ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮಚಂದ್ರರಾವ್ ಎಸ್ ಕೆ

ರಾಮಚಂದ್ರರಾವ್ ಎಸ್ ಕೆ 1925-2006. ಬಹುಭಾಷಾ ಪಂಡಿತ, ಬಹುವಿದ್ಯಾ ಪಂಡಿತ, ಬಹುಶ್ರುತ ವಿದ್ವಾಂಸ. ತಮ್ಮ ಜೀವನಪರ್ಯಂತ ಜ್ಞಾನಾರ್ಜನೆ, ಜ್ಞಾನಸಂರಕ್ಷಣೆ ಮಾಡುತ್ತಾ, ಅರಸಿಕೊಂಡು ಹೋದವರಿಗೆಲ್ಲಾ ಪ್ರತಿಫಲಾಪೇಕ್ಷೆ ಇಲ್ಲದೆ ಜ್ಞಾನದಾನ ಮಾಡಿದವರು. ಪ್ರೊ. ಎಸ್.ಕೆ.ರಾಮಚಂದ್ರರಾವ್. ಅವರು ಪ್ರೊ. ಸಾ.ಕೃ., ಎಸ್.ಕೆ.ಆರ್. ಎಂತಲೂ ಚಿರಪರಿಚಿತರು.

ಸಾಲಿಗ್ರಾಮ ಕೃಷ್ಣ ರಾಮಚಂದ್ರರಾವ್ ಹುಟ್ಟಿದ್ದು ಹಾಸನದಲ್ಲಿ, 1925ರ ಸೆಪ್ಟೆಂಬರ್ 4ರಂದು. ತಂದೆ ಸಾಲಿಗ್ರಾಮ ಕೃಷ್ಣ ನಾರಾಯಣರಾವ್, ತಾಯಿ ಕಮಲಾಬಾಯಿ. ಸಾಂಪ್ರದಾಯಿಕ ಮನೆತನ. ಮನೆಯಲ್ಲಿ ಸಂಗೀತ, ಸಂಸ್ಕøತ, ಆಯುರ್ವೇದಗಳ ವಾತಾವರಣ. ರಾಯರ ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಶಾಲೆಯಲ್ಲಿ. ಅನಂತರ ನಂಜನಗೂಡಿನಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿಯನ್ನು ಪಡೆದರು (1948).

ನಂಜನಗೂಡಿನ ಸಂಸ್ಕøತ ಪಾಠಶಾಲಾಧ್ಯಕ್ಷರಾಗಿದ್ದ ಕನ್ನಂಬಾಡಿ ನಾರಾಯಣಶಾಸ್ತ್ರಿಗಳಿಂದ ಕಾವ್ಯ ನಾಟಕಗಳ ಪಾಠ. ಉತ್ತರಾದಿಮಠದ ದಿವಾನರಾಗಿದ್ದ ಅಗ್ನಿಹೋತ್ರಿ ಯಜ್ಞವಿಠಲಾಚಾರ್ಯರಿಂದ ತರ್ಕಶಾಸ್ತ್ರ, ಬೆಂಗಳೂರಿನ ಕೇಶವ ಘನಪಾಠಿಗಳಲ್ಲಿ ಯಜುರ್ವೇದ, ನಂಜನಗೂಡಿನ ವೆಂಕಟೇಶ ಸೋಮಯಾಜಿಗಳಲ್ಲಿ ಪೂರ್ವಮೀಮಾಂಸ, ತಲಕಾಡು ಕೃಷ್ಣ ದೀಕ್ಷಿತರಲ್ಲಿ ಶೈವ-ಶಾಕ್ತ-ವೈಷ್ಣವ ಮುಂತಾದ ಆಗಮಗಳು, ಮಾಡಂಬಾಕಂ ಶ್ರೀನಿವಾಸಭಟ್ಟಾಚಾರ್ಯರಲ್ಲಿ ವೈಖಾನಸಾಗಮ, ಪಂಡಿತರಾಜ ಪಾಲಕ್ಕಾಡು ನಾರಾಯಣಶಾಸ್ತ್ರಿಗಳಲ್ಲಿ ಅದ್ವೈತವೇದಾಂತದ ಅಧ್ಯಯನ. ಬಾಲ್ಯದಿಂದಲೇ ಅವರು ಶೃಂಗೇರಿಯ ಶಾರದಾಪೀಠದ ಹಿಂದಿನ ಜಗದ್ಗುರುಗಳಾದ ಚಂದ್ರಶೇಖರಭಾರತಿಸ್ವಾಮಿಗಳಿಂದ ಪ್ರಭಾವಿತರಾದರು.

ಡಿ.ವಿ.ಜಿ, ರಾಳ್ಳಪಲ್ಲೀ ಅನಂತಕೃಷ್ಣಶರ್ಮ, ಎಂ ಹಿರಿಯಣ್ಣ, ಮಾಸ್ತಿ, ವಿ.ಕೃ.ಗೋಕಾಕ್, ದ.ರಾ.ಬೇಂದ್ರೆ, ಕೆ.ವೆಂಕಟಪ್ಪ, ರಾಹುಲ ಸಾಂಕೃತ್ಯಾಯನ ಮುಂತಾದವರಿಂದ ಪ್ರಭಾವಿತರಾದರು. ಪ್ರಾಚೀನ - ನವೀನ ಜ್ಞಾನಧಾರೆಗಳನ್ನು ಮೈಗೂಡಿಸಿಕೊಂಡು ಅದರಂತೆ ಬದುಕು - ಬರಹಗಳನ್ನು ನಡೆಸಿದವರು. ಪ್ರತಿ ವಿಷಯವನ್ನು ಹೊಸತನದಿಂದ, ವೈಜ್ಞಾನಿಕ ಹಿನ್ನೆಲೆಯಿಂದ ನೋಡಬಲ್ಲ ಮನಸ್ಸು, ದೃಷ್ಟಿ ಅವರದ್ದು.

ರಾಮಚಂದ್ರರಾಯರ ವೃತ್ತಿಜೀವನ ಆರಂಭವಾದದ್ದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧಕ ಸಹಾಯಕರಾಗಿ. ಮುಂದೆ ಮೆಂಟಲ್‍ಹೆಲ್ತ್ ಇನ್‍ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ವೃತ್ತಿ. ಅನಂತರ ಅಲ್ಲಿಯೇ ಪ್ರವಾಚಕ, ಬಳಿಕ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥ (1954-65). ಅಲ್ಲಿಂದ ಮುಂದೆ, ಆರ್.ವಿ.ಟೀಚರ್ಸ್ ಕಾಲೇಜು ಹಾಗೂ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‍ಸ್‍ಗಳಲ್ಲಿ ಕೆಲಕಾಲ ಮನಶ್ಶಾಸ್ತ್ರದ ಬೋಧನೆ. ಅಮೆರಿಕೆಯ ಪೆಸಿಫಿಕ್ ವಿಶ್ವವಿದ್ಯಾಲಯದ ವಿಸ್ತರಣವಾಗಿ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿದ್ದ ಕ್ಯಾಲಿಸನ್ ಕಾಲೇಜ್ ಸ್ಟಡೀ ಸೆಂಟರಿನಲ್ಲಿ ಮನಶ್ಶಾಸ್ತ್ರ, ದರ್ಶನಶಾಸ್ತ್ರ, ತೌಲನಿಕ ಮತಾಧ್ಯಯನ, ಗಾಂಧಿತತ್ತ್ವಗಳ ಬೋಧನೆ (1969-74). ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಮನಶ್ಶಾಸ್ತ್ರ, ದರ್ಶನಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಭಾರತೀಯಶಾಸ್ತ್ರಗಳ ಪಾಠ. ಇವಲ್ಲದೆ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಡ್ ಸ್ಟಡೀಸ್ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ಗಳಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅಲ್ಲದೆ, ಭಾರತೀಯ ವಿಜ್ಞಾನಮಂದಿರದಲ್ಲಿ ಸೆಂಟರ್ ಫಾರ್ ಥಿಯೊರಿಟಿಕಲ್ ಸ್ಟಡೀಸ್‍ನಲ್ಲಿ ದರ್ಶನಗಳನ್ನು ಕುರಿತು ವಿಶೇಷ ತರಗತಿಗಳನ್ನು ನಡೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ವಿವೇಕಾನಂದ ಪೀಠದ ಸಂದರ್ಶಕ ಪ್ರಾಚಾರ್ಯರಾಗಿ ವೇದಾಂತದ ಬೋಧನೆ ಮಾಡಿದ್ದಾರೆ. ಎನ್.ಎಂ.ಕೆ.ಆರ್.ವಿ. ಹಾಗೂ ಎಂ.ಇಎಸ್. ಕಾಲೇಜುಗಳಲ್ಲದೆ ಚಿತ್ರಕಲಾಪರಿಷತ್ತನಲ್ಲೂ ತರಗತಿಗಳನ್ನು ನಡೆಸಿದ್ದಾರೆ.

ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ಶಿಲ್ಪಕಲಾ ಪ್ರತಿಷ್ಠಾನದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯ ಕನ್ನಡ ವಿಶ್ವಕೋಶ ಯೋಜನೆಯಲ್ಲಿ ಕಲಾ ವಿಭಾಗದ ಅಧ್ಯಕ್ಷರಾಗಿ, ಮಿಥಿಕ್ ಸೊಸೈಟಿಯ ಉಪಾಧ್ಯಕ್ಷರು ಮಾತ್ರವಲ್ಲದೆ, ಆ ಸಂಸ್ಥೆಯ ವಿದ್ವತ್ಪತ್ರಿಕೆಯ ಸಂಪಾದಕರಾಗಿ, ಸರ್ಕಾರದ ಆಗಮ ಸಲಹಾ ಮಂಡಲಿಯ ಸದಸ್ಯರಾಗಿ, ಜ್ಞಾನಗಂಗೋತ್ರಿ ಕಿರಿಯರ ವಿಶ್ವಕೋಶದ ತಜ್ಞಮಂಡಲಿಯ ಸದಸ್ಯರಾಗಿ, ಇನ್‍ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‍ನ ವಿದ್ವತ್ಪತ್ರಿಕೆಯ ಸಂಪಾದಕರಾಗಿ, ಜರ್ನಲ್ ಆಫ್ ಅಪ್ಲೈಡ್ ಸೈಕಾಲಜಿಯ ಸಂಪಾದಕರಾಗಿ, ಪಬ್ಲಿಕ್ ಸರ್ವಿಸ್ ಕಮಿಷನ್ನಿನ ತಜ್ಞಸದಸ್ಯರಾಗಿ, ಆಕಾಶವಾಣಿಯ ಆಡಿಷನ್ ಬೋರ್ಡಿನ ಸದಸ್ಯರಾಗಿ, ತಿರುಮಲೆ ತಿರುಪತಿ ದೇವಾಲಯ ಸಮುಚ್ಚಯದ ಮಾರ್ಗದರ್ಶಕ ಮಂಡಲಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದವರು.

ರಾಯರು ಕೃಷಿಮಾಡಿರುವ ಕ್ಷೇತ್ರಗಳೆಂದರೆ ವೇದ, ವೇದಾಂತ, ಜೈನ-ಬೌದ್ಧಾದಿ ದರ್ಶನಗಳು, ಶಿಲ್ಪ, ಚಿತ್ರ, ಸಂಗೀತ, ಆಯುರ್ವೇದ, ಆಗಮ, ತಂತ್ರ, ಮನಃಶಾಸ್ತ್ರ, ಯೋಗ, ಜೀವನಚರಿತ್ರೆ, ಕಾದಂಬರಿ, ಅನುವಾದ, ಗ್ರಂಥಸಂಪಾದನೆ, ನಾಟ್ಯ, ಕಲಾಮೀಮಾಂಸೆ, ಸಾಹಿತ್ಯ.

