ರಾಷ್ಟ್ರೀಯತೆ - ಮನುಷ್ಯನ ಸಂಘಜೀವನದಲ್ಲಿ ಮೂಡುವ ಅನಿವಾರ್ಯ ಕಲ್ಪನೆ, ಕ್ರಿಯೆ (ನ್ಯಾಶನಲಿಸಮ್). ಇದಕ್ಕೆ ಮಾನಸಿಕ ಪ್ರವೃತ್ತಿಗಳ ಆಧಾರವುಂಟು. ಮಗು ಹುಟ್ಟಿದಾಗ ಸ್ವಪರಿಪೂರ್ಣತೆಯ ಅಭ್ಯಾಸ ಅದ್ದು, ಅದು ಬೆಳೆದಂತೆಲ್ಲ ಹೊರಗಿನ ಸನ್ನಿವೇಶಗಳಿಗೆ ಪರತಂತ್ರವಾಗಿ, ವ್ಯಕ್ತಿಯೂ ವಾತಾವರಣವೂ ಒಂದುಗೂಡಿದರೇನೇ ಸಮರ್ಪಕವಾದ ಬದುಕು ಎಂಬ ಅರಿವು ಮೂಡುತ್ತದೆ. ಮಗು ಏಳನೆಯ ವಾರ ಮುಟ್ಟಿದಾಗ ಪಕ್ಕದಲ್ಲಿದ್ದವರನ್ನು ನೋಡಿ ಮುಗುಳ್ನಗೆ ನಗಬಲ್ಲದು, ಇದಕ್ಕೆ ಸಾಂಘಿಕಸ್ಮಿತ ಎಂದು ಹೆಸರು. ಇಲ್ಲಿಂದ ಮುಂದೆ ಹೊರಗಿನ ಪ್ರಪಂಚದೊಂದಿಗೆ ಹೆಚ್ಚು ಹೆಚ್ಚು ಸಂಪರ್ಕ ಬೆಳೆಯುತ್ತ ಹೋಗುತ್ತದೆ. ತನ್ನ ಮನೆಯೊಂದಿಗೆ ರೂಢವಾಗಿ ಬರುವ ತಾದಾತ್ಮ್ಯಭಾವನೆ ಮುಂದೆ ಸಮೂಹದೊಂದಿಗೆ, ಪ್ರಾಂತ್ಯದೊಂದಿಗೆ, ದೇಶದೊಂದಿಗೆ ಮೂಡಿ ಬರುತ್ತದೆ. ದೇಶದ ಆಶೋತ್ತರಗಳನ್ನು ವ್ಯಕ್ತಿತನ್ನೊಳಗೆ ಅಡಗಿಸಿಕೊಂಡು ತನ್ನ ಬಾಳುವೆಯನ್ನು ಈ ದೃಷ್ಟಿಯಲ್ಲಿ ನಿಲ್ಲಿಸಿಕೊಂಡಾಗ ರಾಷ್ಟ್ರೀಯತೆಯ ಭಾವನೆ ಬೆಳೆಯುತ್ತದೆ.
ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಸಾಂಘಿಕಪ್ರಯೋಜನ ಇದೆ. ಸಂಘದಲ್ಲಿ ಸುಸೂತ್ರವಾಗಿ ವ್ಯವಸ್ಥಿತವಾಗಿ ಬಾಳಬೇಕೆಂದರೆ ಆ ಸಂಘವನ್ನು ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿರುವ ವೈಶಿಷ್ಟ್ಯವನ್ನು ವ್ಯಕ್ತಿ ಅಳವಡಿಸಿಕೊಳ್ಳಬೇಕು. ಇದಕ್ಕೆ ಅನುಕೂಲವಾಗುವಂತೆ ಎಳೆತನದ ಬೆಳೆವಣಿಗೆ ಸಾಗುತ್ತದೆ. ವ್ಯಕ್ತಿಯ ಮುಂದೆ ನಿಲ್ಲುವ ಹಲವಾರು, ನೂರಾರು ಸಮಸ್ಯೆಗಳಿಗೆ ಸೂಕ್ತಪರಿಹಾರ ದೊರೆಯುವುದು ಸಾಂಘಿಕ ಪ್ರವೃತ್ತಿಯಿಂದ. ಸಾಂಘಿಕನಿಷ್ಠೆಯಿಂದ ಸಂಘ ಕ್ರಿಯಾಕುಶಲತೆಯ ದೃಷ್ಟಿಯಿಂದ, ಸಮುದಾಯಗಳಾಗಿ ಒಡೆಯುತ್ತವೆ. ಒಂದು ಭೌಗೋಳಿಕ ಪ್ರದೇಶದಲ್ಲಿ ವಾಸಮಾಡುವ ಸಾವಿರಾರು, ಲಕ್ಷಾಂತರ ಮಂದಿ ಜನರು ಏಕಮುಖವಾಗಿ ಸಮಾಜನಿಷ್ಠೆಯನ್ನು ಇಟ್ಟುಕೊಂಡಿರುವುದು ಸಾಧ್ಯವಿಲ್ಲ. ಏಕವಿಶ್ವದ ಕಲ್ಪನೆ ವಿಫಲವಾದುದು ಈ ಕಾರಣದಿಂದಲೇ. ಊರಿನಲ್ಲಿರು ವವರನ್ನು ಪ್ರೀತಿಸುವುದಕ್ಕಿಂತ ಕೇರಿಯಲ್ಲಿರುವವರನ್ನು ಪ್ರೀತಿಸುವುದು ಸುಲಭಸಾಧ್ಯ; ಕೇರಿಯಲ್ಲಿರುವವರನ್ನೆಲ್ಲ ಪ್ರೀತಿಸುವುದಕ್ಕಿಂತ ಮನೆಯಲ್ಲಿರು ವವರನ್ನಷ್ಟೆ ಪ್ರೀತಿಸುವುದು ಇನ್ನೂ ಸುಲಭ. ಆದುದರಿಂದಲೇ ಸಮಷ್ಟಿಯ ಸಂಘ ವ್ಯವಹಾರದಲ್ಲಿ ಅಂಗ, ಉಪಾಂಗಗಳೆಂದು ಒಡೆದು ಮನೆ, ಅಕ್ಕಪಕ್ಕ, ಕೇರಿ, ಜನಾಂಗ, ಕುಲ, ಪ್ರಾಂತ್ಯ, ದೇಶ ಎಂಬ ಕಲ್ಪನೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಅಂಗರಚನೆ ಎನ್ನುತ್ತಾರೆ. ಒಂದು ಸಮಷ್ಟಿಯಲ್ಲಿರುವ ಅಂಗಗಳು ಸರ್ವಸ್ವತಂತ್ರವೆನ್ನಲಾಗದು; ಆದರೆ ಪರತಂತ್ರವಾದರೂ ದತ್ತ ಸ್ವಾತಂತ್ರ್ಯದ ಸೌಕರ್ಯ ಉಂಟು. ವ್ಯಕ್ತಿ ಈ ಸೀಮಿತ ಪರಿಧಿಯಲ್ಲಿ ಸಮುದಾಯದೊಂದಿಗೆ ತಾದಾತ್ಮ್ಯಗಳಿಸಿಕೊಳ್ಳುತ್ತಾನೆ. ಸಮುದಾಯಕ್ಕೆ ಸೇರಿರುತ್ತಾನೆ. ಹೀಗೆ ತನ್ನನ್ನು ಸಮುದಾಯದಲ್ಲಿ ಕಂಡುಕೊಂಡಾಗಲೇ ಅವನು ಸುಭದ್ರವಾಗಿರುವುದು, ಸ್ವಸ್ಥನಾಗಿರುವುದು. ವ್ಯಕ್ತಿ ಸಂಘದಲ್ಲಿ ವಿಲೀನನಾದರೆ ಸಂಘಕ್ಕೂ ಒಂದು ದಾಢ್ರ್ಯ ಒದಗುವುದು. ಈ ದೃಷ್ಟಿಯಿಂದ ಸಂಘ-ವ್ಯಕ್ತಿಗಳ ನಡುವೆ ಇರಬೇಕಾದ ಸಂಬಂಧ ಸಹಜವೆಂದೇ ಹೇಳಬೇಕು. ಮಾನವಜೀವಿಗಳಲ್ಲೆ ಸಂಘದ ವ್ಯವಸ್ಥೆ ಪ್ರಕೃತಿ ಸಿದ್ಧವಾದುದೆಂದು ಎಲ್ಲ ತಜ್ಞರೂ ಒಪ್ಪುತ್ತಾರೆ.
ನಾವು ಈಗ ಹೇಳುವ ರಾಷ್ಟ್ರೀಯತೆಯ ಭಾವನೆ ಮಧ್ಯಯುಗ ಕಳೆಯುವ ವರೆಗೆ ದೇಶಗಳಲಿ ಇರಲಿಲ್ಲವೆಂಬುದು ಇ.ಎಚ್.ಕಾರ್‍ನ ಅಭಿಪ್ರಾಯ. ಈತ 1939ರಲ್ಲಿ ಬರೆದು ಪ್ರಕಟಿಸಿದ ರಾಷ್ಟ್ರೀಯತೆ ಎಂಬ ಗ್ರಂಥದಲ್ಲಿ ಈ ವಿಚಾರವನ್ನು ಸಮರ್ಥಿಸಿದ್ದಾನೆ. ಈತ ರಾಷ್ಟ್ರವೆಂದರೆ ಆರು ಗುಣಾಂಶಗಳುಳ್ಳ ಸಮುದಾಯಪ್ರಸಂಗವೆಂದು ನಿರೂಪಿಸಿದ್ದಾನೆ. ಹಿಂದೆ ಇದ್ದ, ಈಗ ಇರುವ, ಅಥವಾ ಮುಂದೆ ಬರಬಹುದಾದ ಆಡಳಿತವ್ಯವಸ್ಥೆ ಒಂದು ಪ್ರದೇಶದ ಜನರಿಗೆಲ್ಲ ಅನ್ವಯಿಸುವುದು ಮೊದಲನೆಯದು. ಅಲ್ಲಿನ ಜನರ ನಡುವೆ ಒಂದು ಅಗತ್ಯ ಪ್ರಮಾಣದ ಸಂಪರ್ಕ, ಸಂಪರ್ಕದಲ್ಲಿರುವ ನಿಕಟತೆ ಇವು ಎರಡನೆಯದು. ಹೆಚ್ಚು ಕಡಿಮೆ ನಿರ್ದಿಷ್ಟವಾದ ಪ್ರದೇಶ ಮೂರನೆಯದು. ಒಂದು ಸಮುದಾಯವನ್ನು ಉಳಿದ ಎಲ್ಲ ಸಮುದಾಯಗಳಿಂದ ಪೃಥಕ್ಕಾಗಿಸುವ ಹಲವಾರು ಸಾಮಗ್ರಿಗಳು ನಾಲ್ಕನೆಯ ಗುಣ. ಭಾಷೆ, ಮತ, ಜಾನಪದ, ಸಾಹಿತ್ಯ, ಸಂಗೀತ ಮುಂತಾದುವು ಈ ಗುಂಪಿನಲ್ಲಿ ಸೇರುತ್ತವೆ. ಆ ಪ್ರದೇಶದಲ್ಲಿ ವಾಸಮಾಡುವ ಜನರಲ್ಲಿ ಒಂದೇ ತೆರನಾದ ಆಸಕ್ತಿ, ಅಭಿರುಚಿಗಳು ಕಾಣಬರುವುದು ಐದನೆಯದು. ಸಮುದಾಯದ ಒಬ್ಬೊಬ್ಬ ವ್ಯಕ್ತಿಯ ಮನಸ್ಸಿನಲ್ಲೂ ಇರುವ ಸಮುದಾಯ ಚಿತ್ರಕ್ಕೆ ಸಂಬಂಧಪಟ್ಟಂತೆ ಭಾವನೆ, ಸಂಕಲ್ಪ, ಪ್ರವೃತ್ತಿಗಳು ಇರಬೇಕಾದುದು ಆರನೆಯದು.
