ಕನ್ನಡ ವಿಕಿ: ಬಿ.ಎಂ.ಶ್ರೀಕಂಠಯ್ಯ
- ಶ್ರೀಕಂಠಯ್ಯ, ಬಿ ಎಂ(1884-1946) ನವೋದಯ ಕನ್ನಡ ಸಾಹಿತ್ಯದ ಆಚಾರ್ಯಪುರುಷರು. ಶ್ರೀ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಪ್ರತಿಭಾವಂತ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ, ವಿವಿಧ ಶಿಕ್ಷಣ ಮತ್ತು ಸಾರ್ವಜನಿಕ ಸಂಘಸಂಸ್ಥೆಗಳಲ್ಲಿ ಉನ್ನತಾಧಿಕಾರಿಗಳಾಗಿ ಕವಿಗಳೂ ವಿದ್ವಾಂಸರೂ ವಾಗ್ಮಿಗಳೂ ಆಗಿ ನಾಡಿನ ಒಕ್ಕೂಟ, ನುಡಿಯ ಏಳಿಗೆಯ ಪ್ರಚಾರಕರಾಗಿ, ದಾನಿಗಳಾಗಿ, ಹಿರಿಯ ಮನ್ನಣೆ ಮರ್ಯಾದೆ ಗಳಿಗೆ ಪಾತ್ರರಾಗಿ ತುಂಬುಜೀವನ ನಡೆಸಿದ ಇವರ ಹೆಸರು ಕನ್ನಡ ನಾಡಿನ ಚರಿತ್ರೆಯಲ್ಲಿ ಚಿರಸ್ಮರಣೀಯವಾಗಿದೆ.
ಇವರು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸಂಪಿಗೆಯಲ್ಲಿ 1884 ಮಾರ್ಚ್ 1 ರಂದು ಜನಿಸಿದರು. ತಾಯಿ ಭಾಗೀರಥಮ್ಮ, ತಂದೆ ಬೆಳ್ಳೂರು ಮೈಲಾರಯ್ಯನವರು ಶ್ರೀರಂಗಪಟ್ಟಣದಲ್ಲಿ ವಕೀಲರು. ತಾಯಿಯ ತವರಿನಲ್ಲೇ ಅಕ್ಷರಾಭ್ಯಾಸ ಮಾಡಿದರು. ತಂದೆಯಿಂದ ಇಂಗ್ಲಿಷ್ ಕಲಿತರು. ಅನಂತರ ಮೈಸೂರಿನ ಮಹಾರಾಜ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದರು. ಬಿ.ಎ. ಮಾಡಿ (1906) ಮದರಾಸಿನಿಂದ ಬಿ.ಎಲ್. (1907) ಮತ್ತು ಎಂ.ಎ. (1909) ಪದವಿ ಪಡೆದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿ (1909) ಇಂಗ್ಲಿಷ್ ವಿಭಾಗದ ಪ್ರಾಚಾರ್ಯ ಪದವಿಗೆ ಏರಿದರು (1930). ಈ ನಡುವೆ ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವರಾಗಿ ನಾಲ್ಕು ವರ್ಷ ಕೆಲಸ ಮಾಡಿದರು (1926-30). 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾ ಧ್ಯಕ್ಷರಾದರು. 1942ರಲ್ಲಿ ಇವರು ಪ್ರಾಧ್ಯಾಪಕ ಹುದ್ದೆಯಿಂದಲೂ ಪರಿಷತ್ತಿನ ಉಪಾಧ್ಯಕ್ಷ ಸ್ಥಾನದಿಂದಲೂ ನಿವೃತ್ತರಾದರು. ಅನಂತರ 1944ರಲ್ಲಿ ಧಾರವಾಡದ ಆಟ್ರ್ಸ್ ಕಾಲೇಜಿನ ಪ್ರಿನ್ಸಿಪಾಲರಾಗಿ ಅಲ್ಲಿಗೆ ಹೋದರು ಅಲ್ಲಿಯೆ 1946 ಜನವರಿ 5 ರಂದು ನಿಧನರಾದರು.
