ರಾಯಚೂರು

ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇದೇ ಜಿಲ್ಲೆಯ ಒಂದು ತಾಲ್ಲೂಕು; ಜಿಲ್ಲೆ ಮತ್ತು ತಾಲ್ಲೂಕುಗಳ ಆಡಳಿತ ಕೇಂದ್ರ ನಗರ.

ರಾಯಚೂರು ಜಿಲ್ಲೆ:

ಈಶಾನ್ಯ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶ, ವಾಯುವ್ಯದಲ್ಲಿ ಬಿಜಾಪುರ, ಉತ್ತರದಲ್ಲಿ ಗುಲ್ಬರ್ಗ, ದಕ್ಷಿಣದಲ್ಲಿ ಬಳ್ಳಾರಿ, ಪಶ್ಚಿಮದಲ್ಲಿ ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಿಂದ ಸುತ್ತುವರಿದಿದೆ. ಈ ಜಿಲ್ಲೆ ಕರ್ನಾಟಕದ ಉತ್ತರದಲ್ಲಿ ಪೂರ್ವ ಭಾಗಕ್ಕಿದ್ದು ಉ. ಅ. 150 10' ರಿಂದ 160 50' ವರೆಗೂ ಪೂರ್ವ ರೇಖಾಂಶ 750 80' ರಿಂದ 770 50' ವರೆಗೆ ಹರಡಿದೆ. ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯಚೂರು, ಸಿಂಧನೂರು - ಇವು ಜಿಲ್ಲೆಯ 5 ತಾಲ್ಲೂಕುಗಳು. ಜಿಲ್ಲೆಯಲ್ಲಿ 37 ಹೋಬಳಿಗಳಿದ್ದು ಜಿಲ್ಲೆ ಗುಲ್ಬರ್ಗಾ ಕಂದಾಯ ವಿಭಾಗಕ್ಕೆ ಸೇರಿದೆ. ಜಿಲ್ಲೆಯ ವಿಸ್ತೀರ್ಣ 5,559 ಚಕಿಮೀ, ಜನಸಂಖ್ಯೆ 16,48,212 (2001).

ಜಿಲ್ಲೆ ಕಪ್ಪು ಜೇಡಿಮಣ್ಣಿನ ಮೈದಾನ ಪ್ರದೇಶದಿಂದ, ಅಲ್ಲಲ್ಲಿ ಹರಡಿದಂತಿರುವ ಗುಡ್ಡಗಳಿಂದ ಕೆಂಪುಮಣ್ಣಿನ ಭೂಮಿಯಿಂದ, ಪೊದೆಯಂಥ ಮರಗಿಡಗಳ ಕಾಡುಗಳಿಂದ ಕೂಡಿದೆ. ಸಿಂಧನೂರಿಗೆ ಆಗ್ನೇಯದಲ್ಲಿ ಸು. 26 ಕಿಮೀ. ದೂರದಲ್ಲಿರುವ ಮೊರಿಗುಡ್ಡ, ಕನಕಗಿರಿಯ ಈಶಾನ್ಯದಲ್ಲಿ 11 ಕಿಮೀ ದೂರದಲ್ಲಿರುವ ನಿಶಾನಿಗುಡ್ಡ, ಸಿಂಧನೂರಿಗೆ ಆಗ್ನೇಯದಲ್ಲಿ ಸು. 2ಕಿಮೀ ದೂರದಲ್ಲಿರುವ ದುರ್ಗದಗುಡ್ಡ, ರಾಯಚೂರಿನ ದಕ್ಷಿಣದಲ್ಲಿ ಸು. 6 ಕಿಮೀ ದೂರದಲ್ಲಿರುವ ಮಲ್ಲಬಾದ ಶಿಖರ ಮಾನ್ವಿ ಶಿಖರ ಹಾಗೂ ಮೊಸರಕಲ್ಲು ಶಿಖರಗಳೂ ಈ ಜಿಲ್ಲೆಯ ಮುಖ್ಯ ಬೆಟ್ಟಗಳು. ಈ ಬೆಟ್ಟಗಳಲೆಲ್ಲ ಬೆಣಚುಕಲ್ಲುಗಳಿಂದ ಕೂಡಿದ್ದು ಬೋಳಾಗಿವೆ. ಇಲ್ಲಿನ ಬೆಟ್ಟಗಳೆಲ್ಲ ಪ್ರಾಕೃತಿಕವಾಗಿ ರೂಪಾಂತರ ಹೊಂದಿದ ಪ್ರಾಚೀನ ಶಿಲಾಯುಗಕ್ಕೆ ಸೇರಿದವು.

ಕರ್ನಾಟಕ ರಾಜ್ಯದಲ್ಲಿ ಕೋಲಾರ ಜಿಲ್ಲೆ ಬಿಟ್ಟರೆ ರಾಯಚೂರು ಜಿಲ್ಲೆಯೊಂದೇ ಚಿನ್ನದ ನಿಕ್ಷೇಪವನ್ನು ಹೊಂದಿರುವ ಪ್ರದೇಶ. ಇಲ್ಲಿನ ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ದೊರೆಯುತ್ತದೆ. ಸಾಮಾನ್ಯ ಮತ್ತು ಮಧ್ಯಮ ದರ್ಜೆಯ ಕಬ್ಬಿಣದ ಅದುರು ನಂದಿಹಾಳ ಬೆಟ್ಟದಲ್ಲಿ ದೊರೆಯುವ ಶಿಲೆಯಿಂದ ಕಲ್ಲು ಹಲಗೆಗಳನ್ನೂ ನೆಲಕ್ಕೆ ಹಾಸಲು ಕಲ್ಲು ಹಾಸುಗಳನ್ನೂ ತಯಾರಿಸುವವರು. ಕೃಷ್ಣಾ ಮತ್ತು ತುಂಗಭದ್ರಾ ಈ ಜಿಲ್ಲೆಯ ಮುಖ್ಯ ನದಿಗಳು. ಕೃಷ್ಣಾನದಿ ಜಿಲ್ಲೆಯ ಉತ್ತರದ ಗಡಿಯಾಗಿ ಹರಿದು ಬಿಜಾಪುರ, ಗುಲ್ಬರ್ಗ ಜಿಲ್ಲೆಗಳನ್ನೂ ಆಂಧ್ರ ಪ್ರದೇಶವನ್ನೂ ಬೇರ್ಪಡಿಸಿದರೆ ತುಂಗಭದ್ರಾ ಈ ಜಿಲ್ಲೆಯ ದಕ್ಷಿಣ ಗಡಿಯಾಗಿ ಹರಿದು ಬಳ್ಳಾರಿ ಜಿಲ್ಲೆಯನ್ನು ಬೇರ್ಪಡಿಸಿದೆ. ಕೃಷ್ಣಾ ನದಿಯ ಬಲದಂಡೆ, ತುಂಗಭದ್ರಾ ನದಿಯ ಎಡದಂಡೆ ರಾಯಚೂರು ಜಿಲ್ಲೆಯ ಎರಡು ಸಮೃದ್ಧ ಪ್ರದೇಶಗಳು. ಕೃಷ್ಣಾ ನದಿ ರಾಯಚೂರು ಜಿಲ್ಲೆಯನ್ನು ಲಿಂಗಸುಗೂರು ತಾಲ್ಲೂಕಿನ ಉಪ್ಪಿನಹಾಳ ಗ್ರಾಮದ ಉತ್ತರದಲ್ಲಿ ಮುಟ್ಟಿ ಪೂರ್ವಾಭಿಮುಖವಾಗಿ ಸು. 168 ಮೀ ದೂರ ಹರಿಯುವುದು. ಗುಲ್ಬರ್ಗ ಜಿಲ್ಲೆಯಿಂದ ಹರಿದು ಬರುವ ಭೀಮಾ ನದಿ ರಾಯಚೂರು ತಾಲ್ಲೂಕಿನ ಕಡಲೂರು ಗ್ರಾಮದ ಉತ್ತರದಲ್ಲಿ ಕೃಷ್ಣಾ ನದಿಯನ್ನು ಕೂಡಿಕೊಳ್ಳುವುದು. ಜೊತೆಗೆ ಈ ನದಿಗೆ ಹುತ್ತಿ ನಾಲಾ, ಮಂದರ್ಗಿ ನಾಲಾ ಕೋಡಿಹಾಳ ನಾಲಾ, ಹಿರೆಬುದುರ ನಾಲಾ, ತಿಮ್ಮಾಪುರ ನಾಲಾ, ಬುಡದಿ ಪಾಡು ನಾಲಾ ಮುಂತಾದವುಗಳು ಸೇರಿ ಒಟ್ಟು 36 ಹಿರಿ-ಕಿರಿಯ ತೊರೆಗಳು ಸೇರುತ್ತವೆ. ಕೃಷ್ಣಾ ನದಿ ರಾಯಚೂರು ತಾಲ್ಲೂಕಿನ ಬುಡದಿಪಾಡು ಗ್ರಾಮದ ಉತ್ತರದಲ್ಲಿ ಈ ಜಿಲ್ಲೆಯನ್ನು ಬಿಟ್ಟು ಆಂಧ್ರಪ್ರದೇಶವನ್ನು ಪ್ರವೇಶಿಸುವುದು. ತುಂಗಭದ್ರಾ ನದಿ ಈ ಜಿಲ್ಲೆಯನ್ನು ಕೊಪ್ಪಳ ತಾಲ್ಲೂಕಿನ ನೈಋತ್ಯದಲ್ಲಿ ಕೆಸಲಪುರ ಗ್ರಾಮದ ಬಳಿ ಮುಟ್ಟುತ್ತದೆ. ಕೊಪ್ಪಳ ಗಂಗಾವತಿ, ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲ್ಲೂಕುಗಳ ಮುಖಾಂತರ ಜಿಲ್ಲೆಯ ದಕ್ಷಿಣದಲ್ಲಿ ಒಟ್ಟು 210 ಕಿಮೀ ದೂರ ಹರಿಯುವ ಈ ನದಿ ರಾಯಚೂರು ತಾಲ್ಲೂಕಿನ ತಲಮರಿ ಗ್ರಾಮದ ಆಗ್ನೇಯದಲ್ಲಿ ಜಿಲ್ಲೆಯನ್ನು ಬಿಟ್ಟು ಆಂಧ್ರಪ್ರದೇಶವನ್ನು ಪ್ರವೇಶಿಸುವುದು ತುಂಗಭದ್ರಾ ನದಿಗೆ ಸೇರುವ ತೊರೆಗಳಲ್ಲಿ ಮಸ್ಕಿ ನಾಲಾ, ಹಿರೇಹಳ್ಳ ನಾಲಾ, ಆಲವಂದಿ ನಾಲಾ, ಸಿಂಧನೂರು ನಾಲಾ, ಸಿದ್ಧಾಪುರ ಮತ್ತು ಮಾರ್ಲಿ ತೊರೆ, ಇಂಚನಾಳ, ಕನಕಗಿರಿ, ನಂದಿ ಕಪ್ಗೋಳ ನಾಲಾಗಳು ಮುಖ್ಯವಾದವು. ಸಾಕಷ್ಟು ಮಳೆ ಬೀಳದ ಪ್ರದೇಶವಾಗಿದ್ದು ಮತ್ತು ಉಷ್ಣ ಹವಾಮಾನದಿಂದಾಗಿ ಮಾನ್ವಿ, ಲಿಂಗಸುಗೂರು, ದೇವದುರ್ಗ, ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ಮಾತ್ರ ಅರಣ್ಯ ಪ್ರದೇಶಗಳಿವೆ. ಇಲ್ಲಿನ ಕಾಡುಗಳಲ್ಲಿ ಕಕ್ಕೆ, ಜಾಲ, ಹುಣಸೆ, ಹೊಂಗೆ, ಮುತ್ತುಗ, ದಿಂಡಿಗ, ಚುಜ್ಜಲು, ಹುರಗಲು, ಹೊನ್ನೆ, ಮತ್ತಿ, ಸೀತಾಫಲ ಮುಂತಾದ ಮರಗಳು ಬೆಳೆಯುವವು. 405 ಹೆಕ್ಟೇರುಗಳಿಗೂ ಹೆಚ್ಚಾದ ಪ್ರದೇಶವನ್ನೊಳಗೊಂಡ ಹಿರಬರ್ಗಿ, ಹನುಮಸಾಗರ, ಮುನಿರಾಬಾದ, (ತುಂಗಭದ್ರ ಯೋಜನೆ) ಮತ್ತು ಗಂಟುಗಾಲೆ ಪ್ಲಾಂಟೇಷನ್‍ಗಳಿವೆ. ಭೂಸವಕಳಿಯನ್ನು ತಡೆಯಲು ಈಗ ನೆಡುತೋಪುಗಳು ಬೆಳಸಲಾಗುತ್ತಿದೆ. ಈ ಅರಣ್ಯಗಳಲ್ಲಿ ಅಪರೂಪವಾಗಿ ಚಿರತೆಗಳು ಕಂಡುಬರುವುವು.

