ಸೇಡಿಯಾಪು ಕೃಷ್ಣಭಟ್ಟ:--
- ಸಹ್ಯಾದ್ರಿ ಮತ್ತು ಸಮುದ್ರಗಳ ಎತ್ತರ ಬಿತ್ತರಗಳಂತೆಯೇ ಪಂಡಿತಬಾಹುಳ್ಯವೂ ದಕ್ಷಿಣಕನ್ನಡದ ಸಂಪದ್‍ವಿಶೇಷ. ಮುಳಿಯ, ಕುಕ್ಕಿಲ, ತೆಕ್ಕುಂಜ, ಕಡೆಂಗೋಡ್ಲು, ಗೋವಿಂದ ಪೈ, ಮರಿಯಪ್ಪಭಟ್ಟ ಮುಂತಾದ ದಕ್ಷಿಣಕನ್ನಡ ಜಿಲ್ಲೆಯ ಪಂಡಿತ ಪರಂಪರೆಯಲ್ಲಿ ಸೇಡಿಯಾಪು ಕೃಷ್ಣಭಟ್ಟರು ಪ್ರಮುಖವಾದ ಸ್ಥಾನ ಪಡೆದವರು. ಭಾಷೆ, ವ್ಯಾಕರಣ, ಛಂದಸ್ಸುಗಳಲ್ಲಿ ಅಸಾಮಾನ್ಯವಾದ ವಿದ್ವತ್ತೆಯನ್ನು ಸಾಧಿಸಿರುವಂತೆಯೇ ಕವಿಯಾಗಿ, ಕಥೆಗಾರರಾಗಿ ಕೂಡಾ ಗಮನ ಸೆಳೆದವರು. ಅವರದು ಏಕಕಾಲಕ್ಕೆ ಶಾರಯತ್ರೀ ಮತ್ತು ಭಾವಯತ್ರೀ ಪ್ರತಿಭೆ ಸೇಡಿಯಾಪು ಅವರ ಶಾಸ್ತ್ರಕೃತಿಗಳಿಗೆ ಕಾವ್ಯದ ಚೆಲುವಿದೆ; ಕಾವ್ಯಕೃತಿಗಳಿಗೆ ಶಾಸ್ತ್ರದ ಬಲವಿದೆ! ಪಳಮೆಗಳ ಕಥೆಗಾರ, ಪುಣ್ಯಲಹರಿಯ ಕವಿವರ್ಯ, ಪಂಚಮೀ ವಿಭಕ್ತಿಯ ವಯ್ಯಾಕರಣಿ, ಛಂದೋಗತಿಯ ಛಂದೋವಿದ, ದೇಶನಾಮಗಳ ಗವೇಷಣಪಟು, ತಥ್ಯದರ್ಶನದ ಸತ್ಯಶೋಧಕ, ವಿಚಾರಪ್ರಪಂಚದ ವಿಮರ್ಶಕ. ಹೀಗೆ ಸೇಡಿಯಾಪು ಅವರ ವ್ಯಕ್ತಿತ್ವಕ್ಕೆ ಹಲವು ಮುಖಗಳು. ಅವರ ಬರವಣಿಗೆಯ ಗಾತ್ರ ಮತ್ತು ಕೃತಿ ಸಂಖ್ಯೆ ಕಡಿಮೆಯೆಂದೆನಿಸಿದರೂ, ಬರೆದುದೆಲ್ಲವೂ ಅಪರಂಜಿ. ಎಲ್ಲ ಲೇಖನಗಳೂ ಶುದ್ಧ, ಸರಳ ಗಂಭೀರ; ಅವುಗಳಿಗೆ ಸ್ವಯಂತರ್ಕ, ವಿಚಾರಶೀಲತೆಗಳೇ ಆಧಾರ.
ಹೆಚ್ಚು ಬರೆದವನಲ್ಲ
ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಗೆ ಮಯ್
ಎಚ್ಚುವಂದದಿ ತೀಡಿ ತಿದ್ದಿ ಬರೆವೆ.
