ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ

ಕೈಗಾರಿಕಾಕ್ರಾಂತಿಯ ಫಲವಾಗಿ ಸಾರಿಗೆ ವ್ಯವಸ್ಥೆಯಲ್ಲೂ ಕ್ರಾಂತಿಕಾರಕ ಬದಲಾವಣೆಗಳಾದವು. ಕೈಗಾರಿಕಾ ಕ್ರಾಂತಿ ಆರಂಭವಾದಾಗ ಇಂಗ್ಲೆಂಡಿನ ಸಾರಿಗೆ ವ್ಯವಸ್ಥೆ ತೀರ ಅಸಮರ್ಪಕವಾಗಿತ್ತು. ಇಂಗ್ಲೆಂಡಿನಲ್ಲಿ ರಸ್ತೆ ವ್ಯವಸ್ಥೆಯ ವಿಷಯದಲ್ಲಿ ನಿರ್ದಿಷ್ಟ ಯೋಜನೆಗಳಿಲ್ಲದಿದ್ದುದೇ ಈ ಅವ್ಯವಸ್ಥೆಗೆ ಕಾರಣ. ಸುಂಕದ ರಸ್ತೆ ಕಂಪೆನಿಗಳು ನೂರಾರು ಹುಟ್ಟಿಕೊಂಡಿದ್ದು ಅವೇ ಒಂದಿಷ್ಟು ರಸ್ತೆ ನಿರ್ಮಿಸಿದ್ದವು.

18ನೆಯ ಶತಮಾನದ ಕೊನೆಯಲ್ಲಿ ಮತ್ತು 19ನೆಯ ಶತಮಾನದ ಪ್ರಾರಂಭದಲ್ಲಿ ರಸ್ತೆ ನಿರ್ಮಾಣದಲ್ಲಿ ಅದ್ಭುತ ಪ್ರಗತಿಯಾಯಿತು. ಉತ್ತರ ಇಂಗ್ಲೆಂಡಿನಲ್ಲಿ ಜಾನ್ ಮೆಟ್ಕಾಫ್ ಅಚ್ಚುಕಟ್ಟಾದ ಉತ್ತಮ ರಸ್ತೆಗಳನ್ನು ನಿರ್ಮಿಸಿದ. ಟಿಲ್ಫೋರ್ಡ್ ಮತ್ತು ಮ್ಯಕಾಡಂ ಎಂಬುವರು ಒಳ್ಳೆಯ ರಸ್ತೆಗಳನ್ನು ನಿರ್ಮಿಸುವುದಕ್ಕೆ ಆರಂಭಿಸಿದರು. (ಪದರ ಪದರವಾಗಿ ಜಲ್ಲಿ ಹಾಕಿ ಗಟ್ಟಿಸಿ ಮಾಡುವ ಮ್ಯಕಾಡಂ ರಸ್ತೆ ವಿಧಾನಕ್ಕೆ ಇವನ ಹೆಸರೇ ಬಂದಿದೆ.) ಇಂತಹ ರಸ್ತೆಗಳ ನಿರ್ಮಾಣದಿಂದಾಗಿ ಸಾಗಾಣಿಕೆ ಬೆಲೆ ಕಡಿಮೆಯಾಯಿತು. ಆದರೆ ರೈಲಿನ ಪ್ರಾರಂಭದಿಂದಾಗಿ ರಸ್ತೆ ನಿರ್ಮಾಣಕ್ಕೆ ಮುಂದೆ ಹೆಚ್ಚು ಗಮನ ಕೊಡಲಾಗಲಿಲ್ಲ. 19ನೆಯ ಶತಮಾನದ ಅಂತ್ಯದ ವೇಳೆಗೆ ಸುಂಕದ ರಸ್ತೆ ಸಂಸ್ಥೆಗಳೆಲ್ಲ ಮಾಯವಾದವು.

