ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಗರಯಾನ ಕಾಯ್ದೆ

ಸಾಗರಯಾನ ಕಾಯ್ದೆ - ಯಾವುದೇ ಬಗೆಯ ಜಲವಾಹಕಗಳ ಸಾಗರಯಾನ ಕುರಿತ ಕಾಯಿದೆ (ಮ್ಯಾರಿಟೈಮ್ ಲಾ). ಹಿಂದಿನಿಂದಲೂ ಪ್ರಪಂಚದ ವ್ಯಾಪಾರ ವಾಣಿಜ್ಯ ಪ್ರಧಾನವಾಗಿ ಜಲಸಾರಿಗೆಯನ್ನೆ ಅವಲಂಬಿ ಸಿತ್ತು. ಕಡಲ ತೀರ ಮತ್ತು ನದಿ ತಟಾಕಗಳು ವ್ಯಾಪಾರ ಸ್ಥಳಗಳ ವಾಣಿಜ್ಯ ಕೇಂದ್ರಗಳ ಉಗಮ ಸ್ಥಾನವಾಗಿದ್ದುವು. ಹಡಗುಗಳು ಸಾಗರಗಳ ಮೇಲೆ ದೇಶದಿಂದ ದೇಶಕ್ಕೆ ಸಂಚರಿಸುತ್ತ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದುವು. ಬರುಬರುತ್ತ ಈ ವ್ಯಾಪಾರ ಹೆಚ್ಚಾಯಿತು. ಹಾಗೆಯೇ ಕೆಲವು ತೊಡಕುಗಳು ತೋರಿದುವು. ಇದರಿಂದ ದೇಶಗಳು ಪರಸ್ಪರ ಒಂದು ಒಡಂಬಡಿಕೆಗೆ ಬರುವುದು ಅನಿವಾರ್ಯವಾಯಿತು. ನೌಕೆ, ಜಲಸಾರಿಗೆ ಇವುಗಳಿಗೆ ಸಂಬಂಧಿಸಿದಂತೆ ಕಾಲಾನುಕ್ರಮದಲ್ಲಿ ಅನುಷ್ಠಾನಕ್ಕೆ ಬಂದ ಆಚರಣೆ, ಸಂಪ್ರದಾಯಗಳು, ರೀತಿ ರಿವಾಜುಗಳು, ತತ್ಸಂಬಂಧವಾದ ನ್ಯಾಯಾಲಯ ತೀರ್ಪುಗಳು ಮತ್ತು ಇನ್ನಿತರ ಕಾಯಿದೆಗಳ ಒಟ್ಟು ಸಮನ್ವಯವನ್ನೇ ಸಾಗರಯಾನ ನಿಯಮ ಅಥವಾ ಕಾಯ್ದೆ ಎನ್ನುತ್ತೇವೆ.