ಪ್ರತಿಯೊಬ್ಬ ಸಂಘಜೀವಿ ತನ್ನ ಬೆಳೆವಣಿಗೆಯಲ್ಲಿ ಸ್ವಂತ ಅನುಭವ ಗಳಿಂದ ಸಂಘದ ಪ್ರತಿಕೃತಿಯನ್ನು ಛಾಯಾಚಿತ್ರದಂತೆ ಸೂಕ್ಷ್ಮವಾದ ಆಕಾರದಲ್ಲಿ ತನ್ನ ಪ್ರಯೋಜನಕ್ಕೆ ರೂಪಿಸಿಕೊಳ್ಳುತ್ತಾನೆ. ಇದಕ್ಕೆ ಲಿಪ್‍ಮನ್ ಮುಂತಾದ ಮನಶ್ಶಾಸ್ತ್ರ ಪರಿಣತರು ಸೀರಿಯೋಟೈಪ್ ಎಂದು ಹೆಸರು ಕೊಟ್ಟಿದ್ದಾರೆ. ಈ ಪಾರಿಭಾಷಿಕಪದದಲ್ಲಿ ಪ್ರತಿಕೃತಿ, ಚಿತ್ರ, ಪ್ರತಿಬಿಂಬ, ಸಂಕೇತಪ್ರವೃತ್ತಿ ಈ ನಾಲ್ಕು ಪದಗಳ ವಿಶಿಷ್ಟವಾದ ಕಲ್ಪನೆಗಳು ಸೇರಿವೆ. ಸಮಾಜದಲ್ಲಿ ವಾಸಮಾಡುವ ಮನುಷ್ಯನಿಗೆ ಇಂಥ ಚಿತ್ತಪ್ರತಿಕೃತಿಗಳಿಲ್ಲದಿದ್ದರೆ ಯಾವ ಪ್ರಸಾರವೂ ಸಮರ್ಪಕವಾಗಿ ನಡೆಯುವುದು ಸಾಧ್ಯವಿಲ್ಲ. ಇಡೀ ಸಮಾಜದ ರೂಪುರೇಷೆ, ಇಂಗಿತ, ವಿಧಿ-ನಿಷೇಧ, ಪ್ರವೃತ್ತಿ, ಎಲ್ಲವನ್ನೂ ಅಂತರ್ಗತಮಾಡಿಕೊಳ್ಳದೆ ಸಮಾಜಜೀವಿಯಾಗಿರಲು ಆಗದು. ಆಯಾ ದೇಶಗಳಲ್ಲಿ ಪ್ರಚಲಿತವಾ ಗಿರುವ ವಿವರಗಳಿಗೆ ಅನುಸಾರವಾಗಿ ಈ ಅಂತರ್ಗತಿ ನಡೆಯುತ್ತದೆ. ಇದು ಮುಗಿದ ಮೇಲೆಯೇ ಸಮಾಜೀಕರಣ ದೃಢವಾಯಿತೆಂದು ಹೇಳಬಹುದು. ಆಗ ವ್ಯಕ್ತಿಗೂ ಸಮಾಜಕ್ಕೂ ಒಂದು ಅಭೇದ್ಯವಾದ ತಾದಾತ್ವ್ಯಭಾವನೆ ಬೆಳೆಯುವುದು. ಆ ತಾದಾತ್ಮ್ಯಭಾವನೆಯ ಚರಮಾವಸ್ಥೆಯೇ ರಾಷ್ಟ್ರೀಯತೆಯೆನಿಸಿಕೊಳ್ಳುವುದು.