ಕನ್ನಡ, ಇಂಗ್ಲಿಷ್, ಸಂಸ್ಕøತ, ತೆಲಗು, ತಮಿಳು, ಪಾಲಿ, ಪ್ರಾಕೃತ, ಹಿಂದಿ, ಬಂಗಾಲಿ, ಜರ್ಮನ್, ಗ್ರೀಕ್, ಟಿಬೇಟನ್ ಮುಂತಾದ ಹಲವು ಭಾಷೆಗಳನ್ನು ಬಲ್ಲವರಾಗಿದ್ದ ರಾಯರು ಕನ್ನಡದಲ್ಲಿ 80ಕ್ಕೂ ಹೆಚ್ಚು ಹಾಗೂ ಇಂಗ್ಲಿಷಿನಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವಲ್ಲದೆ, ಪೌರವದಿಗ್ವಿಜಯಂ ಎಂಬ ಸಂಸ್ಕøತನಾಟಕವನ್ನೂ, ಪಾಳಿಯಲ್ಲಿ ಸುಮಂಗಲಗಾಥಾ ಎಂಬ ಕಾವ್ಯವನ್ನು, ವಿಸುದ್ಧಮಗ್ಗವಿಭಾವನೀ ಎಂಬ ಟೀಕಾಗ್ರಂಥವನ್ನೂ ರಚಿಸಿದ್ದಾರೆ.

ರಾಯರ ಕೆಲವು ಪ್ರಮುಖ ಕನ್ನಡ ಕೃತಿಗಳು: ಟಿಬೆಟ್ಟಿನ ಯೋಗಿ ಮಿಲರೇಪ, ಬೋದೀಯ ಬೆಳಕಿನಲ್ಲಿ, ವಾಲ್ಮೀಕಿಯ ಪ್ರತಿಭೆ, ಪೂರ್ಣಪ್ರಜ್ಞಪ್ರಶಸ್ತಿ, ಮನಃಶಾಸ್ತ್ರಪ್ರವೇಶಿಕೆ, ನಗೆಯ ನೆಲೆ, ಶಾಂತಳೆ, ಸುಖಪ್ರಾರಬ್ಧ, ವಿವಾಹಪದ್ಧತಿಗಳು, ಕಲಾತಪಸ್ವಿ ಕೆ. ವೆಂಕಟಪ್ಪ, ಮೂರ್ತಿಶಿಲ್ಪ ನೆಲೆ-ಹಿನ್ನಲೆ, ಅತೀಂದ್ರಿಯ ಅನುಭವ, ಬೆಂಗಳೂರಿನ ಕರಗ, ತಿರುಪತಿ ತಿಮ್ಮಪ್ಪ, ಮಂಗನೂರಿನ ಬುದ್ಧಿವಂತರು ಮತ್ತು ಇತರ ಕತೆಗಳು, ಭಾರತದ ದೇವಾಲಯ : ನೆಲೆ-ಹಿನ್ನಲೆ, ಭಾರತೀಯ ದೇವಾಲಯಗಳ ಜಾನಪದ ಮೂಲ, ಆಯುರ್ವೇದ ಪರಿಚಯ, ಕರ್ನಾಟಕದ ಕಲೆಗಳು, ಶಾರದಾಪೀಠದ ಮಾಣಿಕ್ಯ, ಆನಂದ ಕುಮಾರಸ್ವಾಮಿ, ವೈವಸ್ವತಮನು, ಶಂಕರವಾಣಿ, ಶ್ರೀಕೃಷ್ಣನ ವ್ಯಕ್ತಿತ್ವ, ಸಂಗೀತರತ್ನ ಮೈಸೂರು ಟಿ. ಚೌಡಯ್ಯ, ಶ್ರೀಸೂಕ್ತ, ಗೀತೆಗೊಂದು ಕೈಪಿಡಿ, ಅವಧೂತ, ಚಿತ್ರರಾಮಾಯಣ, ಅಭಿನವಗುಪ್ತ, ದಾಸಸಾಹಿತ್ಯ ಮತ್ತು ಸಂಸ್ಕøತಿ, ಸಂಗೀತ ಸಾಮ್ರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮೀ, ದರ್ಶನಪ್ರಬಂಧ, ಶ್ರೀರಾಮಕೃಷ್ಣ ಪರಮಹಂಸರ ಮಾತುಕತೆಗಳು.