ಸಾಗರಯಾನ ನಿಯಮಗಳ ಮೂಲ ಕಾಲ ಗರ್ಭದಲ್ಲಿ ಅಡಗಿ ಹೋಗಿದೆ. ಇದರ ಕೆಲವು ತತ್ತ್ವಗಳಂತೂ ಜಲಯಾನ ವಾಣಿಜ್ಯ ವಹಿವಾಟಿ ನಷ್ಟೇ ಹಳೆಯದೆಂದು ಹೇಳಬಹುದು. ಪ್ರಾಚೀನ ನಾಗರಿಕತೆಗಳು ತಮ್ಮದೇ ಆದ ಪ್ರತ್ಯೇಕ ರೀತಿಯ ಸಮುದ್ರಯಾನ ಕಾಯಿದೆಗಳನ್ನು ರಚಿಸಿಕೊಂಡಿದ್ದುವು. ಕ್ರಿ.ಪೂ. 9-8ನೆಯ ಶತಮಾನದ ರ್ಹೋಡ್ಸ್ ಕಾಯಿದೆಗಳು, ಕ್ರಿ.ಪೂ. 6ನೆಯ ಶತಮಾನದ ಬಿeóÁನ್‍ಟೀಯನ್ ಕಾಯಿದೆಗಳು, ಕ್ರಿ.ಪೂ.3ನೆಯ ಶತಮಾನದ ಚಂದ್ರಗುಪ್ತಮೌರ್ಯನ ಕಾಲದಲ್ಲಿದ್ದ ಆಚರಣೆಗಳು, 533ರ ಜಸ್ಟೀನಿಯನ್ ರೋಮನ್ ಡೈಜೆಸ್ಟ್, 10-14ನೆಯ ಶತಮಾನಗಳ ನಡುವಣ ಕಾಲದಲ್ಲಿ ಇಟಲಿ, ಫ್ರಾನ್ಸ್, ಹಾಲೆಂಡ್, ಸ್ವೀಡನ್, ಸ್ಪೇನ್ ದೇಶಗಳಲ್ಲಿ ರಚಿತವಾದ ತತ್ಸಂಬಂಧ ಕಾಯಿದೆಗಳನ್ನು ಮತ್ತು ಹಾನ್ಸೀಯಾಟಿಕ್ ಒಕ್ಕೂಟದ ಕಾಯಿದೆಗಳನ್ನೂ ಉದಾಹರಿಸಬಹುದು. ಇಂಗ್ಲೆಂಡಿನ ಮೂರನೆಯ ಎಡ್ವರ್ಡ್‍ನ ಕಾಲದಲ್ಲಿಯ (16ನೆಯ ಶತಮಾನ) ಬ್ಲಾಕ್ ಬುಕ್ ಆಫ್ ದಿ ಅಡ್ಮಿರಾಲ್ಟಿ ಎಂಬ ಕಾಯಿದೆ ಸಂಗ್ರಹವೇ ಸಾಗರಯಾನ ನಿಯಮಕ್ಕೆ ಸಂಬಂಧಿಸಿದ ಪ್ರಥಮ ಪ್ರಯತ್ನ ಎನ್ನಬಹುದು. ಅನಂತರ ಈ ಕಾಯಿದೆಗಳು ಮತ್ತಷ್ಟು ವ್ಯಾಖ್ಯಾನಗಳೊಂದಿಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಮುಟ್ಟಿದವು.

ಶುಕ್ರನೀತಿ, ಕೌಟಿಲ್ಯನ ಅರ್ಥಶಾಸ್ತ್ರ, ಅಬುಲ್‍ಫಸಲನ ಐನ್-ಇ-ಅಕ್ಬರಿ ಇವೇ ಮುಂತಾದ ಗ್ರಂಥಗಳು ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದಲ್ಲಿ ಈ ಬಗ್ಗೆ ಆಚರಣೆಯಲ್ಲಿದ್ದ ಅನೇಕ ನಿಯಮಗಳನ್ನು ಉಲ್ಲೇಖಿಸುತ್ತವೆ. ನದೀಸಾಗರಯಾನ ಚುರುಕಾದ ಕಾರ್ಯ ಸಮರ್ಥನೊಬ್ಬನ ಮೇಲ್ವಿಚಾರಣೆಯಲ್ಲಿರುತ್ತಿತ್ತು. ಅವನು ನೌಕೆ, ದೋಣಿ, ಹರಿಗೋಲುಗಳಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನೂ ಇತ್ಯರ್ಥಪಡಿ ಸುತ್ತಿದ್ದ. ದೋಣಿ, ನಾವೆಗಳಿಗೆ ಇಂತಿಷ್ಟೇ ಭಾರ ಹೇರಬೇಕೆಂದು ಅವನು ತೀರ್ಮಾನಿಸುತ್ತಿದ್ದ. ಪ್ರಯಾಣಿಕರಿಗೆ ದೋಣಿ ವ್ಯವಸ್ಥೆ ಮಾಡುತ್ತಿದ್ದ. ನಿರ್ಗತಿಕರಿಗೆ ಉಚಿತ ಪ್ರಯಾಣ ಏರ್ಪಡಿಸುವುದು ಅವನ ಕರ್ತವ್ಯವೇ ಆಗಿತ್ತು. ಅಪ್ಪಣೆಯಿಲ್ಲದೆ ನದಿ ಹೊಳೆಗಳನ್ನು ಈಜಿ ಅಥವಾ ನಡೆದು ದಾಟುವುದು ಶಿಕ್ಷಾರ್ಹ ಅಪರಾಧವೆನಿಸಿತ್ತು. ರಾತ್ರಿವೇಳೆ ದೋಣಿ ಸಂಚಾರವನ್ನು ನಿಷೇಧಿಸಲಾಗಿತ್ತು. ಬಂದರು ಕಟ್ಟೆಯಲ್ಲಲ್ಲದೆ ಬೇರೆಲ್ಲೂ ಸರಕುಗಳನ್ನು ಇಳಿಸುವುದು ಅಥವಾ ತುಂಬಿಕೊಳ್ಳುವುದು ಅಪರಾಧವೆಂದು ಪರಿಗಣಿತವಾಗಿತ್ತು. ತನ್ಮೂಲಕ ಕಳ್ಳಸಾಗಾಣಿಕೆಗೆ ತಡೆಯೊಡ್ಡಲಾಗಿತ್ತು. ತೆರಿಗೆ, ಸುಂಕಗಳನ್ನು ವಿಧಿಸು ವುದು ಮತ್ತು ಅವುಗಳ ವಸೂಲಿ ಅಥವಾ ಮನ್ನಾಮಾಡುವುದು ಅವನ ಅಧಿಕಾರಕ್ಕೆ ಸೇರಿದ್ದುವು.

ಕೌಟಿಲ್ಯನ ಅರ್ಥಶಾಸ್ತ್ರದ ಪ್ರಕಾರ ಪ್ರಾಚೀನ ಭಾರತದಲ್ಲಿ ನೌಕಾ ಮೇಲ್ವಿಚಾರಕನ ಕರ್ತವ್ಯ ಹೀಗಿದ್ದವು : ಸ್ಥಾನೀಯ ಮತ್ತು ರಕ್ಷಿತ ನಗರಗಳ ನಿಟ್ಟಿನಲ್ಲಿರುವ ನದಿ, ನದೀಮುಖ, ಸಾಗರ, ಸರೋವರಗಳ ಯಾನಕ್ಕೆ ಸಂಬಂಧಿಸಿದ ಲೆಕ್ಕ ವಿವರಣೆ ಇಡುವುದು ಮತ್ತು ನೌಕಾ ಪರ್ಯಟನ ಮೇಲುಸ್ತುವಾರಿ; ನದಿ, ಸಾಗರ, ಸರೋವರ ತಟಾಕಗಳಲ್ಲಿಯ ಗ್ರಾಮಗಳ ಮೇಲೆ ತೆರಿಗೆ ವಿಧಿಸುವುದು; ಬೆಸ್ತರು ಮತ್ತು ರೇವುಪಟ್ಟಣ ಗಳಲ್ಲಿ ವಾಸಿಸುವ ವರ್ತಕರಿಂದ ಸುಂಕ ವಸೂಲಿ, ಅರಸನ ನಾವೆಗಳನ್ನು ಬಳಸುವ ಪ್ರಯಾಣಿಕರಿಂದ ಯಾತ್ರಾ ವೇತನ ವಸೂಲಿ; ಸಮುದ್ರದಾಳ ದಿಂದ ಶಂಖ, ಕಪ್ಪೆಚಿಪ್ಪು, ಹವಳ, ಮುತ್ತುಗಳನ್ನಾಯ್ದು ಹೊರತರಲು ರಾಜದೋಣಿಗಳನ್ನು ಬಾಡಿಗೆಗೆ ಕೊಡುವುದು; ವಾಣಿಜ್ಯ ಕೇಂದ್ರಗಳಲ್ಲಿ ಚಾಲ್ತಿಯಲ್ಲಿರುವ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದು; ಜಂಝಾವಾತಕ್ಕೆ ಸಿಕ್ಕಿ ಕೆಟ್ಟುಹೋದ ಸರಕುಗಳಿಗೆ ಸುಂಕ ರಿಯಾಯ್ತಿ; ಹಿಂಸ್ರಕ ನೌಕೆಗಳು (ಕಡಲ್ಗಳ್ಳರ ನೌಕೆಗಳು), ಶತ್ರುದೇಶಗಳಿಗೆ ಗಮಿಸುತ್ತಿರುವ ನಾವೆಗಳು ಮತ್ತು ಸಂಪ್ರದಾಯಾಚರಣೆ ಗಳನ್ನುಲ್ಲಂಘಿಸುವ ನೌಕೆಗಳನ್ನು ನಾಶಪಡಿಸುವುದು; ದೇಶದ್ರೋಹಿಗಳು ಈಜಿ ಪಾರಾಗುವುದನ್ನು ತಡೆಯಲೋಸುಗ ಅಪ್ಪಣೆಯಿಲ್ಲದೆ ನದಿದಾಟುವವರನ್ನು ಕಠಿಣ ಜುಲ್ಮಾನೆಗೊಳಪಡಿಸುವುದು; ಅಲ್ಲದೆ ಗರ್ಭಿಣಿಯರು, ಅಂಗವಿಕಲರು, ವಯಸ್ಕರು, ಮಕ್ಕಳು ಮತ್ತು ನಿರ್ಗತಿಕರಿಗೆ ಉಚಿತ ಪ್ರಯಾಣದ ಏರ್ಪಾಟು ಇತ್ಯಾದಿ.

ಒಟ್ಟಾರೆ ಹೇಳುವುದಾದಲ್ಲಿ ಸಾಗರಯಾನ ಕಾಯ್ದೆ ಹಡಗಿನ ಒಡೆಯನ ಅಧಿಕಾರವ್ಯಾಪ್ತಿ, ನಾವಿಕರ ಹಕ್ಕುಬಾಧ್ಯತೆಗಳು, ನಾವೆಗಳ ರಚನೆ, ನ್ಯಾಯಾಧಿಕಾರ, ಪರಿಮಿತಿ ಭೋಗ್ಯಾದಿ ಹಕ್ಕುಗಳು ನೌಕಾಮಾಲೀಕನ ಮಿತ ಹೊಣೆಗಾರಿಕೆ, ನೌಕಾವಿಮೆ, ಕೊಳ್ಳೆ ಇವೇ ಅಲ್ಲದೆ ಸರಕು ಹೇರಿಕೆ, ಸಾರಿಗೆ ಕರಾರು, ಗಡುನಿಬಂಧನೆ, ಬಂದರು ಸುಂಕ, ಸಾಗರ ಅಪಘಾತಗ ಳಿಂದ ಹಡಗು ಮತ್ತು ಅದರ ಸರಕಿನ ರಕ್ಷಣೆ ಹಾಗೂ ನೋವು ನಷ್ಟಗಳು, ಕಡಲ್ಗಳ್ಳತನ, ನಾವಿಕರ ಪಿತೂರಿ, ಸೇವಾ ಪರಿತ್ಯಾಗ ಮುಂತಾದ ಅಂಶಗಳನ್ನೊಳಗೊಂಡಿದೆ.

