ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಸ್ಸೂರ್, ಫರ್ಡಿನೆಂಡ್ ಡಿ

ಫರ್ಡಿನೆಂಡ್ ಡಿ ಸಸ್ಸೂರ್  :-೧೮೫೭-೧೯೧೩. ಆಧುನಿಕ ಭಾಷಾ ವಿಜ್ಞಾನದ ಸಂಸ್ಥಾಪಕ, ರಚನಾತ್ಮಕ ಭಾಷಾವಿಜ್ಞಾನದ ಜನಕ. ಜಿನೀವ ಭಾಷಾ ಪಂಥದ ನೇತಾರ; ಆದ್ಯ ಪ್ರವರ್ತಕ. ಫ್ರೆಂಚ್ ನಿರಾಶ್ರಿತ ಕುಟುಂಬದಲ್ಲಿ ಸ್ವಿಟ್ಜರ್ಲೆಂಡಿನಲ್ಲಿ 1857 ನವೆಂಬರ್ 17ರಂದು ಜನಿಸಿದ. ಜಿನೀವ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಹೆಚ್ಚಿನ ವ್ಯಾಸಂಗಕ್ಕಾಗಿ ಲಿಪ್‍ಜಿಗ್‍ಗೆ ತೆರಳಿ ಜಿ.ಕುರ್ತಿಸ್‍ನ ವಿದ್ಯಾರ್ಥಿಯಾದ. ತನ್ನ 20ನೆಯ ವರ್ಷದಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಮೂಲ ಇಂಡೊಯುರೋ ಪಿಯನ್ ಸ್ವರವ್ಯವಸ್ಥೆ (ಮೆಮೊರೆ ಸುರ್ ಲೆ ಸೆಸ್ಟಮೆ ಪ್ರಿಮಿಟಿ ಡೆಸ್ ವೊಯೆಲೆಸ್ ಡನ್ಸ್ ಲೆಸ್ ಲಾಂಗ್ವೆಸ್ ಇಂಡೊಯುರೋಪಿನೆಸ್) ಕುರಿತು ಗುರುತರವಾದ ಸಂಪ್ರಬಂಧ ಪ್ರಕಟಿಸಿ, ಭಾಷಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ. ಇಂಡೊಯುರೋಪಿಯನ್ ಸ್ವರವ್ಯತ್ಯಯದಲ್ಲಿ ಕಾಣುವ ಆಂತರಿಕ ಜಟಿಲತೆಗಳನ್ನು ಬಿಡಿಸುವುದರಲ್ಲಿ ಈ ಸಂಪ್ರಬಂಧ ಸಹಾಯಕವಾಯಿತು. ಇವನು ನವವೈಯಾಕರಣ ಪಂಥದ ಪ್ರಭಾವಕ್ಕೆ ಒಳಗಾದರೂ ತನ್ನದೇ ಆದ ವೈಶಿಷ್ಟ್ಯಗಳನ್ನು ಉಳಿಸಿಕೊಂಡ. ನವವೈಯಾ ಕರಣರ ಗುಂಪಿನಲ್ಲಿ ಪ್ರಮುಖರಾದ ಲೆಸ್ಕಿಯನ್ ಮತ್ತು ಒಸ್ತೋಫ್‍ರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ ಈತ ತನ್ನ ಶೈಕ್ಷಣಿಕ ಕೆಲಸಗಳಲ್ಲಿ ಬ್ರುಗ್‍ಮನ್, ಷ್ಲೀಷರ್, ಗಿಲ್ಲೆನ್, ವಿಟ್ನಿ ಮೊದಲಾದವರಿಂದ ಪ್ರಭಾವಿತನಾದ.

