ಸಿಂಘಣ 2

ಸೇವುಣ ವಂಶದ ಖ್ಯಾತ ದೊರೆ (ಸು. 1200-47). ಇವನ ತಂದೆ ಒಂದನೆಯ ಜೈತುಗಿಯ ಮರಣಾನಂತರ ಪಟ್ಟಕ್ಕೆ ಬಂದ. ಪಟ್ಟಕ್ಕೆ ಬಂದ ಕೂಡಲೇ ಹೊಯ್ಸಳ ರಾಜ್ಯದ ವಿವಿಧ ಭಾಗಗಳನ್ನು ಆಕ್ರಮಿಸಿಕೊಳ್ಳಲು ಪ್ರಾರಂಭಿಸಿದ. ಈ ಸಂದರ್ಭದಲ್ಲಿ ಹೊಯ್ಸಳ ಬಲ್ಲಾಳನಿಗೆ ಪರಿಸ್ಥಿತಿ ಅಷ್ಟೇನೂ ಅನುಕೂಲಕರವಾಗಿರಲಿಲ್ಲವಾಗಿ ಆತ ಸೇವುಣ ಸೈನ್ಯವನ್ನು ತಡೆಯಲಾರದೆ ಹೋದ. 1212ರಲ್ಲಿ ಸಿಂಘಣನ ಸೈನ್ಯ ಬಂದಣಿಕೆಯನ್ನು ಲೂಟಿ ಮಾಡಿತು. ಬೊಮ್ಮಿದೇವರಸ ಎಂಬವನು 1217ರಲ್ಲಿ ಹೊಯ್ಸಳ ಸೈನ್ಯವನ್ನು ಸೋಲಿಸಿ ಸೊರಬ, ಹೊನ್ನಾಳಿ ಪ್ರದೇಶದ ಅನೇಕ ಭಾಗಗಳನ್ನು ವಶಮಾಡಿಕೊಂಡ. ಸಿಂಘಣ ಹೊಯ್ಸಳರ ಮೇಲಿನ ವಿಜಯ ಸೂಚಕವಾದ ಬಿರುದುಗಳನ್ನು ಧರಿಸಿ ಅನೇಕ ದೇವಾಲಯಗಳಿಗೆ ದತ್ತಿಗಳನ್ನು ಕೊಟ್ಟ. ಹೊಯ್ಸಳ ಬಲ್ಲಾಳನ ಅನಂತರ ಪಟ್ಟಕ್ಕೆ ಬಂದ ನಾರಸಿಂಹ ಶಕ್ತನಾಗಿರಲಿಲ್ಲವಾಗಿ ಹೊಯ್ಸಳ ನಾಡಿನ ಬಹುಭಾಗಗಳು ಸಿಂಘಣನ ವಶವಾದವು.

