ಸರುವೆ ಕ್ಯಾಸುಯರೈನೇಸೀ ಕುಟುಂಬದ ಕ್ಯಾಸುಯರೈನಾ ಈಕ್ವಿಸೆಟಿಫೊಲಿಯ ಪ್ರಭೇದದ ಸಸ್ಯ. ನೇರವಾದ ಕಾಂಡದ ನಿತ್ಯಹರಿದ್ವರ್ಣದ ಮರ. ಆಸ್ಟ್ರೇಲಿಯ ಇದರ ಮೂಲ ಸ್ಥಾನ. ಭಾರತದ ಕರಾವಳಿ ಪ್ರದೇಶಗಳಲ್ಲಿಯೂ ಒಳನಾಡಿನಲ್ಲಿಯೂ ಸರ್ಕಾರಿ ಹಾಗೂ ಖಾಸಗೀ ಜಮೀನುಗಳಲ್ಲೂ ವಿಶೇಷವಾಗಿ ಬೆಳೆಸಲಾಗುತ್ತಿದೆ. ಮರಳು ಮಣ್ಣಿನ ಕರಾವಳಿ ಪ್ರದೇಶಗಳಲ್ಲಿ ಹಾಗೂ ಜೌಗಿಲ್ಲದ ಮೆಕ್ಕಲು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಾರವಾರದ ಕರಾವಳೀ ಪ್ರದೇಶ, ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಇದನ್ನು ಹೇರಳವಾಗಿ ಬೆಳೆಸುವುದುಂಟು.

ಸಾಧಾರಣವಾಗಿ ವರ್ಷಕ್ಕೆ ಎರಡುಬಾರಿ (ಫೆಬ್ರವರಿ-ಏಪ್ರಿಲ್, ಸೆಪ್ಟೆಂಬರ್-ಅಕ್ಟೋಬರ್) ಹೂಗಳು ಮೂಡಿ, ಜೂನ್ ಮತ್ತು ಡಿಸೆಂಬರ್‍ನಲ್ಲಿ ಕಾಯಿಗಳು ಮಾಗುತ್ತವೆ. ಹೂಗಳು ಏಕಲಿಂಗದವು. ಬೀಜ ಸಣ್ಣಗೆ ಹಗುರವಾಗಿದ್ದು, ಹೊಸ ಬೀಜ ಚೆನ್ನಾಗಿ ಮೊಳೆಯುವುದು.

ಬಿಸಿಲು ಚೆನ್ನಾಗಿದ್ದರೆ ಹುಲುಸಾಗಿ ಬೆಳೆಯುತ್ತದೆ. ಒಣಹವೆಯನ್ನು ಸಾಕಷ್ಟು ಮಟ್ಟಿಗೆ ತಡೆಯಬಲ್ಲದು. ಬೆಂಕಿಯಿಂದ ಹಾನಿಹೆಚ್ಚು. ಕಡಿದ ಮರ ಚೆನ್ನಾಗಿ ಚಿಗುರುವುದಿಲ್ಲ. ಎತ್ತರದಲ್ಲಿ ಕಡಿದರೆ ಕೊಂಬೆಗಳು ತಕ್ಕಮಟ್ಟಿಗೆ ಬೆಳೆಯುವುವು. ಸ್ವಾಭಾವಿಕ ಪುನರುತ್ಪತ್ತಿ ವಿರಳ. ನೆಡುತೋಪುಗಳಲ್ಲಿ ಇದನ್ನು ವಿಶೇಷವಾಗಿ ಬೆಳೆಸುತ್ತಾರೆ. ಡಿಸೆಂಬರ್-ಜನವರಿ ತಿಂಗಳಿನಲ್ಲಿ ಹದಮಾಡಿದ ಪಾತಿಗಳಲ್ಲಿ (10 ಘಿ 1ಮೀ) ಪಾತಿ ಒಂದಕ್ಕೆ 3/4 ಪೌಂ. ನಷ್ಟು ಬೀಜವನ್ನು ಹರಡಿ ತೆಳುವಾಗಿ ಮರಳು ಮಿಶ್ರಮಣ್ಣನ್ನು ಮುಚ್ಚಿ, ಸಸಿಮೊಳೆಯುವವರೆಗೆ ಎಚ್ಚರಿಕೆಯಿಂದ ಹುಯಿ ನೀರನ್ನು ಹಾಕಬೇಕು. ಏಪ್ರಿಲ್ ತಿಂಗಳ ಸುಮಾರಿಗೆ 10-12 ಸೆಂಮೀ ಎತ್ತರದ ಸಸಿಗಳನ್ನು ಬೇರೆಪಾತಿಗಳಲ್ಲಿ 8 ಸೆಂಮೀ ಅಂತರದಲ್ಲಿ ನೆಡಬೇಕು. ಈ ಮಧ್ಯೆ ಪ್ಲಾಂಟೇಶನ್ ಮಾಡುವ ಜಾಗದಲ್ಲಿರುವ ಕುರುಚಲು ಇತ್ಯಾದಿ ಗಿಡಗಂಟೆಗಳನ್ನು ತೆಗೆದು ನೆಲ ಉಳಲು ಸಾಧ್ಯವಿದ್ದಲ್ಲಿ ಚೆನ್ನಾಗಿ ಉತ್ತು, 30 ಸೆಂಮೀ ಪ್ರಮಾಣದ ಗುಂಡಿಗಳನ್ನು 2 ಮೀ. ಅಂತರದಲ್ಲಿ ತೋಡಿಡಬೇಕು. ಜುಲೈ-ಆಗಸ್ಟ್ ತಿಂಗಳುಗಳ ಮಳೆಯಲ್ಲಿ 45 ಸೆಂಮೀ ಎತ್ತರ ಬೆಳೆದ ಸಸಿಗಳನ್ನು ಸಿದ್ಧಪಡಿಸಿದ ಗುಣಿಗಳಲ್ಲಿ ನೆಟ್ಟು ಕಾಪಾಡಬೇಕು. ಒಳನಾಡಿನಲ್ಲಿ ಸರಿಯಾಗಿ ಬೆಳೆದ ನೆಡುತೋಪಿನಲ್ಲಿ ಹದಿನೈದು ವರ್ಷಗಳಲ್ಲಿ ಎಕರೆಗೆ ಸುಮಾರು 30 ಟನ್ ಸೌದೆ ಒದಗುವುದು.

ಸರುವೆ ಮರ ಗಡುಸಾಗಿದ್ದು, ಹೆಚ್ಚು ಉಷ್ಣ ಜನಕಶಕ್ತಿಯುಳ್ಳದ್ದಾಗಿ ಸೌದೆಗೆ ಉತ್ಕøಷ್ಟವಾಗಿದೆ. ದಪ್ಪಮರಗಳು ಗಣಿಗಳಲ್ಲಿ (ಸರುವೆ) ಆನಿಕೆಗಳಿಗೂ ಹಾಗೂ ವಿದ್ಯುತ್ ಕಂಬಗಳಿಗೂ ತೆಪ್ಪಗಳಿಗೂ ಮನೆಕಟ್ಟುವ ಕೆಲಸಗಳಲ್ಲಿ ಒಡ್ಡುಗಳಾಗಿಯೂ ಉಪಯೋಗಕ್ಕೆ ಬರುತ್ತದೆ. (ಎ.ಕೆ.ಎಸ್.)