ಸಾಗರ ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಜಿಲ್ಲಾ ಉಪವಿಭಾಗದ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕುಗಳೂ ಪೂರ್ವದಲ್ಲಿ ಶಿಕಾರಿಪುರ ಮತ್ತು ಶಿವಮೊಗ್ಗ ತಾಲ್ಲೂಕುಗಳೂ ದಕ್ಷಿಣದಲ್ಲಿ ಹೊಸನಗರ ತಾಲ್ಲೂಕು ಪಶ್ಚಿಮ ಮತ್ತು ವಾಯವ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಸಿದ್ದಾಪುರ ತಾಲ್ಲೂಕುಗಳೂ ಸುತ್ತುವರಿದಿವೆ. ಸಾಗರ, ಆವಿನಹಳ್ಳಿ, ತಾಳಗುಪ್ಪ, ಭಾರಂಗಿ, ಕರೂರು ಮತ್ತು ಆನಂದಪುರ ಹೋಬಳಿಗಳು. 263 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 1,938.4 ಚ.ಕಿಮೀ. ಜನಸಂಖ್ಯೆ 2,00,211.

ಈ ತಾಲ್ಲೂಕು ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಸೇರಿದೆ. ತಾಲ್ಲೂಕಿನ ಪಶ್ಚಿಮದ ಗಡಿ ಎಲ್ಲೆಯಲ್ಲಿರುವ ಪಶ್ಚಿಮಘಟ್ಟಶ್ರೇಣಿಗೆ ಸೇರಿದ ಗೋವರ್ಧನಗಿರಿ ಈ ತಾಲ್ಲೂಕಿನಲ್ಲಿರುವ ದೊಡ್ಡ ಬೆಟ್ಟ. ತಾಲ್ಲೂಕಿನ ಪಶ್ಚಿಮ, ಉತ್ತರ ಮತ್ತು ದಕ್ಷಿಣ ಪ್ರದೇಶಗಳು ಪಶ್ಚಿಮಘಟ್ಟಕ್ಕೆ ಸೇರಿದವು. ತಾಲ್ಲೂಕಿನ ನೈಋತ್ಯ ಭಾಗ ಬೆಟ್ಟಗುಡ್ಡಗಳಿಂದ ಕೂಡಿದೆ. ಈ ಬೆಟ್ಟಗುಡ್ಡಗಳ ಶಿಖರ ಭಾಗಗಳು ಬೋಳಾಗಿದ್ದು, ಬೆಟ್ಟದ ತಪ್ಪಲು ಮತ್ತು ಕಣಿವೆ ಪ್ರದೇಶಗಳು ದಟ್ಟ ಕಾಡುಗಳಿಂದ ಕೂಡಿವೆ. ಈ ತಾಲ್ಲೂಕಿನಲ್ಲಿ 50,595 ಹೆಕ್ಟೇರ್ ಅರಣ್ಯಪ್ರದೇಶವಿದೆ. ಈ ಅರಣ್ಯಗಳಲ್ಲಿ ಬೆಲೆಬಾಳುವ ವಿವಿದೋಪಯೋಗಿ ಮರಗಳು ಬೆಳೆಯುತ್ತವೆ. ಅರಣ್ಯದಲ್ಲಿ ವಿವಿಧ ಬಗೆಯ ಕಾಡುಪ್ರಾಣಿಗಳೂ ಇವೆ. ಪಂಚವಾರ್ಷಿಕ ಯೋಜನೆ ಯಂತೆ ಅರಣ್ಯಾಭಿವೃದ್ಧಿಗೆ ಇತ್ತೀಚೆಗೆ ಹೆಚ್ಚು ಗಮನ ಕೊಡಲಾಗುತ್ತಿದೆ.

