ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಠಲ್ ಆರ್ ಶೆಟ್ಟಿ ಗುಡಿಗಾರ್

ವಿಠಲ್ ಆರ್ ಶೆಟ್ಟಿ ಗುಡಿಗಾರ್

ಕರ್ನಾಟಕದ ಪಶ್ಚಿಮ ಕರಾವಳಿಯ ಕುಮಟ, ಕರಕುಶಲ ಕಲೆಯ ಖ್ಯಾತಕೇಂದ್ರ, ವಂಶ ಪಾರಂಪರ್ಯವಾಗಿ ಗುಡಿಗಾರಿಕೆಯನ್ನು ನಡೆಸುತ್ತಿರುವ ಅನೇಕ ಕುಟುಂಬಗಳ ಇಂದಿಗೂ ಇಲ್ಲಿ ಕಾರ್ಯ ನಿರತವಾಗಿವೆ. ಅಚಿತ ಪಾರಂಪರಿಕ ಗುಡಿಗಾರರ ವಂಶದ ಶಿಲ್ಪಿ ರಾಮಚಂದ್ರ ಶೆಟ್ಟಿ ಅವರ ಪುತ್ರರಾಗಿ ಜನಿಸಿದವರು ವಿಠಲ್ ಆರ್. ಶೆಟ್ಟಿ ಶ್ರೀಗಂಧದ ಮೂರ್ತಿ ಶಿಲ್ಪ ರಚನೆಯಲ್ಲಿ ಸಿದ್ಧಹಸ್ತರು. ಕಲೆಗೆ, ಕಲಾವಿದರ ಏಳ್ಗಗೆ ಶ್ರಮಿಸಿದವರು.

ಸೂಕ್ಷ್ಮ ಕೆತ್ತನೆಯ, ಸುಂದರ ಕಲಾತ್ಮಕ ಶಿಲ್ಪಗಳಿಗೆ ಇಂದಿಗೂ ಪ್ರಸಿದ್ಧವಿರುವ ಕುಮಟದಲ್ಲಿ ಹಲವಾರು ಪ್ರಸಿದ್ಧ ಕಲಾವಿದರ ಮಾರ್ಗದರ್ಶನದಲ್ಲಿ, ಚಿಕ್ಕಂದಿನಿಂದಲೇ ಗಂಧದ ಮರದಲ್ಲಿ ಶಿಲ್ಪಗಳನ್ನು ರಚಿಸಲು ಆರಂಭಿಸಿದ ವಿ. ಆರ್. ಶೆಟ್ಟಿ ಅವರು ತಮ್ಮ 23ನೇ ವಯಸ್ಸಿನಲ್ಲಿಯೇ, ಕುಮಟಾದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಕಲಾ ಪ್ರದರ್ಶನದಲ್ಲಿ ಚಂದನದ ಮರದಲ್ಲಿ ಕಡೆದ ತಮ್ಮ ಕಲಾಕೃತಿಯೊಂದನ್ನು ಪ್ರದರ್ಶಿಸಿದರು. ಅದಕ್ಕೆ ಸಮ್ಮೇಳನದಿಂದ ವಿಶೇಷ ಬಹುಮಾನ ಗಳಿಸಿದರು.

ಇದಾದ ನಂತರ ಶ್ರೀಯುತರು ಅನೇಕ ಪ್ರದರ್ಶನಗಳಲ್ಲಿ ಪಾಲುಗೊಂಡಿರುವಲ್ಲದೆ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಮುಖ್ಯವಾದುದು, ಬೆಂಗಳೂರಿನಲ್ಲಿ 1971ರಲ್ಲಿ ನಡೆದ ಕಾಂಗ್ರೆಸ್ ವಸ್ತು ಪ್ರದರ್ಶನ, ದೆಹಲಿಯಲ್ಲಿ ನಡೆದ ಅಖಿಲ ಭಾರತ ಕೈಗಾರಿಕಾ ಪ್ರದರ್ಶನ ಹಾಗೂ ಅಲ್ಲಿಯೇ 1972ರಲ್ಲಿ ಕಾರ್ಯನಿರತ ಕಲಾವಿದ ಹಾಗೂ ಏಷ್ಯಾ 72ರ ಉತ್ಸವ ಗಳಲ್ಲಿ ಗಂಧದ ಕೆತ್ತನೆಯ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.

ವಿಠಲ ಶೆಟ್ಟಿ ಹಲವಾರು ಪ್ರಶಸ್ತಿಗಳಿಸಿದ್ದಾರೆ. 1969ರಲ್ಲಿ ಗಂಧದ ಮರಗೆತ್ತನೆ ಕರಕುಶಲ ಮಂಡಲಿಯಿಂದ ಸಿದ್ಧಹಸ್ತ ಕಲಾವಿದ ಪ್ರಶಸ್ತಿ; ಸ್ವಾತಂತ್ರ್ಯದ 25Éೀ ವರ್ಷದ ನೆನಪಿಗಾಗಿ ನೀಡಿದ ಅಖಿಲ ಭಾರತ ಪ್ರಶಸ್ತಿ ಇವು ಗಮನಾರ್ಹವಾದುವು. ಪಶ್ಚಿಮ ಜರ್ಮನಿಯಲ್ಲಿ 1928ರಲ್ಲಿ ನಡೆದ ಭಾರತದ ಮುನ್ನಡೆಯ ಮೇಳದಲ್ಲಿ ಪಾಕ್ಷಿಕ ಸಮಾರಂಭ ದಲ್ಲಿ ಪಾಲುಗೊಳ್ಳುವ ಅವಕಾಶ. 1995ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದರು. 1993ರಲ್ಲಿ ಕರ್ನಾಟಕದ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸರ್ಕಾರವು ಶಿಲ್ಪಕಲೆಗಾಗಿ ನೀಡುವ ಜಕಣಾಚಾರಿ ಪ್ರಶಸ್ತಿಯನ್ನು 1998ರಲ್ಲಿ ಪಡೆದರು. (ಎಂ.ಬಿ.ಎಸ್.)