ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುವರ್ಣಾವತಿ

ಸುವರ್ಣಾವತಿ ಕಾವೇರಿಯ ಒಂದು ಉಪನದಿ. ಹೊನ್ನುಹೊಳೆ ಎಂಬ ಹೆಸರು ಇರುವ ಈ ನದಿ ಚಾಮರಾಜನಗರ ಜಿಲ್ಲೆಯ ಆಗ್ನೇಯ ಭಾಗದ ಗಜಹಟ್ಟಿ ಕಣಿವೆಯ ಬಳಿ ಹುಟ್ಟಿ ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳ ಮೂಲಕ ಹರಿದು ಮೈಸೂರು ಜಿಲ್ಲೆಯ ತಲಕಾಡಿನ ಸಮೀಪ ಕಕ್ಕೂರು ಬಳಿ ಕಾವೇರಿಯೊಡನೆ ಸಂಗಮವಾಗುವುದು. ಈ ನದಿಯ ದಂಡೆಗಳ ಮೇಲಣ ಭೂಮಿ ಫಲವತ್ತಾದ್ದರಿಂದ ನದಿಗೆ ಹೊನ್ನುಹೊಳೆಯೆಂಬ ಹೆಸರು ಬಂದಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಗಾಜನೂರು ಮತ್ತು ಹೊಂಗಲವಾಡಿ ಎಂಬ ಸ್ಥಳಗಳಲ್ಲಿ, ಯಳಂದೂರು ತಾಲ್ಲೂಕಿನಲ್ಲಿ ಗಂಗನೂರ ಬಳಿ ಇದಕ್ಕೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ. (ವಿ.ಜಿ.ಕೆ.)