ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಸ್ಯಾಂಗಾರ

ಸಸ್ಯಾಂಗಾರ ಭೂಇತಿಹಾಸದಲ್ಲಿ ಸಸ್ಯಾವಶೇಷಗಳು ಭೂಕುಸಿತಕ್ಕೆ ಒಳಗಾಗಿ ಹೆಚ್ಚಿನ ಆಳದಲ್ಲಿ ಹುದುಗಿದಾಗ ಅಲ್ಲಿಯ ಅಲ್ಪ ಒತ್ತಡ ಮತ್ತು ಉಷ್ಣತೆಗಳ ಪ್ರಭಾವಕ್ಕೆ ಒಳಗಾಗಿ ಮಾರ್ಪಾಡು ಹೊಂದಿದ, ಕಡುಕಂದು ಇಲ್ಲವೆ ಕಪ್ಪು ಬಣ್ಣದ ಸಸ್ಯಪದಾರ್ಥ (ಪೀಟ್). ಅಧಿಕ ಒತ್ತಡ ಮತ್ತು ಉಷ್ಣತೆಗಳಿಗೆ ಒಳಗಾದಾಗ ಕಲ್ಲಿದ್ದಲಾಗಿ ಮಾರ್ಪಡುತ್ತವೆ. ಒಂದು ದೃಷ್ಟಿಯಲ್ಲಿ ಇದನ್ನು ಅತ್ಯಂತ ಕನಿಷ್ಠ ದರ್ಜೆಯ ಕಲ್ಲಿದ್ದಲು ಎನ್ನಲಾಗಿದೆ.

ನಿಸರ್ಗದಲ್ಲಿ ಕಲ್ಲಿದ್ದಲಾಗುವ ಪ್ರಕ್ರಿಯೆಯಲ್ಲಿ ಇದು ಮೊದಲ ಹಂತ. ಜವುಗು ಪ್ರದೇಶದಲ್ಲಿ ಗಿಡಗೆಂಟೆಗಳು ಕೊಳೆತು ಕಟ್ಟಕಡೆಗೆ ಸಸ್ಯಾಂಗಾರವಾಗಿ ಪರಿವರ್ತಿತವಾಗುತ್ತವೆ. ಎತ್ತರವಾಗಿರುವ ಪ್ರದೇಶ ದಲ್ಲಿಯ ಸಾಧಾರಣ ಇಳಿಜಾರಿನ ಸ್ಥಳಗಳೂ ತಗ್ಗುಪ್ರದೇಶದ ತಟ್ಟೆ ಹಳ್ಳಕೊಳ್ಳಗಳೂ ಈ ಪ್ರಕ್ರಿಯೆ ಜರಗುವುದಕ್ಕೆ ಅತ್ಯಂತ ಪ್ರಶಸ್ತ ಸ್ಥಳಗಳು. ಸಸ್ಯಾಂಗಾರದ ಹೂಳಿನಲ್ಲಿ ಮೇಲ್ಪದರಗಳು ತಿಳಿಯಾದ ಕಂದುಬಣ್ಣದಿಂದ ಕೂಡಿದ್ದು ಮರದ ತಿರುಳಿನಂತೆ ಮೆದುವಾಗಿರುತ್ತವೆ. ಈ ಪದರಗಳಲ್ಲಿ ಸಸ್ಯವರ್ಗಗಳ ರಚನಾವಿಶೇಷಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಆಳಕ್ಕೆ ಹೋದಂತೆಲ್ಲ ಪದರಗಳ ಬಣ್ಣ ಮಂದವಾಗುತ್ತದೆ. ಹೆಚ್ಚಿನ ರೀತಿಯ ಬದಲಾವಣೆಗೆ ಒಳಗಾಗಿರುವ ಸಸ್ಯಾಂಗಾರ ಆಳದಲ್ಲಿ ಕಂಡುಬರುವುದು. ಅನೇಕವೇಳೆ ಸಸ್ಯಾಂಗಾರ ಕಾಕಂಬಿಯಂತೆ ಮೆದುವಾಗಿರುತ್ತದೆ, ಮಾತ್ರವಲ್ಲದೆ ಸಸ್ಯದ ರಚನಾವಿಶೇಷಗಳು ಅಸ್ಪಷ್ಟವಾಗಿರುತ್ತವೆ ಅಥವಾ ಸಂಪೂರ್ಣವಾಗಿ ಅಳಿಸಿಹೋಗಿರುತ್ತವೆ. ಅಮೆರಿಕ ಸಂಯುಕ್ತ ಸಂಸ್ಥಾನದ ಜಿಯೋಲಾಜಿಕಲ್ ಸರ್ವೆ ಸಂಸ್ಥೆ ನಡೆಸಿದ ವರ್ಗೀಕರಣದ ರೀತ್ಯ ಸಸ್ಯಾಂಗಾರದಲ್ಲಿ ಸೇ. 85ರಷ್ಟು ತೇವಾಂಶ, ಸೇ. 10.4ರಷ್ಟು ದಹ್ಯಾಂಶ ಮತ್ತು ಸೇ. 4.6ರಷ್ಟು ಇಂಗಾಲಾಂಶ ಇರುತ್ತವೆ. ಇದರ ದಹನ ಸಾಮಥ್ರ್ಯ ಒಂದು ಪೌಂಡಿಗೆ 1290 ಬ್ರಿಟಿಷ್ ಥರ್ಮಲ್ ಯೂನಿಟ್‍ಗಳು. ಒಣಹವೆಯ ಪ್ರದೇಶಗಳಲ್ಲಿ ತೇವಾಂಶ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ಆರ್ಥಿಕದೃಷ್ಟಿಯಿಂದ ಸಸ್ಯಾಂಗಾರ ಉತ್ತಮ ದರ್ಜೆಯ ಇಂಧನ ಅಲ್ಲ. ಏಕೆಂದರೆ ಇದನ್ನು ಭೂಮಿಯಿಂದ ಹೊರಕ್ಕೆ ತೆಗೆಯಲು ಮತ್ತು ತೇವಾಂಶವನ್ನು ಹೊರದೂಡಲು ಆಗುವ ವೆಚ್ಚ ಅಧಿಕ. ಆದರೂ ಅತ್ಯಂತ ಕಡಿಮೆ ಗಂಧಕಾಂಶವಿರುವ ಕಾರಣ ಇದನ್ನು ಇಟ್ಟಿಗೆಗಳಂತೆ ಕೊಯ್ದು ಒಣಗಿಸಿ ಉರವಲಾಗಿ ಬಳಸುತ್ತಾರೆ. ಇದರಲ್ಲಿ ಸುಮಾರು 2%ರಷ್ಟು ನೈಟ್ರೊಜನ್ ಇರುವುದರಿಂದ ಇದನ್ನು ಗೊಬ್ಬರವಾಗಿ ಅಥವಾ ಕೃತಕಗೊಬ್ಬರಗಳ ತಯಾರಿಕೆಯಲ್ಲಿ ಘಟಕವಾಗಿ ಬಳಸುತ್ತಾರೆ.

ಭಾರತದ ನೀಲಗಿರಿ ಪ್ರಾಂತ್ಯದ ಜವುಗು ಪ್ರದೇಶದಲ್ಲಿ ಮತ್ತು ಕೊಲ್ಕತದ ಹೂಗ್ಲಿ ನದಿಯ ತೀರ ಪ್ರದೇಶಗಲ್ಲಿ ಸಸ್ಯಾಂಗಾರ ದೊರೆಯುತ್ತದೆ.

(ಬಿ.ವಿ.ಜಿ.)