ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾರ್ವಜನಿಕ ಆಡಳಿತ

ಸಾರ್ವಜನಿಕ ಆಡಳಿತ

ಒಂದು ದೇಶ ತನ್ನ ವಿವಿಧ ಕಾರ್ಯಗಳನ್ನು ಸಮರ್ಪಕವಾಗಿ ನೆರವೇರಿಸಲು ಮತ್ತು ಪ್ರಜಾ ರಕ್ಷಣೆ ಹಾಗೂ ಪ್ರಜಾನುಕೂಲಕ್ಕೆ ಬೇಕಾದ ಕಾರ್ಯಗಳನ್ನು ಮಾಡಲು ಒಂದು ಕಾನೂನು ಚೌಕಟ್ಟಿನೊಳಗೆ ರೂಪಿಸಿಕೊಳ್ಳುವ ಕ್ರಮಬದ್ಧತೆಗೆ ಸಾರ್ವಜನಿಕ ಆಡಳಿತವೆನ್ನಬಹುದು. ಸಾರ್ವಜನಿಕ ಆಡಳಿತ ರಾಜ್ಯ ಮತ್ತು ಸರ್ಕಾರಗಳಷ್ಟೇ ಪುರಾತನವಾದುದು. ರಾಜ್ಯಗಳ ಜೊತೆಗೆ ಇದರ ಉಗಮವನ್ನೂ ಕಾಣಬಹುದು. ರಾಜಕೀಯ ಪ್ರಕ್ರಿಯೆ ಜನರ ಮೇಲೆ ಆಳುವ ಅಧಿಕಾರ ಹೊಂದಿದ್ದು ರಾಜ್ಯದ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ನೀತಿ, ಕಾನೂನು, ವ್ಯವಸ್ಥೆ, ಕಾರ್ಯಾಚರಣೆ ಮುಂತಾದವು ಗಳನ್ನು ರೂಪಿಸುವ ಜವಾಬ್ದಾರಿ ಹೊಂದಿದೆ. ಇದಕ್ಕಾಗಿ ರಾಜಕೀಯ ಪ್ರಕ್ರಿಯೆಗೆ ಸಾರ್ವಭೌಮಾಧಿಕಾರ ನೀಡಲಾಗಿದೆ.

ಸಾರ್ವಜನಿಕ ಆಡಳಿತ ಪ್ರಕ್ರಿಯೆ ರಾಜಕೀಯ ಪ್ರಕ್ರಿಯೆಯ ಅಧೀನವಾಗಿದ್ದು ಅದರ ಜವಾಬ್ದಾರಿಗಳನ್ನು ನಿಭಾಯಿಸಲು ರಾಜಕೀಯ ಪ್ರಕ್ರಿಯೆಗೆ ಸಹಾಯ ಮಾಡುವಂತಹುದಾಗಿದೆ. ಆಡಳಿತವು ರಾಜಕೀಯಕ್ಕೆ ಕಾನೂನು ಬದ್ಧವಾಗಿ ಸಲಹೆ ಮತ್ತು ಸಹಾಯಗಳನ್ನು ನೀಡುತ್ತದೆ. ಈ ಸಲಹೆ ಮತ್ತು ಸಹಾಯಗಳು ಸರ್ಕಾರದ ನೀತಿ, ಕಾನೂನು, ವ್ಯವಸ್ಥೆ, ಯೋಜನೆ, ಕಾರ್ಯಕ್ರಮಗಳ ನಿರೂಪಣೆ, ಕಾರ್ಯಾಚರಣೆ ಮುಂತಾದ ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದ್ದಾಗಿರುತ್ತದೆ. ಇದರ ಮೂಲಕ ರಾಜ್ಯದ ಗುರಿಗಳನ್ನು