- ಇದು ಸೇಡಿಯಾಪು ಅವರದೇ ಕಾವ್ಯಪಂಕ್ತಿಗಳು. ಇದರಿಂದ ಅದರ ವ್ಯಕ್ತಿತ್ವದ ರೇಖೆಗಳು ಸ್ಪಷ್ಟವಾಗುತ್ತವೆ. ಏನು ಬರೆದರೂ ತೀಡಿ ತಿದ್ದಿ ಬರೆಯುವ ಅವರ ಮನೋಭಾವದಿಂದಾಗಿ ಹೆಚ್ಚು ಬರೆಯಲು ಸಾಧ್ಯವಾಗಲಿಲ್ಲ. ಹುಟ್ಟಿನಿಂದಲೇ ಅಂಟಿಕೊಂಡ ಅನಾರೋಗ್ಯದಿಂದಾಗಿ ನಿತ್ಯವೂ ಬರೆದವರಲ್ಲ. ಆದರೆ ಮನಸ್ಸು ಒಪ್ಪಿಕೊಂಡದ್ದನ್ನು ಔರಣವಾಗಿ ಬರೆದ ಕನ್ನಡದ ಅಪೂರ್ವ ತಪಸ್ವಿ ಅವರು.
- ಬದುಕು : 1902ರ ಜೂನ್ 8ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹತ್ತಿರದ ಸೇಡಿಯಾಪು ಎಂಬಲ್ಲಿ ಅವರು ಜನಿಸಿದರು. ತಂದೆ ರಾಮಭಟ್ಟರು ಮತ್ತು ತಾಯಿ ಮೂಕಾಂಬಿಕಾ ಅಮ್ಮ. ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಒಂಬತ್ತನೆಯ ತರಗತಿಯವರೆಗೆ ಅವರ ವಿದ್ಯಾಭ್ಯಾಸ. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಗೆ ಮಾರುಹೋಗಿ ಶಾಲಾವಿದ್ಯಾಭ್ಯಾಸಕ್ಕೆ ಅವರು ಮಂಗಳ ಹಾಡಿದರು. ಆದರೆ ಅವರ ಅಧ್ಯಯನ ಸಾಗಿಯೇ ಇತ್ತು. ಬಿಡುವಿನ ವೇಳೆಯಲ್ಲಿ ಆಯುರ್ವೇದ ಗ್ರಂಥಗಳನ್ನೂ ಕನ್ನಡ ಸಂಸ್ಕøತ ಗ್ರಂಥಗಳನ್ನೂ ವ್ಯಾಸಂಗ ಮಾಡುತ್ತಿದ್ದರು. ಕೆಲಕಾಲ ಅವರು ಹಳ್ಳಿಯ ಶಾಲೆಯಲ್ಲೇ ಅಧ್ಯಾಪಕರಾಗಿಯೂ ದುಡಿದರು. ಮದರಾಸು ಸರಕಾರ ನಡೆಸುತ್ತಿದ್ದ ವಿದ್ವಾನ್ ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು. ಆ ಕಾಲದಲ್ಲಿ ಮುಳಿಯ ತಿಮ್ಮಪ್ಪಯ್ಯ, ಉಗ್ರಾಣ ಮಂಗೇಶರಾಯ, ಕಡೆಂಗೋಡ್ಲು ಅವರ `ರಾಷ್ಟ್ರಬಂಧು ಸಾಪ್ತಾಹಿಕದ ಸಂಪಾದಕೀಯ ವಿಭಾಗದಲ್ಲಿಯೂ ಸ್ವಲ್ಪಕಾಲ ದುಡಿದರು. ಅನಂತರ ಮಂಗಳೂರಿನ ಸೈಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರು. ಇಪ್ಪತ್ತೊಂದು ವರ್ಷಗಳಷ್ಟು ಕಾಲ ದುಡಿದು, ಅನಂತರ ಅಲ್ಲೇ ಬಾಡ್ತಿ ಪಡೆದು ಕಾಲೇಜು ಉಪನ್ಯಾಸಕರಾದರು. ಆದರೆ ಅನಾರೋಗ್ಯದ ಕಾರಣದಿಂದ ಟ್ಯೂಟರ್ ಆಗಿ ಇರಬೇಕಾಯಿತು. 1957ರಲ್ಲಿ ಸ್ವಯಂನಿವೃತ್ತಿ ಪಡೆದು ಮಗನೊಂದಿಗೆ ನಾಗಪುರ, ಮೈಸೂರು, ಬೆಂಗಳೂರುಗಳಲ್ಲಿ ವಾಸವಾಗಿದ್ದರು. 1971ರಲ್ಲಿ ಮಣಿಪಾಲಕ್ಕೆ ಬಂದು ಕೊನೆಯವರೆಗೂ ಅಲ್ಲೇ ನೆಲೆಸಿದ್ದರು.
