ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾರ ಅಬೂಬಕ್ಕರ್

ಸಾರ ಅಬೂಬಕ್ಕರ್ :- (1930-) ಭಾರತದ ಮುಸ್ಲಿಂ ಮಹಿಳೆಯರ ನೋವು, ನಿರಾಶೆಗಳಿಗೆ ಬಾಯಿಯಾದವರು ಸಾರಾ ಅಬೂಬಕ್ಕರ್.

ಕಾಸರಗೋಡಿನ ಮಲೆಯಾಳಂ ಮಾತೃಭಾಷೆಯಾಗಿದ್ದ ಕುಟುಂಬದಲ್ಲಿ 1930ರಲ್ಲಿ ಸಾರಾ ಅವರ ಜನನವಾಯಿತು. ಮೂರು ಜನ ಅಣ್ಣಂದಿರ ನಂತರ, ಬಯಸಿ ಬಯಸಿ ಪಡೆದ ಹೆಣ್ಣು ಮಗುವಾದರೂ, ಬೆಳೆಯುತ್ತ ಬೆಳೆಯುತ್ತ ಸಾಂಪ್ರದಾಯಕ ಬಂಧನದ ಬಿಗಿತನವೇನೂ ಕಡಮೆಯಾಗಲಿಲ್ಲ. ತಂದೆ ವಿದ್ಯಾಪಕ್ಷಪಾತಿಗಳಾಗಿದ್ದರಿಂದ, ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡದೆ ಎಸ್.ಎಸ್.ಎಲ್.ಸಿ ಯವರೆಗೂ ಓದಿಸಿದರು. ಪರೀಕ್ಷೆಯ ಫಲಿತಾಂಶ ಹೊರಬರುವಷ್ಟರಲ್ಲಿ ಮದುವೆಯ ಏರ್ಪಾಡು ಆಯಿತು. ಸರ್ಕಾರಿ ನೌಕರಿಯಲ್ಲಿದ್ದ ಅಬೂಬಕ್ಕರ್ ಅವರನ್ನು ವಿವಾಹವಾಗಿ ಮಂಗಳೂರಿಗೆ ಬಂದರು ಸಾರಾ. ಅತ್ತೆಯ ಮನೆಯವರು ಪೂರಾ ಸಂಪ್ರದಾಯಸ್ಥರು, ಗಂಡಸರು ಮನೆಯಲ್ಲಿದ್ದಾಗ ಹೊರ ಕೊಠಡಿಗೂ ಕಾಲಿಡುವಂತಿಲ್ಲ. ಬೀದಿಗೆ ಬರಬೇಕಾದರಂತೂ ಬುರುಖಾ ಇರಲೇಬೇಕಾಗಿತ್ತು. ಎಲ್ಲ ಸಂಪ್ರದಾಯದ ಬಂಧನದ ನಡುವೆಯೂ ಸಾರಾ ಅವರಿಗೆ ಓದುವ ಹುಚ್ಚು ಬಲವಾಗಿತ್ತು. ಶಿಕ್ಷಣವೆಲ್ಲ ಕನ್ನಡ ಮಾಧ್ಯಮದಲ್ಲೇ ಆಗಿದದುದರಿಂದ ಅಷ್ಟಾಗಿ ಇಂಗ್ಲೀಷ್ ಬರುತ್ತಿರಲಿಲ್ಲ. ಆದರೆ ತವರು ಮನೆಯಲ್ಲಿ ಕನ್ನಡ ಪುಸ್ತಕ ಓದುವ ಅಭ್ಯಾಸ ಬೆಳೆದಿತ್ತು. ಅತ್ತೆಯ ಮನೆಯಲ್ಲಿ ಇದಕ್ಕೆಲ್ಲ ಅವಕಾಶ ಇರಲಿಲ್ಲ. ಆದರೆ ಗಂಡನನ್ನು ಒಪ್ಪಿಸಿ ಅವರಿಗೆಂದು ಕನ್ನಡ ಕಾದಂಬರಿಗಳನ್ನು ತರಿಸಿ ಓದುತ್ತಿದ್ದರು. ಈ ಮಧ್ಯೆ ಮಕ್ಕಳು ಹುಟ್ಟಿದರು. ಒಟ್ಟಿನಲ್ಲಿ ಅತ್ತೆಯ ಮನೆ ಎನ್ನುವುದು ಅವರ ಪಾಲಿಗೆ ಯಾವರೀತಿಯ ಸ್ವಾತಂತ್ರ್ಯವೂ ಇಲ್ಲದ ಬಂದೀಖಾನೆ.

ಸಾರಾ ಅವರ ಸತಿ ಸರ್ಕಾರಿ ನೌಕರಿಯಲ್ಲಿದ್ದುದರಿಂದ ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ಇದರಿಂದಾಗಿ ಕೊನೆಗೂ ಆಕೆಗೆ ಗೃಹ ಬಂಧನದಿಂದ ಬಿಡುಗಡೆ ದೊರಕಿದಂತಾಯಿತು. ಮತ್ತೆ ಪತಿಗೆ ಮಂಗಳೂರಿಗೆ ವರ್ಗವಾದರೂ ಬೇರೆ ಮನೆಯಲ್ಲಿ ಇದ್ದುದರಿಂದ ಓದುವ ಸ್ವಾತಂತ್ರ್ಯ ದೊರೆಯಿತು. ಹೆಚ್ಚು ಹೆಚ್ಚು ಓದಿವಂತೆ ತಾನೂ ಯಾಕೆ ಬರೆಯಬಾರದು ಎನ್ನುವ ತುಡಿತ ಶುರುವಾಯಿತು. ಮೊದಮೊದಲು ಪತ್ರಿಕೆಗೆ ಕಳುಹಿಸಿದ್ದ ಕಥೆಗಳು ವಾಪಸ್ಸಾಗಿ ನಿರಾಶೆಗೂ ಕಾರಣವಾಯಿತು.