ಸಾಧಿಸುವ ಜವಾಬ್ದಾರಿ ಇದರದಾಗಿದೆ. ಉದಾಹರಣೆಗೆ, ರಾಜ್ಯ ಸರ್ಕಾರ ಭೂಸುಧಾರಣಾನೀತಿಯನ್ನು ಆಚರಣೆಗೆ ತರಬೇಕೆಂದು ತೀರ್ಮಾನಿಸಿದರೆ ಸಂಬಂಧಿಸಿದ ಸಾರ್ವಜನಿಕ ಆಡಳಿತಾಂಗವು ಕಾರ್ಯರೂಪಕ್ಕೆ ತರಲು ಬೇಕಾದ ನೀತಿ, ನಿಯಮಗಳನ್ನು ಸಂಘಟನೆ ಮತ್ತು ನಿರ್ವಾಹಕರು ಜಾರಿ ಗೊಳಿಸಬೇಕು. ಆದರ ವಿಧಿ ವಿಧಾನಗಳು, ವಿವಿಧ ಹಂತಗಳು ಖರ್ಚುವೆಚ್ಚ ಇವುಗಳ ಉಸ್ತುವಾರಿ ಮತ್ತು ಆದ ಕಾರ್ಯದ ಮೌಲ್ಯಮಾಪನ ಎಲ್ಲವನ್ನೂ ಮಾಡುವ ಜವಾಬ್ದಾರಿ ಸಾರ್ವಜನಿಕ ಆಡಳಿತಾಂಗಕ್ಕೆ ಸೇರಿದ್ದು. ಮಾರ್ಗದರ್ಶನ ಮತ್ತು ಶಾಸಕಾಂಗದ ದತ್ತ ಅಧಿಕಾರದಲ್ಲಿ ಇದಕ್ಕೆ ಪ್ರಮುಖ ಪಾತ್ರವಿದೆ. ಆಡಳಿತಾಂಗ ಕೆಟ್ಟರೆ ಸರ್ಕಾರಗಳು ಅತಂತ್ರವಾಗುತ್ತವೆ.

ಹಿಂದೆ ರಾಜ್ಯಗಳು ಚಿಕ್ಕವಾಗಿದ್ದಾಗ ರಾಜನೇ ಎಲ್ಲಕ್ಕೂ ಮುಖ್ಯಸ್ಥ ಹಾಗೂ ಹೊಣೆಗಾರನಾಗಿದ್ದ. ಆಗ ರಾಜ್ಯ, ಸರ್ಕಾರ, ಆಡಳಿತ ರಕ್ಷಣೆ ಇವುಗಳ ಮಧ್ಯೆ ವ್ಯತ್ಯಾಸಗಳು ಇಲ್ಲವಾಗಿದ್ದು ಏಕಾಧಿಕಾರಕ್ಕೆ ಸೇರಿದ್ದವು. ಮುಂದೆ ರಾಜ್ಯಗಳು ಬೆಳೆದು ವಿಸ್ತಾರವಾದಂತೆ ವ್ಯವಸ್ಥಿತ ಸಾರ್ವಜನಿಕ ಆಡಳಿತದ ಆವಶ್ಯಕತೆ ಹೆಚ್ಚಾಯಿತು. ಪ್ರಜಾಸಂಖ್ಯೆಯೂ ಬೆಳೆದಂತೆ ಸಾರ್ವಜನಿಕ ಆಡಳಿತ ವ್ಯವಸ್ಥೆಯೂ ಬೆಳೆಯಿತು. ಆಡಳಿತ ಹೆಚ್ಚು ವ್ಯವಸ್ಥಿತವಾಯಿತು. ನಾವು ಆಡಳಿತದ ಚರಿತ್ರೆಯನ್ನು ಅದರ ಬೆಳೆವಣಿಗೆ ಯನ್ನು ಪ್ರಾಚೀನ ಚೀನಸಾಮ್ರಾಜ್ಯದ, ಕೌಟಲ್ಯನ ಕಾಲದ ಮೌರ್ಯ ಸಾಮ್ರಾಜ್ಯದ, ಪರ್ಷಿಯನ್ ಸಾಮ್ರಾಜ್ಯದ, ರೋಮನ್ ಸಾಮ್ರಾಜ್ಯದ, ಮೊಗಲ್ ಸಾಮ್ರಾಜ್ಯದ, ಆಧುನಿಕ ಪ್ರಷ್ಯಾ ರಾಜ್ಯದ, ನೆಪೋಲಿಯನ್ ಸ್ಥಾಪಿಸಿದ ಫ್ರೆಂಚ್ ಸಾಮ್ರಾಜ್ಯದ ಮತ್ತು ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಭಾರತದ ಆಡಳಿತ ವ್ಯವಸ್ಥೆಗಳಿಂದ ಅರಿಯಬಹುದಾಗಿದೆ. ಈಗ ವಿವಿಧ ಬಗೆಯ ಸಾರ್ವಜನಿಕ ಆಡಳಿತ ಅಭಿವೃದ್ಧಿ ಹೊಂದಿದೆ, ಪಶ್ಚಿಮ ರಾಷ್ಟ್ರಗಳ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪ್ರಾಂತೀಯ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಆಡಳಿತಗಳ ರೂಪದಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ ವಿಸ್ತಾರವಾದ ಭಾರತದ ಸಾರ್ವಜನಿಕ ಆಡಳಿತ ಸಾಕಷ್ಟು ಸುಧಾರಿತವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತೆಯೇ ವ್ಯವಸ್ಥಿತ ವಾಗಿದೆ. ಸ್ವಾತಂತ್ರ್ಯಾನಂತರ ಯೋಜಿತ ಅಭಿವೃದ್ಧಿ ಮತ್ತು ಸಮಾಜವಾದಿ ಸಮಾಜದ ಗುರಿಗಳಿಂದಾಗಿ ಆಡಳಿತದ ವಿಸ್ತಾರ ಇನ್ನೂ ಹೆಚ್ಚಾಗಿದೆ. ಭಾರತದಲ್ಲಿ ಕೇಂದ್ರ ರಾಜ್ಯಗಳ ಒಂದು ಕೋಟಿಯಷ್ಟು ಸಿಬ್ಬಂದಿ ಇದ್ದು ಇವರನ್ನು ಅನೇಕ ಹಂತ, ಸೇವೆ, ವರ್ಗ ಮತ್ತು ಸಂಘಟನೆಗಳಾಗಿ ವಿಂಗಡಿಸಲಾಗಿದೆ. ಹಂತಗಳಲ್ಲಿ ಸರ್ಕಾರಿ ಉದ್ದಿಮೆಗಳ, ಮುಖ್ಯಕಾರ್ಯಾಲಯ ಮತ್ತು ಕ್ಷೇತ್ರಾಡಳಿತಗಳನ್ನು ಕಾಣಬಹುದು. ಸೇವೆಗಳಲ್ಲಿ ಅಖಿಲಭಾರತ ಸೇವೆಗಳು (ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್.) ಮುಂತಾದ ಕೇಂದ್ರದ ಸೇವೆಗಳು ರಾಜ್ಯ ಸೇವೆಗಳು, ಸ್ಥಳೀಯ ಸೇವೆಗಳಿವೆ. ವರ್ಗಗಳಲ್ಲಿ ಗೆಸೆಟೆಡ್ ಮತ್ತು ನಾನ್ ಗೆಸೆಟೆಡ್ ಮತ್ತು 1,2,3,4 ಅಥವಾ ಎ,ಬಿ,ಸಿ ಮತ್ತು ಡಿ ವರ್ಗಗಳು ಮತ್ತು ಅವುಗಳೊಳಗಿನ ಉಪವರ್ಗಗಳನ್ನು ಕಾಣುತ್ತೇವೆ. ಸಂಘಟನೆಗಳಲ್ಲಿ ಮಂತ್ರಾಲಯಗಳು, ಕಾರ್ಯಾಲಯಗಳು, ಇಲಾಖೆಗಳು, ನಿಗಮಗಳು, ಆಯೋಗಗಳು, ಮಂಡಲಿಗಳು, ನಿರ್ದೇಶನಾಲಯಗಳು ಮತ್ತು ಸಾರ್ವಜನಿಕ ಕಂಪನಿಗಳನ್ನು ಮುಖ್ಯವಾಗಿ ಕಾಣಬಹುದು. ಆಡಳಿತ ಮತ್ತು ಸಿಬ್ಬಂದಿಯ ನಿರ್ವಹಣೆ ಮತ್ತು ಸುಧಾರಣೆಗಾಗಿ ಪ್ರತ್ಯೇಕವಾದ ಸಿಬ್ಬಂದಿ ನಿರ್ವಹಣಾ ಮತ್ತು ಆಡಳಿತ ಸುಧಾರಣಾ ಇಲಾಖೆಗಳು ಕೇಂದ್ರ ಮತ್ತು ರಾಜ್ಯಗಳಲ್ಲಿವೆ. ಆಡಳಿತವರ್ಗದ ನೇಮಕಾತಿ, ತರಬೇತಿ, ಸಂಬಳ, ಸಾರಿಗೆ ಮುಂತಾದವುಗಳ ಉಸ್ತುವಾರಿ ನೋಡಿಕೊಳ್ಳುವುದು ಇವುಗಳ ಜವಾಬ್ದಾರಿಯಾಗಿದೆ. ಭಾರತದಲ್ಲಿನ ಎಲ್ಲ ಸರ್ಕಾರಿ ಮತ್ತು ಆಡಳಿತ ಸಂಸ್ಥೆಗಳು ಸೇರಿ ಒಟ್ಟು ಸುಮಾರು ಹತ್ತು ಲಕ್ಷ ಕೋಟಿಯಷ್ಟು ವಾರ್ಷಿಕ ಹಣಕಾಸು ವ್ಯವಹಾರ ನಡೆಸುತ್ತದೆ.

ಭಾರತದ ಈ ಬೃಹತ್‍ಗಾತ್ರದ ಸಾರ್ವಜನಿಕ ಆಡಳಿತ ದೇಶದಲ್ಲಿ ಕಾನೂನು ಮತ್ತು ವ್ಯವಸ್ಥೆಗಳನ್ನು ನಿರ್ವಹಿಸುವಲ್ಲಿ ಉತ್ತಮ ಪಾತ್ರವಹಿಸುತ್ತ ಬಂದಿದೆ. ಆದರೂ ನಿರ್ದಿಷ್ಟ ಕಾರ್ಯಕ್ರಮಗಳ ಜಾರಿಯಲ್ಲಿ ಮತ್ತು ಅವುಗಳ ಗುರಿಸಾಧನೆಯಲ್ಲಿ ಅಷ್ಟೊಂದು ಫಲ ಕಾಣುತ್ತಿಲ್ಲವೆಂಬ ಹೇಳಿಕೆಗಳುಂಟು. ಇದಕ್ಕೆ ವಸಾಹತುಶಾಹೀ ಮಾದರಿ ಆಡಳಿತ ವ್ಯವಸ್ಥೆಯ ಮುಂದುವರಿಕೆ, ಆಡಳಿತದಲ್ಲಿ ವಿಪರೀತ ರಾಜಕೀಯ ಮಧ್ಯಪ್ರವೇಶ, ನಿರ್ವಹಣಾ ನೈಪುಣ್ಯತೆಯ ಕೊರತೆ, ವಿಪರೀತ ಹರಡಿರುವ ಲಂಚಕೋರತನ, ಭ್ರಷ್ಟಾಚಾರ, ನೈತಿಕ ಅಧಃಪತನ ಮುಂತಾದವು ಕಾರಣವಾಗಿವೆ. ಕರ್ನಾಟಕದಲ್ಲೂ ಸಾರ್ವಜನಿಕ ಆಡಳಿತ ಇದೇ ಮಾದರಿಯದ್ದಾಗಿದೆ.

