ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ಧಯ್ಯ ಪುರಾಣಿಕ

ಸಿದ್ಧಯ್ಯ ಪುರಾಣಿಕ :- 1918-94. ಕನ್ನಡದ ಪ್ರಸಿದ್ಧ ಲೇಖಕರು. ಕಾವ್ಯಾನಂದ ಇವರ ಕಾವ್ಯನಾಮ. ಇವರು ರಾಯಚೂರು ಜಿಲ್ಲೆ ಯಲಬುರ್ಗ ತಾಲ್ಲೂಕಿನ ದ್ಯಾಂಪುರದಲ್ಲಿ 1918 ಜೂನ್ 18ರಂದು ಜನಿಸಿದರು. ತಂದೆ ಕಲ್ಲಿನಾಥಶಾಸ್ತ್ರಿ ತಾಯಿ ದಾನಮ್ಮ. ದ್ಯಾಂಪುರ ಮತ್ತು ಕುಕ್ಕನೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢಶಾಲೆಯಿಂದ ಇಂಟರ್ ಮೀಡಿಯೇಟ್‍ವರೆಗೆ ಗುಲ್ಬರ್ಗದಲ್ಲಿ ಬಿ.ಎ. ಮತ್ತು ಎಲ್‍ಎಲ್.ಬಿ. ಗಳನ್ನು ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಓದಿ, ತಹಶೀಲ್ದಾರರಾಗಿ ಸೇವೆಯನ್ನಾರಂಭಿಸಿದರು (1943).

ಇವರು ನಾಂದೇಡ (1944), ಗುಲ್ಬರ್ಗ (1945)ಗಳಲ್ಲಿ ಅಸಿಸ್ಟಂಟ್ ಕಲೆಕ್ಟರ್‍ರಾಗಿ, ಹೈದರಾಬಾದ ಸಂಸ್ಥಾನದಲ್ಲಿ ಅಸಿಸ್ಟಂಟ್ ರೆವೆನ್ಯೂ ಸೆಕ್ರೆಟರಿಯಾಗಿ (1951-52), ಸ್ಥಾನಿಕ ಸ್ವರಾಜ್ಯ ಆಡಳಿತ ಸಚಿವರ ಕಾರ್ಯದರ್ಶಿಯಾಗಿ (1952-53) ಕೃಷಿಯೋಜನೆ ಹಾಗೂ ಪೂರೈಕೆ ಇಲಾಖೆಯ ಸಚಿವರ ಕಾರ್ಯದರ್ಶಿಯಾಗಿ (1953) ತಾಂಡೂರಿನಲ್ಲಿ ಡೆಪ್ಯೂಟಿ ಕಲೆಕ್ಟರ್‍ರಾಗಿ, ಅನಂತರ ಅದೇ ಹುದ್ದೆಯಲ್ಲಿ ಯಾದಗಿರಿಯಲ್ಲಿದ್ದು 1960 ಭಾರತೀಯ ಆಡಳಿತ ಸೇವೆ (ಐ.ಎ.ಎಸ್.) ಸೇರಿದರು. ಅದೇ ವರ್ಷ ವಿದ್ಯಾ ಇಲಾಖೆಯ ಡೆಪ್ಯುಟಿ ಸೆಕ್ರೆಟರಿಯಾಗಿ, ವಾರ್ತಾ ಮತ್ತು ಪ್ರವಾಸೋದ್ಯಮ ನಿರ್ದೇಶಕರಾಗಿ (1962) ಅರ್ಥಖಾತೆಯಲ್ಲಿ ದೆಪ್ಯುಟಿ ಸೆಕ್ರೆಟರಿಯಾಗಿ, ಚಿನ್ನ ನಿಯಂತ್ರಣಾಧಿಕಾರಿಯಾಗಿ (1964), ಮಡಿಕೇರಿಯಲ್ಲಿ (1965) ಹಾಗೂ ಬೆಳಗಾಂವಿಯಲ್ಲಿ (1970) ಜಿಲ್ಲಾಧಿಕಾರಿಯಾಗಿ, ಸಾರಿಗೆ ಖಾತೆಯ ಕಮಿಷನ್‍ರಾಗಿ (1967), ರಾಜ್ಯದ ಲೇಟರ್ ಕಮಿಷನರಾಗಿ ನೇಮಕಗೊಂಡು ನಿವೃತ್ತಿ ಹೊಂದಿದರು (1972-76).