ಶರಾವತಿ (ನೋಡಿ- ಶರಾವತಿ) ಈ ತಾಲ್ಲೂಕಿನ ಮುಖ್ಯನದಿ. ಇದು ದಕ್ಷಿಣದಲ್ಲಿ ಈ ತಾಲ್ಲೂಕನ್ನು ಪ್ರವೇಶಿಸಿ ವಾಯವ್ಯಾಭಿಮುಖವಾಗಿ ಹರಿಯುವುದು. ಸಾಗರದ ವಾಯವ್ಯಕ್ಕೆ 32 ಕಿಮೀ ದೂರದಲ್ಲಿರುವ ಲಿಂಗನಮಕ್ಕಿ (ನೋಡಿ- ಲಿಂಗನಮಕ್ಕಿ) ಎಂಬಲ್ಲಿ ಈ ನದಿಗೆ ದೊಡ್ಡ ಜಲಾಶಯವನ್ನು ನಿರ್ಮಿಸಲಾಗಿದೆ. ಈ ತಾಲ್ಲೂಕಿನ ಸುಮಾರು ಕಾಲುಭಾಗ ಈ ಜಲಾಶಯದ ಹಿನ್ನೀರಿನಿಂದ ಆವೃತವಾಗಿದೆ. ಸರಳ ಹೊಳೆ, ಎರುಕನ ಹೊಳೆ, ದೂಳಮಕ್ಕಿ ಹೊಳೆ, ಹಾಗಿನಕ್ಕು ಹೊಳೆ, ಎಣ್ಣೆ ಹೊಳೆ, ಬೊರದ ಹೊಳೆ, ಬಿರ್ದನ ಹೊಳೆ, ಹುರ್ಳಿಹೊಳೆ. ಸರ್ವಣಾವತಿ ನದಿ ಮತ್ತು ಹರಿದ್ರಾವತಿ-ಇವು ಶರಾವತಿಯ ಉಪನದಿಗಳು. ಇವಲ್ಲದೆ ವರದಾನದಿ, ನಂದಿಹೊಳೆ, ಮಾವಿನಹೊಳೆ ಮುಂತಾದವು ಈ ತಾಲ್ಲೂಕಿನಲ್ಲಿ ಹರಿದು ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿವೆ. ಕುಮುದ್ವತಿ ನದಿಯ ಉಪನದಿಯಾದ ಸಾಲೂರು ಹಳ್ಳಕ್ಕೆ ಅಂಬ್ಳಿಗೋಳದ ಬಳಿ ಕಟ್ಟೆ ಕಟ್ಟಿ ಜಲಾಶಯವನ್ನು ನಿರ್ಮಿಸಲಾ ಗಿದೆ. ಇದು ಈ ತಾಲ್ಲೂಕಿನ ಪೂರ್ವದಲ್ಲಿ ಆನಂದಪುರ ಮತ್ತು ಶಿಕಾರಿಪುರದ ಮಾರ್ಗದಲ್ಲಿದೆ. ಅಂಬ್ಳಿಗೋಳ ಗ್ರಾಮ ಶಿಕಾರಿಪುರ ತಾಲ್ಲೂಕಿಗೆ ಸೇರಿದ್ದು ಅದಕ್ಕೆ ಒಂದೂವರೆ ಕಿಮೀ ದೂರದಲ್ಲಿ ಈ ಕಟ್ಟೆ ಕಟ್ಟಿದ್ದು ಈ ಜಲಾಶಯದ ಹಿನ್ನೀರು ಸಾಗರ ತಾಲ್ಲೂಕಿನಲ್ಲಿದೆ.