ರಸ್ತೆನಿರ್ಮಾಣದಲ್ಲಿ ಪ್ರಗತಿಯಾದರೂ ಕೈಗಾರಿಕೆಯ ಪ್ರಗತಿಗೆ ಇಷ್ಟೇ ಸಾಕಾಗಲಿಲ್ಲ. ಅನೇಕ ಕೈಗಾರಿಕೆದಾರರು ಕಾಲುವೆ ಮಾರ್ಗವನ್ನು ಸುಲಭ ಹಾಗೂ ವೇಗ ಸರಕುಸಾಗಾಣಿಕೆ ಗಾಗಿ ಉಪಯೋಗಿಸಿಕೊಳ್ಳುವ ವಿಚಾರ ಮಾಡಿದರು. ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾದಾಗ ಅದನ್ನು ಸಾಗಿಸಲು ಇದೇ ಸುಲಭ ಉಪಾಯವಾಗಿ ಕಂಡಿತು. 1761ರಲ್ಲಿ ಜೇಮ್ಸ್ ಬ್ರಿಂಡ್ಲೆ ಎಂಬ ಇಂಜಿನಿಯರ್ ವಾಸೆರ್ಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಒಂದು ಕಾಲುವೆ ನಿರ್ಮಿಸಿದ. ಇದಕ್ಕೆ ತಗಲುವ ವೆಚ್ಚವನ್ನು ವಾಸೆರ್ಲ್ಯಲ್ಲಿನ ಗಣಿಯ ಮಾಲಿಕ ಡ್ರೂಕ್ ಬ್ರಿಡ್ಜ್ ವಾಟರ್ ಒದಗಿಸಿದ. ಈ ಸಾಗಾಣಿಕೆ ವ್ಯವಸ್ಥೆಯ ಪರಿಣಾಮವಾಗಿ ಕಲ್ಲಿದ್ದಲಿನ ಬೆಲೆ ಮ್ಯಾಂಚೆಸ್ಟರಿನಲ್ಲಿ ಅರ್ಧಕ್ಕರ್ಧ ಕಡಿಮೆಯಾಯಿತು. ಈ ಸಾಹಸ ಪ್ರವೃತ್ತಿ ಬಂಡವಾಳವಿದ್ದ ಅನೇಕರಿಗೆ ಆಕರ್ಷಕವಾಗಿ ಕಂಡಿತು. 18ನೆಯ ಶತಮಾನದ ಅಂತ್ಯದ ವೇಳೆಗೆ ಸುಮಾರು 4,800 ಕಿಮೀನಷ್ಟು ಕಾಲುವೆಯ ಮಾರ್ಗ ನಿರ್ಮಿಸಲಾಯಿತು. ಈ ಕಾಲುವೆಮಾರ್ಗಗಳಿಂದ ಅನೇಕ ಉದ್ಯಮಗಳು ಪ್ರಯೋಜನ ಪಡೆದುಕೊಂಡು ಪ್ರಗತಿ ಸಾಧಿಸಿದವು. ಆದರೆ ಉದ್ಯಮರಂಗದಲ್ಲಿ ಅದ್ಭುತ ಪ್ರಗತಿಯಾಗುತ್ತಿದ್ದುದರಿಂದ ಉದ್ಭವಿಸಿದ ಸಾಗಾಣಿಕೆಯ ಸಮಸ್ಯೆಯನ್ನು ಬಗೆಹರಿಸಲು ಕಾಲುವೆಮಾರ್ಗಗಳಿಗೆ ಸಾಧ್ಯವಾಗಲಿಲ್ಲ. ಇದಕ್ಕಿಂತ ಹೆಚ್ಚು ವೇಗವಾಗಿ ಸರಕನ್ನು ಸಾಗಿಸಬಲ್ಲ ರೈಲ್ವೆಗಳು ಬಂದು ಕಾಲುವೆಗಳ ಪ್ರಾಮುಖ್ಯವನ್ನು ಕ್ರಮೇಣ ಕುಗ್ಗಿಸಿದವು.

ಕೈಗಾರಿಕಾಕ್ರಾಂತಿಯ ಸಫಲತೆಯನ್ನು ಪೋಷಿಸಲು 19ನೆಯ ಶತಮಾನದ ಪ್ರಾರಂಭ ದಲ್ಲಿ ಅಸ್ತಿತ್ವಕ್ಕೆ ಬಂದ ರೈಲು ಬಹಳ ಮಟ್ಟಿಗೆ ಸಹಾಯಕವಾಯಿತು. 1825ರಲ್ಲಿ ಪ್ರಥಮ ರೈಲು ಮಾರ್ಗ ಪ್ರಾರಂಭವಾಯಿತು. ಇದನ್ನು ಸ್ಟಾಕ್ಟನ್ನಿನಿಂದ ಡಾರ್ಲಿಂಗ್ಟನ್ ವರೆಗೆ ಹಾಕಲಾಗಿತ್ತು. ಈ ಮಾರ್ಗ ಆರ್ಥಿಕವಾಗಿ ಲಾಭದಾಯಕವೆಂದು ಕಂಡುಬಂದದ್ದರಿಂದ ರೈಲುಮಾರ್ಗ ನಿರ್ಮಾಣ ಅಲ್ಲಿಂದ ಮುಂದಕ್ಕೆ ವೇಗವಾಗಿ ನಡೆಯಿತು. ಇಂಗ್ಲೆಂಡಿನ ನಾನಾ ಭಾಗಗಳಲ್ಲಿ ರೈಲು ಮಾರ್ಗಗಳನ್ನು ನಿರ್ಮಿಸಲು ರೈಲ್ವೆ ಕಂಪೆನಿಗಳು ಅಸ್ತಿತ್ವಕ್ಕೆ ಬಂದವು. 1838ರ ವೇಳೆಗೆ ಸು. 800 ಕಿಮೀಗಳಷ್ಟು ರೈಲು ಮಾರ್ಗ ನಿರ್ಮಾಣವಾಗಿತ್ತು. 10 ವರ್ಷದ ಅನಂತರ ರೈಲುಮಾರ್ಗ 8,000 ಕಿಮೀಗಳನ್ನು ಮುಟ್ಟಿತೆಂದರೆ ನಿರ್ಮಾಣದ ವೇಗ ಅರ್ಥವಾಗುತ್ತದೆ. ಆದರೆ ರೈಲ್ವೆ ನಿರ್ಮಾಣದಲ್ಲಿದ್ದ ತೊಂದರೆಯೆಂದರೆ, ರೈಲ್ವೆ ನಿರ್ಮಾಣಕ್ಕೆ ಪಾರ್ಲಿಮೆಂಟಿನ ಒಪ್ಪಿಗೆ ಪಡೆಯಬೇಕಾಗಿತ್ತು. ರೈಲುಮಾರ್ಗಗಳನ್ನು ನಿರ್ಮಿಸಲು ಭೂಮಿಯನ್ನು ಆಕ್ರಮಿಸಿಕೊಂಡಾಗ ಅದರ ಮಾಲೀಕರಿಗೆ ಹೆಚ್ಚಿನ ಪರಿಹಾರ ಕೊಡಬೇಕಾ ಗಿತ್ತು. ಇದೆಲ್ಲ ವೆಚ್ಚದಿಂದಾಗಿ ಇಡೀ ಪ್ರಪಂಚದಲ್ಲೇ ರೈಲ್ವೆ ನಿರ್ಮಾಣದ ವೆಚ್ಚ ಇಂಗ್ಲೆಂಡಿನಲ್ಲಿ ಅತ್ಯಧಿಕವಾಗಿತ್ತು. ಇಂಗ್ಲೆಂಡಿನಲ್ಲಿ ಸರಾಸರಿ 1.6 ಕಿಮೀ ರಸ್ತೆ ನಿರ್ಮಾಣಕ್ಕೆ 56,915 ಪೌಂಡು ವೆಚ್ಚ ತಗಲುತ್ತಿತ್ತೆಂದು ಅಂದಾಜುಮಾಡಲಾಗಿದೆ.

