ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುನಂದಮ್ಮ, ಟಿ

ಸುನಂದಮ್ಮ, ಟಿ (1917-?) ಟಿ. ಸುನಂದಮ್ಮನವರು ಕನ್ನಡ ಸಾಹಿತ್ಯ ಲೋಕದ ಅಪೂರ್ವ ಮಹಿಳಾ ಸಾಹಿತಿ. ಹಾಸ್ಯ ಸಾಹಿತ್ಯ ಬರೆಯುವವರೇ ವಿರಳವಾಗಿದ್ದ ಕಾಲದಲ್ಲಿ, ಈ ಕ್ಷೇತ್ರದಲ್ಲಿ ಬರಹ ಆರಂಭಿಸಿದ ಹಾಗೂ ಆನಂತರದ ಹಲವಾರು ದಶಕಗಳವರೆಗೆ ಏಕೈಕ ಮಹಿಳಾ ಹಾಸ್ಯ ಸಾಹಿತಿಯಾಗಿ ರಾರಾಜಿಸಿದ ವೈಶಿಷ್ಟ್ಯ ಅವರದು.

ಈ ಹಿರಿಯ ಲೇಖಕಿ ಒಂದು ರೀತಿಯಲ್ಲಿ ಹಳೆಯ ಕಾಲದಲ್ಲಿ ಬೇರು ಬಿಟ್ಟು ಹೊಸ ಕಾಲದಲ್ಲಿ ಚಿಗುರೊಡೆದವರು. ಅವರು ಹುಟ್ಟಿದ್ದು ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ. ಜನ್ಮ ದಿನಾಂಕ 8ನೇ ಆಗಸ್ಟ್ 1917. ಜನನ ಸ್ಥಳ ಮೈಸೂರು. ಅಂದಿನ ಮೈಸೂರು ಮಹಾರಾಜರ ಸರ್ಕಾರದಲ್ಲಿ ಡೆಪ್ಯುಟಿ ಕಮೀಷನರ್ ಆಗಿದ್ದ ಟಿ. ರಾಮಯ್ಯನವರು ತಂದೆ. ಹಿರಿಯ ಶಿಕ್ಷಣಾಧಿಕಾರಿಯಾಗಿದ್ದ ವೆಂಕಟರಾಮಯ್ಯನವರ ಮಗಳಾದ ನಾಗಮ್ಮ ತಾಯಿ ಹೀಗಾಗಿ ಸುನಂದಮ್ಮನವರಿಗೆ ಎರಡೂ ಕಡೆ ಸುಶಿಕ್ಷಿತ, ಸುಸಂಸ್ಕøತ ಹಾಗೂ ಶ್ರೀಮಂತ ಪರಿಸರದ ವಾತಾವರಣ. ಎಲ್ಲರೂ ವಿದ್ಯಾಭಿಮಾನಿಗಳು, ಆದರೆ ಸಂಪ್ರದಾಯ ಮತ್ತು ಆಧುನಿಕತೆಗಳೆರಡನ್ನೂ ಸಮತೂಕದಲ್ಲಿ ಸ್ವೀಕರಿಸಿದ್ದ ಪ್ರಗತಿಪರ ಕುಟುಂಬಗಳು. ಧಾರ್ಮಿಕ ಶ್ರದ್ಧೆ, ಪೂಜೆ-ಪುನಸ್ಕಾರ, ಸಂಪ್ರದಾಯಗಳ ಪಾಲನೆ-ಇವುಗಳಿಗೇ ಪ್ರಾಶಸ್ತ್ಯವಿದ್ದ ಕಾಲ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಬೇಡ ಎಂಬ ಮನೋಭಾವದ ಕಾಲ. ಇಂತಹ ಕಾಲದ ಕುಡಿಯಾದರೂ ಸುನಂದಮ್ಮನವರು ಆನಂತರದ ಐವತ್ತು ವರ್ಷಗಳಲ್ಲಿ ಹೊರ ಜಗತ್ತಿಗೆ ತಮ್ಮನ್ನು ತಾವೇ ತೆರೆದುಕೊಂಡು, ಜನಜೀವನದ ಅತ್ಯಾಧುನಿಕ ಪರಿಕರಗಳನ್ನು ಸಂಶೋಧನೆಗಳನ್ನು ತಮ್ಮ ಹಾಸ್ಯ ಬರಹದ ವಸ್ತುವಾಗಿ ಮಾಡಿಕೊಂಡು ನಗೆಲೇಪನ ಹಚ್ಚಿದ ರೀತಿ ಅನನ್ಯ.

