ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಕ್ರಟೀಸ್

ಸಾಕ್ರಟೀಸ್ ಕ್ರಿ.ಪೂ. 469-399. ಗ್ರೀಕ್ ತತ್ತ್ವಜ್ಞಾನಿ ಹಾಗೂ ಶಿಕ್ಷಕ. ವಿಮರ್ಶನ ಹಾಗೂ ಸತ್ಯಪರಿಶೋಧಕ ಪ್ರವೃತ್ತಿಯವ. ಕ್ರಿ.ಪೂ. 469 ರಲ್ಲಿ ಅಥೆನ್ಸ್‍ನಲ್ಲಿ ಜನಿಸಿದ. ತನ್ನ ಆತ್ಮಪ್ರತಿಷ್ಠೆಗೂ ವಿಚಿತ್ರ ವೇಷಭೂಷಣಗಳಿಗೂ ಹೆಸರಾಗಿದ್ದ. ಅರಿಸ್ಟೋ¥sóÉನಿಸ್ ಹಾಗೂ ಕ್ಸೆನೋ¥sóÉನ್‍ರ ಕೃತಿಗಳಿಂದ ಇವನ ಬದುಕು ಹಾಗೂ ಕಾರ್ಯವ್ಯಾಪ್ತಿ ವಿಚಾರಗಳನ್ನು ಸ್ವಲ್ಪಮಟ್ಟಿಗೆ ತಿಳಿಯಬಹುದಾಗಿದೆ.

ಈತನಿಗಿಂತ ಮೊದಲು ಗ್ರೀಕ್ ತತ್ತ್ವಶಾಸ್ತ, ಪ್ರಕೃತಿ ಹಾಗೂ ಬ್ರಹ್ಮಾಂಡವಿಚಾರಗಳ ಅಧ್ಯಯನಕ್ಕೆ ಸೀಮಿತವಾಗಿತ್ತು. ಇವನು ಮನುಷ್ಯನ ನೈತಿಕ ಸಮಸ್ಯೆ ಹಾಗೂ ಜೀವನ ಕುರಿತಾದ ದೃಷ್ಟಿಕೋನಗಳ ಅಧ್ಯಯನವನ್ನೂ ಈ ಕ್ಷೇತ್ರಕ್ಕೆ ಸೇರಿಸಿದ. ಅಷ್ಟೇ ಅಲ್ಲದೆ ನ್ಯಾಯ ಹಾಗೂ ಆತ್ಮಪರಿಶೋಧಕ ಪ್ರವೃತ್ತಿಯ ಅಧ್ಯಯನವನ್ನೂ ಅದರ ಅಧ್ಯಯನಕ್ಕೆ ಸೇರಿಸಬೇಕೆಂಬುದು ಇವನ ಬಲವಾದ ಒತ್ತಾಯವಾಗಿತ್ತು. ಈ ಮನೋಧರ್ಮಗಳಿಂದ ಪಾಶ್ಚಾತ್ಯ ವೈಚಾರಿಕತೆಯ ಇತಿಹಾಸದಲ್ಲಿ ಹಾಗೂ ತತ್ತ್ವಶಾಸ್ತ್ರ ಕ್ಷೇತ್ರದಲ್ಲಿ ಹೊಸ ದಿಕ್ಕನ್ನೇ ಹುಟ್ಟು ಹಾಕಿದಂತಾಯಿತು. “ಪರಿಶೋಧನೆಗೆ ಒಳಪಡದ ಜೀವನ ಬದುಕಲು ಅನರ್ಹ” ಎಂಬ ಈತನ ಹೇಳಿಕೆ ವಿಚಾರಕ್ರಾಂತಿಗೆ ಆಹ್ವಾನ ನೀಡಿತು. ಅತ್ಯಂತ ಆಳವಾದ ಇವನ ಆಲೋಚನಾ ವಿಧಾನ, ಸಾವನ್ನು ಅತ್ಯಂತ ಶಾಂತವಾಗಿ, ಆಪ್ತವಾಗಿ ಬರಮಾಡಿಕೊಂಡ ಈತನ ರೀತಿಗಳು ಇವನನ್ನು ಉದಾತ್ತ ತತ್ತ್ವಜ್ಞಾನಿಯ ಪಂಕ್ತಿಗೆ ಸೇರಿಸಿದುವು.

