ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಗ್, ಎಂ ಬಿ

ಸಿಂಗ್, ಎಂ ಬಿ

1925- . ಕನ್ನಡ ಪತ್ರಿಕೋದ್ಯಮ ಕಂಡ ಅತ್ಯಂತ ಅಪರೂಪದ ವ್ಯಕ್ತಿತ್ವ ಮದನ್ ಭುವನ್‍ಸಿಂಗ್, ಪತ್ರಿಕಾವಲಯದಲ್ಲಿ ಎಂ.ಬಿ.ಸಿಂಗ್ ಎಂದೇ ಪರಿಚಿತ. ಹುಟ್ಟಿದ್ದು ಮೈಸೂರಿನಲ್ಲಿ ಮೇ 24, 1925ರಲ್ಲಿ. ತಂದೆ ಮದನ್‍ಸಿಂಗ್, ತಾಯಿ ವಸಂತಾಬಾಯಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಂಡ್ಯದಲ್ಲಿ, ಕಾಲೇಜು ಶಿಕ್ಷಣ ಮೈಸೂರಿನಲ್ಲಿ. ಆಗ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದವರು ಸಿಂಗ್.

ಮೈಸೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಸಿಂಗ್ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ 'ಮಾತೃಭೂಮಿ ಪತ್ರಿಕೆಯ ವರದಿಗಾರ ಹಾಗೂ ಏಜಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಆದರೆ ಬದುಕಿನ ಭಾರವನ್ನು ಅದು ತಗ್ಗಿಸಲಿಲ್ಲ. ಕುಟುಂಬ ಸಲುಹಲು ದುಡಿಯಬೇಕಾದ ಅನಿವಾರ್ಯತೆ. ವಿಮಾನದಳಕ್ಕೆ ಆಯ್ಕೆಯಾಗಿ, ತರಬೇತಿ ಪಡೆಯಲು ಸಜ್ಜಾಗುತ್ತಿದ್ದಾಗ ಆದ ಭೇಟಿ ವೀರಕೇಸರಿ ಸೀತಾರಾಮ ಶಾಸ್ತ್ರೀ ಅವರದು.

ಈ ಭೇಟಿ ಸಿಂಗ್ ಅವರ ದಿಕ್ಕು ದೆಸೆಯನ್ನು ಬದಲಾಯಿಸಿತು. ವೀರಕೇಸರಿ ಅವರ ವಾರ್ತಾ, ಅನಂತರ ಚಿತ್ರಗುಪ್ತ, ವಿಶ್ವಕರ್ನಾಟಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಸಿಂಗ್ ಪ್ರಜಾವಾಣಿಯನ್ನು ಸೇರಿದ್ದೇ (1953) ಅನುಭವಸ್ಥ ಪತ್ರಕರ್ತರಾಗಿ, ಅವರು ಈ ಪತ್ರಿಕೆಯನ್ನು ಸೇರಿದ್ದು ಉಪಸಂಪಾದಕ/ವರದಿಗಾರರಾಗಿ. ಅದು ಪತ್ರಿಕೋದ್ಯಮದ ಸಂಕ್ರಮಣ ಕಾಲ.

ಸ್ವಾತಂತ್ರ್ಯಾನಂತರದಲ್ಲಿ ಹುಟ್ಟಿದ ಪ್ರಜಾವಾಣಿಯ ಮುಂದೆ ಸ್ವಾತಂತ್ರ್ಯೋತ್ತರ ಭಾರತದ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಭಾಷ್ಯ ಬರೆಯುವ, ಕನಸುಗಳು ಮಡುಗಟ್ಟಿತ್ತು. ಆ ಕನಸುಗಳ ಸಾಕಾರಕ್ಕೆ ಶಿಸ್ತಿನ ಸೇನೆಯನ್ನು ಪ್ರಜಾವಾಣಿ ಸ್ಥಾಪಕರು ಬಯಸಿದ್ದರು. ಮಿಲಿಟರಿಗೆ ಸೇರದೆ ಪತ್ರಿಕೋದ್ಯಮಕ್ಕೆ ಬಂದ ಸಿಂಗ್ ಪ್ರಜಾವಾಣಿಯೊಳಗೆ ಶಿಸ್ತಿನ ಸಿಪಾಯಿಯಂತೆ ಬಂದರು. ಒಂದೊಂದೇ ಮೆಟ್ಟಿಲೇರುತ್ತ ಅದರ ಕಮಾಂಡರ್ ಆದರು. ಸಿಂಗ್ ಪ್ರಜಾವಾಣಿಯೊಂದಿಗೆ ಸುಧಾ ಸಾಪ್ತಾಹಿಕ, ಮಾಸಿಕ ಮಯೂರಕ್ಕೂ ಸಂಪಾದಕರಾಗಿ ನಿವೃತ್ತರಾದರು. ತಮ್ಮ ಅಧಿಕಾರಾವಧಿಯಲ್ಲಿ ಅವರು ಬೆಳೆಸಿದ ಪತ್ರಕರ್ತರು ಅಪಾರ. ಅವರ ಏಳಿಗೆಯಲ್ಲಿ ಸಿಂಗ್ ಕಂಡಿದ್ದು ವೃತ್ತಿ ಧರ್ಮದ ತೃಪ್ತಿ.