ಹವಾಮಾನ ಈ ಜಿಲ್ಲೆಯಲ್ಲಿ ಡಿಸೆಂಬರ್‍ನಲ್ಲಿ ಚಳಿ ಹೆಚ್ಚು, ಫೆಬ್ರುವರಿಯಿಂದ ಏಪ್ರಿಲ್ ತಿಂಗಳವರೆಗೂ ಬೇಸಗೆ ಕಾಲ. ಬೇಸಗೆಯಲ್ಲಿ ಗರಿಷ್ಠ ಉಷ್ಣತೆ 39.8 ಸೆ. (103.70 ಫ್ಯಾ). ಚಳಿಗಾಲದ ಕನಿಷ್ಠ ಉಷ್ಣತೆ 17.70 ಸೆ. (63.90 ಫ್ಯಾ) ಜೂನ್‍ನಿಂದ ಮಳೆಗಾಲ ಪ್ರಾರಂಭ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 601.6 ಮಿಮೀ.

ಕೃಷಿ

ಜಿಲ್ಲೆಯ ಹೆಚ್ಚು ಭಾಗ ಹತ್ತಿ ಬೆಳೆಯ ಕಪ್ಪುಮಣ್ಣಿನ ಪ್ರದೇಶ. ಹೆಚ್ಚು ಆಳವಾಗಿರುವ ಕೆಂಪು ಮಣ್ಣು ಪ್ರದೇಶ ಕಬ್ಬು ಸೇರಿದಂತೆ ಎಲ್ಲ ಬಗೆಯ ಬೆಳೆಗೆ ಅನುಕೂಲವಾಗಿದೆ. ತೆಳು ಕೆಂಪುಮಣ್ಣು ಪ್ರದೇಶಗಳಲ್ಲಿ ಎಣ್ಣೆ ಬೀಜವನ್ನು ಬೆಳೆಯುವರು. ಜಿಗುಟು ಕಪ್ಪು ಮಣ್ಣಿನ ಪ್ರದೇಶಗಳಲ್ಲಿ ಮಳೆಗಾಲದ ಕೊನೆಯಲ್ಲಿ ಖಾರಿಫ್ ಬೆಳೆಗಳನ್ನು ಬೆಳೆಯುವರು.

ನೀರಾವರಿ ರಾಯಚೂರು ಜಿಲ್ಲೆ ದೋಅಬ್ ಪ್ರದೇಶವಾಗಿದ್ದು ಬಹುಭಾಗ ನೀರಾವರಿಗೆ ಒಳಪಟ್ಟಿದೆ. ಹಿಂದಿನಿಂದಲೂ ಜಿಲ್ಲೆಯಲ್ಲಿ ವಿಜಯನಗರ ಕಾಲದ ಕಾಲುವೆಗಳಿಂದ ಕೆರೆ ಬಾವಿಗಳಿಂದ ನೀರೊದಗಿಸಿಕೊಳ್ಳುತ್ತಿದ್ದರು. ತುಂಗಭದ್ರಾ ಜಲಾಶಯ ನಿರ್ಮಾಣ ಈ ಜಿಲ್ಲೆಗೆ ಒಂದು ವರಪ್ರದಾನವಾಗಿ ಇದರ ಯೋಜನೆಯಂತೆ ಜಲಾಶಯದ ಎಡದಂಡೆ ನಾಲೆ 225 ಕಿಮೀ ದೂರ ಸಾಗಿ 5.8ಲಕ್ಷ ಎಕರೆಗಳಿಗೆ ನೀರುಣಿಸುವುದು. ರಾಯಚೂರು, ಮಾನ್ವಿ ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಕೆರೆಯ ನೀರಾವರಿ ಹೆಚ್ಚು, ಆಂಧ್ರ ಮತ್ತು ಕರ್ನಾಟಕ ರಾಜ್ಯಗಳೆರಡೂ ಸೇರಿ ಮಾನ್ವಿ ತಾಲ್ಲೂಕಿನ ರಾಜೋಲಿಬಂಡ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಸು. 820 ಮೀ ಉದ್ದದ ರಾಜೋಲಿಬಂಡ ನೀರು ತಿರುಗಣೆ ಆಣೆಕಟ್ಟನ್ನು ಕಟ್ಟಿದ್ದು ಇದರಿಂದ ಹೊರಡುವ 116 ಕಿಮೀ ಉದ್ದದ ನಾಲೆಯಲ್ಲಿ ಸು. 44 ಕಿಮೀ ಮಾತ್ರ ಈ ಜಿಲ್ಲೆಯಲ್ಲಿ ಸಾಗಿ ಮುಂದೆ ಆಂಧ್ರ ಪ್ರದೇಶವನ್ನು ಸೇರುವುದು. ರಾಯಚೂರು ಜಿಲ್ಲೆಯ ಉತ್ತರದಲ್ಲಿ ಗಡಿಯಾಗಿ ಹರಿಯುವ ಕೃಷ್ಣಾನದಿಯ ಸು. 168 ಕಿಮೀ ದೂರದ ಬಲದಂಡೆ ರಾಯಚೂರು ಜಿಲ್ಲೆಗೆ ಸೇರಿದ್ದು ಫಲವತ್ತಾದ ಭೂಮಿ ಮತ್ತು ಜಲಸೌಕರ್ಯ ಪಡೆದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಂತೆ ಮುದ್ದೇಬಿಹಾಳ ತಾಲ್ಲೂಕಿನ ಸಿದ್ಧಾಪುರದ ಬಳಿ ನಿರ್ಮಿಸುವ ನಾರಾಯಣಪುರ ಬಲದಂಡೆ ಯೋಜನೆಯಿಂದಲೂ ರಾಯಚೂರಿನ ಲಿಂಗಸುಗೂರು, ದೇವದುರ್ಗ, ರಾಯಚೂರು ಮತ್ತು ಮಾನ್ವಿ ತಾಲ್ಲೂಕುಗಳಿಗೆ ನೀರೊದಗುವುದು. ಒಟ್ಟಿನಲ್ಲಿ ಇಡೀ ರಾಜ್ಯದಲ್ಲೇ ಈ ಜಿಲ್ಲೆ ಹೆಚ್ಚು ನೀರಾವರಿ ಪ್ರದೇಶವನ್ನು ಪಡೆದಿದೆ.

ಜಿಲ್ಲೆಯ ವ್ಯವಸಾಯಾಭಿವೃದ್ಧಿಗೆ ನೆರವಾಗುವಂಥ ಅನೇಕ ಅಭಿವೃದ್ಧಿ ಕಾರ್ಯಗಳೂ ಯೋಜನೆಗಳೂ ಕೆಲಸ ಮಾಡುತ್ತಿರುವುದಲ್ಲದೆ, ಜಿಲ್ಲೆಯಲ್ಲಿ ಕೆಲವು ತರಬೇತಿ ಕೇಂದ್ರಗಳೂ ಇವೆ. ತೋಟಗಾರಿಕೆ ಅಭಿವೃದ್ಧಿಯಾಗುತ್ತಿವೆ. ಮಾವು, ಸಪೋಟಾ, ಬಾಳೆ, ಸೀಬೆ, ನಿಂಬೆ, ದಾಳಿಂಬೆ, ಅಂಜೂರ ಮುಂತಾದ ಹಣ್ಣುಗಳನ್ನು ಬೆಳೆಯುವವರು. ಜಿಲ್ಲೆಯಲ್ಲಿ ಪಶುಪಾಲನೆಗೂ ಗಮನ ಕೊಡಲಾಗುತ್ತಿದೆ. ಮುನಿರಾಬಾದಿನಲ್ಲಿ ಪಶು ಮತ್ತು ಕುರಿ ಸಂತಾನ ಅಭಿವೃದ್ಧಿ ಕೇಂದ್ರ ಇವೆ. ಜಿಲ್ಲೆಯ ತಾಲ್ಲೂಕು ಕೇಂದ್ರ ಮತ್ತು ಮುಖ್ಯ ಊರುಗಳಲ್ಲಿ ಪಶುವೈದ್ಯಾಲಯ ಮತ್ತು ಔಷಧಾಲಯಗಳಿವೆ. ಜಿಲ್ಲೆಯ ಮತ್ಸ್ಯೋದ್ಯಮದ ಬೆಳೆವಣಿಗೆ ತುಂಗಭದ್ರಾ ಜಲಾಶಯ ಮುಖ್ಯವಾಗಿದ್ದು ಮುನಿರಾಬಾದಿನಲ್ಲಿ ಮೀನು ಸಾಕಣೆ ಕೇಂದ್ರವಿದೆ. ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲೂ ಕೆಲವು ಮುಖ್ಯ ಕೆರೆಗಳಲ್ಲೂ ಮೀನು ಸಾಕಲಾಗುತ್ತಿದೆ.

ಗಣಿಗಾರಿಕೆ ಈ ಜಿಲ್ಲೆಯಲ್ಲಿ ಚಿನ್ನ, ಕಬ್ಬಿಣ, ತಾಮ್ರ, ಸೀಸದ ಅದುರು, ಫೆಲ್‍ಸ್ಟಾರ್, ಕಾವಿಮಣ್ಣು, ಅಭ್ರಕ, ಸ್ಫಟಿಕ ಶಿಲೆ, ಕಟ್ಟಡಗಳಿಗೆ ಉಪಯೋಗಿಸುವ ಶಿಲೆಗಳು ಮತ್ತು ಜಂಬುಮಣ್ಣು ಸಿಗುತ್ತದೆ. ಅಶೋಕನ ಕಾಲದಿಂದಲೂ ಈ ಜಿಲ್ಲೆಯಲ್ಲಿ ಚಿನ್ನ ತೆಗೆಯುತ್ತಿದ್ದರೆಂದು ತಿಳಿದುಬರುತ್ತದೆ.

