ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಕ್ರಾಮಿಕ ರೋಗವಿಜ್ಞಾನ

ಸಾಂಕ್ರಾಮಿಕ ರೋಗವಿಜ್ಞಾನ

ಜನಸಮಷ್ಟಿಯಲ್ಲಿ ಹಬ್ಬಿರುವ ರೋಗಗಳ ಕಾರಣ, ಅವು ಹರಡುವ ಪರಿ, ಅವುಗಳ ನಿವಾರಣೋಪಾಯ, ಚಿಕಿತ್ಸಾಕ್ರಮ ಮುಂತಾದ ಜನಾರೋಗ್ಯ ಸಂಬಂಧೀ ವಿಷಯಗಳನ್ನು ಸಮಗ್ರವಾಗಿಯೂ ಕೂಲಂಕಷವಾಗಿಯೂ ಅಧ್ಯಯನಗೈಯುವ ವೈದ್ಯವಿಜ್ಞಾನವಿಭಾಗ (ಎಪಿಡೆಮಿಯಾಲಜಿ). ರೋಗಗಳು ಮರುಕಳಿಸುವ ಆವೃತ್ತಿ (ಫ್ರೀಕ್ವೆನ್ಸಿ), ವಿತರಣೆ (ಡಿಸ್ಟ್ರಿಬ್ಯೂಶನ್) ಮತ್ತು ನಿರ್ಣಾಯಕಗಳು (ಡಿಟರ್ಮಿನೆಂಟ್ಸ್) ಎಂಬ ಮೂರು ಪೂರಕ ಅಂಶಗಳನ್ನು ಇದರಲ್ಲಿ ಅಭ್ಯಸಿಸಲಾಗುತ್ತದೆ. ಜನಸಂಖ್ಯಾಸಾಂದ್ರತೆ, ವಿತರಣೆ, ಸರಾಸರಿ ಆಯುರ್ನಿರೀಕ್ಷೆ ಮುಂತಾದವುಗಳ ಸಂಖ್ಯಾಕಲನೀಯ ಅಧ್ಯಯನ (ಸ್ಟ್ಯಾಟಿಸ್ಟಿಕಲ್ ಸ್ಟಡಿ) ಇಲ್ಲಿ ಅವಶ್ಯ. ಜನತೆಗೆ ಯುಕ್ತ ವೈದ್ಯಕೀಯ ಸಹಾಯ ವಿಸ್ತರಿಸುವ ಸಲುವಾಗಿ ಸರ್ಕಾರ ತನ್ನ ನೀತಿ ರೂಪಿಸುವಲ್ಲಿ ಈ ಅಧ್ಯಯನ ಬಲು ಉಪಯುಕ್ತ.

ಆ್ಯಡಮ್ ಮತ್ತು ಈವ್ “ನಿಷಿದ್ಧ ಫಲ” ಸೇವಿಸಲು ತೊಡಗಿದಾಗಲೇ ಸಾಂಕ್ರಾಮಿಕರೋಗವಿಜ್ಞಾನ ರೂಪುಗೊಂಡಿತೆಂಬ ಪ್ರತೀತಿ ಉಂಟು. ಅಂದರೆ ಚಿಂತನಶೀಲ ಮಾನವನ ಉಗಮದೊಂದಿಗೇ ಈ ವಿಜ್ಞಾನವಿಭಾಗ ಮೈದಳೆಯಿತೆಂದು ಭಾವಿಸಬಹುದು. ಮುಂದೆ 19ನೆಯ ಶತಮಾನದಲ್ಲಿ ಸ್ನೋ, ಜಾನ್ (1813-58, ನೋಡಿ) ಎಂಬ ಇಂಗ್ಲಿಷ್ ವೈದ್ಯ ಕಾಲರಾ ಪಿಡುಗಿನ ಆಕರ ಶೋಧನೆಯಲ್ಲಿ ತೊಡಗಿ ಅದನ್ನು ಪತ್ತೆಹಚ್ಚಿದಾಗ ಸಾಂಕ್ರಾಮಿಕ ರೋಗವಿಜ್ಞಾನಕ್ಕೆ ಭವ್ಯ ವೈಜ್ಞಾನಿಕ ಅಸ್ತಿಭಾರ ಲಭಿಸಿತು: ಕಲುಷಿತ ಜಲಸೇವನೆಯೇ ಈ ಪಿಡುಗಿನ ಮೂಲ ಎಂಬುದು ಆತನ ಶೋಧನೆ (1831, 1848, 1854).

ಮುಂದೆ ಫುಪ್ಫುಸಗಳ ಕ್ಯಾನ್ಸರಿಗೂ ತಂಬಾಕು ಸೇವನೆಗೂ ಇರಬಹುದಾದ ಸಂಬಂಧವನ್ನು ಬ್ರಿಟಿಷ್ ವೈದ್ಯರು ಅನುಮಾನಿಸಿ ಈ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಿದರು. ಇದು ನಿಜವೆಂದು ಸಾಬೀತಾದಾಗ (1956) ಸಾಂಕ್ರಾಮಿಕ ರೋಗವಿಜ್ಞಾನಕ್ಕೆ ಹೆಚ್ಚಿನ ಒತ್ತಾಸೆ ದೊರೆಯಿತು. ತರುವಾಯದ ವರ್ಷಗಳಲ್ಲಿ ನಡೆಸಿದ ವ್ಯವಸ್ಥಿತ ಅಧ್ಯಯನ ರೋಗಗಳಲ್ಲಿ ವ್ಯಾಪಕವಾಗಿ ನಾಲ್ಕು ವರ್ಗಗಳನ್ನು ಗುರುತಿಸಿದೆ: 1. ನಿರ್ದಿಷ್ಟ ಜನಸಮಷ್ಟಿಯಲ್ಲಿ ಸ್ಥಳಿಕವಾಗಿ ಕಾಣಿಸಿಕೊಳ್ಳುವವು ಸ್ಥಳಿಕವ್ಯಾಧಿಗಳು (ಎಂಡೆಮಿಕ್); 2. ಅಲ್ಲಿ ಇಲ್ಲಿ ಆಗ ಈಗ ಪ್ರಕಟ ವಾಗುವವು ಆಕಸ್ಮಿಕ ವ್ಯಾಧಿಗಳು (ಸ್ಪೊರೇಡಿಕ್); 3. ಒಟ್ಟಾಗಿ ಸಾಕಷ್ಟು ವಿಸ್ತಾರದಲ್ಲಿ ಹರಡುವ ಪಿಡುಗು (ಎಪಿಡೆಮಿಕ್); 4. ಅಂತರದೇಶೀಯ ವಾಗಿ ವ್ಯಾಪಿಸುವಂಥ ಖಂಡಾಂತರ ಪಿಡುಗು (ಪಾಂಡೆಮಿಕ್).

ವ್ಯಾಧಿಪ್ರಕಾರ ಯಾವುದೇ ಇರಲಿ, ಅದು ಬಡಿದಾಗ ಅದನ್ನು ನಿವಾರಿಸಲು ದ್ವಿವಿಧ ಪ್ರತಿರೋಧ ಅಗತ್ಯ: ರೋಗಗ್ರಸ್ತರ ಚಿಕಿತ್ಸೆ ಮತ್ತು ಉಪಚಾರ, ಜೊತೆಯಲ್ಲೇ ರೋಗಮೂಲವನ್ನು ಶೋಧಿಸಿ ಅದರ ಉತ್ಪಾಟನೆ. (ಸಿ.ಎಸ್.ಕೆ.)