ಎರಡು ಮೂರು ವರ್ಷಗಳಿಗೊಮ್ಮೆ ತಂದೆಗೆ ಊರಿಂದೂರಿಗೆ ವರ್ಗಾವಣೆಯಾಗುತ್ತಿದ್ದರಿಂದ ಇವರಿಗೂ ಹಲವಾರು ಸ್ಥಳಗಳಲ್ಲಿ ವಿದ್ಯಾಭ್ಯಾಸ. ಕೆಲವೆಡೆ ಬಾಲಕಿಯರ ಮಾಧ್ಯಮಿಕ ಶಾಲೆಯೇ ಇರುತ್ತಿರಲಿಲ್ಲ. ಆದರೆ ಅವರ ತಾಯಿ ಧೃತಿಗೆಡದೆ ಬಾಲಕರ ಶಾಲೆಗೇ ಆಳಿನ ಜೊತೆ ಕಳುಹಿಸುತ್ತಿದ್ದರಂತೆ. ತರೀಕೆರೆಯಲ್ಲಿ ಲೋಯರ್ ಸೆಕೆಂಡರಿ (ಇಂದಿನ ಏಳನೇ ತರಗತಿ) ಕ್ಲಾಸಿನಲ್ಲಿದ್ದಾಗ ಈ ಬುದ್ಧಿವಂತ ಹುಡುಗಿಯ ಪ್ರತಿಭೆಯಿಂದ ತಮ್ಮ ಗಂಡು ಮಕ್ಕಳಿಗೆಲ್ಲ ಅವಮಾನವಾಗುತ್ತಿದೆ ಎಂದು ಪೋಷಕರು ಗಲಾಟೆ ಮಾಡಿದ್ದರಿಂದ ಮುಖ್ಯೋಪಾಧ್ಯಾಯರು ಇದು ಗಂಡು ಮಕ್ಕಳ ಶಾಲೆ ಎಂಬ ಕಾರಣ ನೀಡಿ ಸುನಂದಮ್ಮನವರನ್ನು ಮನೆಗೆ ಕಳುಹಿಸಿಬಿಟ್ಟರು. ಆದರೆ ತಾಯಿ ಮನೆಯಲ್ಲೇ ಪಾಠ ಹೇಳಿಸಿ ಮಗಳಿಗೆ ಲೋಯರ್ ಸೆಕೆಂಡರಿ ಪರೀಕ್ಷೆಗೆ ಕಟ್ಟಿಸಿದರು.

