ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬಾರಾವು, ರಾಯಪ್ರೋಲು

ಸುಬ್ಬಾರಾವು, ರಾಯಪ್ರೋಲು 1892-1984. ತೆಲುಗಿನಲ್ಲಿ ಭಾವಕವಿತ್ವ ಎಂಬ ಹೆಸರಿನಲ್ಲಿ ಬಂದ ನವೋದಯ ಕಾವ್ಯಕ್ಕೆ ಆದ್ಯರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಬಾಪಟ್ಲ ತಾಲ್ಲೂಕಿನ ಗಾರ್ಲಪಾಡು ಎಂಬ ಗ್ರಾಮದಲ್ಲಿ ಜನಿಸಿದರು. ಸೋದರಮಾವ ಅವ್ವಾರಿ ಸುಬ್ರಹ್ಮಣ್ಯಶಾಸ್ತ್ರಿಗಳಿಂದ ಸಂಸ್ಕøತಾಂಧ್ರ ಭಾಷಾ ಪಾಂಡಿತ್ಯಗಳಿಸಿದರು. ಗುಂಟೂರು, ಕಾಕಿನಾಡ, ಹೈದರಾಬಾದ್‍ಗಳಲ್ಲಿ ವಿದ್ಯಾಭ್ಯಾಸ ನಡೆಸಿ ಅನಂತರ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರ ಶಿಷ್ಯರಾದರು. ತೆಲುಗಿನಲ್ಲಿ ರಮ್ಯಕಾವ್ಯದ ಪ್ರವರ್ತಕರಾಗಲು ರವೀಂದ್ರರ ಪ್ರೇರಣೆ ಪ್ರಭಾವಗಳು ಒಂದು ಕಾರಣ. ಉಸ್ಮಾನಿಯ ವಿಶ್ವವಿದ್ಯಾಲಯ ಮತ್ತು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ತೆಲುಗು ಶಾಖೆಯ ಮುಖ್ಯಸ್ಥರಾಗಿ ಉಸ್ಮಾನಿಯ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಎಸ್. ರಾಧಾಕೃಷ್ಣನ್, ಸಿ.ಆರ್.ರೆಡ್ಡಿ, ವಾವಿಲಾಲ ಗೋಪಾಲಕೃಷ್ಣಯ್ಯ, ಸಮುದ್ರಾಲ ಅಪ್ಪಲಾಚಾರ್ಯ, ವಾರಾಣಸಿ ರಾಮಸುಬ್ಬಯ್ಯ ಮೊದಲಾದವರು ಇವರ ಮೇಲೆ ಪ್ರಭಾವ ಬೀರಿದವರು.

ತೆಲುಗಿನ ನವೋದಯ ಕಾವ್ಯಕ್ಕೆ ಇವರಿಂದ 1909ರಷ್ಟು ಹಿಂದೆಯೇ ಚಾಲನೆ ಲಭಿಸಿತು. ಗೋಲ್ಡ್‍ಸ್ಮಿತ್‍ನ ಹರ್ಮಿಟ್ ಕೃತಿಯನ್ನು ಅನುಸರಿಸಿ ರಚಿಸಿದ ಲಲಿತ (1909) ತೆಲುಗಿನ ನವೋದಯ ಕಾವ್ಯಕ್ಕೆ ನಾಂದಿಯಾಯಿತು. ಅನಂತರ ಇವರು ಬರೆದ ಕೃತಿಗಳು, ಭಾವಗೀತೆಗಳು ಮತ್ತು ಲಕ್ಷಣಗ್ರಂಥಗಳು ಆಧುನಿಕ ತೆಲುಗು ಕಾವ್ಯಕ್ಕೆ ಹೊಸ ತಿರುವನ್ನು ನೀಡಿದುವು.

ಇವರ ತೃಣಕಂಕಣಮು ಎಂಬ ಖಂಡಕಾವ್ಯ 20ನೆಯ ಶತಮಾನದ ಪ್ರಾರಂಭ ದಶಕಗಳಲ್ಲಿ ಎಲ್ಲ ತರುಣ ಕವಿಗಳ ಪಾರಾಯಣ ಗ್ರಂಥವಾಯಿತು. ಸಾಂಪ್ರದಾಯಿಕ ಪದ್ಯರೂಪದಲ್ಲಿದ್ದರೂ ಈ ಕಾವ್ಯದ ವಸ್ತು, ಭಾವಾಭಿವ್ಯಕ್ತಿ, ಶೈಲಿ ವಿನೂತವಾಗಿದ್ದು ಆ ಕಾಲದ ಕಾವ್ಯರಚನೆಯಲ್ಲಿ ಹೊಸತನಕ್ಕೆ ಮುಖ್ಯ ಪ್ರೇರಣೆಯಾಯಿತು. ಆದರ್ಶ ಪ್ರಣಯದ ಭಾಷ್ಯದಂತಿರುವ ತೃಣಕಂಕಣದಿಂದ ಇವರು ಪ್ರಣಯಕಾವ್ಯದ ನವೋದಯಕ್ಕೆ ಕಾರಣರಾದರು.

ಬಂಗಾಲದಲ್ಲಿ ನಡೆದ ಘಟನೆಯೊಂದರ ಆಧಾರದಿಂದ ಇವರು ರಚಿಸಿದ ಸ್ನೇಹಲತ, ವರದಕ್ಷಿಣೆಯ ಪಿಡುಗಿಗೆ ಬಲಿಯಾದ ಮಹಿಳೆಯ ದುರಂತ ಕಥೆ. ರಮ್ಯಕಾವ್ಯ, ಸಮಾಜ ನಿಷ್ಠವಾಗಿಯೂ ಇರಬಹುದೆಂಬ ಅಭಿಪ್ರಾಯವನ್ನು ಬಲಪಡಿಸುವಂತೆ ಒಂದು ಸಾಮಾಜಿಕ ಸಮಸ್ಯೆಯನ್ನು ಸ್ವೀಕರಿಸಿ ಅದನ್ನು ಹೃದಯಸ್ಪರ್ಶಿಯಾಗಿ ನಿರೂಪಿಸುವಲ್ಲಿ ಇವರು ಯಶಸ್ವಿಯಾದರು.

ಇವರು ದೇಶಭಕ್ತಿ ಕಾವ್ಯಕ್ಕೆ ಹೊಸ ಮೆರಗನ್ನು ಕೊಟ್ಟಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಪ್ರಾರಂಭ ಕಾಲದಲ್ಲಿ ಇವರ ಭಾವಗೀತೆಗಳು ಪ್ರೇರಕಶಕ್ತಿಗಳಾದುವು. ದೇಶಪ್ರೇಮ ಹಾಗೂ ಭಾಷಾಪ್ರೇಮ ಇವರ ಕಾವ್ಯದ ಪ್ರಧಾನ ವಸ್ತುಗಳಾಗಿ ಹೊಸ ಧೋರಣೆಯೊಂದಕ್ಕೆ ದಾರಿತೋರಿದುವು.

ಯಾವ ನಾಡಿಗೆ ಹೋದರೂ ಎಲ್ಲಿ ಕಾಲಿಟ್ಟರೂ
ಯಾವ ವೇದಿಕೆ ಮೇಲಾದರೂ ಯಾರು ಏನಂದರೂ
ಹೊಗಳು ನಿನ್ನ ತಾಯಿ ಭೂಮಿ ಭಾರತಿಯನ್ನು
ಉಳಿಸು ನಿನ್ನ ಜನತೆಯ ತುಂಬುಗೌರವವನ್ನು

- ಇದು ರಾಷ್ಟ್ರಗೀತೆ ಎಂಬ ಖ್ಯಾತಿಗೂ ಪಾತ್ರವಾಯಿತು. “ನನ್ನ ಜನತೆ ನನ್ನ ದೇಶ ನನ್ನ ಭಾಷೆ ಎಂಬ ಅಹಂಕಾರ ದರ್ಶನ ಬೇಕು ಆಂಧ್ರಕ್ಕೆ” ಎಂಬ ಪ್ರಬೋಧ ಗೀತೆಯನ್ನು ಇವರು ಹಾಡಿದರು.

