ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ಪಸುತ್ತು

ಸರ್ಪಸುತ್ತು ಹರ್ಪಿಸ್ ವಿರಿಡೆ ವಂಶಕ್ಕೆ ಸೇರಿರುವ ವೈರಸ್ ಮೂಲಕ ವ್ಯಕ್ತಿಯ ಚರ್ಮಕೋಶಗಳಲ್ಲಿ ಹರಡುವ ರೋಗ (ಹರ್ಪಿಸ್). ಈ ವೈರಸಿನಲ್ಲಿ ಎರಡು ತಂತುಗಳೂ ಇವನ್ನು ಆವರಿಸಿರುವ ಡಿಎನ್‍ಎ ಹೊದಿಕೆಯೂ ಇವೆ. ಇದೊಂದು ಸರ್ವವ್ಯಾಪೀ ಸೋಂಕುರೋಗ. ಸೋಂಕು ತಗಲಿದ 2-20 ದಿವಸಗಳಲ್ಲಿ ವ್ಯಾಧಿಚಿಹ್ನೆಗಳು ಪ್ರಕಟವಾಗುತ್ತವೆ.

ರೋಗದಲ್ಲಿ ಎರಡು ಬಗೆಗಳಿವೆ: ಎಚ್‍ಎಸ್‍ವಿ-1 ಸೋಂಕು, ಎಚ್‍ಎಸ್‍ವಿ-2 ಸೋಂಕು. ಮೊದಲನೆಯದು ಸಾಧಾರಣವಾಗಿ ತುಟಿ, ಬಾಯಿ ಮತ್ತು ವಸಡುಗಳಲ್ಲಿ ಹುಣ್ಣುಗಳನ್ನುಂಟುಮಾಡುತ್ತದೆ. ರೋಗಿಯ ಜೊತೆ ಸಂಪರ್ಕ, ಆತನ ಬಟ್ಟೆಬರೆಯ ಉಪಯೋಗ, ಹುಣ್ಣುಗಳ ಸ್ರಾವದ ಸ್ಪರ್ಶ ಮುಂತಾದವು ರೋಗ ಅಂಟುವ ವಿಧಗಳು. ಎಚ್‍ಎಸ್‍ವಿ-2ರಿಂದ ಪರಿಣಮಿಸುವ ಹುಣ್ಣುಗಳು ಸೇಕಡಾ 60-70 ಭಾಗ ರೋಗಿಯ ಪ್ರಜನನಾಂಗಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಮತ್ತೆ ಸೇ. 15-20 ಭಾಗದಷ್ಟು ಹುಣ್ಣುಗಳು ಎಚ್‍ಎಸ್‍ವಿ-1ರಿಂದಲೂ ಉಂಟಾಗಬಹುದು. ಈ ಹುಣ್ಣುಗಳ ಜೊತೆಗೆ ಮೈಉರಿತ, ಮೂತ್ರದಲ್ಲಿ ಉರಿ, ಯೋನಿಸ್ರಾವ, ತೊಡೆಸಂದಿಯ ದುಗ್ಧ ಗ್ರಂಥಿಗಳ ಉರಿಯೂತ, ಜ್ವರ, ಇರಸುಮುರಸು ಮುಂತಾದವು ಪ್ರಕಟವಾಗಬಹುದು. ಕಣ್ಣಿಗೆ ಸೋಂಕು ತಗಲಿದರೆ ಆದ್ರ್ರಚರ್ಮ ಮತ್ತು ಕಾರ್ನಿಯಗಳ ಉರಿಯೂತಗಳು ತಲೆದೋರುತ್ತವೆ. ಬೆರಳ ತುದಿಗಳಲ್ಲಿ ಹುಣ್ಣುಗಳು ಕಂಡುಬಂದರೆ ಅದು ಹರ್ಪಿಟಿಕ್ ವಿಟ್ಲೋ (ಉಗುರುಸುತ್ತು) ಎಂಬ ರೋಗ. ಹರ್ಪಿಸ್ ಸೋಂಕಿನಿಂದ ಮಿದುಳಿನ ಉರಿಯೂತ (ಎನ್ಸೆಫಲೈಟಿಸ್) ಬರಬಹುದು. ದೇಹದ ಯಾವುದೇ ಭಾಗಕ್ಕೆ ಲಕ್ವ ಬಡಿಯಬಹುದು. ಕ್ರೀಡಾಪಟುಗಳಲ್ಲಿ ನಿಕಟ ದೇಹಸಂಪರ್ಕದಿಂದ (ಉದಾಹರಣೆ ಕುಸ್ತಿ) ಸೋಂಕು ಹರಡುತ್ತದೆ.

ನವಜಾತಶಿಶುವಿಗೆ ತಾಯಿಯ ಜನನಾಂಗದಿಂದ ಹರ್ಪಿಸ್ ಸೋಂಕು ತಗಲುತ್ತದೆ. ಈ ಸೋಂಕು ಇರುವವರು ಮಗುವನ್ನು ಮುದ್ದಾಡುವಾಗ ಅಥವಾ ಅದು ಬೆಳೆದಂತೆ ಇತರ ಮಕ್ಕಳೊಡನೆ ಆಡುವಾಗ ಸೋಂಕು ಹರಡುತ್ತದೆ. ಆದರೂ ಸಾಧಾರಣವಾಗಿ ನವಜಾತ ಶಿಶುಗಳಿಗೆ ಈ ರೋಗ ಅಂಟುವ ಸಂಭವ ವಿರಳ - ಸು. 3000-20,000ದಲ್ಲಿ ಕೇವಲ 1. ಸರ್ಪಸುತ್ತು ರೋಗಕ್ಕೆ ಪೂರ್ಣ ಚಿಕಿತ್ಸೆ ಇಲ್ಲ.

ಹ್ಯೂಮನ್ ಹರ್ಪಿಸ್ ವೈರಸ್-6 ಎಂಬುದು ಹೊಸತಾಗಿ ಗುರುತಿಸಲಾಗಿರುವ ವೈರಸ್. ಇದು 3-4 ವರ್ಷಗಳೊಳಗಿನ ಮಕ್ಕಳಲ್ಲಿ ರೋಸಿಯೋಲ ಇನ್‍ಫೇಂಟಮ್ ಅಥವಾ ಎಕ್ಸಾಂಥೀಮ ಸವಿಟಂ ಎಂಬ ರೋಗವನ್ನು ಉಂಟುಮಾಡುತ್ತದೆ. ಮಾರಕವಲ್ಲ. ಯುಕ್ತ ಚಿಕಿತ್ಸೆ ಮತ್ತು ಉಪಚಾರ ನೀಡಿದರೆ 3-5 ದಿವಸಗಳ ಒಳಗೆ ಶಮನವಾಗುತ್ತದೆ.

(ಸಿ.ಎಸ್.ಕೆ.ಎ.)