ಲಂಕೇಶ ಪತ್ರಿಕೆ ಆರಂಭವಾದ ನಂತರ ಮುಸ್ಲಿಂ ಸಂಪ್ರದಾಯದ ಬಗ್ಗೆ ಪ್ರಕಟವಾಗಿದ್ದ ಒಂದು ಲೇಖನಕ್ಕೆ ಪ್ರತಿಕ್ರಿಯೆಯಾಗಿ ಸಾರಾ ಪತ್ರ ಬರೆದರು. ಅವರ ಈ ಪತ್ರವನ್ನು ಪ್ರಕಟಿಸಿದ್ದಲ್ಲದೆ ಲಂಕೇಶರು “ನಿಮ್ಮ ಸಂಪ್ರದಾಯದಲ್ಲಿ ಇರುವ ಹೆಣ್ಣಿನ ಸ್ಥಾನಮಾನಗಳನ್ನು ವಸ್ತುವಾಗುಳ್ಳ ಒಂದು ಕಾದಂಬರಿ ಬರೆದು ಕೊಡಿ” ಎಂದು ಕೇಳಿದರು. ಇದರಿಂದ ಪ್ರೇರಿತರಾಗಿ ಸಾರಾ ತಮ್ಮ ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಬರೆದುಕೊಟ್ಟರು. ಅದು ಲಂಕೇಶ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಆತ್ಮಚರಿತ್ರೆ ಬರೆಯಿರಿ ಎಂದು ಲಂಕೇಶ ಅವರು ಪ್ರೋತ್ಸಾಹಿಸಿದಾಗ “ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು” ಎನ್ನುವ ಆತ್ಮ ವೃತ್ತಾಂತ ಬರೆದರು. ಇದು ಪತ್ರಿಕೆಯಲ್ಲಿ ಪ್ರಕಟವಾಗಿದ್ದಲ್ಲದೆ ಕಾದಂಬರಿಯಂತೆಯೇ ಜನಪ್ರಿಯವಾಯಿತು.

ನಂತರ ಸಾರಾ ಅವರು ಒಂದರ ನಂತರ ಒಂದು ಕಾದಂಬರಿಗಳನ್ನು ಕಥೆಗಳನ್ನೂ ಬರೆದು ಪ್ರಕಟಿಸಿದರು. ಭಾಷೆ ಮತ್ತು ಕೋಮು ಬಾಂಧವ್ಯ ಹಾಗೂ ಸಾಮಾಜಿಕ ಉನ್ನತಿಗಾಗಿ ಸಾರಾ ತಮ್ಮ ಬರಹಗಳ ಮೂಲಕ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಮುಸ್ಲಿಂ ಸಮಾಜದ ವಿರೋಧವನ್ನು ಸಹಿಸಿದ್ದಾರೆ. ಮಧ್ಯ ವಯಸ್ಸಿನಲ್ಲಿ ಬರೆಯಲಾರಂಭಸಿದರೂ, ತಮ್ಮ ಬರಹಗಳ ಮೂಲಕ ಕನ್ನಡದ ಜನಪ್ರಿಯ ಲೇಖಕಿಯಾದರು. ಚಂದ್ರಗಿರಿಯ ತೀರದಲ್ಲಿ, ಸಹನಾ,ವಜ್ರಗಳು'ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು ಮೊದಲಾದ ಕಾದಂಬರಿಗಳನ್ನು. ಚಪ್ಪಲಿಗಳು,ಪಯಣ ಮತ್ತು ಇತರ ಕಥೆಗಳು,ಅರ್ಧರಾತ್ರಿಯ ಕನಸುಗಳು, ಕಥಾಸಂಕಲನಗಳನ್ನು ರಚಿಸಿದ್ದರು. ಮಾನೋಮಿ, ಇನ್ನೂ ನಿದ್ರಿಸುವೆ ಮಲೆಯಾಳಂ ಭಾಷೆಯಿಂದ ಅನುವಾದಿಸಿದ ಕೃತಿಗಳು.

ಸಾರ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಲ್ಲಿಕಾ ಪ್ರಶಸ್ತಿ ಅನುಪಮಾ ಪ್ರಶಸ್ತಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ ಸಕಾರದ ಪ್ರತಿಷ್ಠಿತ ದಾನ ಚಿಂತಾಮಣಿ (2001) ಪ್ರಶಸ್ತಿಗಳನ್ನು ಪಡೆದು ಗೌರವಾನ್ವಿತರಾಗಿದ್ದರೆ. (ಎಚ್.ಎಸ್.ಪಾರ್ವತಿ)