ತನ್ನ ಸೈನ್ಯ ಹೊಯ್ಸಳರನ್ನು ಸೋಲಿಸುತ್ತಿರುವಾಗಲೇ, ಸು. 1210ರ ಸಮಯದಲ್ಲಿ ಸಿಂಘಣ ಮಾಳವ ದೇಶಕ್ಕೆ ನುಗ್ಗಿ ಸುಭಟವರ್ಮನನ್ನು ಕೊಂದು, ಅರ್ಜುನವರ್ಮನನ್ನು ಸೋಲಿಸಿದ. ಅನಂತರ ಲಾಟರಾಜ್ಯದ ಮೇಲೆ ನುಗ್ಗಿದ. ಆದರೆ ಚಾಳುಕ್ಯರ ಸಹಾಯದಿಂದ ಚಾಹಮಾನಸಿಂಹನು ಸಿಂಘಣನನ್ನು ಓಡಿಸಿದ. ಸಿಂಘಣ 1216ರಲ್ಲಿ ಶಿಲಾಹಾರ ಭೋಜನನ್ನು ಸೋಲಿಸಿ ಕೊಲ್ಲಾಪುರವನ್ನು ತನ್ನ ವಶಮಾಡಿಕೊಂಡ. ಅನಂತರ ಕೊಂಕಣಕ್ಕೆ ಹೋಗಿ ಕೇಶಿರಾಜನನ್ನು ಸೋಲಿಸಿದ. ಈ ವಿಜಯಗಳಿಂದ ಉತ್ತೇಜಿತನಾದ ಸಿಂಘಣ ಮತ್ತೊಮ್ಮೆ ಲಾಟ ರಾಜ್ಯದ ಮೇಲೆ ದಂಡೆತ್ತಿ ಹೋದ. ಇವನ ಸೇನಾಧಿಪತಿ ಖೋಲೇಶ್ವರನ ನೇತೃತ್ವದಲ್ಲಿ ಮುಂದುವರಿದ ಸೈನ್ಯ ಚಾಹಮಾನ ಸಿಂಹನ ಮೇಲೆ ಯುದ್ಧಮಾಡಿತು. ಈ ಯುದ್ಧದಲ್ಲಿ ಸಿಂಹ ಮತ್ತು ಅವನ ಸಹೋದರ ಸಿಂಧುರಾಜ ಕೊಲ್ಲಲ್ಪಟ್ಟರು. ಶಂಖ ಸೆರೆಸಿಕ್ಕಿದ. ಖೋಲೇಶ್ವರ ಬ್ರೋಚ್ ನಗರವನ್ನು ತನ್ನ ವಶಮಾಡಿಕೊಂಡು ಅಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದ. ಅನಂತರ ಸಿಂಘಣ ಗುಜರಾತಿಗೆ ನುಗ್ಗಿದ. ಈ ಸಂದರ್ಭದಲ್ಲಿ ಲವಣಪ್ರಸಾದನು ಶರಣಾಗತನಾಗಿ ಸಂಧಿಯನ್ನು ಮಾಡಿಕೊಂಡ. ಸಿಂಘಣ ಹೆಚ್ಚಿನ ಪ್ರಯೋಜನವಿಲ್ಲದೆ ಹಿಂದಿರುಗಿದ. ಈ ಕಡೆ ಸಿಂಘಣನ ಸೈನ್ಯ ಅನೇಕ ರಾಜರನ್ನು ಬಗ್ಗುಬಡಿಯುತ್ತಿತ್ತು. ಕದಂಬ ಚಕ್ರವರ್ತಿ ಮಲ್ಲಿದೇವ ಸೋತು ಮಹಾಮಂಡಲೇಶ್ವರನಾದ. ಗುತ್ತ ದೊರೆ ಎರಡನೆಯ ಜೋಯಿದೇವ ಸೋತು ಸಾಮಂತನಾದ. ರಟ್ಟರಾಜ ಎರಡನೆಯ ಲಕ್ಷ್ಮೀದೇವನನ್ನು ಸೇವುಣ ಸೇನಾಧಿಪತಿ ಬೀಚಣ ಸೋಲಿಸಿ ಅವನ ರಾಜ್ಯವನ್ನು ಸೇವುಣ ರಾಜ್ಯಕ್ಕೆ ಸೇರಿಸಿದ. ಬೆಳಗುತ್ತಿಯ ಸಿಂದ ದೊರೆ ಮೂರನೆಯ ಈಶ್ವರದೇವ ಶರಣಾಗತನಾದ. ಯಲಬುರ್ಗಿಯ ಸಿಂದರೂ ಶರಣಾಗತರಾದರು. ಸಿಂಘಣ ತೆಲುಗು ಚೋಳ ತಿಕ್ಕನ ಮೇಲೆಯೂ ಯುದ್ಧಮಾಡಿದ. ಸಿಂಘಣನಿಗೂ ಕಾಕತೀಯ ಗಣಪತಿಗೂ ಯುದ್ಧಗಳು ನಡೆದರೂ ಅವುಗಳ ವಿವರಗಳು ತಿಳಿದಿಲ್ಲ. ಸಿಂಘಣ ಆಭೀರ ಲಕ್ಷ್ಮೀದೇವನನ್ನೂ ಜಜ್ಜಲದೇವನನ್ನೂ ಸೋಲಿಸಿದನೆಂದು ತಿಳಿದು ಬರುತ್ತದೆ.