ಕೈಗಾರಿಕೆ ತುಂಗಭದ್ರಾ ಜಲಾಶಯದ ನಿರ್ಮಾಣ ಮತ್ತು ಜಲವಿದ್ಯುತ್ ಉತ್ಪಾದನೆ ಈ ಜಿಲ್ಲೆಯ ಹೊಸ ಕೈಗಾರಿಕೆಗಳ ನಿರ್ಮಾಣಕ್ಕೆ, ಬೆಳೆವಣಿಗೆಗೆ ಮೂಲ ತಿರುವನ್ನು ಕೊಟ್ಟವು. ಸಾಕಷ್ಟು ವಿದ್ಯುತ್ತಿನ ಸರಬರಾಜಿನಿಂದ ಹಳೆ ಕೈಗಾರಿಕೆಗಳು ಕೆಲವು ವಿಸ್ತರಿಸಿದರೆ ಹತ್ತಿನೂಲು, ಎಣ್ಣೆ ಮತ್ತು ಸಕ್ಕರೆ ಕಾರ್ಖಾನೆಗಳು ಹೊಸದಾಗಿ ಪ್ರಾರಂಭವಾದವು. ಹಟ್ಟಿ ಚಿನ್ನದ ಗಣಿ ಅಭಿವೃದ್ಧಿಯಾಗಿದ್ದು ಕಾರ್ಮಿಕ ಕಲ್ಯಾಣದ ಕಡೆ ಹೆಚ್ಚು ಗಮನ ಹರಿಸುತ್ತಿದೆ. ಮುನಿರಾಬಾದಿನಲ್ಲಿರುವ ಸಾಲಾರ್‍ಜಂಗ್ ಸಕ್ಕರೆ ಕಾರ್ಖಾನೆ, ತುಂಗಭದ್ರಾ ಪಲ್ಪ್ ಅಂಡ್ ಬೋರ್ಡ್‍ಮಿಲ್, ಚಾಮುಂಡಿ ರಾಸಾಯನಿಕ ಮತ್ತು ಗೊಬ್ಬರ ತಯಾರಿಕಾ ಕಾರ್ಖಾನೆ, ಫರೂಕ್ ಅನ್ವರ್ ಎಣ್ಣೆ ಕಾರ್ಖಾನೆ, ಸಹಕಾರಿ ನೂಲು ಕಾರ್ಖಾನೆ, ಹತ್ತಿ ಪರಿಷ್ಕರಣ ಕಾರ್ಖಾನೆಗಳನ್ನು ಹೇಳಬಹುದು. ಸಿಮೆಂಟ್ ಪೈಪುಗಳನ್ನು ತಯಾರಿಸುವ ಕಾರ್ಖಾನೆ ರಾಯಚೂರಿನಲ್ಲಿದೆ. ಜಿಲ್ಲೆಯಲ್ಲಿ ಕಂಬಳಿ ತಯಾರಿಕೆ, ಚರ್ಮ ಹದಗೊಳಿಸುವಿಕೆ, ಮಡಕೆ ಮಾಡುವುದು, ಮರ ಮತ್ತು ಕಬ್ಬಿಣದ ಕೆಲಸ, ಬುಟ್ಟಿ ಮಂದಲಿಗೆ ತಯಾರಿಕೆ, ಪಾದರಕ್ಷೆಗಳ ತಯಾರಿಕೆ, - ಇವುಗಳ ಜೊತೆಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನೆರವಿನಿಂದ ಕೆಲವು ಗ್ರಾಮೀಣ ಉದ್ಯಮಗಳೂ ಅಭಿವೃದ್ಧಿಯಾಗುತ್ತಿವೆ.

ಕಾರ್ಖಾನೆ ಮತ್ತು ಇತರ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗುವಂಥ ಕಾರ್ಮಿಕರನ್ನು ತರಬೇತುಗೊಳಿಸಲು ರಾಯಚೂರಿನಲ್ಲಿ ಒಂದು ಕೈಗಾರಿಕಾ ತರಬೇತಿ ಸಂಸ್ಥೆ ಇದೆ. ಕಿನ್ನಾಳ ಮತ್ತು ಭಾಗ್ಯನಗರಗಳಲ್ಲಿ ಕುಟೀರ ಕೈಗಾರಿಕಾ ತರಬೇತಿ ಕೇಂದ್ರಗಳೂ ಕಿನ್ನಾಳದಲ್ಲಿ ಮರದ ಬೊಂಬೆ ತಯಾರಿಕಾ ಕೇಂದ್ರವೂ ಇದೆ. ಇದರ ಜೊತೆಗೆ ಸರ್ಕಾರ ಮತ್ತು ಖಾಸಗಿ ಸಹಕಾರ ಸಂಘಗಳು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿವೆ.

ವ್ಯಾಪಾರ ವಾಣಿಜ್ಯ ಜಿಲ್ಲೆಯ ವ್ಯಾಪಾರ ವಾಣಿಜ್ಯ ಹೆಚ್ಚಾಗಿ ಕೃಷಿ ಸರಕುಗಳನ್ನು ಅವಲಂಬಿಸಿದೆ. ಈ ಜಿಲ್ಲೆಯಿಂದ ಪ್ರತಿವರ್ಷ ಹತ್ತಿ, ಎಣ್ಣೆಬೀಜಗಳು, ಸೇಂಗಾ ಎಣ್ಣೆ, ದ್ವಿದಳ ಧಾನ್ಯಗಳು ರಫ್ತಾಗುವುವು. ಜಿಲ್ಲೆಯಲ್ಲಿ ಬೆಳೆಯುವ ಅಪಾರ ಹತ್ತಿಯನ್ನು ಕೋಲಾಪುರ, ಮುಂಬಯಿ ಮತ್ತು ಕೊಯಮತ್ತೂರುಗಳಿಗೂ ಸೇಂಗಾ ಎಣ್ಣೆಯನ್ನು ಪುಣೆ, ಮುಂಬಯಿ ಮತ್ತು ಇತರ ಕಡೆಗಳಿಗೂ ಎಣ್ಣೆಬೀಜಗಳನ್ನು ಗದಗ ಮತ್ತು ಬಿಜಾಪುರಗಳಿಗೂ ಕಳುಹಿಸಲಾಗುವುದು.

ಜಿಲ್ಲೆಯ ಕೈಮಗ್ಗಗಳಿಗೆ ಬೇಕಾದ ಹತ್ತಿ ನೂಲು, ರೇಷ್ಮೆ ಮತ್ತು ಕೃತಕ ರೇಷ್ಮೆದಾರ ಕಂಬಳಿ, ಹೊಗೆಸೊಪ್ಪು, ಬೀಡಿ ಎಲೆಗಳು, ಮರ, ವನಸ್ಪತಿ, ತೆಂಗಿನಕಾಯಿ, ಬೆಲ್ಲ, ಕೆಲವು ಬಗೆಯ ಧಾನ್ಯಗಳು ಮುಂತಾದವನ್ನು ಹೊರಗಿನಿಂದ ಆಮದು ಮಾಡಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಮುಖ್ಯ ಮಾರುಕಟ್ಟೆ ಪ್ರದೇಶ ರಾಯಚೂರು, ಹತ್ತಿ, ಸೇಂಗಾ, ಜೋಳ, ಹುಣಿಸೆಹಣ್ಣು, ಕುಕನೂರು, ಕಿನ್ನಾಳ, ಸಿಂಧನೂರು, ಮಾನ್ವಿ, ಲಿಂಗಸುಗೂರು, ತಾವರೆಗೆರೆ, ಮುದಗಲ್ಲು, ಮಸ್ಕಿ, ದೇವದುರ್ಗ, ಹನುಮಸಾಗರ ಮತ್ತು ಜಾಲಹಳ್ಳಿ ಈ ಜಿಲ್ಲೆಯ ಮುಖ್ಯ ವ್ಯಾಪಾರ ಕೇಂದ್ರಗಳು. ರಾಯಚೂರು- ಲಿಂಗಸುಗೂರು ನಡುವಣ ರಸ್ತೆಯೇ ಜಿಲ್ಲೆಯಲ್ಲಿ 1855ರಲ್ಲಿ ನಿರ್ಮಿಸಿದ ಮೊದಲ ರಸ್ತೆ. ಎರಡು ಮಹಾನದಿಗಳ ಮಧ್ಯೆ ಇರುವ ಈ ದೋಅಬ್ ಪ್ರದೇಶಕ್ಕೆ ಅನೇಕ ವರ್ಷಗಳವರೆಗೆ ಅಕ್ಕಪಕ್ಕದ ಪ್ರದೇಶಗಳೊಂದಿಗೆ ಸಂಪರ್ಕ ಕಷ್ಟವಾಗಿತ್ತು. ರೈಲುಮಾರ್ಗ ನಿರ್ಮಾಣದ ಪರಿಣಾಮವಾಗಿ ನದಿಗಳಿಗೆ ಸೇತುವೆ ಕಟ್ಟಿ ಇತರ ಮುಖ್ಯ ರಸ್ತೆಗಳನ್ನು ನಿರ್ಮಿಸಿದಾಗ ಸಂಪರ್ಕ ಸಾಗಣೆಗಳು ಹೆಚ್ಚು ಅಭಿವೃದ್ಧಿಯಾಗತೊಡಗಿದವು. ಈಗ ಒಟ್ಟು 105 ಕಿಮೀ ಉದ್ದದ ರೈಲುಮಾರ್ಗವಿರುವ ಈ ಜಿಲ್ಲೆಯ ಪೂರ್ವದಲ್ಲಿ ಗುಂತಕಲ್ಲು -ವಾಡಿ ಬ್ರಾಡ್‍ಗೇಜ್ ರೈಲುಮಾರ್ಗ ರಾಯಚೂರು ಮುಖಾಂತರ ಹಾದುಹೋಗುತ್ತದೆ. ಜಿಲ್ಲೆಯ ನೈಋತ್ಯದಲ್ಲಿ ಬಳ್ಳಾರಿ-ಧಾರವಾಡ ಮೀಟರ್‍ಗೇಜ್ ರೈಲುಮಾರ್ಗವಿದೆ. ತುಂಭದ್ರಾ ಮತ್ತು ಕೃಷ್ಣಾ ನದಿಗಳಿಗೆ ಕಟ್ಟಿರುವ ಕೆಲವು ಸೇತುವೆಗಳು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸಿವೆ.

