ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿವಿಲ್ ಪ್ರಕ್ರಿಯಾ ಸಂಹಿತೆ

ಸಿವಿಲ್ ಪ್ರಕ್ರಿಯಾ ಸಂಹಿತೆ - ಅಪರಾಧಗಳ ವಿಚಾರಣೆಗೆ ಸಂಬಂಧಪಟ್ಟ ಇಲ್ಲವೆ ಕಂದಾಯದ ವಸೂಲಿಗೆ ಸಂಬಂಧಪಟ್ಟ ಕ್ರಮಗಳ ವಿನಾ ಕಾನೂನಿನಿಂದ ಪ್ರಾಪ್ತವಾದ ಬೇರೆ ಯಾವುದೇ ಹಕ್ಕಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಡೆಸುವ ವಿಧಾನವನ್ನು ಹೇಳುವ ಕಾನೂನು (ಸಿವಿಲ್ ಪ್ರೋಸಿಜರ್ ಕೋಡ್). ಈ ಕಾನೂನಲ್ಲಿ ಮೊಕದ್ದಮೆಗಳನ್ನು ನಡೆಸುವ ರೀತಿ, ನ್ಯಾಯಸ್ಥಾನಗಳು ಮತ್ತು ಅವುಗಳ ಅಧಿಕಾರವ್ಯಾಪ್ತಿ, ವಾದಿ, ಪ್ರತಿವಾದಿಗಳ ಸ್ಥಾನಮಾನಗಳು ಹಾಗೂ ವಿಚಾರದಲ್ಲಿ ಅನೇಕ ಅಂಶಗಳು ಅಡಕವಾಗಿ, ವ್ಯವಹಾರಗಳನ್ನು ನಡೆಸುವ ವೇಳೆ ಉದ್ಭವವಾಗಬಹುದಾದ ಅನೇಕ ಸಮಸ್ಯೆಗಳಿಗೆ ಪರಿಹಾರಮಾರ್ಗ ಸೂಚಿಯಿದೆ. 1908ರಲ್ಲಿ ಮಾರ್ಪಾಟುಗಳೊಡನೆ ಜಾರಿಗೆ ಬಂದ ಅನಂತರ ಇಲ್ಲಿಯವರೆಗೆ ಇದು ವ್ಯವಹಾರ ನಿಬಂಧನೆಯ ಉಪಯುಕ್ತ ಸಾಧನವಾಗಿ ಕೆಲಸಮಾಡಿದೆ. 1999 ಮತ್ತು 2002ರಲ್ಲಿ ಕ್ಷಿಪ್ರ ಮತ್ತು ಪರಿಣಾಮಕಾರಿ ನ್ಯಾಯದಾನದ ಉದ್ದೇಶದಿಂದ ಕೆಲವು ತಿದ್ದುಪಡಿಗಳನ್ನು ಸೇರಿಸಲಾಗಿದೆ.

ಈ ಸಂಹಿತೆಯಲ್ಲಿ ಮೊದಲ 158 ಪ್ರಕರಣಗಳಲ್ಲಿ ಸ್ಥೂಲವಾಗಿ ವ್ಯವಹಾರ ಕ್ರಮದ ಅನೇಕ ಅಂಶಗಳ ನಿರೂಪಣೆಯು, ಅನಂತರ ಎರಡನೆಯ ಭಾಗದಲ್ಲಿ ವಿಶದವಾಗಿ ನ್ಯಾಯಸ್ಥಾನಗಳ ಕಾರ್ಯವಿಧಾನವೂ ಹೇಳಿದೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿನ ಶ್ರೇಷ್ಠ ನ್ಯಾಯಸ್ಥಾನಗಳಿಗೆ, ಅಲ್ಲಿನ ಬಳಕೆಗೆ ಅನುಗುಣವಾಗುವಂತೆ ಈ ನಿಬಂಧನೆಗಳನ್ನು ಮಾರ್ಪಡಿಸಲು ಅಥವಾ ಅವಶ್ಯವಿದ್ದಲ್ಲಿ ಹೊಸ ನಿಬಂಧನೆಗಳನ್ನು ನಿರೂಪಿಸಲು ಅಧಿಕಾರ ಕೊಡಲಾಗಿದೆ. ಈ ಕಾರ್ಯ ರೂಲ್‍ಕಮಿಟಿಗಳಿಗೆ ಸೇರಿದೆ. ವಿವಾದ ಪರಿಹಾರಮಾರ್ಗದಲ್ಲಿ ಪ್ರಥಮವಾಗಿ ದಾವಾ ಅರ್ಜಿ ಮುಖ್ಯವಾದುದು. ಈ ಅರ್ಜಿಯಲ್ಲಿ ಸ್ಥೂಲವಾಗಿ ಮತ್ತು ಸಂಕ್ಷೇಪವಾಗಿ, ವಾದಿಗಿರತಕ್ಕ ಹಕ್ಕನ್ನು ಶೃತಪಡಿಸಿ ಅದನ್ನು ಸ್ಥಿರಪಡಿಸುವ ದಾಖಲೆ, ರುಜುವಾತುಗಳನ್ನು ನಮೂದುಮಾಡಿ ವ್ಯಾಜ್ಯ ಕಾರಣವನ್ನು ತೋರಿಸಬೇಕು. ಕೋರ್ಟ್ ಫೀ ಬಗ್ಗೆ ಈ ಕಾನೂನಿನಲ್ಲಿ ಏನೂ ಹೇಳಿಲ್ಲ. ಪ್ರತಿಪಕ್ಷದವರು ಇದಕ್ಕೆದುರಾಗಿ ಲಿಖಿತ ತಕರಾರನ್ನು ದಾಖಲುಮಾಡತಕ್ಕದ್ದು. ಇದರ ವಿಚಾರವಾಗಿ ಕಂಡುಬರುವ ಮುಖ್ಯಾಂಶಗಳೇನೆಂದರೆ ದಾವಾ ಅರ್ಜಿಯಲ್ಲಿನ ಸಕಲ ಅಂಶಗಳ ಸತ್ಯಾಸತ್ಯತೆಯನ್ನು ನಿರ್ದಿಷ್ಟವಾಗಿ ತಿಳಿಸಬೇಕು. ಇಲ್ಲದಿದ್ದರೆ ಒಟ್ಟು ಅಂಶಗಳ ಮೇಲೆ ವಾದಿಯ ಹೇಳಿಕೆಯೇ ಸತ್ಯವೆಂದು ಪರಿಗಣಿಸಲಾಗುವುದು. ಈ ಉಗ್ರಕ್ರಮದ ಔಚಿತ್ಯವೆಂದರೆ, ಹಾಗೆ ಮಾಡದಿದ್ದಲ್ಲಿ ಉಭಯತ್ರರ ಮಧ್ಯೆ ಇರುವ ವಿವಾದಾಂಶಗಳನ್ನು ಕಂಡುಹಿಡಿಯುವುದೇ ಕಷ್ಟವಾಗುತ್ತದೆ. ಕೋರ್ಟಿಗೆ ಬಂದ ಮೇಲಂತೂ ಉಭಯ ಕಕ್ಷಿಗಳು ಅನೇಕ ವಿಧವಾದ ಅಡಚಣೆಗಳನ್ನೊಡ್ಡಲು ನಿಪುಣರಾಗುತ್ತಾರೆ.

