ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ಕಾರ್, ಡಿ ಸಿ

ಸರ್ಕಾರ್, ಡಿ ಸಿ 1907-85. ಪ್ರಸಿದ್ಧ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ತಜ್ಞ. ವಿಶೇಷವಾಗಿ ಸಾತವಾಹನರನ್ನು ಕುರಿತಂತೆ ಆಳವಾದ ಅಧ್ಯಯನ ನಡೆಸಿದವರು. ಇವರ ವಿದ್ವತ್ ಪ್ರಯತ್ನಗಳಿಂದಾಗಿ ಪ್ರಾಚೀನ ಭಾರತೀಯ ಇತಿಹಾಸ, ಶಾಸನಶಾಸ್ತ್ರ ಮತ್ತು ನಾಣ್ಯಶಾಸ್ತ್ರ ಅಧ್ಯಯನಗಳು ಶ್ರೀಮಂತಗೊಂಡವು. ದಿನೇಶ್‍ಚಂದ್ರ ಸರ್ಕಾರ್ ಎಂಬುದು ಇವರ ಪೂರ್ಣ ಹೆಸರು. ಈಗಿನ ಬಾಂಗ್ಲಾದೇಶದಲ್ಲಿರುವ ಫರಿದ್‍ಪುರದ ಸಲ್ಕಥಿ ಕೃಷ್ಣಾನಗರ ಎಂಬ ಗ್ರಾಮದಲ್ಲಿ 1907ರಲ್ಲಿ ಜನಿಸಿದರು. ಫರಿದ್‍ಪುರದ ರಾಜೇಂದ್ರ ಕಾಲೇಜಿನಲ್ಲಿ ಅಧ್ಯಯನ ಮಾಡಿ ಸಂಸ್ಕøತದಲ್ಲಿ ಆನರ್ಸ್ ಪದವಿಯನ್ನು ಪಡೆದುಕೊಂಡರು (1929). ವಿದ್ಯಾರ್ಥಿದೆಸೆಯಲ್ಲೆ ಇವರು ಅಪಾರ ಸಂಖ್ಯೆಯ ಹಸ್ತಪತ್ರಿಗಳನ್ನು ಸಂಗ್ರಹಿಸಿದ್ದರು. ರಾಮಾನಂದರಾಯನ ಜಗನ್ನಾಥವಲ್ಲಭಂ ನಾಟಕಂ ಎಂಬ ಪ್ರಾಚೀನ ಬಂಗಾಲಿ ನಾಟಕವನ್ನು ಓದುವುದರಲ್ಲಿ ಯಶಸ್ವಿಯಾದ ಇವರು, ರಾಜೇಂದ್ರ ಕಾಲೇಜಿನ ಸಂಸ್ಕøತ ಪ್ರಾಧ್ಯಾಪಕರಾದ ಸತ್ಯ ಕಿಂಕರ್ ಮುಖ್ಯೋಪಾಧ್ಯಾಯರಿಂದ ಮೆಚ್ಚುಗೆ ಪಡೆದರು. ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕøತಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವಂತೆ ಅವರಿಂದ ಸಲಹೆ ಪಡೆದು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಶಾಸನಶಾಸ್ತ್ರ ಮತ್ತು ನಾಣ್ಯಶಾಸ್ತ್ರಗಳನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದುಕೊಂಡರು (1931).

ಅನಂತರ ಎಚ್.ಸಿ. ರಾಯ್‍ಚೌಧುರಿಯವರ ಸಲಹೆ ಮೇರೆಗೆ ದಕ್ಷಿಣ ಭಾರತದ ಪ್ರಾಚೀನ ಶಾಸನಗಳನ್ನು ಕುರಿತು ಸಂಶೋಧನೆಯ ಜೊತೆಗೆ ಭಂಡಾರ್ಕರ್‍ವರ ಖಾಸಗಿ ಗ್ರಂಥಾಲಯದಲ್ಲಿಯೂ ಎರಡು ವರ್ಷ ನಿರಂತರ ಅಧ್ಯಯನ ನಡೆಸಿದರು. ಪ್ರೇಮ್‍ಚಂದ್ ರಾಯ್‍ಚಂದ್ ವಿದ್ಯಾರ್ಥಿ ವೇತನ ಪಡೆದು ಪೂರ್ವ ದಖ್ಖನ್ನಿನ ಕೆಲವು ಅರಸು ಮನೆತನಗಳ ಅಧ್ಯಯನ ಕೈಗೊಂಡರು(1934). ಈ ಸಂಶೋಧನೆಗಾಗಿ ಮಾವುತ್ ಚಿನ್ನದ ಪದಕವನ್ನು ಪಡೆದುಕೊಂಡರು(1937). ಸಕ್ಸಸರ್ಸ್ ಆಫ್ ಸಾತವಾಹನಾಸ್ ಇನ್ ಲೋಯರ್ ಡೆಕ್ಕನ್ ಎಂಬ ವಿಷಯದಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು (1936).