- ಅವರು ಬರೆದ "ತಥ್ಯದರ್ಶನ" ಕೃತಿಯ ಇಂಗ್ಲಿಷ್ ಅನುವಾದ ಆ ಪ್ರಕಟಗೊಂಡ ದಿನವೇ (8 ಜೂನ್ 1996) ಅವರು ಕೊನೆಯುಸಿರೆಳೆದರು. ಅವರ 94ನೇ ಹುಟ್ಟುಹಬ್ಬದ ಆ ದಿನ ಪತ್ರಿಕೆಯೊಂದರಲ್ಲಿ ಅವರ ಬಗ್ಗೆ ಪ್ರಕಟವಾದ ಲೇಖನವನ್ನು ಮೊಮ್ಮಕ್ಕಳಿಂದ ಓದಿಸಿ ಕೇಳಿ, ಆ ಪುಸ್ತಕವನ್ನು ಪ್ರೀತಿಯಿಂದ ತಡವಿ, ಮಗನಿಂದ ಕಾಶೀತೀರ್ಥವನ್ನು ಬಾಯಿಗೆ ಹೊಯ್ಯಲು ಹೇಳಿ ಸಂತೃಪ್ತಿಯಿಂದ ಕಣ್ಣು ಮುಚ್ಚಿದರು. ಕನ್ನಡದ ಪಂಡಿತಪರಂಪರೆಯ ಕೊನೆಯ ಕೊಂಡಿಯೊಂದು ಹೀಗೆ ಕಳಚಿಹೋಯಿತು.
- ಕವಿ-ಕತೆಗಾರ : ಸೇಡಿಯಾಪು ಅವರು ತಮ್ಮ 21ನೆಯ ವಯಸ್ಸಿನಲ್ಲಿ ಬರೆದ `ಕರ್ನಾಟಕ ಕವಿತಾ ಪ್ರಪಂಚ ವೆಂಬ ಲೇಖನ ಆಲೂರು ವೆಂಕಟರಾಯರ `ಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಯಿತು. ಕಾರ್ಕಳಕ್ಕೆ ಬಂದಿದ್ದ ಆಲೂರು ವೆಂಕಟರಾಯರಂತೂ ತರುಣ ಸೇಡಿಯಾಪು ಅವರನ್ನು ನೋಡಿ- `ನೀವು ಇಷ್ಟು ಚಿಕ್ಕವರೆಂದು ನಾನು ನಿರೀಕ್ಷಿಸಿರಲಿಲ್ಲ, ಬರೆಯುತ್ತಾ ಇರಿ. ಒಳ್ಳೆಯದಾಗಲಿ ಎಂದು ಹರಸಿದರು. ಕರ್ನಾಟಕ ಕುಲಪುರೋಹಿತರ ಹರಕೆ ಸತ್ಯವಾಯಿತು.
- 1932ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಿ.ವಿ. ಗುಂಡಪ್ಪನವರು ಅಧ್ಯಕ್ಷರಾಗಿದ್ದರು. ಆ ಸಮ್ಮೇಳನದಲ್ಲಿ ಸೇಡಿಯಾಪು ಅವರು ಕನ್ನಡ ಛಂದಸ್ಸಿನ ಬಗ್ಗೆ ಒಂದು ಪ್ರಬಂಧವನ್ನು ಮಂಡಿಸಿದ್ದರು. ಅದನ್ನು ಪಂಜೆ ಮಂಗೇಶರಾಯರು, ದೇವುಡು ನರಸಿಂಹಶಾಸ್ತ್ರಿಗಳು, ಸುಬೋಧ ರಾಮರಾಯರು ಮುಂತಾದ ಹಿರಿಯರು ಬಹುವಾಗಿ ಪ್ರಶಂಸಿಸಿದರು. ಇಂದಿಗೂ ಈ ಪ್ರಬಂಧ ಕನ್ನಡ ಛಂದಸ್ಸಿನ ಕುರಿತಾದ ಅತ್ಯಂತ ಮೌಲಿಕ ಪ್ರಬಂಧವಾಗಿಯೇ ಉಳಿದಿದೆ ಎಂಬುದು ಗಮನಾರ್ಹ.