ಪತ್ರಕರ್ತರು ಹಿರಿಯರಾಗುತ್ತ ಹೋದಂತೆಲ್ಲ ಮಾನಸಿಕವಾಗಿ ಕಿರಿಯರಾಗುತ್ತ-ಕುಬ್ಬರಾಗುತ್ತ ಹೋಗುತ್ತಾರೆ. ಹೊಸ ಪೀಳಿಗೆಯ ಪತ್ರಕರ್ತರೆಂದರೆ ಕೆಲಸಕ್ಕೆ ಬಾರದವರು ಎಂಬ ತೀರ್ಮಾನದಲ್ಲೇ ಅವರಿರುತ್ತಾರೆ. ಈ ಮನೋಭಾವದವರೇ ತುಂಬಿರುವ ಹಿರಿಯ ಪತ್ರಕರ್ತರ ವಲಯದಲ್ಲಿ ಭಿನ್ನ ಸ್ವಭಾವದಿಂದ ಗಮನ ಸೆಳೆಯುವವರು ಎಂ.ಬಿ.ಸಿಂಗ್. ಅವರಿಗೆ ಕಿರಿಯ ಪೀಳಿಗೆಯ ಪತ್ರಕರ್ತರಲ್ಲಿ ಅದಮ್ಯ ವಿಶ್ವಾಸ. ತಮ್ಮ ಶಕ್ತಿಯ ಅರಿವಿಲ್ಲದ ಆಂಜನೇಯ ಅವರಲ್ಲ. ಹಿರಿಯರು ಜಾಂಬವಂತರಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು, ಗುರಿಯತ್ತ ಮಾರ್ಗದರ್ಶನ ಮಾಡಬೇಕು ಎಂಬ ನೀತಿಯನ್ನು ನಂಬಿ ಅದರಂತೆ ನಡೆದವರು ಎಂ.ಬಿ.ಸಿಂಗ್.

ಸಿಂಗ್ ಅವರ ಕೊಡುಗೆಯನ್ನು ಇಷ್ಟೇ ಎಂದು ಹೇಳಲಾಗದ ಸ್ಥಿತಿ ಕನ್ನಡ ಪತ್ರಿಕೋದ್ಯಮದ್ದು, ವಿಶೇಷವಾಗಿ ಪ್ರಜಾವಾಣಿ ಬಳಗದ್ದು. ಪ್ರಜಾವಾಣಿ, ಸುಧಾ ಸಾಪ್ತಾಹಿಕ ಹಾಗೂ ಮಯೂರ ಮಾಸ ಪತ್ರಿಕೆಗಳಿಗೆ ಏಕಕಾಲದಲ್ಲಿ ಸಂಪಾದಕರಾಗಿದ್ದವರು ಸಿಂಗ್. ಒಂದೇ ಬಳಗಕ್ಕೆ ಸೇರಿದ ಪತ್ರಿಕೆ, ನಿಯತಕಾಲಿಕಗಳಿಗೆ ಆಯಾ ಪ್ರಕಟಣ ಸಂಸ್ಥೆಯ ಮಾಲಿಕರು ಸಂಪಾದಕರಾಗಿರುವುದು ವಿಶೇಷವಲ್ಲ, ಅಪರೂಪವೂ ಅಲ್ಲ. ಆದರೆ ಮಾಲಿಕರಲ್ಲದ ಉದ್ಯೋಗಿಯೊಬ್ಬರು ಹೀಗೆ ಮೂರು ಮೂರು ಪತ್ರಿಕೆಗಳಿಗೆ ಏಕಕಾಲದಲ್ಲಿ ಸಂಪಾದಕರಾಗಿರುವುದು ವಿಶೇಷವೂ ಹೌದು, ಅಪರೂಪವೂ ಹೌದು. ವಿದ್ಯುನ್ಮಾನ ಮಾಧ್ಯಮದ ದಾಳಿ ಇನ್ನೂ ಆರಂಭವಾಗಿರದ ದಿನಗಳಲ್ಲೇ ಅದರ ಪ್ರವಾಹವನ್ನು ಊಹಿಸಿದ್ದವರು ಸಿಂಗ್ ಎನ್ನುವುದು ಅವರೊಂದಿಗೆ ಒಡನಾಡಿದವರೆಲ್ಲರೂ ಬಲ್ಲ ಸಂಗತಿ. ವಿದ್ಯುನ್ಮಾನ ಮಾಧ್ಯಮವನ್ನು ಎದುರಿಸಲು ಮುದ್ರಣ ಮಾಧ್ಯಮ ಸಜ್ಜಾಗಬೇಕೆಂದು ಬಯಸಿದ್ದ ಅವರು ತಾವು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಯಲ್ಲಿ ಆಂದೋಲನ ಸ್ವರೂಪದ ಅಭಿಯಾನವನ್ನೇ ನಡೆಸಿದರು. ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳು ಆ ಕಾಲದಲ್ಲೇ ಇತರ ಪತ್ರಿಕೆ ಹಾಗೂ ನಿಯತ ಕಾಲಿಕೆಗಳಿಗಿಂತ ಭಿನ್ನವಾಗಿ ಮುನ್ನಡೆಸಿದ ಶ್ರೇಯಸ್ಸು ಅವರದು. ವಿಶೇಷವಾಗಿ ಸುಧಾ ಹಾಗೂ ಮಯೂರಗಳಿಗೆ ಅವರು ವಿಶೇಷ ಸ್ವರೂಪದ ಕಾಯಕಲ್ಪವನ್ನೇ ನೀಡಿದರು. ಅವುಗಳ ವಸ್ತು, ವಿನ್ಯಾಸ, ಸ್ವರೂಪಗಳಿಗೆ ಹೊಸದೇ ಆದೊಂದು ಆಯಾಮವನ್ನು ದೊರಕಿಸಿಕೊಟ್ಟವರು ಸಿಂಗ್.