ಈ ತಾಲ್ಲೂಕಿನ ಕಣಿವೆಗಳಲ್ಲಿರುವ ತೋಟ-ಗದ್ದೆಗಳನ್ನು ಬಿಟ್ಟು ಉಳಿದೆಲ್ಲ ಭಾಗ ಕೆಂಪು ಜೇಡಿಮಣ್ಣಿನ ಭೂಮಿಯಿಂದ ಕೂಡಿದೆ. ತಗ್ಗಿನ ಕಣಿವೆ ಪ್ರದೇಶಗಳಲ್ಲಿ ಫಲವತ್ತಾದ ಮರಳುಮಿಶ್ರಿತ ಮೆದುಮಣ್ಣಿನ ಭೂಮಿ ಇದ್ದರೆ. ಉಳಿದ ಕಡೆ ಭೂಮಿ ಅಷ್ಟೊಂದು ಫಲವತ್ತಾಗಿಲ್ಲ. ವಾರ್ಷಿಕ ಸರಾಸರಿ ಮಳೆ 2,240.54 ಮಿಮೀ.

ತಾಲ್ಲೂಕಿನಲ್ಲಿ ಬತ್ತ, ಕಬ್ಬು ಜೊತೆಗೆ ರಾಗಿ, ನೆಲಗಡಲೆ, ಹತ್ತಿ ಮತ್ತು ದ್ವಿದಳ ಧಾನ್ಯಗಳನ್ನೂ ಬೆಳೆಯುತ್ತಾರೆ. ಅಡಕೆ, ತೆಂಗು ಇಲ್ಲಿನ ಮುಖ್ಯ ತೋಟದ ಬೆಳೆಗಳು. ಗೇರು, ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಮತ್ತಿಕೊಪ್ಪದಲ್ಲಿ ಹಣ್ಣು ಸಂಸ್ಕರಣ ಕೇಂದ್ರವಿದೆ. ಇಲ್ಲಿ ಅನಾನಸ್ ಹಣ್ಣಿನ ಹಾಗೂ ಇತರ ಹಣ್ಣಿನ ಪಾನೀಯಗಳನ್ನು ತಯಾರಿಸಲಾಗುತ್ತದೆ. ವ್ಯವಸಾಯಪ್ರಧಾನವಾದ ಈ ತಾಲ್ಲೂಕಿನಲ್ಲಿ ಪಶುಸಂಪತ್ತೂ ಇದೆ. ಅದಕ್ಕೆ ಕಾರಣ ಇಲ್ಲಿ ಹೇರಳವಾಗಿ ದೊರಕುವ ಹಸಿರು ಮೇವು.

ಈ ತಾಲ್ಲೂಕು ಗಂಧದ ಗುಡಿಗಾರಿಕೆ ಮತ್ತು ಮರ, ಬೊಂಬು ಇವುಗಳ ವಿವಿಧ ವಸ್ತುಗಳಿಗೆ ಪ್ರಸಿದ್ಧವಾಗಿದೆ. ತಾಲ್ಲೂಕಿನಲ್ಲಿ ಭದ್ರಾವತಿ-ತಾಳಗುಪ್ಪ ರೈಲುಮಾರ್ಗ ಹಾದುಹೋಗಿದೆ. ಸಾಗರ, ತಾಳಗುಪ್ಪ, ಆನಂದಪುರ ಮುಖ್ಯ ರೈಲುನಿಲ್ದಾಣಗಳು. ಬೆಂಗಳೂರು-ಹೊನ್ನಾವರ, ಆವಿನಹಳ್ಳಿ-ಸೊರಬ ಮುಖ್ಯ ರಸ್ತೆಗಳು. ಈ ತಾಲ್ಲೂಕಿನಲ್ಲಿ ಸಾಗರದ ಮಾರಿಕಾಂಬಾ ಜಾತ್ರೆ, ಕೆಳದಿಯ ರಾಮೇಶ್ವರ ಜಾತ್ರೆ ಹೆಸರಾದವು.

