ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀತಾರಾಂ, ಟಿ ಎನ್

ಸೀತಾರಾಂ, ಟಿ ಎನ್ 1950. ಕತೆಗಾರ, ನಾಟಕಕಾರ, ಕಿರುತೆರೆಯ ಮೆಗಾಧಾರಾವಾಹಿಗಳ ನಿರ್ಮಾಪಕ, ಪ್ರಗತಿಪರ ಚಿಂತನೆಯ ಚಿತ್ರ ನಿರ್ದೇಶಕ. ಮೂಲತಃ ಗೌರಿಬಿದನೂರಿನವರೆಂದೇ ಗುರುತಿಸಿಕೊಳ್ಳುವ ಟಿ.ಎನ್. ಸೀತಾರಾಂ 6-12-1950ರಲ್ಲಿ ಜನಿಸಿದರು. ತಳಗುವಾರ ತಂದೆಯವರ ಸ್ಥಳ. ತಂದೆ ನಾರಾಯಣರಾಯರು, ತಾಯಿ ಸುಂದರಮ್ಮ. ಕೃಷಿಕ ಕುಟುಂಬ. ನಾಲ್ಕು ಜನ ಮಕ್ಕಳಲ್ಲಿ ಎರಡನೆಯವರು ಸೀತಾರಾಂ.

ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅನಂತರದ ಕಲಿಕೆ. ಬಿ.ಎಸ್ಸಿ, ಬಿ.ಎಲ್. ಓದಿದ್ದಾರೆ. ನ್ಯಾಯವಾದಿಯಾಗಿ ಕೆಲಸ ಮಾಡಿದ್ದೂ ಉಂಟು. ಸ್ವಭಾವತಃ ಚುರುಕಿನ ಮಾತುಗಾರ. ಅವರ ಒಳಗಿನ ಕ್ರಿಯಾಶೀಲ ತುಡಿತ ಬರಹಗಾರನನ್ನಾಗಿಸಿತ್ತು. ಅವರ ಮೊದಲ ಬರಹ 1969ರಲ್ಲಿ ಪ್ರಕಟವಾಯಿತು. ಸಣ್ಣಕತೆ, ನಾಟಕ ರಚನೆಯತ್ತ ಹೆಚ್ಚು ಆಸಕ್ತಿ ತೋರಿಸಿದರು. ಅವರ ಮೊದಲ ನಾಟಕ ಯಾರಾದರೇನಂತೆ? ಹಾಗೂ ಅನಂತರದ ಬದುಕ ಮನ್ನಿಸು ಪ್ರಭುವೆ?' ಸಾಕಷ್ಟು ಸುದ್ದಿ ಮಾಡಿದವು. ಆ ನಾಟಕಗಳಿಗೆ ಸೀತಾರಾಂ ಪ್ರಶಸ್ತಿಗಳನ್ನೂ ಪಡೆದರು.

ಸೀತಾರಾಂ ಅವರ ನಾಟಕ ಕೃತಿಗಳು ಸೂಕ್ಷ್ಮ ನೆಲೆಯಲ್ಲಿ ಬದುಕಿನ ಹಲವು ಸಂಕೀರ್ಣ ಸಂಗತಿಗಳನ್ನು ಚರ್ಚಿಸುತ್ತಿದ್ದವು. ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ಅಂಥ ವಿಶಿಷ್ಟ ನಾಟಕಗಳು. ಅನೇಕ ಪ್ರಯೋಗಗಳನ್ನು ಕಂಡಿವೆ. ಈಚೆಗೆ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಆಸ್ಫೋಟ ನಾಟಕ 200ಕ್ಕೂ ಹೆಚ್ಚು ಯಶಸ್ವೀ ಪ್ರಯೋಗ ಕಂಡು ದಾಖಲೆ ಮಾಡಿದೆ. ಈ ಕೃತಿಗೆ 1987ರಲ್ಲಿ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. 1989-90ರ ಅವಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವೂ ಆಗಿತ್ತು. 1989ರಲ್ಲಿ ಬೆಂಗಳೂರು ದೂರದರ್ಶನದಲ್ಲಿ ಟೆಲಿ ಧಾರಾವಾಹಿಯಾಗಿ ಪ್ರಸಾರಗೊಂಡು ಜನಪ್ರಿಯವಾಗಿತ್ತು. ನಮ್ಮೊಳಗೊಬ್ಬ ನಾಜೂಕಯ್ಯ ನಾಟಕವೂ ಕೂಡ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿಗಳನ್ನು ಪಡೆದಿತ್ತು.

