ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀತಾರಾಂ, ಎ

ಸೀತಾರಾಂ, ಎ 1902-63. ಆನಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕಥೆಗಾರರು. ಸೀತಾರಾಂ ಅಜ್ಜಂಪುರ ಇವರ ಹೆಸರು. 1902ರಲ್ಲಿ ಜನಿಸಿದರು. ಅಜ್ಜಂಪುರದ ಅನಂತಯ್ಯ ಇವರ ತಂದೆ, ಶಿವಮೊಗ್ಗದಲ್ಲಿ ವಕೀಲರಾಗಿದ್ದರು.

ಇವರು ತಮ್ಮ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಗಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ, ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಸ್‍ಸಿ. ಪದವೀಧರರಾದರು (1923-24). ಅನಂತರ ಪುಣೆಯಲ್ಲಿ ಎಲ್‍ಎಲ್.ಬಿ. ಪರೀಕ್ಷೆಗೆ ವ್ಯಾಸಂಗ ಮಾಡಿದರು. ಅನಂತರ ಇವರು ಕೆಲಕಾಲ ಮೈಸೂರು ರೇಷ್ಮೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಅನ್ಯಾಯ ಕಂಡರೆ ಇವರಿಗೆ ಆಗದು. ಅದರ ಸಲುವಾಗಿ ಅನ್ಯಾಯ ಸಹಿಸದ ಮನೋಭಾವದವರಾಗಿದ್ದ ಇವರು ಕೆಲಸಕ್ಕೆ ರಾಜೀನಾಮೆ ಕೊಟ್ಟರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಇವರ ಮೊದಲ ಸಣ್ಣಕಥೆ ಭವತಿ ಭಿಕ್ಷಾಂದೇಹಿ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಯಿತು. ಇವರ ಮತ್ತೊಂದು ಸಣ್ಣಕಥೆ ನಾವೂ ಹಾಗೆಯೇ ಎನ್ನುವುದಕ್ಕೆ ಆಗ ಮುದ್ದಣ ಸ್ವರ್ಣಪದಕ ದೊರೆಯಿತು. ಅನಂತರ ಇವರ ಸಣ್ಣಕಥೆಗಳು ಪ್ರಬುದ್ಧ ಕರ್ಣಾಟಕ, ಜಯ ಕರ್ಣಾಟಕ, ಕಥಾಂಜಲಿ ಮೊದಲಾದ ಸಾಹಿತ್ಯ ಪತ್ರಿಕೆಗಳಲ್ಲಿ ನಿರಂತರವಾಗಿ ಬರತೊಡಗಿದವು. ಕನ್ನಡ ಸಣ್ಣಕಥೆಗಳ ಜನಕರೆನಿಸಿದ ಶ್ರೀನಿವಾಸರ ಹಾದಿಯಲ್ಲಿ ಇವರು ನಡೆದು ಜನಪ್ರಿಯ ಕಥೆಗಾರರಾದರು. ವಿದ್ಯಾರ್ಥಿಯಾಗಿದ್ದಾಗ ಕ್ರಿಕೆಟ್ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಶ್ರದ್ಧೆಗಳನ್ನು ಬೆಳಸಿಕೊಂಡಿದ್ದ ಇವರಿಗೆ ಚಿತ್ರಕಲೆ ಮತ್ತು ಚಿತ್ರಕಲಾ ಸಾಹಿತ್ಯದಲ್ಲಿಯೂ ಆಸಕ್ತಿಯಿತ್ತು. ಇವರ ಅನೇಕ ಕೃತಿಗಳಿಗೆ ಇವರೇ ಚಿತ್ರಗಳನ್ನು ಬರೆದೊದಗಿಸಿದ್ದಾರೆ.

ಸಾಹಿತ್ಯ ಸೃಷ್ಟಿಯಿಂದಲೇ ಜೀವನ ನಡೆಸುವ ಸಾಹಸ ಕಾರ್ಯಕ್ಕೆ ತೊಡಗಿದ ಇವರಿಗೆ ಕಸವನ್ನೂ ರಸವನ್ನಾಗಿ ಮಾಡುವ ಕಲಾವಂತಿಕೆ ಸಿದ್ಧಿಸಿತ್ತು. ಸತಿಪತಿಗಳ ಅನೋನ್ಯ ಜೀವನವನ್ನು ಸುಂದರವಾಗಿ ಚಿತ್ರಿಸುವ ಅಸಮಾನ್ಯ ಕೌಶಲ ಇವರಲ್ಲಿ ಘನೀಭೂತವಾಗಿತ್ತು. ಹೃದಯವನ್ನು ಕಲಕಿ ಆಲೋಚನಾ ತರಂಗವನ್ನೆಬ್ಬಿಸುವ ಸಾಹಿತ್ಯ ಸಂವಿಧಾನ ಇವರ ನಾನು ಕೊಂದ ಹುಡುಗಿ ಎಂಬ ಕಥೆಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಇವರು ತಮ್ಮ ಕೃತಿಗಳಿಂದ ಹುಟ್ಟುಕಥೆಗಾರ ಅನ್ನಿಸಿಕೊಂಡರು. ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳನ್ನು ಕೊಟ್ಟರು. ಕೆಲವು ಕಥೆಗಳು, ಬೇವು ಬೆಲ್ಲ, ಚಂದ್ರಗ್ರಹಣ ಮತ್ತು ಇತರ ಕಥೆಗಳು, ಮಾಟಗಾತಿ ಮತ್ತು ಇತರ ಕಥೆಗಳು, ಜೋಯಿಸರ ಚೌಡಿ ಮತ್ತು ಇತರ ಕಥೆಗಳು, ಸ್ವಪ್ನ ಜೀವಿ ಮತ್ತು ಇತರ ಕಥೆಗಳು, ಸಂಸಾರ ಶಿಲ್ಪಿ ಮತ್ತು ಶಿಲ್ಪ ಸಂಕುಲ - ಇವು ಇವರ ಕಥಾ ಸಂಕಲನಗಳು. ವೀರಯೋಧ, ದಹನ ಚಿತ್ರ - ಇವು ಇವರು ಬರೆದ ನಾಟಕಗಳು. ಪಕ್ಷಿಗಾನ (ಖಂಡ-ಭಾವ ಗದ್ಯಕೃತಿ) - ಒಂದು ಪ್ರಯೋಗಾತ್ಮಕ ಗದ್ಯ ಕವನ. ಆನಂದಲಹರಿ ಎಂಬುದು ಇವರ ಹಾಸ್ಯಪ್ರಬಂಧ ಸಂಕಲನ.

ಇವರು ಅನೇಕ ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಡೇನಿಯಲ್ ಡೇಫೋನ ರಾಬಿನ್‍ಸನ್ ಕ್ರೂಸೊ ಎಂಬ ಪ್ರಸಿದ್ಧ ಕಾದಂಬರಿಯನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪುರುಷಾಮೃಗ (ಡಾ.ಜೆಕಲ್ ಮತ್ತು ಮಿ. ಹೈಡ್) - ಇವರ ಇನ್ನೊಂದು ಅನುವಾದಿತ ಗ್ರಂಥ.

ಇವರು ಜೀವನ ರಂಗದಲ್ಲೂ ಸಾಹಿತ್ಯ ಕ್ಷೇತ್ರದಲ್ಲೂ ಶ್ರದ್ಧಾಸಕ್ತಿಯ ಬಾಳು ನಡೆಸಿದರು. ಇವರ ಸಾಹಿತ್ಯ ಸಾಧನೆಗಾಗಿ ಅನೇಕ ಗೌರವಗಳು ಇವರಿಗೆ ದೊರಕಿದ್ದವು. ಇವರು 1945ರಲ್ಲಿ ಬೆಂಗಳೂರಿನಲ್ಲಿ ನಡೆದ ಸಣ್ಣಕಥಾ ಬರೆಹಗಾರರ ಮೂರನೆಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರ ಸಾಹಿತ್ಯ ಸೇವೆಗಾಗಿ 1958ರಲ್ಲಿ ಅಭಿಮಾನಿಗಳು ಇವರಿಗೆ ನಿಧಿಯನ್ನು ಸಮರ್ಪಿಸಿದರು. ರಾಜ್ಯ ಸರ್ಕಾರದ ಪುರಸ್ಕಾರವೂ ಇವರಿಗೆ ದೊರತಿತ್ತು. ಇವರ ಹಲವು ಕಥೆಗಳು ಹಿಂದಿ, ಮರಾಠಿ, ಬಂಗಾಲಿ, ತಮಿಳು ಮೊದಲಾದ ಭಾಷೆಗಳಿಗೆ ಅನುವಾದಿತವಾಗಿವೆ. ಇಂಗ್ಲಿಷ್ ಭಾಷೆಗೂ ಕೆಲವು ಕಥೆಗಳು ಭಾಷಾಂತರಿಸಲ್ಪಟ್ಟಿವೆ. (ಕೆ.ಜಿ.ಒ.ಆರ್.)