ತಾವು ಪತ್ರಿಕೋದ್ಯಮ ವೃತ್ತಿಯಲ್ಲಿದ್ದಷ್ಟೂ ಕಾಲ ಸಿಂಗ್ ಅವರು ಯಾವುದೇ ಪ್ರಶಸ್ತಿ, ಗೌರವ ಹುದ್ದೆ, ಸರ್ಕಾರ ಕೊಡ ಮಾಡುವ ಸೌಲಭ್ಯಗಳನ್ನು ಒಪ್ಪಿಕೊಳ್ಳಲಿಲ್ಲ ಎನ್ನುವುದು ಸಾರ್ವಕಾಲಿಕ ಅಪರೂಪದ ಗುಣ. ಆದರೆ ಈ ಗುಣ ಇತರರಿಗೆ ಮಾದರಿ ಆಗಲಿಲ್ಲ ಎನ್ನುವುದು ವರ್ತಮಾನದ ಸತ್ಯ. ಪ್ರಜಾವಾಣಿ ಸಂಪಾದಕರಾಗಿದ್ದ ಸಮಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಡಾ.ಎಚ್.ನರಸಿಂಹಯ್ಯ ನೇತೃತ್ವದ ಸಮಿತಿ ಬಯಸಿತ್ತು. ಅದರ ಸುಳಿವು ಸಿಕ್ಕ ಸಿಂಗ್ ಪ್ರಶಸ್ತಿ ಪಟ್ಟಿಯಲ್ಲಿ ತಮ್ಮ ಹೆಸರು ಸೇರದಂತೆ ನೋಡಿಕೊಂಡರು. ಸಿಂಗ್ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಭಾವಿಸದೆ ವ್ರತವೆಂದು ಪರಿಗಣಿಸಿದ್ದೇ ಅವರ ಈ ಗುಣದ ಮೂಲ. ಗೋವಾ ವಿಮೋಚನಾ ಚಳವಳಿಯನ್ನು ಛಾಯಾಗ್ರಾಹಕರಾಗಿ ಸೆರೆ ಹಿಡಿದ ಸಿಂಗ್ ಯೂರೋಪ್, ರಷ್ಯಾ ಒಳಗೊಂಡಂತೆ ಹಲವು ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಅಧ್ಯಯನ ಪ್ರವಾಸ ಮಾಡಿದವರು.

ರಾಜೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಹಾಗೂ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗಳು (1996), ಟೀಯೆಸ್ಸಾರ್ ಪ್ರಶಸ್ತಿ (1997) ಇವರಿಗೆ ಬಂದಿವೆ. ಇಳಿ ವಯಸ್ಸಿನಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಸಿಂಗ್, ಹೊಸ ಪೀಳಿಗೆಯ ಪತ್ರಕರ್ತರಿಗೆ ಹಲವು ದೃಷ್ಟಿಯಿಂದ ಮಾದರಿಯಾಗಿರುವವರು. (ಎಂಕೆ.ಬಿ.)