ಶಾಂತಕವಿ 1856-1920. ನಾಟಕಕಾರರು, ಕವಿಗಳು ಮತ್ತು ಕೀರ್ತನ ಕಾರರು. ಇವರ ಪೂರ್ಣ ಹೆಸರು ಬಾಳಾಚಾರ್ಯ ಗೋಪಾಳಾಚಾರ್ಯ ಸಕ್ಕರಿ. ಶಾಂತಕವಿ ಎಂಬ ಹೆಸರಿನಿಂದ ಪ್ರಸಿದ್ಧರು. ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ 1856 ಜನವರಿ 15ರಂದು ಜನಿಸಿದರು. ಮನೆಯಲ್ಲಿ ಸಂಸ್ಕøತ ವ್ಯಾಸಂಗ ಮತ್ತು ಶಾಲೆಯಲ್ಲಿ ಕನ್ನಡವನ್ನು ಓದಿದ ಇವರು ಉಪಾಧ್ಯಾಯ ಕೆಲಸಕ್ಕಾಗಿ ಧಾರವಾಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದು ಉಪಾಧ್ಯಾಯರಾದರು. ಧಾರವಾಡ ಜಿಲ್ಲೆಯ ಅನೇಕ ಊರುಗಳಲ್ಲಿ ಸು.40 ವರ್ಷಗಳ ಕಾಲ ಕೆಲಸಮಾಡಿ 1912ರಲ್ಲಿ ನಿವೃತ್ತ ರಾದರು. ಅಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚಿತ್ತು; ಕನ್ನಡವನ್ನು ಕೇಳುವವರೇ ಇರಲಿಲ್ಲ. ಅಂಥ ದಿನಗಳಲ್ಲಿ ಒಳ್ಳೆಯ ಕೀರ್ತನಕಾರರೂ ಆಗಿದ್ದ ಇವರು ನಾಡುನುಡಿಗಳ ಮೇಲೆ ಮಮತೆಯನ್ನು ಹುಟ್ಟಿಸುವಂಥ ಅನೇಕ ಕೀರ್ತನೆಗಳನ್ನು ರಚಿಸಿ, ಸಭೆಗಳಲ್ಲಿ ಹಾಡಿ ಜನಜಾಗೃತಿಯನ್ನುಂಟು ಮಾಡಿದರು. ನಾಟಕ ರಚನೆ ಯಲ್ಲೂ ಆಸಕ್ತಿವಹಿಸಿದ ಇವರು, ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ಉಷಾಹರಣ ಎಂಬ ನಾಟಕವನ್ನು ಬರೆದು ಆಡಿಸಿದರು. ಕನ್ನಡದ ಆ ನಾಟಕವನ್ನು ನೋಡಿ ಜನ ಮೆಚ್ಚಿಕೊಂಡರು. ಅದರಿಂದ ಉತ್ಸಾಹಗೊಂಡ ಇವರು ಶ್ರೀಯಾಳ ಸತ್ತ್ವ ಪರೀಕ್ಷೆ, ಕೀಚಕವಧೆ, ವತ್ಸಲಾ ಹರಣ, ಸುಧನ್ವ ವಧೆ ಮುಂತಾದ ಅನೇಕ ನಾಟಕಗಳನ್ನು ಬರೆದರಲ್ಲದೆ, 1873ರಲ್ಲಿ ಕರ್ನಾಟಕ ನಾಟಕ ಕಂಪನಿಯನ್ನು ಕಟ್ಟಿ ಈ ನಾಟಕಗಳನ್ನು ಪ್ರದರ್ಶಿಸಿ ದರು. ಇದರಿಂದ ಕನ್ನಡ ನಾಟಕಗಳಿಗೂ ಪ್ರಚಾರ ದೊರೆತು, ಮರಾಠಿ ನಾಟಕ ಗಳ ಪ್ರಾಬಲ್ಯ ಸ್ವಲ್ಪಮಟ್ಟಿಗೆ ಕುಗ್ಗಿತು. ಇವರ ಕನ್ನಡ ನಾಟಕಗಳನ್ನು ಆಡಲು ಅನೇಕ ನಾಟಕ ಕಂಪನಿಗಳೂ ಮುಂದಾದವು.

ಇವರು ತಮ್ಮ ದೀರ್ಘ ಉಪಾಧ್ಯಾಯವೃತ್ತಿಯಲ್ಲಿ ದೊರೆತ ಅಲ್ಪ ವೇಳೆಯಲ್ಲಿಯೇ ಸುಮಾರು ಅರವತ್ತಕ್ಕೂ ಮಿಕ್ಕು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೀಚಕವಧೆ, ಪಾರ್ವತೀಪರಿಣಯ (ಬಾಣಕವಿಯ ಸಂಸ್ಕøತ ನಾಟಕದ ಭಾಷಾಂತರ), ಕಾಳಿದಾಸ ಕವಿಯ ಮೇಘದೂತ (ಅನುವಾದ), ಶಾಕುಂತಲ (ಅನುವಾದ), ಋತುಸಂಹಾರ (ಅನುವಾದ), ಮೃಚ್ಛಕಟಿಕ (ಅನುವಾದ), ಸೀತಾರಣ್ಯಪ್ರವೇಶ, ಹರಿಶ್ಚಂದ್ರಸತ್ತ್ವಪರೀಕ್ಷಾ ಮುಂತಾದ ಪೌರಾಣಿಕ ಕೃತಿಗಳೂ ಅಡ್ಡಕತೆಗಳ ಬುಕ್ಕು, ಕನ್ನಡ ದಾಸಯ್ಯನ ಪದ್ಯಗಳು, ಕನ್ನಡಿಗರಿಗೆ ಸವಾಲುಗಳು, ವ್ಯಭಿಚಾರಾನರ್ಥಸಿಂಧು, ವಾಸಪ್ಪ ನಾಯಕನ ಫಾರ್ಸು, ಕಾಲಮಹಿಮೆ, ಕಾಳಾಸುರ ಮುಂತಾದ ಹಾಸ್ಯ ಪ್ರಬಂಧಗಳೂ ಶೃಂಗಾರಸಾಗರ, ವಿರಹತರಂಗ, ಶೃಂಗಾರಪದಸಂಗ್ರಹ, ರಸಿಕವಿಚಾರ ಮುಂತಾದ ಶೃಂಗಾರ ಪ್ರಧಾನ ರಚನೆಗಳೂ ಸೇರಿವೆ. ಇವರ ಈ ಸ್ಫೂರ್ತಿದಾಯಕ ಕೃತಿಗಳು ಸುಪ್ತಾವಸ್ಥೆಯಲ್ಲಿದ್ದ ಜನತೆಯನ್ನು ಎಚ್ಚರಿಸಿದವು. ಕನ್ನಡ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಇವರ ನಾಟಕಗಳು ಪ್ರಧಾನಪಾತ್ರವಹಿಸಿದವು. ರಾಷ್ಟ್ರೀಯತ್ವವೇ ಯುಗಧರ್ಮ ಎಂದು ಸಾರಿದ್ದು, ಆ ದಿಶೆಯಲ್ಲಿ ದುಡಿದಿದ್ದು ಇವರ ಹಿರಿಮೆ. ಇವರ ಸೇವೆಯನ್ನು ಮನ್ನಿಸಿ ಧಾರವಾಡದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಇವರಿಗೆ ಉಡುಗೊರೆಯಿತ್ತು ಗೌರವಿಸಲಾಯಿತು (1880). ಇವರು 1920ರಲ್ಲಿ ನಿಧನರಾದರು. (ಎಮ್.ಜಿ.ಎನ್.)