- ಸೇಡಿಯಾಪು ಅವರ ಏಕೈಕ ಕವಿತಾಸಂಕಲನ `ಚಂದ್ರಖಂಡ ಮತ್ತು ಸಣ್ಣ ಕಾವ್ಯಗಳು (1969). ಇದರಲ್ಲಿರುವ ಪುಣ್ಯಲಹರಿ, ಶ್ವಮೇಧ, ಕೃಷ್ಣಾಕುಮಾರಿ ಮತ್ತು ತರುಣಧಮನಿ ಎಂಬ ನೀಳ್ಗವನಗಳು 1949ರಲ್ಲೇ ಪ್ರಕಟವಾಗಿದ್ದವು. ಪುಣ್ಯಲಹರಿಯಲ್ಲಿ ಶಬರಿಯ ಕಥೆ ಕಾವ್ಯವಾಗಿ ಹರಿದರೆ `ಶ್ವಮೇಧದಲ್ಲಿ ನಾಯಿಯೊಂದರ ಕರುಣಾಜನಕ ಕಥೆಯಿದೆ. ಕೃಷ್ಣಾಕುಮಾರಿ ಮತ್ತು ತರುಣಧಮನಿಗಳು ಇತಿಹಾಸಕಥನದ ಕಾವ್ಯಾಭಿವ್ಯಕ್ತಿಗಳು. ಈ ಸಂಕಲನದಲ್ಲಿ 1927ರಷ್ಟು ಹಿಂದಿನ ಕವನಗಳಿಂದ ತೊಡಗಿ 1968ರಲ್ಲಿ ರಚಿತವಾದ `ಬೆಳಗಿನ ತಂಗಾಳಿವರೆಗಿನ ಒಟ್ಟು 22 ಕವನಗಳಿವೆ. ಕವಿಯ ಭಾವಸಾಂದ್ರತೆ, ದೇಸಿಯ ಸೊಗಡು, ರೂಪಕನಿರ್ಮಾಣ ಜೊತೆಗೆ ಅಲ್ಲಿಯ ದ್ರಾಕ್ಷಾಪಾಕ, ಪ್ರಸಾದಗುಣ, ಲಲಿತಪದಶಯ್ಯೆಗಳು ಸೇಡಿಯಾಪು ಒಬ್ಬ ಶಾಸ್ತ್ರಕಾರರೆಂಬುದನ್ನು ಮರೆಯಿಸಿಬಿಡುವಷ್ಟು ಮನೋಹರವಾಗಿದೆ.
- ಕನ್ನಡದಲ್ಲಿ ಸಣ್ಣಕಥಾ ಪ್ರಕಾರ ಇನ್ನೂ ಸ್ಪಷ್ಟಗೊಳ್ಳದ ದಿನಗಳಲ್ಲಿ ಸೇಡಿಯಾಪು ಅವರು ನಾಲ್ಕು ಪ್ರಾತಿನಿಧಿಕವಾದ ಸಣ್ಣಕಥೆಗಳನ್ನು ಬರೆದಿದ್ದಾರೆ. `ಪಳಮೆಗಳು ಎಂಬ ಅವರ ಕಥಾಸಂಕಲನದಲ್ಲಿ (1947) ಚಿನ್ನದಚೇಳು ಮತ್ತು ಧರ್ಮಮ್ಮ ಹಳೆಯ ಶೈಲಿಯ ಕಥೆಗಳಾದರೆ, ಚೆನ್ನೆಮಣೆ ಮತ್ತು ನಾಗರಬೆತ್ತಗಳು ಆಧುನಿಕ ಸಣ್ಣ ಕಥೆಗಳ ಸಂಕೀರ್ಣತೆಯನ್ನು ಹೊಂದಿವೆ. ಸಮಕಾಲೀನ ಸಾಂಸ್ಕøತಿಕ ಸಂದರ್ಭವನ್ನು ಒರೆಗೆ ಹಚ್ಚಿ ನೋಡುವ ಈ ಕಥೆಗಳನ್ನು ಉದಾಹರಿಸದೆ ಕನ್ನಡದ ಸಣ್ಣಕತೆಗಳ ವಿಮರ್ಶೆಯೇ ಪರಿಪೂರ್ಣವಾಗುವುದಿಲ್ಲ ಎಂಬುದು ಗಮನಾರ್ಹ.