ರಾಷ್ಟ್ರೀಯತೆಯ ಕಲ್ಪನೆ ಹಲವಾರು ಐತಿಹಾಸಿಕ ಘಟನೆಗಳಿಂದ ಮತ್ತು ಪರಿಣಾಮದ ಫಲವಾಗಿ ಮೂಡಿಬರುತ್ತದೆ. ಸಹಜವಾಗಿ ಪ್ರಗತಿ ಶೀಲವಾದ ಸಮುದಾಯದ ಪ್ರವೃತ್ತಿಗಳಿಗೆ ಅಥವಾ ಆಶೋತ್ತರ ಗಳಿಗೆ ಆಗಾಗ ಅಡ್ಡಿಬರುವುದುಂಟು. ಇಂಥ ಸಂದರ್ಭಗಳಲ್ಲಿ ಸಮಾಜ ಇದನ್ನು ಪ್ರತಿಭಟಿಸಿ ಅಡ್ಡಿಯನ್ನು ಒಡೆದು ಪ್ರಗತಿ ಕುಂಠಿತವಾಗದಂತೆ ನೋಡಿ ಕೊಳ್ಳುತ್ತದೆ. ಇಡೀ ಸಮುದಾಯ ಈ ಹೋರಾಟದಲ್ಲಿ ಭಾಗವಹಿಸುತ್ತದೆ. ಯಾವುದೋ ಕಾರಣದಿಂದ ಒದಗಿಬಂದ ಒಂದು ವ್ಯವಸ್ಥೆ ಅಸಮರ್ಪಕವಾಗಿದ್ದರೆ ಸಮಾಜ ಒಡನೆಯೇ ಅದನ್ನು ಕೈಬಿಡುತ್ತದೆ. ಆದರೆ ಆ ವ್ಯವಸ್ಥೆಯಿಂದ ಉಪಕೃತರಾದವರು ಅದನ್ನೇ ಎತ್ತಿಹಿಡಿಯಲು, ಉಳಿಸಲು ಯತ್ನಮಾಡುತ್ತಾರೆ. ಆಗ ಎರಡೂ ಪಕ್ಷಗಳಿಗೆ ಘರ್ಷಣೆ ಏಳುತ್ತದೆ. ಈ ಹೋರಾಟದ ಘರ್ಷಣೆಯ ಯಶಸ್ಸು ಜನಗಳಲ್ಲಿ ಎಷ್ಟರಮಟ್ಟಿಗೆ ಏಕಭಾವನೆಯಿದೆ ಎಂಬುದನ್ನು ಅವಲಂಬಿಸುತ್ತದೆ. ರಾಷ್ಟ್ರೀಯತೆ ಈ ಏಕಭಾವನೆಯನ್ನು ಆಗಮಾಡುತ್ತದೆ.
ಮಧ್ಯಕಾಲಿಕ ಜಮೀನುದಾರಿಕೆಯ ಸಂಪ್ರದಾಯವನ್ನು ಪ್ರತಿಭಟಿಸಿ ಇಂಗ್ಲೆಂಡ್ ದೇಶದಲ್ಲಿ ರಾಷ್ಟ್ರೀಯತೆ ಹುಟ್ಟಿಕೊಂಡಿತು. ರೋಮನ್ ಮಠದ ಪ್ರಭುತ್ವವನ್ನು ಪ್ರತಿಭಟಿಸಿ ಹತ್ತಾರು ಯುರೋಪಿಯನ್ ದೇಶಗಳಲ್ಲಿ ರಾಷ್ಟ್ರೀಯತೆ ಕಾಣಿಸಿಕೊಂಡಿತು. ಶ್ರೀಮಂತರ ವಿಕಟದರ್ಪ ದೊಂದಿಗೆ ಹೋರಾಡಿ ರಷ್ಯದೇಶದ ರಾಷ್ಟ್ರೀಯತೆ ಸಿದ್ಧವಾಯಿತು. ನೂರಾರು ಸಾಂಘಿಕ ಸಮಸ್ಯೆಗಳನ್ನು ನಿರಂತರವಾಗಿ ಅನುಭವಿಸಿ ಅವುಗಳೊಂದಿಗೆ ಕಾದಾಡಿ ಅಮೆರಿಕನ್ ರಾಷ್ಟ್ರೀಯತೆ ರೂಪುತಳೆಯಿತು. ಆಂಗ್ಲ ಆಡಳಿತವರ್ಗದವರೊಂದಿಗೆ ಹೋರಾಡಿ ತಮ್ಮ ದೇಶದ ಸ್ವಾತಂತ್ರ್ಯವನ್ನು ಪಡೆದಂದು, ಸ್ವಾವಲಂಬಿಗಳಾದಂದು ಉತ್ಸಾಹಶೀಲ ರಾದಂತೆ ಭಾರತದೇಶದ ರಾಷ್ಟ್ರೀಯತೆ ಸಿದ್ಧವಾಯಿತು. ಇದರ ನಿಷ್ಪತ್ತಿಗಾಗಿಯೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆ ಹುಟ್ಟಿಕೊಂಡಿತು. ಹೀಗೆ ದೇಶದಲ್ಲಿ ರಾಷ್ಟ್ರೀಯತೆಯ ಕಲ್ಪನೆ ಮೂಡಿದಾಗ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಏಕಮುಖತೆ ಬರುತ್ತದೆ. ದೇಶವಿಡೀ ಒಂದು ಸಂಸ್ಥೆ, ಅದರಲ್ಲಿ ವ್ಯಕ್ತಿಗಳ ಸಂಘಟನೆ ಅಗತ್ಯ ಎಂಬ ಅರಿವಾಗುತ್ತದೆ. ಅವಶ್ಯಬಿದ್ದರೆ ಕ್ರಾಂತಿ, ಆಂದೋಲನ ಕಾಣಿಸಿಕೊಳ್ಳುತ್ತವೆ. ಏಕೆಂದರೆ ವ್ಯಕ್ತಿಗಳ ಮನಸ್ಸಿನಲ್ಲಿ ಅಂತೂ ಒಂದು ಕ್ರಾಂತಿ ಅನಿವಾರ್ಯವಾಗಿ ಇರಬೇಕು. ಹಾಗಿಲ್ಲದಿದ್ದರೆ ಪ್ರತಿ ವ್ಯಕ್ತಿ ತನ್ನ ಸ್ವಾರ್ಥವನ್ನೇ ಸಾಧಿಸಿಕೊಳ್ಳುವ ಹಂಚಿಕೆ ಮಾಡುತ್ತಾನೆ, ಇದರಿಂದ ಸಮಾಜ ವಿರುದ್ಧವಾದ ಪ್ರವೃತ್ತಿಗಳು ಉದ್ಭೂತವಾಗುತ್ತವೆ. ರಾಷ್ಟ್ರೀಯತೆಯೆನ್ನುವುದು ದೇಶದಲ್ಲಿ ನಡೆಯುವ ಸಮುದಾಯಕ್ರಿಯೆ ಗಳಿಗಿಂತ ಹೆಚ್ಚಾಗಿ ಮನಸ್ಸಿನಲ್ಲಿ ಮೂಡಿ ಬರುವ ಅಂತಃಪ್ರವೃತ್ತಿ, ಅದು ಒಂದು ಅವಸ್ಥಾನ, ಸಂಸ್ಥಿತ, ಬಾಹ್ಯಕ್ರಿಯೆಗಳಿಗೆ ಪೂರ್ವಸಿದ್ಧತೆ, ಅದರಿಂದ ಮನಸ್ಸು ಪ್ರಭಾವಿತವಾಗಿ ಒಂದೊಂದು ವಿವರದಲ್ಲೂ ಈ ಪ್ರಭಾವ ಮೂಡಿಬರುತ್ತದೆ.