ಸೀತಾರಾಂ ಅವರ ಸುಮಾರು 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಕ್ರೌರ್ಯ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಆ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಸೀತಾರಾಂ ರಂಗಭೂಮಿ, ಚಲನಚಿತ್ರ, ಕಿರುತೆರೆಯ ನಟನಾಗಿಯೂ ಸಾಕಷ್ಟು ಹೆಸರಾಗಿದ್ದಾರೆ. ಎಸ್.ಆರ್.ಪುಟ್ಟಣ್ಣ ಕಣಗಾಲರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದರು. ಅವುಗಳಲ್ಲಿ ಮಾನಸ ಸರೋವರ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ಪಂಚಮವೇದ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಪಿ. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪಲ್ಲವಿ ಚಿತ್ರಕ್ಕೆ ಸೀತಾರಾಂ ಅವರು ಲಂಕೇಶ್ ಅವರೊಂದಿಗೆ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿ, ಅಭಿನಯಿಸಿದ್ದರು. ಟಿ.ಎಸ್. ನಾಗಾಭರಣ ಅವರು ಆರ್. ಕೆ ನಾರಾಯಣ್ ಅವರ ಖ್ಯಾತ ಇಂಗ್ಲಿಷ್ ಕಾದಂಬರಿ ಫೈನಾನ್ಷಿಯಲ್ ಎಕ್ಸ್‍ಪರ್ಟ್ ಆಧರಿಸಿ ಚಿತ್ರಿಸಿದ ಬ್ಯಾಂಕರ್ ಮಾರ್ಗಯ್ಯ ಚಿತ್ರಕ್ಕೂ ಸೀತಾರಾಂ ಅವರದೇ ಸಂಭಾಷಣೆಯಿತ್ತು. 1991ರಲ್ಲಿ ಆ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತು. ಸೀತಾರಾಂ ಅವರು ಕಿರುತೆರೆಯಲ್ಲೂ ಬಹಳಷ್ಟು ಕೆಲಸ ಮಾಡಿದರು. ಆ ಕ್ಷೇತ್ರದಲ್ಲಿ ಅವರದು ದಾಖಲೆಯಾಗುವಂಥ ಕೆಲಸ. ಸೀತಾರಾಂ ಅವರ ಶ್ರೀಮತಿ ಗೀತಾ ಪತಿಯ ಎಲ್ಲ ಚಟುವಟಿಕೆಯಲ್ಲಿ ಸಹಾನುವರ್ತಿನಿ. ಮಕ್ಕಳೂ ಅಷ್ಟೇ ಕ್ರಿಯಾಶೀಲರು. ಕಿರಿಯ ಸಹೋದರ ಶ್ರೀನಿವಾಸಮೂರ್ತಿ ಉತ್ತಮ ನಟ. ಸೀತಾರಾಂ ನಿರ್ದೇಶನದ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾರೆ.

ಸೀತಾರಾಂ ಅವರು ಕಿರುತೆರೆಗೆ ನಿರ್ಮಿಸಿದ ಟಿ.ಪಿ. ಕೈಲಾಸಂ, ಆಸ್ಫೋಟ, ಮುಖಾಮುಖಿ, ಪತ್ತೇದಾರ ಪ್ರಭಾಕರ, ಕಾಲೇಜುತರಂಗ, ಎಲ್ಲ ಮರೆತಿರುವಾಗ, ನಾವೆಲ್ಲರೂ ಒಂದೇ, ದಶಾವತಾರ, ಕಾಮನಬಿಲ್ಲು, ಕತೆಗಾರ, ಜ್ವಾಲಾಮುಖಿ ಧಾರಾವಾಹಿಗಳು ಅತ್ಯಂತ ಮೆಚ್ಚುಗೆ ಗಳಿಸಿವೆ. ಗುಣಮಟ್ಟದಲ್ಲೂ ಶ್ರೇಷ್ಠವೆನಿಸಿದ ಧಾರಾವಾಹಿಗಳು. ಬೆಂಗಳೂರು ದೂರದರ್ಶನಕ್ಕಾಗಿ ಇವರು ನಿರ್ದೇಶಿಸಿದ ಮಾಯಾಮೃಗ ಮೆಗಾ ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯವಾಗಿತ್ತು.