ಈ ತಾಲ್ಲೂಕಿನ ಮುಖ್ಯ ಸ್ಥಳಗಳ ಪೈಕಿ ಒಂದಾದ ಆನಂದಪುರ ಸಾಗರದ ಆಗ್ನೇಯಕ್ಕೆ 24 ಕಿಮೀ ದೂರದಲ್ಲಿ ಬೀರೂರು-ತಾಳಗುಪ್ಪ ರೈಲುಮಾರ್ಗದಲ್ಲಿದೆ. ಇದೊಂದು ವ್ಯಾಪಾರ ಕೇಂದ್ರ. ಹಿಂದೆ ಅನಂತಪುರ ವೆಂಬ ತಾಲ್ಲೂಕಿಗೆ ಅದೇ ಹೆಸರಿನಿಂದ ಆಡಳಿತ ಕೇಂದ್ರವಾಗಿತ್ತು (1838-75). ಕೆಳದಿಯ ರಾಜ ಸೋಮಶೇಖರನಾಯಕ ಇದನ್ನು ಆನಂದಪುರವೆಂದು ಕರೆದನೆಂದು ಪ್ರತೀತಿ. ಇಲ್ಲಿ ಶಿವ, ಹನುಮಂತ ಮತ್ತು ರಂಗನಾಥ ಎಂಬ ಮೂರು ದೇವಾಲಯಗಳು ಇತ್ತೀಚಿನವು. ಸಾಗರದ ದಕ್ಷಿಣಕ್ಕೆ 6 ಕಿಮೀ ದೂರದಲ್ಲಿರುವ ಇಕ್ಕೇರಿ (ನೋಡಿ- ಇಕ್ಕೇರಿ) ಕೆಳದಿ ಸಂಸ್ಥಾನದ ರಾಜಧಾನಿಯಾಗಿದ್ದ ಐತಿಹಾಸಿಕ ಸ್ಥಳ ಸಾಗರದ ದಕ್ಷಿಣಕ್ಕೆ 11 ಕಿಮೀ ದೂರದಲ್ಲಿರುವ ಆವಿನಹಳ್ಳಿ ಕೆಳದಿ ನಾಯಕರ ಕಾಲದಲ್ಲಿ ಪ್ರಾಮುಖ್ಯಪಡೆದಿದ್ದ ಸ್ಥಳ. ಇಲ್ಲಿ ಕೆಲವು ದೇವಾಲಯಗಳು ಮತ್ತು ಕೋಟೆಯ ಅವಶೇಷಗಳಿವೆ. ಸಾಗರಕ್ಕೆ ಉತ್ತರದಲ್ಲಿ 8 ಕಿಮೀ ದೂರದಲ್ಲಿರುವ ಕೆಳದಿ (ನೋಡಿ- ಕೆಳದಿ) ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳ. ಸಾಗರದ ಆಗ್ನೇಯಕ್ಕೆ 25 ಕಿಮೀ ದೂರದಲ್ಲಿರುವ ಮಾಲಂದೂರಿನಲ್ಲಿ ಕೆಳದಿಯ ಶಿವಪ್ಪನಾಯಕ ಕಟ್ಟಿಸಿದುದೆಂದು ಹೇಳುವ ದೊಡ್ಡ ಕೆರೆಯಿದ್ದು ಕೆರೆಯ ಮಧ್ಯದಲ್ಲಿ ಬಸವನ ಮಂಟಪವಿದೆ. ಇಲ್ಲಿರುವ ಚಂಪಕಸರಸಿ ಮಹತ್ತುಮಠ ಕೆಳದಿ ನಾಯಕರ ಆಶ್ರಯದಲ್ಲಿದ್ದುದೆಂದು ಹೇಳುವರು. ಈ ಮಠದ ಪ್ರವೇಶದ್ವಾರದಲ್ಲಿ ಕಲ್ಲಿನ ಆನೆಗಳಿವೆ. ಸಾಗರದ ಈಶಾನ್ಯದಲ್ಲಿ 10 ಕಿಮೀ ದೂರಕ್ಕೆ ಇರುವ ನಾಡಕಳಸಿಯಲ್ಲಿ ಎರಡು ಹೊಯ್ಸಳ ದೇವಾಲಯಗಳೂ ವೀರಗಲ್ಲುಗಳೂ ಮತ್ತು ಕೆಳದಿನಾಯಕರ ಕಾಲದ ಕೆಲವು ಹಳೆಯ ಕಟ್ಟಡಗಳೂ ಇವೆ. ಸಾಗರದ ವಾಯವ್ಯಕ್ಕೆ 16 ಕಿಮೀ ದೂರದಲ್ಲಿರುವ ತಾಳಗುಪ್ಪ, ಬೀರೂರು ರೈಲುಮಾರ್ಗದ ಕೊನೆಯ ನಿಲ್ದಾಣ. ತಾಳಗುಪ್ಪದ ರೈಲುನಿಲ್ದಾಣದಿಂದ ಜೋಗ ಜಲಪಾತಕ್ಕೆ 16 ಕಿಮೀ ದೂರ ಸಾಗರದ ವಾಯವ್ಯಕ್ಕೆ 38 ಕಿಮೀ ದೂರದಲ್ಲಿರುವ ತಳಕಳಲೆಯ ಹತ್ತಿರ ಶರಾವತಿ ನದಿಯ ಉಪನದಿಯಾದ ತಳಕಳಲೆ ತೊರೆಗೆ ಅಡ್ಡಗಟ್ಟೆ ಕಟ್ಟಲಾಗಿದೆ. ಇದು ಪ್ರಕೃತಿಯ ಸುಂದರ ನೆಲೆಯಲ್ಲಿದೆ.

ಸಾಗರ ಈ ತಾಲ್ಲೂಕಿನ, ಜಿಲ್ಲಾ ಉಪವಿಭಾಗದ ಆಡಳಿತ ಕೇಂದ್ರ ಹಾಗೂ ಪಟ್ಟಣ. ಶಿವಮೊಗ್ಗದ ವಾಯವ್ಯಕ್ಕೆ 71 ಕಿಮೀ ದೂರದಲ್ಲಿ ಬೆಂಗಳೂರು-ಹೊನ್ನಾವರ ಮಾರ್ಗದಲ್ಲಿ, ವರದಾನದಿಯ ಎಡದಂಡೆಯ ಮೇಲಿದೆ. ಜನಸಂಖ್ಯೆ 50,115. ಬೀರೂರು-ತಾಳಗುಪ್ಪ ರೈಲುಮಾರ್ಗದಲ್ಲಿ ಒಂದು ಪ್ರಮುಖ ರೈಲ್ವೆ ನಿಲ್ದಾಣವಾಗಿರುವ ಈ ಪಟ್ಟಣ ಅಡಕೆ, ಬತ್ತ, ಮೆಣಸು ಮತ್ತು ಗಂಧದ ಸಾಮಾನುಗಳ ಪ್ರಸಿದ್ಧ ವ್ಯಾಪಾರ ಕೇಂದ್ರ. ಹೆಂಚು ತಯಾರಿಸುವ ಎರಡು ಕಾರ್ಖಾನೆ ಹಾಗೂ ಬತ್ತದ ಗಿರಣಿಗಳಿವೆ. ಸಿದ್ಧಿವಿನಾಯಕ, ಕಾಳಿಂಗಮರ್ದನ ಮತ್ತು ಗೋಪಾಲಕೃಷ್ಣ, ಶಿವ ಮತ್ತು ಮಾರಿಕಾಂಬ ದೇವಾಲಯಗಳು ಈ ಪಟ್ಟಣದಲ್ಲಿವೆ. 1923ರಿಂದ ಈ ಪಟ್ಟಣದಲ್ಲಿ ನಗರಸಭಾಡಳಿತವಿದೆ. ಜೋಗಜಲಪಾತ ಪ್ರವಾಸಿಗರ ಸ್ವರ್ಗವೆನಿಸಿದ್ದು ಈಗ ಅದು ಜನವಸತಿ ಪ್ರದೇಶವಾಗಿದೆ. ಜನಸಂಖ್ಯೆ 12,570. (ಕೆ.ಆರ್.ಆರ್.)