚಿಕೆಗಳು - ಹೀಗೆ ಹಲವಾರು ಕೃತಿಗಳು ಸೇರಿ ಸಂಖ್ಯೆ 250ನ್ನು ಮುಟ್ಟುತ್ತದೆ. ಹೀಗೆ ಬರಗೂರರು ಸಾಹಿತಿಯಾಗಿಲ್ಲದೇ ಸಂಸ್ಕøತಿ ಚಿಂತಕರಾಗಿ ಅನೇಕ ಆಡಳಿತಾತ್ಮಕ ಸ್ಥಾನಗಳಲ್ಲಿ ಸಹ ಕಾರ್ಯ ನಿರ್ವಹಿಸಿದ್ದಾರೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯಲ್ಲದೇ ತುಮಕೂರು ಸ್ನಾತಕೋತ್ತರಕೇಂದ್ರದ ನಿರ್ದೇಶಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ (ಅದ್ಯಕ್ಷರಾಗುವುದಕ್ಕೆ ಮುಂಚೆ), ಕರ್ನಾಟಕ ಸರ್ಕಾರದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ನಾಲ್ಕು ಬಾರಿ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಚಲನಚಿತ್ರ ಭಂಡಾರದ ಸ್ಥಾಪಕ ಸದಸ್ಯರಾಗಿ, ದೂರದರ್ಶನ, ಅಕಾಶವಾಣಿಗಳಿಗೆ ಆಯ್ಕೆ ಸಮಿತಿ ಸದಸ್ಯರಾಗಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿಗೆ ಮೂರು ಬಾರಿ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರಕ್ಕೆ ಮೂವತ್ತಮೂರು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ನೀಡಿದ್ದಾರೆ. ಅವುಗಳನ್ನಾಧರಿಸಿ ಸರ್ಕಾರವು 1ರಿಂದ 10ನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶದಲ್ಲಿ ಶೇಕಡ 5ರಷ್ಟು ಸೀಟುಗಳನ್ನು ಮೀಸಲು ಮಾಡಿ ಆದೇಶವನ್ನು ಹೊರಡಿಸಿದೆ. ಅಂತೆಯೇ ಇದೇ ಬಗೆಯ ವಿದ್ಯಾರ್ಥಿಗಳಿಗೆ ಸರ್ಕಾರದ ಉದ್ಯೋಗಗಳಲ್ಲಿಯೂ ಶೇಕಡ 5ರಷ್ಟು ಮೀಸಲಾತಿ ಲಭ್ಯವಾಗಿದೆ. ಈ ಎರಡೂ ಕಾರ್ಯಗಳಲ್ಲಿ ಇಂದು ಸಾವಿರಾರು ಫಲಾನುಭವಿಗಳಿದ್ದಾರೆ.
ಬರಗೂರರ ಈ ವರದಿಯ ಅನುಷ್ಠಾನದ ಭಾಗವಾಗಿ ಎಂಜಿನಿಯರಿಂಗ್ ಪದವಿ ಶಿಕ್ಷಣದ ಮೊದಲ ಎರಡು ಸೆಮಿಸ್ಟರ್‍ಗಳಿಗೆ ಸ್ಥಳೀಯ ಭಾಷೆಯಾದ ಕನ್ನಡವನ್ನು ಒಂದು ಪಠ್ಯವನ್ನಾಗಿ ಅಳವಡಿಸಲಾಗಿದೆ. ರಾಜ್ಯದ ಭಾಷಾ ನೀತಿಯ ಅನುಸಾರ ಆಡಳಿತದಲ್ಲಿ ಕನ್ನಡವನ್ನು ಬಳಸದ ಅಧಿಕಾರಿ ಮತ್ತು ನೌಕರನ ವಿರುದ್ಧ ಸರ್ಕಾರವು ನಿರ್ದಿಷ್ಟ ಶಿಸ್ತು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಬರಗೂರರು ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತೊಂದು ವರದಿಯನ್ನು ಕೊಟ್ಟಿದ್ದಾರೆ. ಅದು ಕರ್ನಾಟಕದ ಗಡಿನಾಡಿನ ಸ್ಥಿತಿಗತಿಗಳನ್ನು ಕುರಿತ 400 ಪುಟಗಳ ವರದಿ. ಅದು ಡಿ.ಎಂ. ನಂಜುಂಡಪ್ಪ ಅವರ ವರದಿಯಂತೆ ಸರ್ಕಾರದ ಜೋಗುಳದಿಂದ ನಿದ್ದೆ ಮಾಡುತ್ತಿದೆ.
ಬರಗೂರರು ಸಿನಿಮಾ ರಂಗದಲ್ಲಿಯೂ ಹಲವು ಕೃತಿಗಳನ್ನು ನಿರ್ಮಿಸಿದ್ದಾರೆ. ಇವರು ನಿರ್ದೇಶಕರಾಗಿ ಒಂದು ಊರಿನ ಕತೆ, ಬೆಂಕಿ, ಸೂರ್ಯ, ಕೋಟೆ, ಕರಡಿಪುರ, ಹಗಲುವೇಷ, ಕ್ಷಾಮ, ಶಾಂತಿ ಚಲನಚಿತ್ರಗಳಲ್ಲದೇ ಹಲವು ಸಾಕ್ಷ್ಯ ಚಿತ್ರಗಳನ್ನು ಸಹ ನೀಡಿದ್ದಾರೆ. ಇವರ ಶಾಂತಿ ಚಿತ್ರವು ಗಿನ್ನೆಸ್ ದಾಖಲೆಯನ್ನು ಸಹ ಪಡೆದಿದೆ.
