ಸಲಕ ವಿಜಯನಗರದ ತುಳುವ ವಂಶದ ಅರಸ ಅಚ್ಯುತರಾಯನ ಪ್ರಭಾವೀ ಸಾಮಂತ. ವರದಾಂಬಿಕಾಪರಿಣಯ ಎಂಬ ಗ್ರಂಥದ ಪ್ರಕಾರ ಅಚ್ಯುತರಾಯನ ರಾಣಿ ವರದಾಂಬಿಕೆಗೆ ಪೆದ್ದ ಸಲಕ ತಿರುಮಲರಾಯ ಮಹಾಅರಸು ಮತ್ತು ಪಿನ (ಚಿನ್ನ) ಸಲಕ ತಿರುಮಲರಾಯ ಮಹಾ ಅರಸು ಎಂಬ ಇಬ್ಬರು ಸಹೋದರರಿದ್ದರು. ರಾಜನ ಭಾವಮೈದುನರಾದು ದರಿಂದ ಇವರ ಪ್ರಭಾವ ಹೆಚ್ಚಾಗಿದ್ದಿತು. ಅದರಲ್ಲೂ ಸಲಕ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದ. ಈತ ಸಾಳುವ ದಣ್ಣಾಯಕನ ಸ್ಥಾನದಲ್ಲಿ ಮಂತ್ರಿಯಾದ. ತಿರುವಡಿ ದಂಡಯಾತ್ರೆಯ ಮುಖಂಡತ್ವ ವಹಿಸಿದ್ದ ಸಲಕ ಅಥವಾ ಸಲಗ ಇವನೇ ಇರಬೇಕು. ಒಂದು ಶಾಸನ ಈತನನ್ನು ಮಹಾಮಂಡಲೇಶ್ವರ ಕುಮಾರರ್ ಜಲಕಯ-ತಿರುಮಲೈಯ ದೇವ ಮಹಾರಾಜ ಎಂದು ಹೆಸರಿಸುತ್ತದೆ. ತನ್ನ ಭಾವಮೈದುನನಾದುದರಿಂದ ರಾಜನು ಈತನನ್ನು ಮಗನ ಹಾಗೆಯೇ ಕಂಡು ಸಾಮ್ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಕೊಟ್ಟಿದ್ದುದರಿಂದ ಇವನನ್ನು ಕುಮಾರ ಎಂದು ಸಂಬೋಧಿ ಸಲಾಗುತ್ತಿದ್ದಿತೆಂದು ಕಾಣುತ್ತದೆ. ಸಲಕ ಚಿಂಗಲಪಟ್ಟು ಪ್ರದೇಶದ ಪ್ರಾಂತ್ಯಾಧಿಕಾರಿಯಾಗಿದ್ದ. ಈತ ಹಂಪೆಯಲ್ಲಿ ತಿರುವೇಂಗಲನಾಥ ದೇವಾಲಯವನ್ನು ಕಟ್ಟಿಸಿ, ಅಮೂಲ್ಯ ಕಾಣಿಕೆಗಳನ್ನೂ ತಿರುವಾಂಕೂರಿನ ಒಂದು ಗ್ರಾಮವನ್ನೂ ಅದಕ್ಕೆ ಕೊಟ್ಟ. 1535ರ ಒಂದು ಶಾಸನದಲ್ಲಿ ಪೆದ್ದ ಸಲಕನನ್ನು ಪ್ರಧಾನ ತಿರುಮಲರಾಜನೆಂದು ಕರೆಯಲಾಗಿದೆ. ಸಲಕನ ಸಹೋದರ ಪಿನ ಸಲಕ ಉದಯಗಿರಿ ಪ್ರಾಂತದ ಅಧಿಕಾರಿಯಾಗಿದ್ದ. (ಎ.ವಿ.ವಿ.)