ಇತ್ತೀಚೆಗೆ, ಅಂದರೆ 1991ರಿಂದ ಹೊಸ ಆರ್ಥಿಕ ನೀತಿ ಮತ್ತು ಸುಧಾರಣೆಗಳನ್ನನುಸರಿಸಿ ಭಾರತದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳಿಂದಾಗಿ “ಹೊಸ ಸಾರ್ವಜನಿಕ ಆಡಳಿತ”, “ಹೊಸ ಸಾರ್ವಜನಿಕ ನಿರ್ವಹಣೆ” ಮತ್ತು “ಸುರಾಜ್ಯ” ನೀತಿಗಳನ್ನುನುಸರಿಸಿ ಆಡಳಿತವನ್ನು ಕಡಿಮೆಗಾತ್ರ, ಹೆಚ್ಚು ನಿರ್ವಹಣಾ ಸಾಮಥ್ರ್ಯ, ಜನರ ಭಾಗವಹಿಸುವಿಕೆ, ಪಾರದರ್ಶಕತೆ, ಶುದ್ಧತೆ ಮತ್ತು ಸಾರ್ವಜನಿಕ ಜವಾಬ್ದಾರಿ ಉಳ್ಳದ್ದನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನವನ್ನು ವಿಶಾಲವಾಗಿ ಬಳಸಿ “ಇ-ಆಳ್ವಿಕೆ” ಅಳವಡಿಸುವ ಪ್ರಯತ್ನವೂ ನಡೆದಿದೆ. 21ನೆಯ ಶತಮಾನದ ಭಾರತದ ಆವಶ್ಯಕತೆಗಳಿಗೆ ಎಷ್ಟರಮಟ್ಟಿಗೆ ಇವು ಸಹಕಾರಿಯಾಗುತ್ತವೆಂಬುದನ್ನು ಕಾದು ನೋಡಬೇಕಾಗಿದೆ. 2004ರಲ್ಲಿ ಭಾರತ ಸರ್ಕಾರ ಒಂದು “ಹೊಸ ಆಡಳಿತ ಸುಧಾರಣಾ ಆಯೋಗ” ರಚಿಸುವ ಯೋಜನೆ ಹೊಂದಿದೆ.

ಸಾರ್ವಜನಿಕ ಆಡಳಿತ ಒಂದು ವಿಶಿಷ್ಟ ಅಧ್ಯಯನ ವಿಷಯವಾಗಿ 19ನೆಯ ಶತಮಾನದ ಕೈಗಾರಿಕಾ ಕ್ರಾಂತಿಯೊಂದಿಗೆ ಪ್ರಾರಂಭವಾಯಿತೆನ್ನ ಬಹುದು. ರಾಜ್ಯಶಾಸ್ತ್ರ ಪ್ರಾಧ್ಯಾಪಕನಾಗಿದ್ದು ಅನಂತರ ಅಮೆರಿಕದ ಅಧ್ಯಕ್ಷನಾದ ವುಡ್ರೊವಿಲ್ಸನ್‍ನನ್ನು ಸಾರ್ವಜನಿಕ ಆಡಳಿತಶಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಕಾರಣ ಇವನು 1887ರಲ್ಲಿ ರಾಜಕೀಯ ಮತ್ತು ರಾಜ್ಯಶಾಸ್ತ್ರಗಳಿಂದ “ಸಾರ್ವಜನಿಕ ಆಡಳಿತ”ದ ಪ್ರತ್ಯೇಕತೆಯ ಪ್ರಾಮುಖ್ಯವನ್ನು ತೋರಿಸಿಕೊಟ್ಟ. ಅಂದಿನಿಂದ ಅನೇಕ ಹಂತಗಳಲ್ಲಿ ಮತ್ತು ವೈಚಾರಿಕ ಪಂಥಗಳಲ್ಲಿ ಬೆಳೆದ ಸಾರ್ವಜನಿಕ ಆಡಳಿತ ಈಗಲೂ ವಿಶೇಷವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಅನಂತರ ಭಾರತವೂ ಸೇರಿದಂತೆ ಇತರ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಒಂದು ಪ್ರಮುಖ ಅಧ್ಯಯನ ವಿಷಯವಾಗಿ ಬೆಳೆದುಬಂದಿದೆ. ಸ್ನಾತಕ ಪೂರ್ವ ಮತ್ತು ಸ್ನಾತಕ್ಕೋತ್ತರದ ಎರಡು ಹಂತಗಳಲ್ಲಿಯೂ ಇದರ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಭಾರತದಲ್ಲಿ ಇತ್ತೀಚೆಗೆ “ಸಾರ್ವಜನಿಕ ಆಡಳಿತ”ವನ್ನು ಲೋಕಸೇವಾ ಆಯೋಗಳು ನಡೆಸುವ ಆಯ್ಕೆ ಪರೀಕ್ಷೆಗಳ ವಿಷಯ ಪಟ್ಟಿಯಲ್ಲೂ ಸೇರಿಸಲಾಗಿದೆ. ಅನೇಕ ರಾಷ್ಟ್ರಗಳಲ್ಲಿ ಇದರ ಅಧ್ಯಯನಕ್ಕಾಗಿ ಮೀಸಲಾದ ಸಂಘಸಂಸ್ಥೆಗಳೂ ವಿಶ್ವದಾದ್ಯಂತ ಕಾರ್ಯನಿರತವಾಗಿವೆ. ವಿಶ್ವದ ಸಾರ್ವಜನಿಕ ಆಡಳಿತ ಅಧ್ಯಯನದ ಸಂಘಸಂಸ್ಥೆಗಳಲ್ಲಿ ಒಂದು ಪ್ರಮುಖ ಸಂಸ್ಥೆಯಾಗಿರುವ ನವದೆಹಲಿಯ “ಭಾರತದ ಸಾರ್ವಜನಿಕ ಆಡಳಿತ ಸಂಸ್ಥೆ” 1954ರಲ್ಲಿ ಆರಂಭವಾಗಿ, ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಇದು ಹೊರತರುವ “ಇಂಡಿಯನ್ ಜರ್ನ್‍ಲ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್” ತ್ರೈಮಾಸಿಕ ಪತ್ರಿಕೆ ಪ್ರಪಂಚಪ್ರಸಿದ್ಧ.

ಆಡಳಿತದ ಕಾನೂನುಗಳನ್ನು ರಚಿಸಿ ಮತ್ತು ಜಾರಿಗೊಳಿಸಿ ಆಡಳಿತ ವನ್ನು ಉತ್ತಮ ಪಡಿಸಬಹುದೆಂಬ “ಆಡಳಿತಾತ್ಮಕ ಕಾನೂನು ಪಂಥ” ಸು. 1900ರಲ್ಲಿ ಆರಂಭಗೊಂಡಿತು. ಆಡಳಿತವನ್ನು ಒಂದು ಯಂತ್ರದಂತೆ ಭಾವಿಸಿ ನಿಯಂತ್ರಿಸಿ ಉತ್ತಮ ಪಡಿಸಬಹುದೆಂಬ “ಯಾಂತ್ರಿಕ ಪಂಥ” ಸು. 