ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ 1973-. ಪ್ರಪಂಚ ಶ್ರೇಷ್ಠ ಭಾರತೀಯ ಕ್ರಿಕೆಟ್ ಆಟಗಾರ. ರಮೇಶ್ ಮತ್ತು ರಜನಿ ತೆಂಡೂಲ್ಕರ್ ದಂಪತಿಗಳ ನಾಲ್ವರು ಮಕ್ಕಳಲ್ಲಿ ಇವರು ಮೂರನೆಯವರು. ನಿತಿನ್ ಮತ್ತು ಅಜಿತ್ ಇವರ ಸಹೋದರರು. ಸವಿತಾಯಿ ಇವರ ಸಹೋದರಿ. ಇವರು ಮುಂಬಯಿನ ಅಗರ್ ಬಜಾರ್‍ನಲ್ಲಿ 1973 ಏಪ್ರಿಲ್ 24 ರಂದು ಜನಿಸಿದರು. ತಂದೆ ಮರಾಠಿ ಪ್ರಾಧ್ಯಾಪಕ ಮತ್ತು ಕವಿ. ತಾಯಿ ಜೀವವಿಮಾ ನಿಗಮದಲ್ಲಿ ಉದ್ಯೋಗಿ. ಅಣ್ಣ ಅಜಿತ್ ತೆಂಡೂಲ್ಕರ್ ಇವರ ಆಟದ ಏಳ್ಗೆಯನ್ನು ಪ್ರಭಾವಶಾಲಿಯಾಗಿ ರಕ್ಷಿಸಿ ಪೋಷಿಸಿದರು. ಇವರು ಈಗ ಸಚಿನ್‍ರ ಮೇನೇಜರ್. ಸಚಿನ್‍ಗೆ ಬಾಲ್ಯದಿಂದಲೇ ಕ್ರಿಕೆಟ್ ಕ್ರೀಡೆಯಲ್ಲಿ ಆಸಕ್ತಿ ಮೂಡಿತ್ತು. ಅಗರ್ ಬಜಾರಿನ, ಸಾಹಿತ್ಯ ಸಹವಾಸದಲ್ಲಿಯ ಕಾರಿಡಾರು, ರಸ್ತೆಗಳಲ್ಲಿ ಕ್ರಿಕೆಟ್ ಆಡಿದ್ದು ಈಗ ಇತಿಹಾಸ.