ಮೂಲಭೂತ ಸೌಕರ್ಯ ರಾಯಚೂರಿನಲ್ಲಿ ಜಿಲ್ಲಾ ಮಟ್ಟದ ನ್ಯಾಯಲಯವಿದ್ದು ತಾಲ್ಲೂಕು ಮಟ್ಟದ ನ್ಯಾಯಾಲಯಗಳು ರಾಯಚೂರು, ಮಾನ್ವಿ, ಸಿಂಧನೂರು, ಲಿಂಗಸುಗೂರು, ಮತ್ತು ದೇವದುರ್ಗಗಳಲ್ಲಿವೆ. ಈ ಜಿಲ್ಲೆಯಲ್ಲಿ ಶಿಶುವಿಹಾರಗಳೂ ಪ್ರಾಥಮಿಕ ಮಾಧ್ಯಮಿಕ, ಪ್ರೌಢಶಾಲೆಗಳೂ ಶಿಕ್ಷಕರ ತರಬೇತಿಯೂ ಸೇರಿ ವೃತ್ತಿ ಮತ್ತು ಶಿಕ್ಷಣ ಶಾಲೆಗಳೂ ವಿe್ಞÁನ, ಕಲೆ, ವಾಣಿಜ್ಯ, ಮತ್ತು ಆಯುರ್ವೇದ ಕಾಲೇಜುಗಳೂ ಇವೆ.

ಜಿಲ್ಲೆಯಲ್ಲಿ ದೊಡ್ಡ ಆಸ್ಪತ್ರೆಗಳೂ ಔಷಧಾಲಯಗಳೂ ಪ್ರಾಥಮಿಕ ಆರೋಗ್ಯ ಘಟಕಗಳೂ ಕುಟುಂಬ ಕಲ್ಯಾಣ ಕೇಂದ್ರಗಳೂ ಇವೆ. ಜಿಲ್ಲಾ ಆಸ್ಪತ್ರೆ 1896ರಲ್ಲಿ ಸ್ಥಾಪನೆಯಾಯಿತು.

ಧಾರ್ಮಿಕ ಐತಿಹಾಸಿಕ ಮತ್ತು ಪ್ರಾಚೀನ ಸ್ಥಳಗಳು

ಈ ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಮತ್ತು ಪ್ರಾಚೀನ ಸ್ಥಳಗಳಲ್ಲಿ ದೇವದುರ್ಗ ತಾಲ್ಲೂಕಿನ ಗಬ್ಬೂರು ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ, ಜಲದುರ್ಗ, ಮಸ್ಕಿ ಮತ್ತು ಮುದುವಾಳ, ಮಾನ್ವಿ ತಾಲ್ಲೂಕಿನ ಕೋಟಿಕಲ್ಲು, ಕೌತಾಳ, ಕಲ್ಲೂರು, ರಾಯಚೂರು ತಾಲ್ಲೂಕಿನ ದೇವರ ಸುಗೂರು, ಕಡ್ಲೂರು, ರಾಮಗೆಡ್ಡೆ, ಕೊರ್ವ (ಮಟ್ಮರಿ), ಗಾಣಧಾಳ, ಸಿಂಧನೂರು ತಾಲ್ಲೂಕಿನ ಸೋಮಲಾಪುರ, ಮುಕುಂದ, ರೌದಕುಂದ, ಇವುಗಳನ್ನು ಉಲ್ಲೇಖಿಸಬಹುದು. ಈ ಜಿಲ್ಲೆಯಲ್ಲಿ ಅನೇಕ ಜಾತ್ರೆಗಳೂ ನಡೆಯುವುವು. ಅವುಗಳಲ್ಲಿ ಶ್ರೀಪಾದ ಶ್ರೀವಲ್ಲಭ ದೇವಾಲಯದ ಜಾತ್ರೆ, ಮಾನ್ವಿಯ ಮಹಾಮಲ್ಲೇಶಪ್ಪ ಮತ್ತು ಕರೆಮ್ಮ ಜಾತ್ರೆ, ಎಲ್ಲಮ್ಮ ಜಾತ್ರೆ, ಸಂಜೀವರಾಯ ಜಾತ್ರೆ, ಲಿಂಗಸುಗೂರು ತಾಲ್ಲೂಕಿನ ಅಮರೇಶ್ವರ ಜಾತ್ರೆ, ಕಡಲೂರಿನ ಕಡಲೂರಯ್ಯ ಜಾತ್ರೆ, ಸಿಂಧನೂರು ತಾಲ್ಲೂಕಿನ ಬಳಗನೂರು ಹನುಮಂತನ ಜಾತ್ರೆ ಪ್ರಸಿದ್ಧವಾಗಿವೆ.

ಕನ್ನಡ ಸಾಹಿತ್ಯ

ರಾಯಚೂರು ಜಿಲ್ಲೆ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಗೆ ಅಪಾರ ಕೊಡುಗೆ ಸಲ್ಲಿಸಿದೆ. ಹಿಂದೆ ಜಿಲ್ಲೆಯ ದೇವಾಲಯಗಳು ವೀರಶೈವ ಮಠಗಳು ಸಾಹಿತ್ಯ ಸಂಸ್ಕøತಿಯ ಕೇಂದ್ರಗಳಾಗಿದ್ದವು. ಚಾಳುಕ್ಯ, ರಾಷ್ಟ್ರಕೂಟ, ವಿಜಯನಗರ, ಬಹುಮನೀ ಮತ್ತು ಆದಿಲ್ ಶಾಹೀ ರಾಜರುಗಳು ಜಿಲ್ಲೆಯ ಕಲೆ, ಸಂಸ್ಕøತಿ ಮತ್ತು ಸಾಹಿತ್ಯಗಳ ಅಭಿವೃದ್ಧಿಗೆ ಅಪಾರ ಪ್ರೋತ್ಸಾಹ ನೀಡಿದ್ದಾರೆ. ಈ ಜಿಲ್ಲೆಯ ಶಿವಶರಣರು ಮತ್ತು ಹರಿದಾಸರು ಕನ್ನಡ ಸಂಸ್ಕøತಿ ಹಾಗೂ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಚನಕಾರರಲ್ಲಿ ಶಂಕರ ದಾಸಿಮಯ್ಯ, ಲಿಂಗಸುಗೂರು ತಾಲ್ಲೂಕಿನ ನವಲಿಯವನು. ಢಕ್ಕೆಯ ಮಾರಯ್ಯ, ಆಯ್ದಕ್ಕಿ ಮಾರಯ್ಯ ಮತ್ತು ಈತನ ಪತ್ನಿ ಆಯ್ದಕ್ಕಿ ಲಕ್ಕಮ್ಮ ಇವರೂ ಇದೇ ತಾಲ್ಲೂಕಿನ ಅಮರೇಶ್ವರದವರು. ಬಿಬ್ಬಿಬಾಚಯ್ಯ ದೇವದುರ್ಗ ತಾಲ್ಲೂಕಿನ ಗಬ್ಬೂರಿನವನು. 16 ನೆಯ ಶತಮಾನದಲ್ಲಿ ವರರಮ್ಯ ರತ್ನಾಕರ ಗ್ರಂಥ ಬರೆದ ಲಿಂಗಣ್ಣಾಚಾರ್ಯ ಮಾನ್ವಿ ತಾಲ್ಲೂಕಿನ ಕಲ್ಲೂರಿನವನು. ಪ್ರಸಿದ್ಧ ಹರಿದಾಸರಾದ ವಿಜಯದಾಸರು ಮಾನ್ವಿ ತಾಲ್ಲೂಕಿನ ಚೀಕಲಪರವಿಯವರು. ಇವರ ಶಿಷ್ಯರಾದ ಗೋಪಾಲದಾಸರು ದೇವದುರ್ಗ ತಾಲ್ಲೂಕಿನ ಮೊಸರಕಲ್ಲಿನವರು. ಹರಿಕಥಾ ಮೃತಸಾರ ರಚಿಸಿದ ಜಗನ್ನಾಥದಾಸರು ಮಾನ್ವಿ ತಾಲ್ಲೂಕಿನವರು. ಅನೇಕ ಗ್ರಂಥಗಳನ್ನು ಬರೆದ ಮನೋಹರ ವಿಠಲರು ಮಾನ್ವಿ ತಾಲ್ಲೂಕಿನ ಬುದ್ಧಿನ್ನಿಯವರು. 13ಸಂಸ್ಕøತ ಗ್ರಂಥಗಳನ್ನೂ ಕನ್ನಡದಲ್ಲಿ ಉಗಾಭೋಗಗಳನ್ನೂ ಸುಳಾದಿಗಳನ್ನೂ ಪದಗಳನ್ನೂ ಬರೆದ, ಪರಮಹಂಸ ವ್ಯಾಸತತ್ತ್ವಜ್ಞರೆಂದೂ ಪ್ರಸಿದ್ಧರಾದ ವೆಂಕಟ ರಾಮಾಚಾರ್ಯರು ಇದೇ ಜಿಲ್ಲೆಯವರು. ಅನೇಕ ಗ್ರಂಥಗಳನ್ನೂ ಹನ್ನೆರಡು ಇತರ ಹರಿಕತೆಗಳನ್ನೂ ಉಗಾಭೋಗ, ಸುಳಾದಿ ಮತ್ತು ಪದಗಳನ್ನೂ ಬರೆದು ಪ್ರಾಣೇಶ ವಿಠಲರೆಂದು ಪ್ರಸಿದ್ಧರಾದ ಪ್ರಾಣೇಶದಾಸ ಯೋಗಪ್ಪನವರು ಲಿಂಗಸುಗೂರಿನವರು. ಪಂಗನಾಮ ತಿಮ್ಮಣ್ಣದಾಸ, ಆನಂದದಾಸ ಇವರೂ ಈ ಜಿಲ್ಲೆಯ ಪ್ರಸಿದ್ಧ ಹರಿದಾಸರು. ಕುಮಾರವಿಜಯ, ಬಸವಶತಕ ಮೊದಲಾದ ಕಾವ್ಯಗಳನ್ನೂ ಪಂಪಾಶತಕ ಮತ್ತು ಭುವನೈಕ ನಾಯಕಿ ಬರೆದ ಸಂಗವಿಭು ಇದೇ ಜಿಲ್ಲೆಯ ಗಣಿಕಲ್ಲಿನವನು. ಭಕ್ತಿಸುಧಾರಸ ಗ್ರಂಥ ಬರೆದ ಘನಮಠದಾರ್ಯ ಇದೆ ಜಿಲ್ಲೆಗೆ ಸೇರಿದವನು. ಇವರಲ್ಲದೇ ಇನ್ನೂ ಅನೇಕ ಸಾಹಿತಿಗಳು ಈ ಜಿಲ್ಲೆಯ ಸಾಹಿತ್ಯಕ್ಕೆ ಕೊಡುಗೆ ಸಲ್ಲಿಸಿದ್ದಾರೆ. ದಾಸ ಸಾಹಿತ್ಯದಲ್ಲಿ ಸಂಶೋಧನೆ ನಡೆಸಿ 50 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಗೋರಬಾಳ ಹನುಮಂತರಾಯರು ಲಿಂಗಸುಗೂರಿನವರು. ಹಮ್‍ದರ್ದ್ ಪ್ರೌಢಶಾಲೆಯನ್ನು ಸ್ಥಾಪಿಸಿದ. ಅನೇಕ ಗ್ರಂಥಗಳನ್ನು ಬರೆದ ಪಂಡಿತ ತಾರಾನಾಥರು ಈ ಜಿಲ್ಲೆಯವರು. ಆಧುನಿಕ ಸಾಹಿತಿಗಳಲ್ಲಿ ಶಬ್ದಮಣಿ ದರ್ಪಣದ ಪಾಠಾಂತರಗಳು, ಹರಿಕಥಾಮೃತ, ಹೂಮಾಲೆ ಮೊದಲಾದ ಗ್ರಂಥಗಳನ್ನು ರಚಿಸಿದ ಡಿ.ಕೆ. ಭೀಮಸೇನರಾಯರು ಮಾನ್ವಿ ತಾಲ್ಲೂಕಿನ ಬೀಡಗಿಯವರು. ಸರಸ್ವತಿ ತತ್ತ್ವ, ಕನ್ನಡ ಯಾತ್ರೆ ಮೊದಲಾದ ಕೃತಿಗಳನ್ನು ರಚಸಿದ ಮಾನ್ವಿ ನರಸಿಂಗರಾಯರು ಈ ಜಿಲ್ಲೆಗೆ ಸೇರಿದವರು.

ಇತಿಹಾಸ :

ರಾಯಚೂರು ಜಿಲ್ಲೆಯ ಇತಿಹಾಸ ವೈಶಿಷ್ಟ್ಯಪೂರ್ಣವಾದದ್ದು. ರಾಮಾಯಣದ ಕಿಷ್ಕಿಂಧೆ ಈ ಜಿಲ್ಲೆಯ ಆನೆಗುಂದಿಯೆಂದು ಪ್ರತೀತಿ. ಮಹಾಭಾರತದ ಧರ್ಮರಾಯ ರಾಜಸೂಯಾಗ ಮಾಡುವ ಸಂದರ್ಭದಲ್ಲಿ ಒಂದು ದಿಗ್ವಿಜಯದ ತಂಡದ ನಾಯಕನಾಗಿ ಬಂದ ಸಹದೇವ ಈ ಸ್ಥಳದಲ್ಲಿ ತಂಗಿದ್ದು ಆತಿಥ್ಯ ಸ್ವೀಕರಿಸಿದನೆಂದು ಇದರಿಂದ ಈ ಜಿಲ್ಲೆಯ ಪ್ರದೇಶ ಪುರಾಣಗಳ ಕಾಲದಿಂದ ಪ್ರಸಿದ್ಧವೆಂದೂ ಪ್ರತೀತಿ. ಕೃಷ್ಣಾ ಮತ್ತು ತುಂಗಭದ್ರಾ ಎರಡು ಮಹಾ ನದಿಗಳ ಮಧ್ಯದ ಈ ಪ್ರದೇಶ ಇತಿಹಾಸ ಪೂರ್ವದ ಪ್ರಾಚೀನ ಮಾನವನ ನೆಲೆಯಾಗಿತ್ತು. ಈ ಜಿಲ್ಲೆಯ ಬೆಣಕಲ್ಲು, ಮಸ್ಕಿ, ಕಲ್ಲೂರು, ಕವಿತಾಳ ಮತ್ತು ಸಿರವಾರ ಮೊದಲಾದ 31 ಸ್ಥಳಗಳಲ್ಲಿ ಇತಿಹಾಸ ಪೂರ್ವದ ನಾಗರಿಕತೆಯ ಅವಶೇಷಗಳು ಕಂಡುಬಂದಿವೆ. ಇವುಗಳಲ್ಲಿ ಮಸ್ಕಿ ಮುಖ್ಯವಾದದ್ದು. ಇಲ್ಲಿ ಚಿನ್ನದ ಅದರು ಕಂಡುಬರುವುದರಿಂದ ಗಣಿ ಕೆಲಸ ನಡೆಯುತ್ತಿದ್ದಿರಬಹುದೆಂದೂ ಇದೇ ಮಸ್ಕಿಯ ಪ್ರಾಮುಖ್ಯತೆಗೆ ಕಾರಣವಿರಬೇಕೆಂದೂ ಪ್ರತೀತಿ. ಈ ಜಿಲ್ಲೆಯ ಇತಿಹಾಸ ಪೂರ್ವ ಪ್ರದೇಶಗಳಲ್ಲಿ ಶಿಲಾಯುಧಗಳು, ಹರಳಿನ ಮಣಿಗಳು, ಮಣ್ಣಿನ ಮಡಕೆಗಳು, ಟೆರ್ರಾಕೋಟ (ಮೃಣ್ಮಯ) ಮೂರ್ತಿಗಳು, ಲೋಹವನ್ನು ಕರಗಿಸುವ ಕುಲುಮೆಗಳು, ದೊಡ್ಡ ಕಲ್ಲುಗಳ ಸಮಾಧಿಗಳು ಮತ್ತು ರೇಖಾ ಹಾಗೂ ವರ್ಣಚಿತ್ರಗಳು ಸಿಕ್ಕಿವೆ. ಇಲ್ಲಿನ ಜನ ಬಹಳ ಹಿಂದಯೇ ಕಬ್ಬಿಣ ಮತ್ತು ತಾಮ್ರದ ಉಪಯೋಗವನ್ನು ಅರಿತಿದ್ದರೆಂದೂ ಈ ಜಿಲ್ಲೆಯ ಸಂಸ್ಕøತಿಗೂ ಹರಪ್ಪ ಮತ್ತು ಮೊಹೆಂಜೊದಾರೊ ಸಂಸ್ಕøತಿಗೂ ಹೋಲಿಕೆಯಿದೆ ಎಂದೂ ವಿದ್ವಾಂಸರ ಅಭಿಪ್ರಾಯ.

ಇತಿಹಾಸದ ಪ್ರಕಾರ ಈ ಜಿಲ್ಲೆ ಮೌರ್ಯರ ಆಳ್ವಿಕೆಗೆ ಸೇರಿತ್ತು. ಈ ಜಿಲ್ಲೆಯ ಮಸ್ಕಿ, ಗವಿಮಠ, ಪಾಲ್ಕಿಗುಂಡು ಈ ಸ್ಥಳಗಳಲ್ಲಿ ಅಶೋಕನ ಶಾಸನಗಳು ಸಿಕ್ಕಿವೆ. ಮುಂದೆ ಕದಂಬರು ಬಾದಾಮಿಯ ಚಾಳುಕ್ಯರು, ರಾಷ್ಟ್ರಕೂಟರು, ಸಾತವಾಹನರು, ಕಲ್ಯಾಣಿ ಚಾಳುಕ್ಯರು, ಕಳಚುರಿಗಳು, ದೇವಗಿರಿಯ ಸೇವುಣರು; ಅನಂತರ ಚೋಳ, ಹೊಯ್ಸಳ ಮುಂತಾದ ರಾಜಮನೆತನಗಳು ಈ ಜಿಲ್ಲೆಯನ್ನು ಆಳಿದವು. ಇವರಿಗೆ ಸಂಬಂಧಪಟ್ಟ ಅನೇಕ ಶಾಸನಗಳು ಈ ಜಿಲ್ಲೆಯಲ್ಲಿ ದೊರೆತಿವೆ. ಮುಂದೆ ವಿಜಯನಗರ ಮತ್ತು ಬಹಮನೀ ರಾಜ್ಯಗಳ ನಡುವೆ ನಡೆದ ಯುದ್ಧಗಳಲ್ಲಿ ಈ ಜಿಲ್ಲೆ ರಣರಂಗವಾಗಿ ಕಷ್ಟನಷ್ಟ ಅನುಭವಿಸಿದ್ದಲ್ಲದೇ ಆಗಾಗ್ಗೆ ಒಬ್ಬರಿಂದ ಒಬ್ಬರ ಕೈಗೆ ಹೋಯಿತು. ಬಹಮನೀ ರಾಜ್ಯ ಒಡೆದು ಐದು ಶಾಹೀ ರಾಜ್ಯಗಳಾದವು. ಈ ಶಾಹೀ ರಾಜ್ಯಗಳಿಗೂ ವಿಜಯನಗರ ಅರಸರಿಗೂ ಯುದ್ಧ ನಡೆಯುತ್ತಲೇ ಇತ್ತು. ಅದರಲ್ಲಿ ಕೃಷ್ಣದೇವರಾಯ 1520ರಲ್ಲಿ ರಾಯಚೂರು ಬಳಿಯ ಯುದ್ಧದಲ್ಲಿ ಇಸ್ಮಾಯಿಲ್ ಆದಿಲ್ ಷಾನನ್ನು ಸೋಲಿಸಿ ಈ ಜಿಲ್ಲೆಯನ್ನು ವಶಪಡಿಸಿಕೊಂಡ. ವಿಜಯನಗರದ ಪತನದ ಅನಂತರ ಗೋಲ್ಕೊಂಡ, ಅಹಮದ್‍ನಗರ ಮತ್ತು ಬಿಜಾಪುರ ಸುಲ್ತಾನರು ರಾಯಚೂರನ್ನು ವಶಪಡಿಸಿಕೊಂಡರು. ಅಂದಿನಿಂದ ಈ ಜಿಲ್ಲೆ ಬಿಜಾಪುರದ ಆದಿಲ್ ಶಾಹೀ ವಂಶದವರಿಗೆ ಸೇರಿತು. ಶಿವಾಜಿ ರಾಜ್ಯ ವಿಸ್ತರಣ ಕಾಲದಲ್ಲಿ ಕೊಪ್ಪಳ ಕೋಟೆಯನ್ನು ವಶಪಡಿಸಿಕೊಂಡ. ಬಿಜಾಪುರ ಮೊಗಲರ ವಶವಾದ ಮೇಲೆ ಈ ಜಿಲ್ಲೆ ಹೈದರಾಬಾದಿನ ನಿಜಾಮನ ಆಡಳಿತಕ್ಕೆ ಸೇರಿತು. ಸ್ವಲ್ಪ ಕಾಲ ಈ ಜಿಲ್ಲೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಮತ್ತೆ 1858 ರಲ್ಲಿ ನಿಜಾಮನ ಆಡಳಿತಕ್ಕೆ ಒಳಪಟ್ಟಿತು.