1910ರಲ್ಲಿ ಪ್ರಚಾರ ಪಡೆಯಿತು. ಮುಂದೆ ಎಫ್. ಡಬ್ಲ್ಯೂ. ಟೇಲರ್ ಮುಂದಿಟ್ಟ “ವೈಜ್ಞಾನಿಕ ನಿರ್ವಹಣಾ ಸಿದ್ಧಾಂತ”, ಹೆನ್ರಿಫೆಯಾಲ್ ಮುಂದಿಟ್ಟ “ಆಡಳಿತಾತ್ಮಕ ನಿರ್ವಹಣಾ ಸಿದ್ಧಾಂತ” ಮತ್ತು ಮ್ಯಾಕ್ಸ್ ವೇಬರ್ ಮುಂದಿಟ್ಟ “ನೌಕರಶಾಹಿ ಸಿದ್ಧಾಂತ”ಗಳು ಹುಟ್ಟಿಕೊಂಡವು. ಇವೆಲ್ಲವೂ ಯಂತ್ರಯುಗದ ಸೂತ್ರಗಳಾದ ಸುವ್ಯವಸ್ಥೆ, ಸಮಯಪಾಲನೆ, ನಿರಂತರಕಾರ್ಯ ನಡೆಸುವುದು, ಕಟ್ಟುನಿಟ್ಟಿನ ನಿಯಮಪಾಲನೆ, ಪರಿಣತಿಗೆ, ವಿದ್ಯೆಗೆ ತಕ್ಕಂತೆ ಕಾರ್ಯವಿಂಗಡಣೆ ಮತ್ತು ಶಿಸ್ತು, ಕಾರ್ಯಯೋಜನೆ, ಉತ್ತಮ ಸಂಭಾವನೆ ಮತ್ತು ಬಯಸಿದಂತಹ ಉತ್ಪಾದನೆ ಮುಂತಾದವು ಗಳಿಗೆ ಪ್ರಾಧಾನ್ಯತೆ ನೀಡಿತು. 1920ರ ದಶಕದ ಅನಂತರ ಸಾರ್ವಜನಿಕ ಆಡಳಿತದ ಅಧ್ಯಯನಕ್ಕೆ ಸಮಾಜವಿಜ್ಞಾನ ಮತ್ತು ಮನಶ್ಶಾಸ್ತ್ರ ದೃಷ್ಟಿಕೋನಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿ ಸಾರ್ವಜನಿಕ ಆಡಳಿತದಲ್ಲಿ “ಮಾನವ ಸಂಬಂಧಗಳ ಸಿದ್ಧಾಂತ” ಪ್ರಚಾರಕ್ಕೆ ಬಂದಿತ್ತು. ಇದರಂತೆ ಆಡಳಿತ ವ್ಯವಸ್ಥೆ ಬಂದು ಯಂತ್ರದಲ್ಲಿ ಅದೊಂದು ಮಾನವಶಕ್ತಿ ಮತ್ತು ಮಾನಸಿಕ ಸಂಬಂಧಗಳ ಸಾಮಾಜಿಕ ಜಾಲ ಮಾನಸಿಕ ಮತ್ತು ಸಾಮಾಜಿಕ ಪ್ರಚೋದನೆಗಳನ್ನು ಬಳಸಿ ಆಡಳಿತವನ್ನು ಉತ್ತಮ ಪಡಿಸಬಹುದೆಂದು ವಾದಿಸಿ ಆಡಳಿತದಲ್ಲಿ ಮಾನವ ಸಂಬಂಧಿಗಳು, ನಡವಳಿಕೆ, ಮನೋಸ್ಥೈರ್ಯ, ಗುಂಪುಭಾವನೆ, ನಾಯಕತ್ವ ಮುಂತಾದ ಅಂಶಗಳ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲಿತು. ಎಲ್ಟನ್ ಮೇಯಾ, ಎಂ.ಪಿ.ಫಾಲೆಟ್, ಚೆಸ್ಟರ್ ಬರ್ನಾರ್ಡ್, ಬರ್ಟ್ ಸೈಮಾನ್ ಮುಂತಾದವರು ಈ ಹೊಸ ವಿಚಾರಗಳ ಪ್ರವರ್ತಕ ರಾಗಿದ್ದರು.

