ಸಾಸುವೆ ಬ್ರಾಸಿಕಾ ಕೆಂಪೆಸ್ಟ್ರಿಸ್ ಎಂಬ ಪ್ರಭೇದದ ಈ ಸಸ್ಯ ಕ್ರೂಸಿಫೆರೆ ಅಥವಾ ಬ್ರಾಸಿಕೇಸೀ ಕುಟುಂಬಕ್ಕೆ ಸೇರುತ್ತದೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಇಂಡಿಯನ್ ರೇಪ್, ಹಿಂದಿಯಲ್ಲಿ ಟೊರಿಯ ಎನ್ನುತ್ತಾರೆ. ಪುಟ್ಟ ಮೂಲಿಕೆಯಂಥ ಗಿಡದಲ್ಲಿ ಹಳದಿ ಹೂಗಳು ಬಿಡುತ್ತವೆ. ಭಾರತ ಮೂಲದ ಭಾರತದಲ್ಲಿಯೇ ಬೆಳೆಯುವ ಸಸ್ಯ. ಉತ್ತರ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳ ವಿವಿಧ ಭಾಗಗಳಲ್ಲಿಯೂ ಸಾಸುವೆ ಸೊಂಪಾಗಿ ಬೆಳೆಯುತ್ತದೆ. ಜಿಗುಟು ಅಥವಾ ಭಾರವಾದ ಜಿಗುಟು ಮಣ್ಣು ಸಾಸುವೆ ಬೆಳೆಗೆ ತುಂಬ ಪ್ರಶಸ್ತವಾದುದು. ಇದೊಂದು ವಾರ್ಷಿಕ ಗಿಡ.

ಸಾಸುವೆ ಗಿಡದಲ್ಲಿ ಉಪಯುಕ್ತ ಭಾಗ ಅದರ ಬೀಜ. ಅದರಲ್ಲಿ ಸೇ. 30-48 ಭಾಗ ಎಣ್ಣೆಯ ಅಂಶವಿದ್ದು ಸೇ.7 ಭಾಗ ತೇವಾಂಶ, 25 ಭಾಗ ಸಸಾರಜನಕ ವಸ್ತುಗಳೂ ಇರುತ್ತವೆ. ಸಾಸುವೆ ಎಣ್ಣೆಯನ್ನು ಅಡುಗೆಗೆ ಉಪಯೋಗಿಸುತ್ತಾರೆ. ಕಚ್ಚಾ ಎಣ್ಣೆಯನ್ನು ನೇರವಾಗಿಯೇ ಬಳಸಬಹುದು. ಸಾಬೂನು ತಯಾರಿಕೆಯಲ್ಲಿ, ದೀಪ ಬೆಳಗಲು, ಕಟ್ಟಿಗೆಗೆ ಪಾಲಿಷ್ ಮಾಡಲು ಈ ಎಣ್ಣೆಯನ್ನು ಉಪಯೋಗಿಸುತ್ತಾರೆ. ಯಂತ್ರಗಳಲ್ಲಿ ಘರ್ಷಣೆ ತಪ್ಪಿಸುವುದಕ್ಕೆ ಕೀಲೆಣ್ಣೆಯಾಗಿಯೂ ಉಪಯೋಗವಿದೆ. ಸಂಬಾರ ಪದಾರ್ಥಗಳ ಸಾಲಿಗೆ ಸೇರುವ ಸಾಸುವೆ ಬೀಜವನ್ನು ಉಪ್ಪಿನಕಾಯಿ ತಯಾರಿಸಲು ಹಾಗೂ ಒಗ್ಗರಣೆಯಲ್ಲಿಯೂ ಬಳಸುತ್ತಾರೆ. ಚೀನ, ಜಪಾನ್ ಹಾಗೂ ಯುರೋಪಿನ ಕೆಲವು ದೇಶಗಳಲ್ಲಿ ಸಾಸುವೆ ಎಣ್ಣೆಯನ್ನು ಉತ್ಪಾದಿಸುತ್ತಾರೆ. (ಎ.ಜಿ.ಡಿ.)