ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಾಸುದೇವರಾವ್, ಎಂ ವಿ

ವಾಸುದೇವರಾವ್, ಎಂ ವಿ 1921-94. ಕನ್ನಡ ರಂಗಭೂಮಿಯ ಕಲಾವಿದ ಹಾಗೂ ಚಿತ್ರನಟ. ಮೂಡಬಿದರೆ ವೆಂಕಟರಾವ್ ವಾಸುದೇವ ರಾವ್ ಇವರ ಪೂರ್ಣಹೆಸರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯವರು. ಶಿಕ್ಷಕವೃತ್ತಿಯಲ್ಲಿದ್ದ ತಂದೆ ಬಿ.ವೆಂಕಟರಾವ್ ಅವರಿಗೆ ಕವಿತೆ, ನಾಟಕ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿಯಿತ್ತು. ವಾಸುದೇವರಾವ್ ಅವರು ರಂಗಭೂಮಿಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡದ್ದು ತಮ್ಮ ತಂದೆಯವರ ಮೂಲಕ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಶ್ರೀನಿವಾಸ ಅಯ್ಯಂಗಾರ್ ನಾಟಕ ಕಂಪನಿಗೆ ಬಾಲನಟನಾಗಿ ಸೇರುವ ಮೂಲಕ ರಂಗಭೂಮಿ ಪ್ರವೇಶಿಸಿದ ಒಂದೆರಡು ವರ್ಷಗಳಲ್ಲಿ ಗುಬ್ಬಿ ವೀರಣ್ಣ ನವರ ನಾಟಕ ಕಂಪನಿಯನ್ನು ಸೇರಿಕೊಂಡರು. ಆಗ ಇವರಿಗೆ ಎಂಟು ವರ್ಷ ವಯಸ್ಸು. ಅಂದಿನಿಂದ ಕೊನೆಯವರೆಗೂ ಇದೇ ಕಂಪನಿಯ ನಟರಾಗಿದ್ದರು. ಇಲ್ಲಿ ಸಹೋದ್ಯೋಗಿಗಳಿಗೆ ಇವರು ಹೆಚ್ಚಾಗಿ ಪರಿಚಿತರಾಗಿದ್ದದ್ದು, ಬೇಬಿ, ಎಂಬ ಅಡ್ಡ ಹೆಸರಿನಿಂದ. ಇವರ ಭಾವಾಭಿನಯ ಕೌಶಲ್ಯಪೂರ್ಣವಾದದ್ದು. ಕಂಠಶ್ರೀ ಶ್ರೀಮಂತವಾಗಿದ್ದ ಇವರು ಯಾವ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು. ಕುರುಕ್ಷೇತ್ರದಲ್ಲಿ ಅಭಿಮನ್ಯು, ಭೀಷ್ಮ ಮೊದಲಾದ ಪಾತ್ರಗಳನ್ನು ವಹಿಸುತ್ತಿದ್ದರು. ಪರಶುರಾಮನ ಪಾತ್ರ ಇವರಿಗೆ ಅಪಾರಕೀರ್ತಿ ತಂದುಕೊಟ್ಟದ್ದು. ರಂಗಭೂಮಿಯಲ್ಲಿ ಸುಮಾರು ಐದು ದಶಕಗಳಷ್ಟು ದೀರ್ಘಕಾಲ ಅನುಭವ ಪಡೆದ ಇವರಿಗೆ ಅಂತಾರಾಷ್ಟ್ರೀಯ ಕೀರ್ತಿಗೆ ಪಾತ್ರವಾಗುವ ಸಂದರ್ಭ ಒದಗಿಬಂದದ್ದು ಚೋಮನ ದುಡಿ (1975) ಚಿತ್ರದಲ್ಲಿ ನಟಿಸುವ ಮೂಲಕ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಯನ್ನು ಬಿ.ವಿ.ಕಾರಂತರು ಸಿನಿಮಾ ಮಾಧ್ಯಮಕ್ಕೆ ಪರಿವರ್ತಿಸಿದಾಗ ಒಮ್ಮೆ ತಮ್ಮ ಸ್ನೇಹಿತರಾಗಿದ್ದ ಇವರಿಗೆ ಚೋಮನ ಪಾತ್ರ ನೀಡಿದರು. ಅಪಾರ ತಾಳ್ಮೆ ಹಾಗೂ ಶ್ರದ್ಧೆಯಿಂದ ಪಾತ್ರದ ಆಳ ಆಯಾಮಗಳನ್ನು ಅನುಭವಿಸಿದ ಇವರು ಅದನ್ನು ತಾದಾತ್ಮ್ಯದಿಂದ ಅಭಿನಯಿಸಿ ಮೊದಲ ಚಿತ್ರದಲ್ಲೆ ತಮ್ಮ ಅಭಿನಯ ಪ್ರತಿಭೆಯನ್ನು ಸಾರಿದರು. ಈ ಚಿತ್ರದಲ್ಲಿನ ಇವರ ಅಭಿನಯಕ್ಕಾಗಿ 1975ರಲ್ಲಿ ಇವರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ರಾಷ್ಟ್ರಪ್ರಶಸ್ತಿಯ ಜೊತೆಗೆ 1975ರ ಕರ್ನಾಟಕ ರಾಜ್ಯಪ್ರಶಸ್ತಿಯೂ ಇವರ ಪಾಲಿನದಾಯಿತು. ಮುಂಬಯಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಇವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಈ ಚಿತ್ರೋತ್ಸವದಲ್ಲಿ ಇವರೂ ಭಾಗವಹಿಸಿದ್ದರು.

ಇವರು ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಹುಲಿ ಬಂತು ಹುಲಿ (1978) ಚಿತ್ರದಲ್ಲಿ ಜೇನುಕುರುಬರ ಮುಖ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ದೇವರೇ ದಿಕ್ಕು ಇವರ ಇನ್ನೊಂದು ಕನ್ನಡ ಚಿತ್ರ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಒಂದು ಊರಿನ ಕಥೆ (1978) ಚಿತ್ರದಲ್ಲೂ ಇವರು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಮೃಣಾಲ್ ಸೇನ್ ನಿರ್ದೇಶಿಸಿದ 'ಒಕ ಊರಿ ಕಥ (ಪ್ರೇಮಚಂದರ ಕಫನ್ ಕಥೆಯಾಧಾರಿತ) ತೆಲುಗು ಚಿತ್ರದ ಮೂಲಕ ಅನ್ಯಭಾಷಾ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಶ್ಯಾಂ ಬೆನೆಗಲ್ ಅವರ 'ಕೊಂಡೂರ, 'ದಂಗೆಯೆದ್ದ ಮಕ್ಕಳು, 'ಕಳಸಾಪುರದ ಹುಡುಗರು, 'ದೊಂಬರ ಕೃಷ್ಣ. ಮೊದಲಾದವು ಅವರು ಅಭಿನಯಿಸಿದ ಪ್ರಮುಖ ಚಿತ್ರಗಳು. ಕಿರುತೆರೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಬಿ.ವಿ.ಕಾರಂತ್, ಜಿ.ವಿ.ಅಯ್ಯರ್, ಬಾಲಕೃಷ್ಣ, ರಾಜಕುಮಾರ್ ಮೊದಲಾದವರು ಗುಬ್ಬಿ ಕಂಪನಿಯಲ್ಲಿ ಇವರ ಸಹನಟರಾಗಿದ್ದರು. (ಎಸ್.ಎಸ್.ಎಮ್.ಯು.)

  *