ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಶೀಲಮ್ಮ, ಎಸ್ ಜಿ

ಸುಶೀಲಮ್ಮ, ಎಸ್ ಜಿ (1939- ). ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮೂಲಕ ಅತ್ಯಂತ ಜನಪ್ರಿಯತೆ ಗಳಿಸಿರುವ ಹಿರಿಯ ಸಮಾಜ ಸೇವಕಿ. ಎಸ್.ಜಿ. ಸುಶೀಲಮ್ಮ ಅವರು 1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್.ಗಣೇಶಪ್ಪ ಮತ್ತು ತಾಯಿ ಚೆನ್ನಮ್ಮ.

ಪದವಿಪೂರ್ವ ಶಿಕ್ಷಣವನ್ನು ಪಡೆದ ಎಸ್.ಜಿ.ಸುಶೀಲಮ್ಮ 1959ರಿಂದ 1967ರ ವರೆಗೆ ರೆಂಕೋ ಕಾರ್ಖಾನೆಯಲ್ಲಿ (ಬಿಎಚ್.ಇ.ಎಲ್) 15 ವರ್ಷ ಸೇವೆ ಸಲ್ಲಿಸಿ, 1963ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿದರು. 1974ರಿಂದ 1978ರ ವರೆಗೆ ಭುವನೇಶ್ವರಿ ಮಹಿಳಾ ಮಂಡಳಿಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸಿದರು. 1975ರಲ್ಲಿ ಬೆಂಗಳೂರಿನ ಹೆಬ್ಬಾಳದ ನೆರೆಯಲ್ಲಿರುವ ಚೋಳನಾಯಕನಹಳ್ಳಿಯಲ್ಲಿ ಸುಮಂಗಲಿ ಸೇವಾಶ್ರಮ ಎಂಬ ಸಂಸ್ಥೆಯನ್ನು ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಮತ್ತು ಮಹಿಳೆಯರ ಸರ್ವತೋಮುಖ ಸೇವೆಗಾಗಿ ಪ್ರಾರಂಭಿಸಿದರು. 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿಯನ್ನು ಸ್ಥಾಪಿಸಿದರು. 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಇದಲ್ಲದೆ ಮಹಿಳೆಯರಿಗೆ ಸ್ವಯಂ ಉದ್ಯೋಗ. ಮಹಿಳಾ ಒಕ್ಕೂಟಗಳ ರಚನೆ. ಶಿಶು ಸಂರಕ್ಷಣಾ ಕೇಂದ್ರವನ್ನು ಸ್ಥಾಪನೆ ಮಾಡುವವರಿಗೆ ತರಬೇತಿ ಹೀಗೆ ಅನೇಕ ಜನಪರ ಕಾರ್ಯಗಳನ್ನು ನಡೆಸುತ್ತಿದ್ದಾರೆ.

ಎಸ್.ಜಿ.ಸುಶೀಲಮ್ಮನವರು ಬೆಂಗಳೂರು ಚೋಳನಾಯಕನ ಹಳ್ಳಿಯಲ್ಲಿ 1975ರಲ್ಲಿ ಸ್ಥಾಪಿಸಿದ ಸುಮಂಗಲಿ ಸೇವಾಶ್ರಮಕ್ಕೆ ಅಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. 1987ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರಾಗಿ ಮತ್ತು ಜಾಲಹಳ್ಳಿಯ `ಸಮೂಹ ಸಾಮಾಜಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 1989ರಲ್ಲಿ ಬೆಂಗಳೂರು ನಗರ ಜಿಲ್ಲಾ ಮಹಿಳಾ ಮಹಾಮಂಡಲದ ಸಂಸ್ಥಾಪಕ ಅಧ್ಯಕ್ಷರಾಗಿ, 1990ರಲ್ಲಿ ದೊಡ್ಡಬಳ್ಳಾಪುರದ ಸದ್ಗುರು ಅಮರಜ್ಯೋತಿ ವಿಶ್ವಕುಂಡಲ ಯೋಗ ಆಶ್ರಮದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಬಹೋಪಯೋಗಿ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘ-ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1985ರಲ್ಲಿ ಕರ್ನಾಟಕ ರಾಜ್ಯದ ಮಕ್ಕಳ ಕಲ್ಯಾಣಕ್ಕಾಗಿ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಕ್ಕಳ ಕಲ್ಯಾಣ ಪ್ರಶಸ್ತಿ. 1991ರಲ್ಲಿ ಕೌಟುಂಬಿಕ ಘಟಕದ ಉತ್ತಮ ಸೇವೆಗಾಗಿ ರಾಷ್ಟ್ರೀಯ ಪ್ರಶಸ್ತಿ. 1992ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅತ್ಯುತ್ತಮ ಸಾಮಾಜಿಕ ಸೇವಾ ಪ್ರಶಸ್ತಿ ಮತ್ತು ಉತ್ತಮ ನಾಗರೀಕ ಪ್ರಶಸ್ತಿ. 1994ರಲ್ಲಿ ಅತ್ಯುತ್ತಮ ಗ್ರಾಮೀಣ ಸೇವೆ ಸಲ್ಲಿಸಿದ್ದಕ್ಕಾಗಿ ಜಾನಕಿದೇವಿ ಬಜಾಜ್ ಪುರಸ್ಕಾರ. 1995ರಲ್ಲಿ ಮೈಸೂರು ದಸರಾ ಪ್ರಶಸ್ತಿ. 1998ರಲ್ಲಿ ರಾಜ್ಯ ಸರ್ಕಾರದ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ. 2000ದಲ್ಲಿ ಸಮಾಜ ಸೇವೆಗಾಗಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ 2001ರಲ್ಲಿ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ರಾಜೀವಗಾಂಧಿ ಶಿರೋಮಣಿ ಪ್ರಶಸ್ತಿಗಳಲ್ಲದೆ ನಾಡಿನ ಅನೇಕ ಸಂಘ-ಸಂಸ್ಥೆಗಳು, ಹಾಗೂ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ-ಸನ್ಮಾನಗಳನ್ನು ನೀಡಿ ಗೌರವಿಸಿವೆ.

ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ಪರಿವರ್ತನೆಯ ಪ್ರವರ್ತಕ, ಸರ್ವಸಮಾನತೆಗಾಗಿ ಹೋರಾಡಿದ ಬಸವೇಶ್ವರರ ತತ್ತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಪ್ರಾಮಾಣಿಕವಾಗಿ ಮೂಡಿಸಿಕೊಂಡು ಸಮಾಜ ಸೇವಕಿಯಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ನಾಡಿನ ಹಿರಿಯ ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ ಅವರಿಗೆ ಕರ್ನಾಟಕ ಸರ್ಕಾರವು ವ್ಯಕ್ತಿ ನೆಲೆಯಲ್ಲಿ ನೀಡುವ 2004ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ `ಬಸವ ಪುರಸ್ಕಾರವನ್ನು ನೀಡಿ ಗೌರವಿಸಿದೆ.