ಇವರ ಕೃತಿಗಳು ಗಾತ್ರದಲ್ಲಿ ಸಣ್ಣವಾದರೂ ತೂಕದಲ್ಲಿ ಬಹಳ ದೊಡ್ಡವು. ವಿದ್ಯಾರ್ಥಿಗಳಿಗಾಗಿ ಇವರು ಇಂಗ್ಲಿಷಿನಲ್ಲಿ ಬರೆದ ಎ ಹ್ಯಾಂಡ್‍ಬುಕ್ ಆಫ್ ರ್ಹೆಟೊರಿಕ್ (ಅಲಂಕಾರಶಾಸ್ತ್ರ ಟಿಪ್ಪಣಿ) ಕಣ್ಮರೆಯಾಗಿ ಎಷ್ಟೋ ಕಾಲ ಸವೆಯಿತು (ಪ್ರಕಟಣೆ ಸು. 1912). ಹಾಗೆಯೇ ಇವರ ಟ್ರಾಜಿಕ್ ರಾವಣ ಮುಂತಾದ ಕೆಲವೇ ಕೆಲವು ಇಂಗ್ಲಿಷ್ ಲೇಖನಗಳಿಗೆ ಸಾಕಷ್ಟು ಖ್ಯಾತಿದೊರೆತಿಲ್ಲ. ಆದರೆ 1911ರಲ್ಲಿ ಇವರು ಧಾರವಾಡದಲ್ಲಿ ಕೊಟ್ಟ ಎರಡು ಉಪನ್ಯಾಸಗಳು-ಕನ್ನಡ ಮಾತು ತಲೆಯೆತ್ತುವ ಬಗೆ, ಕನ್ನಡಕ್ಕೆ ಒಂದು ಕಟ್ಟು-ಇವು ಈಗಲೂ ಓದಲರ್ಹವಾಗಿವೆ. ಇಂಗ್ಲಿಷ್ ಗೀತಗಳು ಎಂಬ ಅನುವಾದ ಸಂಕಲನ 1921ರಲ್ಲಿ ಹೊರಬಂತು. ರನ್ನನ ಗದಾಯುದ್ಧ ಕಾವ್ಯವನ್ನಾಧರಿಸಿ ರಚಿತವಾದ ಗದಾಯುದ್ಧ ನಾಟಕಂ 1926ರಲ್ಲಿ ಪ್ರಕಟವಾಯ್ತು. ಈ ನಾಟಕದಲ್ಲಿ, ದುರ್ಯೋಧನನನ್ನು ನಾಯಕಪಟ್ಟಕ್ಕೆ ಏರಿಸುವ ಪ್ರಯತ್ನ ನಡೆದಿದೆ. ಇಂಗ್ಲಿಷ್ ಗೀತಗಳಾದರೊ ಕನ್ನಡದ ಹೊಸ ಛಂದಸ್ಸಿಗೆ ಹಾದಿ ತೋರಿಸಿಕೊಟ್ಟ ಮುನ್ನಡೆ ಕವನಗಳು. ಹಿಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಆಳಿಕೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ (1927) ರಚಿಸಿದ ರಜತ ಮಹೋತ್ಸವ ಪ್ರಗಾಥ ಇವರ ಇನ್ನೊಂದು ಶ್ರೇಷ್ಠ ಕೃತಿ. ಪ್ರಾಚೀನ ಗ್ರೀಕರ ಪ್ರಗಾಥದ ಮಾದರಿ ಶ್ರೀಯವರ ಮುಂದಿದ್ದುದೇನೊ ನಿಜ; ಆದರೂ ತಮ್ಮ ವಿಚಾರಸರಣಿಯಲ್ಲೂ ಭಾವೋದ್ರೇಕದಲ್ಲೂ ಕಾವ್ಯಭಾಷೆಯಲ್ಲೂ ಇವರು ನಿಸ್ಸಂದಿಗ್ಧ ಸ್ವಂತಿಕೆಯನ್ನು ವ್ಯಕ್ತಪಡಿಸಿದ್ದಾರೆ. ಆ ಕವನವೂ ಒಂದು ದಾರಿದೀಪ. 1929ರಲ್ಲಿ ಸಾಫೋಕ್ಲಿಸನ ಏಜಾಕ್ಸ್ ರೂಪಕದ ಆಧಾರದಿಂದ ಅಶ್ವತ್ಥಾಮನ್ ಎಂಬ ರುದ್ರ ನಾಟಕವನ್ನು ಕಟ್ಟಿದರು. ಅದು ವಾದವಿವಾದಕ್ಕೆ ಎಡೆಕೊಟ್ಟಿತು. ಅದರ ಪ್ರತಿಯೊಂದು ಪದವೂ ಪ್ರತಿಯೊಂದು ಸಾಲೂ ಅತ್ಯುತ್ತಮ ಕವಿತೆ; ಅಲ್ಲಿನ ಸಂವಾದಗಳಿಗೂ ನೃತ್ಯಮೇಳದ ಕೀರ್ತನೆ ಗಳಿಗೂ ಪ್ರಶಂಸಾತೀತವಾದ ಲಾವಣ್ಯವಿದೆ. ಆದರೆ ಪಾತ್ರಶಿಲ್ಪ ಆಭಾಸರಹಿತವೆಂದು ಹೇಳುವಂತಿಲ್ಲ. 1935ರಲ್ಲಿ ಹೊರಬಂದ ಪಾರಸಿಕರು ಈಸ್ಕಿಲಸ್‍ನ ಅದೇ ಹೆಸರಿನ ರೂಪಕದ ತರ್ಜುಮೆ. ಭಾಷಾಂತರದಲ್ಲಿ ಇವರ ನುರಿತ ಕೈವಾಡವಿದ್ದರೂ ಗೋಳಿನಿಂದ ತುಂಬಿರುವ ಕೃತಿಯಿಂದ ಕಾವ್ಯಾನಂದ ಕಡಿಮೆ ಎನ್ನಲೇಬೇಕು. 1938ರಲ್ಲಿ ಕನ್ನಡ ಬಾವುಟವೆಂಬ ಪದ್ಯ ಸಂಕಲನಕ್ಕೆ ಇವರು ಸಂಪಾದಕರಾದರು. ಇವರ ಹಲವು ಕವನಗಳು 1943ರಲ್ಲಿ ಹೊಂಗನಸುಗಳು ಎಂಬ ಅಭಿದಾನದಿಂದ ಪ್ರಕಟಗೊಂಡುವು. ಕನ್ನಡ ಕೈಪಿಡಿಯಲ್ಲಿ ಇವರ ವಿದ್ವತ್ಪೂರ್ಣ ಲೇಖನಗಳು ಅಚ್ಚಾಗಿವೆ. 1948ರಲ್ಲಿ ಇವರ ಭಾಷಣಗಳನ್ನೂ ಲೇಖನಗಳನ್ನೂ ಮುನ್ನುಡಿಗಳನ್ನೂ ಒಟ್ಟು ಕೂಡಿಸಿ ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ ಎಂಬ ಶಿರೋನಾಮೆ ಯಿಂದ ಪ್ರಕಟಿಸಲಾಗಿದೆ. ಇವರ ಕನ್ನಡ ಸಾಹಿತ್ಯ ಚರಿತ್ರೆ (1947) ಅಂಥ ಕೆಲಸ ಮಾಡುವವರಿಗೆ ಮಾದರಿಯಾಗಿದೆ. ಇಸ್ಲಾಮ್ ಸಂಸ್ಕøತಿ (1948) ಎಂಬುದು ಇವರು ಇಂಗ್ಲಿಷಿನಿಂದ ಮಾಡಿರುವ ಅನುವಾದ ಗ್ರಂಥ.
ಕನ್ನಡ ನಾಡು ನುಡಿಗಳ ಪುನರುಜ್ಜೀವನಕ್ಕೆ, ಅಭ್ಯುದಯಕ್ಕೆ ಇವರು ಸಲ್ಲಿಸಿರುವ ಕಾಣಿಕೆ ಒಂದೆರಡಲ್ಲ, ಹಲವಾರು. ಕನ್ನಡಕ್ಕೆ ಆತ್ಮಗೌರವವನ್ನು ಸಂಪಾದಿಸಿಕೊಟ್ಟು ಹೊಸಗನ್ನಡ ಕವಿತೆ ಕಣ್ಣು ತೆರೆಯುವಂತೆ ಮಾಡಿದ ಮಹಾನುಭಾವರು ಇವರು. ಇವರನ್ನು ಮೆಚ್ಚಿಕೊಂಡ ಮಹನೀಯರು ಇವರನ್ನು ಕನ್ನಡದ ಕಣ್ವ, ಆಧುನಿಕ ಕರ್ನಾಟಕಾವ್ಯಕುಲಪತಿ, ನವಯುಗ ಪ್ರವರ್ತಕ, ಆಧುನಿಕ ಕರ್ಣಾಟ ಕವಿಚೂತವನ ಚೈತ್ರ ಎಂದು ಮುಂತಾಗಿ ತುಂಬು ಮನಸ್ಸಿನಿಂದ ಕರೆದಿ ದ್ದಾರೆ. ಕನ್ನಡ ಪ್ರೌಢ ವ್ಯಾಸಂಗ ವಿದ್ಯಾರ್ಥಿಗಳಿಗೆ ಇವರು ಅನೇಕ ದತ್ತಿನಿಧಿಗಳನ್ನು ಸ್ಥಾಪಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಆರಂಭವಾದದ್ದು ಇವರ ಭಾಷಾಪ್ರೇಮ ಹಾಗೂ ಪ್ರಾಮಾಣಿಕವಾದ ಶ್ರದ್ಧೆ ಉತ್ಸಾಹಗಳ ಫಲ.