ಮೇಲ್ಕಂಡ ಎದುರರ್ಜಿ ಅಥವಾ ಲಿಖಿತ ಹೇಳಿಕೆಯಲ್ಲಿ ಕಾಲಪರಿಮಿತಿ ಮೀರದ ದಾವಾಗಳು ವಿಚಾರಣೆಗೆ ಅನರ್ಹವಾದರೆ ಅಥವಾ ಹಿಂದೆ ಇದೇ ವಿಚಾರದಲ್ಲಿ ಸೂಕ್ತ ನ್ಯಾಯಸ್ಥಾನದಿಂದ ತೀರ್ಪಾಗಿದ್ದರೆ ಅವುಗಳ ಬಾಧಕವನ್ನು ಸೂಚಿಸತಕ್ಕದ್ದು. ಈ ಕಾನೂನಿನ ಪ್ರಕಾರ ಆದಷ್ಟು ಮಟ್ಟಿಗೆ ವ್ಯವಹಾರಗಳನ್ನು ಕಡಿಮೆಮಾಡಿಸುವ ಸಲುವಾಗಿ ಮೊದಲನೆಯ ದಾವಾದಲ್ಲಿಯೇ ಉಭಯ ಪಕ್ಷಗಳೂ ತಮ್ಮಲ್ಲಿನ ಎಲ್ಲ ವಿವಾದಾಂಶಗಳನ್ನೂ ಕೋರ್ಟಿನ ಮುಂದಿರಿಸಿ ತೀರ್ಮಾನವನ್ನು ಪಡೆಯತಕ್ಕದ್ದು, ಹಾಗೆ ಮಾಡದಿದ್ದಲ್ಲಿ ಹಿಂದಿನ ಮೊಕದ್ದಮೆಯಲ್ಲಿ ಒಟ್ಟುಅಂಶಗಳ ಮೇಲೆ ಪುನರ್ವಿವಾದ ನಡೆಸಲು ಸಾಧ್ಯವಿಲ್ಲ. ಹೀಗೆ ಹಿಂದೆ ಆದ ತೀರ್ಮಾನ ಅಥವಾ ಆಗಬಹುದಾಗಿದ್ದ ತೀರ್ಮಾನವನ್ನು ಪೂರ್ವನ್ಯಾಯವೆಂದು ಕರೆಯಲಾಗಿದೆ. ಧರ್ಮ ಶಾಸ್ತ್ರಗಳಲ್ಲಿ ಪ್ರಾಚ್ನ್ಯಾಯವೆಂಬುದು ವ್ಯವಹಾರಗಳ ನಿರೋಧಕ. ಪ್ರತಿವಾದಿಯ ಸ್ಥಾನದಲ್ಲಿರುವವರು ಕೆಲವು ಸಂದರ್ಭಗಳಲ್ಲಿ ಕೇವಲ ರಕ್ಷಣೆಯಲ್ಲದೆ, ತಮಗೆ ವಾದಿಯಿಂದ ಸಲ್ಲಬೇಕಾದ ಮೊಬಲಗೇನಾದರೂ ಇದ್ದರೆ ಅದನ್ನು ವಸೂಲಿಗಾಗಿ ಕೇಳಬಹುದು. ಇದು ಪ್ರಕರಣಕ್ಕೆ ಸಂಬಂಧಿಸಿರುತ್ತದೆ. ಆದರೆ ಹೀಗೆ ಅರಿಕೆಮಾಡಿಕೊಳ್ಳಲು ಅದು ನಿರ್ದಿಷ್ಟ ಮೊಬಲಾಗಿರಬೇಕು ಮತ್ತು ವಸೂಲಿಯ ಕಾಲಪರಿಮಿತಿ ಮೀರಿರಕೂಡದು.

ಪ್ರತಿಯೊಂದು ದಾವಾದಲ್ಲಿಯೂ ಕೇಳುವ ಪರಿಹಾರ ಅನೇಕರಿಗೆ ಅಥವಾ ಅನೇಕರಿಂದ ಸಲ್ಲಬೇಕಾದರೆ ಎಲ್ಲವೂ ಒಟ್ಟಿಗೆ ದಾವೆಯನ್ನು ನಡೆಸಬಹುದು. ಆದರೆ ಮುಖ್ಯವಾಗಿ ವ್ಯಾಜ್ಯಕಾರಣ ಒಂದೇ ಇದ್ದು ವಿಚಾರಣೆ ನಡೆಸುವಾಗ ಒಂದೇ ಘಟನೆ ಅಥವಾ ಪ್ರಸಂಗಕ್ಕೊಳಗಾಗಿರಬೇಕು. ಇದರ ಆಧಾರದ ಮೇಲೆ ಸಾರ್ವಜನಿಕರ ಪರವಾಗಿ ಕೆಲವು ಮಂದಿ ಸೂಕ್ತ ಅನುಮತಿ ಪಡೆದು ಧರ್ಮದರ್ಶಿ ಸಂಸ್ಥೆಗಳು ಮತ್ತು ಇತರ ಕೆಲವು ಬಾಬುಗಳಲ್ಲಿ ವ್ಯಾಜ್ಯ ನಡೆಸಬಹುದು.

ದಾವಾ ಹೂಡುವ ಕ್ರಮ: ಸ್ಥಿರ ಸ್ವತ್ತಿನ ವಿವಾದವಾದರೆ ಅದೇ ಸ್ಥಳಕ್ಕೆ ಸಂಬಂಧಿಸಿದ ನ್ಯಾಯಾಲಯದಲ್ಲಿ ಹೂಡಬೇಕು. ಇದಕ್ಕೆ ವಾದಿಪ್ರತಿವಾದಿಗಳ ವಾಸಸ್ಥಾನವನ್ನು ಪರಿಗಣಿಸಲಾಗದು. ಹಣದ ಲೇಣಿ ದೇಣಿಗಳ ವಹಿವಾಟಾದರೆ ಸಾಲಗಾರನ ಖಾಯಂ ವಾಸಸ್ಥಳ ಮತ್ತು ಇತರೇ ಬಾಬಿನಲ್ಲಿ ಎಲ್ಲಿ ವಾದಿಗೆ ವ್ಯಾಜ್ಯ ಕಾರಣ ಸಂಭವಿಸುವುದೋ ಆ ಸ್ಥಳದ ನ್ಯಾಯಾಲಯಗಳು ಸೂಕ್ತವಾದದ್ದು. ಹೀಗೆ ಅರ್ಹ ನ್ಯಾಯಾಲಯದಲ್ಲಿ ದಾಖಲಾದ ದಾವಾದಲ್ಲಿ ವಾದಿ ಪ್ರತಿವಾದಿಯರ ಲಿಖಿತ ಹೇಳಿಕೆಗಳ ಅನಂತರ ನ್ಯಾಯಾಧೀಶರಿಂದ ವಿವಾದಾಂಶಗಳು ನಿರೂಪಿಸಲ್ಪಟ್ಟು ಅವುಗಳ ಮೇಲೆ ಸಾಕ್ಷಿ ವಿಚಾರಣೆಗೆ ಕಟ್ಟಳೆ ಮುಂದೂಡಲ್ಪಡುತ್ತದೆ. ಈ ಮಧ್ಯದಲ್ಲಿ ಎದುರು ಪಕ್ಷದವರಿಂದ ಬೇಕಾದ ಪತ್ರ ಪುರಾವೆಗಳನ್ನು, ನ್ಯಾಯಸ್ಥಾನದ ಅಪ್ಪಣೆಯಿಂದ ಪಡೆಯಬಹುದು. ವಿವಾದಾಂಶಗಳು ಕೇವಲ ಕಾನೂನಿಗೆ ಸಂಬಂಧಿಸಿದ್ದರೆ ಅಥವಾ ಕೇವಲ ವಕೀಲರ ವಾದ ವಿವಾದಗಳನ್ನು ಕೇಳಿ ತೀರ್ಮಾನ ಕೊಡಬೇಕಾದಾದಲ್ಲಿ ವಿಚಾರಣೆಯೇ ಬೇಕಿಲ್ಲ. ಹೀಗಲ್ಲದಿದ್ದರೆ ವಿಚಾರಣೆಯ ಮುಖ್ಯ ಅಂಗವೆಂದರೆ ಸಾಕ್ಷ್ಯ. ಆದರೆ ಸಾಮಾನ್ಯವಾಗಿ ಕೋರ್ಟಿಗೆ ಸಾಕ್ಷಿಗಳನ್ನು ಕರೆತರುವುದು ಬಹುಪ್ರಯಾಸದ ಕೆಲಸ. ಸಾಲದವನು ಬಿಟ್ಟರೂ ಸಾಕ್ಷಿ ಬಿಡ ಎಂಬ ಗಾದೆ ಮಾತೊಂದಿದೆ. ಸಾಕ್ಷಿಗಳು ಕೋರ್ಟಿನ ಸಮನ್‍ಗಳನ್ನು ಉಪೇಕ್ಷೆಮಾಡಿದಲ್ಲಿ ಒತ್ತಾಯ ತರಲು ದಸ್ತಗಿರಿ, ಸ್ವತ್ತಿನ ಜಫ್ತಿ ಮುಂತಾದ ಮಾರ್ಗಗಳಿರುತ್ತವೆ. ಆದರೆ ಅವುಗಳ ಉಪಯುಕ್ತತೆ ಬಹಳ ಕಡಿಮೆ.