ಸೃಜನಶೀಲತೆಯ ಅತ್ಯುನ್ನತ ಮೌಲ್ಯಗಳ ಪ್ರತಿಪಾದನೆಯಿಂದ ರಮ್ಯಕಾವ್ಯ ಚಳವಳಿಯ ಮುಂಚೂಣಿಯಲ್ಲಿದ್ದುದು ಮಾತ್ರವಲ್ಲದೆ ಆದರ್ಶ ಪ್ರಣಯತತ್ತ್ವ ಚಿಂತಕರಾಗಿಯೂ ಇವರು ಖ್ಯಾತರಾದರು. ಸಾಂಪ್ರದಾಯಿಕ ವಾಗಿ ಸಾಹಿತ್ಯದಲ್ಲಿ ನಿರೂಪಣೆಗೊಂಡಿರುವ ಶೃಂಗಾರಕ್ಕೆ ಭಿನ್ನವಾದ ಆದರ್ಶಪ್ರಣಯದ ಹಲವು ಮುಖಗಳನ್ನು ಶಕ್ತವಾಗಿ ಅಭಿವ್ಯಕ್ತಿಗೊಳಿಸಿ ಅಭಿನವಾಚಾರ್ಯರೆಂಬ ಪ್ರಶಂಸೆಗೆ ಇವರು ಪಾತ್ರರಾದರು. ಪ್ರಣಯ ವಿಠ್ಠಲ ಪಣಯ(ಲಲಿತ), ನಿರ್ಮಲ ಪ್ರಣಯ (ತೃಣಕಂಕಣ), ಕಾರುಣ್ಯ ಪ್ರಣಯ(ಅನುಮತಿ), ವಾತ್ಸಲ್ಯ ಪ್ರಣಯ(ಸ್ವಪ್ನಕುಮಾರ), ಮುಗ್ಧಪ್ರಣಯ (ರೂಪನವನೀತಮ್) ಮುಂತಾದವು ಕವಿಯ ಪ್ರಣಯದರ್ಶನದ ವೈವಿಧ್ಯವನ್ನು ತಿಳಿಸುತ್ತವೆ. ಕಾವ್ಯಮೀಮಾಂಸಾಕ್ಷೇತ್ರಕ್ಕೂ ಇವರ ಸೇವೆ ಗಣನೀಯವಾದುದು. ಪದ್ಯಮಾಧ್ಯಮದಲ್ಲೇ ಇವರು ಬರೆದ ರಮ್ಯಾಲೋಕಮ್ ಎಂಬ ಕೃತಿ ಆಧುನಿಕ ಕಾವ್ಯಮೀಮಾಂಸೆಗೆ ಮೂಲಭೂತ ಕೊಡುಗೆ. ಕಾವ್ಯಾನುಭವ, ರಸಾಭಿವ್ಯಕ್ತಿ, ರಮ್ಯದರ್ಶನ ಮುಂತಾದವನ್ನು ಅನುಭವಸಾರದಂತೆ ಇವರು ಇದರಲ್ಲಿ ನಿರೂಪಿಸಿದ್ದಾರೆ.

ಇವರ ಕೃತಿಗಳನ್ನು ಖಂಡಕಾವ್ಯ (ಜಡಕುಚ್ಚುಲು, ಆಂಧ್ರಾವಳಿ, ತೆನುಗುತೋಟ, ವನಮಾಲ, ಮಿಶ್ರಮಂಜರಿ ಇತ್ಯಾದಿ), ಅನುವಾದ (ಉಮರ್ ಖಯಾಮ್‍ನ ರುಬಾಯಿಗಳ ಅನುವಾದ ಮಧುಕಲಶಮ್, ಟೆನಿಸನ್‍ನ ಡೋರಾ-ಅನುಮತಿ, ಕಾಳಿದಾಸನ ಮೇಘದೂತ - ದೂತಮತ್ತೇಭಮ್, ರವೀಂದ್ರರ ಕವನಗಳು, ಭವಭೂತಿಯ ಉತ್ತರರಾಮ ಚರಿತಮ್, ವಾಲ್ಮೀಕಿಯ ಸುಂದರಕಾಂಡ ಇತ್ಯಾದಿ), ಲಕ್ಷಣ ಕಾವ್ಯ (ರಮ್ಯಾಲೋಕಮ್, ಮಾಧುರೀ ದರ್ಶನಮ್) ಎಂದು ವಿಂಗಡಿಸಬಹುದು.

ಇವರ ಮಿಶ್ರಮಂಜರಿ ಎಂಬ ಕೃತಿಗೆ 1965ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇವರು 1984 ಜೂನ್ 30ರಂದು ನಿಧನರಾದರು. (ಆರ್.ವಿ.ಎಸ್.ಎಸ್.)