ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೆಂಕಟಾಚಾರ್ಯ, ಬಿ

ಬಿ. ವೆಂಕಟಾಚಾರ್ಯ : - (ಕ್ರಿ.ಶ.1845-1914). ಬಂಗಾಲಿ ಭಾಷೆಯ ಅನೇಕ ಕಾದಂಬರಿಗಳನ್ನು ಕನ್ನಡಕ್ಕೆ ತಂದ ಹೆಸರಾಂತ ಲೇಖಕರು. ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕು ಬಿಂಡಿಗನವಲೆಯವರು. ಚಿತ್ರದುರ್ಗ ಹಾಗೂ ತುಮಕೂರುಗಳಲ್ಲಿ ವ್ಯಾಸಂಗಮಾಡಿದ ಇವರು ಆಗಿನ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೈಸೂರು ಸರ್ಕಾರದ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ನಂಜನಗೂಡು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಮುಂತಾದ ಸ್ಥಳಗಳಲ್ಲಿ ಜಿಲ್ಲಾ ಕೋರ್ಟ್ ಶಿರಸ್ತೇದಾರರಾಗಿ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರಾಗಿ ಕೆಲಸಮಾಡಿ ನಿವೃತ್ತರಾದರು (1912).

ಸ್ವಭಾವತಃ ಕಾವ್ಯಶಾಸ್ತ್ರವಿನೋದಿಯಾಗಿದ್ದ ಇವರು ಯಾವುದೋ ಒಂದು ಸಂದರ್ಭದಲ್ಲಿ ಬಂಗಾಲಿ ಭಾಷೆಗೆ ಒಲಿದು, ಈಶ್ವರಚಂದ್ರ ವಿದ್ಯಾಸಾಗರರ ನೆರವಿನಿಂದ ಆ ಭಾಷೆ ಮತ್ತು ಸಾಹಿತ್ಯವನ್ನು ಅಭ್ಯಸಿಸಿದರು. ವಿರಾಮಸಾಧ ನವಾಗಿದ್ದ ಇವರ ಸಾಹಿತ್ಯ ವ್ಯಾಸಂಗ ಮುಂದೆ ಕೃತಿ ರಚನೆಗೆ ಸ್ಫೂರ್ತಿಯನ್ನು ಒದಗಿಸಿತು. ಪ್ರಯೋಗಾರ್ಥ ವಾಗಿ ಇವರು ವಿದ್ಯಾಸಾಗರರ ನೆರವಿನಿಂದ ಆ ಭಾಷೆ ಮತ್ತು ಸಾಹಿತ್ಯವನ್ನು ಅಭ್ಯಸಿಸಿದರು. ವಿರಾಮಸಾಧನವಾಗಿದ್ದ ಇವರ ಸಾಹಿತ್ಯವ್ಯಾಸಂಗ ಮುಂದೆ ಕೃತಿರಚನೆಗೆ ಸ್ಫೂರ್ತಿಯನ್ನು ಒದಗಿಸಿತು. ಪ್ರಯೋಗಾರ್ಥವಾಗಿ ಇವರು ವಿದ್ಯಾಸಾಗರರ ಭ್ರಾಂತಿವಿಲಾಸ ಎಂಬ ಕಾದಂಬರಿಯನ್ನು ಕನ್ನಡಿಸಿದರು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅದೊಂದು ಹೊಸ ಹೆಜ್ಜೆಯಾಯಿತಲ್ಲದೆ ಒಳ್ಳೆಯ ಪ್ರೋತ್ಸಾಹವೂ ದೊರೆಯಿತು. ಇದರಿಂದ ಉತ್ತೇಜನಗೊಂಡ ಇವರು ಬಂಗಾಲಿ ಭಾಷೆಯ ಅನೇಕ ಕಾದಂಬರಿಗಳನ್ನೂ ನೀಳ್ಗತೆ, ಪ್ರಬಂಧಗಳನ್ನೂ ಕನ್ನಡಕ್ಕೆ ತಂದರು; ಹಲವು ಸ್ವತಂತ್ರ ಕೃತಿಗಳನ್ನು ರಚಿಸಿದರು. ಇವರ ಕೃತಿಗಳ ಒಟ್ಟು ಸಂಖ್ಯೆ ಸು. 80. ಕೆಲವು ಮುಖ್ಯ ಕೃತಿಗಳಿವು:ಇಂದಿರೆ (1897), ಆನಂದಮಠ (1899), ವಿಷವೃಕ್ಷ (1900), ವೆನಿಸ್ ನಗರದ ವಣಿಕ (1901), ದುರ್ಗೇಶ ನಂದಿನಿ (1902), ದೇವಿ ಚೌಧುರಾಣಿ (1902), ಅತ್ತಿಗೆ (1907), ಭ್ರಾಂತಿ ವಿಲಾಸ (1907), ಕೃಷ್ಣಕಾಂತನ ಉಯಿಲು (1909), ಕಮಲಾಕಾಂತ (1909).

ಒಳ್ಳೆಯ ಟೆನ್ನಿಸ್ ಆಟಗಾರರೂ ಪತ್ರಿಕೋದ್ಯಮಿಗಳೂ ಆಗಿದ್ದ ಇವರು ಅವಕಾಶತೋಷಿಣಿ ಎಂಬ ಪತ್ರಿಕೆಯನ್ನು ಒಂದು ವರ್ಷಕಾಲ ನಡೆಸಿದರು (1906). ಇವರು 1914 ಜೂನ್ 26ರಂದು ನಿಧನರಾದರು. (ವಿ.ಎಸ್.)

  *