ಸಾಕ್ಷಿಗಳ ವಿಚಾರಣೆ, ಅವರ ಪಾಟೀ ಸವಾಲು, ಇವುಗಳನ್ನು ನಡೆಸುವ ಮಾರ್ಗ ಮೊದಲಾದ ಸಂಗತಿಗಳು ಎವಿಡೆನ್ಸ್ ಆಕ್ಟ್ ನಮೂದಾಗಿದೆ ಅದು ಬಹು ಮಹತ್ತ್ವದ ಕಾನೂನು. ಹೀಗೆ ಸಾಕ್ಷ್ಯ ಸಂಗ್ರಹಣೆಯಾದ ಅನಂತರ ತೀರ್ಮಾನದ ವಾದವಿವಾದಗಳಿಗೆ ಅಪೀಲುಗಳಲ್ಲಿ ಮಾತ್ರ ಮಹತ್ತ್ವದ ಪಾತ್ರ. ನ್ಯಾಯಾಧೀಶರೇ ಸ್ವಹಸ್ತದಿಂದ ಸಾಕ್ಷಿಗಳ ಹೇಳಿಕೆಯೆಲ್ಲವನ್ನೂ ಬರೆದುಕೊಳ್ಳಬೇಕಾಗಿರುವುದರಿಂದ ಅಸಲು ಕೇಸುಗಳಲ್ಲಿ ದೀರ್ಘ ವಾದ ವಿವಾದಗಳಿಗೆ ಸಾಮಾನ್ಯವಾಗಿ ಆಸ್ಪದವಿರುವುದಿಲ್ಲ.

ನ್ಯಾಯಾಧೀಶರ ತೀರ್ಪಿನಲ್ಲಿ ಉಭಯ ಪಕ್ಷದವರ ನಿಲುವು, ಅವರು ಅಳವಡಿಸಿರುವ ಸಾಕ್ಷ್ಯ ಪುರಾವೆಗಳನ್ನು ಒಪ್ಪಲು ಅಥವಾ ಒಪ್ಪದಿರಲು ಕಾರಣಗಳನ್ನು ಸೂಚಿಸಿ ಪ್ರತಿಯೊಂದು ವಿವಾದಾಂಶದ ಮೇಲೂ ತೀರ್ಪನ್ನು ಪ್ರಕಟಿಸಬೇಕು. ಸಣ್ಣ ಮತ್ತು ಚಿಕ್ಕಮೊಕದ್ದಮೆಗಳೆಂದು ಕರೆಯಲ್ಪಡುವ ಮೊಕದ್ದಮೆಗಳಲ್ಲಿ ತೀರ್ಪು ವಿಶದವಾಗಿರಬೇಕಾದ್ದಿಲ್ಲ. ತೀರ್ಪಾದ ಮೇಲೆ ಡಿಕ್ರಿ ಅಥವಾ ಮೊಕದ್ದಮೆಯ ಆಧಾರದ ಮೇಲೆ ಉಭಯ ಪಕ್ಷಗಳನ್ನೂ ಬಂಧಿಸುವ ನಡವಳಿಕೆಯನ್ನು ತಯಾರಿಸಲಾಗುತ್ತದೆ. ಈ ಡಿಕ್ರಿ ಅಥವಾ ಕಟ್ಟಳೆಯ ಮೇಲೆ ಜಾರಿಕ್ರಮ ನಡೆಸಿ, ಹಣ, ಸ್ವತ್ತು ಮುಂತಾದುವನ್ನು ಪಡೆಯಬಹುದು. ಕೆಲವು ಸಣ್ಣ ಮೊಕದ್ದಮೆಗಳ ನಿರ್ವಹಣೆ ಸಂಕ್ಷಿಪ್ತವಾದದ್ದೆಂದು ಪರಿಗಣಿಸಿ ಅವುಗಳಿಂದ ಅಪೀಲು ಮಾಡಲು ಅವಕಾಶ ಕೊಟ್ಟಿರುವುದಿಲ್ಲ.

ಸಾಧಾರಣವಾಗಿ ಪ್ರತಿಯೊಂದು ತೀರ್ಪು ಮತ್ತು ಡಿಕ್ರಿಯಿಂದ ಮೇಲಿನ ನ್ಯಾಯಸ್ಥಾನಕ್ಕೆ ಅಪೀಲು ಹಾಕಿಕೊಳ್ಳಬಹುದು. ಇದು ಒಂದು ನಿರ್ದಿಷ್ಟ ಹಕ್ಕು. ಅಪೀಲಿನಲ್ಲಾದ ತೀರ್ಮಾನದಿಂದ ಮತ್ತೊಂದು ನ್ಯಾಯಸ್ಥಾನಕ್ಕೆ ಅಂದರೆ ಸಾಮಾನ್ಯವಾಗಿ ಪ್ರಾಂತ್ಯದ ಉಚ್ಚನ್ಯಾಯಾಲಯಕ್ಕೆ ಎರಡನೆಯ ಅಪೀಲು ಹಾಕಿಕೊಳ್ಳಬಹುದು. ತೀರ್ಪು ಕಾನೂನಿನ ವಿರುದ್ಧವಾಗಿದ್ದರೆ ಮಾತ್ರ ಅಪೀಲನ್ನು ದಾಖಲ್ಮಾಡಿಕೊಳ್ಳಲಾಗುವುದು. ಹಾಗೆಂದರೆ ಈ ಎರಡನೆಯ ಅಪೀಲಿನಲ್ಲಿ ಕೆಳಕೋರ್ಟಿನವರು ವಾಸ್ತವಾಂಶಗಳ ವಿಚಾರ ಮಾಡಿದ ತೀರ್ಮಾನವನ್ನು ಬದಲಾಯಿಸಲಾಗುವುದಿಲ್ಲ.

ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನಿಂದ ಭಾರತದ ಸರ್ವೋಚ್ಚನ್ಯಾಯಸ್ಥಾನಕ್ಕೆ ಅಪೀಲು ಹಾಕಿಕೊಳ್ಳಲು ಮೊಕದ್ದಮೆಯ ವಿಷಯವು ಸಾರ್ವಜನಿಕ ಮಹತ್ತ್ವವುಳ್ಳ ಪ್ರಮುಖ ಕಾನೂನಿನ ಪ್ರಶ್ನೆಯನ್ನು ಒಳಗೊಂಡಿದೆಯೆಂದು ಆ ಮೊಕದ್ದಮೆ ಸುಪ್ರೀಮ್ ಕೋರ್ಟಿಗೆ ಅಪೀಲು ಮಾಡಿಕೊಳ್ಳಲು ಯೋಗ್ಯವಾದದ್ದೆಂದು ರಾಜ್ಯದ ಶ್ರೇಷ್ಠ ನ್ಯಾಯಾಲಯ ಅಪ್ಪಣೆ ಕೊಡಬೇಕು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ರಾಜ್ಯದ ಉಚ್ಚನ್ಯಾಯಾಲಯಗಳೇ ಸರ್ವೋಚ್ಚನ್ಯಾಯಾಲಯದ ಅಪೀಲಿಗಾಗಿ ಪೂರ್ವ ಸಲಕರಣೆಗಳನ್ನು ಒದಗಿಸಿ ಅಂದರೆ, ಪ್ರತಿವಾದಿಯ ಖರ್ಚಿಗಾಗಿ ಜಾಮೀನು ಪಡೆಯುವುದು, ದಾವೆಯಿಂದ ವಿಚಾರಣೆಯವರೆಗಿನ ಎಲ್ಲ ದಾಖಲೆಗಳನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿಸಿ ಮುದ್ರಣ ಮಾಡಿಸುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸಬೇಕು. ಹೀಗೆ ಎಲ್ಲವೂ ಸಿದ್ಧವಾದ ಅನಂತರ ಅಪೀಲು ದಾಖಲಾಗಿದೆಯೆಂದು ಪರಿಗಣಿಸಿ ಸರ್ವ ದಾಖಲೆಗಳನ್ನೂ ಸರ್ವೋಚ್ಚ ನ್ಯಾಯಾಲಯಕ್ಕೆ ಕಳುಹಿಸಲಾಗುವುದು. ಈ ರೀತಿ ಅನುಮತಿ ಸಿಕ್ಕದಿದ್ದಲ್ಲಿ ಕಕ್ಷಿಗಾರರು ಸರ್ವೋಚ್ಚನ್ಯಾಯಾಲಯದಲ್ಲಿಯೇ ತಮ್ಮ ಮೊಕದ್ದಮೆ ಅವಗಾಹನೆಗೆ ಅರ್ಹವೆಂದು ವಿಶೇಷ ಅಪ್ಪಣೆ ಬೇಡಿ ಅರ್ಜಿ ಹಾಕಿಕೊಳ್ಳಬಹುದು.

ನಡೆವಳಿಕೆಗಳಲ್ಲಿ ರಿಟ್ ಅರ್ಜಿ ಅಥವಾ ಅದರ ಮೇಲಿನ ಅಪೀಲುಗಳು ಗಣನೆಗೆ ಬರುವುದಿಲ್ಲ. ಏಕೆಂದರೆ ಇವು ಸಿವಿಲ್ ಪ್ರೊಸೀಜರ್ ಕೋಡಿನ ವ್ಯಾಪ್ತಿಗೆ ಒಳಪಡದೆ ಉಚ್ಚನ್ಯಾಯಾಲಯಗಳ ಸ್ವಾಮ್ಯಕ್ಕೆ ಮಾತ್ರ ಒಳಪಟ್ಟಿರುತ್ತವೆ.

ಕೆಲವು ಮೊಕದ್ದಮೆಗಳಿಂದ ಅಥವಾ ಅವುಗಳಲ್ಲಿ ಕೊಟ್ಟ ಕೆಲವು ನಿರ್ದೇಶನಗಳಿಂದ ಅಪೀಲಿಗೆ ಅವಕಾಶವಿರುವುದಿಲ್ಲ. ಆದರೆ ಕೊಟ್ಟ ತೀರ್ಪನ್ನು ಬದಲಾಯಿಸಬೇಕಾದಷ್ಟು ಮಹತ್ತರವಾದ ಸಾಕ್ಷ್ಯ ಅನಂತರ ಕಂಡುಬಂದರೆ ಅಥವಾ ಗುರುತರ ತಪ್ಪು ಎದ್ದುಕಂಡಬಂದಲ್ಲಿ ಅದೇ ನ್ಯಾಯಾಲಯ ಪುನರ್‍ವಿಮರ್ಶಿಸಲು ಅವಕಾಶವಿದೆ. ಪ್ರಾಂತ್ಯದ ಉಚ್ಚನ್ಯಾಯಾಲಯಗಳು ಯಾವ ಕೆಳಕೋರ್ಟಿನಿಂದ ಬೇಕಾದರೂ ಮೊಕದ್ದಮೆಗಳನ್ನು ತರಿಸಿ ಅವುಗಳ ತೀರ್ಮಾನ ನ್ಯಾಯಬದ್ಧವಾಗಿದೆಯೇ ಮತ್ತು ಅಧಿಕಾರವ್ಯಾಪ್ತಿಗೊಳಪಟ್ಟಿರುವಂತಹುದೇ ಎಂಬುದನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಬಹುದು.

