ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಪ್ರಾಸ್, ಪೀಟ್

ಸಾಂಪ್ರಾಸ್, ಪೀಟ್ 1971-. ಪ್ರಸಿದ್ಧ ಟೆನಿಸ್ ಕ್ರೀಡಾಪಟು. ಅಮೆರಿಕದ ವಾಷಿಂಗ್‍ಟನ್ ಡಿ.ಸಿ.ಯಲ್ಲಿ 1971 ಆಗಸ್ಟ್ 12ರಂದು ಜನಿಸಿದ. ತಂದೆ ಸೆಟೋರಿಯಸ್ (ಸ್ಯಾಮ್), ತಾಯಿ ಜಾರ್ಜಿಯಾ ಸಾಂಪ್ರಾಸ್, ಗ್ರೀಕ್ ಮೂಲದವರು. ತಂದೆ ಸಿವಿಲ್ ಏರೋ ಸ್ಪೇಸ್ ಎಂಜಿನಿಯರಾಗಿದ್ದ. ಕಾಲಕ್ರಮದಲ್ಲಿ ಕುಟುಂಬ ಕ್ಯಾಲಿಫೋರ್ನಿಯದ ಪಾಲೋಸ್‍ವೇದಾಸ್‍ಗೆ ವಲಸೆ ಬಂತು. ಈತನ ಸೋದರ ಗಸ್; ಸೋದರಿಯರು ಸ್ಟೆಲ್ಲಾ ಮತ್ತು ಮ್ಯಾರಿಯಾನ್. ಈ ಕುಟುಂಬ ಪೆನ್ಸಿಲ್ವೇನಿಯ ರ್ಯಾಕೆಟ್ ಕ್ಲಬ್‍ನ ಸದಸ್ಯತ್ವ ಪಡೆಯಿತು. ಈತ ಪಬ್ಲಿಕ್ ಶಾಲೆಯಲ್ಲಿ ಓದಿದ. ಟೆನಿಸ್ ಆಟದ ಶಾಸ್ತ್ರೀಯ ತರಬೇತಿ ಇವನಿಗಿರಲಿಲ್ಲ. ಫಿಷರ್ ಎಂಬ ಮಕ್ಕಳತಜ್ಞ ವೈದ್ಯನೇ ಈತನ ಕೋಚ್. ಈತ 12ನೆಯ ವಯಸ್ಸಿಗೆ 14ರ ತಂಡಗಳೊಂದಿಗೆ ಆಡಿ ಗೆಲ್ಲುತ್ತಿದ್ದ. ಇವನದು ದೈತ್ಯ ಸರ್ವಿಸ್ ಎಂದು ಪ್ರಪಂಚ ಮಾನ್ಯವಾಗಿದೆ. ತರಬೇತಿಯಲ್ಲಿ ಇವನ ಕೋಚ್ ಸರ್ವೀಸ್‍ಗೆಂದು ಚೆಂಡನ್ನು ಮೇಲಕ್ಕೆಸೆದ ಅನಂತರ ಅದು ಎದುರಾಳಿಯ ಅಂಗಳದ ಯಾವ ಭಾಗದಲ್ಲಿ ಬೀಳಬೇಕು ಎಂಬುದನ್ನು ಕೂಗಿ ಹೇಳುತ್ತಿದ್ದ. ಅದರಂತೆಯೇ ರಾಕೆಟನ್ನು ಝಳಪಿಸಿ ಎದುರಾಳಿ ತಬ್ಬಿಬ್ಬಾಗುವಂತೆ ಚೆಂಡು ಅಪ್ಪಳಿಸುತ್ತಿತ್ತು. ಇವನ ಕೈ ಚಲನೆಯ ಆಧಾರದ ಮೇಲೆ ಚೆಂಡಿನ ಘಾತಸ್ಥಾನ ಎದುರಾಳಿಗೆ ತಿಳಿಯದಿರುವುದೇ ಇವನ ಸರ್ವಿಸಿನ ವೈಶಿಷ್ಟ್ಯ.

1987ರಲ್ಲಿ ನ್ಯಾಷನಲ್ ಬಾಯ್ಸ್ ಸಿಂಗಲ್ಸ್ ಪಂದ್ಯಗ ಳಲ್ಲಿ ಫೈನಲ್ ತಲುಪಿದ. ಅನಂತರ ಶಾಲೆಗೆ ಶರಣು ಹೊಡೆದು ವೃತ್ತಿಪರ ಟೆನಿಸ್ ಆಟಗಾರನಾದ (1988). ತರುವಾಯ ಇವನ ರ್ಯಾಂಕಿಂಗ್ 81 ರಿಂದ 12ಕ್ಕೆ ಜಿಗಿಯಿತು (1989). ಈತ ಯು. ಎಸ್. ಓಪನ್ ಪಂದ್ಯಗಳನ್ನು ಗೆದ್ದ ಅತಿ ಕಿರಿಯ ಆಟಗಾರನಾಗಿದ್ದ (1990).

ಈತನಿಗೆ ಗುಲಿಕ್‍ಸನ್ ಎಂಬಾತ 1992 ರಿಂದ ತೀವ್ರ ತರಬೇತಿ ನೀಡುತ್ತಿದ್ದ. ದುರದೃಷ್ಟವಶಾತ್ ಆ ಕೋಚ್ ಮಿದುಳು ಕ್ಯಾನ್ಸರ್‍ನಿಂದ ಅಸುನೀಗಿದ (1996).

ಅನಂತರ ಈತ ಪ್ರಪಂಚದ ಅಗ್ರಮಾನ್ಯ ಆಟಗಾರನಾದ (1993). ನಂ.1 ರ್ಯಾಂಕಿಂಗ್ ಪಡೆದ. ಯು.ಎಸ್.ಓಪನ್ ಫೈನಲ್ಸ್‍ನಲ್ಲಿ ಆಂಡ್ರೆ ಅಗಾಸ್ಸಿಯ ವಿರುದ್ಧ ಜಯಗಳಿಸಿದ (1995). ವಿಂಬಲ್ಡನ್ ಫೈನಲ್ಸ್‍ನಲ್ಲಿ ಪ್ಯಾಟ್ ರಾಫ್ಟರ್‍ನನ್ನು ಸೋಲಿಸಿದ (2000). ಈತ ದಾಖಲೆಯ 14 ಸಿಂಗಲ್ಸ್ ಟೈಟಲ್‍ಗಳನ್ನು ಹೊಂದಿದ್ದು 1993-98ರ ತನಕ ಸತತವಾಗಿ ನಂ. 1 ರ್ಯಾಂಕಿಂಗ್ ಪಡೆದ ಪ್ರಪಂಚದ ಮಾನ್ಯ ಟೆನಿಸ್ ಆಟಗಾರನಾಗಿ ಹೆಸರು ಮಾಡಿದ. ಈಗ ವೃತ್ತಿಪರ ಆಟದಿಂದ ನಿವೃತ್ತಿ ಹೊಂದಿದ್ದಾನೆ (2002). ನಟಿ ಬ್ರಿಗೆಟ್ ವಿಲ್ಸನ್‍ಳನ್ನು ಮದುವೆಯಾದ (2000). ಇವರ ಒಬ್ಬನೇ ಮಗ ಕ್ರಿಸ್ಟಿಯನ್. (ಡಿ.ಎನ್.ಎಸ್.)