ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರೋಜಾದೇವಿ, ಬಿ

ಸರೋಜಾದೇವಿ, ಬಿ - ಕನ್ನಡ ಚಿತ್ರನಟಿ. ಚತುರ್ಭಾಷಾ ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದಶಾವರ ಗ್ರಾಮದ ಬಡಕುಟುಂಬದಲ್ಲಿ ಜನಿಸಿದರು. ಇವರಿಗೆ ಬಾಲ್ಯದಿಂದಲೇ ಲಲಿತಕಲೆಯಲ್ಲಿ ಆಸಕ್ತಿಯಿತ್ತು. ಹೊನ್ನಪ್ಪ ಭಾಗವತರ್ ಅವರ ಮಹಾಕವಿ ಕಾಳಿದಾಸ (1955) ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್, ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್, ಜೆಮಿನಿ ಗಣೇಶನ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮೀಕಪೂರ್, ಸುನಿಲ್‍ದತ್ - ಹೀಗೆ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಪ್ರಮುಖ ನಾಯಕನಟರೊಡನೆ ನಾಯಕಿಯಾಗಿ ಅಭಿನಯಿಸಿರುವ ಇವರು ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳ ಸಂಖ್ಯೆಯಲ್ಲಿ ಸಿಂಹಪಾಲು ತಮಿಳು ಚಿತ್ರಗಳದು. ಎಂ.ಜಿ. ರಾಮಚಂದ್ರನ್ ನಿರ್ದೇಶಿಸಿದ ಪ್ರಥಮ ಚಿತ್ರ ನಾಡೋಡಿ ಮನ್ನನ್ (1958) ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ ಇವರು ಎಂ.ಜಿ.ಆರ್. ಅವರ ಸತತ ಪ್ರೋತ್ಸಾಹದಿಂದ ತಮಿಳು ಚಿತ್ರರಂಗದ ಅತ್ಯಂತ ಪ್ರಮುಖ ತಾರೆಯಾದರು. ಎಂ.ಜಿ.ಆರ್. ಮತ್ತು ಬಿ. ಸರೋಜಾದೇವಿ ಜೋಡಿ ತಮಿಳಿನ ಅತ್ಯಂತ ಜನಪ್ರಿಯ ತಾರಾಜೋಡಿಯಾಯಿತು. ಭೀಮಸಿಂಗ್ ಅವರ ಪಾಲುಂಪಳಮುಂ ಹಾಗೂ ಶ್ರೀಧರ್ ಅವರ ಕಲ್ಯಾಣಪರಿಸು ತಮಿಳು ಚಿತ್ರಗಳಲ್ಲಿನ ಇವರ ಅಭಿನಯ ಸ್ಮರಣೀಯವಾದದ್ದು. ಎನ್.ಟಿ. ರಾಮರಾವ್ ನಿರ್ಮಿಸಿದ ಪಾಂಡುರಂಗ ಮಹಾತ್ಮೆಯ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ ಇವರು ಅಲ್ಲಿಯೂ ಹೆಸರು ಮಾಡಿದರು. ಜೆಮಿನಿಯ ಎಸ್. ವಾಸನ್ ಅವರ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಅಲ್ಲಿ ಹೆಚ್ಚು ಯಶಸಿಗಲಿಲ್ಲ.

ರಾಜಕುಮಾರ್ ಅವರೊಂದಿಗೆ ಇವರು ನಟಿಸಿದ ಭೂಕೈಲಾಸ (1958), ಅಣ್ಣ ತಂಗಿ (1958), ಜಗಜ್ಜ್ಯೋತಿ ಬಸವೇಶ್ವರ (1958), ಕಿತ್ತೂರು ಚೆನ್ನಮ್ಮ (1961) ಚಿತ್ರಗಳು ಅಪಾರ ಯಶಗಳಿಸಿದವು. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿನ ಇವರ ಅಭಿನಯ ಉತ್ತಮ ಮಟ್ಟದ್ದು. ಕನ್ನಡದ ಪ್ರಥಮ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿಯಲ್ಲಿ (1964) ನಾಯಕಿಯಾದ ಇವರು ಈ ಚಿತ್ರದ ತೆಲುಗು ಅವತರಣಿಕೆಯಲ್ಲಿಯೂ ಪಾತ್ರವಹಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕಥಾಸಂಗಮದ (ಕಿರುಚಿತ್ರಗಳ ಸಂಕಲನ, 1975) ಅತಿಥಿ ಚಿತ್ರದಲ್ಲಿ ಅವಿವಾಹಿತ ಮಧ್ಯವಯಸ್ಕ ಮಹಿಳೆಯ ಪಾತ್ರದಲ್ಲಿನ ಇವರ ಅಭಿನಯ ಮೆಚ್ಚುವಂಥದ್ದು.

ಸರೋಜಾದೇವಿಯವರು 1969ರಲ್ಲಿ ರಷ್ಯ ಸರ್ಕಾರದ ಆಮಂತ್ರಣದ ಮೇರೆಗೆ ರಷ್ಯದಲ್ಲಿ ನಡೆದ ನಾಲ್ಕನೆಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಕಳಕಳಿ ಇರುವ ಇವರು ತಮ್ಮ ಹುಟ್ಟಿದೂರಿನಲ್ಲಿ (ದಶಾವರ ಗ್ರಾಮ) ಶಾಲೆಯೊಂದನ್ನು ಕಟ್ಟಿಸಿದ್ದಾರೆ. ಇವರ ಕಲಾಸೇವೆಯನ್ನು ಗಮನಿಸಿ ಕೇಂದ್ರ ಸರ್ಕಾರ 1969ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಇತ್ತು ಗೌರವಿಸಿದೆ. ಈಗ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

(ಎಸ್.ಎಸ್.ಎಮ್.ಯು.)