ಇದೇ ವೇಳೆಗೆ ಅವರ ತಾತನ ಆರೋಗ್ಯ (ತಂದೆಯ ತಂದೆ) ಬಿಗಡಾಯಿಸಿದ್ದರಿಂದ, ಅವರ ಕಣ್ಮುಂದೆ ಮದುವೆ ಮಾಡಬೇಕೆಂದು ಹನ್ನೊಂದು ವರ್ಷದ ಬಾಲೆ ಸುನಂದಮ್ಮನಿಗೆ ಹದಿನೇಳು ವರ್ಷದ ಇಂಟರ್ ಮೀಡಿಯೆಟ್ ವಿದ್ಯಾರ್ಥಿ (ಈಗಿನ ಪಿ.ಯು.ಸಿ) ಹಾಗೂ ಅಜ್ಜಿಯ ಸೋದರ ಸಂಬಂಧಿ ಟಿ.ವೆಂಕಟನಾರಾಣಪ್ಪನೊಂದಿಗೆ ವೈಭವದ ಮದುವೆಯೂ ನಡೆದುಹೋಯಿತು. ಆದರೆ ಗಂಡ ಇನ್ನೂ ಓದಬೇಕಾದ್ದರಿಂದ ಮತ್ತು ಸುನಂದಮ್ಮನವರು ಆ ಅವಧಿಯಲ್ಲಿ ಅಂದರೆ ಸುಮಾರು ಏಳು ವರ್ಷಗಳ ಕಾಲ ತವರಿನಲ್ಲೇ ಇದ್ದುದರಿಂದ, ವಿದ್ಯಾಭ್ಯಾಸ ಮುಂದುವರಿಸುವ ಯೋಗ ಅವರದಾಯಿತು. ವಾಣೀವಿಲಾಸ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಆನಂತರ ಅದೇ ಕಟ್ಟಡದ ಒಂದು ಭಾಗದಲ್ಲೇ ಇದ್ದ ವಿಮೆನ್ಸ್ ಇಂಟರ್‍ಮೀಡಿಯೆಟ್ ಕಾಲೇಜಿನಲ್ಲಿ ಎರಡು ವರ್ಷ ಓದಿ ಇಂಟರ್ ಪಾಸಾದರು. ಆದರೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಪದವಿ ಕಾಲೇಜುಗಳು ಅಂದಿನ ದಿನದಲ್ಲಿ ಇರಲಿಲ್ಲವಾದ್ದರಿಂದ ಅವರ ವಿದ್ಯಾಭ್ಯಾಸ ಅಲ್ಲಿಗೇ ಮುಕ್ತಾಯವಾಯಿತು. ಪುರುಷರ ಕಾಲೇಜಿಗೆ ಸೇರಿಸುವುದಕ್ಕೆ ಅತ್ತೆ ಮಾವಂದಿರ ವಿರೋಧ ಕಡಿವಾಣ ಹಾಕಿತು. 1929ರಲ್ಲಿ ಮದುವೆಯಾದ ಸುನಂದಮ್ಮ 1936ರಲ್ಲಿ ತುಮಕೂರಿನಲ್ಲಿದ್ದ ಅತ್ತೆ ಮನೆ ಪ್ರವೇಶಿಸಿದರು. ಚಪ್ಪಲಿ ಹಾಕಿಕೊಳ್ಳುವುದು, ಟೂತ್ ಪೆಸ್ಟ್ ಬಳಸುವುದು, ಗಂಡಸರೊಡನೆ ಮಾತನಾಡುವುದು ಮುಂತಾದವೆಲ್ಲ ನಿಷಿದ್ಧವಾಗಿದ್ದ ಈ ಮನೆಗೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವೇ ಆಯಿತು.

