ಲಾಂಜೀನಸ :- ಅಥೆನ್ಸಿನ ನಿಯೋಪ್ಲೇಟೊನಿಕ್ ತತ್ತ್ವಜ್ಞಾನಿ ಹಾಗೂ ಲಾಕ್ಷಣಿಕ. ಸು. 213ರಲ್ಲಿ ಜನಿಸಿದ. ಪ್ರಾಚೀನ ಗ್ರೀಕ್‍ನಲ್ಲಿ ಅತ್ಯಂತ ಮಹತ್ತ್ವದ ನೀಳ ಪ್ರಬಂಧವೆನಿಸಿಕೊಂಡ ‘ಆನ್ ದ ಸಬ್ಲೈಮ್’ ಬರೆದವನು ಈತನೇ ಎಂದು ನಂಬಲಾಗಿದೆ. ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಈ ಪ್ರಬಂಧವು ಸಬ್ಲಿಮಿಟಿ ಅಥವಾ ಭವ್ಯತೆಯ ಕುರಿತಂತೆ ವಿಮರ್ಶಾಕ್ಷೇತ್ರದಲ್ಲಿ ಹೊಸತೊಂದು ಸಿದ್ಧಾಂತವನ್ನೇ ಹುಟ್ಟು ಹಾಕಿದೆ. ಅನೇಕ ವಿದ್ವಾಂಸರು ಅರಿಸ್ಟಾಟಲನ ‘ಪೊಯಿಟಿಕ್ಸ್’ ಗೆ ಅನಂತರದ ಮಹತ್ತ್ವದ ಕೃತಿ ಸಾಹಿತ್ಯ ಕ್ಷೇತ್ರದಲ್ಲಿ ಇದೇ ಎಂದು ಪ್ರತಿಪಾದಿಸುತ್ತಾರೆ. ಬಹುಶಃ ಕ್ರಿಸ್ತಶಕಾನಂತರದ ಮೊದಲ ನೂರು ವರ್ಷಗಳಲ್ಲಿ ಇದನ್ನು ಬರೆದಿರಬಹುದೆಂದು ನಂಬಲಾಗಿದೆ.

ಈ ಪ್ರಬಂಧವು ಸಾಹಿತ್ಯದಲ್ಲಿ ಭವ್ಯತೆಯನ್ನು ಗುರುತಿಸುವ ಐದು ಪ್ರಮುಖ ಮೂಲತತ್ತ್ವಗಳನ್ನು ಪ್ರತಿಪಾದಿಸುತ್ತದೆ. ಪ್ರಬಂಧಕಾರನು ‘ಸಬ್ಲಿಮಿಟಿ’ ಎಂಬ ಪದವನ್ನು ಗ್ರಾಂಡ್ಯೂರ್‍ಎಂಬ ಪದಕ್ಕೆ ಸಂವಾದಿಯಾಗಿ ಬಳಸಿದ್ದಾನೆ. ಭವ್ಯತೆಯು ಸಾಹಿತ್ಯದಲ್ಲಿ 1) ಮಹತ್ತ್ವದ ಸಾಮಥ್ರ್ಯ ಅಥವಾ ಪ್ರತಿಭೆಯನ್ನು ಗುರುತಿಸುವಾಗ 2) ಭಾವತೀವ್ರತೆಗಾಗಿ 3) ಪರಿಣಾಮಕಾರಿ ಅಲಂಕಾರಗಳನ್ನು ಬಳಸುವಾಗ 4) ಉನ್ನತವಾದ ಭಾವನೆಗಳುಳ್ಳ ಪದಗಳಲ್ಲಿ 5) ಅವಿನಾಭಾವ ರಸಸಾಮಥ್ರ್ಯಗಳನ್ನು ವ್ಯಂಜಿಸುವ ಪದ-ಅರ್ಥಗಳಲ್ಲಿ, ಕಾಣಿಸಿಕೊಳ್ಳಬಹುದು ಎಂದು ಲಾಂಜೀನಸ್ ಹೇಳುತ್ತಾನೆ. ಈ ಕುರಿತು ಅನೇಕ ವಿಮರ್ಶಕರು ಹೊಸ ವಿಮರ್ಶಾಸರಣಿಯನ್ನೇ ನಂತರದ ದಿನಗಳಲ್ಲಿ ತೆರೆದಿಡಬೇಕಾಯಿತು. ಈ ಕೃತಿ ಪ್ರಾಚೀನ ಗ್ರೀಕ್ ಸಾಹಿತ್ಯಕ್ಕೆ ಮಹತ್ತರ ವಿಮರ್ಶಾ ಕೊಡುಗೆಯಾಯಿತು. ಏಕೆಂದರೆ ಪ್ರಾಚೀನ ಗ್ರೀಕ್ ವಾಗ್ಮಿ ಹಾಗೂ ಪ್ರತಿಭಾವಂತ ಡೆಮಾಸ್ತೆನಿಸ್ ಹಾಗೂ ರೋಮ್‍ನ ಪ್ರತಿಭಾಶಾಲಿ ಸಿಸೆರೋ ಇವರಿಬ್ಬರ ಸಾಹಿತ್ಯ ಶೈಲಿಗಳನ್ನೂ ಸಾಮಥ್ರ್ಯವನ್ನೂ ಈ ಪ್ರಬಂಧ ತೂಗಿ ನೋಡಿದ ಶೈಲಿ ಅಷ್ಟು ಮೌಲ್ಯವುಳ್ಳದ್ದಾಗಿದೆ.

ಲಾಂಜೀನಸ್ ಗ್ರೀಕ್ ಸಾಹಿತ್ಯವನ್ನು ಪ್ರಮುಖವಾಗಿ ಅಭ್ಯಸಿಸಿದ. ಅಂದಿನ ತತ್ತ್ವಶಾಸ್ತ್ರವನ್ನು ಅಲೆಗ್ಸಾಂಡ್ರಿಯದ ತತ್ತ್ವಜ್ಞಾನಿ ಅಮೋನಿಯಸ್ ಸಾಕಾಸ್‍ನಲ್ಲಿ ಅಭ್ಯಸಿಸಿದ. ಅನಂತರ ಜೆನೋಬಿಯದ ರಾಣಿಯ ಆಹ್ವಾನದ ಮೇರೆಗೆ ಪಲ್ಮೈರಾಗೆ ಬಂದು ಅವಳಿಗೆ ಗ್ರೀಕ್ ಭಾಷೆಯನ್ನು ಹಾಗೂ ಅವಳ ಮಕ್ಕಳಿಗೆ ಶಿಕ್ಷಣವನ್ನೂ ನೀಡಲು ನೆಲೆನಿಂತಯಿವನು ತನ್ನ ವಾಗ್ಮಿತೆಗಾಗಿ ಹಾಗೂ ಸ್ವಾತಂತ್ರ್ಯ ಪ್ರಿಯತೆಗಾಗಿ ಹೆಸರಾಗಿದ್ದ. ಅವನಿಗೆ ಲ್ಯಾಟಿನ್, ಸಿರಿಯಕ್ ಹಾಗೂ ಗ್ರೀಕ್ ಭಾಷೆಗಳಲ್ಲಿ ಪ್ರಾವೀಣ್ಯತೆಯಿತ್ತು. ಇವನೋ ಅಥವಾ ಒಂದನೆಯ ಶತಮಾನಕ್ಕೆ ಸೇರಿದ ಡಯೋನಿಸಸ್ ಲಾಂಜೀನಸ್ ಬರೆದ ‘ಲಾಂಜೀನಸ್ ಆನ್‍ದ ಸಬ್‍ಲೈಮ್’ ಪ್ರಬಂಧವನ್ನು ವ್ಯಾಲೆನ್ ಸಂಪಾದಿಸಿ ಬಾನ್‍ನಲ್ಲಿ 1887 ರಲ್ಲಿ ಪ್ರಕಟಿಸಿದ. (ಜಿ.ಎನ್.ಎಸ್.)