ಈ ಮಧ್ಯೆ ಜಿಲ್ಲೆಯಲ್ಲಿ ಕೆಲವು ಸ್ವಾತಂತ್ರ್ಯ ಹೋರಾಟಗಳೂ ನಡೆದವು. ಕೊಪ್ಪಳ ಪ್ರದೇಶದ ಜಮೀನ್ದಾರ ವೀರಪ್ಪ, ಮುಂಡರಗಿ ಭೀಮರಯ, ನಾಡಗೌಡ ಮತ್ತು ಕೆಂಚನಗೌಡ ಮೊದಲಾದವರು ಬ್ರಿಟಿಷರ ವಿರುದ್ಧ ಹೋರಾಡಿ ಮಡಿದರು. ಜಿಲ್ಲೆಯಲ್ಲಿ ರಾಷ್ಟ್ರೀಯ ಏಕತಾಭಾವನೆಯನ್ನು, ರಾಜಕೀಯ ಜಾಗೃತಿಯನ್ನು ನಾನಾ ರೂಪದಲ್ಲಿ ಉಂಟುಮಾಡಿದವರಲ್ಲಿ ಆರ್. ಬಿ. ದೇಸಾಯಿ, ಪಂಡಿತ ತಾರಾನಾಥ, ಅಡವೀರಾವ್ ಫಡ್ನವೀಸ್, ಆರ್.ಜಿ. ಜೋಶಿ, ಗಾಣಧಾಳನಾರಾಯಣಪ್ಪ, ವೀರಣ್ಣ ಮಾಸ್ತರ ಮೊದಲಾದವರನ್ನು ಉದಾಹರಿಸಬಹುದು. 1938 ರಲ್ಲಿ ಹೈದರಾಬಾದು ರಾಜ್ಯ ಕಾಂಗ್ರೆಸ್ ಸ್ಥಾಪನೆಯಾಗಿ ಅದರ ಮುಖಾಂತರ ಅನೇಕರು ಗಾಂಧೀ ಮಾರ್ಗದರ್ಶನದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ `ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. ಈ ರೀತಿ ರಾಯಚೂರು ಜಿಲ್ಲೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ತನ್ನ ಕಾಣಿಕೆ ಸಲ್ಲಿಸಿದೆ. ಹೈದರಾಬಾದಿನ ನಿಜಾಮ 1947 ಆಗಸ್ಟ್ 27 ರಂದು ತಾನು ಸ್ವತಂತ್ರನೆಂದು ಸಾರಿಕೊಂಡು ಭಾರತದ ಒಕ್ಕೂಟದಲ್ಲಿ ಸೇರಲು ನಿರಾಕರಿಸಿದ. ನಿಜಾಮನ ಆಡಳಿತಕ್ಕೆ ವಿರೋಧ ನಿಂಥವರು ಸೆರೆಮನೆ ಕಂಡರು. ನಾನಾ ಬಗೆಯ ಚಳುವಳಿ ಪ್ರಾರಂಭವಾಯಿತು. ಇವನ್ನೆಲ್ಲ ಹತ್ತಿಕ್ಕಲು ರಜಾಕಾರರು ಮುಂದಾಗಿ ಹೀನಕೃತ್ಯಗಳನ್ನೆಸಗಿ ಭಯೋತ್ಪಾದನೆಯುಂಟುಮಾಡಿದರು. ಅವರ ದೌರ್ಜನ್ಯ ಮಿತಿಮೀರಿತು. ಭಾರತ ಸರ್ಕಾರ 1948 ಸೆಪ್ಟೆಂಬರ್ 13ರಂದು ಈ ಹಾವಳಿ ತಡೆದು ಹೈದರಾಬಾದನ್ನು ಸರಿಯಾದ ಮಾರ್ಗಕ್ಕೆ ತರಲು ನಿರ್ಧರಿಸಿತು. ಈ ನಿರ್ಧಾರದ ಕಾರ್ಯಕ್ರಮದಿಂದ 1948 ಸೆಪ್ಟೆಂಬರ್ 18 ರಂದು ಹೈದರಾಬಾದು ನಿಜಾಮನ ಆಡಳಿತದಿಂದ ಮುಕ್ತವಾಗಿ ಭಾರತದಲ್ಲಿ ಸೇರಿಹೋಯಿತು. ಅನಂತರ ರಾಯಚೂರು ಜಿಲ್ಲೆ ರಾಜ್ಯ ಪುನರ್ವಿಂಗಡಣೆಯಿಂದಾಗಿ 1956 ರಿಂದ ಕರ್ನಾಟಕದ ಒಂದು ಭಾಗವಾಯಿತು.

ರಾಯಚೂರು ತಾಲ್ಲೂಕು

ರಾಯಚೂರು ತಾಲ್ಲೂಕನ್ನು ಪಶ್ಚಿಮದಲ್ಲಿ ದೇವದುರ್ಗ ಮತ್ತು ಮಾನ್ವಿ ತಾಲ್ಲೂಕುಗಳೂ ಉತ್ತರದಲ್ಲಿ ಸ್ವಲ್ಪ ಭಾಗ ಗುಲ್ಬರ್ಗ ಜಿಲ್ಲೆಯ ಶಹಪುರ ತಾಲ್ಲೂಕು, ಉತ್ತರ, ಪೂರ್ವ ಮತ್ತು ದಕ್ಷಿಣದಲ್ಲಿ ಆಂಧ್ರಪ್ರದೇಶವೂ ಸುತ್ತುವರೆದಿದೆ. ಎರಗೆರೆ, ರಾಯಚೂರು, ಕಿಲ್ಲೆಸುಗೂರು, ಕಲ್‍ಮಲ, ಚಂದ್ರಬಂಡೆ, ದೇವರಸುಗೂರು - ಇವು ಈ ತಾಲ್ಲೂಕಿನ 6 ಹೋಬಳಿಗಳು. ಒಟ್ಟು 160 ಗ್ರಾಮಗಳಿಂದ ಈ ತಾಲ್ಲೂಕಿನ ವಿಸ್ತೀರ್ಣ 1,531.5 ಚಕಿಮೀ. ಜನಸಂಖ್ಯೆ 4,32,564 (2001).

ಈ ತಾಲ್ಲೂಕು ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಮಧ್ಯದ ದೋಅಬ್ ಪ್ರದೇಶ. ಉತ್ತರದಲ್ಲಿ ಕೃಷ್ಣಾನದಿ ಅರಸಂಗಿ ಗ್ರಾಮದ ಉತ್ತರದಲ್ಲಿ ಈ ತಾಲ್ಲೂಕನ್ನು ಮುಟ್ಟಿ ಪೂರ್ವಾಭಿಮುಖವಾಗಿ ಹರಿದು ತಾಲ್ಲೂಕನ್ನು ಬುಡದಿಪಾಡು ಗ್ರಾಮದ ಉತ್ತರದಲ್ಲಿ ಬಿಟ್ಟು ಆಂಧ್ರಪ್ರದೇಶವನ್ನು ಪ್ರವೇಶಿಸುವುದು. ಈ ನದಿ ಉತ್ತರದ ಗಡಿಯಾಗಿ ಗುಲ್ಬರ್ಗ ಮತ್ತು ಆಂಧ್ರಪ್ರದೇಶವನ್ನು ಈ ತಾಲ್ಲೂಕಿನಿಂದ ಬೇರ್ಪಡಿಸುತ್ತದೆ. ದಕ್ಷಿಣದಲ್ಲಿ ತುಂಗಭದ್ರಾ ನದಿ ಕಟಕನೂರಿನ ದಕ್ಷಿಣದಲ್ಲಿ ತಾಲ್ಲೂಕನ್ನು ಮುಟ್ಟಿ ಪೂರ್ವಾಭಿಮುಖವಾಗಿ ಹರಿದು ತಲಮಾರಿ ಗ್ರಾಮದ ಆಗ್ನೇಯದಲ್ಲಿ ತಾಲ್ಲೂಕನ್ನು ಬಿಟ್ಟು ಆಂಧ್ರಪ್ರದೇಶವನ್ನು ಪ್ರವೇಶಿಸುವುದು ಹಾಗೂ ತಾಲ್ಲೂಕು ಗಡಿಯಾಗಿ ಹರಿದು ಆಂಧ್ರಪ್ರದೇಶವನ್ನು ಬೇರ್ಪಡಿಸಿರುವುದು. ಕೃಷ್ಣಾನದಿಯ ಬಲದಂಡೆ ಮತ್ತು ತುಂಗಭದ್ರಾ ನದಿಯ ಎಡದಂಡೆಯ ಫಲವತ್ತಾದ ಪ್ರದೇಶ ಈ ತಾಲ್ಲೂಕಿಗೆ ಸೇರಿದೆ. ತಾಲ್ಲೂಕಿನಲ್ಲಿ ಸಣ್ಣ ಬೋಳ ಗುಡ್ಡಗಳು ಕಂಡುಬರುತ್ತವೆ. ಇವುಗಳಲ್ಲಿ ರಾಯಚೂರಿನ ದಕ್ಷಿಣಕ್ಕೆ ಸುಮಾರು 6 ಕಿಮೀ ದೂರದಲ್ಲಿರುವ ಮಲ್ಲಾಬಾದಗುಡ್ಡ ದೊಡ್ಡದಾದದ್ದು. ವರ್ಷದಲ್ಲಿ ಬೇಸಗೆ ಕಾಲ ಬಿಟ್ಟು ಉಳಿದಂತೆ ಹವೆ ಸಹ್ಯವಾಗಿರುವುದು. ವಾರ್ಷಿಕ ಸರಾಸರಿ ಮಳೆ 713.30 ಮಿಮೀ. ಈ ತಾಲ್ಲೂಕಿನ ನದಿದಡಗಳ ಉದ್ದಕ್ಕೂ ಸ್ವಲ್ಪ ಕಾಡನ್ನು ಕಾಣಬಹುದು. ಕಪ್ಪು ಮಣ್ಣಿನ ಈ ತಾಲ್ಲೂಕಿನಲ್ಲಿ ವ್ಯವಸಾಯ ನೀರಾವರಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ತುಂಗಭದ್ರಾ ಎಡದಂಡೆ ನಾಲೆ ಮತ್ತು ರಾಚೋಲಿಬಂಡ ಅಣೆಕಟ್ಟಿನ ಎಡನಾಲೆಗಳಿಂದ ತಾಲ್ಲೂಕಿನ ವ್ಯವಸಾಯಕ್ಕೆ ನೀರೊದಗಿ ಹೆಚ್ಚು ಭೂಮಿ ಬೇಸಾಯಕ್ಕೆ ಒಳಪಟ್ಟಿದೆ. ಭತ್ತ, ಜೋಳ ದ್ವಿದಳ ಧಾನ್ಯಗಳು, ಗೋಧಿ, ತೊಗರಿ, ಹೆಸರು, ಕಬ್ಬು, ಸೇಂಗಾ, ಹರಳು, ಹತ್ತಿ ಇವನ್ನು ಬೆಳೆಯುವರು.

ಈ ತಾಲ್ಲೂಕಿನಲ್ಲಿರುವ ಹತ್ತಿ ಮತ್ತು ಎಣ್ಣೆ ಗಿರಣಿಗಳನ್ನು ಬಿಟ್ಟರೆ ಬೇರೆ ದೊಡ್ಡ ಕೈಗಾರಿಕೆಗಳಿಲ್ಲ. ಹತ್ತಿಯನ್ನು ಸಂಸ್ಕರಿಸುವುದು, ಹರಳು, ಸೇಂಗಾ ಮುಂತಾದ ಎಣ್ಣೆಬೀಜಗಳಿಂದ ಎಣ್ಣೆ ತೆಗೆಯುವುದು ಇಲ್ಲಿನ ದೊಡ್ಡ ಉದ್ಯಮ. 1946 ರಲ್ಲಿ ಪ್ರಾರಂಭವಾದ ಸಿಮೆಂಟ್ ಕೊಳವೆ ತಯಾರಿಕಾ ಕಾರ್ಖಾನೆಯೊಂದು ಈ ತಾಲ್ಲೂಕಿನಲ್ಲಿದೆ. ಕೈಮಗ್ಗದ ಬಟ್ಟೆ, ಚರ್ಮ ಸಂಸ್ಕರಣ ಮತ್ತು ಆ ಸಂಬಂಧ ವಸ್ತುಗಳ ತಯಾರಿಕೆ, ಮರಗೆಲಸ - ಇವು ಈ ತಾಲ್ಲೂಕಿನ ಇತರ ಗೃಹಕೈಗಾರಿಕೆಗಳು.