ಆದರೆ ರೈಲ್ವೆ ಕಂಪೆನಿಗಳಿಂದ ಸಿಗುತ್ತಿದ್ದ ಲಾಭಾಂಶದ ಆಶೆಯಿಂದ 1844ರ ಅನಂತರ ಸಣ್ಣ ಪುಟ್ಟ ಆದಾಯದವರು ರೈಲ್ವೆ ಕಂಪನಿಗಳಲ್ಲಿ ಹಣ ತೊಡಗಿಸಲು ಪ್ರಾರಂಭಿಸಿದರು. ರೈಲ್ವೆಯ ಪ್ರಾಧಾನ್ಯಯುಗ ಈ ಕಾಲದಲ್ಲಿ ಆರಂಭವಾಯಿತು. ಜಾರ್ಜ್ ಹಡ್ಸನ್ ಎಂಬುವನು ರೈಲ್ವೆಯಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭ ಬರುತ್ತದೆ ಎಂಬುದನ್ನು ತೋರಿಸಿದ. 1844ರಲ್ಲಿ 1288 ಕಿಮೀಗೆ ಹೊಸ ಅನುಮತಿ ದೊರೆಯಿತು. 1844-72ರ ಅವಧಿಯಲ್ಲಿ ಹೊಸ ಹೊಸ ರೈಲು ಮಾರ್ಗ ರಚನೆಗೆ ಹಾಗೂ ಇದ್ದ ರೈಲುಮಾರ್ಗಗಳ ಸಂಯೋಜನೆಗೆ ಕಾಯಿದೆಯ ಬೆಂಬಲ ದೊರೆಯಿತು. 1846ರ ಹೊತ್ತಿಗೆ ಇಂಗ್ಲೆಂಡಿನ ಜನರಿಗೆ ರೈಲ್ವೆ ಹುಚ್ಚು ಹಿಡಿದಿತ್ತು ಎಂದು ಹೇಳಲಾಗಿದೆ.

ಇಂಗ್ಲೆಂಡಿನ ರೈಲ್ವೆ ಬೆಳವಣಿಗೆಯ ವೈಶಿಷ್ಟ್ಯವೆಂದರೆ ಸಂಪುರ್ಣವಾಗಿ ಖಾಸಗಿ ಕಂಪೆನಿಗಳು ರೈಲ್ವ್ವೆಯನ್ನು ನಿರ್ಮಿಸಿದ್ದು. 1830-53ರ ಅವಧಿಯಲ್ಲಿ ಸರ್ಕಾರದ 5 ರೈಲ್ವೆ ಸಮಿತಿಗಳು ರೈಲ್ವೆನೀತಿಯನ್ನು ಕುರಿತು ಚರ್ಚಿಸಿದುವಾದರೂ ರೈಲ್ವೆಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕೆಂದು ಹೇಳುವುದರ ಬಗ್ಗೆ ಅವು ಆಸಕ್ತಿ ತೋರಿಸಿರಲಿಲ್ಲ.

ಇಂಗ್ಲೆಂಡಿನಲ್ಲಿ ರೈಲ್ವೆ ನಿರ್ಮಾಣ ಖಾಸಗಿ ಕ್ಷೇತ್ರದಲ್ಲಿದ್ದದ್ದರಿಂದ ಇದರ ಬೆಳವಣಿಗೆ ಯೋಜನಾಬದ್ಧವಾಗಿರಲಿಲ್ಲ. ಖಾಸಗಿಕ್ಷೇತ್ರದ ರೈಲ್ವೆ ಏಕಸ್ವಾಮ್ಯಗಳ ಬಗ್ಗೆ ಪ್ರಾರಂಭದಲ್ಲಿ ಅಷ್ಟೇನೂ ಸಮಸ್ಯೆಯಿರಲಿಲ್ಲ. ಕ್ರಮೇಣ ಇವುಗಳ ಕೆಲವು ನ್ಯೂನತೆಗಳು ಬೆಳಕಿಗೆ ಬಂದವು. ಇವನ್ನು ಅನೇಕರು ಸರ್ಕಾರದ ಗಮನಕ್ಕೆ ತಂದರು. ಈ ಕ್ಷೇತ್ರದಲ್ಲಿ ಸರ್ಕಾರದ ನಿಯಂತ್ರಣ ವಿರಬೇಕೆಂದು ಒತ್ತಾಯ ಮಾಡಿದರು. ರೈಲ್ವೆ ಸಮಿತಿ ದರಗಳನ್ನು ನಿಗದಿಮಾಡುವಂತೆ 1888ರಲ್ಲಿ ಸರ್ಕಾರ ನಿರ್ದೇಶಿಸಿತ್ತು. ಈ ಸಮಿತಿ ರೈಲ್ವೆಯ ಕನಿಷ್ಠ ಹಾಗೂ ಗರಿಷ್ಠ ದರಗಳನ್ನು ಗೊತ್ತು ಮಾಡಿತು. 1892ರಲ್ಲಿ ಮತ್ತೆ ಸಮಿತಿ ದರಗಳನ್ನು ಏರಿಸದಂತೆ ನಿರ್ದೇಶಿಸಿತು.

