ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ವತ್ರಾಧಿಕಾರ ರಾಜ್ಯತತ್ತ್ವ

ಸರ್ವತ್ರಾಧಿಕಾರ ರಾಜ್ಯತತ್ತ್ವ

ಅನಾಗರಿಕ, ದಮನ ಪ್ರವೃತ್ತಿಯ ಒಂದು ಒಡೆಯಸರ್ಕಾರ. (ಟೊಟಲಿಟೇರಿಯನಿಸಮ್) ಈ ಸರ್ಕಾರದಲ್ಲಿ ಪ್ರಜೆಗಳ ಜೀವಕ್ಕೆ ರಕ್ಷಣೆಯಾಗಲಿ, ಬೆಲೆಯಾಗಲಿ ಇರುವುದಿಲ್ಲ. ಪ್ರಜೆಗಳಿಗೆ ಇಲ್ಲಿ ಆಯ್ಕೆಮಾಡಿಕೊಳ್ಳುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿಲ್ಲ.

ಸರ್ವತ್ರಾಧಿಕಾರ ಸರ್ಕಾರವುಳ್ಳ ದೇಶದಲ್ಲಿ ಒಂದೇ ಒಂದು ರಾಜಕೀಯ ಪಕ್ಷದ ಆಡಳಿತವಿರುತ್ತದೆ. ಒಬ್ಬ ಸರ್ವಾಧಿಕಾರಿ ಇದರ ಮುಖ್ಯಸ್ಥ. ಈತ ತನ್ನ ರಾಜಕೀಯ ಬೆಂಬಲಿಗರ ಬೆಂಬಲದಿಂದ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ರೂಪರೇಷೆಗಳನ್ನು ತಮಗನುಕೂಲವಾಗು ವಂತೆ ರೂಪಿಸುತ್ತಾನೆ. ಆಡಳಿತಕ್ಕೆ ಯಾರೂ ಅಡ್ಡಬರುವಂತಿಲ್ಲ, ದೋಷಾ ರೋಪಣೆ ಮಾಡುವಂತಿಲ್ಲ. ಅಲ್ಲಿ ಯಾವುದೇ ಬಗೆಯ ಸಂಘಸಂಸ್ಥೆಗಳು ಇರುವುದಿಲ್ಲ, ಇರಲೂ ಬಿಡುವುದಿಲ್ಲ. ಅಲ್ಲಿನ ಸರ್ಕಾರದ ಧೋರಣೆಯನ್ನು, ನೀತಿ ರೀತಿಯನ್ನು ಬೆಂಬಲಿಸುವ ಸಂಘಸಂಸ್ಥೆಗಳೂ ರಾಜಕೀಯ ಪಕ್ಷವೂ ಇರಬಹುದು. ಇದ್ದರೂ ಅದು ಏಕೈಕ ಪಕ್ಷವಾಗಿರುತ್ತದೆ.

ಸರ್ವಾಧಿಕಾರಿಯ ಆಳಿಕೆಯುಳ್ಳ ದೇಶದಲ್ಲಿ ಅಲ್ಲಿನ ಸರ್ಕಾರವನ್ನು ಬೆಂಬಲಿಸದವರನ್ನು ಮಣಿಸಲು, ದಂಡಿಸಲು ಉಗ್ರಕ್ರಮಗಳನ್ನು ಅನುಸರಿಸಲಾಗುವುದು. ಈ ಭಯಾನಕ ಕೃತ್ಯಗಳಿಗೆ ದೇಶದ ಗುಪ್ತ ಪೊಲೀಸ್ ದಳವನ್ನೂ ಆಜ್ಞಾಧಾರಕರಾದ ಸೈನಿಕ ಪಡೆಯನ್ನೂ ಬಳಸಿಕೊಳ್ಳಲಾಗುವುದು. ಸಮೂಹ ಸಂಪರ್ಕ ಮಾಧ್ಯಮಗಳೆಲ್ಲ (ಪತ್ರಿಕೆ, ರೇಡಿಯೊ, ಟಿ.ವಿ., ಸಾಹಿತ್ಯ ಇತ್ಯಾದಿ) ಸರ್ಕಾರದ ಪರಿಶೀಲನೆಗೆ ಒಳಪಡುವಂತಿದ್ದು ಸಂಪೂರ್ಣವಾಗಿ ಅಧಿಕಾರಿಗಳ ಹಿಡಿತದಲ್ಲಿರುತ್ತವೆ. ಶಾಲೆಗಳಲ್ಲಿ ಬೋಧನೆ ದೇಶದ ಆಡಳಿತದ ನೀತಿಗನುಗುಣವಾಗಿರುತ್ತದೆ. ದೇಶದ ಆರ್ಥಿಕ ನೀತಿ ಸಂಪೂರ್ಣ ಈ ಸರ್ಕಾರದ ಹಿಡಿತದಲ್ಲಿದ್ದು, ಕಾರ್ಖಾನೆಗಳು, ನೌಕರವರ್ಗ, ಕೃಷಿ ಮತ್ತು ಬೇಸಾಯಗಾರರು ಎಲ್ಲರೂ ಗುಲಾಮರಂತೆ ದುಡಿಯಬೇಕು. ಕಾರ್ಖಾನೆಗಳಲ್ಲಿನ ಯಾವುದೇ ಉತ್ಪಾದನೆ, ರೈತರು ಬೆಳೆಯುವ ಬೆಳೆಗಳನ್ನು ಸರ್ಕಾರವೇ ನಿರ್ಧರಿಸುತ್ತದೆ.