- ಛಂದೋವಿಧ-ಸಂಶೋಧಕ : ಪುರಾತನ ಕನ್ನಡ ಛಂದೋಬಾಧಗಳಲ್ಲಿ ಒಂದಾದ ಗೀತಿಕೆಯನ್ನು ಹಾಡುವ ಧಾಟಿಯ ಕುರಿತು 1976ರಷ್ಟು ಹಿಂದೆಯೇ ಅವರು ಚರ್ಚಿಸಿದ್ದುಂಟು. ಪಿರಿಯಕ್ಕರದ ಧಾಟಿಯ ಕುರಿತು ಅವರು ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲೇ (1932) ಕುತೂಹಲಕರ ಅಂಶಗಳನ್ನು ಹೊರಗೆಡಹಿದ್ದರು. ಅವರ ಕನ್ನಡ ಛಂದಸ್ಸು ಗ್ರಂಥ ಈ ದೃಷ್ಟಿಯಿಂದ ಗಮನಾರ್ಹ ಕೃತಿ. ಛಂದಃಶಾಸ್ತ್ರದ ಹಲವು ಪ್ರಮೇಯಗಳಿಗೆ ತಾತ್ವಿಕ ತಳಹದಿಯನ್ನು ಹಾಕಿದ ಅವರ ಮತ್ತೊಂದು ಮಹತ್ತ್ವದ ಗ್ರಂಥ ಛಂದೋಗತಿ (1985) ಇದರಲ್ಲಿ ಛಂದಸ್ ತತ್ತ್ವದ ಆಂತರಂಗಿಕವಾದ ಮೀಮಾಂಸೆ ಹರಿದು ಬಂದಿರುವುದು ವಿಶೇಷವಾಗಿದೆ. ಲಯ-ಗತಿ ವಿವೇಚನೆ, ಅಕ್ಷರಗತಿ-ಆವರ್ತಗತಿ, ಭಾಷಾಗತಿ-ಛಂದೋಗತಿಗಳ ವಿಶ್ಲೇಷಣೆ ಇತ್ಯಾದಿಗಳಿಂದ ಇದು ಭಾರತೀಯ ಭಾಷಾವಲಯದಲ್ಲೇ ಅನನ್ಯವಾದ ಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ತ್ರಿಮೂರ್ತಿ ಗಣಗಳ ಶ್ರಾವಣರೂಡ, ಗಾಯನ ಚತುರಶ್ರತೆ, ಗೀತಿಕೆ-ತ್ರಿಪದಿ-ಪಿರಿಯಕ್ಕರ, ಛಂದೋವತಂಸ ಮುಂತಾದ ಛಂದೋಬಂಧಗಳ ವೈಶಿಷ್ಟ್ಯ. ಏಳೆ-ಸಾಂಗತ್ಯಗಳ ಸಂಬಂಧ ಇತ್ಯಾದಿ ಅನೇಕ ತರ್ಕಬದ್ಧ ನಿಲುವುಗಳನ್ನು ಸ್ಥಾಪಿಸಿದ ಸೇಡಿಯಾಪು ಛಂದಃಶಾಸ್ತ್ರ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಉಳಿಯಬಲ್ಲವರು.