ರಾಯರ ಕೆಲವು ಇಂಗ್ಲಿಷ್ ಕೃತಿಗಳು: ದಿ ಎಲಿಮೆಂಟ್ಸ್ ಆಫ್ ಅರ್ಲಿ ಬುದ್ಧಿಸ್ಟ್ ಸೈಕಾಲಜಿ, ಇನ್‍ಟ್ರುಡಕ್ಷನ್ ಟು ಮ್ಯಾಥೆಮೆಟಿಕಲ್ ಸೈಕಾಲಜಿ, ಡೆವಲಪ್‍ಮೆಂಟ್ ಆಫ್ ಸೈಕಲಾಜಿಕಲ್ ಥಾಟ್ ಇನ್ ಇಂಡಿಯಾ, ಟಿಬೆಟಿನ್ ತಾಂತ್ರಿಕ್ ಟ್ರೆಡಿಷನ್, ಕಾನ್‍ಷಿಯಸ್‍ನೆಸ್ ಇನ್ ಅದ್ವೈತ, ಕೆ. ವೆಂಕಟಪ್ಪ, ತಾಂತ್ರಿಕ್ ಪ್ರಾಕ್ಟಿಸಸ್ ಇನ್ ಶ್ರೀವಿದ್ಯಾ, ಲಲಿತಾಕೋಶ, ಪ್ರಿನ್ಸಿಪಲ್ಸ್ ಆಫ್ ಯಜ್ಞವಿಧಿ, ದಿ ಹಿಲ್ ಶ್ರೈನ್ ಆಫ್ ವೆಂಗಡಮ್, ಹ್ಯೂಮನ್ ವ್ಯಾಲೂಸ್ ಇನ್ ಟಿಬೆಟನ್ ಟ್ರೆಡಿಷನ್, ಮೈಸೂರ್ ಚಿತ್ರಮಾಲಾ, ಎನ್ಸೈಕ್ಲೋಪಿಡಿಯಾ ಆಫ್ ಇಂಡಿಯನ್ ಮೆಡಿಸಿನ್ (3 ಸಂಪುಟ), ಆಗಮಕೋಶ (12 ಸಂಪುಟ), ಪ್ರತಿಮಾಕೋಶ (6 ಸಂಪುಟ), ಗಣೇಶಕೋಶ, ನವಗ್ರಹಕೋಶ (2 ಸಂಪುಟ), ಶಾಲಗ್ರಾಮಕೋಶ (2 ಸಂಪುಟ), ವಿಷ್ಣುಕೋಶ, ಶಿವಕೋಶ (2 ಸಂಪುಟ), ಆರ್ಟ್ ಆ್ಯಂಡ್ ಆರ್ಕಿಟೆಕ್ಚರ್ ಆಫ್ ಇಂಡಿಯನ್ ಟೆಂಪಲ್ (3 ಸಂಪುಟ), ದೇವತಾರೂಪಮಾಲಾ (4 ಸಂಪುಟ), ವಾಸ್ತುಶಿಲ್ಪಕೋಶ (3 ಸಂಪುಟ), ಋಗ್ವೇದದರ್ಶನ (16 ಸಂಪುಟ).