ಮೊದಲನೆಯ ಮಹಾಯುದ್ಧದ ಕಾಲದಲ್ಲಿ ರೈಲ್ವೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ಆದರೆ ಇದು ರಾಷ್ಟ್ರದ ಹಿತದೃಷ್ಟಿಯಿಂದ ಮಾತ್ರ ರೈಲ್ವೆಯನ್ನು ನಡೆಸಿದಾಗ ಬಂದ ಅನುಭವದಿಂದ ಅದರ ವಿಷಯದಲ್ಲಿ ಸರ್ಕಾರದ ನಿಲುವು ಬದಲಾಯಿತು. ರೈಲ್ವೆ ಕಂಪೆನಿಗಳನ್ನು ಸಂಯೋಜಿಸಿದರೆ ಲಾಭ ಉಂಟಾಗುತ್ತದೆಂಬುದನ್ನು ಅದು ಮನಗಂಡಿತು. ಇದರ ಪರಿಣಾಮವೇ 1921ರ ರೈಲ್ವೆ ಕಾನೂನು. ಈ ಕಾನೂನಿಗೆ ಅನುಗುಣವಾಗಿ ಇಂಗ್ಲೆಂಡಿನ 121 ಕಂಪೆನಿಗಳನ್ನು ಸಂಯೋಜಿಸಿ 4 ವಿಭಾಗಗಳಾಗಿ ಮಾಡಲಾಯಿತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಸರ್ಕಾರ ರೈಲ್ವೆಗಳನ್ನು ಬಲವಾಗಿ ನಿಯಂತ್ರಿಸಿತು. 1947ರಲ್ಲಿ ಸಾರಿಗೆ ಕಾಯಿದೆಯನ್ನು ಜಾರಿಗೆ ತಂದು ಇಂಗ್ಲೆಂಡಿನಲ್ಲಿ ರೈಲ್ವೆಯನ್ನು ರಾಷ್ಟ್ರೀಕರಿಸಲಾಯಿತು. 1956ರಲ್ಲಿ ರೈಲ್ವೆಗಾಗಿ 15 ವರ್ಷ ಅವಧಿಯ ಒಂದು ಯೋಜನೆಯನ್ನು ರೂಪಿಸಲಾಯಿತು.

ಒಟ್ಟಿನಲ್ಲಿ ರೈಲ್ವೆಪ್ರಗತಿಯು ಇಂಗ್ಲೆಂಡಿನ ಆರ್ಥಿಕ ಪ್ರಗತಿಗೆ ಅತ್ಯಂತ ಸಹಾಯಕವಾಯಿತಲ್ಲದೆ ರಾಷ್ಟ್ರದ ಕೈಗಾರಿಕೆ ಬೆಳವಣಿಗೆಗೆ ಬಹಳ ಮಟ್ಟಿಗೆ ಸಹಾಯ ಮಾಡಿತು.

