ಸಳ ಹೊಯ್ಸಳ ಸಂತತಿಯ ಮೂಲಪುರುಷ. ಕೆಲವು ಶಾಸನಗಳ ಪ್ರಕಾರ ಇವನು ಶಶಕಪುರದ (ಈಗಿನ ಅಂಗಡಿ, ಚಿಕ್ಕಮಗಳೂರು ಜಿಲ್ಲೆ) ಜೈನಮುನಿ ಸುದತ್ತಾಚಾರ್ಯರ ಶಿಷ್ಯನಾಗಿದ್ದ. ಅಲ್ಲಿನ ವಾಸಂತಿಕಾ ದೇವಿಯ ದೇವಾಲಯದಲ್ಲಿ ಒಂದು ದಿನ ಸುದತ್ತಾಚಾರ್ಯರು ಪೂಜೆಯಲ್ಲಿ ತೊಡಗಿರುವಾಗ ಹುಲಿಯೊಂದು ಹಾರಿ ಬಂತು. ಮುನಿ ತಮ್ಮ ಕೈಯಲ್ಲಿದ್ದ ಕುಂಚವನ್ನು ಶಿಷ್ಯನ ಕೈಗಿತ್ತು ಅದಂ ಪೊಯ್ ಸಳ ಎಂದು ಅಪ್ಪಣೆ ಮಾಡಿದರು. ಸಳ ಧೈರ್ಯದಿಂದ ಹುಲಿಯ ಮೇಲೆರಗಿ ಅದನ್ನು ಕೊಂದ. ಆ ಮುನಿ ಸಳನ ಧೈರ್ಯ, ಸಾಹಸಗಳಿಗೆ ಮೆಚ್ಚಿ ಅವನು ರಾಜನಾಗುವಂತೆ ವಾಸಂತಿಕಾದೇವಿಯಿಂದ ವರ ಪಡೆದು ಅನುಗ್ರಹಿಸಿದರು. ಸುದತ್ತಾಚಾರ್ಯರು ಅಪ್ಪಣೆ ಕೊಡಿಸಿದಂತೆ ಹೊಯ್ಸಳ ಎಂಬ ಹೆಸರಿನಿಂದ ಸಳ ರಾಜನಾದ. ಅವನ ಸಂತತಿಗೆ ಹೊಯ್ಸಳ ಎಂದು ಹೆಸರಾಯಿತು. ಹಳೇಬೀಡಿನ ಕೈಫಿಯತ್ತಿನ ಪ್ರಕಾರ ಸೊಸೆವೂರಿನ ವಾಸಂತಿಕಾ ದೇವತೆಯ ಜಾತ್ರೆ ಪ್ರತಿವರ್ಷವೂ ವಿಜೃಂಭಣೆಯಿಂದ ವಸಂತಕಾಲದಲ್ಲಿ ನಡೆಯುತ್ತಿತ್ತು. ಸುತ್ತುಮುತ್ತಲಿನ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಅಲ್ಲಿ ನೆರೆಯುತ್ತಿದ್ದರು. ಕ್ರಮೇಣ ಒಂದು ಕ್ರೂರ ಹುಲಿ ಅಲ್ಲಿ ವಾಸಿಸತೊಡಗಿ ಜನರಿಗೆ ಉಪದ್ರವ ಕೊಡತೊಡಗಿತು. ಹುಲಿಯ ಉಪದ್ರವವನ್ನು ನಿರ್ಮೂಲ ಮಾಡುವ ಧೀರವ್ಯಕ್ತಿಗೆ ಅಲ್ಲಿ ಸೇರಲಿದ್ದ ಭಕ್ತಾದಿಗಳು ತಲಾ ಒಂದು ಪಣವನ್ನು ಕಾಣಿಕೆಯಾಗಿ ಕೊಡುವುದಾಗಿ ಒಪ್ಪಂದ ಮಾಡಿಕೊಂಡರು. ಸಳ ಹುಲಿಯನ್ನು ಕೊಂದ. ಸಂಪ್ರೀತರಾದ ಜನ ತಮ್ಮ ಒಪ್ಪಂದದ ಪ್ರಕಾರ ಅವನಿಗೆ ಕಾಣಿಕೆ ಸಲ್ಲಿಸಿದರು. ಸಳ ಈ ಕಾಣಿಕೆಯನ್ನು ಹಲವು ವರ್ಷಗಳು ತನ್ನ ಗುರುವಿನ ಬಳಿಯಲ್ಲಿ ಶೇಖರಿಸಿಟ್ಟು ಅನಂತರ ಒಂದು ಸೈನ್ಯವನ್ನು ಕಟ್ಟಿ ಸುತ್ತುಮುತ್ತಲಿನ ಪ್ರದೇಶವನ್ನು ಗೆದ್ದು ರಾಜನಾದ.