ಅಷ್ಟು ಮಾತ್ರವಲ್ಲ, ದೇಶದ ಬಹುಮಂದಿ ವ್ಯಕ್ತಿಗಳ ಅವಸ್ಥಾನಗಳು ಏಕಮುಖವಾಗಿ ಪ್ರವಹಿಸಿ ಅವರೆಲ್ಲರ ಚಿತ್ತವೃತ್ತಿಗಳಲ್ಲೆ ಆ ಕಾಲಕ್ಕಾದರೂ ಏಕತಾನ ಇರುತ್ತದೆ. ವ್ಯಕ್ತಿಗಿಂತ ಸಮುದಾಯ ಹೆಚ್ಚು, ಸಮುದಾಯದ ಪ್ರಯೋಜನಕ್ಕಾಗಿ ವ್ಯಕ್ತಿಯ ಹಿತವನ್ನು ತ್ಯಾಗಮಾಡಬೇಕು ಎನ್ನುವ ಶ್ರದ್ಧೆ ಪ್ರಚಲಿತವಾಗುತ್ತದೆ. ಸುಮಾರು ಮಟ್ಟಿಗೆ ಇದು ಸ್ವಭಾವ ವಿರುದ್ಧವಾದುದು, ಪ್ರಾಕೃತಿಕವಾದುದು ಎಂಬುದು ನಿಜ. ತಾನಾಗಿ ರಾಷ್ಟ್ರೀಯತೆ ಉಂಟಾಗುವುದಿಲ್ಲ. ಅದಕ್ಕಾಗಿ ತರಬೇತಿ, ಶಿಕ್ಷಣ ಅಗತ್ಯ. ಅಷ್ಟಲ್ಲದೆ ಯಾವುದಾದರೊಂದು ವಿಷಮ ಪರಿಸ್ಥಿತಿಯಲ್ಲಿ ಈ ಭಾವನೆ ಉತ್ಪನ್ನವಾಗುವಷ್ಟು ಸುಕರವಾಗಿ ಇತರ ಸಾಮಾನ್ಯ ಪರಿಸ್ಥಿತಿಗಳಲ್ಲಿ ಉಂಟಾಗುವುದಿಲ್ಲ. ಈ ಕಾರಣದಿಂದ ಇತ್ತೀಚಿನ ಪ್ರಾಯೋಗಿಕ ಸಾಮಾಜಿಕ ಮನಶ್ಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರು ರಾಷ್ಟ್ರೀಯತೆಯನ್ನು ಒತ್ತಡದ ಪ್ರಸಂಗ ಎಂದು ಹೆಸರಿಸುತ್ತಾರೆ. ಆಂತರಿಕವಾಗಿ ಕ್ಲೇಶವಿದ್ದು ಬಾಹ್ಯದ ಧ್ಯೇಯವೊಂದು ಕಾಣಿಸಿಕೊಂಡು ಎರಡಕ್ಕೂ ಸಂಧಿಯನ್ನು ಒದಗಿಸಲು ಅಭೀಷ್ಟ ಬಲವಾದರೇನೇ ರಾಷ್ಟ್ರೀಯತೆ ಹುಟ್ಟುವುದು ಎಂದು ಅವರ ವಾದ. ಹಲವಾರು ದೇಶಗಳಲ್ಲಿ ರಾಷ್ಟ್ರೀಯತೆಯ ಭಾವನೆ ಜನರಲ್ಲಿ ವಿಸ್ತøತವಾಗಿರುವುದನ್ನು ಅಧ್ಯಯನ ಮಾಡಿದರೆ ಇದು ಸಾರ್ವತ್ರಿಕವಾದ ಕಲ್ಪನೆಯಲ್ಲವೆಂದು, ಎಲ್ಲೆಲ್ಲಿ ಕ್ಷೋಭೆಯಿದೆ ಅಲ್ಲೇ ಇದರ ಪ್ರಭಾವ ಹೆಚ್ಚೆಂದು, ಸಂಪರ್ಕಸಮುದಾ ಯಗಳಲ್ಲಿ ಇದು ಕಾಣಿಸಿಕೊಳ್ಳುವುದಲ್ಲದೆ ವಿವಿಕ್ತ ಸಮುದಾಯಗಳಲ್ಲಿ ಕಾಣಬರುವುದಿಲ್ಲವೆಂದು ವ್ಯಕ್ತವಾಗುತ್ತದೆ.