ಸಾರ್ವಜನಿಕ ಆಡಳಿತದ ಅಂತರಿಕ ಮತ್ತು ಬಾಹ್ಯ ಅಂಶಗಳ ಮತ್ತು ಸಂಬಂಧಗಳ ಪರಿಣಾಮಗಳ ಪೂರ್ಣ ಚಿತ್ರವನ್ನು “ವ್ಯವಸ್ಥಾ-ಸಿದ್ಧಾಂತ” ಎಂಬ ಪಂಥ ಎರಡನೆಯ ಮಹಾಯುದ್ಧಾನಂತರದ ಕಾಲದಲ್ಲಿ ಮುಂದಿಟ್ಟಿತು. ಹರ್ಬರ್ಟ್ ಸೈಮನ್, ಡೆಸ್ಮಾಂಡ್‍ಕೀಲಿಂಗ್ ಮತ್ತು ವಿಶೇಷವಾಗಿ ಫ್ರೆಡ್‍ರಿಗ್ಸ್‍ರವರು ಈ ಪಂಥದ ಪ್ರತಿಪಾದಕರು. ಸಾರ್ವಜನಿಕ ಆಡಳಿತ ಯುದ್ಧೋತ್ತರ ಮತ್ತು ಪ್ರಜಾಪ್ರಭುತ್ವೀಯ ಅಡ್ಮಿನಿಸ್ಟ್ರೇಷನ್ ಸ್ಪಂದಿಸುವಂತೆ ಮಾಡಲು “ನ್ಯೂ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪಂಥ”, “ಪಬ್ಲಿಕ್ ಚಾಯ್ಸ್ ಸಿದ್ಧಾಂತ”, “ನೀತಿ ವಿಜ್ಞಾನ ಪಂಥ” ಮುಂತಾದವು 1950 ಮತ್ತು 1960ರ ದಶಕದಲ್ಲಿ ಪ್ರಚಾರ ಕೈಗೊಂಡವು. ಹೊಸರಾಷ್ಟ್ರಗಳ ಅಭಿವೃದ್ಧಿ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಆಡಳಿತವನ್ನು ಅಧ್ಯಯನ ಮಾಡಲು ರಿಗ್ಸ್ ಮುಂತಾದವರು “ಅಭಿವೃದ್ಧಿ ಆಡಳಿತ ಸಿದ್ಧಾಂತ”ವನ್ನು ಮುಂದಿಟ್ಟರು. ಸಾರ್ವಜನಿಕ ಆಡಳಿತವನ್ನು ಒಂದು ವಿಶ್ವವ್ಯಾಪೀ ಮತ್ತು ತುಲನಾತ್ಮಕ ಅಧ್ಯಯನವನ್ನಾಗಿ ರಿಗ್ಸ್ ಮತ್ತು ರಾಬರ್ಟ್‍ದ್ಹಾಲ್‍ರವರು “ತುಲನಾತ್ಮಕ ಸಾರ್ವಜನಿಕ ಸಿದ್ಧಾಂತ”ವನ್ನು ಪ್ರತಿಪಾದಿಸಿದರು.

ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಅಭಿವೃದ್ಧಿ ಹೊಂದಿದ ಪಶ್ಚಿಮ ರಾಷ್ಟ್ರಗಳಲ್ಲಿನ ಹೊಸ ಆರ್ಥಿಕ ನೀತಿಗಳಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳ ಪ್ರಭಾವದಲ್ಲಿ “ಹೊಸ ಸಾರ್ವಜನಿಕ ಆಡಳಿತ” ಮತ್ತು “ಹೊಸ ಸಾರ್ವಜನಿಕ ನಿರ್ವಹಣೆ” ಸಿದ್ಧಾಂತಗಳು ಬಂದು ಸಾರ್ವಜನಿಕ ಆಡಳಿತದಲ್ಲಿ ದಕ್ಷತೆ, ಕೈಗಾರಿಕಾ ಉದ್ಯಮ ನಿರ್ವಹಣಾ ಜವಾಬ್ದಾರಿ ಉತ್ತಮವಾಗಲು ಪ್ರಯತ್ನಿಸಲಾಗಿದೆ. ಭಾರತದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ “ಸುರಾಜ್ಯ” ಹೆಸರಿನಲ್ಲಿ ಹೆಚ್ಚು ಕಡಿಮೆ ಇದೇ ತರಹದ ಸಿದ್ಧಾಂತವನ್ನು ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. (ಎಮ್.ಯು.)