ಇನ್ನೊಂದು ಶಾಸನದಲ್ಲಿ ಯೋಗೀಂದ್ರನೊಬ್ಬ ವಾಸಂತಿಕಾದೇವಿಯನ್ನು ವಶಪಡಿಸಿಕೊಳ್ಳಲು ಪೂಜಾದಿಗಳಲ್ಲಿ ನಿರತನಾಗಿದ್ದಾಗ, ಇವನ ಕ್ರಿಯೆಯನ್ನು ಮುರಿಯಲು ದೇವಿಯೇ ವ್ಯಾಘ್ರ ರೂಪದಲ್ಲಿ ಬಂದಳು ಎಂದು ಹೇಳಿದೆ. ಇನ್ನು ಕೆಲವು ಶಾಸನಗಳ ಪ್ರಕಾರ ಸಳ ಕೊಂದದ್ದು ವ್ಯಾಘ್ರವಲ್ಲ, ಶಾರ್ದೂಲ. ಕೆಲವು ಶಾಸನಗಳಲ್ಲಿ ಹುಲಿಯನ್ನು ಭರ್ಜಿಯಿಂದ ಕೊಂದ ಎಂದು ಹೇಳಿದರೆ, ಇನ್ನು ಕೆಲವು ಜೈನಮುನಿಯ ಕುಂಚದಿಂದ ಅಥವಾ ಒಂದು ಕಡ್ಡಿಯಿಂದ ಎಂದೆಲ್ಲ ತಿಳಿಸುತ್ತವೆ. ಇವೆಲ್ಲವನ್ನೂ ಗಮನಿಸಿದಲ್ಲಿ ಈ ಸಳನ ವೃತ್ತಾಂತ ಕೇವಲ ಕಟ್ಟುಕಥೆ ಎಂದು ತೋರುತ್ತದೆ. ಈ ಎಲ್ಲ ಕಥೆಗಳೂ ಹೊಯ್ಸಳರ ಸಾಮ್ರಾಜ್ಯ ಭದ್ರವಾಗಿ ನೆಲೆನಿಂತ ಮೇಲೆ ಅಂದರೆ 1116ರ ಅನಂತರದ ಶಾಸನಗಳ ಲ್ಲಷ್ಟೇ ಕಂಡುಬರುವುದು ಗಮನಾರ್ಹ.
ಸಳನ ಕಾಲದ ನಿರ್ದಿಷ್ಟ ಶಾಸನಗಳು ದೊರೆತಿಲ್ಲ. ಅವನು ಐತಿಹಾಸಿಕ ವ್ಯಕ್ತಿಯೇ ಎಂಬುದೂ ಅನುಮಾನಾಸ್ಪದ. ಹಲವು ಶಾಸನ ಗಳನ್ನು ಹೊರಡಿಸಿರುವ ನೃಪಕಾಮನೇ ಸಳ, ವಿನಯಾದಿತ್ಯ ಇವನ ಮಗ ಮತ್ತು ಇವನ ಆಳಿಕೆಯ ಕಾಲ 983-84 ಇತ್ಯಾದಿಯಾಗಿ ಕೆಲವು ವಿದ್ವಾಂಸರು ಬಹಳ ಶಿಥಿಲ ಆಧಾರಗಳನ್ನಿಟ್ಟುಕೊಂಡು ಊಹೆ ಮಾಡಿದ್ದಾರೆ. ಕುರುಡಿಹಳ್ಳಿ ಮತ್ತು ಕಣಚೂರು ಶಾಸನಗಳಲ್ಲಿ ಉಲ್ಲೇಖಿಸ ಲಾಗಿರುವ ಹೊಯ್ಸಳನು ಸಳನೇ ಎಂಬುದು ದಿವಂಗತ ಹುಲ್ಲೂರು ಶ್ರೀನಿವಾಸ ಜೋಯಿಸರ ಅಭಿಪ್ರಾಯ.
ಸಳ (ಶಾರ್ದೂಲ) ಹುಲಿಯನ್ನು ಕೊಲ್ಲುತ್ತಿರುವ ದೃಶ್ಯವನ್ನು ಶಿಲ್ಪಕ್ಕೆ ಅಳವಡಿಸಿ ಹೊಯ್ಸಳ ಕಾಲದಲ್ಲಿ ಕಟ್ಟಿದ ದೇವಾಲಯಗಳಲ್ಲೆಲ್ಲ ಸ್ಥಾಪಿಸಲಾಗಿದೆ. ಹುಲಿ ಹೊಯ್ಸಳರ ರಾಜಚಿಹ್ನೆಯಾಗಿತ್ತು. (ಜಿ.ಆರ್.ಆರ್.)