ಇತಿಹಾಸದಲ್ಲಿ ಈ ಬಗೆಯ ಸರ್ವಾಧಿಕಾರ ಇಟಲಿಯ ಫ್ಯಾಸಿಸಂ, ಜರ್ಮನಿಯ ನಾಜಿóಸಂ ಮತ್ತು ರಷ್ಯದ ಸ್ಟಾಲಿನ್‍ಕಾಲದ ಕಮ್ಯೂನಿಸಂ ರೂಪದಲ್ಲಿ ಬಂದು ಆಡಳಿತ ನಡೆಸಿದ್ದನ್ನು ಉದಾಹರಿಸಬಹುದು.

ಇಂದಿನ ತೀವ್ರಗಾಮಿಗಳ ದೃಷ್ಟಿಯಲ್ಲಿ ಬಂಡವಾಳಶಾಹಿ ಧೋರಣೆಗೆ ಆದ್ಯತೆ ನೀಡುವುದರಿಂದ ವ್ಯಕ್ತಿಸ್ವಾತಂತ್ರ್ಯಕ್ಕೆ ಚಿಕ್ಕಾಸಿನ ಪ್ರಯೋಜನವೂ ಇಲ್ಲ; ಎಲ್ಲರಿಗೂ ಸುಖಜೀವನಕ್ಕೆ ಸಮಾನ ಹಕ್ಕುಂಟು; ಸಮತ್ವ ಸಾಧನೆಯೇ ಮುಖ್ಯ ಗುರಿ; ಇದಕ್ಕಾಗಿ ಸರ್ಕಾರ ಯಾವ ವಿಷಯದಲ್ಲಾದರೂ ಪ್ರವೇಶಿಸಬಹುದು. ಉತ್ಕøಷ್ಟ ವ್ಯವಸ್ಥೆಯಲ್ಲಿ ಸಮಾಜ ಬೇರೆಯಲ್ಲ, ಸರ್ಕಾರ ಬೇರೆಯಲ್ಲ; ಇವೆರಡೂ ಒಂದೇ ವಸ್ತುವಿನ ರೂಪಾಂತರಗಳು. ಸರ್ಕಾರದ ಕರ್ತವ್ಯ ಸರ್ವವ್ಯಾಪಕವಾಗಿ ಆರ್ಥಿಕ, ಸಾಮಾಜಿಕ, ನೈತಿಕ, ಧಾರ್ಮಿಕ ಎಲ್ಲ ವಿಷಯಗಳಲ್ಲೂ ಧ್ಯೇಯವೇನು, ಇದರ ಸಾಧನೆ ಹೇಗೆ, ಎಂಬುದನ್ನೆಲ್ಲ ನಿರ್ಧರಿಸಿ ಎಲ್ಲರೂ ಸರ್ಕಾರ ರೂಪಿಸಿದ ಕಾಯಿದೆ ಕಟ್ಟಳೆಗೆ ಅಧೀನವಾಗಿ ವರ್ತಿಸುವಂತೆ ಮಾಡುವುದು ಇವೇ ಸರ್ವತ್ರಾಧಿಕಾರ ರಾಜ್ಯತತ್ತ್ವದ ಲಕ್ಷಣಗಳು.