ಪರ್ಯಟನ ಕಾಲದಲ್ಲಿ ನೌಕೆಯ ಪೂರ್ಣ ಆಡಳಿತಾಧಿಕಾರ ಮಾಲೀಕನ ಪ್ರತಿನಿಧಿಯಾದ ಮುಖ್ಯನೌಕಾಧಿಕಾರಿಗೆ ಸೇರಿದ್ದು. ಪ್ರಯಾಣಿಕರ ಮತ್ತು ನಾವಿಕರ ಸುರಕ್ಷತೆ ತನ್ನ ವಶಕ್ಕೊಪ್ಪಿಸಲಾದ ಸರಕುಗಳ ಭದ್ರತೆ, ನಾವಿಕರ ಆಹಾರ ಪಾನೀಯಗಳ ಸರಬರಾಜು, ವೈದ್ಯಕೀಯ ಸವಲತ್ತು ಮತ್ತು ದೌರ್ಜನ್ಯದಿಂದ ಅವರ ರಕ್ಷಣೆ-ಇವು ಆತನ ಹೊಣೆ. ಹಡಗಿನ ದಿನಚರಿ ವರದಿ ಪುಸ್ತಕ ಅವನ ವಶದಲ್ಲಿರುತ್ತದೆ.

ನಾವಿಕರು ನೌಕಾಧಿಪತ್ಯದ ಪಾಲನೆಯಲ್ಲಿರುವವರೆಂದು ಪರಿಗಣಿಸಲಾಗಿದೆ. ಅವರ ಬಗ್ಗೆ ತುಂಬ ಆಸಕ್ತಿ ವಹಿಸಲಾಗುತ್ತದೆ. ಅವರ ಸಂಬಳ, ಸಾರಿಗೆಗಳು ನಾವಿಕರ ಹಕ್ಕೆಂದು ಭಾವಿಸಲಾಗಿದೆ. ಇದಕ್ಕೆ ಪ್ರತಿಯಾಗಿ ನಾವಿಕರು ಸಹ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು.

ನೌಕಾ ನಿರ್ಮಾಣ, ಅವುಗಳ ಯಾನಯೋಗ್ಯತೆ, ಸಂರಕ್ಷಣೆ, ನಾವಿಕರ ಮತ್ತು ನೌಕಾಧಿಕಾರಿಗಳ ಬಿಡಾರ ವ್ಯವಸ್ಥೆ ಮತ್ತಿತರ ಅನುಕೂಲಗಳು, ನೌಕೆಗಳಿಗೆ ಜೋಡಿಸುವ ಜೀವರಕ್ಷಕ ದೋಣಿಗಳು, ಬೆಂಕಿ ದುರಂತದ ಬಗ್ಗೆ ಮುಂಜಾಗ್ರತೆ, ನೌಕೆಗಳ ತೂಕ ಮತ್ತು ಉದ್ದಳತೆ, ಸರಕು, ಪ್ರಯಾಣಿಕರ ಅಳವಡಿಕೆಯ ಸಾಮಥ್ರ್ಯ, ಅವುಗಳ ಅಶ್ವಶಕ್ತಿ, ಉಗಿ ಕೊಪ್ಪರಿಕೆಗಳು ಸಮರಕಾಲದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಸಮರ್ಪಕ ವಾಗಿ ಪರಿವರ್ತಿಸಿಕೊಳ್ಳಲು ಅನುಕೂಲವಾಗುವಂತೆ ಅವುಗಳ ರಚನೆ ಇವಿಷ್ಟನ್ನೂ ಗಮನಿಸಬೇಕಾಗುತ್ತದೆ.