- ತಥ್ಯದರ್ಶನ(1991) ಎಂಬ ಕೃತಿಯಲ್ಲಿ ಸೇಡಿಯಾಪು ಅವರು ಆರ್ಯವರ್ಣ, ಜಾತಿ, ಲಿಂಗಗಳೆಂಬ ಪದಚತುಷ್ಟಯದ ಅರ್ಥಾನುಸಂಧಾನ ಮಾಡಿದ್ದಾರೆ. ಅವರ ಹೊರಗಣ್ಣು ಕಾಣದೇ ಹೋದರೂ ಒಳಗಣ್ಣಿನಿಂದ ನಿರಂತರ `ಕಾಣ್ಕೆ ಸಾಧ್ಯವಾಗಿತ್ತೆಂಬುದಕ್ಕೆ ಈ ಕೃತಿ ಸಾಕ್ಷಿ ಹೇಳುತ್ತದೆ., `ಆರ್ಯ" ಶಬ್ದಕ್ಕೆ ಗೌರವಾರ್ಹ ಎಂದು ಅರ್ಥೈಸುವ ಸೇಡಿಯಾಪು ಅವರು `ವರ್ಣ ಬೇರೆ `ಜಾತಿ' ಬೇರೆ ಎಂದು ಸ್ಪಷ್ಟವಾಗಿ ಸಾರುತ್ತಾರೆ. ವರ್ಣ ಎಂಬುದು ಸ್ವಭಾವವಾದರೆ, ಜಾತಿ ಎಂಬುದು ಪ್ರಬೇಧವೆಂದು ಅವರ ಪ್ರತಿಪಾದನೆ. `ಲಿಂಗ ಶಬ್ದದ ಮೂಲಾರ್ಥ ಲಕ್ಷಣ ಅಥವಾ ಗುರುತು ಎಂದಾಗಿರುವುದರಿಂದ ಶಿವಲಿಂಗವೆಂದರೆ ಭಗವಂತನ ಪ್ರತೀಕವೆಂದೇ ಅರ್ಥವೆಂದು ಸೇಡಿಯಾಪು ಹೇಳುತ್ತಾರೆ.
- ಕನ್ನಡ ಭಾಷೆಯ ಸ್ವರವ್ಯಂಜನಗಳಲ್ಲಿ ಕೆಲವು ವರ್ಣಗಳ ಉಚ್ಚಾರಣೆ ಕುರಿತು ಅವರು ಬರೆದ ಕನ್ನಡವರ್ಣಗಳು (1955) ಕನ್ನಡ ವ್ಯಾಕರಣದ ದೃಷ್ಟಿಯಿಂದ ಮಹತ್ತ್ವಪೂರ್ಣ ಕೃತಿ. ಅವರ `ಪಂಚಮೀ ವಿಭಕ್ತಿ ಕುರಿತ ಪ್ರಬಂಧ(1944)ವನ್ನು ರಂ.ಶ್ರೀ. ಮಂಗಳಿಯವರು `ದ್ರಾವಿಡ ಭಾಷಾಶಾಸ್ತ್ರದ ಚರಿತ್ರೆಗೆ ಕನ್ನಡ ಪಂಡಿತರೊಬ್ಬರ ಮೌಲಿಕಕಾಣಿಕೆ ಎಂದು ಕೊಂಡಾಡಿದ್ದುಂಟು. `ಕೆಲವು ದೇಶನಾಮಗಳು(1875) ಕೃತಿಯಲ್ಲಿ ಅವರು ಮಾಡಿದ ಶಬ್ದಾರ್ಥವಿವೇಚನೆ ತುಂಬಾ ಮಹತ್ತ್ವವಾದುದು. ಅವರಿಗೆ ಪಂಪಪ್ರಶಸ್ತಿ ತಂದುಕೊಟ್ಟ `ವಿಚಾರ ಪ್ರಪಂಚ(1992) ಕೃತಿಯಲ್ಲಿ ಭಾನುಮತಿಯ ನೆತ್ತ, ಇಡ್ಲಿಯ ಇತಿಹಾಸ, ಯಕ್ಷಗಾನ ಸ್ತ್ರೀವೇಷ, ವೈಯ್ಯಾಕರಣನ ತೂಕಡಿಕೆ ಮುಂತಾದ 71 ಮಹತ್ತರ ಲೇಖನಗಳಿವೆ. `ಒಂದು ಪುಸ್ತಕವನ್ನು ಸ್ಪರ್ಶಿಸುವುದೆಂದರೆ ಒಂದು ಆತ್ಮವನ್ನು ಸಮೀಪಿಸಿದಂತೆ ಎಂಬ ಸೂಕ್ತಿಯಂತೆ ವಿಚಾರಪ್ರಪಂಚದಲ್ಲಿ ಓದುಗರಿಗೆ ಸೇಡಿಯಾಪು ಅವರ ಉನ್ನತ ಚೇತನದ ಸಾಮೀಪ್ಯಸೌಖ್ಯ ಅನುಭವಕ್ಕೆ ಬರುತ್ತದೆ.