ರಾಷ್ಟ್ರೀಯತೆಯ ಮುಖ್ಯಗುರಿ ವ್ಯಕ್ತಿಯಲ್ಲಿ ಸಂಘವನ್ನು ಅಧ್ಯಾರೋಪ ಮಾಡುವುದು. ಆದರೆ ಬಹುಮಟ್ಟಿಗೆ ಇದು ಆಡಳಿತ, ಸ್ವಾಯತ್ತವಾದ ವ್ಯವಸ್ಥೆ, ಸ್ವಸಂಪೂರ್ಣತೆ, ಸ್ವತಂತ್ರವಾದ ಅಧಿಕಾರ ನಿರ್ವಹಣೆ ಇವುಗಳಲ್ಲಿ ಪರ್ಯಾಪ್ತವಾಗಿರುವುದರಿಂದ ರಾಜಕಾರಣ ಇದರಲ್ಲಿ ಹೆಚ್ಚಾದ ಅಭಿನಿವೇಶವನ್ನು ಹೊಂದಿರುವುದು ಸಹಜವೇ. ಆರ್ಥಿಕ ಮತ್ತು ಸಾಮಾಜಿಕ ವಿವರಗಳು ಇದನ್ನು ಅವಲಂಬಿಸಿಕೊಂಡಿರುತ್ತವೆ. ರಾಷ್ಟ್ರೀಯತೆಯ ಭಾವನೆಯನ್ನು ಜನರಲ್ಲೆ ಪ್ರಚೋದಿಸಿ ತನ್ಮೂಲಕವಾಗಿ ರಾಜಕೀಯ ಗುರಿಯನ್ನು ಸಾಧಿಸಿಕೊಳ್ಳಲು ಯತ್ನಿಸುವ ರಾಜಕಾರಣಿಗಳ ಸಮುದಾಯದ ಆಕಾರ-ಆಚರಣೆಗಳು, ಸ್ವಭಾವ-ವ್ಯವಹಾರಗಳು, ಪ್ರವೃತ್ತಿ-ಸಂಸ್ಥಿತಿಗಳು ಉಳಿದ ಸಮುದಾಯಗಳಿಗೂ ಹರಡುತ್ತವೆ. ಸೀಮಿತವಾದ ಒಂದು ಸಮುದಾಯದ ಪ್ರಭಾವ ಇಡೀ ದೇಶದ ಮೇಲೆ ಬೀಳುವುದು ಅನಿವಾರ್ಯ. ಇಲ್ಲಿ ಅವಸ್ಥಾನಗಳ ಪರಿವರ್ತನೆ ಮುಖ್ಯ ವಿಚಾರ. ರಾಷ್ಟ್ರೀಯತೆಗೆ ಅಭಿಮುಖವಾದ ಸಮುದಾಯ ಆದರ್ಶ ಸಮುದಾಯ ಎನಿಸಿಕೊಳ್ಳುತ್ತದೆ. ಆದರ್ಶಸಮುದಾಯ ಆಯಾದೇಶದ ಸಂಸ್ಕøತಿಗೆ ನಿಷ್ಠವಾದ, ಇತಿಹಾಸಕ್ಕೆ ಒಗ್ಗಿದಂಥ ಮೇಲ್ಪಂಕ್ತಿಯನ್ನೇ ಹಾಕಿಕೊಡುತ್ತದೆ. ಇದರಿಂದಾಗಿ ಜನ ಸಾಮಾನ್ಯರ ನಡುವೆ ಸಂವ್ಯವಹಾರ ಸುಕರವಾಗುತ್ತದೆ. ನಿತ್ಯಜೀವನದಲ್ಲಿ ಇದರ ಉಪಯೋಗವೇನೋ ಹೆಚ್ಚು. ಆದರೆ ಒಂದು ದೃಷ್ಟಿಯಿಂದ ಇದು ಅಪ್ರಾಕೃತಿಕಸಂರೋಧ ಎಂದು ಕೆಲವು ಮನ ಶ್ಶಾಸ್ತ್ರಜ್ಞರು ವಾದಿಸಿದ್ದಾರೆ. ರಾಷ್ಟ್ರೀಯತೆಯ ಸಂಕುಚಿತ ದೇಶೀಯತೆಯಲ್ಲಿ ಪರ್ಯಾವಸಾನವಾಗಿ ಮಾನವಸಹಜವಾದ ವಿಶಾಲಮನೋವೃತ್ತಿ ಕುಂಠಿತವಾಗುವುದೆಂದು ಇವರ ವಾದ. ಸಮುದಾಯದ ಪ್ರತಿಕೃತಿ ಚಿತ್ರಗಳನ್ನು ಮನಸ್ಸಿನಲ್ಲೆ ಹೊತ್ತು ಅವುಗಳಿಂದ ನಿಯಂತ್ರಿತವಾದ ಕೆಲಸಗಳನ್ನು ಮಾಡುತ್ತಬಂದರೆ ದೇಶದೇಶಗಳ ನಡುವೆ ಸಾಮಾಜಿಕ ಅಂತರ ಏರ್ಪಡುತ್ತದೆ. ಕ್ರಮೇಣ ಇದು ಒಂದೇ ದೇಶದಲ್ಲಿ ವಿವಿಧ ಸಮುದಾಯಗಳ ನಡುವೆ ವ್ಯವಸ್ಥಿತವಾಗುತ್ತದೆ. ಇದರಿಂದಾಗಿ ವಿರಸ, ಕಲಹ, ಉದ್ವೇಗ, ಒತ್ತಡಗಳು ಕಾಣಿಸಿಕೊಳ್ಳುತ್ತವೆ. ರಾಷ್ಟ್ರೀಯತೆಯ ನಿಷ್ಠೆಯಿಂದ ಅಂತಾರಾಷ್ಟ್ರೀಯತೆ ಉಂಟಾಗುವುದು ಕಷ್ಟ. ಅಂತಾರಾಷ್ಟ್ರೀಯ ತೆಯಿಲ್ಲದೆ ಆಧುನಿಕ ಪ್ರಪಂಚದ ವಿಜ್ಞಾನ, ಉದ್ಯಮ ಮುಂತಾದ ವ್ಯವಹಾರಗಳು ಸಿದ್ಧಿಸುವುದಿಲ್ಲ. ಮನೆಯ ಮೇಲಿನ ಮೋಹ ಸಮುದಾಯದ ಮೇಲಿನ ಪ್ರೀತಿಯಾಗಿ ಮಾರ್ಪಡುವುದು ಕಷ್ಟ. ರಾಷ್ಟ್ರೀಯತೆಯೆನ್ನುವುದು ಸಂಕೋಚಮಾಡುವ ಕ್ರಿಯೆ ಎಂದು ಮನಶ್ಶಾಸ್ತ್ರಜ್ಞರ ಅಭಿಮತ.