ಇದೇ ಕಾಲಕ್ಕೆ ಇಂಗ್ಲೆಂಡಿನ ನೌಕಾಸಾರಿಗೆಯ ಬೆಳವಣಿಗೆಯೂ ಆಗದಿದ್ದಿದ್ದರೆ ಅದರ ಕೈಗಾರಿಕಾ ಕ್ರಾಂತಿ ಬಹಳ ಕುಂಠಿತವಾಗುತ್ತಿತ್ತು. ತನಗೆ ಅಗತ್ಯವಾದ ಆಹಾರಧಾನ್ಯ ಗಳನ್ನು ಮತ್ತು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇಂಗ್ಲೆಂಡಿಗೆ ಸಾಗರ ವ್ಯವಸ್ಥೆ ಮೊದಲಿನಿಂದಲೂ ಸಹಾಯಮಾಡಿತು. ಇಂಗ್ಲೆಂಡಿನ ಆರ್ಥಿಕ ಪ್ರಗತಿ ಬಹಳ ಮಟ್ಟಿಗೆ ಈ ಸಾರಿಗೆಯನ್ನೇ ಅವಲಂಬಿಸಿತ್ತು. ಇಂಗ್ಲೆಂಡಿನ ಧನಪ್ರಭುತ್ವವಾದ ಸಿದ್ಧಿಗೆ ಸಹ ಇದು ತೀರ ಅಗತ್ಯವಾಗಿತ್ತು. 1651 ಮತ್ತು 1660ರಲ್ಲಿ ನೌಕಾಕಾಯಿದೆಗಳ ಮೂಲಕ ನೌಕಾಸಾರಿಗೆಗೆ ಪ್ರೋತ್ಸಾಹ ಕೊಡಲಾಯಿತು. 19ನೆಯ ಶತಮಾನದ ಪ್ರಾರಂಭದಲ್ಲಿ ಜಹಜು ಬಳಕೆಗೆ ಬಂದದ್ದರಿಂದ ಸಾರಿಗೆ ಉತ್ತಮವಾಯಿತು. 1869ರಲ್ಲಿ ಪ್ರಾರಂಭವಾದ ಸೂಯೆಜ್ ಕಾಲುವೆ ಇಂಗ್ಲೆಂಡಿನ ವ್ಯಾಪಾರವನ್ನು ಕುದುರಿಸಿ ನೌಕಾನಿರ್ಮಾಣಕ್ಕೆ ಪ್ರೋತ್ಸಾಹ ಕೊಟ್ಟಿತು. 1890ಕ್ಕಿಂತ ಮುಂಚೆ ಪ್ರಪಂಚದ ಒಟ್ಟು ಹಡಗು ನಿರ್ಮಾಣದ ಶೇ.80ರಷ್ಟನ್ನು ಇದು ನಿರ್ವಹಿಸುತ್ತಿತ್ತೆಂದು ಅಂದಾಜು ಮಾಡಲಾಗಿದೆ. 19ನೆಯ ಶತಮಾನದ ಕೊನೆಯ ಭಾಗದ ಅನಂತರ ಇತರ ರಾಷ್ಟ್ರಗಳೂ ಇಂಗ್ಲೆಂಡಿನೊಡನೆ ಹಡಗು ನಿರ್ಮಾಣದಲ್ಲಿ ತೀವ್ರವಾಗಿ ಸ್ಪರ್ಧಿಸಲಾರಂಭಿಸಿದವು.

ಪ್ರಥಮ ಮಹಾಯುದ್ಧದ ಅವಧಿಯಲ್ಲಿ ಇಂಗ್ಲೆಂಡಿನ ನೌಕಾ ವ್ಯವಸ್ಥೆಗೆ ಬಲವಾದ ಪೆಟ್ಟು ಬಿತ್ತು. ಯುದ್ಧಾನಂತರ ಸರ್ಕಾರ ಹೊಸ ನೌಕಾಬಂದರುಗಳನ್ನು ನಿರ್ಮಿಸಿತು. 1920ರ ವೇಳೆಗೆ ಇಂಗ್ಲೆಂಡ್ ಮತ್ತೆ ಚೇತರಿಸಿಕೊಂಡಿತು. 1935ರಲ್ಲಿ ಸರ್ಕಾರ ನೌಕಾಸಂಸ್ಥೆಗಳಿಗೆ ಸಹಾಯಧನ ಹಾಗೂ ಸಾಲವನ್ನು ಕೊಟ್ಟು ಪ್ರೋತ್ಸಾಹಿಸಿತು.