ಆದರೆ ಚಿಕ್ಕಂದಿನಿಂದಲೇ ಓದು ಹಾಗೂ ಅಷ್ಟಿಷ್ಟು ಬರೆಹವನ್ನೂ ರೂಢಿಸಿಕೊಂಡಿದ್ದ ಸುನಂದಮ್ಮನವರು ಈ ಹವ್ಯಾಸವನ್ನು ಮಾತ್ರ ಬಿಡಲಿಲ್ಲ. ಗಂಡನಿಗೆ ಬೆಂಗಳೂರಿನಲ್ಲಿ ಕೆಲಸವಾದಾಗ, ಹೊಸ ಸಂಸಾರ ಹೂಡಿದರು ಮತ್ತು ಕಥಾವಳಿ, ಕತೆಗಾರ ಮಾಸ ಪತ್ರಿಕೆಗಳಿಗೆ ಸ್ವರಚಿತ ಕತೆಗಳ ಜೊತೆಗೆ ಮೊಪಾಸನ ಕತೆಗಳನ್ನೂ ರೂಪಾಂತರಿಸಿ ಬರೆದುಕೊಟ್ಟರು. 1942ರಲ್ಲಿ ಡಾ ಎಂ. ಶಿವರಾಂ (ರಾಶಿ) ಅವರು ಆರಂಭಿಸಿದ ಕೊರವಂಜಿ ಹಾಸ್ಯ ಮಾಸ ಪತ್ರಿಕೆ ಸುನಂದಮ್ಮನವರ ಬರವಣಿಗೆಗೆ ಹೊಸ ಹಾದಿಯನ್ನೇ ತೋರಿಸಿತು. “ನಾನ್ಕಾರಿಟ್ಟದ್ದು” ಎಂಬ ಲಘು ಹಾಸ್ಯ ಲೇಖನದಿಂದ ಆರಂಭವಾದ ಅವರ ವಿನೋದ ಸಾಹಿತ್ಯ ರಚನೆ ಮತ್ತೆ ಹಿಂದಿರುಗಿ ನೋಡಲಿಲ್ಲ. ಇಪ್ಪತ್ತೈದು ವರ್ಷಗಳ ಕಾಲ ಪ್ರಕಟವಾದ ಈ ಹಾಸ್ಯ ಪತ್ರಿಕೆಗಾಗಿ ಅವರು ಹೆಚ್ಚು ಕಡಿಮೆ ಪ್ರತಿ ತಿಂಗಳೂ ಬರೆದರು. ಹಿರಿಯ ಸಾಹಿತಿಗಳಾದ ನಾ.ಕಸ್ತೂರಿ, ಜಿ.ಪಿ.ರಾಜರತ್ನಂ, ರಾಶಿ ಮುಂತಾದವರ ಮೆಚ್ಚುಗೆ ಪ್ರಶಂಸೆಗಳೊಂದಿಗೆ, ಓದುಗರ ಮೆಚ್ಚುಗೆಯ ಪತ್ರಗಳು ಅವರನ್ನು ಮತ್ತಷ್ಟು ಪ್ರೋತ್ಸಾಹಿಸಿದವು. ಮಲ್ಲಿಗೆ, ಸುಧಾ, ಪ್ರಜಾಮತ ಮುಂತಾದ ನಿಯತಕಾಲಿಕಗಳೂ ಅವರ ಲೇಖನಗಳನ್ನು ಸ್ವಾಗತಿಸಿದವು. ಸುನಂದಮ್ಮನವರ ಬರಹ ನಿರಂತರವಾಗಿ ಸಾಗಿತು.

ದೈನಂದಿನ ಬದುಕಿನಲ್ಲಿ ಹಾಸ್ಯ ಕಾಣುವುದನ್ನು ರೂಢಿಸಿಕೊಂಡ ಸುನಂದಮ್ಮನವರು ಸರಸು-ಮೈಲಾರಯ್ಯ ಎಂಬ ಕಾಲ್ಪನಿಕ ದಂಪತಿಗಳನ್ನು ತಮ್ಮ ಬರಹದ ಕೇಂದ್ರ ಬಿಂದುವಾಗಿ ಸೃಷ್ಟಿಸಿಕೊಂಡು, ಅಂದಿನ ಪರಿಸರಕ್ಕೆ ಅನುಗುಣವಾಗಿ ಅವರನ್ನು ಆರು ಮಕ್ಕಳ ತಂದೆ-ತಾಯಿಯಾಗಿಯೂ ಮಾಡಿದರು. ಸುತ್ತ ಮುತ್ತಲ ಜೀವನದ ಘಟನೆಗಳೇ ಅವರ ಬರಹದ ವಸ್ತುವಾಯಿತು, ಸರಳ, ಸ್ವಚ್ಛ ಹಾಗೂ ಶುದ್ಧವಾದ ತಿಳಿನಗೆ ಮೂಡಿಸುವ ಬರಹ ಅವರದು. ಯಾರನ್ನೂ ಚುಚ್ಚುವುದಲ್ಲ; ಯಾರನ್ನೂ ನೋಯಿಸುವುದಲ್ಲ. ಜೊತೆಗೆ ಅವರದು ಸಾಮಯಿಕ ವಿಡಂಬನೆ; ವಿನೋದ. ನಮ್ಮ ದೇಶದಲ್ಲಿ ನಾಣ್ಯದ ರೂಪ ಬದಲಾದಾಗ, ಮಹಿಳಾ ಸಣ್ಣ ಉಳಿತಾಯ ಜಾರಿಗೆ ಬಂದಾಗ, ಮೋರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿದ್ದಾಗ ಬಂಗಾರದ ನಿಯಂತ್ರಣ ಕಾಯಿದೆ ಜಾರಿಗೆ ಬಂದಾಗ, ಮಿತ ಸಂತಾನ ಚಳವಳಿ, ಆನಂತರದ ಹರ್ಷದ್ ಮೆಹ್ತಾ ಸ್ಕ್ಯಾಮ್, ಮಿಕ್ಸಿ-ವಾಷಿಂಗ್‍ಮೆಷಿನ್ ಇತ್ಯಾದಿಗಳು ಆವಿರ್ಭವಿಸಿದಾಗ, ಪೇಜರ್-ಮೊಬೈಲ್‍ಗಳು ಎಲ್ಲರ ಕೈತುಂಬಿದಾಗ, ಅಷ್ಟೇ ಏಕೆ ಕಂಪ್ಯೂಟರ್ ನೆರವಿನಿಂದ ನಡೆಯುವ ಮದುವೆಗಳ ನಡುವೆಯೇ ಹಾಸುಹೊಕ್ಕಾಗಿ ಬರುವ ಹಾಸ್ಯ ಚಿತ್ರಗಳು-ಇವೆಲ್ಲ ಸುನಂದಮ್ಮನವರ ಕೈಯಲ್ಲಿ ರಸಪಾಕ ಇಳಿಸಿದ ನಗೆಬರೆಹಗಳಾಗಿ ಕಚಗುಳಿ ಇಡುತ್ತವೆ. ಆಕಾಶವಾಣಿ ಬೆಂಗಳೂರು ಕೇಂದ್ರಕ್ಕಾಗಿ ಸುನಂದಮ್ಮನವರು ರಚಿಸಿಕೊಟ್ಟಿರುವ ಹಾಸ್ಯ ನಾಟಕಗಳು, ಲಘು ಭಾಷಣಗಳು, ಹರಟೆಗಳು ಅಪಾರ.

ಅವರ ಪ್ರಕಟಿತ ಕೃತಿಗಳಲ್ಲಿ ಜಂಭದ ಚೀಲ, ಬಣ್ಣದ ಚಿಟ್ಟೆ, ಪೆಪ್ಪರ್‍ಮೆಂಟು, ವೃಕ್ಷವಾಹನ, ತೆನಾಲಿ ರಾಮಕೃಷ್ಣ, ಮುತ್ತಿನ ಚೆಂಡು, ಆಧುನಿಕ ನಗೆ ಸಾಹಿತ್ಯ, ರೂಢಿಗಾಡಿ, ನನ್ನ ಅತ್ತೆಗಿರಿ, ಮೂರು ಗೀತ ರೂಪಕಗಳು, ಸರಸ ಮಹಲ್, ಕೆಲವು ನಗೆ ನಾಟಕಗಳು; ಸಮಯ ಸಿಂಧು ಮತ್ತು 1993ರಲ್ಲಿ ಪ್ರಕಟವಾದ “ಸುನಂದಮ್ಮನವರ ಸಮಗ್ರ ಹಾಸ್ಯ ಸಾಹಿತ್ಯ ಮುಖ್ಯವಾದವು”.