1937ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕøತಿ ವಿಭಾಗದಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಅನಂತರ ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ಶಾಖೆಯಲ್ಲಿ ಸಹಾಯಕ ಅಧೀಕ್ಷಕರಾಗಿ(1949), ಭಾರತದ ಮುಖ್ಯ ಶಾಸನತಜ್ಞರಾಗಿ (1955) ಸೇವೆ ಸಲ್ಲಿಸಿದರು. ಎಪಿಗ್ರಾಫಿಯ ಇಂಡಿಕ ಸಂಪುಟಗಳೂ ಸೇರಿದಂತೆ ಅನೇಕ ವಿದ್ವತ್ ಗ್ರಂಥಗಳಲ್ಲಿ ಮಹತ್ತ್ವದ ಶಾಸನಗಳನ್ನು ಪ್ರಕಟಿಸಿದರು. ದಕ್ಷಿಣ ಭಾರತೀಯ ಶಾಸನಗಳನ್ನು ಪ್ರಕಟಿಸಲು ವ್ಯವಸ್ಥೆ ಮಾಡಿದರು, ಅನಂತರ ಕಲ್ಕತ್ತ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕøತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ(1961), ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು(1965-74).

ಇವರು ದೇಶ ವಿದೇಶಗಳ ಅನೇಕ ವಿದ್ವತ್ ಸಮ್ಮೇಳನಗಳಲ್ಲಿ ಭಾಗವಹಿಸಿ ಸಂಶೋಧನ ಲೇಖನಗಳನ್ನು ಮಂಡಿಸಿದ್ದಾರೆ. ಭಾರತೀಯ ಇತಿಹಾಸ ಕಾಂಗ್ರೆಸ್, ಭಾರತದ ನಾಣ್ಯ ಸಂಸ್ಥೆ, ಭಾರತದ ಶಾಸನಶಾಸ್ತ್ರ ಸಂಸ್ಥೆ ಹಾಗೂ ವಿವಿಧ ಪ್ರಾದೇಶಿಕ ಸಂಘ ಸಂಸ್ಥೆಗಳ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿದ್ದರು. ಇವರಿಗೆ ಕಲ್ಕತ್ತದ ಏಷ್ಯಾಟಿಕ್ ಸೊಸೈಟಿ, ಬ್ರಿಟನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿ ಮತ್ತು ರಾಯಲ್ ನ್ಯೂಮಿಸ್‍ಮ್ಯಾಟಿಕ್ ಸೊಸೈಟಿಗಳೊಂದಿಗೆ ನಿಕಟ ಸಂಪರ್ಕವಿತ್ತು. ಇವರು 35ಕ್ಕೂ ಹೆಚ್ಚು ಸ್ವಂತ ಕೃತಿಗಳನ್ನೂ 75 ಕ್ಕಿಂತಲೂ ಹೆಚ್ಚು ಸಂಪಾದಿತ ಕೃತಿಗಳನ್ನೂ 1200ಕ್ಕೂ ಹೆಚ್ಚು ಲೇಖನ, ಟಿಪ್ಪಣಿ, ವಿಮರ್ಶೆಗಳನ್ನೂ ಪ್ರಕಟಿಸಿದ್ದಾರೆ. ಇವರಿಗೆ ಭಾಷಾ ವಿಜ್ಞಾನ, ಸಾಹಿತ್ಯ, ಪುರಾತತ್ತ್ವ, ಮಾನವಶಾಸ್ತ್ರ ಮೊದಲಾದ ಅನೇಕ ಜ್ಞಾನಕ್ಷೇತ್ರಗಳಲ್ಲಿ ಆಳವಾದ ಪ್ರವೇಶವಿತ್ತು. ಇವರಿಗೆ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿದ್ದವು. ಇವರು 1985ರಲ್ಲಿ ನಿಧನರಾದರು. ಇವರ ನೆನಪಿಗಾಗಿ, ಇವರ ಹೆಸರಿನಲ್ಲಿ ಮೂರು ಸಂಸ್ಮರಣ ಗ್ರಂಥಗಳು ಪ್ರಕಟವಾಗಿವೆ. (ಸಿ.ಎಮ್.ಡಿ.)