ಈ ತತ್ತ್ವಾಧಾರ ವ್ಯವಸ್ಥೆಯ ಮುಖ್ಯಾಂಶಗಳು: 1. ನಿರ್ಣಿತವಾದ ಧ್ಯೇಯ 2. ಧ್ಯೇಯವನ್ನು ನಿರ್ಣಯಿಸಿ ಸಮುದಾಯವನ್ನು ಋಜುಮಾರ್ಗ ದಲ್ಲಿ ಕರೆದೊಯ್ಯಲು ಒಬ್ಬ ಸರ್ವಾಧಿಕಾರವುಳ್ಳ ಮಹಾನಾಯಕ ಅಥವಾ ಪಕ್ಷ. 3. ಧ್ಯೇಯ ಸಾಧನೆಗಾಗಿ ಸರ್ಕಾರ ನಿರೂಪಿಸಿದ ಕಟ್ಟಳೆಗೆ ಪ್ರತಿಯೊಬ್ಬ ಪ್ರಜೆಯ ಒಪ್ಪಿಗೆ. 4. ವಾಕ್ ಸ್ವಾತಂತ್ರ್ಯ, ಭಿನ್ನಾಭಿಪ್ರಾಯ, ವಿರೋಧ ಪಕ್ಷಗಳಿಗೆ ಸ್ಥಾನವಿಲ್ಲ. ಗೌರವದ, ವ್ಯಕ್ತಿತ್ವದ ಅಭಿವ್ಯಕ್ತಿಗೆ ಅವಕಾಶವಿಲ್ಲ.

ಈ ತತ್ತ್ವದ ನಿರಂಕುಶಾಧಿಕಾರ ಸಿದ್ಧಾಂತವನ್ನು ಪ್ಲೇಟೊವಿನ ರಿಪಬ್ಲಿಕ್ ಗ್ರಂಥದಲ್ಲಿಯೂ ಹೇಳಿದೆ. ಕೆಲವು ಪ್ರಸಂಗಗಳಲ್ಲಿ ಜನ ಈ ಸಿದ್ಧಾಂತದ ಕಡೆ ವಾಲಿದುದಕ್ಕೆ ನಿದರ್ಶನಗಳುಂಟು. ಪ್ರಾಚೀನ ಗ್ರೀಸಿನ ಸ್ಪಾರ್ಟನಗರದ ಸಾಮಾಜಿಕ ವ್ಯವಸ್ಥೆ ಈ ತರಹದ್ದಾಗಿತ್ತು. ಫ್ರಾನ್ಸಿನ ಮಹಾಕ್ರಾಂತಿಯ ಕಾಲದಲ್ಲಿ ಸರ್ವತೋಮುಖ ಮಾರ್ಪಾಟು ಮಾಡುವ ಹುಮ್ಮಸ್ಸಿನಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆ ಬಂದು ನಿರಂಕುಶ ಪ್ರಭುತ್ವವಲ್ಲದೆ ಬಹುಮಟ್ಟಿಗೆ ಸರ್ವತ್ರಾಧಿಕಾರವೂ ಏರ್ಪಟ್ಟಿತ್ತು.