ಇವರು ಕನ್ನಡ ಪ್ರಚಾರಕ್ಕೆ ಕೈಕೊಂಡ ಯೋಜನೆಗಳು ಹಲವಾರು. ಕರ್ನಾಟಕದ ಹಳ್ಳಿ ಹಳ್ಳಿಗಳನ್ನು ಸಂಚಾರ ಮಾಡಿ ಕನ್ನಡದ ಬಗ್ಗೆ ಜನ ಆಸಕ್ತಿಯನ್ನು ಉತ್ಸಾಹವನ್ನು ತಾಳುವಂತೆ ಮಾಡಿದರು. ಪರಿಷತ್ತಿನ ಕಾರ್ಯನಿರ್ವಹಣೆಯಲ್ಲಿ ಪಾಲುಗೊಂಡಮೇಲೆ ಉಪನ್ಯಾಸಗಳು, ಗ್ರಂಥ ಪ್ರಕಟನೆ, ಸಾಹಿತ್ಯ ಪರೀಕ್ಷೆಗಳ ವ್ಯವಸ್ಥೆ, ಸಮಾರಂಭಗಳು, ಪತ್ರಿಕೆಯ ಪ್ರಾರಂಭ, ಅಚ್ಚುಕೂಟದ ಸ್ಥಾಪನೆ, ದತ್ತಿಗಳ ಏರ್ಪಾಡು-ಈ ಮೊದಲಾ ದವುಗಳ ಮೂಲಕ ಪರಿಷತ್ತು ಬೆಳೆದು ಬಲಗೊಳ್ಳುವ ಹಾಗೆ ಶ್ರಮಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸೇವಾಕ್ಷೇತ್ರದಲ್ಲಿ ನಿಂತಾಗ, ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಗ್ರಂಥಮಾಲೆಯ ಯೋಜನೆಯನ್ನು ರೂಪಿಸಿ ಸಮಿತಿಯ ಅಧ್ಯಕ್ಷರೂ ಪ್ರಧಾನ ಸಂಪಾದಕರೂ ಆಗಿ, ಹೊಸಕಾಲದ ಆವಶ್ಯಕತೆಗೆ ತಕ್ಕಂತೆ ಲಲಿತವಾದ ಹೊಸಗನ್ನಡ ಶೈಲಿಯಲ್ಲಿ ವಿವಾದಾಸ್ಪ ದವಿಲ್ಲದ ನಿಷ್ಕøಷ್ಟವಾದ ರೀತಿಯಲ್ಲಿ ಜನಸಾಮಾನ್ಯರಿಗೆಂದು ಸಾಹಿತ್ಯ, ಕಲೆ, ವಿಜ್ಞಾನ, ತತ್ತ್ವ ಮೊದಲಾದ ಭಾಗಗಳ ಮೇಲೆ ಕನ್ನಡ ಗ್ರಂಥಗಳನ್ನು ತಜ್ಞರಿಂದ ಬರೆಸುವ ರೂಢಿಯನ್ನು ತಂದರು. ಹಳೆಗನ್ನಡ ನಡುಗನ್ನಡ ಸಾಹಿತ್ಯದ ಗಣ್ಯ ಗ್ರಂಥಗಳನ್ನು ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರ ಓದಿಗೆ ಅನುಕೂಲಿಸುವಂತೆ ಸಂಗ್ರಹಿಸಿಕೊಡುವ, ಪೀಠಿಕೆ ಶಬ್ದಕೋಶ ಟಿಪ್ಪಣಿಗಳ ಸಹಾಯಕ ಸಾಮಗ್ರಿಯನ್ನು ಕೂಡಿಸಿ ಸುಲಭ ಮಾಡುವ ಹಂಚಿಕೆಯನ್ನು ಹೂಡಿದರು. ಐದು ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾದ ಕನ್ನಡ ಕೈಪಿಡಿಯನ್ನು ರಚಿಸುವ ಯೋಜನೆಗೆ ಖಚಿತರೂಪವನ್ನು ಕೊಟ್ಟು ಆ ಸಮಿತಿಯ ಸಭಾಧ್ಯಕ್ಷರಾದರು. ಮೂರು ಭಾಗಗಳಿಗೆ ತಾವೇ ಸಹಲೇಖಕರೂ ಆದರು. ಈ ಪುಸ್ತಕ ಈಗ ಬಹುಕಾಲದಿಂದ ಕನ್ನಡದ ಪ್ರೌಢವಿದ್ಯಾರ್ಥಿಗಳಿಗೆ ಒಂದು ವರವಾಗಿ ಪರಿಣಮಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟುವಿನ ಸಂಪಾದಕ ಮಂಡಲಿಯಲ್ಲಿ ಒಬ್ಬ ಸದಸ್ಯರಾಗಿ ಶ್ರಮಿಸಿದರು. ಪರಿಷತ್ತಿನ ಪಂಪಭಾರತದ ಕೊನೆಯ ಕರಡಚ್ಚುಗಳನ್ನು ತಿದ್ದಿ, ಅಮೂಲ್ಯ ಸಲಹೆಗಳನ್ನು ಕೊಟ್ಟು ನೆರವು ನೀಡಿದರು.
