ಸಿಸ್ಸು- ಲೆಗ್ಯುಮಿನೋಸೀ ಕುಟುಂಬಕ್ಕೆ ಸೇರಿದ ದಾಲ್‍ಬರ್ಜಿಯ ಸಿಸ್ಸೂ ಪ್ರಭೇದದ ತೆಳುವಾದ ಹರವಿನ ಅಸ್ಥಿರಪರ್ಣಿ ಮರ. ಹಿಮಾಲಯ ತಪ್ಪಲಿನಿಂದ ಹಿಡಿದು ಸಿಂಧೂ ನದಿ ಪ್ರಾಂತ್ಯ ಮತ್ತು ಅಸ್ಸಾಮ್ ಹಾಗೂ ದಕ್ಷಿಣದಲ್ಲೆಲ್ಲ ಕಾಣಬರುತ್ತದೆ. ಮೆಕ್ಕಲು ಮಣ್ಣಿನಲ್ಲಿ ಹಾಗೂ ನದೀ ಪಾತ್ರಗಳಲ್ಲಿ ಉತ್ಕøಷ್ಟವಾಗಿ ಬೆಳೆಯುತ್ತದೆ. ನವೆಂಬರ್‍ನಲ್ಲಿ ಎಲೆ ಉದುರಲು ಪ್ರಾರಂಭವಾಗಿ ಡಿಸೆಂಬರ್ ತಿಂಗಳಲ್ಲಿ ಎಲೆರಹಿತವಾಗಿರುವುದು. ಜನವರಿಯ ಅಂತ್ಯಕ್ಕೆ ಹೊಸಚಿಗುರು, ಮೊಗ್ಗುಗಳು ಮೂಡಿ ಮಾರ್ಚ್ ತಿಂಗಳ ಸುಮಾರಿಗೆ ಹಳದಿಮಿಶ್ರಿತ ಹೂಗೊಂಚಲುಗಳು ಕಾಣುವುವು. ಏಪ್ರಿಲ್‍ನಿಂದ ಡಿಸೆಂಬರ್‍ವರೆವಿಗೂ ಕಾಯಿಗಳು ಮಾಗುತ್ತಲಿರುವುವು.

ಬಿಸಿಲಿನ ಸನ್ನಿವೇಶಗಳಲ್ಲಿ ಇದರ ಬೆಳೆವಣಿಗೆ ಹುಲುಸು. ಹಿಮಶೈತ್ಯವನ್ನೂ ಶುಷ್ಕತೆಯನ್ನೂ ತಡೆಯಬಲ್ಲದು. ದನ, ಮೇಕೆ, ಒಂಟೆಗಳಿಗೆ ಮೆಚ್ಚಿನ ಮೇವು. ಬೆಂಕಿಯಿಂದ ಹಾನಿಗೀಡಾಗುತ್ತದೆ. ನದೀ ಪಾತ್ರಗಳಲ್ಲಿ ಮೆಕ್ಕಲು ಮಣ್ಣಿದ್ದ ಕಡೆ, ಹೊಸ ಮಣ್ಣು ಸೇರಿದೆಡೆ ಇದರ ಹಗುರವಾದ ಚಪ್ಪಟೆ ಕಾಯಿಗಳು ಹರಡಿ ಸ್ವಾಭಾವಿಕ ಪುನರುತ್ಪತ್ತಿ ಸಾಕಷ್ಟು ಕಾಣುತ್ತದೆ. ಕೊಂಬೆಕಡ್ಡಿಗಳಿಂದಾಗಲೀ ನೆಡುಕಡ್ಡಿಗಳಿಂದಾಲೀ ಸಸಿ ಕಡ್ಡಿಗಳಿಂದಾಲೀ ಬೀಜಬಿತ್ತಿಯಾಗಲೀ ಸುಲಭವಾಗಿ ಬೆಳೆಸಬಹುದು. ಇದನ್ನು ನೆಡುತೋಪುಗಳಲ್ಲಿ ಬೆಳೆಸುವುದುಂಟು. ದನ, ಜಾನುವಾರುಗಳಿಂದ ಹೆಚ್ಚು ರಕ್ಷಣೆಬೇಕು.

ಚೌಬೀನೆ ಕಪ್ಪುಮಿಶ್ರ ಕಂದುಬಣ್ಣದಿಂದಿದ್ದು, ಕೆಚ್ಚಿನ ಮರ ಬಾಳಿಕೆಬರುವಂಥದಾಗಿದೆ. ಸುಲಭವಾಗಿ ಹದಮಾಡಬಹುದು. ಕೊಯ್ತಕ್ಕೆ, ಮರಗೆಲಸಗಳಿಗೆ ಸುಲಭ. ಪೀಠೋಪಕರಣಗಳಿಗೆ, ಮನೆಕಟ್ಟಲು ಉಪಯುಕ್ತವಾದ ಮರ. (ಎ.ಕೆ.ಎಸ್.)