1983ರ ವಿಶ್ವಕಪ್ ಪಂದ್ಯಾವಳಿಯನ್ನು ಕಿರು ತೆರೆಯ ಮೇಲೆ ನೋಡಿ ಇವರು ಪ್ರಭಾವಿತರಾದರು. ಆಟದಲ್ಲಿ ತೀವ್ರ ಆಸಕ್ತಿ ಬೆಳೆಯಿತು. ರಮಾಕಾಂತ ಅಚ್ರೇಕರ್ ಇವರ ತರಬೇತುದಾರ. ಶಾಲಾ ತಂಡಕ್ಕೆ ಆಡುವಾಗಲೇ ಮೊದಲ ಶತಕ (1986) ಬಾರಿಸಿದರು. ಅಂತರಶಾಲಾ ಪಂದ್ಯದಲ್ಲಿ ಗೆಳೆಯ ವಿನೋದ್ ಕಾಂಬ್ಲಿ ಯೊಂದಿಗೆ 15ನೆಯ ವಯಸ್ಸಿ ನಲ್ಲಿ 664ರನ್ ಬಾರಿಸಿ ಪ್ರಪಂಚ ದಾಖಲೆ ಸ್ಥಾಪಿಸಿದರು(1988). ಪಾಕಿಸ್ತಾನದ ವಿರುದ್ಧ ಆಡಲು ತಂಡಕ್ಕೆ ಆಯ್ಕೆಯಾದಾಗ ಇವರ ವಯಸ್ಸು ಕೇವಲ 16 (1989-90). ಇಂಗ್ಲೆಂಡ್ ಪ್ರವಾಸದಲ್ಲಿ 119ರನ್ ಪಡೆದು ಟೆಸ್ಟ್ ಶತಕ ಗಳಿಸಿದ ಅತಿ ಕಿರಿಯರಲ್ಲಿ ಪ್ರಪಂಚದಲ್ಲೇ ಎರಡನೆಯವರೆನಿಸಿದರು (1990). ವಲ್ರ್ಡ್ ಟೆಲ್ ಜೊತೆ 5 ವರ್ಷಗಳ ಕರಾರಿಗೆ ಸಹಿಮಾಡಿ ಅದರ ಉತ್ಪನ್ನಗಳ ಪ್ರತಿನಿಧಿಯಾಗಿ ಪ್ರಪಂಚದ ಅತಿ ಶ್ರೀಮಂತ ಕ್ರಿಕೆಟ್ ಪಟುವೆನಿಸಿದರು (1995). ಭಾರತ ತಂಡದ ನಾಯಕನಾಗಿ ನೇಮಕವಾದರು (1996). ಡಾನ್ ಬ್ರಾಡ್‍ಮನ್ ಅವರ 92ನೆಯ ಹುಟ್ಟು ಹಬ್ಬದಾಚರಣೆಗೆ ಇವರಿಗೆ ಆಹ್ವಾನ ಬಂದಿತ್ತು(2001). ಏಕದಿನ ಪಂದ್ಯಗಳಲ್ಲಿ 10,000 ರನ್ ಗಳಿಸಿ ಮೊದಲಿಗರಾಗಿ ದಾಖಲೆ ಸ್ಥಾಪಿಸಿದರು. 2002ರ ವೇಳೆಗೆ 13 ಟೆಸ್ಟ್ ಶತಕಗಳನ್ನು (ಬ್ರಾಡ್‍ಮನ್‍ಗಿಂತ ಒಂದು ಹೆಚ್ಚು) ಬಾರಿಸಿ ಅಂತಾರಾಷ್ಟ್ರೀಯ ಟೆಸ್ಟ್ ರೇಟಿಂಗ್‍ನಲ್ಲಿ ಮೂರನೆಯ ಸ್ಥಾನ ಪಡೆದರು. ಅದೇ ವರ್ಷ 100ನೆಯ ಟೆಸ್ಟ್ ಪಂದ್ಯವಾಡಿದ ಅತಿಕಿರಿಯರೆಂಬ ಪಟ್ಟ ಲಭಿಸಿತು. ಇವರ ಆಟವನ್ನು ಆಸ್ಟ್ರೇಲಿಯದ ಡಾನ್ ಬ್ರಾಡ್‍ಮನ್ ಹಾಗೂ ವೆಸ್ಟ್ ಇಂಡಿಸ್‍ನ ವಿವಿಯನ್ ರಿಚಡ್ರ್ಸ್‍ರ ಆಟಗಳೊಂದಿಗೆ ಹೋಲಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಭಾರತೀಯ ತಂಡ ಸಂಕಷ್ಟದಲ್ಲಿದ್ದಾಗ ಇವರು ಆಪದ್ಭಾಂಧವರಂತೆ ಆಡಿದ್ದಾರೆ. ತಂಡದ ಇತರರೆಲ್ಲ ವಿಫಲರಾದಾಗ ಇವರು ಅಮಿತೋತ್ಸಾಹದಿಂದ ಹೋರಾಡಿದ್ದಾರೆ. ಪ್ರಪಂಚದ ಅತಿ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳಲ್ಲಿ ಇವರು ಒಬ್ಬರು. ಏಕದಿನ ಪಂದ್ಯಗಳಲ್ಲಿ ಸಾರ್ವಕಾಲಿಕ ಶ್ರೇಷ್ಠರೆಂಬ ಹೊಗಳಿಕೆಗೆ ಪಾತ್ರರಾಗಿದ್ದಾರೆ.

ಇವರಿಗೆ ಅನೇಕ ಗೌರವ, ಪ್ರಶಸ್ತಿಗಳು ದೊರಕಿವೆ : ವೈಸ್‍ಡೆನ್ ಕ್ರಿಕೆಟರ್ ಎಂಬ ಬಿರುದು (1997), ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (1998), ಪದ್ಮಶ್ರೀ ಪ್ರಶಸ್ತಿ (1999)-ಈ ಪ್ರಶಸ್ತಿಗಳಲ್ಲಿ ಕೆಲವು. ಮಡದಿ ಅಂಜಲಿ ಮಕ್ಕಳ ವೈದ್ಯೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗಳು ಸಾರ, ಮಗ ಅರ್ಜುನ್.

ಕ್ರಿಕೆಟ್ ಪ್ರಪಂಚದ ಅನೇಕ ದಾಖಲೆಗಳನ್ನು ಮುರಿದ ಮಾಂತ್ರಿಕತೆಯ ಆಟ ಇವರದು. ಕೋಲ್ಮಿಂಚಿನಂತೆ ಕಟ್‍ಷಾಟ್‍ಗಳನ್ನು ಬಾರಿಸುವುದು, ಉಸಿರುಗಟ್ಟಿಸುವ ಫುಲ್‍ಷಾಟ್‍ಗಳ ಹೊಡೆತ ಇವರ ವೈಶಿಷ್ಟ್ಯ. ಏಕದಿನ ಕ್ರಿಕೆಟ್‍ನಲ್ಲಿ ಇದುವರೆಗೆ 13,415ರನ್, 37 ಶತಕ ಗಳಿಸಿದ್ದಾರೆ. ಇವೆರಡೂ ಪ್ರಪಂಚ ದಾಖಲೆಗಳಾಗಿವೆ.

(ಡಿ.ಎನ್.ಎಸ್.)