ತಾಲ್ಲೂಕಿನಲ್ಲಿ ಶಾಲಾ ಕಾಲೇಜುಗಳೂ ಆಸ್ಪತ್ರೆ ಮತ್ತು ಔಷಧಾಲಯ ಮುಂತಾದ ಸೌಲಭ್ಯಗಳಿವೆ. ಈ ತಾಲ್ಲೂಕಿನ ಮಧ್ಯದಲ್ಲಿ ಉತ್ತರ ದಕ್ಷಿಣವಾಗಿ ಗುಂತಕಲ್ಲು- ವಾಡಿ ಬ್ರಡ್‍ಗೇಜ್ ರೈಲುಮಾರ್ಗ ಹಾದುಹೋಗಿದೆ. ರಾಯಚೂರು ಇದರ ಮುಖ್ಯ ನಿಲ್ದಾಣ.

ಈ ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ದೇವರಸುಗೂರು ಒಂದು. ಇದು ರಾಯಚೂರು ಉತ್ತರಕ್ಕೆ 19 ಕಿಮೀ ದೂರದಲ್ಲಿ ಕೃಷ್ಣಾ ನದಿಯ ಬಲದಂಡೆಯ ಮೇಲಿದೆ. ಇಲ್ಲಿನ ವೀರಭದ್ರ ದೇವಾಲಯ ಪ್ರಸಿದ್ಧವಾದದ್ದು. ರಾಯಚೂರಿನ ವಾಯವ್ಯದಲ್ಲಿ 24 ಕಿಮೀ ದೂರದಲ್ಲಿ ಕೃಷ್ಣಾ ನದಿಯ ಬಲದಂಡೆಗಿರುವ ಕೂಡಲೂರು ಬಳಿ ಭೀಮಾನದಿ ಕೃಷ್ಣಾ ನದಿಯನ್ನು ಸೇರಿಕೊಳ್ಳುವುದು. ಇದೊಂದು ಪವಿತ್ರ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ವಿಜಯನಗರದ ದೊರೆ ಕೃಷ್ಣದೇವರಾಯ ಕುಟುಂಬ ಸಮೇತ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದನೆಂದು ಇಲ್ಲಿನ ಒಂದು ಶಾಸನದಿಂದ ತಿಳಿದುಬರುತ್ತದೆ. ರಾಮಗಡ್ಡೆ ಎಂಬುದು ಕೃಷ್ಣಾನದಿಯ ಮಧ್ಯದಲ್ಲಿರುವ ಪುಟ್ಟ ದ್ವೀಪ. ರಾಯಚೂರಿನ ಈಶಾನ್ಯಕ್ಕೆ 32 ಕಿಮೀ ದೂರದಲ್ಲಿದೆ. ಇಲ್ಲಿ ಶ್ರೀರಾಮಚಂದ್ರ ಲಿಂಗ ಪ್ರತಿಷ್ಠಾಪಿಸಿ ಶಿವನನ್ನು ಪೂಜಿಸಿದನೆಂದು ಪ್ರತೀತಿ. ಇಲ್ಲಿ ಒಂದು ವೀರಶೈವ ಮಠವಿದೆ. ನಾರದಗಡ್ಡೆ ಕೃಷ್ಣಾನದಿ ಮಧ್ಯದ ಒಂದು ಸುಂದರ ದ್ವೀಪ. ರಾಯಚೂರಿಗೆ ಈಶಾನ್ಯದಲ್ಲಿರುವ ಒಂದು ಪವಿತ್ರ ಕ್ಷೇತ್ರ. ಇಲ್ಲಿ ನಾರದ ತಪಸ್ಸನ್ನು ಆಚರಿಸಿದ್ದನೆಂದು ಪ್ರತೀತಿ. ಇಲ್ಲಿ ನಾರದ ದೇವಾಲಯವಿದೆ. ವೈರಾಗ್ಯ ಚನ್ನಬಸವಸ್ವಾಮಿ ಮತ್ತು ಶ್ರೀಪಾದವಲ್ಲಭಸ್ವಾಮಿ ಇವರ ಸಮಾಧಿಗಳಿವೆ. ಶಿವಯೋಗ ಪೀಠ, ಬಸವಣ್ಣ ಮಂದಿರ ಮತ್ತು ದತ್ತಾತ್ರೇಯ ಪೀಠ ಇದ್ದು ವರ್ಷಕ್ಕೊಮ್ಮೆ ಜಾತ್ರೆಯಾಗುವುದು. ಮಟ್ಮರಿ ಗ್ರಾಮ ರಾಯಚೂರಿಗೆ ನೈಋತ್ಯದಲ್ಲಿ 36 ಕಿಮೀ ದೂರದಲ್ಲಿದೆ. ಇಲ್ಲಿ ಪ್ರಸಿದ್ಧ ವೀರಭದ್ರ ದೇವಾಲಯ ಮತ್ತು ಚನ್ನವೀರ ಶಿವಾಚಾರ್ಯಸ್ವಾಮಿ ಮಠವಿದೆ. ಗಾಣಧಾಳ ಗ್ರಾಮ ರಾಯಚೂರಿನ ಆಗ್ನೇಯಕ್ಕೆ 30 ಕಿಮೀ ದೂರದಲ್ಲಿದೆ. ಈ ಊರಿನ ಹತ್ತಿರದ ಗುಡ್ಡದ ಮೇಲೆ ಪಂಚಮುಖಿ ಹನುಮಂತನ ಪ್ರಸಿದ್ಧ ದೇವಾಲಯವಿದೆ. ಇದೇ ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಶ್ರೀ ಸಾವಿರದೇವರು ಚನ್ನವೀರ ಶಿವಾಚಾರ್ಯಸ್ವಾಮಿ ಮಠವಿದೆ. ಕಲ್‍ಮಲದಲ್ಲಿ ಸಂತ ಕರಿಯಪ್ಪ ತಾತನ ಸಮಾಧಿ ಇದೆ.

ರಾಯಚೂರು ಪಟ್ಟಣ :

ಇದು ಜಿಲ್ಲೆ ಮತ್ತು ತಾಲ್ಲೂಕುಗಳ ಆಡಳಿತ ಕೇಂದ್ರ. ಬೆಂಗಳೂರಿನ ಉತ್ತರಕ್ಕೆ 475ಕಿಮೀ ದೂರದಲ್ಲೂ ಬಳ್ಳಾರಿಯ ಉತ್ತರಕ್ಕೆ 174 ಕಿಮೀ ದೂರದಲ್ಲೂ ಇದೆ. ಜಿಲ್ಲೆಯ ಪೂರ್ವಕ್ಕಿರುವ ಈ ನಗರದ ಮುಖಾಂತರ ಗುಂತಕಲ್ಲೂ-ವಾಡಿ ಬ್ರಾಡ್‍ಗೇಜ್ ರೈಲುಮಾರ್ಗ ಹಾದು ಹೋಗಿದೆ. ಜನಸಂಖ್ಯೆ 224,617 (2001).

ಮುಂಬಯಿ ಮದರಾಸು ನಡುವೆ ರೈಲ್ವೆ ಪ್ರಾರಂಭವಾದಂದಿನಿಂದ (1871) ಪ್ರಮುಖ ವ್ಯಾಪಾರ ಕೇಂದ್ರವಾಗಿ ಈ ಪಟ್ಟಣ ಬೆಳೆಯುತ್ತ ಬಂತು. ಮುಂಬಯಿಯಿಂದ ಬರುವರೈಲ್ವೆ ಗಾಡಿಗಳಿಗೆ, ಮದರಸಿನಿಂದ (ಚೆನ್ನೈ)ಬರುವ ದಕ್ಷಿಣ ರೈಲ್ವೆ ಗಾಡಿಗಳಿಗೆ ರಾಯಚೂರು ಒಂದು ಪ್ರಮುಖ ಸಂಧಿಸ್ಥಳ. ರಾಯಚೂರಿನಿಂದ ಎಲ್ಲ ತಾಲ್ಲೂಕು ಕೇಂದ್ರಗಳಿಗೂ ಸಾರಿಗೆ ಸಂಪರ್ಕ ಉಂಟು. ರಾಯಚೂರಿನ ಉತ್ತರಕ್ಕೆ 8 ಕಿಮೀ ದೂರದಲ್ಲಿ 1942ರಲ್ಲಿ ನಿರ್ಮಿಸಿದ ತಾತ್ಪೂರ್ತಿಕ ವಿಮಾನ ನಿಲ್ದಾಣವಿದೆ.

ರಾಯಚೂರು ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದು ಇಲ್ಲಿ ಹತ್ತಿಗಿರಣಿಗಳು, ಎಣ್ಣೆ ಗಿರಣಿಗಳು, ಸಾಮಾನ್ಯ ಯಂತ್ರ ಕಾರ್ಖಾನೆಗಳು, ಭತ್ತದ ಗಿರಣಿಗಳು, ಕಟ್ಟಿಗೆ ಕೊರೆಯುವ ಯಂತ್ರಗಳು ಮತ್ತು ಮುದ್ರಣಾಲಯಗಳು, ಅಗರಬತ್ತಿ ಕಾರ್ಖಾನೆ ಮುಂತಾದವುಗಳಿವೆ. ಬಹುಮನೀ ಅರಸರ ಕಾಲದಲ್ಲಿ ಸುಂದರವಾದ ಬಟ್ಟೆ ತಯಾರಿಕೆಗೆ ಈ ಪಟ್ಟಣ ಖ್ಯಾತಿಪಡೆದಿತ್ತು. ಹತ್ತಿ, ಸೇಂಗಾ, ಭತ್ತ ಮತ್ತು ಕಬ್ಬು ವಿಪುಲವಾಗಿ ಬೆಳೆಯುವ ಹಿನ್ನಾಡು ಇರುವುದರಿಂದ ಅವುಗಳ ವ್ಯಾಪಾರಕ್ಕೆ ರಾಯಚೂರು ಕೇಂದ್ರವಾಗಿದೆ. ಇಲ್ಲಿ ನಿಯಂತ್ರಿತ ಮಾರುಕಟ್ಟೆ ಇದೆ. (ರಾಜೇಂದ್ರಗಂಜ್) ಇಲ್ಲಿ ಹತ್ತಿ, ಜೋಳ, ಸೇಂಗಾ, ಎಣ್ಣೆಕಾಳು, ಭತ್ತ, ಗೋಧಿ ಇವುಗಳ ಮಾರಾಟ ನಡೆಯುತ್ತದೆ. ಹತ್ತಿಯ ವ್ಯಾಪಾರಕ್ಕೆ ಈ ಸ್ಥಳ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು, ಭಾರತದಲ್ಲಿ ಮೂರನೆಯ ಸ್ಥಾನವನ್ನು ಪಡೆದಿದೆ. ತುಂಗಭದ್ರಾ ಯೋಜನೆಯ ಅಭಿವೃದ್ಧಿ ಕಾರ್ಯಗಳು ನಡೆದ ಮೇಲೆ ಈ ಮಾರುಕಟ್ಟೆಯ ಮಹತ್ತ್ವ ಇನ್ನೂ ಹೆಚ್ಚಿದೆ. ಇಲ್ಲಿ ವಾಣಿಜ್ಯ ಬ್ಯಾಂಕುಗಳೂ ಕೃಷಿ ಸಾಲ ಸಹಕಾರ ಸಂಘ ಮತ್ತು ಕೃಷಿಯೇತರ ಸಾಲ ಸಹಕಾರ ಸಂಘಗಳೂ ಇವೆ. ಇಲ್ಲಿರುವ ತಾರಾನಾಥ ಸಂಸ್ಥೆ ಮತ್ತು ಠಾಕೂರ್ ಮೆಮೊರಿಯಲ್ ಸಂಸ್ಥೆಗಳು ಕೆಲವು ಶಾಲಾ ಕಾಲೇಜುಗಳನ್ನು ನಡೆಸುತ್ತಿವೆ. ಜೊತೆಗೆ ಸರ್ಕಾರಿ ಶಾಲೆಗಳು ಇದ್ದು ಪಟ್ಟಣದಲ್ಲಿ ವಿe್ಞÁನ, ಕಲೆ ಮತ್ತು ವಾಣಿಜ್ಯ ಕಾಲೇಜುಗಳೂ ಸರ್ಕಾರಿ ತಾಂತ್ರಿಕ ಶಾಲೆ, ಆಯುರ್ವೇದ ವೈದ್ಯ ಶಿಕ್ಷಣ ಕಾಲೇಜೂ ಉಪಾಧ್ಯಾಯ ತರಬೇತಿ ಶಾಲೆಗಳೂ ಕೃಷಿ ತರಬೇತಿ ಕೇಂದ್ರ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪಂಡಿತ ತಾರಾನಾಥರು ಸ್ಥಾಪಿಸಿದ (1920) ಹಮ್‍ದರ್ದ್ ಪ್ರೌಢಶಾಲೆಯೂ ಸೇರಿದಂತೆ ಕೆಲವು ಪ್ರೌಢಶಾಲೆಗಳೂ ಇವೆ. ಪಟ್ಟಣ ಪೌರಾಡಳಿತಕ್ಕೆ ಸೇರಿದೆ.