ಇ.ಎಸ್.ಬೊಗಾರ್ಡಸ್ ಎಂಬ ಪ್ರಯೋಗಶೀಲ ಮನಶ್ಶಾಸ್ತ್ರಜ್ಞ ಈ ವಿಚಾರವಾಗಿ ಅಮೂಲ್ಯ ಸಂಶೋಧನೆಗಳನ್ನು ನಡೆಸಿದ್ದಾನೆ. ಈತ ಸಾಮಾಜಿಕ ಅಂತರವನ್ನು ಅಳೆಯುವ ಪಟ್ಟಿಕೆಗಳನ್ನು ಸಿದ್ಧಮಾಡಿ ಅದರ ಸಹಾಯದಿಂದ ಹಲವಾರು ರಾಷ್ಟ್ರಗಳ ನಡುವೆ ಜನರ ಮನಸ್ಸಿನಲ್ಲಿ ಇರುವ ದೂರ ಮನೋಭಾವವನ್ನು ಅರ್ಥಮಾಡಿಕೊಳ್ಳಲೆತ್ನಿಸಿದ. ಒಂದು ರಾಷ್ಟ್ರದ ಅಥವಾ ಜನಾಂಗದ ಜನ ನೆರೆಯ ಪರಿಚಿತ ರಾಷ್ಟ್ರಗಳ ಜನರೊಂದಿಗೆ ಸಾಕಷ್ಟು ವ್ಯವಹಾರಗಳನ್ನು ಉಳಿಸಿಕೊಳ್ಳಲು ಸಮ್ಮತಿಸಿದರೂ ದೂರದ ಪರಿಚಯವಿಲ್ಲದ ರಾಷ್ಟ್ರಗಳ ಜನರನ್ನು ಹತ್ತಿರ ಸೇರಿಸಲು ನಿರಾಕರಿಸುತ್ತಾರೆ ಎಂಬುದು ಈತನ ಸಂಶೋಧನೆಗಳಿಂದ ಸ್ವಷ್ಟವಾದ ಅಂಶ. ತಮಗೆ ಅರಿವಿಲ್ಲದೆ ಈ ಬಗೆಯ ದ್ವೇಷಭಾವನೆಗಳು ಬೆಳೆದುಬರುತ್ತವೆ. ಇದಕ್ಕೆ ಕಾರಣ ರಾಷ್ಟ್ರೀಯತೆಯಲ್ಲದೆ ಮತ್ತೇನೂ ಅಲ್ಲ. ಎಫ್.ಟೋಯ್‍ನಿಸ್ ಎಂಬ ಜರ್ಮನ್ ಸಾಮಾಜಿಕ ಮನಶ್ಶಾಶ್ತ್ರಜ್ಞ ರಾಷ್ಟ್ರೀಯತೆಯ ವಿಚಾರವಾಗಿ ಆಳವಾದ ಅಧ್ಯಯನಗಳನ್ನು ನಡೆಸಿ, ಒಂದು ಸಮುದಾಯದ ಅಂಗಭೂತರಾದ ಜನರಲ್ಲಿ ಸಾಮಾಜಿಕ ಸಂಕಲ್ಪ ಇರುವುದೆಂದೂ ಇದರ ಫಲ ರಾಷ್ಟ್ರೀಯತೆಯೆಂದೂ ನಿರ್ಣಯಿಸಿದ್ದಾನೆ. ಇವನ ಪ್ರಕಾರ ಸಾಂಘಿಕ ಪ್ರಸಂಗಗಳಲ್ಲಿ ಅನಿರ್ದಿಷ್ಟ ಸಂಘ ಮತ್ತು ನಿರ್ದಿಷ್ಟಸಂಘ ಎಂಬ ಎರಡು ಬಗೆ ಇರುತ್ತವೆ. ಮಾನವ ಕೋಟಿಯ ವಿಶಾಲಕಲ್ಪನೆ ಅನಿರ್ದಿಷ್ಟ ಸಂಘ. ಇದು ಸ್ವಾಭಾವಿಕವಲ್ಲವೆಂದು ಇವನ ವಾದ. ನಾವು ಯತ್ನದಿಂದ ಯಾವುದಾದರೂ ಪ್ರಯೋಜನಕ್ಕಾಗಿ ಈ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸಹಜವಾಗಿ ಬರುವ ಮನೆ, ಸುತ್ತುಮುತ್ತ ಇರುವ ಸನ್ನಿವೇಶ, ಕೋಮು, ವೃತ್ತಿಸಮುದಾಯ, ಜನಾಂಗ, ಧಾರ್ಮಿಕ ಗೋಷ್ಠಿ ಮುಂತಾದವು ನಿರ್ಧಿಷ್ಟ ಸಂಘಕ್ಕೆ ನಿದರ್ಶನಗಳು. ಜನಗಳ ನಡುವೆ ದಿನಪ್ರತಿ ಜರುಗುತ್ತಲಿರುವ ಸಹಸ್ರಾರು ವ್ಯವಹಾರಗಳ ಫಲವಾಗಿ ಈ ನಿರ್ದಿಷ್ಟಸಂಘ ರೂಪುತಳೆಯುತ್ತದೆ. ಇದೇ ರಾಷ್ಟ್ರೀಯತೆಯ ಆಧಾರವೆಂದು ಈ ವಿದ್ವಾಂಸ ನಿರೂಪಿಸಿದ್ದಾನೆ. ಇದು ಸ್ವಾಭಾವಸಿದ್ಧವಾದ ಪ್ರವೃತ್ತಿ.