ಇವನಿಗೆ ಸಂಸ್ಕøತ, ಗ್ರೀಕ್, ಲ್ಯಾಟಿನ್, ಸ್ವಿಸ್, ಫ್ರೆಂಚ್, ಹಳೆಯ ಜರ್ಮನ್ ಮುಂತಾದ ಭಾಷೆಗಳು ತಿಳಿದಿದ್ದುವು. ಬಹುಭಾಷಿಕ ನಾದುದ ರಿಂದಲೇ ಇವನು ಸಮರ್ಥ ಸಂಶೋಧಕ ಹಾಗೂ ಉತ್ತಮ ಅಧ್ಯಾಪಕ ನಾಗಲು ಸಾಧ್ಯವಾಯಿತು. ಪ್ಯಾರಿಸ್‍ನಗರದಲ್ಲಿ ವಿದ್ಯಾ ರ್ಥಿಗಳಿಗೆ ಸಂಸ್ಕøತವನ್ನು ಬೋಧಿಸಿದ (1881-91). ಅಲ್ಲದೆ ಪ್ಯಾರಿಸಿನ ಭಾಷಾಸಂ ಘದ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ. ಈ ಅವಧಿಯಲ್ಲಿ ಭಾಷಾವಿಜ್ಞಾನ ಕ್ಷೇತ್ರದ ಬೆಳೆವಣಿಗೆಗೆ ಬಹುವಾಗಿ ಶ್ರಮಿಸಿದ. ತರುವಾಯ ಜಿನೀವ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ವನ್ನು ಬೋಧಿಸಿದ (1906-11). ಭಾಷೆಯ ಸಂರಚನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಹಾಗೂ ವ್ಯವಸ್ಥಿತವಾದ ಕೆಲವು ನಿಯಮಗಳನ್ನೂ ಸಿದ್ಧಾಂತಗಳನ್ನೂ ತನ್ನ ಉಪನ್ಯಾಸಗಳ ಮೂಲಕ ಮಂಡಿಸಿದ. ಇವನ ಉಪನ್ಯಾಸಗಳನ್ನು ಸಂಗ್ರಹಿಸಿ, ಪರಿಷ್ಕರಣೆ ಮಾಡಿ, ಇವನ ನಿಧನಾನಂತರ ಇವನ ಇಬ್ಬರು ವಿದ್ಯಾರ್ಥಿಗಳು ಪುಸ್ತಕ ರೂಪದಲ್ಲಿ ಹೊರತಂದರು. ಕೋರ್ಸ್ ಡಿ ಲಿಂಗ್ವಿಸ್ಟಿಕೆ ಜೆನೆರೇಲ್ ಎಂಬ ಹೆಸರಿನ, ಫ್ರೆಂಚ್ ಭಾಷೆಯ ಈ ಪುಸ್ತಕವನ್ನು ಚಾಲ್ರ್ಸ್ ಬ್ಯಾಲಿ (1865-1947) ಮತ್ತು ಆಲ್ಬರ್ಟ್‍ಸೆಷೆಹಯೆ (1870-1946) ಎಂಬವರು ಸಂಪಾದಿಸಿ ಹೊರತಂದರು (1916). ಈ ಪುಸ್ತಕವನ್ನು ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್ ಎಂಬ ಹೆಸರಿನಲ್ಲಿ ವೇಡ್ ಬಾಸ್ಕಿನ್ ಇಂಗ್ಲಿಷಿಗೆ ಅನುವಾದಿಸಿದ (1959). ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ 600 ಪುಟಕ್ಕಿಂತಲೂ ಅಧಿಕ ಮಾಹಿತಿ ಇರುವ ಈ ಕೃತಿ ಗಮನಾರ್ಹವೆನಿಸಿದೆ.