ಎಂಬತ್ತೆಂಟರ ಇಂದಿನ ಇಳಿವಯಸ್ಸಿನಲ್ಲೂ, ದೇಹ ಸೋತಿದ್ದರೂ, ಸುನಂದಮ್ಮನವರ ಉತ್ಸಾಹದ ಚಿಲುಮೆ ಬತ್ತಿಲ್ಲ. ಹಾಗೆಂದ ಮಾತ್ರಕ್ಕೆ ಬಾಳಿನಲ್ಲಿ ಅವರು ಕಹಿಯ ರುಚಿ ಕಂಡೇ ಇಲ್ಲ ಎಂದೇನೂ ಅಲ್ಲ. ಎಪ್ಪರತ್ತರ ಇಳಿ ವಯಸ್ಸಿನಲ್ಲಿ ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ದುಃಖ ಅವರ ಮನದಾಳದಲ್ಲಿ ಮಡುವುಗಟ್ಟಿರುವ ನೋವು. ಈ ಸಂದರ್ಭದಲ್ಲಿ ಮಾನಸಿಕ ಆಘಾತದಿಂದ ಪಾತಾಳಕ್ಕೆ ಇಳಿದುಹೋಗಿದ್ದ ಸುನಂದಮ್ಮನವರನ್ನು ಸಾಂತ್ವನಗೊಳಿಸಿ ಅವರ ಜೀವನಾಸಕ್ತಿಗೆ ಮರುಚೇತನ ನೀಡಿದವರು ಅವರ ಸಾಹಿತ್ಯ ಪ್ರೇಮಿಗಳು ಮತ್ತು ಆಕಾಶವಾಣಿಯ ಒತ್ತಾಯ ಪೂರ್ವಕ ಬರಹಗಳು ಎಂದರೆ ತಪ್ಪಾಗಲಾರದು.

ಸಾರಸ್ವತ ಲೋಕ ಟಿ. ಸುನಂದಮ್ಮನವರಿಗೆ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿದೆ. ಇವುಗಳಲ್ಲಿ ಕೆಲವನ್ನು ಉಲ್ಲೇಖಿಸಬಹುದಾದರೆ ಸುನಂದಾಭಿನಂದನ ಸಂಭಾವನಾ ಗ್ರಂಥ (1979), ಕರ್ನಾಟಕ ಸಾಹಿತ್ಯ, ಅಕಾಡೆಮಿ ಪ್ರಶಸ್ತಿ (1981), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1990), ಸುನಂದಮ್ಮನವರ ಸಮಗ್ರ ಹಾಸ್ಯ ಸಾಹಿತ್ಯ ಬಿಡುಗಡೆ ಮತ್ತು ಕರ್ನಾಟಕ ಲೇಖಕಿಯರ ಸಂಘದ ಸನ್ಮಾನ (1993), ಕರ್ನಾಟಕ ರಾಜ್ಯ ಸರ್ಕಾರದ ಒಂದು ಲಕ್ಷ ರೂಪಾಯಿ ನಗದು ಒಳಗೊಂಡ ಪ್ರತಿಷ್ಠಿತ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (1995) ಮದರಾಸಿನ ಏಳು ಕನ್ನಡ ಸಂಘಗಳು ಒಟ್ಟಾಗಿ ಮಾಡಿದ ಸನ್ಮಾನ ಮತ್ತು ಸಾಹಿತ್ಯ ಸರಸ್ವತಿ ಗೌರವ ಫಲಕ ಪ್ರಧಾನ (1990), ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ ಸನ್ಮಾನ (1991) ಕರ್ನಾಟಕ ಲೇಖಕಿಯರ ಸಂಘದ “ಅನುಪಮಾ ಪ್ರಶಸ್ತಿ” ಮುಖ್ಯವಾದವು. ಕರ್ನಾಟಕದ ಹಲವಾರು ಕನ್ನಡ ಸಂಘ ಸಂಸ್ಥೆಗಳು ಸುನಂದಮ್ಮನವರನ್ನು ಬರಮಾಡಿಕೊಂಡು ಗೌರವ ಸಲ್ಲಿಸಿವೆ. ಕಾಲಿನ ಬಾಧೆಯಿಂದಾಗಿ ಸಂಚಾರ ಕಷ್ಟವಾಗಿದ್ದರೂ, ಅವರ ಹುರುಪಿಗೆ, ಉತ್ಸಾಹಕ್ಕೆ ಚ್ಯುತಿಯಿಲ್ಲ; ಅವರೇ ಹೇಳಿಕೊಳ್ಳುವಂತೆ ಅವರಿನ್ನೂ ಚೇತನದ ಚಿಲುಮೆ. (ನಾಗಮಣಿ ಎಸ್ ರಾವ್)