ಇತ್ತೀಚಿನ ಕೆಲವು ದಶಕಗಳಲ್ಲಿ ನವಯುಗದ ಜೀವನಕ್ರಮ ಸಂಪೂರ್ಣವಾಗಿ ಬೇರೆಯಾಗಿದೆ. ಇದರ ಹಿನ್ನೆಲೆಯಲ್ಲಿ ಸರ್ಕಾರ ಯಾವ ಬಗೆಯದೇ ಆಗಲಿ, ಅಧಿಕಾರ ಹೆಚ್ಚು ಕೇಂದ್ರಿತವಾಗಿದೆ ಮತ್ತು ನಿರಂಕುಶವಾಗಿದೆ; ಸರ್ಕಾರ ಎಲ್ಲ ವಿಷಯಗಳಲ್ಲೂ ಪ್ರವೇಶಿಸುತ್ತಿದೆ. ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿ ದಿನೇ ದಿನೇ ಸಂಕುಚಿತವಾಗುತ್ತಿದೆ. ಬೆಲೆ, ಕೂಲಿಗಳಿಗೆ ಸಂಬಂಧಿತ ಶಾಸನಗಳು, ರೇಷನಿಂಗ್ ವ್ಯಾಪಾರ, ಕಸುಬು, ಕೈಗಾರಿಕೆ ಲೈಸೆನ್ಸ್‍ಗಳು, ಸರ್ಕಾರಿ ಕಾರ್ಖಾನೆ, ಬ್ಯಾಂಕ್, ಮಳಿಗೆಗಳು ಇವುಗಳನ್ನು ನೋಡಿದರೆ ಸರ್ಕಾರದ ವ್ಯಾಪ್ತಿ ಸರ್ವತೋಮುಖತ್ವ ವ್ಯಕ್ತವಾಗುತ್ತದೆ. ಸರ್ವತ್ರ ವ್ಯಾಪಕವಾದ ಪ್ರಜಾರಾಜ್ಯಕ್ಕೂ ಸರ್ವತ್ರಾಧಿಕಾರ ರಾಜ್ಯಕ್ಕೂ ಇರುವ ವ್ಯತ್ಯಾಸ ದೃಷ್ಟಿಪಥದಲ್ಲಿ, ಇಂಗಿತದಲ್ಲಿ ಮಾತ್ರ. ಪ್ರಜಾರಾಜ್ಯದ ಮುಖ್ಯ ಉದ್ದೇಶ ವ್ಯಕ್ತಿ ಹಾಗೂ ವರ್ಗಗಳ ಸ್ವಾತಂತ್ರ್ಯವನ್ನು, ನಿರುಪಾಧಿಕವಾಗಿ ಜೀವಿಸುವ ಹಕ್ಕನ್ನು ರಕ್ಷಿಸುವುದು. ಸರ್ವತ್ರಾಧಿಕಾರ ಸರ್ಕಾರ ತನ್ನ ಧ್ಯೇಯ ಸಾಧನೆಗೆ ವ್ಯಕ್ತಿ, ವರ್ಗಗಳನ್ನು ಬಲಿಕೊಟ್ಟು ಮುಂದುವರಿಯುವುದು.

ಯಾವ ದೇಶಕಾಲಗಳಲ್ಲೂ ಜನ ತಮ್ಮ ಅಭಿಲಷಿತ ಮಾರ್ಗವನ್ನು ಬಿಟ್ಟು ನಿರ್ಬಂಧಕ್ಕೆ ಅಷ್ಟು ಸುಲಭವಾಗಿ ಒಳಪಡುವುದಿಲ್ಲ. ನಿರಂಕುಶತ್ವ ಸರ್ವತ್ರಾಧಿಕಾರ ದೇಶದ ತುರ್ತುಪರಿಸ್ಥಿತಿಯ ಸಂದರ್ಭದ ಸೃಷ್ಟಿ. ಇಂಥ ಸಂದರ್ಭಗಳಲ್ಲಿ ಆಳರಸರ ಯತ್ನ ಜನರ ಬಾಹ್ಯಪ್ರವೃತ್ತಿಯನ್ನು ಕಟ್ಟುಪಡಿಸುವುದು ಮಾತ್ರವಲ್ಲ, ಅವರ ಮನಸ್ಸಿನ ಪ್ರವೃತ್ತಿಗಳನ್ನೂ ತಮ್ಮ ದೃಷ್ಟಿಗೆ ಸರಿಹೋಗುವಂತೆ ಮಾರ್ಪಡಿಸಲು ಹೆಣಗುವುದಾಗಿರು ತ್ತದೆ. ಇದರ ವ್ಯಾಪ್ತಿ ಅಲೌಕಿಕವಾದ ಧಾರ್ಮಿಕ ವಿಷಯಗಳು, ನೈತಿಕಜೀವನ, ಕಲೆ, ಸಾಹಿತ್ಯ ಇವುಗಳ ಮೇಲೂ ಗಾಢವಾದದ್ದು. ಆದರೆ ಈ ಬಗೆಯ ಸರ್ಕಾರಗಳು ಹೆಚ್ಚು ಕಾಲ ಬಾಳಲಾರವು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. (ಎಸ್.ವಿ.ಡಿ.)