ಈತ ವರ್ಣನಾತ್ಮಕ ಭಾಷಾವಿಜ್ಞಾನಕ್ಕೆ ಹೆಚ್ಚುಮಹತ್ತ್ವವನ್ನು ತಂದುಕೊಟ್ಟ. ಇದಕ್ಕೆ ಎಮಿಲಿ ಡರ್ಕ್‍ಹೈಮ್ ಎಂಬ ಸಮಾಜವಿಜ್ಞಾನಿಯ ವಿಚಾರಧಾರೆ ಪ್ರಚೋದನೆ ನೀಡಿತು. ಏಕಕಾಲಿಕ, ದ್ವಿಕಾಲಿಕ, ಲಾ ಲಾಂಗ್ (ಭಾಷಾವ್ಯವಸ್ಥೆ), ಲಾ ಪರೋಲ್ (ಆಡುನುಡಿ), ಲಿ ಲಾಂಗ್ವೇಜ್ (ಇಡೀಮಾನವ ಭಾಷೆ), ಭಾಷಿಕ ಚಿಹ್ನೆಯ ವಿವರಣೆ, ಭಾಷಿಕ ಮೌಲ್ಯ, ರೂಪಾವಳಿ-ಇವು ಈತನ ಪ್ರಮುಖ ವಿಚಾರ, ಪರಿಕಲ್ಪನೆಗಳಾಗಿವೆ.

ವಿಚಾರ ಯಾವುದೇ ಆಗಿರಲಿ, ಅದು ಶಬ್ದಾತೀತವಾಗಿದ್ದು ಮಾನಸಿಕ ವಾಗಿರುತ್ತದೆ. ಬಳಿಕ ಈ ವಿಚಾರ ನುಡಿಯಲ್ಲಿ ಮೂಡುತ್ತದೆ. ಒಂದು ನಿರ್ದಿಷ್ಟ ವಿಚಾರಕ್ಕೆ ಪ್ರಣಾಳಿಕೆಯಾಗಿ ಸಂಬಂಧಪಟ್ಟಿದ್ದರೆ ಮಾತ್ರ ಧ್ವನ್ಯಂಗಗಳ ಮೂಲಕವಾಗಿ ಅಭಿವ್ಯಕ್ತಗೊಳ್ಳವ ಧ್ವನಿಸಮೂಹಕ್ಕೆ ಅರ್ಥಬರುವುದು. ಆಗ ಮಾತ್ರವೇ ಅದು ಭಾಷೆ ಎನಿಸಿಕೊಳ್ಳುವುದು. ಹೀಗಾಗಿ ಭಾಷೆ ಎಂಬುದು ಶಬ್ದ ಮತ್ತು ಆಲೋಚನೆಗಳನ್ನು ಒಂದುಗೂಡಿಸುವ ಕೊಂಡಿ. ಈ ಬಂಧವೇ ನಿರ್ದೇಶಿತ ಮತ್ತು ನಿರ್ದೇಶಕ ಸಂಬಂಧ (ಸಿಗ್ನಿಫೈಡ್ ಅಂಡ್ ಸಿಗ್ನಿಫೈಯರ್) ಭಾಷೆಯಲ್ಲಿ ಬಳಕೆ ಗೊಳ್ಳುವ ಪದಗಳು ಮತ್ತು ಅವುಗಳ ಅರ್ಥ ಯಾದೃಚ್ಛಿಕ (ಆರ್ಬಿಟ್ರರಿ). ಇದರ ಆಂತರ್ಯದಲ್ಲಿ ಒಂದು ವ್ಯವಸ್ಥೆ ಇದ್ದೇ ಇರುತ್ತದೆ. ಭಾಷೆ ಸಂಕೇತಗಳ ಒಂದು ವ್ಯವಸ್ಥೆ. ಚಿಹ್ನೆ (ಸೈನ್) ಯಾದೃಚ್ಛಿಕ. ಆದುದರಿಂದ ಸಂಪ್ರದಾಯದ ಹೊರತು, ಅದು ಮತ್ತಾವ ನಿಯಮಗಳನ್ನೂ ಅನುಸರಿಸುವುದಿಲ್ಲ. ಜೀವಂತ ಭಾಷೆಯಲ್ಲಿ ಪದಗಳು ಸದಾ ಪರಿವರ್ತನೆ ಹೊಂದುತ್ತಿರುತ್ತವೆ. ಇದಕ್ಕೆ ಅನೇಕ ಕಾರಣಗಳಿವೆ. ನಿರ್ದೇಶಿತ ಮತ್ತು ನಿರ್ದೇಶಕ ಸಂಬಂಧ ವ್ಯತ್ಯಯಗೊಂಡರೆ, ಆಗ ಅದರ ಪರಿಣಾಮದಿಂದ ಪದಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಪ್ರತಿಯೊಂದು ಭಾಷೆಯಲ್ಲೂ ಭಾಷೆ ಮತ್ತು ಉಚ್ಚಾರ ಎಂಬ ಎರಡು ಭಾಗಗಳಿರುತ್ತವೆ. ಈ ಪೈಕಿ ಉಚ್ಚಾರವನ್ನು ವ್ಯಕ್ತಿಭಾಷೆಯೆಂದೂ [(ಪರೋಲ್) ]ಮತ್ತು ಅದರ ವಿಸ್ತøತರೂಪವನ್ನು ಭಾಷೆಯೆಂದೂ [(ಲಾಂಗ್)] ಕರೆಯಬಹುದು. ಪ್ರತಿಯೊಬ್ಬ ವ್ಯಕ್ತಿಯ ನಿತ್ಯದ ಮಾತು ವ್ಯಕ್ತಿಭಾಷೆ. ಇದರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರವಿರುತ್ತದೆ. ಮತ್ತೊಂದು ಭಾಷೆ, ಅದು ಅದರ ಒಟ್ಟು ಸಮುದಾಯಕ್ಕೆ ಸಂಬಂಧಿಸಿದಂಥದು. ಕನ್ನಡ ಭಾಷೆ, ಇಂಗ್ಲಿಷ್ ಭಾಷೆ, ಫ್ರೆಂಚ್ ಭಾಷೆ, ಜರ್ಮನ್ ಭಾಷೆ ಎಂದೆಲ್ಲಾ ಹೇಳುವುದು ಈ ಎರಡನೆಯದನ್ನು. ಭಾಷೆ ಎಂಬುದು ವ್ಯಕ್ತಿಭಾಷೆಗಿಂತ ಸ್ವರೂಪದಲ್ಲಿ ಭಿನ್ನವಾಗಿದ್ದು, ಬಹುಮಟ್ಟಿಗೆ ಸ್ಥಾಯಿಯಾಗಿರುವುದೇ ಅಲ್ಲದೆ ಸಮಾನ ರೂಪದಲ್ಲಿರುತ್ತದೆ ಎಂಬುದು ಇವನ ವಿಚಾರಧಾರೆ.

ಭಾಷೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಐತಿಹಾಸಿಕ ದೃಷ್ಟಿಯೇ ಏಕೈಕ ಮಾರ್ಗವೆಂಬ ವಾದವನ್ನು ಈತ ತಳ್ಳಿಹಾಕಿ, ವಿವರಣಾತ್ಮಕ ಅಧ್ಯಯನವೂ ಮಾರ್ಗವಾಗಬಲ್ಲದು, ಸಹಕಾರಿಯಾಗ ಬಲ್ಲದೆಂಬುದನ್ನು ದೃಢವಾಗಿ ಪ್ರತಿಪಾದಿಸಿದ. ಇವನ ಉಪನ್ಯಾಸ, ಬರೆಹಗಳಿಂದ ಅನೇಕರು ಪ್ರಭಾವಿತರಾಗಿ, ಬೇರೆ ಬೇರೆ ಭಾಷೆಗಳ ವಿವರಣಾತ್ಮಕ ಅಧ್ಯಯನವನ್ನು ನಡೆಸಿ ಹಲವಾರು ಹೊಸ ಸಂಗತಿಗಳನ್ನು ಪ್ರಕಟಪಡಿಸಿದ್ದಾರೆ, ಬೇರೆ ಬೇರೆ ಭಾಷಾಪಂಥಗಳು ರೂಪುಗೊಳ್ಳಲು ಕಾರಣರಾಗಿದ್ದಾರೆ. ಈತ 1913ರಲ್ಲಿ ನಿಧನನಾದ. (ಆರ್.ಎಮ್.ಕೆ.)