ಇವರು ಕನ್ನಡ, ಸಂಸ್ಕøತ, ಉರ್ದು, ಮರಾಠಿ, ಪರ್ಷಿಯನ್, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ಇವರ ಸಾಹಿತ್ಯ ಕೃಷಿ ವೈವಿಧ್ಯಮಯವಾದುದು. ಕಥೆ, ಕಾದಂಬರಿ, ಕವನ, ನಾಟಕ ಮೊದಲಾದ ಪ್ರಕಾರಗಳಲ್ಲಿ ಇವರ ಬರೆವಣಿಗೆಯಿದೆ. ■ ಜನಪಾತ (1953), ಕರುಣಾ ಶ್ರಾವಣ (1955), ಮಾನಸ ಸರೋವರ (1959), ಮೊದಲು ಮಾನವನಾಗು (1969), ಕಲ್ಲೋಲ ಮಾಲೆ (1968), ಚರಗ (1987), ಹಾಲ್ದೆನೆ (1990), ಮರುಳ ಸಿದ್ಧನ ಕಂತೆ (1991), ವಚನಾರಾಮ (1992) ಇವರ ಪ್ರಮುಖ ಕವನ ಸಂಕಲನಗಳು. ■ ಆತ್ಮಾರ್ಪಣ (1941), ಭಾರತವೀರ (1963), ರಜತರೇಖೆ (1965) ಹಾಗೂ ಭಗ್ನ ನೂಪುರ (1984) ಇವರ ನಾಟಕ ಕೃತಿಗಳು. ■ ಶರಣ ಚರಿತಾಮೃತ (1964), ಬಸವಣ್ಣನವರ ಜೀವನ ಹಾಗೂ ಸಂದೇಶ (1977), ಹರ್ಡೇಕರ್ ಮಂಜಪ್ಪನವರು (1978), ಮಿರ್ಜಾ ಗಾಲಿಬ್ (1979), ಮಹಾದೇವಿ (1982), ಅಲ್ಲಮ ಪ್ರಭು (1989) - ಇವು ಜೀನವ ಚರಿತ್ರೆಗಳು. ■ ಕಥಾ ಮಂಜರಿ (1948), ತುಷಾರ ಹಾರ (1956) ಕಥಾಸಂಕಲನಗಳು. ತ್ರಿಭುವನ ಮಲ್ಲ (1974) ಇವರ ಏಕೈಕ ಕಾದಂಬರಿ. ■ ಮಕ್ಕಳ ಸಾಹಿತ್ಯದಲ್ಲೂ ಇವರು ಅಪಾರ ಕೆಲಸ ಮಾಡಿದ್ದಾರೆ. ತುಪ್ಪಾ ರೊಟ್ಟಿಗೇಗೇಗೇ (1964), ಗಿರ್‍ಗಿರ್ ಗಿಲಗಚ್ಚಿ (1978), ತಿರುಗಲೆ ತಿರುಗಲೆ ತಿರುಗುಯ್ಯಾಲೆ (1981), ನ್ಯಾಯ ನಿರ್ಣಯ (ನಾಟಕ, 1986), ಬಣ್ಣದ ಓಕುಳಿ (1987) ಇವು ಶಿಶು ಸಾಹಿತ್ಯ ಕೃತಿಗಳಾಗಿವೆ. ■ ನಜೀರ್ ಅಕಬರಾದಿ (1978) ಹಾಗೂ ಒಂದು ಊರಿನ ಕತೆ ಇವರ ಅನುವಾದ ಕೃತಿಗಳು. ■ ಕನ್ನಡ ಪದ್ಯ ರತ್ನಾಕರ (1956), ಶ್ರೀಕಾರ (1952), ಮಹಾತ್ಮಾ ಕನಕದಾಸ ಪ್ರಶಸ್ತಿ (1965), ಸರಹದ್ ಗಾಂಧಿ (1968), ಸಿದ್ಧಗಂಗಾಶ್ರೀ (1981), ಬಸವ ಮತ್ತು ದಲಿತೋದಯ (1983), ಬಸವ ದರ್ಶನ (1989) ಮೊದಲಾದ ಸಂಪಾದಿತ ಕೃತಿಗಳನ್ನು ಇತರರೊಡನೆ ಪ್ರಕಟಿಸಿದ್ದಾರೆ.

ಇವರ ಸಾಹಿತ್ಯ ಸೇವೆಗಾಗಿ ಹಲವಾರು ಪುರಸ್ಕಾರಗಳು ಸಂದಾಯವಾಗಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978), ರಾಜ್ಯೋತ್ಸವ ಪ್ರಶಸ್ತಿ ಇವುಗಳಲ್ಲಿ ಮುಖ್ಯವಾದವು. ಇವರ ವಚನೋದ್ಯಾನ ಎಂಬ ಗ್ರಂಥಕ್ಕೆ ಭಾರತೀಯ ಭಾಷಾ ಪರಿಷತ್ತಿನ ಬಿಲ್ವಾರ ಪ್ರಶಸ್ತಿ ಬಂದಿದೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ 1981ರಲ್ಲಿ ಕಾವ್ಯಾನಂದ ಎಂಬ ಗೌರವ ಗ್ರಂಥ ಅರ್ಪಿಸಲಾಯಿತು. ಇವರು ಗುಲ್ಬರ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು (1987). ಕೆಲವು ಕಾಲ ಗುಲ್ಬರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ (1976) ಪದವಿ ನೀಡಿದೆ. ಇವರು 1994 ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ನಿಧನರಾದರು.

        (ಕೆ.ಎಸ್.ಎಮ್.)