ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ಧಗಂಗಾ

ಸಿದ್ಧಗಂಗಾ ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಹಾಗೂ ತುಮಕೂರು ತಾಲ್ಲೂಕಿನ ಒಂದು ಗ್ರಾಮ. ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ತುಮಕೂರಿನ ಆಗ್ನೇಯಕ್ಕೆ 5 ಕಿಮೀ ದೂರದಲ್ಲಿದೆ.

ಇದೊಂದು ವೀರಶೈವ ಧಾರ್ಮಿಕ ಕ್ಷೇತ್ರ. ಬೆಟ್ಟದ ಮೇಲೆ ಸಿದ್ಧಲಿಂಗೇಶ್ವರ ದೇವಾಲಯ ಮತ್ತು ಜಲಬುಗ್ಗೆಯೊಂದಿದ್ದು ಅದನ್ನು ಸಿದ್ಧಗಂಗೆ ಎಂದು ಕರೆಯುವರು. ಆರು ಶತಮಾನಗಳಷ್ಟು ಪ್ರಾಚೀನ ಇತಿಹಾಸವುಳ್ಳ ಸಿದ್ಧಗಂಗಾ ಮಠ ಇಲ್ಲಿದೆ. ಸಾರ್ವಜನಿಕ ಸೇವೆಗೆ ಹೆಸರಾದ ಈ ಮಠದ ಆಶ್ರಮದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳಿವೆ. ಇಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಊಟ-ವಸತಿಯ ಉಚಿತ ವ್ಯವಸ್ಥೆ ಉಂಟು. ಈ ಕ್ಷೇತ್ರದಲ್ಲಿ ಪ್ರತಿವರ್ಷ ಶಿವರಾತ್ರಿ ಸಮಯದಲ್ಲಿ 12 ದಿನಗಳ ಜಾತ್ರೆಯಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ ನಡೆಯುವುದು. ಜಾತ್ರೆಯ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. (ಜಿ.ಒ.)