ಇವನು ಸಾಧಿಸಹೊರಟಿದ್ದೆಲ್ಲ ಸತ್ಯವಾಗಿರದಿದ್ದರೂ ಒಪ್ಪಿತ ಮೌಲ್ಯಗಳನ್ನು ಕುರಿತ ಸತ್ಯಶೋಧನೆಯ ಪ್ರಾಮಾಣಿಕ ಪ್ರಯತ್ನಗಳಾಗಿದ್ದವು. ಮನುಷ್ಯನ ದೇಹ ಹಾಗೂ ಆತ್ಮಗಳ ಸಂಬಂಧಗಳನ್ನು ಕುರಿತಂತೆ ಆಲೋಚನೆಗಳನ್ನು ಹುಟ್ಟು ಹಾಕಿದ ಮೊದಲ ತತ್ತ್ವಜ್ಞಾನಿ ಈತ. ನೀತಿವಂತರಾಗಿ ಬಾಳಲು ನೈತಿಕ ಪ್ರಜ್ಞೆಯ ಬೆಳೆವಣಿಗೆಯ ಅವಶ್ಯಕತೆ ಅತಿ ಮುಖ್ಯ ಎಂದು ಭಾವಿಸಿದ ಈತ ನೈತಿಕ ಪ್ರಜ್ಞೆ ಹಾಗೂ ಆತ್ಮಸ್ಥೈರ್ಯಗಳನ್ನು ಕುರಿತು ವ್ಯಾಖ್ಯೆಗಳನ್ನು ನೀಡಿದವರಲ್ಲಿ ಮೊದಲಿಗ. ತತ್ತ್ವಶಾಸ್ತ್ರ ಕ್ಷೇತ್ರದಲ್ಲಿ ಅದುವರೆಗೆ ಸಿದ್ಧಾಲೋಚನೆಗಳಿಂದ ತುಂಬಿದ್ದ ಎಲ್ಲ ಅಂಶಗಳನ್ನೂ ಸತ್ಯಾನ್ವೇಷಣೆಗೆ ಒಳಪಡಿಸಿದ್ದು ಮಾತ್ರವಲ್ಲದೆ ತನ್ನ ಶಿಷ್ಯರಲ್ಲೂ ಇದೇ ಮನಃಸ್ಥಿತಿ ಬೆಳೆಸಲು ತರಬೇತಿ ನೀಡಿದ.

ಪರಿಶೀಲಿಸದೆ ಯಾವುದನ್ನೂ ಒಪ್ಪಬಾರದೆನ್ನುವ ಇವನ ತತ್ತ್ವ ಶಿಷ್ಯರಿಗೆ ಪ್ರಿಯವಾಗಿದ್ದರೂ ಅಥೆನ್ಸಿನ ಹಿರಿಯ ನಾಗರಿಕರಿಗೆ ಅಪ್ರಿಯವಾ ಯಿತು. ಸಮಾಜದಲ್ಲಿ ಕಿರಿಕಿರಿ ಉಂಟುಮಾಡುತ್ತಿರುವ ರಾಜಕೀಯ ವ್ಯಕ್ತಿ ಇವನಿರಬೇಕೆಂಬ ತಪ್ಪು ಆಪಾದನೆಗೆ ಈತ ಗುರಿಯಾದ. ಇದರ ಪರಿಣಾಮವಾಗಿ ಕ್ರಿ.ಪೂ. 399 ರಲ್ಲಿ ಇವನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಈ ಶಿಕ್ಷೆಯನ್ನು ಅತ್ಯಂತ ಶಾಂತವಾಗಿ ಸ್ವೀಕರಿಸಿದ ಈತ ತನ್ನ ಸ್ನೇಹಿತರು, ಅನುಯಾಯಿಗಳೊಂದಿಗೆ ಹೆಮ್‍ಲಾಕ್ ವಿಷ ಸೇವಿಸಿ ಸಾವನ್ನಪ್ಪಿದ. (ಜಿ.ಎನ್.ಎಸ್.)