ವಿಶ್ವವಾಣಿ ಕನ್ನಡ ದಿನಪತ್ರಿಕೆ. 1956ರಲ್ಲಿ ಇದನ್ನು ಆರಂಭಿಸ ಲಾಯಿತು. ಕರ್ನಾಟಕದ ಹುಬ್ಬಳ್ಳಿ ನಗರದಿಂದ ಪ್ರಕಟವಾಗುವ ಈ ಪತ್ರಿಕೆಯ ಸಂಪಾದಕರು ಹಾಗೂ ಮಾಲೀಕರು ಕನ್ನಡದ ಪ್ರಸಿದ್ಧ ಲೇಖಕರಾದ ಪಾಟೀಲ ಪುಟ್ಟಪ್ಪ. ಉತ್ತರ ಕರ್ನಾಟಕ ಪ್ರಾಂತದಲ್ಲಿ ಈ ಪತ್ರಿಕೆಯ ಪ್ರಸಾರ ವಿಶೇಷವಾಗಿದೆ. ಪ್ರಕಟಣೆಯ ಪ್ರಾರಂಭದ ದಿನಗಳಲ್ಲಿ ರಾಯಲ್ ಆಕಾರದ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿತ್ತಲ್ಲದೆ, ಪ್ರತಿ ಪುಟದಲ್ಲಿ ಹತ್ತು ಕಾಲಂಗಳಿರುತ್ತಿದ್ದುವು. ಆಗ ಬಿಡಿ ಪ್ರತಿಯ ಬೆಲೆ ಒಂದು ಆಣೆ. ಆಗ ರೋಟರಿ ಯಂತ್ರದಲ್ಲಿ ಮುದ್ರಣಗೊಳ್ಳುತ್ತಿದ್ದ ಈ ಪತ್ರಿಕೆ, ಈಗ ಆಫ್ ಸೆಟ್ ಮುದ್ರಣದಲ್ಲಿ ಹೊರಬರುತ್ತಿದೆ. ಡಿಮೈ ಆಕಾರದ ನಾಲ್ಕು ಪುಟಗಳ ಈ ಪತ್ರಿಕೆಯ ಬೆಲೆ ಒಂದು ರೂಪಾಯಿ.
ಕರ್ನಾಟಕ ಏಕೀಕರಣ, ರಾಜಕೀಯ, ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಸುದ್ದಿಗಳ ಜೊತೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸವಿವರ ವರದಿಗಳನ್ನು ಈ ಪತ್ರಿಕೆ ಪ್ರಕಟಿಸುತ್ತದೆ. ಜಹಗೀರದಾರ್, ಶಿವಾನಂದಜೋಶಿ, ಮೈಸೂರುಮಠ, ಎಂ.ಸಿದ್ಧರಾಮೇಶ, ಎಂ.ಬಿ. ಬೂದಿಹಾಳಮಠ, ಶಾಸ್ತ್ರೀಮಠ ಮೊದಲಾದ ಹೆಸರಾಂತ ಪತ್ರಕರ್ತರು ಈ ಪತ್ರಿಕೆಯ ಮೂಲಕ ಬೆಳಕಿಗೆ ಬಂದವರು. ಬಸವರಾಜ ಕಟ್ಟೀಮನಿ ಯವರ ವಿಚಾರ ಪ್ರಚೋದಕ ಬರೆಹಗಳು ಈ ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗುತ್ತಿದ್ದುವು.
ಕನ್ನಡನಾಡು, ನುಡಿ ಹಾಗೂ ಜನತೆಯ ಬಗ್ಗೆ ವಿಶೇಷ ಕಾಳಜಿಯುಳ್ಳ ಸಂಪಾದಕೀಯ, ವಿಚಾರಪೂರಿತ ಲೇಖನಗಳು ಈ ಪತ್ರಿಕೆಯ ಗುಣಗಳಾಗಿವೆ. ಕರ್ನಾಟಕ ಗಡಿಸಮಸ್ಯೆ ಕುರಿತಂತೆ ಈ ಪತ್ರಿಕೆ ಹರಿತವಾದ ಲೇಖನಗಳನ್ನು ಪ್ರಕಟಿಸಿದೆ. ಯುವ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳಿಗೆ ಇದು ತರಬೇತಿಯನ್ನು ನೀಡುತ್ತಿದೆ. (ಸಿ.ಕೆ.ಪಿ.)
*