ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ (?-1951). ಕನ್ನಡ ರಂಗ ಭೂಮಿಯ ಪ್ರಸಿದ್ಧ ನಟರು. ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರಿನಲ್ಲಿ ಜನಿಸಿದರು. ಇವರ ತಂದೆ ನಾಗೇಗೌಡ, ತಾಯಿ ಪುಟ್ಟತಾಯಮ್ಮ. ಪುಟ್ಟಸ್ವಾಮಯ್ಯನವರಲ್ಲಿದ್ದ ಕಲೆಯ ವಿಕಾಸಕ್ಕೆ ನೆರವಾದವರು ಇವರ ತಂದೆ ನಾಗೇಗೌಡರು. ಸೀತಾಮನೋಹರ ನಾಟಕ ಮಂಡಲಿಯ ಮಾಲೀಕರೂ ಸ್ತ್ರೀಪಾತ್ರಗಳಿಗಾಗಿ ಪ್ರಸಿದ್ಧರಾಗಿದ್ದ ತುಮಕೂರಿನ ಸೀತಾರಾಮಯ್ಯನವರು (ಸೀತು) ಇವರ ಅಭಿನಯಕಲೆಗೆ ಸುಸ್ಪಷ್ಟರೂಪ ಕೊಟ್ಟರು. ಜೊತೆಗೆ ಜಿ.ಎಚ್. ವೀರಣ್ಣನವರ ಪ್ರೋತ್ಸಾಹವೂ ಒದಗಿಬಂತು. ಗುಬ್ಬಿ ಕಂಪನಿಯಲ್ಲಿ ಇವರಿಗೆ ಸಾಕಷ್ಟು ಹೆಸರು ಬಂತು. ಇಲ್ಲಿರುವಾಗ ಭೀಮ, ಕಂಸ, ಹಿರಣ್ಯಕಶಿಪು ಮೊದಲಾದ ದೈತ್ಯ ಪಾತ್ರಗಳ ಪ್ರೌಢ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದರು. ಈ ಪಾತ್ರಗಳ ಅಭಿನಯದಲ್ಲಿ ಗಂಗಾಧರರಾಯರ ಪ್ರಭಾವ ಪುಟ್ಟಸ್ವಾಮಯ್ಯ ನವರ ಮೇಲೆ ಸಾಕಷ್ಟು ಬಿದ್ದಿತ್ತು. ದೈತ್ಯ ಪಾತ್ರಕ್ಕೆ ಬೇಕಾದ ಭೀಮಕಾಯ, ಕಂಠ, ಅಭಿನಯಚಾತುರ್ಯ ಇವರಲ್ಲಿದ್ದುದರಿಂದ ಇವರು ನಿರ್ವಹಿಸಿದ ಆ ಪಾತ್ರಗಳು ಯಶಸ್ವಿಯಾದವು. ಕೆಲಕಾಲ ಪುಟ್ಟಸ್ವಾಮಯ್ಯನವರು ಎ.ಎನ್. ಶೇಷಾಚಾರ್ಯರ ಶೇಷಕಮಲ ಕಲಾಮಂಡಲಿಯಲ್ಲಿಯೂ ಸೇವೆ ಸಲಿಸಿದ್ದರು. ಗುಬ್ಬಿ ಕಂಪನಿಯ ಮತ್ತೊಂದು ಶಾಖೆಯಾಗಿದ್ದ ನೀಲಕಂಠಪ್ಪನವರ ಕಂಪನಿಯಲ್ಲೂ ಪ್ರಧಾನ ಪಾತ್ರಗಳನ್ನು ನಿರ್ವಹಿಸಿ ತಮ್ಮ ಪ್ರಾಶಸ್ತ್ಯವನ್ನು ಹೆಚ್ಚಿಸಿಕೊಂಡರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇವರ ಅಭಿನಯವನ್ನು ಮೆಚ್ಚಿಕೊಂಡಿದ್ದರು. ಭಕ್ತಮಾರ್ಕಂಡೇಯ ನಾಟಕದಲ್ಲಿ ಪುಟ್ಟಸ್ವಾಮಯ್ಯನವರು ನಿರ್ವಹಿಸುತ್ತಿದ್ದ ಯಮನ ಪಾತ್ರ ಇವರ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿತ್ತು.

ಪುಟ್ಟಸ್ವಾಮಯ್ಯನವರು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಗುಬ್ಬಿ ಕರ್ನಾಟಕ ಫಿಲಂಸ್ ಅವರು ನಿರ್ಮಿಸಿದ ಜೀವನ ನಾಟಕ ಇವರು ಅಭಿನಯಿಸಿದ ಒಂದು ಚಿತ್ರ. ಇವರು 1951ರಲ್ಲಿ ಮೈಸೂರಿನಲ್ಲಿ ನಿಧನ ಹೊಂದಿದರು. ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕನಟರಾಗಿ ಖ್ಯಾತಿಗಳಿಸಿರುವ ರಾಜಕುಮಾರ್ (ಮುತ್ತುರಾಜ್) ಅವರು ಪುಟ್ಟಸ್ವಾಮಯ್ಯನವರ ಪುತ್ರರು. (ನೋಡಿ- ರಾಜಕುಮಾರ್-1) (ಎಸ್.ಎಚ್.ವಿ.)