ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಕ್ರಾಮಿಕ ರೋಗಗಳು

ಸಾಂಕ್ರಾಮಿಕ ರೋಗಗಳು

ಜೀವಿಯಿಂದ ಜೀವಿಗೆ ಹರಡುವ ಅಥವಾ ಅಂಟುವ ಕಾಯಿಲೆಗಳು (ಇನ್‍ಫೆಕ್ಶಿಯಸ್ ಡಿಸೀಸಸ್). ಪರ್ಯಾಯ ಪದ ಸೋಂಕು ರೋಗಗಳು. ಇವುಗಳ ಸಂಖ್ಯೆಗೆ ಮಿತಿ ಇಲ್ಲ. ಪ್ರತಿಯೊಂದು ಅಂಟುಬೇನೆಗೂ ಕಾರಣ ಒಂದೊಂದು ಬಗೆಯ ಸೂಕ್ಷ್ಮ ಜೀವಿ. ಇವು ಜೀವಿಯ ದೇಹ ಸೇರಿ ಅಲ್ಲಿ ರೋಗಕಾರಕವಾಗು ತ್ತವೆ. ದೇಹದೊಳಗೆ ರೋಗಾಣುಗಳನ್ನು ವೃದ್ಧಿಸಿ ಜೀವಿಯ ಸ್ವಾಸ್ಥ್ಯವನ್ನು ಭಂಗಗೊಳಿಸುತ್ತವೆ. ಮುಂದೆ ಅಲ್ಲಿಂದ ಇತರ ಜೀವಿಗಳಿಗೆ ತಾಕಿ ಅಲ್ಲೆಲ್ಲ ರೋಗಕಾರಕಗಳಾಗುತ್ತವೆ. ಈ ರೋಗಗಳ ವ್ಯಾಪ್ತಿ ಗಮನಿಸಿ ಇವನ್ನು ವರ್ಗೀಕರಿಸಬಹುದು:

1. ಒಂದು ಊರಿನಲ್ಲಿ ಅಥವಾ ಪ್ರದೇಶದಲ್ಲಿ ದೀರ್ಘಕಾಲ ನೆಲೆನಿಂತಿರುವವು. ಇವುಗಳಿಗೆ ಸ್ಥಳಿಕ ರೋಗಗಳು (ಎಂಡೆಮಿಕ್ ಡಿಸೀಸಸ್) ಎಂದು ಹೆಸರು. ಉದಾಹರಣೆಗೆ ಟೈಫಾಯಿಡ್, ಅಮೀಬಿ ಯೋಸಿಸ್, ಅತಿಬಾವು ರೋಗ, ಆಮಶಂಕೆ, ಕ್ಷಯರೋಗ ಮುಂತಾದವು.

2. ವಿಸ್ತಾರ ಪ್ರದೇಶಗಳಲ್ಲಿ ಅಲ್ಪಕಾಲ ಹರಡಿರುವಂಥವು. ಇವು ಪಿಡುಗುಗಳು (ಎಪಿಡೆಮಿಕ್ ಡಿಸೀಸಸ್). ಉದಾಹರಣೆಗೆ ಕಾಮಾಲೆ, ಪೋಲಿಯೊ, ಪ್ಲೇಗ್ ಮುಂತಾದವು.

3. ಅಲ್ಪಕಾಲದಲ್ಲಿ ಪ್ರಪಂಚಾದ್ಯಂತ ಹಬ್ಬುವಂಥವು. ಇವು ಖಂಡಾಂತರ ಪಿಡುಗುಗಳು (ಪಾಂಡೆಮಿಕ್ ಡಿಸೀಸಸ್). ಉದಾಹರಣೆಗೆ ಇನ್‍ಫ್ಲುಯೆಂಝ, ಕಾಲರ, ಕೋಳಿಜ್ವರ ಮುಂತಾದವು.

4. ಅಕಸ್ಮಾತ್ತಾಗಿ ಬೇರೆಡೆಗಳಿಂದ ಆಮದಾಗಿ ಬರುವಂಥವು. ಇವು ಕೆಲವೇ ಮಂದಿಯನ್ನು ಅಲ್ಪಕಾಲ ಬಾಧಿಸಿ ಮಾಯವಾಗುತ್ತವೆ. ಇವುಗಳಿಗೆ ವಿದೇಶಜ ಅಥವಾ ವಿದೇಶಾಗತ ರೋಗಗಳೆಂದು (ಎಕ್ಸೋಟಿಕ್ ಡಿಸೀಸಸ್) ಹೆಸರು.

ರೋಗ ಪ್ರಸಾರ ವಿಧಾನ ಆಧರಿಸಿ ಸಾಂಕ್ರಾಮಿಕ ರೋಗಗಳನ್ನು ವಿಂಗಡಿಸುವುದುಂಟು. ಉದಾಹರಣೆಗೆ ಪ್ರಾಣಿಮೂಲ ರೋಗಗಳು. ಇವು ಮನುಷ್ಯರನ್ನು ಪೀಡಿಸಬಹುದು. ಇವು ಪ್ರಾಣಿ ಅಥವಾ ಪ್ರಾಣಿಮೂಲ ರೋಗಗಳು (ಝಾನೋಟಿಕ್ ಡಿಸೀಸಸ್). ಉದಾಹರಣೆಗೆ ಹುಚ್ಚುನಾಯಿ ಕಡಿತ ರೋಗ (ರೇಬಿಸ್), ನೆರಡಿ (ಆಂತ್ರ್ಯಾಕ್ಸ್), ನಾರುಹುಳು ಬೇನೆ (ಬ್ರುಸೆಲ್ಲಾ) ಇತ್ಯಾದಿ.

ಸಾಂಕ್ರಾಮಿಕ ರೋಗಗಳ ಪ್ರಸಾರದಲ್ಲಿ ರೋಗಾಣುವಾಹಕಗಳ ಪಾತ್ರ ಬಲು ದೊಡ್ಡದು. ಇವು ಮನುಷ್ಯ ಅಥವಾ ಇತರ ಜೀವಿಗಳಾಗಿರಬಹುದು. ಅಂತೆಯೇ ಪ್ರಸಾರವರ್ಗಗಳೂ ವಿಭಿನ್ನ: ನೀರು, ಹಾಲು, ಆಹಾರ, ರಕ್ತ, ಹವೆ, ಸಂಪರ್ಕ ಮುಂತಾದವು. (ಎಸ್.ಕೆ.ಎಚ್.)