ಅಪೀಲುಗಳಲ್ಲಿ ಉಭಯತ್ರರ ವಾದವಿವಾದಗಳನ್ನು ಮಾತ್ರ ಕೇಳಿ ಮತ್ತು ಕೆಳ ಕೋರ್ಟಿನಲ್ಲಿ ಹಾಜರಾಗಿದ್ದ ಸಾಕ್ಷ್ಯವನ್ನು ಪರಿಶೀಲಿಸಿ ಮೊಕದ್ದಮೆ ತೀರ್ಮಾನವಾಗುವುದೇ ಹೊರತು ಹೊಸದಾಗಿ ಸಾಕ್ಷ್ಯ ಕೊಡಲು ಸಾಮಾನ್ಯವಾಗಿ ಅವಕಾಶ ಇರುವುದಿಲ್ಲ. ಕೆಳಕೋರ್ಟಿನ ನ್ಯಾಯಾಧೀಶರು ನಿಷ್ಕಾರಣವಾಗಿ ಸಾಕ್ಷ್ಯವನ್ನು ತಳ್ಳಿಹಾಕಿದ್ದರೆ ಅಂತಹ ಪುರಾವೆಗಳು ಮೊಕದ್ದಮೆಯ ತೀರ್ಮಾನಕ್ಕೆ ಅತ್ಯಗತ್ಯವೆಂದು ಕಂಡುಬಂದಲ್ಲಿ ಮಾತ್ರ ಅಪೀಲುಗಳಲ್ಲಿ ಹೊಸದಾಗಿ ಸಾಕ್ಷ್ಯ ಸ್ವೀಕರಿಸಬಹುದು ಅಥವಾ ಅದಕ್ಕಾಗಿಯೇ ಪುನರ್‍ವಿಚಾರಣೆಗಾಗಿ ಕೆಳ ಕೋರ್ಟಿಗೆ ರವಾನಿಸಬಹುದು. ಅಪೀಲುಗಳನ್ನು ಸ್ವೀಕರಿಸುವಾಗ ಅಥವಾ ಅನಂತರ ಕೆಳಕೋರ್ಟಿನ ಹುಕುಂ ಬಗ್ಗೆ ತಡೆಯಾಜ್ಞೆನೀಡಿ ಜಾರಿಕ್ರಮ ನಿಲ್ಲಿಸಬಹುದು. ಈ ರೀತಿ ಅಖೈರು ತೀರ್ಪಿನ ಅನಂತರ ಜಾರಿಕ್ರಮ ನಡೆಸಲು ಯಾವ ನಿರ್ಬಂಧಗಳೂ ಇರುವುದಿಲ್ಲ. ಭೋಗ್ಯ ಹಣದ ಲೆಕ್ಕಾಚಾರ ಮುಂತಾದ ಕೆಲವು ವ್ಯವಹಾರಗಳಲ್ಲಿ ಹಂಗಾಮಿ ಡಿಕ್ರಿಯನ್ನು ಮಾಡಿ ಅನಂತರ ಲೆಕ್ಕಗಳ ತಾಳೆನೋಡಿ ಅಥವಾ ಅಗತ್ಯವಿದ್ದಲ್ಲಿ ಆ ಕಾರ್ಯಕ್ಕೆ ಮತ್ತೊಬ್ಬರನ್ನು ನಿಯಮಿಸಿ ಅನಂತರ (ಅಖೈರು) ಅಂತಿಮ ಡಿಕ್ರಿ ತಯಾರಿಸಲ್ಪಡುತ್ತದೆ. ಸ್ವತ್ತಿನ ವಿಭಾಗದ ದಾವಾಗಳೂ ಈ ಗುಂಪಿಗೆ ಸೇರುತ್ತವೆ. ಡಿಕ್ರಿಪಡೆದ ಅನಂತರ ದೇಶಾದ್ಯಂತ ಎಲ್ಲಿಬೇಕಾದರೂ ವರ್ಗಮಾಡಿಸಿಕೊಂಡು ಜಾರಿ ನಡೆಸಬಹುದು. ವಾದಿಗೆ ಹಣ ವಸೂಲಾಗಬೇಕಾದರೆ ಪ್ರತಿವಾದಿಯ ಚರ, ಸ್ಥಿರ ಆಸ್ತಿಯನ್ನು ಜಪ್ತಿಮಾಡಿಸಿ ಹರಾಜಿಗೆ ತರಬಹುದು. ಆದರೆ ಇಲ್ಲಿ ಅನೇಕ ತೊಂದರೆಗಳಿವೆ. ಸಾಮಾನ್ಯವಾಗಿ ಜೀವನಕ್ಕೆ ಅತ್ಯಗತ್ಯವಾದ ಮನೆ, ಸಾಮಾನುಗಳು ಮತ್ತು ಕಸುಬು ನಡೆಸುವ ಆಯುಧ, ಉಪಕರಣಗಳನ್ನು ಮುಟ್ಟಲಾಗದು. ನಿವೃತ್ತಿವೇತನ, ಬೋನಸ್, ಪ್ರಾವಿಡೆಂಡ್‍ಫಂಡ್ ಮುಂತಾದ ಕಡ್ಡಾಯವಾಗಿ ಕಟ್ಟತಕ್ಕ ಧನವನ್ನು ಜಪ್ತಿಮಾಡಲಾಗುವುದಿಲ್ಲ. ಸಂಬಳ ಬರುವ ನೌಕರರ ವೇತನ ತಿಂಗಳಿಗೆ ಒಂದು ಸಾವಿರ ರೂಪಾಯಿಗಳಿಗೆ ಮೇಲ್ಪಟ್ಟಿದ್ದರೆ ಮಾತ್ರ ಆ ಮೇಲ್ಪಟ್ಟ ಹಣದಲ್ಲಿ ಮೂರನೆಯ ಎರಡಂಶ ಭಾಗವನ್ನು ಪ್ರತಿತಿಂಗಳಲ್ಲೂ ಜಫ್ತಿಮಾಡಿಸಿ ಪಡೆಯಬಹುದು. ಜೀವನಾಂಶದ ಡಿಕ್ರಿಗಳಿಗೆ ಈ ನಿರ್ಬಂಧ ತಗಲುವುದಿಲ್ಲ.

ಇನ್ನು ಉಳಿದ ವಿಧಾನವೆಂದರೆ ಸಾಲಗಾರನನ್ನು ದಸ್ತಗಿರಿ ಮಾಡಿಸಿ ಹಣವಸೂಲಾಗುವವರೆಗೂ ಸಿವಿಲ್ ಜೈಲಿಗೆ ಕಳುಹಿಸುವ ಬೆದರಿಕೆ ಹಾಕುವುದು. ಆರು ತಿಂಗಳಿನ ಜೈಲಿನ ವಾಸಕ್ಕೂ ಹಣ ವಸೂಲಾಗದಿದ್ದರೆ ಮತ್ತೇನೂ ಮಾಡಲಾಗದು. ಸಾಲಗಾರನಿಗೆ ಮನೆ ಅಥವಾ ಜಮೀನಿದ್ದರೆ ಅವನ್ನು ಜಫ್ತಿಮಾಡಿಸಿ ಹರಾಜಿಗೆ ತರಬಹುದು. ಈ ವಿಭಾಗದಲ್ಲಿಯೇ ಈ ಕಾನೂನಿನಲ್ಲಿರುವ ಕ್ರಮಗಳು ಅಸಮರ್ಪಕವೆಂದು ಅನೇಕ ಉಚ್ಚನ್ಯಾಯಾಲಯಗಳು ಅಭಿಪ್ರಾಯ ಪಟ್ಟಿವೆ. ಅನೇಕ ವರ್ಷ ಕ್ರಮ ನಡೆಸಿದ ಅನಂತರವೂ ಶೀಘ್ರವಾಗಿ ಡಿಕ್ರಿಹಣ ವಸೂಲಾಗದೆ ಇಲ್ಲೂ ಅನೇಕ ವಿನಾಯಿತಿಗಳು ಏರ್ಪಟ್ಟಿವೆ. ಆದರೆ ಇವನ್ನು ಆತುರವಾಗಿ ಮಾರ್ಪಡಿಸಲಾಗುವುದಿಲ್ಲ. ಏಕೆಂದರೆ ಮೂರನೆಯವರ ಹಕ್ಕುಬಾಧ್ಯತೆಗಳಿಗೆ ತೊಂದರೆಯಾಗದಂತೆ ಜಾರಿಗೆ ಸಂಬಂಧಿಸಿದ ಸ್ವತ್ತು ತಮ್ಮದೆಂದು ಶ್ರುತಪಡಿಸಲು ಅವರು ಮುಂದೆ ಬಂದಲ್ಲಿ ಆರೀತಿ ಅವಕಾಶ ಕೊಡಬೇಕಾಗುವುದು. ಈ ವಿಷಯಗಳೆಲ್ಲಾ ಆರ್ಡರ್ 21 ಎಂಬ ನಿಬಂಧನೆಯಲ್ಲಿ 103 ಮತ್ತು ಕೆಲವು ಪ್ರಾಂತ್ಯಗಳಲ್ಲಿ ಇನ್ನೂ ಹೆಚ್ಚಿನ ನಿಬಂಧನೆಗೆ ಒಳಪಟ್ಟಿರುತ್ತವೆ.

ಈಬಗ್ಗೆ ಎಲ್ಲ ನ್ಯಾಯಾಲಯಗಳಿಗೂ ಇರುವ ವಿಶೇಷ ಅಧಿಕಾರಗಳನ್ನು ಪರಿಶೀಲಿಸಬಹುದು. ಮುನ್ಸೀಫರಿಂದ ಉಚ್ಚನ್ಯಾಯಾಲಯದ ನ್ಯಾಯಾಧೀಶರವರೆಗೂ ನ್ಯಾಯಾಧಿಪತಿಯಾಗಿ ವರ್ತಿಸುವ ಸಂಬಂಧದಲ್ಲಿ ಯಾವ ಅಂತರವೂ ಇರುವುದಿಲ್ಲ. ತಮ್ಮ ಆಜ್ಞೆಗಳನ್ನು ಕಾರ್ಯರೂಪಕ್ಕೆ ತರಲು ಅತ್ಯಂತ ಹಿರಿಯ ಅಧಿಕಾರ ಇವರ ಕೈಯಲ್ಲಿದೆ. ನ್ಯಾಯಸ್ಥಾನದ ನಿಂದೆ ಅಥವಾ ಅವಹೇಳನ ಮತ್ತು ಅಸಡ್ಡೆ ಮಾಡುವವರನ್ನು ಶಿಕ್ಷಿಸಬಹುದು.