ಹೀಗೆ ಬರಗೂರು ರಾಮಚಂದ್ರಪ್ಪ ಅವರು ಸಾಹಿತಿಯಾಗಿ, ಅಧ್ಯಾಪಕರಾಗಿ, ಸಂಘಟಕರಾಗಿ, ಸಂಸ್ಕøತಿ ಚಿಂತಕರಾಗಿ, ಚಲನಚಿತ್ರ ನಿರ್ದೇಶಕರಾಗಿ, ಮಾಡಿದ ಅವಿರತ ಮತ್ತು ವಿಶಿಷ್ಟ ಸಾಧನೆಗೆ ಸಹಜವಾಗಿಯೇ ಹಲವು ಪ್ರಶಸ್ತಿ-ಪುರಸ್ಕಾರಗಳು ಅರಸಿ ಬಂದಿವೆ. ಅವುಗಳಲ್ಲಿ ಪ್ರಮುಖವಾದುವೆಂದರೆ — ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1998), ಇದೇ ಸಂಸ್ಥೆಯಿಂದ ತಮ್ಮ ಸುಂಟರಗಾಳಿ ಕೃತಿಗಾಗಿ ಶ್ರೇಷ್ಠ ಕಥಾ ಸಂಕಲನ ಪುಸ್ತಕ ಬಹುಮಾನ (1975), ಒಂದು ಊರಿನ ಕತೆಗಾಗಿ ಶ್ರೇಷ್ಠ ಸಂಭಾಷಣೆಗಾರ ಎಂಬ ಕರ್ನಾಟಕ ಸರ್ಕಾರದ ಚಲನಚಿತ್ರ ಪ್ರಶಸ್ತಿ (1978), ಬೆಂಕಿ ಚಿತ್ರಕ್ಕಾಗಿ ಶ್ರೇಷ್ಠ ಕಥಾ ಲೇಖಕ ಎಂಬ ಕರ್ನಾಟಕ ಸರ್ಕಾರದ ಚಲನಚಿತ್ರ ಪ್ರಶಸ್ತಿ (1983), ಇದೇ ಚಿತ್ರಕ್ಕಾಗಿ ಇದೇ ವರ್ಷದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಸಹ ಸಂದಿತು. 1987ರಲ್ಲಿ ಸೂರ್ಯ ಚಿತ್ರದ ನಿರ್ದೇಶನಕ್ಕಾಗಿ ಎರಡನೆಯ ಶ್ರೇಷ್ಠ ನಿರ್ದೇಶಕ ಪ್ರಸಸ್ತಿ, 1989ರಲ್ಲಿ ಕೋಟೆ ಚಿತ್ರದ ಹಾಡುಗಳಿಗಾಗಿ ಶ್ರೇಷ್ಠ ಗೀತ ರಚನೆಕಾರ ಪ್ರಶಸ್ತಿ, 1998ರಲ್ಲಿ ಜನುಮದ ಜೋಡಿಗಾಗಿ ಉದಯ ಟಿ.ವಿ. ನೀಡುವ ಶ್ರೇಷ್ಠ ಸಂಭಾಷಣೆಕಾರ ಪ್ರಶಸ್ತಿ, 1997ರಲ್ಲಿ ಇದೇ ಚಿತ್ರಕ್ಕಾಗಿ ಆರ್ಯಭಟ ಪ್ರಶಸ್ತಿಯೂ ಸಂದಿತ್ತು. 1997ರಲ್ಲಿ ಕರ್ನಾಟಕ ಸರ್ಕಾರದಿಂದ ಇದೇ ಚಿತ್ರಕ್ಕಾಗಿ ಶ್ರೇಷ್ಠ ಸಂಭಾಷಣೆಕಾರ ಪ್ರಸಸ್ತಿ ಸಂದಿದೆ. ಇವರ ಸೂರ್ಯ ಚಲನಚಿತ್ರವು ರಷ್ಯಾದ ಅಂತರರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ಮತ್ತು ಕರಡಿಪುರ ಚಿತ್ರವು ಬ್ರಿಟನ್ನಿನ ಲೀಡ್ಸ್ ಅಂತರ್‍ರಾಷ್ಟ್ರೀಯ ಚಿತ್ರೋತ್ಸವಕ್ಕೂ 1998ರಲ್ಲಿ ಆಯ್ಕೆಗೊಂಡವು. ಸಾಹಿತ್ಯ ಮತ್ತು ಸಿನಿಮಾಗಳಿಗೆ ಸಂಬಂಧಿಸಿದ ಈ ಪ್ರಶಸ್ತಿಗಳಲ್ಲದೇ ಇವರ ಒಟ್ಟು ಸಾಧನೆಗಾಗಿ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗಳು ಸಂದಿವೆ. (ಕಾ.ವೆಂ.ಶ್ರಿನಿವಾಸಮೂರ್ತಿ)