ರೊದ್ದ ಶ್ರೀನಿವಾಸರಾವ್ 1850-1929. ಕನ್ನಡ ಭಾಷಾ ಸೇವಕರು, ಶಿಕ್ಷಣತಜ್ಞರು. ಇವರ ಪೂರ್ಣ ಹೆಸರು ಶ್ರೀನಿವಾಸ ಕೋನ್ಹೇರರಾವ್ ರೊದ್ದ. ಇವರ ಮನೆತನ ಮೂಲತಃ ಇಂದಿನ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆನುಗೊಂಡೆಯ ಹತ್ತಿರದ ರೊದ್ದಮ್ ಎಂಬುದು. ಇವರ ಮನೆತನದವರು ಬಳ್ಳಾರಿಯ ಕಲೆಕ್ಟರನ ಕೈಕೆಳಗೆ ಕೆಲಸ ಮಾಡುತ್ತಿದ್ದರು. ಆಗ್ಗೆ ಬಳ್ಳಾರಿಯ ಕಲೆಕ್ಟರನಾಗಿದ್ದ ಚಾಪ್ಲಿನ್ ಎಂಬವನು ಧಾರವಾಡದ ಕಲೆಕ್ಟರನಾಗಿ ಬಂದಾಗ ಈ ಮನೆತನವೂ ಧಾರವಾಡಕ್ಕೆ ಬಂದು ಮದಿಹಾಳದಲ್ಲಿ ನೆಲಸಿತು. ಇವರು 1850 ಸೆಪ್ಟೆಂಬರ್ 17ರಂದು ಮದಿಹಾಳದಲ್ಲಿ ಜನಿಸಿದರು. ಮನೆಯಲ್ಲಿ ಬಡತನ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ತಾಯಿಯ ಪೋಷಣೆಯಲ್ಲಿ ಬೆಳೆದರು. ಪ್ರಾರಂಭದ ವ್ಯಾಸಂಗವನ್ನು ಮದಿಹಾಳದಲ್ಲಿ ಮುಗಿಸಿ, ಹುಯಿಲಗೋಳ ಭುಜಂಗರಾವ್, ರಸೆಲ್ ಮುಂತಾದವರ ನೆರವಿನಿಂದ ಪುಣೆಯ ಪ್ರೌಢಶಾಲೆಯಲ್ಲಿ ಕಲಿತು 1870ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದಿನ ವ್ಯಾಸಂಗಕ್ಕಾಗಿ ಪುಣೆಯ ಡೆಕ್ಕನ್ ಕಾಲೇಜನ್ನು ಸೇರಿದರಾದರೂ ಆರ್ಥಿಕ ತೊಂದರೆಗಳಿಂದಾಗಿ ಶಿಕ್ಷಣವನ್ನು ಮಧ್ಯದಲ್ಲೆ ಬಿಟ್ಟು ಉದ್ಯೋಗಸ್ಥರಾದರು. 1872ರಲ್ಲಿ ಕಾರವಾರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಅನಂತರ ಧಾರವಾಡ ಜಿಲ್ಲೆಯ ಶಿಕ್ಷಣಾಧಿಕಾರಿಗಳಾಗಿಯೂ ಧಾರವಾಡದ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿ 1908ರಲ್ಲಿ ನಿವೃತ್ತರಾದರು. ಬಡತನದ ಬವಣೆಯನ್ನು ಅನುಭವಿಸಿದ್ದ ಇವರು ತಮ್ಮ ಅಧಿಕಾರಾವಧಿಯಲ್ಲಿ ಮಹಮ್ಮಡನ್ ಬರ್ಸರಿ ಫಂಡ್, ಧಾರವಾಡದ ಟ್ರೈನಿಂಗ್ ಕಾಲೇಜಿನ ಜನರಲ್ ಪ್ರೈಜ್ ಫಂಡ್, ವೆಂಕಾಸಾನಿ ಸ್ಕಾಲರ್‍ಷಿಪ್-ಮುಂತಾದ ಹಲವು ಬಗೆಯ ಸೌಲಭ್ಯಗಳನ್ನು ಕಲ್ಪಿಸಿ, ಬಡ ವಿದ್ಯಾರ್ಥಿಗಳ ಅಭಿವೃದ್ಧಿಗೆ ನೆರವಾದರು. ಸರ್ಕಾರಿ ವೃತ್ತಿಯಿಂದ ನಿವೃತ್ತರಾದ ಮೇಲೆ ಇವರು ಮಾಡಿದ ಸಮಾಜ ಸೇವೆಯೂ ಗಣ್ಯವಾದುದು. ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿ, ಕನ್ನಡ ಪ್ರಚಾರವನ್ನು ಮಾಡಿದರಲ್ಲದೆ, ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಮುಂಬಯಿಯ ಲೆಜಿಸ್ಲೇಟಿವ್ ಕೌನ್ಸಿಲಿನ ಚುನಾಯಿತ ಸದಸ್ಯರಾಗಿ 1910-15ರ ವರೆಗೆ ಕೆಲಸ ಮಾಡಿದ ಇವರು, ಆ ಸಮಯ ದಲ್ಲಿ ಸರ್ ಫಿರೋಜ ಶಹಾ ಮೆಹತಾ, ಸರ್ ಲಲ್ಲೂಭಾಯಿ ಶಾಮಲದಾಸ್, ಸರ್ ಚಿಮಣಲಾಲ್ ಸೆಟಲ್‍ವಾಡ್-ಮೊದಲಾದ ಶ್ರೀಮಂತರ ಸಹಾಯವನ್ನು ದೊರಕಿಸಿಕೊಂಡು ಧಾರವಾಡದ ಕರ್ನಾಟಕ ಕಾಲೇಜಿಗಾಗಿ ಒಂದು ಲಕ್ಷ ರೂಪಾಯಿ ವಂತಿಗೆ ಕೂಡಿಸಿ, ದಿವಾನ್ ಬಹದ್ದೂರ್ ಅರಟಾಳ ರುದ್ರಗೌಡರ ಸಹಾಯದಿಂದ 1917ರಲ್ಲಿ ಕರ್ನಾಟಕ ಕಾಲೇಜನ್ನು ಸ್ಥಾಪಿಸಿದರು. ಧಾರವಾಡ ನಗರಸಭೆಯ ಅಧ್ಯಕ್ಷರಾಗಿಯೂ (1912-15) ಧಾರವಾಡ ಜಿಲ್ಲಾ ಲೋಕಲ್ ಬೋರ್ಡಿನ ಅಧ್ಯಕ್ಷರಾಗಿಯೂ (1917-25) ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದರು.
ಸಾಹಿತ್ಯಪ್ರೇಮಿಗಳೂ ಲೇಖಕರೂ ಆಗಿದ್ದ ಇವರು, ನಂದಿನಿ (ಬುದ್ಧನ ಚರಿತ್ರೆ) ಮತ್ತು ಸ್ತ್ರೀಶಿಕ್ಷಣದ ಆವಶ್ಯಕತೆ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಇವರಿಗೆ ಹಲವು ಬಗೆಯ ಗೌರವ ಪ್ರಶಸ್ತಿಗಳು ಲಭಿಸಿದ್ದವು. 1909ರಲ್ಲಿ ರಾವ್‍ಬಹದ್ದೂರ್, 1923ರಲ್ಲಿ ದಿವಾನ್‍ಬಹದ್ದೂರ್ ಎಂಬ ಬಿರುದುಗಳು ಇವರಿಗೆ ಬಂದವು. ಹೊಸಪೇಟೆಯಲ್ಲಿ 1920ರಲ್ಲಿ ನಡೆದ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರಾಗಿ ಆರಿಸಿ ಕನ್ನಡಿಗರು ಗೌರವಿಸಿದರು. 1924ರಲ್ಲಿ ಬ್ರಿಟಿಷ್ ಸರ್ಕಾರದಿಂದ ಇ.ಐ.ಇ. ಎಂಬ ಉನ್ನತ ಪ್ರಶಸ್ತಿ ಲಭಿಸಿತು. ಇವರು 1929ರಲ್ಲಿ ನಿಧನರಾದರು. (ಆರ್.ವೈ.ಡಿ.)