ನ್ಯಾಯಾಲಯದಲ್ಲಿ ಪ್ರತಿಯೊಂದು ಸಂದರ್ಭದಲ್ಲಿಯೂ ಪ್ರತಿವಾದಿಗೆ ತನ್ನ ಸಬೂಬು ತೋರಿಸಲು ಅವಕಾಶಕೊಟ್ಟ ಅನಂತರವೇ ಆಜ್ಞೆಗಳನ್ನು ನೀಡಲಾಗುವುದು. ಹೀಗಾಗುವುದರಿಂದ ಅನೇಕ ವೇಳೆ ನ್ಯಾಯಾಲಯದ ಆಶಯ ಸಫಲವಾಗದೆ ಹೋಗಬಹುದು. ಸಾಲಗಾರ ಮೋಸಮಾಡಿ ಪರಸ್ಥಳಕ್ಕೆ ಓಡಿಹೋಗುವವನಾಗಿದ್ದರೆ ಸಿವಿಲ್ ಕೋರ್ಟ್‍ಗಳ ಸಮನ್ಸ್‍ಗಳು ಉಪಯುಕ್ತವಾಗಲಾರವು. ಆ ಸಂದರ್ಭದಲ್ಲಿ ವಾದಿ ಪ್ರಮಾಣ ಪತ್ರಿಕೆಯಲ್ಲಿ ಈ ವಿಚಾರವನ್ನು ನಮೂದಿಸಿದರೆ ಆತನ ಜವಾಬ್ದಾರಿಯ ಮೇಲೆ ದಾವಾ ಹಾಕಿದ ಕೂಡಲೇ ಪ್ರತಿವಾದಿಯ ಚರ, ಸ್ಥಿರ ಆಸ್ತಿಯ ಜಫ್ತಿ ಅಥವಾ ಪ್ರತಿವಾದಿ ತಲೆಮರೆಸಿಕೊಳ್ಳುವ ಸಂದರ್ಭದಲ್ಲಿ ಅವನ ದಸ್ತಗಿರಿಗೆ ಆದೇಶ ನೀಡಬಹುದು. ಆಗ ಪ್ರತಿವಾದಿಗೆ ತನ್ನ ಹಾಜರಾತಿಗೆ ಅಥವಾ ದಾವಾ ಮೊಬಲಗು ತೀರುವಳಿಗೆ ಸೂಕ್ತ ಜಾಮೀನು ಕೊಡಬೇಕಾಗುವುದು. ಜಫ್ತಿಯ ಅನಂತರ ಸ್ವತ್ತನ್ನು ವಿಕ್ರಯ ಮಾಡಿದರೆ ಅದು ಊರ್ಜಿತವಾಗುವುದಿಲ್ಲ. ಈ ರೀತಿ ದಾವಾದಲ್ಲಿಯೇ ಅಥವಾ ಡಿಕ್ರಿ ಆದ ಅನಂತರ ಈ ಜಫ್ತಿ ಮಾಡಿದ ಸ್ವತ್ತಿನ ಮೇಲಿನ ಈ ನಿರ್ಬಂಧ ಉಪನೋಂದಣಾಧಿಕಾರಿಯ ಕಚೇರಿಯಲ್ಲಿಯೂ ತಿಳಿಯುವುದಿಲ್ಲ. ಆದ್ದರಿಂದ ಕೇವಲ ಉಪನೋಂದಣಾಧಿಕಾರಿಯ ಕಚೇರಿಯಲ್ಲಿ ಮಾತ್ರ ವಿಚಾರಿಸಿ ಸ್ವತ್ತನ್ನು ಖರೀದಿಗೆ ಕೊಂಡರೆ ಸಾಕಾಗಲಾರದು.

ಇನ್ನೊಂದು ಸಂದರ್ಭವನ್ನು ಊಹಿಸಬಹುದು. ಒಂದು ಜಮೀನಿನಲ್ಲಿ ಬೇರೆಯವರು ಒತ್ತುವರಿ ಅಥವಾ ಆಕ್ರಮಣ ಮಾಡುವುದಾಗಲೀ, ಕಟ್ಟಡಕಟ್ಟುವುದಾಗಲೀ ಮಾಡುವ ಸಂದರ್ಭವಿದ್ದರೆ ನಿರೋಧಕ ಆಜ್ಞೆ ಹೊಂದಬಹುದು. ಇದರಂತೆ ಪ್ರತಿವಾದಿಯ ನಡೆವಳಿಕೆಯಿಂದ ತೊಂದರೆ ಸಂಭವಿಸಬಹುದಾದಲ್ಲಿ ಅಂತಹ ಕಾರ್ಯವನ್ನು ಕೂಡಲೇ ಕಡ್ಡಾಯವಾಗಿ ವಿರೋಧಿಸಿ ಸಕಾರಣ ತೋರಿಸಬೇಕೆಂಬ ಅದೇಶ ನೀಡಬಹುದು. ಈ ರೀತಿ ಆಜ್ಞೆಗಳನ್ನು ಪ್ರತಿವಾದಿಗೆ ತಿಳಿಯದಂತೆ ಪಡೆಯುವುದು ಕಷ್ಟವಲ್ಲ. ಆದರೆ ವಿನಾಕಾರಣ ಪಡೆದರೆ ಪ್ರತಿವಾದಿಯ ಕಷ್ಟನಷ್ಟಗಳಿಗೆ ಗುರಿಯಾಗಬೇಕಾಗುತ್ತದೆ.

ಕೆಲವು ವೇಳೆ ವಿವಾದಾಸ್ಪದ ಸ್ವತ್ತಿನ ಬಗ್ಗೆ ಸಕಾರಣ ಕಂಡುಬಂದರೆ ಒಬ್ಬರ ಸ್ವಾಧೀನ ತಪ್ಪಿಸಿ, ಬೇರೊಬ್ಬ ಮೇಲ್ವಿಚಾರಕನನ್ನು ನೇಮಕ ಮಾಡುವ ಅಧಿಕಾರ ನ್ಯಾಯಾಲಯಕ್ಕಿದೆ. ಸೂಕ್ತವೆಂದು ಕಂಡುಬಂದಲ್ಲಿ ಪ್ರತಿಯೊಂದು ನ್ಯಾಯಾಲಯವೂ ತನ್ನ ಕಾರ್ಯ ವಿಧಾನದಲ್ಲಿ ಆವಶ್ಯಕವೆನಿಸುವ ಆಜ್ಞೆ ನೀಡುವ ಅಧಿಕಾರವನ್ನು 151ನೆಯ ಸೆಕ್ಷನ್ ಪ್ರಕಾರ ಕಾಯ್ದಿರಿಸಿದೆ.