ಕೆಲವು ಪ್ರಮುಖ ಸಂಪಾದಿತ ಕೃತಿಗಳು: ಪುರಂದರ ಸಾಹಿತ್ಯ ದರ್ಶನ (4 ಸಂಪುಟ), ಪಾಕೃತ ಪದಕೋಶ, ಸಂಸ್ಕøತ ಕವಿ ಚರಿತ್ರೆ (2 ಸಂಪುಟ), ಆಯುರ್ವೇದದಲ್ಲಿ ನಾಡೀವಿಜ್ಞಾನ, ಡಾ. ಎಂ. ವಿ. ಗೋವಿಂದಸ್ವಾಮಿ, ಲೆಕ್ಚರ್ಸ್ ಆ್ಯಂಡ್ ರೈಟಿಂಗ್ಸ್.

ಇವಲ್ಲದೆ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ಸಾವಿರಾರು ಉಪನ್ಯಾಸಗಳನ್ನು ನೀಡಿದ್ದಾರೆ. ವಿವಿಧ ಕ್ಷೇತ್ರಗಳ ಆಸಕ್ತರಿಗೆ ಹಲವು ದಶಕಗಳ ಕಾಲ ಪಾಠವನ್ನು ಹೇಳಿದ್ದಾರೆ. ಬ್ರಿಟಾನಿಕ ಎನ್‍ಸೈಕ್ಲೋಪಿಡಿಯಾದಲ್ಲೂ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದಲ್ಲೂ ಇವರ ಲೇಖನಗಳು ಪ್ರಕಟವಾಗಿವೆ. ಬರೆದ ಗ್ರಂಥಗಳಿಗೆ ಲೇಖನಗಳಿಗೆ ಅವರೇ ಚಿತ್ರಕಾರರು ಆಗಿರುತ್ತಿದ್ದರು.

ರಾಯರು ಹಲವು ಶಿಲ್ಪಗಳನ್ನು, ಚಿತ್ರಗಳನ್ನು ರಚಿಸಿದ್ದಾರೆ. ಹಲವು ಏಕವ್ಯಕ್ತಿ ಪ್ರದರ್ಶನಗಳನ್ನೂ ನಡೆಸಿದರು. ಇವರು ವೀಣಾವಾದನವನ್ನೂ ಬಲ್ಲವರಾಗಿದ್ದರು. ಪ್ರಶಸ್ತಿ/ಪುರಸ್ಕಾರಗಳು: ರಾಜ್ಯೋತ್ಸವ ಪ್ರಶಸ್ತಿ (1986), ರಾಜ್ಯ ಲಿಲತಕಲಾ ಅಕಾಡೆಮಿ ಪ್ರಶಸ್ತಿ (1994), ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ (ಮೂರ್ತಿಶಿಲ್ಪ ಮತ್ತು ತಿರುಪತಿ ತಿಮ್ಮಪ್ಪ ಕೃತಿಗಳಿಗೆ), ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಶಿಲ್ಪಶ್ರೀ ಕಲಾಸನ್ಮಾನ (1999), ಕರ್ನಾಟಕ ಕಲಾಶ್ರೀ ಸನ್ಮಾನ (1996), ತಿರುಪತಿ ದೇವಸ್ಥಾನದಿಂದ ಸನ್ಮಾನ (1987), ಡಿವಿಜಿ ಪ್ರಶಸ್ತಿ, ವಿದ್ಯಾಲಂಕಾರ (ಶ್ರೀಶೈಲಮಠ), ಶಾಸ್ತ್ರಚೂಡಾಮಣಿ, (ಮೈಸೂರು ಆಯುರ್ವೇದ ಸಮ್ಮೇಳನ, 1990), ಸಂಗೀತಕಲಾರತ್ನ (ಗಾಯನಸಮಾಜ, 2000), ವೇದರತ್ನ (ಭಾ. ವಿ. ಭವನ, 2002), ವಾಚಸ್ಪತಿ (ತಿರುಪತಿ ಡೀಮ್ಡ್ ವಿಶ್ವವಿದ್ಯಾಲಯ, 2003), ಗೌರವ ಡಿ.ಲಿಟ್ ಪದವಿ (ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, 2004), ರಾಯರು ಫೆಬ್ರುವರಿ 2, 2006ರಂದು ನಿಧನರಾದರು. (ಎಸ್. ಎಸ್. ಪಿ. ಪಿ.)