ಸು. 1240ರಲ್ಲಿ ಮತ್ತೊಮ್ಮೆ ಸಿಂಘಣನ ಸೈನ್ಯ ರಾಮನ ನೇತೃತ್ವದಲ್ಲಿ ಗುಜರಾತಿಗೆ ನುಗ್ಗಿತು. ವೀರಧವಳನ ಮಗನಾದ ವೀಸಲದೇವ ರಾಮನನ್ನು ಕೊಂದ. ಸೇವುಣ ಸೈನ್ಯ ಹಿಂತಿರುಗಿತು. ಕೊನೆಗೂ ಗುಜರಾತನ್ನು ವಶಮಾಡಿಕೊಳ್ಳಲು ಸಿಂಘಣನಿಗೆ ಆಗಲಿಲ್ಲ.

ಸಿಂಘಣನ ರಾಜ್ಯ ಬಹು ವಿಸ್ತಾರವಾಗಿತ್ತು. ಉತ್ತರದಲ್ಲಿ ನರ್ಮದಾ ತೀರದವರೆಗೆ, ದಕ್ಷಿಣದಲ್ಲಿ ಕಾವೇರಿಯವರೆಗೆ ಇವನು ವಿಜಯ ಯಾತ್ರೆಗಳನ್ನು ಕೈಗೊಂಡಿದ್ದ. ಸಿಂಘಣ ಸಾಹಿತ್ಯ ಮತ್ತು ಕಲೆಗಳಿಗೂ ಆಶ್ರಯ ಕೊಟ್ಟಿದ್ದಾನೆ. ಖ್ಯಾತ ಸಂಗೀತಶಾಸ್ತ್ರಜ್ಞ ಶಾಙ್ರ್ಞದೇವ ಸಿಂಘಣನ ಆಶ್ರಯದಲ್ಲಿ ಸಂಗೀತ ರತ್ನಾಕರವನ್ನು ಬರೆದ. ಶಾಂತೇಶ್ವರ ಪುರಾಣದ ಕರ್ತೃವಾದ ಕಮಲಭವ ಸಿಂಘಣನ ಆಸ್ಥಾನದಲ್ಲಿದ್ದ. ಚಂಗದೇವ ಮತ್ತು ಅನಂತದೇವ ಎಂಬ ಖ್ಯಾತ ಖಗೋಳಶಾಸ್ತ್ರಜ್ಞರು ಇವನ ಆಶ್ರಯದಲ್ಲಿದ್ದರು. ಸಿಂಘಣ ಜೈನ, ವೈಷ್ಣವ, ಶೈವ ಮತ್ತು ಪಾಶುಪತ ದೇವಾಲಯಗಳಿಗೆ ಅನೇಕ ದತ್ತಿಗಳನ್ನು ನೀಡಿದ್ದಾನೆ. ಸಮಕಾಲೀನ ದಕ್ಷಿಣಾಪಥದಲ್ಲಿ ಸೇವುಣರಿಗೆ ಒಂದು ಗಣ್ಯಸ್ಥಾನವನ್ನು ಸಂಪಾದಿಸಿಕೊಟ್ಟ ಕೀರ್ತಿ ಈತನಿಗೆ ಸಲ್ಲುತ್ತದೆ.

ಇವನಿಗೆ ಜೈತುಗಿ ಎಂಬ ಮಗನಿದ್ದ. ಆದರೆ ಅವನು ಮುಂಚೆಯೇ ಮರಣಹೊಂದಿದುದರಿಂದ ಸಿಂಘಣನ ಮೊಮ್ಮಗನಾದ ಕೃಷ್ಣ ಸಿಂಘಣನ ನಿಧನಾನಂತರ(1247) ಪಟ್ಟಕ್ಕೆ ಬಂದ. (ಎ.ವಿ.ಎನ್.)