ಈ ಪಟ್ಟಣದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಇಲ್ಲಿರುವ ಎರಡು ಸುತ್ತಿನಕೋಟೆ ಮುಖ್ಯವಾದುದು. ಇದರಲ್ಲಿ ಒಳಗಿನ ಸುತ್ತು ರಾಜ ವಿಠ್ಠಲ ಕಟ್ಟಿಸಿದ್ದು. ಹೊರಗಿನ ಸುತ್ತು ಮುಸಲ್ಮಾನ ದೊರೆಗಳು ಕಟ್ಟಿಸಿದ್ದೆಂದು ತಿಳಿದುಬರುವುದು. ಹೊರಕೋಟೆಗೆ ಪಶ್ಚಿಮದಲ್ಲಿ ಮೆಕ್ಕಾ, ಉತ್ತರದಲ್ಲಿ ನವರಂಗಿ, ಪೂರ್ವದಲ್ಲಿ ಕಾಟಿ, ದಕ್ಷಿಣದಲ್ಲಿ ಖಂಡಕ ಮತ್ತು ನೈಋತ್ಯದಲ್ಲಿ ದೊಡ್ಡಿ ದರವಾಜ ಎಂಬ ಐದು ಬಾಗಿಲುಗಳಿವೆ. ಒಳಕೋಟೆಗೆ ಪೂರ್ವದಲ್ಲಿ ಸಿಕಂದರಿ ದರವಾಜ ಮತ್ತು ಪಶ್ಚಿಮದಲ್ಲಿ ಸೈಲಾನಿ ದರವಾಜ ಎಂಬ ಎರಡು ಬಾಗಿಲುಗಳಿವೆ. ಹೊರಸುತ್ತಿನ ಕೋಟೆಗಳಿಗೆ ಉತ್ತರದ ನೌರಂಗಿ ದರವಾಜದ ಕೆತ್ತನೆಯ ಕೆಲಸ ಹಿಂದು ರೀತಿಯದಾಗಿದ್ದು ವಿಜಯನಗರದ ಶಿಲ್ಪಕ್ಕೆ ಸಂಬಂಧಿಸಿದಂತಿದೆ. ಇಲ್ಲಿನ ಜುಮ್ಮಾ ಮಸೀದಿ ಸು. 20 ಮೀ ಎತ್ತರವಿರುವ ಏಕ್ ಮೀನಾರ್ ಪ್ರಸಿದ್ಧವಾದದ್ದು. ನೌರಂಗ್ ದರವಾಜದ ಬಳಿ ಕಲ್ಲಿನ ಒಂದು ಆನೆಯೂ ಬಜಾರಿನ ಮಧ್ಯೆ ಕಲ್ಲಿನ ಎರಡು ಆನೆಗಳೂ ಇವೆ. ರಾಮಲಿಂಗೇಶ್ವರ, ನಗರೇಶ್ವರ ಮತ್ತು ಮಾಣಿಕ ಪ್ರಭು ದೇವಾಲಯಗಳು ನೋಡುವಂಥವು. ಸಾವಿರ ದೇವರ ಕಲ್ಲೇಶ್ವರ ಮಠ ಪುರಾತನವಾದುದು. ನಗರದ ಮಧ್ಯದಲ್ಲಿರುವ ತೀನ್ ಕಂದೀಲು ಎದುರಿಗೆ ಇರುವ ಮಸೀದಿ ಕೂಡ ನೋಡುವಂತಹುದು. ಇಲ್ಲಿನ ಕೆಲವು ಸರ್ಕಾರಿ ಕಾರ್ಯಾಲಯಗಳೆಲ್ಲವೂ ಸಾತ್ ಕಚೇರಿ ಎಂಬ ಒಂದು ಹಳೆಯ ಕಟ್ಟಡದಲ್ಲಿವೆ. ಇಲ್ಲಿ ಅನೇಕ ಶಾಸನಗಳು ದೊರೆತಿವೆ. ಕೋಟೆಗೋಡೆಯ ಬಳಿ ಇರುವ ಕಲ್ಲು ಬಂಡೆಯ ಮೇಲಿನ ಶಾಸನ ಕಾಕತೀಯ ಅರಸ ಎರಡನೆಯ ಪ್ರತಾಪರುದ್ರನ ಕಾಲದ್ದು. ಕಾಕತೀಯ ರಾಣಿ ರುದ್ರಮಹಾದೇವಿಯ ಮಂತ್ರಿ ರಾಜಗೊರೆ ಗಂಗಯ್ಯ ರೆಡ್ಡಿಯ ಆದೇಶದಂತೆ ರಾಜವಿಠ್ಠಲನಾಥನೆಂಬುವನ ಪ್ರಜಾರಕ್ಷಣಾರ್ಥವಾಗಿ ಭದ್ರವಾದ ಕೋಟೆಯನ್ನು ಕಟ್ಟಿಸಿದನೆಂದು ಈ ಶಾಸನದಲ್ಲಿ ಹೇಳಿದೆ. ಇದರಲ್ಲಿ ಈ ಊರನ್ನು ರಾಯಚೂರು ಎಂದು ನಿರ್ದೇಶಿಸಿದೆ. ಹೊಯ್ಸಳ ವಿಷ್ಣುವರ್ಧನನ ಒಂದು ಶಾಸನದಲ್ಲಿ ರಾಯಚೂರನ್ನು ಪೆರ್ಮನೆ ರಾಚವೂರು ಎಂದು ಕರೆಯಲಾಗಿದೆ. ರಾಚಪುರವೇ ರಾಯಚೂರು ಆಗಿರಬೇಕೆಂದೂ ತೆಲುಗಿನಲ್ಲಿ ರಾಯಿ ಎಂದರೆ ಕಲ್ಲು ಎಂದರ್ಥವಿದ್ದು ಹೆಚ್ಚು ಕಲ್ಲುಬಂಡೆಗಳಿರುವ ಈ ಊರನ್ನು ಮೊದಲು ರಾಯೂರು ಎಂದು ಕರೆದಿದ್ದು ಅನಂತರ ರಾಯಚೂರು ಆಯಿತೆಂದೂ ಪ್ರತೀತಿ. ಈ ಪಟ್ಟಣ ವಿಜಯನಗರದ ಕಾಲದಲ್ಲಿ ಮಹತ್ತ್ವದ ಪಾತ್ರವಹಿಸಿತ್ತು. ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾ ಮತ್ತು ವಿಜಯನಗರದ ಕೃಷ್ಣದೇವರಾಯ ಇವರ ನಡುವೆ ನಡೆದಕಾಳಗದಲ್ಲಿ ಆದಿಲ್‍ಷಾನ ಸೈನ್ಯ ಸೋತಿತು. ವಿಜಯನಗರದ ತರುವಾಯ ಎಡೆದೊರೆನಾಡು ಆದಿಲ್ ಶಾಹೀ ಆಡಳಿತಕ್ಕೆ ಒಳಪಟ್ಟಿತು. ಮುಂದೆ ದೆಹಲಿ ಅರಸರ ರಾಜ್ಯಕ್ಕೆ ಸೇರಿತು. ಆನಂತರ ಕೆಲವು ವರ್ಷಗಳ ಬಳಿಕ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಅವರಿಂದ ಮತ್ತೆ 1860 ರ ಒಪ್ಪಂದದಪ್ರಕಾರ ನಿಜಾಮನ ಆಡಳಿತಕ್ಕೆ ಒಳಪಟ್ಟಿತು. 1948 ರಲ್ಲಿ ಹೈದರಾಬಾದು ಸ್ವತಂತ್ರ ಭಾರತದ ಒಂದು ಸಂಸ್ಥಾನವಾಗಿ ಸೇರಿಹೋಯಿತು. ಅನಂತರ ಪ್ರಾದೇಶಿಕ ಪ್ರಾಂತ್ಯಗಳ ನಿರ್ಮಾಣದಿಂದಾಗಿ ಕರ್ನಾಟಕ ರಾಜ್ಯಕ್ಕೆ ಸೇರಿತು.

ಕರ್ನಾಟಕ ರಾಜ್ಯ ಜಿಲ್ಲಾ ಮರುವಿಂಗಡನೆಯ ಪ್ರಕಾರ ಅಸ್ತಿತ್ವಕ್ಕೆಬಂದ ಏಳು ಜಿಲ್ಲೆಗಳ ಪೈಕಿ ಕೊಪ್ಪಳವೂ ಒಂದು. ರಾಯಚೂರು ಜಿಲ್ಲೆಯನ್ನು ವಿಂಗಡಿಸಿ ಹೊಸದಾದ ಕೊಪ್ಪಳ ಜಿಲ್ಲೆಯನ್ನು ರೂಪಿಸಲಾಗಿದೆ (24-8-1997). ಈ ಹೊಸ ಹೊಸದಾದ ಜಿಲ್ಲೆಯಲ್ಲಿ ಕೊಪ್ಪಳ, ಗಂಗಾವತಿ, ಕುಷ್ಠಗಿ ಮತ್ತು ಯಲಬುರ್ಗ ತಾಲ್ಲೂಕುಗಳು ಸೇರಿವೆ.