ಎರಡನೆಯ ಮಹಾಯುದ್ಧದ ಕಾಲದಲ್ಲೂ ಇಂಗ್ಲೆಂಡಿನ ನೌಕಾಸಾರಿಗೆಗೆ ಬಹಳ ಪೆಟ್ಟು ಬಿತ್ತು. ವಿಶ್ವದ ಒಟ್ಟು ನೌಕಾ ಸಾರಿಗೆಯಲ್ಲಿ ಬ್ರಿಟನ್ನಿನ ಪಾಲು 1937-47ರ ದಶಕದಲ್ಲಿ ಶೇ. 31.8-ಶೇ.24.6ಕ್ಕೆ ಇಳಿಯಿತು. ಆದರೆ ಹಡಗು ನಿರ್ಮಾಣದಲ್ಲಿ ಜಪಾನ್, ಅಮೆರಿಕ ಮತ್ತು ಇತರ ರಾಷ್ಟ್ರಗಳು ತೀವ್ರವಾಗಿ ಸ್ಪರ್ಧಿಸಿದುದರಿಂದ ಇಂಗ್ಲೆಂಡಿನಲ್ಲಿ ಹಡಗು ನಿರ್ಮಾಣ ಕಡಿಮೆಯಾಯಿತು. ಉದಾಹರಣೆಗೆ, 1947ರಲ್ಲಿ ಪ್ರಪಂಚದ ಒಟ್ಟು ಹಡಗು ನಿರ್ಮಾಣದಲ್ಲಿ ಶೇ.50ರಷ್ಟನ್ನು ಇಂಗ್ಲೆಂಡೊಂದೇ ನಿರ್ವಹಿಸುತ್ತಿತ್ತು. ಆದರೆ 1957ರ ವೇಳೆಗೆ ಈ ಸಂಖ್ಯೆ ಶೇ.20ಕ್ಕೆ ಇಳಿಯಿತು. ಆದರೂ ಇದು ಪ್ರಪಂಚದ ಹಡಗು ಸರಕು ಸಾರಿಗೆಯಲ್ಲಿ ಪ್ರಮುಖವಾಗಿ ಉಳಿದಿದೆ. ನೌಕಾಸಾರಿಗೆ ವ್ಯವಸ್ಥೆಯಿಂದ ಅಂತಾರ ರಾಷ್ಟ್ರೀಯ ವ್ಯಾಪಾರದ ಮೂಲಕ ಹಣ ಗಳಿಸುವುದಕ್ಕೂ ಆಹಾರ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಸಹಾಯವಾಗಿದೆ. ಆರ್ಥಿಕ ಪ್ರಗತಿಗೆ ಇದರಿಂದ ಬಹಳ ಮಟ್ಟಿಗೆ ನೆರವಾಗಿದೆ.

ವಿಮಾನ ಸಾರಿಗೆ ವ್ಯವಸ್ಥೆ ಈಚಿನದು. 1919ರಲ್ಲಿ ಪ್ಯಾರಿಸ್ ಮತ್ತು ಲಂಡನ್ನಿನ ನಡುವೆ ವ್ಯವಸ್ಥಿತ ವಿಮಾನ ಸಂಚಾರ ವ್ಯವಸ್ಥೆ ಆರಂಭವಾಯಿತು. 1939ರಲ್ಲಿ ಬ್ರಿಟಿಷ್ ಓವರ್ಸೀಸ್ ವಿಮಾನ ಕಾರ್ಪೊರೇಷನ್ ಅಸ್ತಿತ್ವಕ್ಕೆ ಬಂತು. ಈಚಿನ ದಿನಗಳಲ್ಲಿ ವಿಮಾನ ಸಾರಿಗೆಗೆ ಇಂಗ್ಲೆಂಡಿನಲ್ಲಿ ಹೆಚ್ಚು ಪ್ರಾಶಸ್ತ್ಯ ಸಿಗಲಾರಂಭಿಸಿತು.