ಸಿಂಕೋನ - ರೂಬಿಯೆಸೀ ಕುಟುಂಬಕ್ಕೆ ಸೇರಿದ ಸಿಂಕೋನ ಲೆಡ್ಜೆರಿಯಾನ ಪ್ರಭೇದದ ಮರ. ಮೂಲಸ್ಥಾನ ಬೊಲೀವಿಯ, ಪೆರು ಮತ್ತು ಈಕ್ವೆಡಾರ್. ಚಿಂಚೊಸ್ ಎಂಬವಳು ಈ ಮರದ ಚಕ್ಕೆಯಿಂದ ತನ್ನ ಜ್ವರ ಗುಣವಾದುದರಿಂದ ದಕ್ಷಿಣ ಅಮೆರಿಕದಿಂದ ಯುರೋಪಿಗೆ ಸು. 1639ರಲ್ಲಿ ಬಳಕೆಗೆ ತಂದಳೆನ್ನಲಾಗಿದೆ. ಭಾರತದಲ್ಲಿ ಇದನ್ನು ನೀಲಗಿರಿ ಬೆಟ್ಟದ ಕೆಲವೆಡೆ ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬೆಳೆಸಲು ಪ್ರಾರಂಭಿಸಿದರು. ಕೆಮ್ಮಣ್ಣುಗುಂಡಿ ಬೆಟ್ಟ ಪ್ರದೇಶದಲ್ಲಿ 1949ರಲ್ಲಿ ಬೆಳೆಸಿದ ಒಂದು ನೆಡುತೋಪು ಇದೆ. ಪಾತಿಯಲ್ಲಿ ಬೆಳೆಸಿದ ಸಸಿಗಳು ಎರಡು ಮೂರು ಜೋಡಿ ಎಲೆಗಳು ಬಿಟ್ಟ ಅನಂತರ ಬೇರೆ ಪಾತಿಗಳಲ್ಲಿ ಅವನ್ನು 5 ಸೆಂಮೀ ಅಂತರದಲ್ಲಿ ನೆಟ್ಟು, ಅನಂತರ ಸಸಿಗಳು 10 ಸೆಂಮೀ ಎತ್ತರವಾದ ಮೇಲೆ ಪಾಲಿತೀನ್ ಚೀಲಗಳಲ್ಲಿ ಹದಮಾಡಿದ ಮರಳುಗೊಬ್ಬರ ಕೆಮ್ಮಣ್ಣು ಮಿಶ್ರಿತ ಮಣ್ಣನ್ನು ತುಂಬಿ, ನೆಟ್ಟು ನೀರೆರೆದು ಬೆಳೆಸಬೇಕು. ಹೀಗೆ ಸುಮಾರು ಆರು ತಿಂಗಳು ಬೆಳೆದ 20-25 ಸೆಂಮೀ ಎತ್ತರದ ಸಸಿಗಳನ್ನು 2ಮೀ ಅಂತರದಲ್ಲಿ ಗುಣಿಗಳಲ್ಲಿ ನೆಟ್ಟು ಕಾಪಾಡಬೇಕು.

ಈ ಮರದ ತೊಗಟೆಯಿಂದ “ಕ್ವಿನೈನ್” ಸಿಗುತ್ತದೆ. ಇದು ಮಲೇರಿಯ ಜ್ವರಕ್ಕೆ ಉತ್ತಮ ಔಷಧ.

  (ಎ.ಕೆ.ಎಸ್.)