ಇಲ್ಲಿಯವರೆಗೂ ವಿವರಿಸಿರುವ ಕ್ರಮದ ಪ್ರತಿಯೊಂದು ಹಂತದಲ್ಲಿಯೂ ಕೋರ್ಟಿನ ಫೀ ಕೊಡಬೇಕು. ದಾವಾ ಅರ್ಜಿಗಳು ಮತ್ತು ತಿಳಿವಳಿಕೆ ನೋಟೀಸುಗಳಿಗೂ ಹಣ ಕಟ್ಟಬೇಕು. ಅಪೀಲುಗಳಲ್ಲಿ ಪುನಃ ಅಷ್ಟೇ ಹಣ ಕಟ್ಟಬೇಕು, ಆದರೆ ನಿರ್ಗತಿಕರಿಗಾಗಿ ಕೆಲವು ನಿಬಂಧನೆಗಳಿವೆ. ಸ್ಥೂಲವಾಗಿ ನೋಡಿದಲ್ಲಿ ಸತ್ವ ಅಥವಾ ಸತ್ಯವಿದ್ದಂತೆ ಕಾಣುವ ಮೊಕದ್ದಮೆಗಳನ್ನು ಕೋರ್ಟ್ ಫೀ ಇಲ್ಲದೆ ದಾಖಲುಮಾಡಿಕೊಳ್ಳಬಹುದು. ಅನಂತರ ಪ್ರತಿವಾದಿಗಳು, ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಅಂತಹ ದಾವಾ ತರುವವರ ವಿಚಾರ ಪರಿಶೀಲಿಸಿ ಸಂಬಂಧಿಸಿದ ರುಜುವಾತು ಸಿದ್ಧಪಡಿಸುತ್ತಾರೆ. ಈ ರೀತಿ ಪಾಪರ್ ದಾವಾ ನಡೆಸಿದರೆ ಕೋರ್ಟ್ ಫೀ ವಿನಾಯಿತಿ ಕೇವಲ ಹಂಗಾಮಿ ಮಾತ.್ರ ದಾವಾ ಊರ್ಜಿತವಾಗಲೀ ಅಥವಾ ಆಗದಿರಲಿ ಕಡೆಯಲ್ಲಿ ಹಣವನ್ನು ಕಟ್ಟಲೇಬೇಕು. ಆದರೆ ಕಾರಣ ತೋರಿದರೆ ಪ್ರತಿವಾದಿಯಿಂದ ಕೋರ್ಟ್ ಫೀ ವಸೂಲುಮಾಡಿಸಲು ಆದೇಶ ನೀಡಬಹುದು.

ಈ ತರಹ ಮೊಕದ್ದಮೆಗಳಲ್ಲಿ ಅಪೀಲು ಹೋಗಲು ಒಂದು ನಿರ್ಬಂಧವಿದೆ. ನಿರ್ಗತಿಕರೆಂದು ಅಪೀಲು ಮಾಡ ಬಯಸುವವರು, ಕೆಳಕೋರ್ಟಿನ ತೀರ್ಮಾನ ಕಾನೂನಿಗೆ ಸರಿಯಲ್ಲವೆಂದಾಗಲೀ ಅಥವಾ ದೋಷಯುಕ್ತವಾದದ್ದೆಂದಾಗಲೀ ತೋರಿಸಿದರೆ ಮಾತ್ರ ಅಪೀಲು ದಾಖಲೆಮಾಡಿಕೊಳ್ಳಲಾಗುವುದು.

ಎಲ್ಲ ಮೊಕದ್ದಮೆಗಳಲ್ಲಿಯೂ ಕಕ್ಷಿಗಾರರ ಅಥವಾ ಅವರ ವಕೀಲರ ಹಾಜರಿ ಅತ್ಯಗತ್ಯ. ಇಲ್ಲದಿದ್ದರೆ ಮೊಕದ್ದಮೆ ಏಕಪಕ್ಷೀಯವಾಗಿ ತೀರ್ಮಾನವಾಗುತ್ತದೆ. ಭಾರತದ ರಾಜ್ಯಾಂಗದ ರೀತ್ಯಾ ಕೆಲವು ಉನ್ನತ ಅಧಿಕಾರ ಪಡೆದ ಕೆಲಮಂದಿಗೆ ಖುದ್ದು ಹಾಜರಾಗದಿರಲು ವಿನಾಯಿತಿ ಇರುತ್ತದೆ. ಈ ರೀತಿ ಸಿವಿಲ್ ಪ್ರೊಸೀಜರ್ ಕೋಡ್ ನಿಬಂಧನೆಯಲ್ಲಿ ಅತ್ಯಂತ ವಿವರವಾಗಿ ಪ್ರತಿಯೊಬ್ಬನಿಗೂ ಸರ್ಕಾರದ ಮೇಲೆ ಅಥವಾ ಸಂಸ್ಥೆಗಳ ಮೇಲೆ ಅಥವಾ ಮತ್ತೊಬ್ಬ ನಾಗರಿಕನ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಲು ಮಾರ್ಗದರ್ಶನವಾಗಿದೆ. ನ್ಯಾಯಸ್ಥಾನಗಳಿಗೆ ತಮ್ಮದೇ ಆದ ಶ್ರೇಷ್ಠತ್ವವನ್ನು ನೀಡುತ್ತದೆ. ರಾಜ್ಯ ಧರ್ಮದಲ್ಲಿ ಸರ್ಕಾರವೂ ಕಾನೂನಿಗೆ ತಲೆಬಾಗಿ ನಡೆಯಬೇಕು. ಕಾನೂನಿನಲ್ಲಿ ಸರ್ವರ ಹಕ್ಕುಬಾಧ್ಯತೆಗಳ ಪ್ರತಿಪಾದನೆಯೊಂದೇ ಅಲ್ಲದೆ ಅವುಗಳ ರಕ್ಷಣಾ ಮಾರ್ಗವೂ ಮುಖ್ಯವಾದುದು. ಅವುಗಳನ್ನು ಊರ್ಜಿತಪಡಿಸಿಕೊಳ್ಳುವ ವಿಧಾನ ವಿವರವಾಗಿ ನಿರೂಪಣೆಯಾಗಿದ್ದರೆ ತರತಮಕ್ಕೆ ಅವಕಾಶವಿಲ್ಲದೆ ಪ್ರಜಾತಂತ್ರ ಸುಭದ್ರವಾಗುತ್ತದೆ. ಇದಕ್ಕೆ ಸಿವಿಲ್ ಪ್ರೊಸೀಜರ್ ಕೋಡ್ ದಿಕ್ಸೂಚಿ ಯಾಗಿರುತ್ತದೆ. ಭಾರತದ ಕಾನೂನು ಆಯೋಗ ಸಿವಿಲ್ ವಿವಾದಗಳ ಶೀಘ್ರವಿಲೇವಾರಿಗಾಗಿ, ಬದಲೀ ವಿವಾದ ಪರಿಹಾರ ಪದ್ಧತಿಗಳ ಸೇರ್ಪಡೆಗಾಗಿ ಮತ್ತು ನವೀನ ಸಂಪರ್ಕ ಪದ್ಧತಿಯನ್ನು ಅಳವಡಿಸುವ ಉದ್ದೇಶಕ್ಕಾಗಿ ಸಿವಿಲ್ ಪ್ರಕ್ರಿಯಾ ಸಂಹಿತೆಗೆ ವ್ಯಾಪಕ ತಿದ್ದುಪಡಿಗಳನ್ನು ಶಿಫಾರಸ್ಸು ಮಾಡಿತು. 1999 ಮತ್ತು 2002ರಲ್ಲಿ ಮಾಡಿದ ತಿದ್ದುಪಡಿಗಳ ಮೂಲಕ ಸಂಸತ್ತು ಈ ಅಂಶಗಳನ್ನು ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಅಳವಡಿಸಿದೆ. ಶೀಘ್ರ ವಿಲೇವಾರಿಗಾಗಿ 1999ರಲ್ಲಿ ಹಾಕಲಾದ ಕೆಲವು ಕಠಿಣ ಕ್ರಮಗಳು ದೇಶವ್ಯಾಪಿ ವಕೀಲರ ಪ್ರತಿಭಟನೆಗೆ ಈಡಾದವು. ಈ ಕ್ರಮಗಳನ್ನು ಸ್ವಲ್ಪಮಟ್ಟಿಗೆ ತಿಳಿಗೊಳಿಸಿ 2002ರಲ್ಲಿ ತಿದ್ದುಪಡಿ ಮಾಡಲಾಯಿತು.