ನ್ಯಾಯಾಲಯಗಳ ಅಧಿಕಾರ ಬಾಹುಳ್ಯವೂ ಈ ಕಾಯಿದೆಯಲ್ಲಿ ಅಡಕವಾಗಿರುತ್ತದೆ. ಭೋಗ್ಯಾದಿ ಹಕ್ಕುಗಳ ಚಲಾವಣೆ ನಿಷ್ಕರ್ಷಿತವಾಗಿದ್ದು ಇಲ್ಲಿ ಅನಂತರ ಭೋಗ್ಯ ಮಾಡಿಸಿಕೊಂಡವನ ಹಕ್ಕು ಮೊದಲಿನವದಕ್ಕಿಂತ ಹೆಚ್ಚೆಂದು ಪರಿಗಣಿಸಿ ಅದನ್ನು ಊರ್ಜಿತಗೊಳಿಸಲಾಗುತ್ತದೆ. ನೌಕಾ ಮಾಲೀಕನ ಮಿತಹೊಣೆಗಾರಿಕೆ ಸಹ ಈ ಕಾಯಿದೆಯ ಒಂದು ಪ್ರಧಾನ ಅಂಗ. ಇದು ಹೆಚ್ಚು ಕಡಿಮೆ ಕಂಪನಿ ಕಾಯಿದೆಯ ಮಿತ ಹೊಣೆಗಾರಿಕೆ ತತ್ತ್ವದ ಮೇಲೆ ರೂಪಿತವಾಗಿದೆ. ಅಂತೆಯೇ ಹೊರಿಸಲ್ಪಡಬಹುದಾದ ಸಕಲ ಹೊಣೆಗಾರಿಕೆಗಳೂ ಮಾಲೀಕನ ನೌಕೆಯ ಬೆಲೆಯೊಳಗೇ ಮಿತಗೊಳಿಸಲ್ಪಟ್ಟಿರುತ್ತದೆ.

ನೌಕಾವಿಮೆ : ಇದು ಚಾಲ್ತಿಯಲ್ಲಿರುವ ಸಮುದ್ರಯಾನ ಕಾಯ್ದೆಯಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಮಧ್ಯಕಾಲೀನ ಯುಗದಿಂದಲೂ ಇದು ಒಂದಲ್ಲ ಒಂದು ರೀತಿಯಲ್ಲಿ ರೂಢಿಯಲ್ಲಿತ್ತೆಂದು ಹೇಳಬಹುದು. ಸ್ವಾಭಾವಿಕ ಸಾವು ನೋವುಗಳು ಮತ್ತು ನಾವಿಕರ ಭತ್ಯೆಗಳನ್ನುಳಿದು ಇತರ ಎಲ್ಲ ಕಂಟಕಗಳ ವಿರುದ್ಧ ನೌಕಾವಿಮೆ ರಕ್ಷಣೆಯೊದಗಿಸುತ್ತದೆ.

ಕೊಳ್ಳೆ : ಯುದ್ಧಕಾಲದಲ್ಲಿ ಸೆರೆಹಿಡಿದು ತರಲಾದ ಶತ್ರುನೌಕೆಗಳನ್ನು ನ್ಯಾಯಾಲಯ ನ್ಯಾಯಬದ್ಧ ಕೊಳ್ಳೆಯೆಂದು ಘೋಷಿಸಿದಲ್ಲಿ ಅವುಗಳ ಮಾರಾಟದಿಂದ ಬಂದ ಹಣವನ್ನು ಅವನ್ನು ಸೆರೆಹಿಡಿದವರು ಹಂಚಿ ಕೊಳ್ಳುವ ಹಕ್ಕಿರುತ್ತಿತ್ತು. ಆದರೆ ಸಾಗರ ಸಮರತಂತ್ರದಲ್ಲಾಗಿರುವ ಬದಲಾವಣೆಗಳ ದೆಸೆಯಿಂದಾಗಿ ಈ ಆಚರಣೆ 20ನೆಯ ಶತಮಾನದ ವೇಳೆಗೆ ಕೊನೆಗೊಂಡಿತು.

