ರೇಡಿಯೊ ದೂರಮಾಪನೆ
ಸಂಪಾದಿಸಿ
ದೂರದಲ್ಲಿರುವ ಮಾಪನೋಪಕರಣ ದಾಖಲಿಸಿದ ಅಥವಾ ಗ್ರಹಿಸಿದ ಮಾಹಿತಿಯನ್ನು ರೇಡಿಯೊತರಂಗಗಳ ಮುಖೇನ ಪಡೆದು ಮರು ದಾಖಲಿಸಿ ಸೂಚಿಸುವ ಅಥವಾ ಪ್ರದರ್ಶಿಸುವ ಪ್ರಕ್ರಿಯೆ (ರೇಡಿಯೊಟೆಲಿಮೆಟ್ರಿ).
ರೇಡಿಯೊದೂರಮಾಪನ ಪ್ರಕ್ರಿಯೆಯ ಹಂತಗಳು:
- ಅಪೇಕ್ಷಿತ ಮಾಹಿತಿಯ ಗ್ರಹಿಕೆ
- ರೇಡಿಯೊ ತರಂಗಗಳ ಮುಖೇನ ರವಾನಿಸಬಹು ದಾದ ಸಂಜ್ಞೆಯಾಗಿ ಮಾಹಿತಿಯ ಪರಿವರ್ತನೆ
- ಅಪೇಕ್ಷಿತ ಸ್ಥಳಕ್ಕೆ ಅದರ ರೇಡಿಯೊ ಪ್ರಸಾರ
- ಪ್ರಸಾರಿತ ಸಂಜ್ಞೆಗಳನ್ನು ಗ್ರಹಿಸಿ ಅಪೇಕ್ಷಿತ ರೂಪಕ್ಕೆ ಪರಿವರ್ತನೆ.
ಚಾಲಕ ಸಹಿತ/ರಹಿತ ವಿಮಾನಗಳ ಪರೀಕ್ಷಾ ಹಾರಾಟದಲ್ಲಿ ಅವುಗಳ ದಕ್ಷತೆ ಮತ್ತು ಹವಾಬಲೂನುಗಳಿಂದ ಹವೆಗೆ ಸಂಬಂಧಿಸಿದ ಸುಸಂಗತ ಮಾಹಿತಿ ಪಡೆಯಲು 1930ರ ದಶಕದಲ್ಲಿ ಈ ತಂತ್ರವಿದ್ಯೆ ವಿಕಸಿಸಿತು.
ಅಪೇಕ್ಷಿತ ಮಾಹಿತಿಯನ್ನು ನೇರವಾಗಿ ಗ್ರಹಿಸುವುದು ಕಷ್ಟ ಅಥವಾ ಅಸಾಧ್ಯ ಮತ್ತು ಅಪಾಯಕಾರಿಯಾದ ಸನ್ನಿವೇಶಗಳಲ್ಲಿ ಈ ತಂತ್ರದ ಬಳಕೆ ಇದೆ. ಎಂದೇ, ದೂರಮಾಪನದಲ್ಲಿ ದೂರ ಮುಖ್ಯ ನಿರ್ಣಾಯಕವಲ್ಲ. ಉದಾಹರಣೆಗೆ, ವ್ಯೋಮನೌಕೆಯ ಅಥವಾ ಅದಕ್ಕೆ ಎದುರಾಗುವ ಭೌತಪರಿಸ್ಥಿತಿಗಳ, ಅಪಾಯಕಾರೀ ವಿಕಿರಣವುಳ್ಳ ಸ್ಥಳದಿಂದ, ವಾಯು ಗೋಲದ ಹೊರಸ್ತರಗಳಿಂದ ಉಪಯುಕ್ತ ಮಾಹಿತಿ ಪಡೆಯುವುದು. ತಾಪ, ವಾಯುಸಾಂದ್ರತೆ, ವಿಕಿರಣ ಸಾಂದ್ರತೆ, ಸೂಕ್ಷ್ಮ ಉಲ್ಕಾಪಿಂಡಗಳ ತಾಡನೆಯ ಪ್ರಮಾಣ, ಕಂಪನಗಳ ಪ್ರಮಾಣ-ಇವೇ ಮೊದಲಾದ 30 ವಿಭಿನ್ನ ಚರಗಳ ಮಾಹಿತಿಯನ್ನು ಈ ತಂತ್ರಮುಖೇನ ಪಡೆಯಬಹುದು. ವನ್ಯಪ್ರಾಣಿಗಳ, ಪಕ್ಷಿಗಳ ಚಲನಪ್ರರೂಪ ದಾಖಲಿಸಲೂ ಈ ತಂತ್ರದ ಬಳಕೆ ಇದೆ.
ಅಪೇಕ್ಷಿತ ಮಾಹಿತಿಯನ್ನು ದೋಷರಹಿತವಾಗಿ ಗ್ರಹಿಸುವ, ಗ್ರಹಿಸಿದು ದನ್ನು ಪ್ರಸಾರಯೋಗ್ಯ ಸಂಜ್ಞೆಗಳಾಗಿ ಪರಿವರ್ತಿಸುವ ಹಾಗೂ ಬಿತ್ತರಿಸುವ ಉಪಕರಣದ ದಕ್ಷತೆ, ಸಂಜ್ಞೆಗಳನ್ನು ಗ್ರಹಿಸಿ ಅಪೇಕ್ಷಿತ ರೂಪಕ್ಕೆ ಪರಿವರ್ತಿಸುವ ಉಪಕರಣದ ದಕ್ಷತೆ ಮುಂತಾದವನ್ನು ಈ ತಂತ್ರದ ಯಶಸ್ಸು ಅವಲಂಬಿಸಿದೆ. ಕೆಲವು ಸನ್ನಿವೇಶಗಳಲ್ಲಿ ಪ್ರಸಾರೋಪಕರಣ ಸರಳವೂ ಹಗುರವೂ ಅಗ್ಗಬೆಲೆಯದೂ ಆಗಿರಬೇಕು (ಉದಾ: ವನ್ಯಜೀವಿ ಅಧ್ಯಯನ). (ಎನ್.ಎಸ್.ಜಿ.)