- ಪ್ರಶಸ್ತಿ ಪುರಸ್ಕಾರ: ಸೇಡಿಯಾಪು ಅವರ ಅಭಿಮಾನಿಗಳು 1959ರಷ್ಟು ಹಿಂದೆಯೇ `ಒಸಗೆ ಎಂಬ ಅಭಿನಂದನಗ್ರಂಥವನ್ನು ಸಮರ್ಪಿಸಿದ್ದರು. ಮಣಿಪಾಲದ ಸೇಡಿಯಾಪು ಅಭಿನಂದನ ಸಮಿತಿಯು `ಅಚ್ಛೋದ ಎಂಬ ಹೆಸರಿನ ಸ್ಮರಣಸಂಚಿಕೆಯನ್ನು ಸಮರ್ಪಿಸಿದೆ.(1991) ಅವರ ಮೊದಲ ಪುಣ್ಯತಿಥಿಯ ಸಂದರ್ಭದಲ್ಲಿ(1997) `ನಂದಾದೀವಿಗೆ ಎಂಬ ಸ್ಮರಣ ಸಮುಚ್ಚಯವನ್ನು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿದೆ.
- ಅವರ `ಚಂದ್ರಖಂಡ ಮತ್ತು ಕೆಲವು ಸಣ್ಣಕಾವ್ಯಗಳು ಕೃತಿಗೆ 1971ರಲ್ಲಿ ಮತ್ತು `ಛಂದೋಗತಿ' ಕೃತಿಗೆ 1985ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. 1972ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಕೂಡಾ ದೊರಕಿದೆ. ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1994), ವರ್ಧಮಾನ ಪ್ರಶಸ್ತಿ(1991), ಚಿದಾನಂದ ಪ್ರಶಸ್ತಿ(1994) ಮುಂತಾದ ಅನೇಕ ಗೌರವಗಳು ಅವರನ್ನು ಅರಸಿಬಂದಿವೆ. ಅವರ `ವಿಚಾರ ಪ್ರಪಂಚಕ್ಕೆ 1996ರಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಮರಣೋತ್ತರವಾಗಿ ಸಂದಿದೆ.
- ಸೇಡಿಯಾಪು ಅವರ ಸಮಕಾಲಿಕ ಸಾಹಿತಿ ಡಾ. ಕೋಟ ಶಿವರಾಮ ಕಾರಂತರು ಸೇಡಿಯಾಪು ಅವರ ಕುರಿತಾಗಿ ಹೇಳಿದ ಮಾತುಗಳು ಇಲ್ಲಿ ಮನನೀಯ-`ಪಂಡಿತರೆಂದರೆ ಹೀಗಿರುತ್ತಾರೆ ಎಂದು ನಾನು ಸಂತೋಷದಿಂದ ಬೆರಳೆತ್ತಿ ತೋರಬಹುದಾದವರು ಕೃಷ್ಣಭಟ್ಟರು. ಅವರ ವೇಷಭೂಷಣಗಳಂತೆಯೇ ಅವರ ನಡೆನುಡಿ, ನಿರ್ಮಲ ವ್ಯಕ್ತಿತ್ವದ ವಿದ್ವಾಂಸ ಸೇಡಿಯಾಪು.' ಹೌದು; ಅವರು ಹೇಗೆ ವಿರಳ ವರ್ಗದ ವಿದ್ವಾಂಸರೋ ಹಾಗೆಯೇ ವಿರಳವ್ಯಕ್ತಿತ್ವದ ಮನುಷ್ಯಾ ಕೂಡಾ. ಸಂಪ್ರದಾಯಬದ್ಧ ವೈದಿಕ ಕುಟುಂಬದಲ್ಲಿ ಜನಿಸಿದರೂ ಜಾತಿಮತಗಳ ಎಲ್ಲೆಯನ್ನು ಮೀರಿ ಬಾಳಿದವರು. ನಿಷ್ಠುರ ಸತ್ಯವಾದಿಯಾಗಿ ಋಜುಪಥದಲ್ಲಿ ಸಾಗಿದ ನಿಜವಾದ ಗಾಂಧೀವಾದಿ ಅವರು. ಕನ್ನಡ ನೆಲದಲ್ಲಿ ಇಂತಹವರು ಆಗಾಗ್ಗೆ ಹುಟ್ಟಿ ಬರುತ್ತಿರಬೇಕು.
- (ವಸಂತ್ ಭಾರದ್ವಾಜ್)*
- (ವಿಕಿಪಿಡಿಯಾಕ್ಕೆ ಮಾಹಿತಿ ಹಾಕಿದೆ.)