ಖಾಸಗಿ ವಾಹಿನಿಯಲ್ಲಿ 484 ಕಂತುಗಳಲ್ಲಿ ಪ್ರಸಾರವಾದ ಮನ್ವಂತರ ಮತ್ತು ಮುಕ್ತ ಜನಪ್ರಿಯವಾದ ಧಾರಾವಾಹಿಗಳು. ಚುರುಕಿನ ಸಂಭಾಷಣೆ, ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುವ ವಿಧಾನ ವೀಕ್ಷಕರನ್ನು ಸಾಮಾಜಿಕ ಸಮಸ್ಯೆಗಳತ್ತ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತವೆ. ಸೀತಾರಾಂ ಅವರು ನ್ಯಾಯಾಲಯದ ದೃಶ್ಯಗಳನ್ನು ಜೋಡಿಸುವ ವಿಧಾನ, ಜಾಣ್ಮೆಯ ಮಾತುಗಳು ಪ್ರಜ್ಞಾವಂತರಲ್ಲಿ ಸಂಚಲನೆಯನ್ನು ತರುವಂಥವು.

ಸೀತಾರಾಮ್ ನಿರ್ದೇಶಿಸಿದ ಮೊದಲ ಚಲನಚಿತ್ರ ಎಸ್.ಎಲ್.ಭೈರಪ್ಪನವರ ಮತದಾನ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ. 2002-03ರಲ್ಲಿ ನಿರ್ಮಾಣವಾಯಿತು ಮತ್ತು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರವೆಂಬ ಮನ್ನಣೆ - ಪ್ರಶಸ್ತಿಗಳಿಸಿತು. ದೇಶಕ್ಕೆ ಅರ್ಧರಾತ್ರಿಯಲ್ಲಿ ಸ್ವಾತಂತ್ರ್ಯ ಬಂದುದರ ಹಿನ್ನಲೆಯಲ್ಲಿ ಮಧ್ಯರಾತ್ರಿಯಲ್ಲಿ ಹೆರಿಗೆಯ ದೃಶ್ಯದ ಮೂಲಕ ಸಾಂಕೇತಿಕವಾಗಿ ಪ್ರಾರಂಭವಾಗುವ ಚಿತ್ರ. ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಪಲ್ಲಟಗಳು, ಭ್ರಷ್ಟತೆ ಇತ್ಯಾದಿಗಳು ಹೇಗೆ ನಾಗರಿಕರನ್ನು ಭ್ರಮನಿರಸನಗೊಳಿಸಿದವೆಂಬುದನ್ನು ಸೊಗಸಾಗಿ ನಿರೂಪಿಸುತ್ತಾರೆ. ಸೀತಾರಾಂ ಅವರಿಗೆ ರಾಜ್ಯ ರಾಜಕಾರಣದಲ್ಲಿ ಒಲವಿದೆ. ಲೋಹಿಯಾ ತತ್ತ್ವಗಳನ್ನು ನಂಬಿದವರು. ಅವರ ಎಲ್ಲ ಸೃಜನಶೀಲ ಕಾರ್ಯಗಳೂ ಅದು ಸಾಹಿತ್ಯವಾಗಲಿ, ರಂಗಭೂಮಿಯಾಗಲೀ, ಕಿರುತೆರೆ, ಚನಚಿತ್ರ ಯಾವುದೇ ಇದ್ದರೂ ಅಲ್ಲೆಲ್ಲ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಅವರ ತುಡಿತವನ್ನು ಕಾಣಬಹುದು. (ವಿಜಯಾ)