ಹದಿನೇಳು, ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ಪ್ರಪಂಚಾದ್ಯಂತ ರಾಷ್ಟ್ರಗಳು ಕಾಣಿಸಿಕೊಂಡು ರಾಷ್ಟ್ರೀಯತೆಯ ಬೆಳೆವಣೆಗೆ ಯಾಯಿತು. ದೇಶಗಳ ಆಂತರಿಕ ಸುಭದ್ರತೆಗಾಗಿ ಆಡಳಿತದ ವ್ಯವಸ್ಥೆಗಾಗಿ, ಪ್ರಗತಿಯ ಸಾಧನಕ್ಕಾಗಿ ದೇಶಗಳು ಸ್ವಾವಲಂಬನೆ, ಸ್ವಾಭಿಮಾನಗಳ ಮಂತ್ರಗಳನ್ನು ಹಿಡಿದು ಜನಸ್ತೋಮಗಳ ಅಭಿಪ್ರಾಯವನ್ನು ರೂಢಿಸಿದರು. ಪರತಂತ್ರವಾಗಿದ್ದ ಹಲವಾರು ಏಷ್ಯ, ಆಫ್ರಿಕ, ಅರಬ್, ಚೀನ ಮುಂತಾದ ದೇಶಗಳಲ್ಲಿ ರಾಷ್ಟ್ರೀಯತೆಯ ಹೆಸರಿನಿಂದ ಆಂದೋಲನಗಳು ನಡೆದವು. ರಾಷ್ಟ್ರೀಯ ಅಭಿಮಾನ ಅತಿಯಾಗಿ ಪರರಾಷ್ಟ್ರಗಳ ವಿಚಾರದಲ್ಲಿ ತಿರಸ್ಕಾರಭಾವನೆ, ದ್ವೇಷ, ಆಕ್ರಮಣ ಬುದ್ಧಿ ಬೆಳೆದು ಒಂದನೆಯ ಮಹಾಯುದ್ಧ (1914-18) ವಾದಂದು ರಾಷ್ಟ್ರಗಳ ನಡುವೆ ಸಮರಸವನ್ನೂ ಮೈತ್ರಿಯನ್ನೂ ಸಾಧಿಸಲು ರಾಷ್ಟ್ರಗೋಷ್ಠಿಯೊಂದು ವ್ಯವಸ್ಥಿತವಾಯಿತು. ರಾಷ್ಟ್ರೀಯ ಭಾವನೆಯ ಉದ್ವೇಗ ಅಂತಾರಾಷ್ಟ್ರೀಯ ತೆಯ ಕನಸನ್ನು ಭಂಗಮಾಡಿತು. ಈ ನಿರಾಶೆಯ ತರುಣದಲ್ಲಿ ರಾಷ್ಟ್ರೀಯತೆಯ ಮೂಲವನ್ನು, ಸ್ವರೂಪವನ್ನು, ಪ್ರಕಾರಗಳನ್ನು ಕೂಲಂಕಷ ವಾಗಿ ಅಧ್ಯಯನ ಮಾಡುವ ಕಾರ್ಯದಲ್ಲಿ ಸಮಾಜಶಾಸ್ತ್ರಪರಿಣತರು, ಮಾನವಶಾಸ್ತ್ರವೇತ್ತರು, ರಾಜಕಾರಣ ಶಾಸ್ತ್ರ ತಿಳಿದವರು, ಮನಶ್ಶಾಸ್ತ್ರಜ್ಞರು ಸಂಘಟಿತರಾಗತೊಡಗಿದರು. ರಾಷ್ಟ್ರೀಯತೆ ಮತ್ತು ಮನುಷ್ಯನ ಸ್ವಭಾವಕ್ಕೆ ಇರುವ ಸಂಬಂಧ, ಮನಸ್ಸಿನಲ್ಲಿ ಬೇರೂರುವ ರಾಷ್ಟ್ರೀಯತೆಯ ಅಂಶಗಳು, ರಾಷ್ಟ್ರೀಯಭಾವನೆಯಿಂದಾಗಿ ಒದಗುವ ದೃಷ್ಟಿ ವಿಪರ್ಯಯ ಮುಂತಾದ ವಿವರಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಪ್ರಪಂಚವಿಶಾಲವಾದ ಮನೋವೃತ್ತಿ ಬೆಳೆಯಲು ರಾಷ್ಟ್ರೀಯತೆ ಅನುವಾಗುವಂತೆ ಮಾಡಲು ಶಿಕ್ಷಣಶಾಸ್ತ್ರ ಪರಿಣತರು ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರೀಯತೆಯೊಂದು ಅಡ್ಡಿಯಲ್ಲ, ಅಂಕುಶ. ಕತ್ತಿಯಲ್ಲ, ಗುರಾಣಿ. ಮಾರಕಾಸ್ತ್ರವಲ್ಲ, ಸಾಧನ ಸಾಮಗ್ರಿ ಎಂಬುದನ್ನು ಮನುಷ್ಯ ಮನಗಾಣುವ ಕಾಲ ಸನ್ನಿಹಿತವಾಗಿದೆ. (ಎಸ್.ಕೆ.ಆರ್.)