ಈ ತಿದ್ದುಪಡಿಗಳ ಪರಿಣಾಮವಾಗಿ ದಾವಾ ವ್ಯವಹರಣೆಗೆ ಕಟ್ಟುನಿಟ್ಟಿನ ಕಾಲಮಿತಿ ಹಾಕಲಾಗಿದೆ. ಪ್ರತಿವಾದಿ ಸಮನ್ಸ್ ಪಡೆದ 30 ದಿನಗಳೊಳಗೆ ತನ್ನ ಲಿಖಿತ ಹೇಳಿಕೆ (ಎದುರರ್ಜಿ)ಯನ್ನು ಕೊಡತಕ್ಕದ್ದು. ವಿಶೇಷ ಕಾರಣಗಳಿಗಾಗಿ ನ್ಯಾಯಾಲಯ ಅನುಮತಿಯಿತ್ತಲ್ಲಿ 90 ದಿನಗಳ ಅವಧಿ ಮೀರದಂತೆ ಲಿಖಿತ ಹೇಳಿಕೆ ನೀಡಬಹುದು. ಅವನು ಆಧರಿಸುವ ದಾಖಲೆ ಪತ್ರಗಳನ್ನು ಲಿಖಿತ ಹೇಳಿಕೆಯೊಂದಿಗೆ ಒಪ್ಪಿಸಬೇಕು. ಅನಂತರ ಒಪ್ಪಿಸಿದ ದಾಖಲೆ ಪತ್ರವನ್ನು ನ್ಯಾಯಾಲಯ ವಿಶೇಷ ಕಾರಣಕ್ಕಾಗಿ ನೀಡುವ ಅನುಮತಿಯಿದ್ದಲ್ಲಿ ಮಾತ್ರ ಸಲ್ಲಿಸಬಹುದು. ಕಕ್ಷಿದಾರರ ಮೂಲ ಸಾಕ್ಷ್ಯ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಅಫಿದಾವಿತ್ ಮೂಲಕ ಸಲ್ಲಿಸತಕ್ಕದ್ದು. ಅಡ್ಡ ಪಾಟೀಸವಾಲು ಮತ್ತು ಮರುಸವಾಲುಗಳನ್ನು ನ್ಯಾಯಾಲಯ ಅಥವಾ ನ್ಯಾಯಾಲಯ ನೇಮಿಸುವ ಆಯೋಗ ಜರುಗಿಸತಕ್ಕದ್ದು. ಪ್ರತಿವಾದಿಗಳಿಗೆ ಸಮನ್ಸ್‍ಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ವಾದಿ ಅಥವಾ ಅವನ ಕಡೆಯವರು ನೋಂದಾಯಿತ ಅಂಚೆ, ಕೊರಿಯರ್ ಸೇವೆ, ಫ್ಯಾಕ್ಸ್ ಸಂದೇಶ, ಈಮೇಲ್ ಸೇವೆಗಳ ಮೂಲಕ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. 25,000 ರೂಪಾಯಿಗಿಂತ ಕಡಿಮೆ ಮೊಬಲಗಿನ ವಿಷಯವಿರುವ ವಿವಾದಗಳ ಸಂದರ್ಭದಲ್ಲಿ ಎರಡನೆಯ ಅಪೀಲಿನ ಅವಕಾಶ ನಿರಾಕರಿಸಲಾಗಿದೆ. ಉಚ್ಚನ್ಯಾಯಾಲಯದ ಏಕ ಸದಸ್ಯ ಪೀಠದ ನಿರ್ಣಯದ ಮೇಲೆ ಮೇಲ್ಮನವಿ ಅವಕಾಶವನ್ನೂ ತೆಗೆದು ಹಾಕಲಾಗಿದೆ. ದಾವಾ ವಿಚಾರಣೆಯನ್ನು ಮುಂದೂಡುವುದನ್ನು ನಿಯಂತ್ರಿಸಲಾಗಿದೆ. ವಿವಾದದ ಪ್ರಶ್ನೆಗಳನ್ನು ರೂಪಿಸುವ ಮೊದಲು ಮೂಲ ದಾಖಲೆಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನೊಂದು ಮಹತ್ತ್ವದ ಬೆಳೆವಣಿಗೆಯೇನೆಂದರೆ ಬದಲೀ ವಿವಾದ ಪರಿಹಾರ ಪದ್ಧತಿಗಳಾದ ಪಂಚಾಯಿತಿ ರಾಜೀ ಕ್ರಮ, ಲೋಕ ಅದಾಲತ್ ಮೂಲಕ ಪರಿಹಾರ ಹಾಗೂ ಮಧ್ಯಸ್ಥಿಕೆಗಳಿಗೆ ಇಂಬು ಕೊಡಲಾಗಿದೆ. ಕಕ್ಷಿಗಳು ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ವಿವಾದ ಪರಿಹಾರದ ಸಾಧ್ಯತೆ ಇದೆಯೆಂದು ನ್ಯಾಯಾಲಯ ಕಂಡುಕೊಂಡಾಗ ವಿವಾದ ಪರಿಹಾರ ಸೂತ್ರ ಕರಡನ್ನು ರಚಿಸಿ ಕಕ್ಷಿಗಳ ಅಭಿಪ್ರಾಯಕ್ಕಾಗಿ ನೀಡಬಹುದು. ಪಡೆದ ಅಭಿಪ್ರಾಯಗಳ ಆಧಾರದಲ್ಲಿ ಪುನಾರಚಿಸಿದ ಸೂತ್ರವನ್ನು ಪಂಚಾಯಿತಿ ಅಥವಾ ರಾಜಿಕ್ರಮ ಅಥವಾ ಲೋಕ ಅದಾಲತ್ ಅಥವಾ ಮಧ್ಯಸ್ಥಿಕೆಗಾಗಿ ಕಳುಹಿಸಬಹುದು. ಪಂಚಾಯಿತಿ ಮತ್ತು ರಾಜಿಕ್ರಮ ಅಧಿನಿಯಮ 1996 (ಆರ್ಬಿಟ್ರೇಶನ್ ಅಂಡ್ ಕನ್ಸಿಲಿಯೇಶನ್ ಆಕ್ಟ್) ಮತ್ತು ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮ 1987ರ ಅಡಿಯಲ್ಲಿ ಮೇಲೆ ಪ್ರಸ್ತಾಪಿಸಿದ ಬದಲೀ ವಿವಾದ ಪರಿಹಾರ ಪದ್ಧತಿಗಳು ಕಾರ್ಯವೆಸಗುತ್ತವೆ. ಒಟ್ಟಿನಲ್ಲಿ ನ್ಯಾಯದ ವಿಳಂಬ ನ್ಯಾಯದ ತಿರಸ್ಕಾರಕ್ಕೆ ಸಮವೆಂದು ತಿಳಿಯುತ್ತಾ ವ್ಯಾಜ್ಯಗಳ ಶೀಘ್ರ ವಿಲೇವಾರಿಗೆ 1999 ಮತ್ತು 2002ರ ತಿದ್ದುಪಡಿಗಳು ದಾರಿ ಮಾಡಿಕೊಟ್ಟದ್ದು ಒಂದು ಸ್ವಾಗತಾರ್ಹ ಬೆಳೆವಣಿಗೆ.

(ಬಿ.ವಿ.)