ಸಾಗರಯಾನ ಕಾಯ್ದೆ ಒಂದು ಶತಮಾನದಿಂದೀಚೆಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬೆಳೆಯುತ್ತಿರುವುದು ಒಂದು ಗಮನಾರ್ಹ ಅಂಶ. ಒಂದೆಡೆ ರಾಷ್ಟ್ರಗಳು ತಮ್ಮಲ್ಲಿ ಆಚರಣೆಯಲ್ಲಿರುವ ಪ್ರತ್ಯೇಕ ರೀತಿಯ ನೌಕಾ ವ್ಯವಹಾರ ಪದ್ಧತಿ ಮತ್ತಿತರ ರೀತಿ ರಿವಾಜುಗಳನ್ನು ಕ್ರೋಡೀಕರಿಸು ತ್ತಿದ್ದರೆ ಮತ್ತೊಂದೆಡೆ ಈ ಕಾಯ್ದೆಯ ಬೆಳೆವಣಿಗೆಯಲ್ಲಿ ಅಂತಾರಾಷ್ಟ್ರೀಯ ತ್ವದ ಸೆಳಕೂ ಕಂಡುಬರುತ್ತಿದೆ. ಉದಾಹರಣೆಗೆ ಸಮುದ್ರ ಮಧ್ಯೆ ಆಪತ್ತಿಗೊಳಗಾದ ನೌಕೆ ಮತ್ತು ಜೀವ ವಿತ್ತಗಳ ರಕ್ಷಣಾ ಒಪ್ಪಂದ (1912), 1922ರ ಅಂತಾರಾಷ್ಟ್ರೀಯ ಸರಕು ಸಾಗಣೆ ವ್ಯವಸ್ಥೆ, 1929ರ ಅಂತಾರಾಷ್ಟ್ರೀಯ ಜೀವರಕ್ಷಣಾ ಒಡಂಬಡಿಕೆ; ಎರಡನೆಯ ಮಹಾಯುದ್ಧದ ಅನಂತರ ಲಂಡನ್ ಮತ್ತು ಬ್ರಸಿಲಿನಲ್ಲಿ ಮಾಡಿಕೊಳ್ಳಲಾದ ಅಂತಾರಾಷ್ಟ್ರೀಯ ಒಂಡಂಬಡಿಕೆಗಳು. ಇಷ್ಟಾದರೂ ಇನ್ನೂ ಎಷ್ಟೋ ವಿಷಯಗಳು ರಾಷ್ಟ್ರಗಳ ಮನ್ನಣೆ ಪಡೆಯದೆ ಉಳಿದಿವೆ. ಯುದ್ಧಕಾಲದಲ್ಲಿ ವ್ಯಾಪಾರ ನೌಕೆಗಳ ಪರ್ಯಟನಾ ಸ್ವಾತಂತ್ರ್ಯ ಇನ್ನೂ ತೆರೆದ ಪ್ರಶ್ನೆಯಾಗಿದೆ. ಸಮರ ಕಾಲದಲ್ಲಿ ಶತ್ರುನೌಕೆಗಳ ಮೇಲೆ ನಡೆಯುವ ದಾಳಿಗಳು, ಜಲಾಂತರ್ಗಾಮಿಗಳ ಅವಾಂತರಗಳಿಂದಾಗಿ ಸಾಗರ ಯಾನ ಕಾಯ್ದೆಯ ಅಂಗವಾಗಿರುವ ಎಷ್ಟೋ ಉದಾತ್ತ ಧ್ಯೇಯ ತತ್ತ್ವಗಳು ಗಾಳಿಪಾಲಾಗಿವೆ. ಯುದ್ಧಕಾಲದಲ್ಲಿ ರಾಷ್ಟ್ರಗಳು ಸಾಗರಯಾನ ಕಾಯ್ದೆಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ದೊಡ್ಡ ರಾಷ್ಟ್ರಗಳು ದೇಶಹಿತ ರಕ್ಷಣೆಯಲ್ಲಿ ಚಿಕ್ಕದೇಶಗಳ ಹಿತರಕ್ಷಣೆಯತ್ತ ಗಮನಹರಿಸುತ್ತಿಲ್ಲ. ಪ್ರಪಂಚದಾದ್ಯಂತ ಸಾಗರಯಾನ ಕಾಯ್ದೆಗಳ ಕಟ್ಟುನಿಟ್ಟಿನ ಜಾರಿಯತ್ತ ಪ್ರಯತ್ನಗಳು ನಡೆದಿವೆ. (ಎನ್.ಬಿ.ಟಿ.)