ಕನ್ನಡ ಭಾಷೆಗೆ ಹೇಗೋ ಹಾಗೆಯೇ ಕನ್ನಡ ವಿದ್ವತ್ತಿಗೆ ಕೂಡ ಇವರ ಕಾಣಿಕೆ ಗಣ್ಯವಾದ್ದು: (i) ಕನ್ನಡದಲ್ಲಿ ಪೌರಾಣಿಕ ಹಾಗೂ ಅನುವಾದಿತ ರುದ್ರ ನಾಟಕಗಳ ರಚನೆಗೆ ಹೆದ್ದಾರಿಯನ್ನು ಹಾಕಿದರು. ಅಲ್ಲದೆ ಡೈಯೊನಿಸಸ್‍ಗೆ ಹಲವು ರೀತಿಯಲ್ಲಿ ಸಾದೃಶ್ಯವುಳ್ಳ, ರುದ್ರ ಭೂಮಿಗೆ ಅಧಿನಾಯಕನಾದ ಆದರೂ ಮಂಗಳದಾಯಕನಾಗಿ ಭವರೋಗಕ್ಕೆ ಭಿಷಜನಾದ, ನಾಟ್ಯ ನಾಟಕ ಪ್ರದರ್ಶಕನಾದ ರುದ್ರನ ಹೆಸರಿಂದ ತಮ್ಮ ನಾಟಕಗಳಿಗೆ ರುದ್ರನಾಟಕವೆಂದು ಹೆಸರು ಕೊಟ್ಟವರೂ ಇವರೇ. (ii) ಕನ್ನಡ ಛಂದಸ್ಸಿನ ತಳಹದಿಯಾದ ಅಂಶಗಣಗಳ ಸ್ವರೂಪವನ್ನು ಛಂದೋಂಬುಧಿಯ ಸಾಕ್ಷ್ಯ ಮತ್ತು ತಮಿಳು ಛಂದಸ್ಸಿನ ತುಲನೆಯಿಂದ ಮೊದಲು ವಿಶದೀಕರಿಸಿದವರು ಮತ್ತು ಅದಕ್ಕೆ ಅನುಗುಣವಾಗಿ ಕನ್ನಡ ಮಟ್ಟುಗಳ ಲಕ್ಷಣವನ್ನು ಪರಿಶೀಲಿಸಿದವರು ಇವರು ಜಾತಿಛಂದಸ್ಸಿನ ಮೂಲಮಾಪಕವಾದ ಅಕ್ಷರವನ್ನು ಅಂಶವೆಂದೂ ಅದರಿಂದಾದ ಗಣವನ್ನು ಅಂಶಗಣವೆಂದೂ, ತಮಿಳು ಜಾತಿ ಛಂದಸ್ಸಿನ ಪ್ರೇರಣೆಯಿಂದ (ಆಶೈ ಅಂಶ ; ಶೀರ್ ಗಣ) ಕರೆದವರು ಕೂಡ ಇವರೇ. (iii) ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮಗಳಲ್ಲಿ ಹೊಸದಾದ ಕೆಲವನ್ನು ಸೂಚಿಸಿ, ಆರಂಭಕಾಲ, ಮತ ಪ್ರಾಬಲ್ಯಕಾಲ, ನವೀನ ಕಾಲ ಎಂಬ ಕ್ರಮದಂತೆ ತಾವೇ ಚರಿತ್ರೆಯನ್ನು ನಿರೂಪಿಸುವ ಯತ್ನ ಮಾಡಿದರು. (iಗಿ) ಚಾವುಂಡರಾಯ ಪುರಾಣ, ಅಜಿತಪುರಾಣಗಳಲ್ಲಿ ಸಾದೃಶ್ಯ ತೋರುವುದನ್ನು ಗಮನಿಸಿ, ಚಾವುಂಡರಾಯಪುರಾಣದಲ್ಲಿ ರನ್ನನ ಕೈವಾಡವೂ ಸೇರಿದೆಯೋ ಎಂಬ ಅನುಮಾನವನ್ನು ಮೊದಲು ವ್ಯಕ್ತಪಡಿಸಿದರು; ಮುಂದೆ ಇದು ಗಾಢ ಪರಿಶೀಲನೆಯ ವಿಷಯವಾಯಿತು. (ಗಿ) ಕನ್ನಡ ಮೊದಲೋ ತಮಿಳು ಮೊದಲೋ ಎಂಬ ಮಹತ್ತ್ವದ ಪ್ರಶ್ನೆಯನ್ನೆತ್ತಿಕೊಂಡು ಕನ್ನಡ ನುಡಿಗಳೂ ವ್ಯಾಕರಣದ ನಿರಿಗಳೂ ಭಾಷಾವಿಜ್ಞಾನದ ದೃಷ್ಟಿಯಿಂದ ಕನ್ನಡದಲ್ಲೇ ಪೂರ್ವರೂಪಗಳಾಗಿಯೂ ತಮಿಳಿನವು ಅನಂತರದ ರೂಪಗಳಾಗಿಯೂ ಇವೆಯೆಂದು ವಿದ್ವತ್ತಿನ ಸಭೆಯಲ್ಲಿ ಆಧಾರ ಸಹಿತವಾಗಿ ತೋರಿಸಲು ಯತ್ನಿಸಿದರು. (ಗಿi) ಕವಿರಾಜಮಾರ್ಗ, ಕಾವ್ಯಾವಲೋಕನಗಳ ಪಾಠವಿಮರ್ಶೆಯ ಮೂಲಕ ಗ್ರಂಥಸಂಪಾದನ ಶಾಸ್ತ್ರಕ್ಕೆ ಅಂಕುರಾರ್ಪಣೆ ಮಾಡಿದರು. (ಗಿii) ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ನಾಡಿನ ಚರಿತ್ರೆ, ಕನ್ನಡ ಕೈಪಿಡಿ, ಕಾವ್ಯಸಂಗ್ರಹಗಳು ಈ ಬಗೆಯ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಕನ್ನಡ ವಿದ್ವತ್ತಿಗೆ ಭದ್ರವಾದ ತಳಹದಿಯನ್ನು ಹಾಕಿದರು.
ಇವರು ನಾಡು ನುಡಿಗಳ ಮುನ್ನಡೆಗೆ ಸಲ್ಲಿಸಿದ ಸೇವೆಗೆ ಮನ್ನಣೆ ಎಂಬಂತೆ ಕನ್ನಡ ಜನತೆ ಇವರನ್ನು ಹಲವು ಬಗೆಯಲ್ಲಿ ಗೌರವಿಸಿ ತನ್ನ ಕೃತಜ್ಞತೆಯನ್ನು ಸಲ್ಲಿಸಿದೆ. 1928ರಲ್ಲಿ ಗುಲ್ಬರ್ಗದಲ್ಲಿ ನಡೆದ 14ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. 1938ರಲ್ಲಿ ಮೈಸೂರು ಮಹಾರಾಜರು ಇವರಿಗೆ ರಾಜಸೇವಾಸಕ್ತ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. 1941ರಲ್ಲಿ ಇವರ ಶಿಷ್ಯರು ಮಿತ್ರರು ಸಂಭಾವನೆ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದರು; ಇದು ಕನ್ನಡದಲ್ಲಿ ಪ್ರಕಟವಾದ ಮೊಟ್ಟಮೊದಲ ಅಭಿನಂದನ ಗ್ರಂಥ. ಇವರ ಸಮಗ್ರ ಕೃತಿಗಳನ್ನು ಶ್ರೀ ಸಾಹಿತ್ಯ ಎಂಬ ಹೆಸರಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದೆ.
(ಎಸ್.ವಿ.ಆರ್.)